Tag: ಅಭಿಷೇಕ

  • ಮಳೆಗಾಗಿ ಪ್ರಾರ್ಥಿಸಿ ಶಿವನಿಗೆ ಅಭಿಷೇಕ ಮಾಡಿದ ಮುಸ್ಲಿಂ ಮಹಿಳೆಯರು

    ಮಳೆಗಾಗಿ ಪ್ರಾರ್ಥಿಸಿ ಶಿವನಿಗೆ ಅಭಿಷೇಕ ಮಾಡಿದ ಮುಸ್ಲಿಂ ಮಹಿಳೆಯರು

    ಚಾಮರಾಜನಗರ: ಧರ್ಮಬೇಧ ಮರೆತು ಮಳೆಗಾಗಿ ಶಿವನಿಗೆ ಮುಸ್ಲಿಂ ಮಹಿಳೆಯರು ಜಲಾಭಿಷೇಕ ಮಾಡಿ ಪ್ರಾರ್ಥಿಸಿದ ಅಪರೂಪದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯಲ್ಲಿ ಪೂರ್ವ ಮುಂಗಾರು ಕೈಕೊಟ್ಟಿರುವ ಹಿನ್ನೆಲೆ ಜನರು ಆತಂಕದಲ್ಲಿದ್ದಾರೆ. ಆದ್ದರಿಂದ ವರುಣನ ಕೃಪೆಗಾಗಿ ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ಶಿವನ ಮೂರ್ತಿ ಇಟ್ಟು ಪೂಜೆ ಸಲ್ಲಿಸಲಾಯಿತು. ಜನಾರ್ದನ ಪ್ರತಿಷ್ಠಾನದಿಂದ ಈ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದ್ದು, ಶಿವನಿಗೆ ಸಾರ್ವಜನಿಕರಿಂದ ಜಲಾಭಿಷೇಕ ಹಾಗೂ ಕ್ಷೀರಾಭಿಷೇಕ ನೆರವೇರಿಸಲಾಯ್ತು. ಈ ವೇಳೆ ಮುಸ್ಲಿಂ ಮಹಿಳೆಯರು ಕೂಡ ಈ ಪೂಜೆಯಲ್ಲಿ ಭಾಗಿಯಾಗಿ ನೀಲಕಂಠನಿಗೆ ಜಲಾಭಿಷೇಕ ಮಾಡಿ ಮಳೆಗಾಗಿ ಪ್ರಾರ್ಥಿಸಿದ್ದು ವಿಶೇಷವಾಗಿತ್ತು.

    ಈ ವಿಶೇಷ ಪೂಜೆಯಲ್ಲಿ ಸಾಕಷ್ಟು ಮಂದಿ ಭಕ್ತರು ಶಿವನಿಗೆ ಅಭಿಷೇಕ ನೆರವೇರಿಸಿ, ಪಾರ್ಥನೆ ಸಲ್ಲಿಸಿದರು. ಅದರಲ್ಲೂ ಮುಸ್ಲಿಂ ಮಹಿಳೆಯರು ಶಿವನಿಗೆ ಭಕ್ತಿಯಿಂದ ಅಭಿಷೇಕ ಮಾಡಿ ಮಳೆಗಾಗಿ ಪ್ರಾರ್ಥಿಸಿರುವುದು ಎಲ್ಲರ ಗಮನ ಸೆಳೆದಿದೆ. ಈ ಮೂಲಕ ಧರ್ಮ ಬೇರೆಯಾದರೂ ಎಲ್ಲಾ ದೇವರು ಒಂದೇ ಎನ್ನುವ ಸಂದೇಶವನ್ನು ಈ ಮುಸ್ಲಿಂ ಮಹಿಳೆಯರು ಸಾರಿದ್ದಾರೆ.

  • ಪೋಸ್ಟರ್‌ಗೆ ಬಿಯರ್ ಅಭಿಷೇಕ – ನಟ ಪುನೀತ್ ಪ್ರತಿಕ್ರಿಯೆ

    ಪೋಸ್ಟರ್‌ಗೆ ಬಿಯರ್ ಅಭಿಷೇಕ – ನಟ ಪುನೀತ್ ಪ್ರತಿಕ್ರಿಯೆ

    ಬೆಂಗಳೂರು: ಸ್ಯಾಂಡಲ್‍ವುಡ್ ಬಹುನಿರೀಕ್ಷೆಯ ಚಿತ್ರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರ ಬಿಡುಗಡೆ ಆಗಿದ್ದು, ಸಿನಿಮಾಗೆ ಭರ್ಜರಿ ಸ್ವಾಗತ ದೊರೆತಿದೆ. ಆದರೆ ಅಭಿಮಾನಿಯೊಬ್ಬ ಪುನೀತ್ ಅವರ ಪೋಸ್ಟರ್‌ಗೆ ಬಿಯರ್ ಅಭಿಷೇಕ ಮಾಡಿ ವಿಕೃತಿ ಮೆರೆದಿದ್ದಾರೆ.

    ಈ ಬಗ್ಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಪ್ರತಿಕ್ರಿಯಿಸಿ, “ಆ ರೀತಿ ಮಾಡುವುದು ಬೇಡ. ಸಿನಿಮಾದಲ್ಲಿ ನಾವು ಏನೇನೋ ಮಾಡುತ್ತೇವೆ. ನಾವು ಚಿತ್ರದಲ್ಲಿ ಕೊಲೆ ಮಾಡುತ್ತೇವೆ. ಹಾಗಂತ ನೀವು ನಿಜಜೀವನದಲ್ಲಿ ಕೊಲೆ ಮಾಡಿ ಎಂದು ಹೇಳುವುದಿಲ್ಲ. ಇದು ಕೇವಲ ಒಂದು ಹಾಡು ಅಷ್ಟೇ. ಆ ಹಾಡಿನಲ್ಲಿ ಒಂದು ಥ್ರಿಲ್ ಇದೆ. ಸಮಾಜಕ್ಕೆ ಸಂದೇಶ ನೀಡುವ ಕೆಲವು ಸಿನಿಮಾದಲ್ಲಿ ಇರುತ್ತದೆ. ಅದನ್ನು ಉಪಯೋಗಿಸಿ. ಹಾಗಂತ ಬಿಯರ್ ಉಪಯೋಗಿಸುವುದು ಸರಿಯಲ್ಲ” ಎಂದು ಹೇಳಿದ್ದಾರೆ.

    ಒಟ್ಟು 500ಕ್ಕೂ ಹೆಚ್ಚಿನ ಸ್ಕ್ರೀನ್‍ಗಳಲ್ಲಿ ನಟಸಾರ್ವಭೌಮ ರಿಲೀಸ್ ಆಗಿದ್ದು, ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಜೊತೆ ಡಿಂಪಲ್ ಬೆಡಗಿ ರಚಿತಾ ರಾಮ್, ಅನುಪಮಾ ಪರಮೇಶ್ವರ್, ಸಾಧುಕೋಕಿಲಾ, ಬಿ. ಸರೋಜಾ ದೇವಿ, ಚಿಕ್ಕಣ್ಣ, ರವಿಶಂಕರ್ ನಟಿಸಿದ್ದಾರೆ. ಈ ಚಿತ್ರವನ್ನು ರಾಕ್‍ಲೈನ್ ವೆಂಕಟೇಶ್ ಅವರು ನಿರ್ಮಿಸಿದ್ದು, ಪವನ್ ಒಡೆಯರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿ ಗೆಲುವು ಸಾಧಿಸಿದಕ್ಕೆ ಪತಿಗೆ 2 ಬಿಂದಿಗೆ ಹಾಲು ಸುರಿದು ಅಭಿಷೇಕ: ವಿಡಿಯೋ

    ಪತ್ನಿ ಗೆಲುವು ಸಾಧಿಸಿದಕ್ಕೆ ಪತಿಗೆ 2 ಬಿಂದಿಗೆ ಹಾಲು ಸುರಿದು ಅಭಿಷೇಕ: ವಿಡಿಯೋ

    ಮೈಸೂರು: ಸಾಂಸ್ಕೃತಿಕ ನಗರದಲ್ಲಿ ಜೆಡಿಎಸ್ ಕಾರ್ಯಕರ್ತರು ಅಂದಾಭಿಮಾನ ಪ್ರದರ್ಶಿಸಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ನಿ ಗೆಲುವು ಸಾಧಿಸಿದ ಕಾರಣ ಪತಿಗೆ ಕಾರ್ಯಕರ್ತರು 2 ಬಿಂದಿಗೆ ಹಾಲು ಸುರಿದು ಅಭಿಷೇಕ ಮಾಡಿದ್ದಾರೆ.

    ಮಹಾನಗರ ಪಾಲಿಕೆ 36ನೇ ವಾರ್ಡ್ ಸದಸ್ಯೆಯಾಗಿ ರುಕ್ಮಿಣಿ ಆಯ್ಕೆಯಾಗಿದ್ದಾರೆ. ರುಕ್ಷ್ಮಿಣಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ಪತಿ ಮಾದೇಗೌಡರಿಗೆ ಅಭಿಮಾನಿಗಳು 2 ಬಿಂದಿಗೆ ಹಾಲಿನಲ್ಲಿ ಅಭಿಷೇಕ ಮಾಡಿದ್ದಾರೆ. ಮಾದೇಗೌಡ ಕೂಡ ಶ್ರೀರಾಂಪುರ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದಾರೆ. ಯರಗನಹಳ್ಳಿ ವಾರ್ಡ್‍ನ ಕೃಷ್ಣ ದೇವಸ್ಥಾನದ ಬಳಿ ಹಾಲಿನ ಅಭಿಷೇಕ ಮಾಡಿದ್ದಾರೆ.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ನೋಡಿ ಎಲ್ಲರೂ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಜನ ಕುಡಿಯುವ ಹಾಲನ್ನು ಅಭಿಷೇಕ ಮಾಡಿಕೊಂಡಿರುವುದು ನಾಚಿಕೆಗೇಡಿನ ವಿಷಯ. ಅಧಿಕಾರ ಸಿಕ್ಕ ತಕ್ಷಣ ಈ ರೀತಿ ಮಾಡುವುದು ಸರಿಯಲ್ಲ. ಅಭಿಮಾನಿಗಳು ಈ ರೀತಿ ಮಾಡುವುದನ್ನು ಅವರು ತಡೆಯಬಹುದು. ಆದರೆ ಅವರು ತಮ್ಮ ಕಾರ್ಯಕರ್ತರಿಗೆ ಬುದ್ಧಿ ಮಾತನ್ನು ಹೇಳಲಿಲ್ಲ ಎಂದು ಜನರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=bZRpM8QJCOo

  • ಪ್ರತೀತಿಯಂತೆ ದೇವಿಗೆ ನೈಸರ್ಗಿಕ ಅಭಿಷೇಕ ಮಾಡಿದ ಕುಬ್ಜಾ ನದಿ

    ಪ್ರತೀತಿಯಂತೆ ದೇವಿಗೆ ನೈಸರ್ಗಿಕ ಅಭಿಷೇಕ ಮಾಡಿದ ಕುಬ್ಜಾ ನದಿ

    ಉಡುಪಿ: ಕುಂದಾಪುರ ತಾಲೂಕಿನ ಪ್ರಸಿದ್ಧ ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಪ್ರತೀತಿಯಂತೆ ಕುಬ್ಜಾ ನದಿಯು ನೈಸರ್ಗಿಕ ಅಭಿಷೇಕ ಮಾಡಿದೆ.

    ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲೊಂದಾದ ಕುಂದಾಪುರ ತಾಲೂಕಿನ ಕಮಲಶೀಲೆ ಬ್ರಾಹ್ಮಿ ದುರ್ಗಾಪರಮೇಶ್ವರ ದೇವಾಲಯದಲ್ಲಿನ ದೇವಿಗೆ ನೈಸರ್ಗಿಕ ಅಭಿಷೇಕವಾಗಿದೆ. ಕುಬ್ಜಾ ನದಿಯ ಪಕ್ಕದಲ್ಲೇ ಪುಣ್ಯಕ್ಷೇತ್ರವಿದ್ದು, ಮೈದುಂಬಿ ಹರಿಯುತ್ತಿರುವ ಕುಬ್ಜಾನದಿಯು ಇಂದು ಬೆಳಗಿನ ಜಾವದಂದು ದೇವಾಲಯ ಆವರಣ ಹಾಗೂ ಗರ್ಭಗುಡಿಯೊಳಗೆ ನುಗ್ಗಿದೆ.

    ಪ್ರತೀ ವರ್ಷದ ವಾಡಿಕೆಯಂತೆ ಗರ್ಭಗುಡಿಗೆ ಬಂದ ನೀರು, ದೇವಿಯನ್ನು ಅಭಿಷೇಕ ಮಾಡುತ್ತದೆ. ದೇವಸ್ಥಾನಕ್ಕೆ ನೀರು ನುಗ್ಗುತ್ತಿದ್ದಂತೆ ಅರ್ಚಕರುಗಳು ದೇವಿಗೆ ವಿಶೇಷ ಮಂಗಳಾರತಿ ಮಾಡಿ ವಂದನೆ ಸಲ್ಲಿಸಿದರು. ಅನಾಧಿಕಾಲದಿಂದ ವರ್ಷಕ್ಕೊಂದು ಬಾರಿ ದೇವಿಗೆ ಕುಬ್ಜಾ ನದಿಯು ನೈಸರ್ಗಿಕವಾಗಿ ಅಭಿಷೇಕ ಮಾಡುತ್ತಾ ಬಂದಿರುವುದು ವಿಶೇಷವಾಗಿದೆ ಎಂದು ದೇವಾಲಯದ ಪ್ರಧಾನ ಅರ್ಚಕರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಉಜ್ಜೈನಿಯ ಮಹಾಕಾಳೇಶ್ವರ ಜ್ಯೋತಿರ್ಲಿಂಗ ಜಲಾಭಿಷೇಕಕ್ಕೆ ಸುಪ್ರೀಂನಿಂದ ಹೊಸ ನಿಯಮ

    ಉಜ್ಜೈನಿಯ ಮಹಾಕಾಳೇಶ್ವರ ಜ್ಯೋತಿರ್ಲಿಂಗ ಜಲಾಭಿಷೇಕಕ್ಕೆ ಸುಪ್ರೀಂನಿಂದ ಹೊಸ ನಿಯಮ

    ನವದೆಹಲಿ: ಶಕ್ತಿಪೀಠಗಳಲ್ಲಿ ಒಂದಾಗಿರುವ ಉಜ್ಜೈನಿಯ ಮಹಾಕಾಳೇಶ್ವರ ಜ್ಯೋತಿರ್ಲಿಂಗಕ್ಕೆ ಇನ್ನು ಮುಂದೆ ಸಿಕ್ಕ ಸಿಕ್ಕ ನೀರನ್ನು ಬೇಕಾಬಿಟ್ಟಿ ಸುರಿಯುವಂತಿಲ್ಲ. ಶಿವಲಿಂಗಕ್ಕೆ ಶುದ್ಧೀಕರಿಸಿದ ನೀರಿನಿಂದ ಜಲಾಭಿಷೇಕ ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

    ಪರಂಪರೆಯ ಭಸ್ಮ ಮತ್ತು ಪಂಚಾಮೃತದಿಂದಾಗಿ ದೇವಸ್ಥಾನವಾದ ಮಹಾಕಾಳೇಶ್ವರ ಗರ್ಭಗುಡಿಯಲ್ಲಿರುವ ಶಿವಲಿಂಗ ಗಾತ್ರ ಕುಗ್ಗುತ್ತಿದೆ ಎಂದು ಉಜ್ಜೈನಿಯ ಸಾರಿಕಾ ಗುರು ಎಂಬವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

    ಈ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಭಾರತದ ಭೂವೈಜ್ಞಾನಿಕ ಮತ್ತು ಪುರಾತತ್ವ ಇಲಾಖೆಯ ಸದಸ್ಯರ ತಂಡವನ್ನು ಒಳಗೊಂಡ ಸಮಿತಿಯನ್ನು ರಚಿಸಿ ಪರಿಶೀಲಿಸುವಂತೆ ಆದೇಶಿಸಿತ್ತು. ಈ ಸಮಿತಿ ಪರಿಶೀಲಿಸಿ ನೀಡಿದ ಶಿಫಾರಸಿನ ಆಧಾರದಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

    ಇನ್ನು ಮುಂದೆ ಜ್ಯೋತಿರ್ಲಿಂಗಕ್ಕೆ ಕೇವಲ ಶುದ್ಧೀಕರಿಸಿದ ನೀರಿನಿಂದ ಅಭಿಷೇಕ ಮಾಡಬೇಕು. ಓರ್ವ ಭಕ್ತ ಅರ್ಧ ಲೀಟರ್ ನೀರನ್ನು ಅಭಿಷೇಕಕ್ಕೆ ಬಳಸಬಹುದು ಎಂದು ಸೂಚಿಸಿದೆ.

    ಮೊಸರು, ತುಪ್ಪ, ಸಕ್ಕರೆ ಅಭಿಷೇಕಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಪ್ರತಿಯೊಬ್ಬ ಭಕ್ತಾದಿಯೂ ಅಭಿಷೇಕಕ್ಕೆ ನಿಗದಿಪಡಿಸಿರುವ ಪ್ರಮಾಣದ ನೀರಿನಲ್ಲೇ ಶಿವಲಿಂಗಕ್ಕೆ ಅಭಿಷೇಕ ಮಾಡಬೇಕು. ಅಷ್ಟೇ ಅಲ್ಲದೇ ಇಂದಿನಿಂದಲೇ  ಈ ಆದೇಶ ಜಾರಿಯಾಗಬೇಕೆಂದು ಸುಪ್ರೀಂ ಸೂಚಿಸಿದೆ.

     

  • ದೇಗುಲದ ಗೋಪುರಕ್ಕೆ ಡಬ್ಬಿ ಡಬ್ಬಿ ಎಣ್ಣೆ ಸುರಿದು ಅಭಿಷೇಕ ಮಾಡೋ ವಿಶೇಷ ಜಾತ್ರೆ

    ದೇಗುಲದ ಗೋಪುರಕ್ಕೆ ಡಬ್ಬಿ ಡಬ್ಬಿ ಎಣ್ಣೆ ಸುರಿದು ಅಭಿಷೇಕ ಮಾಡೋ ವಿಶೇಷ ಜಾತ್ರೆ

    ಬಳ್ಳಾರಿ: ಸಾಮಾನ್ಯವಾಗಿ ದೇವರ ವಿಗ್ರಹ, ಹಾವಿನ ಹುತ್ತಕ್ಕೆ ಭಕ್ತಿಯಿಂದ ಹಾಲಿನ ಅಭಿಷೇಕ ಮಾಡುವುದನ್ನು ನೋಡಿದ್ದೇವೆ. ಆದರೆ ಬಳ್ಳಾರಿ ಜಿಲ್ಲೆಯ ಉಜ್ಜಿನಿ ಗ್ರಾಮದಲ್ಲಿ ಪುರಾತನ ದೇವಸ್ಥಾನದ ಗರ್ಭಗುಡಿ ಮತ್ತು ಅದರ ಗೋಪುರಕ್ಕೆ ತೈಲದಿಂದ ಅಭಿಷೇಕ ಮಾಡುವ ವಿಶಿಷ್ಠ ಸಂಪ್ರದಾಯ ಆಚರಣೆಯಲ್ಲಿದೆ.

    ಜರಿಮಲೆ ಪಾಳೆಗಾರರು ಶಾಪ ವಿಮೋಚನೆಗಾಗಿ ಮರುಳಸಿದ್ದೇಶ್ವರ ದೇವಸ್ಥಾನದ ಶಿಖರಕ್ಕೆ ತೈಲ ಅಭೀಷೇಕ ಮಾಡುತ್ತಾ ಬಂದಿದ್ದಾರೆ ಎಂದು ಹೇಳಲಾಗುತ್ತದೆ. ಇಂದಿಗೂ ಜರಿಮಲೆ ನಾಯಕರು ಕುಂಬದಲ್ಲಿ ಕಳಿಸುವ ಎಣ್ಣೆಯನ್ನು ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ತಂದು ಶಿಖರಕ್ಕೆ ಮೊದಲು ಎರೆವ ಮೂಲಕವೇ ತೈಲಾಭೀಷೇಕ ಆರಂಭಗೊಳ್ಳುತ್ತದೆ. ನಂತರ ಪೀಠದ ಭಕ್ತರು ತಂದ ಡಬ್ಬೆ ಡಬ್ಬೆ ಎಣ್ಣೆಯನ್ನು ಸುಮಾರು 35 ಅಡಿ ಎತ್ತರದ ಶಿಖರದ ಮೇಲೆ ಎರೆಯುತ್ತಾರೆ. ಸಂದು ಗೊಂದುಗಳಿಗೆ ಎಣ್ಣೆಯನ್ನು ಸ್ಪ್ರೇ ಮಾಡುತ್ತಾರೆ. ಹೀಗೆ ಇಡೀ ಗೋಪುರ ಗರ್ಭಗುಡಿಯನ್ನು ತೈಲದಿಂದ ಅಭಿಷೇಕ ಮಾಡಲಾಗುತ್ತದೆ.

    ದೇವಸ್ಥಾನದ ಇತಿಹಾಸ: ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದು ಉಜ್ಜಯನಿ ಸದ್ಧರ್ಮ ಪೀಠ. ಪೀಠದ ಮೂಲ ಪುರುಷ ಶಂಭುಮುನಿ ಶಿವಾಚಾರ್ಯ ಮುನಿಗಳು ಕಲ್ಯಾಣ ಚಾಲುಖ್ಯರ ಆರನೇ ವಿಕ್ರಮಾದಿತ್ಯನ ಸಹಕಾರದಿಂದ 11 ನೇ ಶತಮಾನದಲ್ಲಿ ಈ ಮರುಳ ಸಿದ್ದೇಶ್ವರ ದೇವಸ್ಥಾನ ನಿರ್ಮಿಸಿದರು. ಅಂದಿನಿಂದ ಇಂದಿನವರೆಗೆ ಪೀಠದ ಮೂಲ ಪುರುಷರಾದ ದ್ವಾರುಕಾಚಾರ್ಯರ ಜಯಂತಿ ನಿಮಿತ್ತ ರಥೋತ್ಸವದ ಮರುದಿನ ದೇವಸ್ಥಾನದ ಗರ್ಭಗುಡಿ ಗೋಪುರಕ್ಕೆ ತೈಲ ಅಭಿಷೇಕ ಮಾಡಲಾಗುತ್ತಿದೆ. ಇದು ಭಾರತದಲ್ಲೇ ಅಪೂರ್ವ ಪರಂಪರೆಯ ಪ್ರತೀಕವಾಗಿದೆ.

    ಅಭಿಷೇಕ ಯಾಕೆ?
    ಮೃದವಾದ ಬಳಪದ ಕಲ್ಲಿನಿಂದ ಕೆತ್ತಿದ ಶಿಲ್ಪಗಳಿಂದ ಕೂಡಿದ್ದ ನಯನ ಮನೋಹರವಾದ ಗೋಪುರ ಬಿಸಿಲನ ತಾಪಕ್ಕೆ ಶಿಥಿಲವಾಗಬಾರದೆಂದು ಈ ರೀತಿ ತೈಲ ಅಭಿಷೇಕವನ್ನು ಮಾಡಲಾಗುತ್ತಿದೆ ಎನ್ನುವ ನಂಬಿಕೆ ಇದೆ. 60 ಕ್ಕೂ ಹೆಚ್ಚು ಯುವಕರು ಈ ಕಾರ್ಯ ನೆರವೇರಿಸುತ್ತಾರೆ. ಅಭಿಷೇಕದ ನಂತರ ಕೆಳಗೆ ಬಿದ್ದ ಎಣ್ಣೆಯನ್ನು ಸ್ಥಳೀಯ ಪೂಜಾರು ಜನಾಂಗ ಬಳಿದುಕೊಂಡು ಮನೆಗೆ ಒಯ್ಯತ್ತಾರೆ. ಇನ್ನು ಕೆಲವರು ಈ ಎಣ್ಣೆಯನ್ನು ಒಯ್ದು ತಮ್ಮ ಮನೆಯ ದೀಪ ಬೆಳಗಿಸುತ್ತಾರೆ.

    ಸಂಜೆ ವೇಳೆ ನಡೆಯುವ ಈ ಕಾರ್ಯಕ್ರಮ ನೋಡಲು ನಾಡಿನ ವಿವಿಧಡೆಯಿಂದ ಜನತೆ ಹಿಂಡು ಹಿಂಡಾಗಿ ಬರುತ್ತಾರೆ. ದೇವಸ್ಥಾನದ ಸುತ್ತಮುತ್ತಲಿನ ಆವರಣ, ಮಾಳಿಗೆಗಳ ಮೇಲೆ ನಿಂತು, ಕುಳಿತು ನೋಡುತ್ತಾರೆ. ಜೊತೆಗೆ ತೈಲ ಅಭಿಷೇಕ ಆಂಭಗೊಳ್ಳುತ್ತಿಂದ್ದಂತೆ ಬಾಳೆ ಹಣ್ಣು ಎಸೆಯುತ್ತಾರೆ. ತೈಲ ಅಭೀಷೇಕದ ಸಂಪ್ರದಾಯದಿಂದ ಗೋಪುರದ ಶಿಲ್ಪಕಲೆಯ ಸೌಂದರ್ಯ ಕಾಣದಾಗಿ ಬರೀ ಮೇಣ ಮೆತ್ತಿದಂತೆ ಮನೋಹರವಾಗಿ ಕಾಣುತ್ತದೆ.