Tag: ಅಭಿರಾಮ್

  • ತಪಾಸಣೆ ವೇಳೆ ಡಿಸಿ ನಂಬರ್ ಕೊಟ್ಟ ಸೋಂಕಿತ – ಕರೆ ಸ್ವೀಕರಿಸಿ ದಂಗಾದ ಜಿಲ್ಲಾಧಿಕಾರಿ

    ತಪಾಸಣೆ ವೇಳೆ ಡಿಸಿ ನಂಬರ್ ಕೊಟ್ಟ ಸೋಂಕಿತ – ಕರೆ ಸ್ವೀಕರಿಸಿ ದಂಗಾದ ಜಿಲ್ಲಾಧಿಕಾರಿ

    ಮೈಸೂರು: ತಪಾಸಣೆ ವೇಳೆ ಮೈಸೂರು ಜಿಲ್ಲಾಧಿಕಾರಿ ನಂಬರ್ ಕೊಟ್ಟು ಕೊರೊನಾ ಸೋಂಕಿತನೊಬ್ಬ ಕಿತಾಪತಿ ಮಾಡಿರುವ ಘಟನೆ ಮೈಸೂರಿನ ಹೆಬ್ಬಾಳ ಬಡಾವಣೆಯಲ್ಲಿ ನಡೆದಿದೆ.

    ಕೊರೊನಾ ತಪಾಸಣೆಗೆ ಬಂದ ವ್ಯಕ್ತಿಯೋರ್ವ ಪರೀಕ್ಷೆ ವೇಳೆ ತನ್ನ ನಂಬರ್ ಬದಲಿಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಅವರ ನಂಬರ್ ಅನ್ನು ಜಿಲ್ಲಾಡಳಿತಕ್ಕೆ ಕೊಟ್ಟು ಯಾಮಾರಿಸಿದ್ದಾನೆ. ಇದಾದ ಬಳಿಕ ಆ ವ್ಯಕ್ತಿಯ ಕೊರೊನಾ ವರದಿ ಬಂದಿದ್ದು, ಆತನಿಗೆ ಕೊರೊನಾ ಇರುವುದು ದೃಢಪಟ್ಟಿದೆ.

    ಕೊರೊನಾ ದೃಢಪಟ್ಟ ವ್ಯಕ್ತಿ ನೀಡಿದ ನಂಬರ್ ಗೆ ಮೈಸೂರು ಜಿಲ್ಲಾಡಳಿತದ ಕೊರೊನಾ ಕಂಟ್ರೋಲ್ ರೂಂನಿಂದ ಕರೆ ಮಾಡಿದ್ದಾರೆ. ನಿಮಗೆ ಪಾಸಿಟಿವ್ ಬಂದಿದೆ ಎಲ್ಲಿದ್ದೀರಾ ಎಂದು ಕೇಳಿದ್ದಾರೆ. ಈ ಮಾತುಗಳನ್ನು ಕೇಳಿ ಒಮ್ಮೆ ಗಾಬರಿಯಾದ ಡಿಸಿಯವರು, ನನಗೆ ಕೊರೊನಾ ಇದ್ಯಾ ಎಂದು ಭಾವಿಸಿ ನಾನ್ ರೀ ಜಿಲ್ಲಾಧಿಕಾರಿ ಮಾತಾನಾಡುತ್ತಿದ್ದೇನೆ ಎಂದು ಡಿಸಿ ಅಭಿರಾಮ್ ಅವರು ಹೇಳಿದ್ದಾರೆ.

    ಆಗ ಜಿಲ್ಲಾಡಳಿತದವರು ನಂಬರ್ ನೋಡಿ ಚೆಕ್ ಮಾಡಿದಾಗ ಕೊರೊನಾ ಸೋಂಕಿತ ಪರೀಕ್ಷೆ ವೇಳೆ ಆತನ ನಂಬರ್ ಬದಲು ಡಿಸಿ ಅವರ ನಂಬರ್ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಸದ್ಯ ತಪ್ಪು ನಂಬರ್ ಕೊಟ್ಟು ಕೊರೊನಾ ಸೋಂಕಿತ ಎಸ್ಕೇಪ್ ಆಗಿದ್ದು, ಸೋಂಕಿತನಿಗಾಗಿ ಅಧಿಕಾರಿಗಳು ಹುಡುಕಾಟ ಶುರು ಮಾಡಿದ್ದಾರೆ.

    ಈ ವಿಚಾರವಾಗಿ ಬೇಸರದಿಂದ ಈ ರೀತಿ ಕಿತಾಪತಿ ಕೆಲಸ ಮಾಡಿದ ವ್ಯಕ್ತಿಗೆ ಸಲಹೆ ನೀಡಿರುವ ಜಿಲ್ಲಾಧಿಕಾರಿ ಅಭಿರಾಮ್ ಅವರು, ಈ ರೀತಿ ಮಾಡಿದರೆ ಕೊರೊನಾ ಸಮಸ್ಯೆ ಜಿಲ್ಲೆಯಲ್ಲಿ ಮತ್ತಷ್ಟು ಉಲ್ಬಣ ಆಗಲಿದೆ. ಸಾರ್ವಜನಿಕರು ಕೊರೊನಾ ಕಂಟ್ರೋಲ್ ರೂಂಗೆ ಸರಿಯಾಗಿ ಸಹಕರಿಸುವಂತೆ ಮನವಿ ಮಾಡಿದ್ದಾರೆ.

  • ಕೋವಿಡ್‍ನಿಂದ ಸಾವನ್ನಪ್ಪಿದ್ರೂ ಜಿಲ್ಲಾಡಳಿತಕ್ಕೆ ಮಾಹಿತಿ ಇಲ್ಲ- ಖಾಸಗಿ ಆಸ್ಪತ್ರೆಗಳಿಗೆ ಡಿಸಿ ಎಚ್ಚರಿಕೆ

    ಕೋವಿಡ್‍ನಿಂದ ಸಾವನ್ನಪ್ಪಿದ್ರೂ ಜಿಲ್ಲಾಡಳಿತಕ್ಕೆ ಮಾಹಿತಿ ಇಲ್ಲ- ಖಾಸಗಿ ಆಸ್ಪತ್ರೆಗಳಿಗೆ ಡಿಸಿ ಎಚ್ಚರಿಕೆ

    ಮೈಸೂರು: ಕೋವಿಡ್‍ನಿಂದ ಸಾವನ್ನಪ್ಪಿದರೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡದ ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ಅಭಿರಾಮ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ನೋಟೀಸ್ ಮೂಲಕವೇ ಎಚ್ಚರಿಕೆ ನೀಡಿದ ಡಿಸಿ, ಕೋವಿಡ್ -19 ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳು ನಿರ್ಲಕ್ಷ್ಯ ವಹಿಸುತ್ತಿವೆ. SARI, ILI ಹಾಗೂ ಕೋವಿಡ್ ಗುಣಲಕ್ಷಣದ ರೋಗಿಯ ಮಾಹಿತಿ ನೀಡಬೇಕು. ಯಾವುದೇ ಆಸ್ಪತ್ರೆಗಳಿಗೆ ಈ ಗುಣಲಕ್ಷಣದ ರೋಗಿ ದಾಖಲಾದರೆ ವೆಬ್‍ಸೈಟ್‍ಗೆ ಅಪ್ಡೇಟ್ ಮಾಡಬೇಕು. ಆದರೆ ಕೆಲವೊಂದು ಆಸ್ಪತ್ರೆಗಳು ಮಾಹಿತಿ ನೀಡುತ್ತಿಲ್ಲ. ಎರಡು ಕೋವಿಡ್ ಪ್ರಕರಣದ ರೋಗಿ ಸಾವನ್ನಪ್ಪಿದರೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿಲ್ಲ. ಇದು ನಿರ್ಲಕ್ಷ್ಯತನದ ಪರಮಾವಧಿಯಾಗಿದೆ. ಇದು ನಿಮಗೆ ಕೊನೆಯ ಎಚ್ಚರಿಕೆ ಎಂದು ತಿಳಿಸಿದ್ದಾರೆ.

    ಇನ್ನು ಮುಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಎಲ್ಲ ಮಾಹಿತಿ ನೀಡಿ. ಇಲ್ಲವಾದರೆ ನಿಮ್ಮ ಆರೋಗ್ಯ ಸಂಸ್ಥೆಯ ನೋಂದಣಿ ರದ್ದು ಮಾಡಬೇಕಾಗುತ್ತದೆ ಎಂದು ರೋಗಿ ಸಾವನ್ನಪ್ಪಿದರೂ ಮಾಹಿತಿ ನೀಡದ ಆಸ್ಪತ್ರೆಗೆ ಡಿಸಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.