Tag: ಅಭಿಮನ್ಯು ಮಿಥುನ್

  • ಪ್ರಥಮ ದರ್ಜೆ ಕ್ರಿಕೆಟ್‍ಗೆ ವಿದಾಯ ಘೋಷಿಸಿದ ಕನ್ನಡಿಗ ಅಭಿಮನ್ಯು ಮಿಥುನ್

    ಪ್ರಥಮ ದರ್ಜೆ ಕ್ರಿಕೆಟ್‍ಗೆ ವಿದಾಯ ಘೋಷಿಸಿದ ಕನ್ನಡಿಗ ಅಭಿಮನ್ಯು ಮಿಥುನ್

    ಬೆಂಗಳೂರು: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್, ಪೀಣ್ಯ ಎಕ್ಸ್‌ಪ್ರೆಸ್‌ ಖ್ಯಾತಿಯ ಕನ್ನಡಿಗ ಅಭಿಮನ್ಯು ಮಿಥುನ್ ಪ್ರಥಮ ದರ್ಜೆ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದಾರೆ.

    ಮಿಥುನ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ನಾನು ನನ್ನ ದೇಶಕ್ಕಾಗಿ ಆಡಿರುವುದು ನನಗೆ ತುಂಬಾ ಸಂತೋಷ ನೀಡಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಬಿಸಿಸಿಐಗೆ ಮತ್ತು ನನ್ನ ಕ್ರಿಕೆಟ್ ಜೀವನವನ್ನು ರೂಪಿಸಿದ  ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಗೆಳತಿಗೆ ಸ್ಟೇಡಿಯಂನಲ್ಲೇ ಪ್ರಪೋಸ್‌ ಮಾಡಿದ ದೀಪಕ್‌ ಚಹರ್‌

    ಮಿಥುನ್ 2010 ಮತ್ತು 2011ನೇ ಸಾಲಿನಲ್ಲಿ ಭಾರತ ತಂಡದ ಪರ 4 ಟೆಸ್ಟ್ ಪಂದ್ಯಗಳಲ್ಲಿ 9 ವಿಕೆಟ್ ಮತ್ತು 5 ಏಕದಿನ ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದಾರೆ. ಮಿಥುನ್ ರಾಷ್ಟ್ರೀಯ ತಂಡಕ್ಕಿಂತ ಹೆಚ್ಚು ಕರ್ನಾಟಕ ರಾಜ್ಯ ತಂಡದಲ್ಲಿ ಆಡಿದ್ದು, ರಾಜ್ಯ ತಂಡದ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕಳೆದ 12 ವರ್ಷಗಳಿಂದ ರಾಜ್ಯ ತಂಡದ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿದ್ದ ಮಿಥುನ್, 2013-14, 2014-15 ಸಾಲಿನಲ್ಲಿ ಕರ್ನಾಟಕ ತಂಡ ರಣಜಿ, ಇರಾನಿ ಮತ್ತು ವಿಜಯ ಹಜಾರೆ ಟ್ರೋಫಿ ಗೆಲ್ಲಲು ಸಹಕಾರಿಯಾಗಿದ್ದರು. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ಭಾರತದ ನೂತನ ಸಿಕ್ಸರ್ ಕಿಂಗ್ ಆದ ಹಿಟ್‍ಮ್ಯಾನ್

    ಮಿಥುನ್ ಒಟ್ಟು 103 ಪ್ರಥಮ ದರ್ಜೆ ಪಂದ್ಯಗಳಿಂದ 338 ವಿಕೆಟ್, 96 ಲಿಸ್ಟ್ ಎ ಪಂದ್ಯಗಳಿಂದ 136 ವಿಕೆಟ್ ಮತ್ತು 74 ಟಿ20 ಪಂದ್ಯಗಳಿಂದ 69 ವಿಕೆಟ್ ಕಬಳಿಸಿ ಮಿಂಚಿದ್ದು, ಐಪಿಎಲ್‍ನಲ್ಲಿ ಆರ್​ಸಿಬಿ, ಮುಂಬೈ ಮತ್ತು ಹೈದರಾಬಾದ್ ತಂಡದ ಪರ 19 ಪಂದ್ಯಗಳನ್ನು ಆಡಿ ಉತ್ತಮ ಪ್ರದರ್ಶನ ನೀಡಿ ಇದೀಗ ನಿವೃತ್ತಿಯ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

  • ಸಿಕ್ಸರ್‌ಗಳ ಸುರಿಮಳೆ, ಕರ್ನಾಟಕ ಫೈನಲಿಗೆ – ಒಂದೇ ಓವರಿನಲ್ಲಿ 5 ವಿಕೆಟ್ ಕಿತ್ತು ಅಭಿಮನ್ಯು ದಾಖಲೆ

    ಸಿಕ್ಸರ್‌ಗಳ ಸುರಿಮಳೆ, ಕರ್ನಾಟಕ ಫೈನಲಿಗೆ – ಒಂದೇ ಓವರಿನಲ್ಲಿ 5 ವಿಕೆಟ್ ಕಿತ್ತು ಅಭಿಮನ್ಯು ದಾಖಲೆ

    ಸೂರತ್‍: ಸಯ್ಯದ್ ಮುಷ್ತಾಕ್ ಅಲಿ ಟಿ 20 ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಹರ್ಯಾಣ ವಿರುದ್ಧ 8 ವಿಕೆಟ್ ಗಳ ಜಯ ಸಾಧಿಸಿ  ಕರ್ನಾಟಕ ಫೈನಲ್ ಪ್ರವೇಶಿಸಿದೆ.

    ಇಂದು ಸೂರತ್‍ನ ಲಾಲ್ಬಾಯ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹರ್ಯಾಣ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿದರೆ ಕರ್ನಾಟಕ 15 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿ ಜಯಗಳಿಸಿದೆ. ಒಂದೇ ಓವರಿನಲ್ಲಿ ಐದು ವಿಕೆಟ್ ಪಡೆದು ಮಿಂಚಿದ ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್ ಭಾರತದ ಪರ ಹೊಸ ದಾಖಲೆ ಬರೆದಿದ್ದಾರೆ.

    ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ತಂಡ, ಹರ್ಯಾಣ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನ ನೀಡಿತು. ಹರ್ಯಾಣ ಆರಂಭಿಕ ಚೈತನ್ಯ ಬಿಷ್ಣೋಯಿ 55 ರನ್(35 ಎಸೆತ, 7 ಬೌಂಡರಿ, 1 ಸಿಕ್ಸರ್) ಅವರ ಅರ್ಧಶತಕ ಮತ್ತು ಹಿಮಾಂಶು ರಾಣ 61 ರನ್ (34 ಎಸೆತ, 6 ಬೌಂಡರಿ, 2 ಸಿಕ್ಸರ್) ಅವರ ಸ್ಫೋಟಕ ಬ್ಯಾಟಿಂಗ್ ನಿಂದ ಎಂಟು ವಿಕೆಟ್ ಕಳೆದುಕೊಂಡು 194 ರನ್‍ಗಳ ಬೃಹತ್ ಮೊತ್ತ ಸೇರಿಸಿತು.

    ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಆರಂಭಿಕಾರದ ಕೆ.ಎಲ್ ರಾಹುಲ್ ಮತ್ತು ದೇವದುತ್ ಪಡಿಕ್ಕಲ್ ಇಬ್ಬರು ಅರ್ಧಶತಕ ಸಿಡಿಸುವ ಮೂಲಕ ಉತ್ತಮ ಆಡಿಪಾಯ ಹಾಕಿಕೊಟ್ಟರು. ಸೆಮಿಫೈನಲ್ ಪಂದ್ಯದಲ್ಲಿ ಸ್ಪೋಟಕ ಆಟ ಪ್ರದರ್ಶಿಸಿದ ಪಡಿಕ್ಕಲ್ ಕೇವಲ 42 ಎಸೆತಗಳಲ್ಲಿ ಭರ್ಜರಿ 11 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿ 87 ರನ್ ಹೊಡೆದರೆ, ಇವರಿಗೆ ಉತ್ತಮ ಸಾಥ್ ಕೊಟ್ಟ ಕೆ.ಎಲ್ ರಾಹುಲ್ 31 ಎಸೆತಗಳಲ್ಲಿ 4 ಬೌಂಡರಿ ಮತ್ತು ಆರು ಭರ್ಜರಿ ಸಿಕ್ಸರ್ ನೊಂದಿಗೆ 66 ರನ್ ಸಿಡಿಸಿ ಕರ್ನಾಟಕವನ್ನು ಗೆಲುವಿನ ಸಮೀಪ ತಂದರು.

    9.3 ಓವರ್ ಗಳಲ್ಲಿ ಮೊದಲ ವಿಕೆಟಿಗೆ 125 ರನ್ ಜೊತೆಯಾಟವಾಡಿ ರಾಹುಲ್ ಔಟ್ ಆದರು. ಮಯಾಂಕ್ ಅಗರವಾಲ್ ಔಟಾಗದೇ 30 ರನ್(14 ಎಸೆತ, 3 ಸಿಕ್ಸರ್) ನಾಯಕ ಮನಿಷ್ ಪಾಂಡೆ ಔಟಾಗದೇ 3 ರನ್ ಹೊಡೆದು ಜಯವನ್ನು ತಂದಿಟ್ಟರು. ಈ ಪಂದ್ಯದಲ್ಲಿ ಹರ್ಯಾಣ ಪರ 4 ಸಿಕ್ಸ್ ದಾಖಲಾದರೆ ಕರ್ನಾಟಕದ ಪರ 13 ಸಿಕ್ಸ್ ದಾಖಲಾಗಿದೆ.

    ಅಭಿಮನ್ಯು ದಾಖಲೆ:
    ಅಭಿಮನ್ಯು ಮಿಥುನ್ ಒಂದೇ ಓವರಿನಲ್ಲಿ ಐದು ವಿಕೆಟ್ ಪಡೆಯುವ ಮೂಲಕ ಭಾರತದ ಪರ ದಾಖಲೆ ಬರೆದಿದ್ದಾರೆ. ಈ ದಾಖಲೆ ಅಭಿಮನ್ಯು ಎಸೆದ 4ನೇ ಓವರಿನಲ್ಲಿ ಬಂದಿದ್ದು ವಿಶೇಷ. 3 ಓವರ್ ಗಳಲ್ಲಿ ಒಂದೇ ವಿಕೆಟ್ ಪಡೆಯದ ಅಭಿಮನ್ಯು ಕೊನೆಯ ಓವರಿನ 4 ಎಸೆತಗಳಲ್ಲಿ 4 ವಿಕೆಟ್ ಪಡೆದು ಒಂದು ವೈಡ್ ಒಂದು ರನ್ ಬಿಟ್ಟುಕೊಟ್ಟು ಕೊನೆಯ ಎಸೆತದಲ್ಲಿ ಮತ್ತೊಂದು ವಿಕೆಟ್ ಪಡೆದಿದ್ದಾರೆ. ಅಂತಿಮವಾಗಿ 4 ಓವರ್ ಗಳಲ್ಲಿ 39 ರನ್ ನೀಡಿದ್ದಾರೆ. ಈ ಹಿಂದೆ ಪ್ರಥಮ ದರ್ಜೆ ಕ್ರಿಕೆಟಿನಲ್ಲಿ ಶ್ರೀಲಂಕಾದ ವೇಗಿ ಲಸಿತ್ ಮಲಿಂಗ ಒಂದೇ ಓವರಿನಲ್ಲಿ 5 ವಿಕೆಟ್ ಪಡೆದಿದ್ದರು. ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಅಭಿಮನ್ಯು ಮಿಥುನ್ ಹ್ಯಾಟ್ರಿಕ್ ಸಾಧನೆ ನಿರ್ಮಿಸಿದ್ದರು.

  • ವಿಜಯ್ ಹಜಾರೆ ಟ್ರೋಫಿ ಕರ್ನಾಟಕದ ಮುಡಿಗೆ – ಹ್ಯಾಟ್ರಿಕ್ ಪಡೆದು ಮಿಥುನ್ ದಾಖಲೆ

    ವಿಜಯ್ ಹಜಾರೆ ಟ್ರೋಫಿ ಕರ್ನಾಟಕದ ಮುಡಿಗೆ – ಹ್ಯಾಟ್ರಿಕ್ ಪಡೆದು ಮಿಥುನ್ ದಾಖಲೆ

    – ಹುಟ್ಟು ಹಬ್ಬದ ದಿನವೇ ದಾಖಲೆ
    – ವಿಜೆಡಿ ನಿಯಮದ ಅನ್ವಯ ಚಾಂಪಿಯನ್

    ಬೆಂಗಳೂರು: ಅಭಿಮನ್ಯು ಮಿಥುನ್ ಹ್ಯಾಟ್ರಿಕ್ ಸಾಧನೆಯಿಂದಾಗಿ ಕರ್ನಾಟಕ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ವಿಜೆಡಿ ನಿಯಮದ ಅನ್ವಯ 60 ರನ್‍ಗಳಿಂದ ತಮಿಳುನಾಡು ತಂಡವನ್ನು ಸೋಲಿಸುವ ಮೂಲಕ ಕರ್ನಾಟಕ 4ನೇ ಬಾರಿ ಟ್ರೋಫಿಯನ್ನು ಗೆದ್ದುಕೊಂಡಿದೆ.

    ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟ್ ಮಾಡಿದ ತಮಿಳುನಾಡು 49.5 ಓವರ್ ಗಳಲ್ಲಿ 252 ರನ್‍ಗಳಿಗೆ ಆಲೌಟ್ ಆಯ್ತು. ಈ ಮೊತ್ತವನ್ನು ಬೆನ್ನಟ್ಟುವ ಸಂದರ್ಭದಲ್ಲಿ 23 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 141 ರನ್‍ಗಳಿಸಿದಾಗ ಜೋರಾಗಿ ಮಳೆ ಸುರಿಯಲು ಆರಂಭವಾಯಿತು. ಮಳೆ ನಿಲ್ಲದ ಪರಿಣಾಮ ವಿ ಜಯದೇವನ್ ಮಾದರಿ ಅಥವಾ ವಿಜೆಡಿ ನಿಯಮದ ಅನ್ವಯ ಕರ್ನಾಟಕ 60 ರನ್ ಗಳಿಂದ ಗೆದ್ದುಕೊಂಡಿದೆ ಎಂದು ಪ್ರಕಟಿಸಲಾಯಿತು.

    ಇನ್ನಿಂಗ್ಸ್ ನ ಮೊದಲ ಓವರ್ ನಲ್ಲಿಯೇ ವೇಗಿ ಅಭಿಮನ್ಯು ಮಿಥುನ್ ಮುರುಳಿ ವಿಜಯ್ ವಿಕೆಟ್ ಉರುಳಿಸಿದರು. ಬಳಿಕ ಮೈದಾಕ್ಕಿಳಿದ ಆರ್.ಅಶ್ವಿನ್ ಕೇವಲ 8 ರನ್ ಗಳಿಸಿ ಕೌಶಿಕ್ ವಾಸುಕಿಗೆ ವಿಕೆಟ್ ಒಪ್ಪಿಸಿದರು. ಆರಂಭಿಕ ಬ್ಯಾಟ್ಸ್‍ಮನ್ ಅಭಿವನ್ ಮುಕುಂದ್‍ಗೆ ಬಾಬಾ ಅಪರಾಜಿತ್ ಸಾಥ್ ನೀಡಿ, ತಂಡದ ಮೊತ್ತವನ್ನು ಹೆಚ್ಚಿಸಿದರು. ಮುಕುಂದ್ 110 ಎಸೆತಗಳನ್ನು ಎದುರಿಸಿ 9 ಬೌಂಡರಿ ಸೇರಿ 85 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

    ಬಾಬಾ ಅಪರಾಜಿತ್ 84 ಎಸೆತಗಳಲ್ಲಿ 7 ಬೌಂಡರಿ ಸೇರಿ 66 ರನ್, ವಿ.ಶಂಕರ್ 38 ರನ್ ಸಹಾಯದಿಂದ ತಮಿಳುನಾಡು ತಂಡವು ಎಲ್ಲಾ ವಿಕೆಟ್ ಕಳೆದುಕೊಂಡು ಅಭಿಮನ್ಯು ಮಿಥುನ್ ತಮ್ಮ 10ನೇ ಓವರ್ ನಲ್ಲಿ ಮೊಹಮ್ಮದ್ ಸಲೀಂ, ಅಶ್ವಿನ್ ಮುರುಗನ್ ಹಾಗೂ ಶಾರುಕ್ ಖಾನ್ ವಿಕೆಟ್‍ಗಳನ್ನು ಉರುಳಿಸಿ ಹ್ಯಾಟ್ರಿಕ್ ವಿಕೆಟ್ ದಾಖಲೆ ಬರೆದರು.

    ಕರ್ನಾಟಕದ ಆರಂಭಿಕ ಬ್ಯಾಟ್ಸ್‌ಮನ್ ಡಿ.ಪಡಿಕ್ಕಲ್ ತಂಡದ ಮೊತ್ತ 34 ಆಗುವಷ್ಟರಲ್ಲಿ 14 ಎಸೆತಗಳಲ್ಲಿ 11 ಗಳಿಸಿ ವಿಕೆಟ್ ಒಪ್ಪಿಸಿದರು. ಕೆ.ಎಲ್. ರಾಹುಲ್ ಔಟಾಗದೆ 72 ಎಸೆತಗಳಲ್ಲಿ 5 ಬೌಂಡರಿ ಸೇರಿ 52 ಗಳಿಸಿದರೆ, ಎಂಎ ಅಗರ್ವಾಲ್ ಔಟಾಗದೆ 55 ಎಸೆತಗಳಲ್ಲಿ 3 ಸಿಕ್ಸರ್, 7 ಬೌಂಡರಿ ಸಿಡಿಸಿ 69 ರನ್ ಕಲೆ ಹಾಕಿದರು.

    ಮಿಥುನ್ ದಾಖಲೆ: ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ‘ಪಿಣ್ಯ ಎಕ್ಸ್ ಪ್ರೆಸ್’ ಅಭಿಮನ್ಯು ಮಿಥುನ್ ದಾಖಲೆ ಬರೆದಿದ್ದಾರೆ. ವಿಜಯ್ ಹಜಾರೆ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಅಭಿಮನ್ಯು ಮಿಥುನ್ ಪಾತ್ರರಾಗಿದ್ದಾರೆ. ವಿಶೇಷ ಏನೆಂದರೆ ಹುಟ್ಟು ಹಬ್ಬದ ದಿನವೇ ಹ್ಯಾಟ್ರಿಕ್ ವಿಕೆಟ್ ಸಾಧನೆ ಜೊತೆಗೆ ಐದು ವಿಕೆಟ್ ಉರುಳಿಸಿ ಅವಿಸ್ಮರಣೀಯ ಕ್ಷಣವನ್ನು ತಮ್ಮದಾಗಿಸಿಕೊಂಡಿದ್ದಾರೆ.

    9.5 ಓವರ್ ಎಸೆದ ಅಭಿಮನ್ಯು ಮಿಥುನ್ 34 ರನ್ ನೀಡಿ 5 ವಿಕೆಟ್ ಪಡೆದಿದ್ದಕ್ಕೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 2013, 2014, 2017 ರಲ್ಲಿ ಕರ್ನಾಟಕ ವಿಜಯ್ ಹಜಾರೆ ಟ್ರೋಫಿಯನ್ನು ಗೆದ್ದುಕೊಂಡಿತ್ತು.