Tag: ಅಭಿನವ್ ಮುಕುಂದ್

  • ಮೊದಲ ಟೆಸ್ಟ್ ಪಂದ್ಯ ಗೆದ್ದು ಟೀಂ ಇಂಡಿಯಾ ದಾಖಲೆ!

    ಮೊದಲ ಟೆಸ್ಟ್ ಪಂದ್ಯ ಗೆದ್ದು ಟೀಂ ಇಂಡಿಯಾ ದಾಖಲೆ!

    ಗಾಲೆ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ 304 ರನ್ ಅಂತರದಿಂದ ಗೆದ್ದು ದಾಖಲೆ ನಿರ್ಮಿಸಿದೆ. ಈ ಮೂಲಕ 3 ಟೆಸ್ಟ್ ಗಳ ಸರಣಿಯಲ್ಲಿ ಟೀಂ ಇಂಡಿಯಾ ಮುನ್ನಡೆ ಸಾಧಿಸಿದೆ.

    304 ರನ್ ಗಳ ಗೆಲುವು ವಿದೇಶದಲ್ಲಿ ಭಾರೀ ಅಂತರದ ಗೆಲುವು. ಈ ಹಿಂದೆ 1986ರಲ್ಲಿ ಲೀಡ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ 279 ರನ್ ಅಂತರದಲ್ಲಿ ಗೆದ್ದಿದ್ದೇ ಇದುವರೆಗಿನ ದಾಖಲೆಯಾಗಿತ್ತು.

    ಗೆಲ್ಲಲು 550 ರನ್ ಗಳ ಪ್ರಯಾಸಕರ ಟಾರ್ಗೆಟ್ ಪಡೆದುಕೊಂಡಿದ್ದ ಶ್ರೀಲಂಕಾ 76.5 ಓವರ್ ಗಳಲ್ಲಿ 245 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಶ್ರೀಲಂಕಾದ ಆರಂಭಿಕ ಆಟಗಾರ ಕರುಣರತ್ನೆ 97 ರನ್ ಗಳಿಸಿ ಶತಕ ವಂಚಿತರಾದರು. ಇನ್ನುಳಿದಂತೆ ಡಿಕ್ವೆಲ್ಲಾ 67, ಮೆಂಡಿಸ್ 36, ಪಿರೇರಾ 21, ತರಂಗ 10 ರನ್ ಗಳಿಸಿದರು. ಶ್ರೀಲಂಕಾದ ಇಬ್ಬರು ಆಟಗಾರರು ಗಾಯಗೊಂಡಿದ್ದರಿಂದ ಬ್ಯಾಟಿಂಗ್ ಗೆ ಇಳಿಯಲಿಲ್ಲ. ಹೀಗಾಗಿ ಶ್ರೀಲಂಕಾ 245 ರನ್ ಗಳಿಗೆ ಆಲೌಟ್ ಆಯಿತು.

    ಭಾರತ ಪರ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ತಲಾ 3 ವಿಕೆಟ್ ಗಳಿಸಿದರೆ ಶಮಿ ಹಾಗೂ ಉಮೇಶ್ ಯಾದವ್ ತಲಾ 1 ವಿಕೆಟ್ ಗಳಿಸಿದರು.

    ಇದಕ್ಕೂ ಮುನ್ನ ಇಂದು 4ನೇ ದಿನದಾಟ ಆರಂಭಿಸಿದ ನಾಯಕ ವಿರಾಟ್ ಕೊಹ್ಲಿ ಶತಕ ಬಾರಿಸಿದರು. ತಕ್ಷಣ ಇನ್ನಿಂಗ್ಸ್ ಡಿಕ್ಲೇರ್ ಮಾಡಿದರು. ಈ ವೇಳೆ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 240 ರನ್ ಗಳಿಸಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಶಿಖರ್ ಧವನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

  • ಟೀಂ ಇಂಡಿಯಾಗೆ 498 ರನ್ ಭರ್ಜರಿ ಮುನ್ನಡೆ: ಶತಕದತ್ತ ಕೊಹ್ಲಿ!

    ಟೀಂ ಇಂಡಿಯಾಗೆ 498 ರನ್ ಭರ್ಜರಿ ಮುನ್ನಡೆ: ಶತಕದತ್ತ ಕೊಹ್ಲಿ!

    ಗಾಲೆ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 3ನೇ ದಿನದಂತ್ಯಕ್ಕೆ 498 ರನ್ ಗಳ ಭರ್ಜರಿ ಮುನ್ನಡೆ ಸಾಧಿಸಿದೆ. ದಿನದಾಟ ಮುಗಿದಾಗ ಭಾರತ 3 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದೆ.

    ಶ್ರೀಲಂಕಾ ತಂಡ 291 ರನ್ ಗಳಿಗೆ ಆಲೌಟ್ ಆದರೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಾಲೋ ಆನ್ ಹೇರಲಿಲ್ಲ. 2ನೇ ಇನ್ನಿಂಗ್ಸ್ ನ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 19 ರನ್ ಗಳಿಸಿ ಮೊದಲ ವಿಕೆಟ್ ಕಳೆದುಕೊಂಡಿತು. 4ನೇ ಓವರ್ ಕೊನೆಯ ಎಸೆತದಲ್ಲಿ ಶಿಖರ್ ಧವನ್ ಪಿರೇರಾಗೆ ವಿಕೆಟ್ ಒಪ್ಪಿಸಿದರು. ಶಿಖರ್ ಧವನ್ 14 ಎಸೆತಗಳಲ್ಲಿ 3 ಬೌಂಡರಿಗಳ ನೆರವಿನಿಂದ 14 ರನ್ ಗಳಿಸಿದ್ದರು. ನಂತರ ಬ್ಯಾಟಿಂಗ್ ಮಾಡಲು ಬಂದ ಚೇತೇಶ್ವರ್ ಪೂಜಾರ 15 ರನ್ ಗಳಿಸಿ ಔಟಾದರು.

    ಮಧ್ಯಾಹ್ನ ಟೀ ಬ್ರೇಕ್ ಗೂ ಮುನ್ನ ಸುರಿದ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಆಟಕ್ಕೆ ಬ್ರೇಕ್ ಹಾಕಿತು. 3ನೇ ವಿಕೆಟ್ ಗೆ ನಾಯಕ ವಿರಾಟ್ ಕೊಹ್ಲಿ ಮತ್ತು ಅಭಿನವ್ ಮುಕುಂದ್ ಉತ್ತಮ ಜೊತೆಯಾಟ ನೀಡಿದರು. ಆದರೆ 81 ರನ್ ಗಳಿಸಿದ್ದ ಅಭಿನವ್ ಮುಕುಂದ್ ಔಟಾದರು. 3ನೇ ದಿನದಾಟ ಅಂತ್ಯಗೊಂಡಾಗ ಕೊಹ್ಲಿ 76 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

    ಶ್ರೀಲಂಕಾ ಪರ ಪಿರೇರಾ, ಕುಮಾರ ಹಾಗೂ ಗುಣತಿಲಕ ತಲಾ 1 ವಿಕೆಟ್ ಗಳಿಸಿದರು.

    ಬೆಳಗ್ಗೇನಾಯ್ತು?: 3 ವಿಕೆಟ್ ನಷ್ಟಕ್ಕೆ 154 ರನ್ ನಿಂದ 3ನೇ ದಿನದಾಟ ಆರಂಭಿಸಿದ ಶ್ರೀಲಂಕಾ 291 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರವಾಗಿ ರವೀಂದ್ರ ಜಡೇಜಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 2 ವಿಕೆಟ್ ಪಡೆದರು. ಉಮೇಶ್ ಯಾದವ್, ಅಶ್ವಿನ್ ಹಾಗೂ ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.

    ಟೀಂ ಇಂಡಿಯಾ ಪರವಾಗಿ ಮೊದಲ ಇನ್ನಿಂಗ್ಸ್ ನಲ್ಲಿ 2 ಶತಕಗಳು ದಾಖಲಾದರೆ, ಶ್ರೀಲಂಕಾದ ಮೊದಲ ಇನ್ನಿಂಗ್ಸ್ ನಲ್ಲಿ ಯಾವುದೇ ಶತಕ ದಾಖಲಾಗಲಿಲ್ಲ. ಆದರೆ ದಿಲ್ ರುವಾನ್ ಪಿರೇರಾ ಮಾತ್ರ 92 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರ ಜೊತೆ ಏಂಜೆಲೋ ಮ್ಯಾಥ್ಯೂಸ್ 83 ರನ್ ಗಳಿಸಿ ಉತ್ತಮ ಜೊತೆಯಾಟ ನೀಡಿದರು. ಆದರೆ ಉಳಿದವರು ಯಾರೂ ಉತ್ತಮ ಸಾಥ್ ನೀಡದ ಹಿನ್ನೆಲೆಯಲ್ಲಿ ಶ್ರೀಲಂಕಾ 291 ರನ್ ಗಳಿಗೆ ಆಲೌಟಾಗಬೇಕಾಯಿತು.