Tag: ಅಭಿನಂದನ್ ವರ್ಧಮಾನ್

  • ಬೆಂಗ್ಳೂರಿಗೆ ವಿಂಗ್ ಕಮಾಂಡರ್ ಅಭಿನಂದನ್ ಎಂಟ್ರಿ!

    ಬೆಂಗ್ಳೂರಿಗೆ ವಿಂಗ್ ಕಮಾಂಡರ್ ಅಭಿನಂದನ್ ಎಂಟ್ರಿ!

    ಬೆಂಗಳೂರು: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಸದ್ಯದಲ್ಲಿಯೇ ಬೆಂಗಳೂರಿಗೆ ಎಂಟ್ರಿ ಕೊಡಲಿದ್ದಾರೆ. ಅಲ್ಲದೆ ಫೈಟರ್ ಜೆಟ್ ಕೂಡ ಏರಲಿದ್ದಾರೆ.

    ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕ್‍ನ ಎಫ್16 ಹೊಡೆದುರುಳಿಸಿದ ಭಾರತ ಮಾತೆಯ ಹೆಮ್ಮೆಯ ಪುತ್ರ. ಆದರೆ ಈ ವೇಳೆ ಗಾಯಗೊಂಡಿದ್ದ ಅಭಿನಂದನ್, ಫೈಟರ್ ಜೆಟ್ ಏರುವುದು ಅನುಮಾನ ಎನ್ನಲಾಗಿತ್ತು. ಅಲ್ಲದೆ ಮಾರ್ಚ್ ನಲ್ಲಿ ಅವರನ್ನು ರಜೆ ಮೇಲೆ ಕಳುಹಿಸಲಾಗಿತ್ತು. ಬಳಿಕ ಬೆಂಗಳೂರಿನಲ್ಲಿ ದೈಹಿಕ ಪರೀಕ್ಷೆ ನಡೆಸಿದ್ದ ವೈದ್ಯರು, ಅಭಿನಂದನ್ ಫಿಟ್ ಆಗಿದ್ದಾರೆ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಇದನ್ನೂ ಓದಿ: ವಿಂಗ್‍ಕಮಾಂಡರ್ ಅಭಿನಂದನ್ ಹೆಸರು ‘ವೀರ ಚಕ್ರ’ ಪ್ರಶಸ್ತಿಗೆ ಶಿಫಾರಸ್ಸು

    ಈಗ ಪುನಃ ಈ ತಿಂಗಳಾಂತ್ಯದಲ್ಲಿ ಬೆಂಗಳೂರಿನ ಹೆಚ್‍ಎಎಲ್‍ನಲ್ಲಿರುವ ಇನ್‍ಸ್ಟಿಟ್ಯೂಟ್ ಆಫ್ ಏರೋಸ್ಪೇಸ್‍ಗೆ ಅಭಿನಂದನ್ ಆಗಮಿಸಲಿದ್ದಾರೆ. ಸಾಮಾನ್ಯವಾಗಿ ಫೈಟರ್ ಜೆಟ್‍ನಿಂದ ಎಜೆಕ್ಟ್ ಆದವರನ್ನು 12 ವಾರಗಳ ಕಾಲ ತಪಾಸಣೆ ನಡೆಸಿ, ನಂತರವೇ ಅಧಿಕಾರಿಗಳು ಅಂತಿಮ ನಿರ್ಧಾರ ಕೈಗೊಳ್ತಾರೆ. ಈಗಾಗಲೇ ಅಭಿನಂದನ್ ಆರೋಗ್ಯ ಫೈಟರ್ ಜೆಟ್ ಏರಲು ಫಿಟ್ ಆಗಿದೆ ಎಂದು ವೈದ್ಯರು ಹೇಳಿದ್ದು, ಬೆಂಗಳೂರಿಗೆ ಬಂದು ಪ್ರಮಾಣ ಪತ್ರ ಪಡೆಯಲಿದ್ದಾರೆ.

    ಮೇ ತಿಂಗಳ ಅಂತ್ಯದಲ್ಲಿ ಅಭಿನಂದರ್ ಫೈಟರ್ ಜೆಟ್ ಏರಲಿದ್ದು, ಮತ್ತೆ ಭಾರತ ಮಾತೆಯ ಸೇವೆಗೆ ಮರಳಲಿದ್ದಾರೆ. ಭದ್ರತೆ ದೃಷ್ಟಿಯಿಂದ ಅಭಿನಂದನ್‍ರನ್ನು ಬೇರೆ ಕಡೆ ಸೇವೆಗೆ ನಿಯೋಜಿಸಲು ವಾಯುಸೇನೆ ಪ್ಲಾನ್ ಮಾಡಿದೆ. ಅಲ್ಲದೆ ಶೌರ್ಯ ಪ್ರಶಸ್ತಿ ನೀಡುವಂತೆಯೂ ಅಧಿಕಾರಿಗಳು ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

    https://www.youtube.com/watch?v=ArvRnqPs81s

  • ವಿಂಗ್‍ಕಮಾಂಡರ್ ಅಭಿನಂದನ್ ಹೆಸರು ‘ವೀರ ಚಕ್ರ’ ಪ್ರಶಸ್ತಿಗೆ ಶಿಫಾರಸ್ಸು

    ವಿಂಗ್‍ಕಮಾಂಡರ್ ಅಭಿನಂದನ್ ಹೆಸರು ‘ವೀರ ಚಕ್ರ’ ಪ್ರಶಸ್ತಿಗೆ ಶಿಫಾರಸ್ಸು

    ನವದೆಹಲಿ: ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರ ಹೆಸರನ್ನು ಸೇನೆ ‘ವೀರ ಚಕ್ರ’ ಪ್ರಶಸ್ತಿಗೆ ಶಿಫಾರಸ್ಸು ಮಾಡಲು ಚಿಂತನೆ ನಡೆಸಲಾಗಿದೆ ಎಂಬ ಮಾಹಿತಿ ಲಭಿಸಿದೆ.

    ಯುದ್ಧದ ಸಮಯದಲ್ಲಿ ನೀಡುವ ಸೇನೆಯ 3ನೇ ಅತ್ಯುನ್ನತ ಪ್ರಶಸ್ತಿ ಇದಾಗಿದ್ದು, ಯುದ್ಧಕಾಲದಲ್ಲಿ ತೋರುವ ಅಪ್ರತಿಮ ಸಾಹಸಕ್ಕೆ ಯೋಧರಿಗೆ ಪರಮವೀರ ಚಕ್ರ, ಮಾಹಾವೀರ ಚಕ್ರ, ವೀರ ಚಕ್ರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ. ಬಾಲಕೋಟ್ ದಾಳಿಯಲ್ಲಿ ಕಾರ್ಯನಿರ್ವಹಿಸಿದ್ದ ಮಿಗ್ ಪೈಲಟ್ ಗಳಿಗೂ ಕೂಡ ‘ವಾಯು ಸೇನಾ ಪದಕ’ ನೀಡಲು ಸೇನೆ ನಿರ್ಧರಿಸಿದೆ ಎಂಬ ಮಾಹಿತಿ ಲಭಿಸಿದೆ.

    ಪಾಕಿಸ್ತಾನದ ಎಫ್ 16 ಯುದ್ಧ ವಿಮಾನಗಳು ಭಾರತ ಗಡಿ ಪ್ರವೇಶ ಮಾಡಿ ದಾಳಿ ನಡೆಸಲು ಮುಂದಾಗಿತ್ತು. ಈ ವೇಳೆ ಅಭಿನಂದನ್ ಪಾಕ್ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಿದ್ದರು. ಇದಕ್ಕೂ ಮುನ್ನ ಭಾರತ ಸೇನೆ ಪಾಕಿಸ್ತಾನ ಬಾಲಕೋಟ್ ಮೇಲೆ ದಾಳಿ ನಡೆಸಿ ಉಗ್ರರ ನೆಲಗಳನ್ನು ಧ್ವಂಸ ಮಾಡಿತ್ತು.

    ಅಭಿನಂದನ್ ವರ್ಗಾವಣೆ: ಇತ್ತ ಅಭಿನಂದನ್ ವರ್ಧಮಾನ್ ಅವರಿಗೆ ಭಾರತೀಯ ವಾಯು ಸೇನೆಯ ಶ್ರೀನಗರ ವಾಯುನೆಲೆಯಿಂದ ವರ್ಗಾವಣೆಯಾಗಿದ್ದು, ದೇಶದ ಮತ್ತೊಂದು ಪ್ರಮುಖ ವಾಯುನೆಲೆಯಾದ ಪಶ್ಚಿಮ ವಲಯಕ್ಕೆ ಅವರನ್ನು ನಿಯೋಜಿಸಲಾಗಿದೆ. ಇದು ಪಾಕಿಸ್ತಾನದ ಗಡಿಯಲ್ಲಿ ಪ್ರಮುಖ ವಾಯುನೆಲೆಯಾಗಿದೆ.

    ಜಮ್ಮು ಕಾಶ್ಮೀರದ ಶ್ರೀನಗರದ ವಾಯುನೆಲೆಯಲ್ಲಿ ಅವರ ಭದ್ರತೆಯ ಕುರಿತು ವ್ಯಕ್ತವಾದ ಆತಂಕದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ಶೀಘ್ರದಲ್ಲೇ ಅಭಿನಂದನ್ ಅವರು ವಿಮಾನದ ಕಾಕ್‍ಪಿಟ್ ಏರಲು ಸಿದ್ಧರಾಗಿದ್ದು, ಈ ಕುರಿತ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

  • ಬೆಂಗ್ಳೂರಲ್ಲಿ ಟ್ರೆಂಡಿಂಗ್ ಆಯ್ತು ಅಭಿನಂದನ್ ಮೀಸೆ, ಹೇರ್ ಸ್ಟೈಲ್..!

    ಬೆಂಗ್ಳೂರಲ್ಲಿ ಟ್ರೆಂಡಿಂಗ್ ಆಯ್ತು ಅಭಿನಂದನ್ ಮೀಸೆ, ಹೇರ್ ಸ್ಟೈಲ್..!

    – ಕೊರಮಂಗಲ ಸೆಲೂನ್ ನಿಂದ ಸಖತ್ ಆಫರ್

    ಬೆಂಗಳೂರು: ಪಾಕ್ ಕಪಿಮುಷ್ಠಿಯಿಂದ ಬಿಡುಗಡೆಗೊಂಡು ತಾಯ್ನಾಡು ಭಾರತಕ್ಕೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ವಾಪಸ್ ಆಗಿದ್ದಾರೆ. ಈ ಮಧ್ಯೆ ವೀರಪುತ್ರನ ಮೀಸೆ ಹಾಗೂ ಹೇರ್ ಕಟ್ ಸಖತ್ ಟ್ರೆಂಡಿಂಗ್ ಆಗಿದೆ. ಬೆಂಗಳೂರಿನಲ್ಲಿ ಕೂಡ ಅಭಿ ಮೀಸೆ ಸ್ಟೈಲ್ ಸಖತ್ ಹವಾ ಸೃಷ್ಟಿ ಮಾಡಿದೆ.

    ಯುವ ಸಮೂಹ ಅಭಿನಂದನ್ ಸ್ಟೈಲ್ ಗೆ ಸಖತ್ ಫಿದಾ ಆಗಿದೆ. ನಗರದ ಬಹುತೇಕ ಸೆಲೂನ್ ನಲ್ಲಿ ಈ ಸ್ಟೈಲ್ ಗೆ ಭಾರೀ ಬೇಡಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೋರಮಂಗಲ ನಾನೇಶ್ ಹೇರ್ ಸಲೂನ್ ನಿಂದ್ ಸಖತ್ ಆಫರ್ ನೀಡಲಾಗಿದೆ.

    ಅಭಿನಂದನ್ ರೀತಿ ಸ್ಟೈಲ್ ಮಾಡುವವರಿಗೆ ಉಚಿತವಾಗಿ ಹೇರ್ ಸ್ಟೈಲ್ ಮಾಡಲಾಗುತ್ತಿದೆ. ಹೀಗಾಗಿ ಅಭಿನಂದನ್ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಅಭಿನಂದನ್ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಹೀಗಾಗಿ ಸೆಲೂನ್ ಮಾಲೀಕರು ಕೂಡ ವೀರ ಯೋಧನಿಗೆ ಗೌರವ ಸಲ್ಲಿಸಲು ಉಚಿತವಾಗಿ ಹೇರ್ ಆಂಡ್ ಮೀಸೆ ಸ್ಟೈಲ್ ಮಾಡುತ್ತಿದ್ದಾರೆ.

    ಮಾರ್ಚ್ 1ರ ಶುಕ್ರವಾರದಂದು ವೈರಿ ರಾಷ್ಟ್ರದಿಂದ ಬರುವ ವೇಳೆ ಮುಖದಲ್ಲಿ ಅದೇ ಮಂದಹಾಸ, ಅದೇ ಹುರಿ ಮೀಸೆ, ಅದೇ ಮಾನಸಿಕ ದೃಢತೆಯೊಂದಿಗೆ ಅಭಿನಂದನ್ ತಾಯ್ನಾಡಿಗೆ ಕಾಲಿಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗನಿಗೆ ಅಭಿನಂದನ್ ಎಂದು ನಾಮಕರಣ ಮಾಡಿದ ಕೊಪ್ಪಳದ ದಂಪತಿ

    ಮಗನಿಗೆ ಅಭಿನಂದನ್ ಎಂದು ನಾಮಕರಣ ಮಾಡಿದ ಕೊಪ್ಪಳದ ದಂಪತಿ

    ಕೊಪ್ಪಳ: ಪೈಲಟ್, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಪಾಕ್ ಕಪಿಮುಷ್ಠಿಯಿಂದ ಬಿಡುಗಡೆಯಾಗಿ ತಾಯ್ನಾಡಿಗೆ ಮರಳುತ್ತಿದ್ದಂತೆಯೇ ಇದೀಗ ವೀರಪುತ್ರನ ಹೆಸರನ್ನು ಹುಟ್ಟಿದ ಮಕ್ಕಳಿಗೆ ಇಡಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಕೊಪ್ಪಳದ ಮಗುವಿಗೆ ಕೂಡ ಅಭಿನಂದನ್ ಹೆಸರನ್ನು ನಾಮಕರಣ ಮಾಡಲಾಗಿದೆ.

    ಹೌದು. ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ದಂಪತಿ ವಿಂಗ್ ಕಮಾಂಡರ್ ಅಭಿನಂದನ್ ಗೌರವಾರ್ಥ ನಾಮಕರಣ ಮಾಡಿದ್ದಾರೆ. ಮಹಾಂತೇಶ್ ಶೆಟ್ಟರ್ ಹಾಗೂ ಶಾಂತಾ ಶೆಟ್ಟರ್ ದಂಪತಿ ತಮ್ಮ ಪುತ್ರನಿಗೆ ಅಭಿನಂದನ್ ಎಂದು ಹೆಸರಿಟ್ಟಿದ್ದಾರೆ. ಇದನ್ನೂ ಓದಿ: ತಮ್ಮ ಮಗುವಿಗೆ ಅಭಿನಂದನ್ ಎಂದು ಹೆಸರಿಟ್ಟ ದಂಪತಿ

    ದಂಪತಿ ಈ ಮುಂಚೆ ತಮ್ಮ ಪುತ್ರನಿಗೆ ಅಥರ್ವ ಅಥವಾ ಅಭಿನವ ಎಂದು ನಾಮಕರಣ ಮಾಡುವುದಾಗಿ ನಿರ್ಧರಿಸಿದ್ದರು. ಆದ್ರೆ ಇತ್ತೀಚೆಗೆ ಅಭಿನಂದನ್ ಮಾಡಿದ ಸಾಹಸಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಹಿನ್ನಲೆಯಲ್ಲಿ ಮೂರು ತಿಂಗಳ ಗಂಡುಮಗುವಿಗೆ ಅಭಿನಂದನ್ ಎಂದು ನಾಮಕರಣ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ:  ಪಾಕ್ ಮೇಲೆ ಏರ್‌ಸ್ಟ್ರೈಕ್- ಮಗುವಿಗೆ `ಮಿರಾಜ್ ಸಿಂಗ್’ ಹೆಸರಿಟ್ಟ ರಾಜಸ್ಥಾನ ದಂಪತಿ..!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕಪಟ, ನೌಟಂಕಿ ಆಟ ಇದೇ ಮೊದ್ಲಲ್ಲ- ಈ ಹಿಂದೆಯೂ ಭಾರತೀಯ ಯೋಧರನ್ನು ಕಾಡಿತ್ತು ಪಾಕ್..!

    ಕಪಟ, ನೌಟಂಕಿ ಆಟ ಇದೇ ಮೊದ್ಲಲ್ಲ- ಈ ಹಿಂದೆಯೂ ಭಾರತೀಯ ಯೋಧರನ್ನು ಕಾಡಿತ್ತು ಪಾಕ್..!

    ಬೆಂಗಳೂರು: ಭಾರತದ ಹೆಮ್ಮೆಯ ಪುತ್ರ, ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಶುಕ್ರವಾರ ಮಧ್ಯಾಹ್ನದ ವೇಳೆ ಬಿಡುಗಡೆ ಮಾಡುವುದಾಗಿ ಹೇಳಿದ್ದ ಪಾಕಿಸ್ತಾನ, ರಾತ್ರಿ 9.15ರ ಸುಮಾರಿಗೆ ಹಸ್ತಾಂತರಿಸಿತ್ತು. ಪಾಕಿಸ್ತಾನದ ಈ ನೌಟಂಕಿ ಆಟ ಇವತ್ತಿನದ್ದೇನಲ್ಲ. ಈ ಹಿಂದೆ ಸೆರೆ ಹಿಡಿದಿದ್ದ ಭಾರತೀಯ ಹಲವು ಯೋಧರ ವಿಚಾರದಲ್ಲೂ ಇದೇ ರೀತಿ ನಾಟಕವಾಡಿದೆ.

    ಅಭಿನಂದನ್ ವರ್ತಮಾನ್ ಅವರ ಬಿಡುಗಡೆ ಪಾಕಿಸ್ತಾನ ಅನುಸರಿಸಿದ ವಿಳಂಬ ಧೋರಣೆ ಹಿಂದಿನ ಹಲವು ಘಟನೆಗಳನ್ನು ನೆನಪಿಗೆ ತಂದಿವೆ. ಅದರಲ್ಲಿ ಮೊದಲಿಗೆ 1955ರಲ್ಲಿ ಕೆಸಿ ಕಾರ್ಯಪ್ಪ ಅವರು ಸ್ಕ್ವಾಡ್ರನ್ ಲೀಡರ್ ಆಗಿದ್ದ ವೇಳೆ ಗಡಿಯಲ್ಲಿ ವಿಮಾನ ಹಾರಿಸುತ್ತಿದ್ದರು. ಈ ವೇಳೆ, ಪಾಕಿಸ್ತಾನಿಗಳು ಗುಂಡಿಕ್ಕಿ ಕೆಳಗೆಬಿದ್ದ ಕಾರ್ಯಪ್ಪ ಅವರನ್ನು ಸೆರೆ ಹಿಡಿದಿದ್ದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪುತ್ರನಾಗಿದ್ದ ಅವರು ಐದು ತಿಂಗಳು ಪಾಕ್ ಜೈಲಿನಲ್ಲಿದ್ದರು.


    ಫ್ಲೈಟ್ ಲೆಫ್ಟಿನೆಂಟ್ ದಿಲೀಪ್ ಫಾರೂಕ್ ಪ್ಲೇನ್ ಅನ್ನು ಸಹ ಇದೇ ರೀತಿಯಾಗಿ 1971ರ ಇಂಡೋ-ಪಾಕ್ ಯುದ್ಧದ ವೇಳೆ ಪಾಕ್ ಹೊಡೆದಿತ್ತು. ನಂತರ ಜೈಲಿನಲ್ಲಿ ಬಂಧಿಸಿಟ್ಟಿತ್ತು. ಫಾರೂಕ್ ಜೊತೆ ಮತ್ತಿಬ್ಬರು ಭಾರತೀಯ ಯೋಧರು, ಪಾಕ್ ಜೈಲಿನಿಂದ ಎಸ್ಕೇಪ್ ಆಗಲು ಯತ್ನಿಸಿದ್ದರು. ಅವರು ಸಫಲರಾದರೂ ಮತ್ತೊಮ್ಮೆ ಸೆರೆಹಿಡಿಯಲಾಯ್ತು. ಅಂತಿಮವಾಗಿ ಡಿಸೆಂಬರ್ 1972ರಲ್ಲಿ ರಿಲೀಸ್ ಆದರು.

    ಗ್ರೂಪ್ ಕ್ಯಾಪ್ಟನ್ ನಚಿಕೇತ್ ಅವರನ್ನು ಮೇ 1990ರ ಕಾರ್ಗಿಲ್ ಯುದ್ಧದ ವೇಳೆ ಪಾಕ್ ಸೇನೆ ಸೆರೆ ಹಿಡಿದಿತ್ತು. ತಾಂತ್ರಿಕ ದೋಷದಿಂದಾಗಿ ಮಿಗ್ ವಿಮಾನದಿಂದ ಇಜೆಕ್ಟ್ ಆಗಬೇಕಾಗಿತ್ತು. ಇವರು 8 ದಿನ ಪಾಕಿಸ್ತಾನದ ವಶದಲ್ಲಿದ್ದರು. ಈ ವೇಳೆ, ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡಲಾಗಿತ್ತು. ಅಮೆರಿಕ ಮತ್ತು ವಿಶ್ವರಾಷ್ಟ್ರಗಳ ಒತ್ತಡದಿಂದಾಗಿ ನಚಿಕೇತರನ್ನು ಪಾಕಿಸ್ತಾನ ಬಿಡುಗಡೆ ಮಾಡಿತ್ತು.

    ಸ್ಕ್ವಾಡ್ರನ್ ಲೀಡರ್ ಅಜಯ್ ಅಹುಜಾ ಅವರನ್ನು ಸಹ ನಚಿಕೇತ ಮಾದರಿಯಲ್ಲೇ ಪಾಕಿಸ್ತಾನ ಗುಂಡಿಕ್ಕಿತ್ತು. ಗಡಿಯಲ್ಲಿ ಅಹುಜಾ ಪ್ಲೇನ್ ಹೊಡೆದುರುಳಿಸಿ ಒತ್ತೆಯಿಟ್ಟುಕೊಂಡಿತ್ತು. ಕೊನೆಗೆ, ತಲೆ, ಎದೆ ಭಾಗಕ್ಕೆ ಗುಂಡಿಟ್ಟು ಕೊಂದು ವಿಕೃತಿ ಮೆರೆದಿತ್ತು.

    1999ರ ಮೇ 14ರಲ್ಲಿ ಕ್ಯಾಪ್ಟನ್ ಕಾಲಿಯಾ ಸೇರಿ 6 ಮಂದಿ ಯೋಧರನ್ನು ಪಾಕ್ ಸೆರೆ ಹಿಡಿದಿತ್ತು. ನಮ್ಮ ಯೋಧರನ್ನು ಅಂಗಹೀನಗೊಳಿಸಿ ನಂತರ ಭಾರತಕ್ಕೆ ಹಸ್ತಾಂತರಿಸಿತು. ಇದು ಜಿನೀವಾ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿತ್ತು. ಅಂದಿನ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡೀಸ್ ಅವರು ಜೀನೇವಾ ಒಪ್ಪಂದವನ್ನು ಪಾಕಿಸ್ತಾನ ಸ್ಪಷ್ಟವಾಗಿ ಉಲ್ಲಂಘಿಸಿದೆ ಅಂದಿದ್ದರು. ಆದರೆ, ಕಾಲಿಯಾ ಮತ್ತಿತರೆ ಯೋಧರನ್ನು ನಾವು ಸೆರೆಹಿಡಿದಿರಲಿಲ್ಲ ಅಂತ ಅಂದಿನ ಪಾಕ್ ಸೇನಾಮುಖ್ಯಸ್ಥ ಮುಷರಫ್ ಬೊಗಳೆ ಬಿಟ್ಟಿದ್ದರು. ಕಾಲಿಯಾ ಮತ್ತು ಐವರು ಯೋಧರ ದೇಹಗಳು ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೆಹಲಿಯಲ್ಲಿಂದು ಅಭಿಗೆ ಆರೋಗ್ಯ ತಪಾಸಣೆ – ಬೇಹುಗಾರಿಕೆ ಕೋನದಲ್ಲೂ ಸೇನಾ ವಿಚಾರಣೆ

    ದೆಹಲಿಯಲ್ಲಿಂದು ಅಭಿಗೆ ಆರೋಗ್ಯ ತಪಾಸಣೆ – ಬೇಹುಗಾರಿಕೆ ಕೋನದಲ್ಲೂ ಸೇನಾ ವಿಚಾರಣೆ

    ನವದೆಹಲಿ: ಶುಕ್ರವಾರ ರಾತ್ರಿ ತಾಯ್ನಾಡು ಭಾರತಕ್ಕೆ ವಾಪಸ್ ಆಗಿರೋ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಇಂದು ದೆಹಲಿಯಲ್ಲಿ ಸಂಪೂರ್ಣ ವೈದ್ಯಕೀಯ ತಪಾಸಣೆ ನಡೆಯಲಿದೆ.

    ನಿನ್ನೆ ಅಟಾರಿ ಗಡಿಯಿಂದ ಅಮೃತಸರಕ್ಕೆ ತೆರಳಿದ ಧೀರಯೋಧ ಅಭಿನಂದನ್ ಅಲ್ಲಿಂದ ದೆಹಲಿ ತಲುಪಿದ್ದಾರೆ. ಹೀಗಾಗಿ ಇಂದು ಅಲ್ಲಿ ಅವರಿಗೆ ವೈದ್ಯಕೀಯ ತಪಾಸಣೆ ನಡೆಯಲಿದೆ. ಪ್ಯಾರಾಚೂಟ್‍ನಿಂದ ಜಿಗಿದಿದ್ದ ಕಾರಣ ವಾರದ ಕಾಲ ತಪಾಸಣೆ ಜೊತೆಗೆ ಭಾರತೀಯ ಸೇನೆ ವಿಚಾರಣೆಗೆ ಒಳಪಡಿಸಲಿದೆ ಎನ್ನಲಾಗಿದೆ.

    ಅಭಿನಂದನ್ ಎದುರಿಸಬಹುದಾದ ವಿಚಾರಣೆಗಳು..?
    ವಾಯುಸೇನೆ ಅಧಿಕಾರಿಗಳು ವಾಯುಸೇನೆಯ ಗುಪ್ತಚರ ಘಟಕಕ್ಕೆ ಕರೆದೊಯ್ಯುತ್ತಾರೆ. ಈ ವೇಳೆ ಫಿಟ್‍ನೆಸ್ ಸೇರಿ, ಸಾಕಷ್ಟು ವೈದ್ಯಕೀಯ ಪರೀಕ್ಷೆ ನಡೆಯುತ್ತದೆ. ದೇಹದಲ್ಲಿ ಯಾವುದಾದರೂ ಟ್ರ್ಯಾಕಿಂಗ್ ಡಿವೈಸ್ ಇದೆಯೇ ಅಂತ ಸ್ಕ್ಯಾನಿಂಗ್ ಮಾಡ್ತಾರೆ. ಶತ್ರುರಾಷ್ಟ್ರ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿ ಕಿರುಕುಳ ನೀಡಿದ್ಯಾ ಅಂತ ತಪಾಸಣೆ ನಡೆಸಬಹುದು. ಹೆಚ್ಚಿನ ತನಿಖೆಗಾಗಿ ಗುಪ್ತಚರ ಇಲಾಖೆಗೆ ಅಥವಾ ರಾ ಸಂಸ್ಥೆಗೆ ಹಸ್ತಾಂತರಿಸಬಹುದು. ನಮ್ಮ ದೇಶದ ಗುಪ್ತ ವಿಚಾರವನ್ನು ವೈರಿರಾಷ್ಟ್ರಕ್ಕೆ ಬಿಟ್ಟುಕೊಟ್ಟಿದ್ದಾರೆಯೇ ಅಂತ ವಿಚಾರಣೆ ನಡೆಸಬಹುದು. ಹಾಗೂ ಶತ್ರುರಾಷ್ಟ್ರದ ರಹಸ್ಯವೇನಾದರೂ ತಿಳಿದಿದ್ದರೆ ನಮಗೆ ತಿಳಿಸಿ ಅಂತ ಕೇಳುವ ಸಾಧ್ಯತೆಗಳಿವೆ.

    ಪಾಕಿಸ್ತಾನದ ವಾಯುದಾಳಿಯನ್ನು ಹಿಮ್ಮೆಟ್ಟುವ ವೇಳೆ ಗಡಿ ದಾಟಿ ಪಾಕ್ ಸೈನ್ಯದ ವಶದಲ್ಲಿದ್ದ ಅಭಿನಂದನ್ ಶುಕ್ರವಾರ ಸಂಜೆ ವೇಳೆಗೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿ ಮತ್ತೆ ತನ್ನ ಕುತಂತ್ರವನ್ನು ಪ್ರದರ್ಶಿಸಿತ್ತು. ನಿನ್ನೆ ಮುಂಜಾನೆಯಿಂದಲೇ ವಾಘಾ ಗಡಿಯಲ್ಲಿ ಕಾದು ಕುಳಿತಿದ್ದ ಭಾರತೀಯ ಅಭಿಮಾನಿಗಳ ಛಲ ರಾತ್ರಿಯಾದ್ರು ಕಡಿಮೆ ಆಗಲಿಲ್ಲ. ಸಂಜೆ ವೇಳೆಗೆ ಮಳೆ ಬಂದಿದ್ದರೂ ಕೂಡ ಲೆಕ್ಕಿಸದ ಭಾರತೀಯರು ಅಲ್ಲೇ ನಿಂತಿದ್ದರು. ಇವೆಲ್ಲದರ ನಡುವೆಯೇ ರಾತ್ರಿ 9.15 ಗಂಟೆ ವೇಳೆಗೆ ಅಭಿನಂದನ್ ಭಾರತದ ನೆಲವನ್ನು ಪ್ರವೇಶಿಸಿದ್ದರು.

    ಅಭಿನಂದನ್ ಅವರನ್ನು ಸ್ವಾಗತ ಮಾಡಲು ವಾಯುಸೇನಾ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಥಾಮಸ್ ಕುರಿಯನ್ ಹಾಗೂ ಭಾರತ ಸರ್ಕಾರದ ಅಧಿಕಾರಿಗಳು ವಾಘಾ ಗಡಿಗೆ ಆಗಮಿಸಿದ್ದರು. ಅಲ್ಲದೇ ಅಭಿನಂದನ್ ಪೋಷಕರು ಕೂಡ ಸ್ಥಳದಲ್ಲಿ ಹಾಜರಿದ್ದರು. ವಾಘಾ ಗಡಿಯಿಂದ ನೇರ ಅವರನ್ನು ಅಮೃತಸರಕ್ಕೆ ಕರೆದ್ಯೊಯಲಾಯಿತು. ಆ ಬಳಿಕ ಅಲ್ಲಿಂದ ಸೇನಾಧಿಕಾರಿಗಳೊಂದಿಗೆ ದೆಹಲಿಗೆ ವಿಮಾನದಲ್ಲಿ ಕರೆತಂದಿದ್ದಾರೆ.

    https://www.youtube.com/watch?v=ArvRnqPs81s

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv