Tag: ಅಬ್ದುಲ್ ಬಸಿತ್

  • ಫಾಲೋವರ್ಸ್ ಹೆಚ್ಚಿಸಿದಕ್ಕೆ ಪಾಕ್ ಮಾಜಿ ರಾಯಭಾರಿಗೆ ಥ್ಯಾಂಕ್ಸ್ ಹೇಳಿದ ಪೋರ್ನ್ ಸ್ಟಾರ್

    ಫಾಲೋವರ್ಸ್ ಹೆಚ್ಚಿಸಿದಕ್ಕೆ ಪಾಕ್ ಮಾಜಿ ರಾಯಭಾರಿಗೆ ಥ್ಯಾಂಕ್ಸ್ ಹೇಳಿದ ಪೋರ್ನ್ ಸ್ಟಾರ್

    ಇಸ್ಲಾಮಾಬಾದ್: ಕಾಶ್ಮೀರದ ವಿಚಾರವಾಗಿ ಸುಳ್ಳು ಸುದ್ದಿ ಹಬ್ಬಿಸಿ, ಛೀಮಾರಿಗೆ ಗುರಿಯಾಗಿದ್ದ ಪಾಕಿಸ್ತಾನದ ಮಾಜಿ ರಾಯಭಾರಿ ಅಬ್ದುಲ್ ಬಸಿತ್ ಅವರಿಗೆ ಪೋರ್ನ್ ಸ್ಟಾರ್ ಧನ್ಯವಾದ ಹೇಳುವ ಮೂಲಕ ಕಾಲೆಳೆದಿದ್ದಾರೆ.

    ಕಾಶ್ಮೀರದಲ್ಲಿ ಪೆಲೆಟ್ ಗನ್ ದಾಳಿಯಿಂದಾಗಿ ವ್ಯಕ್ತಿ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ಪೋರ್ನ್ ನಟ ಜಾನಿ ಸಿನ್ಸ್ ಫೋಟೋವನ್ನು ರಿಟ್ವೀಟ್ ಮಾಡುವ ಮೂಲಕ ಭಾರತದಲ್ಲಿದ್ದ ಮಾಜಿ ಹೈಕಮಿಷನರ್ ಅಬ್ದುಲ್ ಬಸಿತ್ ತೀವ್ರ ಮುಜುಗರಕ್ಕೊಳಗಾಗಿದ್ದರು. ಈಗ ಪೋರ್ನ್ ಸ್ಟಾರ್ ಜಾನಿ ಸಿನ್ಸ್ ಕೂಡ ಅಬ್ದುಲ್ ಬಸಿತ್ ಕಾಲೆಳೆದು ಥ್ಯಾಂಕ್ಸ್ ಹೇಳಿದ್ದಾರೆ.

    ಬಸೀತ್ ಟ್ವೀಟ್ ಮಾಡಿದ್ದನ್ನು ನೋಡಿ ಪೋರ್ನ್ ವೆಬ್‍ಸೈಟ್ ಬ್ರಾಝಾರ್ಸ್, ಜಾನಿ ಸಿನ್ಸ್ ಗಾಗಿ ಪ್ರಾರ್ಥನೆ ಮಾಡಿ ಎಂದು ಟ್ವೀಟ್ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಾನಿ ಸಿನ್ಸ್, ಪಾಕ್ ಮಾಜಿ ರಾಯಭಾರಿ ಅಬ್ದುಲ್ ಬಸಿತ್ ಅವರಿಗೆ ಧನ್ಯವಾದ. ಏಕೆಂದರೆ ನೀವು ನನ್ನ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸಿದ್ದೀರಿ ಎಂದು ಲೇವಡಿ ಮಾಡಿದ್ದಾರೆ.

    ಪಾಕಿಸ್ತಾನ ಮೂಲದ ಪತ್ರಕರ್ತೆ ನೈಲಾ ಇನಾಯತ್, ಅಬ್ದುಲ್ ರಿಟ್ವೀಟ್ ಮಾಡಿರುವುದನ್ನು ಸ್ಕ್ರೀನ್ ಶಾಟ್ ತೆಗೆದು ಟ್ವೀಟ್ ಮಾಡಿ ಕಿಡಿಕಾರಿದ್ದರು. ಪಾಕಿಸ್ತಾನದ ಮಾಜಿ ಹೈ ಕಮಿಷನರ್ ಅಬ್ದುಲ್ ಬಸಿತ್ ಎಡವಟ್ಟು ಮಾಡಿದ್ದು, ಕಾಶ್ಮೀರದಲ್ಲಿ ಪೆಲೆಟ್ ಗನ್‍ನಿಂದ ದಾಳಿಗೊಳಗಾದ ವ್ಯಕ್ತಿ ಎಂದು ಜಾನಿ ಸಿನ್ಸ್ ಫೋಟೋವನ್ನು ತಪ್ಪಾಗಿ ರಿಟ್ವೀಟ್ ಮಾಡಿದ್ದಾರೆ ಎಂದು ಸ್ಕ್ರೀನ್ ಶಾಟ್‍ಗಳನ್ನು ಹಂಚಿಕೊಂಡಿದ್ದರು.

    ನೈಲಾ ಇನಾಯತ್ ಅವರ ಟ್ವಿಟ್ಟರ್ ಸ್ಕ್ರೀನ್ ಶಾಟ್‍ಗಳಲ್ಲಿ, ಅಬ್ದುಲ್ ಬಸಿತ್ ಚಿತ್ರ ಹಾಗೂ ಸಂದೇಶದೊಂದಿಗೆ ರಿಟ್ವೀಟ್ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅಲ್ಲದೆ, ಈ ಟ್ವೀಟ್‍ನಲ್ಲಿ ಅನಂತ್‍ನಾಗ್‍ನ ಯೂಸುಫ್ ಪೆಲೆಟ್ ಗನ್ ದಾಳಿಯಿಂದ ತನ್ನ ದೃಷ್ಟಿ ಕಳೆದುಕೊಂಡಿದ್ದಾನೆ. ಈ ಕುರಿತು ದಯವಿಟ್ಟು ಧ್ವನಿ ಎತ್ತಿ ಎಂಬ ಸಂದೇಶವನ್ನು ಟ್ವಿಟ್ಟರ್ ನಲ್ಲಿ ನೀಡಲಾಗಿತ್ತು.

    ತನ್ನ ಎಡವಟ್ಟು ತಿಳಿಯುತ್ತಿದ್ದಂತೆ ಅಬ್ದುಲ್ ಬಸಿತ್ ಈ ಟ್ವೀಟ್‍ನ್ನು ಡಿಲೀಟ್ ಮಾಡಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ನೆಟ್ಟಿಗರು ಬಸಿತ್ ಅವರಿಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡು ಛೀಮಾರಿ ಹಾಕುತ್ತಿದ್ದರು.