Tag: ಅಬಕಾರಿ ಸಚಿವ

  • ಎಲ್ಲರಿಗೂ ಎಣ್ಣೆ ಕುಡಿಸಲು ನಾನು ಮಂತ್ರಿ ಆಗ್ಬೇಕಾ: ಎಂಟಿಬಿ ಪ್ರಶ್ನೆ

    ಎಲ್ಲರಿಗೂ ಎಣ್ಣೆ ಕುಡಿಸಲು ನಾನು ಮಂತ್ರಿ ಆಗ್ಬೇಕಾ: ಎಂಟಿಬಿ ಪ್ರಶ್ನೆ

    ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆಯಾದ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದೆ. ಎಂಟಿಬಿ ನಾಗರಾಜ್ ಅವರಿಗೆ ಅಬಕಾರಿ ಇಲಾಖೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಸಚಿವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

    ಈ ಸಂಬಂಧ ರೇಸ್ ಕೋರ್ಸ್ ರಸ್ತೆಯ ಅಪಾರ್ಟ್ ಮೆಂಟ್‍ನಲ್ಲಿ ಅಸಮಾಧಾನ ಇರುವವರ ಜೊತೆ ಸಭೆ ಸಚಿವ ಆರ್ ಅಶೋಕ್ ಸಭೆ ನಡೆಸಿದ್ದಾರೆ. ಈ ವೇಳೆ ಎಂಟಿಬಿ ಅವರು ಎಲ್ಲರಿಗೂ ಎಣ್ಣೆ ಕುಡಿಸಲು ನಾನು ಮಂತ್ರಿ ಆಗಬೇಕಾ ಎಂದು ಪ್ರಶ್ನಿಸುವ ಮೂಲಕ ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡಲು ಇಷ್ಟವಿಲ್ಲ ಎಂಬುದನ್ನು ಬಹಿರಂಗವಾಗಿ ಹೇಳಿದ್ದಾರೆ.

    ಅಯ್ಯೋ. ನಾನು ಎಲ್ಲರಿಗೂ ಎಣ್ಣೆ ಕುಡಿಸೋ ಮಂತ್ರಿ ಆಗ್ಬೇಕಾ. ಎಲ್ಲರಿಗೂ ಕುಡಿಸೋದಕ್ಕೆ ನಾನು ಮಂತ್ರಿ ಸ್ಥಾನ ತ್ಯಾಗ ಮಾಡಬೇಕಿತ್ತಾ. ನನಗೆ ಆದಾಯ ಬರೋದು ಏನೂ ಬೇಕಿಲ್ಲ, ಎಣ್ಣೆ ಮಿನಿಸ್ಟರ್ ಆಗಲ್ಲ. ಅದರಿಂದ ನಮ್ಮ ಕುಟುಂಬ ಬೆಳೆಯೋದು ಬೇಡ. ನನ್ನ ಹತ್ರವೇ ಆದಾಯ ಬೇಕಾದಷ್ಟು ಇದೆ, ನನಗೆ ಎಣ್ಣೆ ಮಿನಿಸ್ಟರ್ ಬೇಡ. ಎಲ್ಲರಿಗೂ ಕುಡಿಸುವ ಪಾಪ ನಂಗೆ ಬೇಡಣ್ಣ ಎಂದು ಆರ್.ಅಶೋಕ್ ಎದುರು ಎಂಟಿಬಿ ನಾಗರಾಜ್ ಅಳಲು ತೋಡಿಕೊಂಡಿದ್ದಾರೆ.

    ನನಗೆ ಅಬಕಾರಿ ಖಾತೆ ಇಷ್ಟವೇ ಇಲ್ಲ. ಅಬಕಾರಿ ತಗೊಂಡು ಏನ್ ಕೆಲಸ ಮಾಡೋದಿದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಕೆಲಸವಿಲ್ಲದ ಖಾತೆಯನ್ನು ನನಗೆ ಕೊಟ್ಟಿದ್ದಾರೆ. ವಸತಿ ಖಾತೆಗೆ ರಾಜೀನಾಮೆ ಕೊಟ್ಟು ಬಂದಿದ್ದೆ. ಈಗ ಕೆಲಸವಿಲ್ಲದ ಖಾತೆ ತಗೊಂಡು ಏನ್ ಮಾಡ್ಲಿ ಎಂದು ಕಿಡಿಕಾರಿದ್ದಾರೆ.

  • ಶೀಘ್ರದಲ್ಲಿ ಬಾರ್, ಕ್ಲಬ್, ಪಬ್ ಓಪನ್ ಸಾಧ್ಯತೆ: ಎಚ್.ನಾಗೇಶ್

    ಶೀಘ್ರದಲ್ಲಿ ಬಾರ್, ಕ್ಲಬ್, ಪಬ್ ಓಪನ್ ಸಾಧ್ಯತೆ: ಎಚ್.ನಾಗೇಶ್

    ಬೆಂಗಳೂರು: ಶೀಘ್ರದಲ್ಲಿ ಬಾರ್, ಕ್ಲಬ್ ಮತ್ತು ಪಬ್ ಓಪನ್ ಆಗುವ ಸಾಧ್ಯತೆ ಇದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.

    ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಮಾತನಾಡಿದ ಎಚ್.ನಾಗೇಶ್, ಶೀಘ್ರದಲ್ಲಿ ಬಾರ್, ಕ್ಲಬ್ ಮತ್ತು ಪಬ್ ಓಪನ್ ಆಗುವ ಸಾಧ್ಯತೆ ಇದೆ. ಈ ವಿಚಾರದಲ್ಲಿ ಸಿಎಂ ಜೊತೆಗೆ ನಾನು ಚರ್ಚೆ ನಡೆಸುವೆ. ಬಾರ್ ಮತ್ತು ಪಬ್ ಕಾರ್ಮಿಕರಿಗೆ ತೊಂದರೆಯಾಗಿದೆ. ಕ್ಲಬ್‍ಗಳಲ್ಲಿ ಸ್ಪೋರ್ಟ್ಸ್ ಚಟುವಟಿಕೆಯನ್ನು ಇಂದಿನಿಂದ ಆರಂಭವಾಗಿದೆ. ಅಲ್ಲಿ ಪಾರ್ಸಲ್‍ಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದರು.

    ಅಬಕಾರಿ ಇಲಾಖೆಗೆ ಲಾಕ್‍ಡೌನ್‍ನಿಂದ 3,000 ಕೋಟಿ ನಷ್ಟವಾಗಿತ್ತು. ಈಗ ಅದು 2,000 ಕೋಟಿಗೆ ಬಂದು ನಿಂತಿದೆ. ಮುಂದಿನ 8 ತಿಂಗಳಲ್ಲಿ ನಷ್ಟವನ್ನ ಸರಿದೂಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಬಾರ್, ಕ್ಲಬ್ ಓಪನ್ ಆದರೆ ವ್ಯಾಪಾರ ಆಗಬಹುದು. ಆಗ ಲಾಕ್‍ಡೌನ್‍ನಲ್ಲಿ ಉಂಟಾದ ನಷ್ಟವನ್ನು ಭರಿಸಬಹುದು. ಹೀಗಾಗಿ ನಮ್ಮ ಇಲಾಖೆಯ ಅಧಿಕಾರಿಗಳು ಚರ್ಚೆ ಮಾಡುತ್ತಿದ್ದೇವೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.

    ಮನೆ ಮನೆಗೆ ಮಧ್ಯ ಸರಬರಾಜು ವಿಚಾರವಾಗಿ ಮಾತನಾಡಿದ ಅವರು, ಬೇರೆ ರಾಜ್ಯದ ಅನಿಸಿಕೆ, ಅಭಿಪ್ರಾಯ ಪಡೆದು ಮುಂದಿನ ಕ್ರಮದ ಚಿಂತನೆ ಮಾಡುತ್ತೀವೆ ಎಂದರು.

    ಅಕ್ರಮವಾಗಿ ಮನೆ, ಅಂಗಡಿಗಳಲ್ಲಿ ಮಧ್ಯ ಮಾರಾಟ ಮಾಡುತ್ತಿರುವವವ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಈ ಕುರಿತು ತನಿಖೆ ನಡೆಯುತ್ತಿದೆ. ಒಂದು ವೇಳೆ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದರೆ ನಿರ್ದಾಕ್ಷಿಣ್ಯವಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು

  • ಅಬಕಾರಿ ಸಚಿವ ನಾಗೇಶ್ ತವರು ಜಿಲ್ಲೆಯಲ್ಲಿ ಮದ್ಯ ಮಾರಾಟ ಹೆಚ್ಚಳ

    ಅಬಕಾರಿ ಸಚಿವ ನಾಗೇಶ್ ತವರು ಜಿಲ್ಲೆಯಲ್ಲಿ ಮದ್ಯ ಮಾರಾಟ ಹೆಚ್ಚಳ

    – ಲಾಕ್‍ಡೌನ್ ವೇಳೆ ರಾಜ್ಯದಲ್ಲೇ ಅತಿ ಹೆಚ್ಚು ಅಕ್ರಮ ಮದ್ಯ ಮಾರಾಟ

    ಕೋಲಾರ: ಜಿಲ್ಲೆಯಲ್ಲಿ ಶಾಶ್ವತ ಕುಡಿಯೋ ನೀರಿಗೂ ಬರ ಇದೆ. ಆದರೆ ಕೊರೊನಾ ಸಂಕಷ್ಟದ ಮಧ್ಯೆ ಮದ್ಯ ಮಾರಾಟಕ್ಕೆ ಬರವಿಲ್ಲ ಅನ್ನೋ ಅಂಶವೊಂದು ಬಯಲಾಗಿದೆ. ಲಾಕ್‍ಡೌನ್ ಬಳಿಕ ಶೇ. 54 ರಷ್ಟು ಮದ್ಯ ಮಾರಾಟ ಹೆಚ್ಚಾಗಿದ್ದು, ರಾಜ್ಯದಲ್ಲೆ ಎಣ್ಣೆ ಸಚಿವರ ತವರು ಜಿಲ್ಲೆ ಅಕ್ರಮ ಮದ್ಯ ಮಾರಾಟದಲ್ಲಿ 1 ನೇ ಸ್ಥಾನ ಪಡೆದಿದೆ.

    ಕೋಲಾರ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಗೆ ಹೊಂದಿಕೊಂಡಿರುವ ಗಡಿ ಜಿಲ್ಲೆ, ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ನೀರಿಗೆ ಇಲ್ಲಿ ಬರವಿದೆ. ಆದರೆ ಅಬಕಾರಿ ಸಚಿವ ಹೆಚ್.ನಾಗೇಶ್ ತಮ್ಮ ಒಂದು ವರ್ಷದ ಅವಧಿಯಲ್ಲೆ ತನ್ನ ತವರು ಜಿಲ್ಲೆಯಲ್ಲಿ ಮದ್ಯ ಮಾರಾಟ ಹೆಚ್ಚು ಮಾಡುವ ಮೂಲಕ ವಿನೂತನ ರೀತಿಯ ಸಾಧನೆ ಮಾಡಿದ್ದಾರೆ.

    ಹೌದು. ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಕೋಲಾರ ಜಿಲ್ಲೆಯಲ್ಲಿ ಶೇ. 54 ರಷ್ಟು ಮದ್ಯ ಮಾರಾಟ ಹೆಚ್ಚಾಗಿದೆ. ಕಳೆದ ಜುಲೈ ತಿಂಗಳಿಗೂ 2020 ರ ಜುಲೈ ತಿಂಗಳಲ್ಲಿ 66 ಸಾವಿರ ಮದ್ಯದ ಬಾಕ್ಸ್ ಗಳು ಹೆಚ್ಚಾಗಿ ಮಾರಾಟವಾಗಿದೆ ಅನ್ನೋ ಅಂಶ ಬೆಳಕಿಗೆ ಬಂದಿದೆ. ಇದಕ್ಕೆ ಆಂಧ್ರಪ್ರದೇಶದಲ್ಲಿ ಮದ್ಯದಂಗಡಿಗಳ ಸಂಖ್ಯೆ ಕಡಿಮೆ ಮಾಡುತ್ತಿರುವುದು ಹಾಗೂ ರಾಜ್ಯದ ಮದ್ಯಕ್ಕೆ ಹೆಚ್ಚಿನ ಬೇಡಿಕೆ ಇರುವುದೇ ಮದ್ಯ ಮಾರಾಟ ಹೆಚ್ಚಾಗುವುದಕ್ಕೆ ಕಾರಣ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆಂಧ್ರ ಹಾಗೂ ತಮಿಳುನಾಡು ಗಡಿಗಳಲ್ಲಿ ಹೆಚ್ಚಾಗಿ ಮದ್ಯದಂಗಡಿಗಳು ತಲೆ ಎತ್ತಿದ್ದು, ನೆರೆಯ ಮದ್ಯ ಪ್ರಿಯರನ್ನ ಆಕರ್ಷಿಸುತ್ತಿರುವುದೇ ಮತ್ತೊಂದು ಕಾರಣ.

    ನೆರೆಯ ಆಂಧ್ರ ಹಾಗೂ ತಮಿಳುನಾಡು ರಾಜ್ಯದ ಬಾರ್‍ಗಳು ಗಡಿಯಿಂದ ದೂರಕ್ಕೆ ಇದ್ದು, ಮದ್ಯ ಪ್ರಿಯರು ಹೋಗಿ ಬರಲು ಕಷ್ಟ. ರಾಜ್ಯದ ಮದ್ಯ ಕ್ವಾಲಿಟಿ ಹಾಗೂ ಕ್ವಾಂಟಿಟಿಗೆ ಮೂರು ರಾಜ್ಯದ ಮದ್ಯಪ್ರಿಯರು ಮನಸೋತಿದ್ದಾರೆ. ಪರಿಣಾಮ ಲಾಕ್‍ಡೌನ್ ವೇಳೆ ಲಕ್ಷಾಂತರ ರೂಪಾಯಿ ಅಕ್ರಮವಾಗಿ ಮಾರಾಟ ಕೂಡ ನಡೆದಿದೆ. ಲಾಕ್‍ಡೌನ್ ವೇಳೆ ಮದ್ಯ ನಿಷೇಧ ಮಾಡಿದ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆದಿತ್ತು. ಹಾಗಾಗಿ ಲಾಕ್ ಡೌನ್ ಅವಧಿಯಲ್ಲಿ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಮದ್ಯವನ್ನ ಅಬಕಾರಿ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

    ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 2075 ಲೀ ಮದ್ಯ, 989 ಲೀ ಬಿಯರ್, 120 ಲೀ ವೈನ್, 111 ಲೀ ಸೇಂಧಿ, 75 ಲೀ ಕಳ್ಳ ಭಟ್ಟಿ, 462 ಲೀ ಬೆಲ್ಲದ ಕೊಳೆ ಹಾಗೂ ಅರೋಪಿಗಳಿಂದ 16 ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ. ಅದರಲ್ಲೂ ರಾಜ್ಯದಲ್ಲೆ ಜಿಲ್ಲೆಯಲ್ಲಿ ಅತಿ ಹೆಚ್ಚು ಅಕ್ರಮ ಮದ್ಯ ಮಾರಾಟ ಪ್ರಕರಣಗಳು ದಾಖಲಾಗಿವೆ ಅನ್ನೋದು ಮತ್ತೊಂದು ವಿಶೇಷ.

    ಅಬಕಾರಿ ಸಚಿವ ನಾಗೇಶ್ ಕಳೆದ ಒಂದು ವರ್ಷದಲ್ಲಿ ಜಿಲ್ಲೆಗೆ ಯಾವುದೇ ಉಪಯೋಗವಾಗುವ ಸಾಧನೆ ಮಾಡಿಲ್ಲವಾದ್ರು, ಜಿಲ್ಲೆಯಲ್ಲಿ ಮದ್ಯ ಮಾರಾಟ ಹೆಚ್ಚು ಮಾಡಿದ್ದು ವಿಶೇಷ ಸಾಧನೆ ಅಂದರೆ ತಪ್ಪಲ್ಲ. ಇನ್ನಾದ್ರೂ ಜಿಲ್ಲೆಯ ಸಮಗ್ರ ಅಭಿವೃದ್ದಿ ಕಡೆ ಗಮನ ಹರಸಿ, ಸರ್ಕಾರಕ್ಕೆ ಒಳ್ಳೆಯ ಹೆಸರು ಸಿಗಲಿ ಅನ್ನೋದೆ ಎಲ್ಲರ ಆಶಯ.

  • ಮದ್ಯಪ್ರಿಯರಿಗೆ ಮತ್ತೊಂದು ಗುಡ್‍ನ್ಯೂಸ್- ನಾಳೆಯಿಂದ ಬಾರ್, ಕ್ಲಬ್‍ಗಳಲ್ಲೂ ಸಿಗುತ್ತೆ ಎಣ್ಣೆ

    ಮದ್ಯಪ್ರಿಯರಿಗೆ ಮತ್ತೊಂದು ಗುಡ್‍ನ್ಯೂಸ್- ನಾಳೆಯಿಂದ ಬಾರ್, ಕ್ಲಬ್‍ಗಳಲ್ಲೂ ಸಿಗುತ್ತೆ ಎಣ್ಣೆ

    – ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಖರೀದಿಗೆ ಅವಕಾಶ
    – ಎಂಆರ್‌ಪಿ ಬೆಲೆಗಿಂತ ಹೆಚ್ಚಿಗೆ ಮಾರಾಟ ಮಾಡಿದ್ರೆ ಲೈಸನ್ಸ್ ರದ್ದು

    ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ಸುಮಾರು ಒಂದೂವರೆ ತಿಂಗಳ ನಂತರ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ಸರ್ಕಾರ ಮದ್ಯಪ್ರಿಯರಿಗೆ ಸಿಹಿ ಸುದ್ದಿ ನೀಡಿತ್ತು. ಇದೀಗ ಬಾರ್, ಕ್ಲಬ್‍ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ಮತ್ತೆ ಎಣ್ಣೆಪ್ರಿಯರಿಗೆ ಸರ್ಕಾರ ಗುಡ್‍ನ್ಯೂಸ್ ನೀಡಿದೆ.

    ಈ ಕುರಿತು ಅಬಕಾರಿ ಸಚಿವ ನಾಗೇಶ್ ಸುದ್ದಿಗೋಷ್ಠಿ ನಡೆಸಿದ್ದು, ಐದನೇ ದಿನಕ್ಕೆ 122.16 ಕೋಟಿ ತೆರಿಗೆ ಸಂಗ್ರಹ ಆಗಿದೆ. ಯಾಕೆಂದರೆ ಇಂದಿನಿಂದ ತೆರಿಗೆ ಅಧಿಕವಾಗಿದ್ದರಿಂದ ಆದಾಯವೂ ಹೆಚ್ಚಾಗಿದೆ. ಈ ಮೂಲಕ ಸರ್ಕಾರಕ್ಕೆ ಒಟ್ಟು 767 ಕೋಟಿ ಆದಾಯ ಬಂದಿದೆ. ಗಡಿಭಾಗದಲ್ಲಿ ಆಧಾರ್ ಪರೀಕ್ಷಿಸಿ ಮದ್ಯ ನೀಡಲು ಸೂಚನೆ ನೀಡಿದ್ದೆ. ಲಾಕ್‍ಡೌನ್ ಬಳಿಕ ಮದ್ಯದ ಅಂಗಡಿ ಓಪನ್ ಆದ ಬಳಿಕ ಮೊದಲು ನೂಕುನುಗ್ಗಲು ಉಂಟಾಗಿತ್ತು ಎಂದರು.

    ನಾಳೆಯಿಂದ ಲಾಡ್ಜ್, ಬಾರ್, ಕ್ಲಬ್‍ಗಳಲ್ಲಿ ಮದ್ಯ ಮಾರಾಟ ಮಾಡಬಹುದು. ಬಾರ್ ಆ್ಯಂಡ್ ರೆಸ್ಟೋರೆಂಟ್, ಕ್ಲಬ್, ಮಾಲೀಕರು ನಮ್ಮಲ್ಲಿರುವ ಸ್ಟಾಕನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಸಿಎಂ ಜೊತೆ ಮಾತನಾಡಿದ್ದೆ. ಹೀಗಾಗಿ ಇಂದು ಸಂಜೆಯಿಂದ ಅಥವಾ ನಾಳೆಯಿಂದ ಅವುಗಳು ಓಪನ್ ಆಗುತ್ತವೆ. ಬಾರ್, ಕ್ಲಬ್ ಮತ್ತು ಲಾಡ್ಜ್ ಗಳಲ್ಲೂ ಪಾರ್ಸಲ್‍ಗೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಿಎಂ ಯಡಿಯೂರಪ್ಪ ಅನುಮತಿ ನೀಡಿದ್ದಾರೆ ಎಂದು ಹೇಳಿದರು.

    ಬಾರ್ ಆ್ಯಂಡ್ ರೆಸ್ಟೋರೆಂಟ್, ಕ್ಲಬ್, ಸಿಎಲ್7, ಸಿಎಲ್4, ಸಿಎಲ್‍ವೈನ್ ಈ ಲೈಸನ್ಸ್ ಇರುವವರು ಓಪನ್ ಮಾಡಬಹುದು. ಎಂಆರ್‌ಪಿ ಬೆಲೆಗೆ ಮಾತ್ರ ಮಾರಾಟ ಮಾಡಬೇಕು. ಎಂಆರ್‌ಪಿ ಬೆಲೆಗಿಂತ ಹೆಚ್ಚಿಗೆ ಮಾರಾಟ ಮಾಡಿದರೆ ಲೈಸನ್ಸ್ ರದ್ದು ಮಾಡಲಾಗುತ್ತಿದೆ. ಇದರ ಜವಾಬ್ದಾರಿ ಮಾಲೀಕರ ಮೇಲಿರುತ್ತದೆ. ಖರೀದಿ ಸಮಯ ಬೆಳಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ಮಾತ್ರ ಇರುತ್ತದೆ.

    ಸುಪ್ರೀಂಕೋರ್ಟ್ ನೀಡಿದ ಆದೇಶ ನೋಡಿಲ್ಲ. ಆನ್‍ಲೈನ್ ಮಾರಾಟಕ್ಕೆ ಅವಕಾಶ ನೀಡಿದರೆ ತಪ್ಪಿಲ್ಲ. ಮೊದಲಿಂದಲೂ ಆ ಬಗ್ಗೆ ಚರ್ಚೆ ಇತ್ತು. ಪ್ರತಿವರ್ಷ ಅಬಕಾರಿ ಆದಾಯ ಸರ್ಕಾರಕ್ಕೆ 25 ಸಾವಿರ ಕೋಟಿ ಬರಲಿದೆ. ಈ ವರ್ಷ 2,500 ಕೋಟಿ ಹೆಚ್ಚಾಗಲಿದೆ ಎಂದರು.

  • ಅಬಕಾರಿ ಸಚಿವರ ಜಿಲ್ಲೆಯಲ್ಲೇ ಅಕ್ರಮ ಮದ್ಯ ಮಾರಾಟ

    ಅಬಕಾರಿ ಸಚಿವರ ಜಿಲ್ಲೆಯಲ್ಲೇ ಅಕ್ರಮ ಮದ್ಯ ಮಾರಾಟ

    – ಓಟಿ ಕ್ವಾಟರ್ ಗೆ 800 ರೂ, ಬಿಯರ್ 1 ಸಾವಿರ ರೂ.

    ಕೋಲಾರ: ಅಬಕಾರಿ ಸಚಿವ ಎಚ್.ನಾಗೇಶ್ ಜಿಲ್ಲೆಯಲ್ಲೇ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಸಾಮಾನ್ಯ ದರಕ್ಕಿಂತ ಹತ್ತು ಪಟ್ಟು ಹೆಚ್ಚಳ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

    ಕೋಲಾರ ಹೊರವಲಯದ ಟಮಕದ ಕಾಲೋನಿಯಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಜಿಲ್ಲೆಯ ಬಹುತೇಕ ಬಾರ್‍ಗಳಲ್ಲಿ ಮದ್ಯ ಖಾಲಿಯಾಗಿದ್ದು, ಕೆಲವೇ ಬಾರ್‍ಗಳಲ್ಲಿ ಸ್ಟಾಕ್ ಇದೆ. ಬಾಗಿಲು ಕ್ಲೋಸ್ ಮಾಡಿ ಹಿಂದೆ ಬಾಗಿಲು ತೆರೆದು ಬಾರ್ ಮಾಲೀಕರು ಮಾರಾಟ ಮಾಡಲಾಗುತ್ತಿದೆ. ಹತ್ತು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು, ಜಿಲ್ಲೆಯಾದ್ಯಂತ ಅಕ್ರಮವಾಗಿ ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.

    ಐ ವೋಲ್ಟ್ಸ್ ಕ್ವಾಟರ್ ಗೆ 70 ರೂ. ಬೆಲೆಯ ಇದೆ. ಆದರೆ 650 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಓಟಿ ಕ್ವಾಟರ್ ಗೆ 85 ರೂ., ಇದೀಗ 800 ರೂ.ಗೆ ಮಾರಾಟ. ಬಿಯರ್ 130 ರೂಪಾಯಿ ಇದ್ದಿದ್ದನ್ನು 1000 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಕುಡುಕರು ವಿಧಿ ಇಲ್ಲದೆ ಅಧಿಕ ಬೆಲೆಕೊಟ್ಟು ಕುಡಿಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಲಾಕ್‍ಡೌನ್ ವೇಳೆ ಎಂಎಸ್ ಐಎಲ್ ಬಾರ್ ಗಳನ್ನು ತೆರೆಯುವಂತೆ ಕುಡುಕರ ಪಟ್ಟು ಹಿಡಿದಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

  • ಬೆಂಗ್ಳೂರಿನಲ್ಲಿ ನೀರಾ ಮಾರಾಟದ ಮಾಹಿತಿಯೇ ನನಗಿಲ್ಲ- ಎಚ್.ನಾಗೇಶ್

    ಬೆಂಗ್ಳೂರಿನಲ್ಲಿ ನೀರಾ ಮಾರಾಟದ ಮಾಹಿತಿಯೇ ನನಗಿಲ್ಲ- ಎಚ್.ನಾಗೇಶ್

    ಉಡುಪಿ: ಬೆಂಗಳೂರಿನಲ್ಲಿ ಹತ್ತಕ್ಕೂ ಹಚ್ಚು ಪ್ರದೇಶಗಳಲ್ಲಿ ನೀರಾ ಬಾರ್‌ಗಳಿಗೆ ಅಬಕಾರಿ ಇಲಾಖೆ ಅಧಿಕಾರಿಗಳು ಅನುಮತಿ ನೀಡಿದ್ದು ಅಬಕಾರಿ ಸಚಿವ ಎಚ್.ನಾಗೇಶ್ ಅವರಿಗೆ ಈ ಮಾಹಿತಿಯೇ ಗೊತ್ತಿಲ್ವಂತೆ.

    ರಾಜಧಾನಿಯ ನೀರಾ ಬಾರ್ ಬಗ್ಗೆ ಶನಿವಾರ ಉಡುಪಿಯಲ್ಲಿ ಪ್ರಶ್ನಿಸುತ್ತಿದ್ದಂತೆ ಅಬಕಾರಿ ಸಚಿವ ನಾಗೇಶ್ ಅವರು ಅಚ್ಚರಿಗೊಂಡರು. ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಅಧಿಕಾರಿಗಳು ಅನುಮತಿ ನೀಡಿರಬೇಕು. ಬೆಂಗಳೂರು ತಲುಪಿದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸುತ್ತೇನೆ ಎಂದರು.

    ತೆಂಗು ಬೆಳೆಗಾರರಿಗೆ ಉತ್ತೇಜನ ನೀಡಬೇಕು ಎಂಬ ನಿಟ್ಟಿನಲ್ಲಿ ರಾಜಧಾನಿಯ ಹತ್ತಕ್ಕೂ ಅಧಿಕ ಕಡೆಗಳಲ್ಲಿ ನೀರಾ ಬಾರ್ ತೆರೆಯಲು ಇಲಾಖೆ ಅನುಮತಿ ನೀಡಿದ್ದಾರೆ. ಆದರೆ ಇಲಾಖೆಯ ಈ ಬಗ್ಗೆ ಬೆಂಗಳೂರಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ಪಡೆದು ಮಾಧ್ಯಮಗಳಿಗೆ ಬೆಂಗಳೂರಿನಲ್ಲೇ ನನ್ನ ಅಭಿಪ್ರಾಯ ತಿಳಿಸುತ್ತೇನೆ ಎಂದರು.

    ಸಚಿವರಿಗೆ ಮಾಹಿತಿಯೇ ನೀಡದೆ ಅಧಿಕಾರಿಗಳು ಪರವಾನಿಗೆ ಕೊಟ್ರಾ? ರೈತರನ್ನು ಮುಂದಿಟ್ಟು ರಾಜಧಾನಿಯ ನಾಗರೀಕರಿಗೆ ನನೀರಾ ಕುಡಿಸಲು ಹೊರಟ್ರಾ ಎಂಬೂದು ಸದ್ಯ ಇರುವ ಪ್ರಶ್ನೆ.

  • ಎಡವಟ್ಟು `ಎಣ್ಣೆ’ ಸಚಿವರಿಗೆ ಮಹಿಳೆಯರಿಂದ ಸ್ಪೆಷಲ್ ಗಿಫ್ಟ್ ರವಾನೆ

    ಎಡವಟ್ಟು `ಎಣ್ಣೆ’ ಸಚಿವರಿಗೆ ಮಹಿಳೆಯರಿಂದ ಸ್ಪೆಷಲ್ ಗಿಫ್ಟ್ ರವಾನೆ

    ಬೆಂಗಳೂರು: ಮನೆ ಮನೆಗೆ ಎಣ್ಣೆ ಪಾರ್ಸೆಲ್ ಮಾಡುವ ಚಿಂತನೆ ನಡೆಸಲಾಗಿದೆ ಎಂದು ಹೇಳಿ ಇಂದು ಸರ್ಕಾರದ ಮುಂದೆ ಆ ಪ್ರಸ್ತಾಪವೇ ಇಲ್ಲ ಎಂದ ಅಬಕಾರಿ ಸಚಿವ ಎಚ್ ನಾಗೇಶ್ ವಿರುದ್ಧ ಮಹಿಳೆಯರು ಕಿಡಿಕಾರಿದ್ದಾರೆ.

    ಮನೆಯಲ್ಲಿ ಕುಡ್ಕೊಂಡು ಇರಿ. ಮಿನಿಸ್ಟರ್ ಆಗೋಕೆ ತಾವು ಲಾಯಕ್ಕಲ್ಲ ಎಂದು ಕುರುಬರಹಳ್ಳಿ ಮಹಿಳಾ ಸಂಘಟನೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಬಕಾರಿ ಟಾರ್ಗೆಟ್ ಹೆಚ್ಚಳ ಮಾಡಿ ಪರೋಕ್ಷವಾಗಿ ಜನರನ್ನು ಮದ್ಯ ವ್ಯಸನಿಯನ್ನಾಗಿ ಮಾಡಲು ಸಚಿವ ನಾಗೇಶ್ ರೆಡಿಯಾಗಿದ್ದಾರೆ ಎಂದು ಸಿಟ್ಟಿಗೆದ್ದ ಮಹಿಳೆಯರು ಎಣ್ಣೆ ಬಾಟಲಿ ಪಾರ್ಸೆಲ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಮದ್ಯಪಾನ ಮುಕ್ತ ಕರ್ನಾಟಕದ ಕನಸು ನಾವು ಕಾಣುತ್ತಿದ್ದರೆ ಸಚಿವರು ಬಾಯಿಗೆ ಬಂದ ಹಾಗೆ ಮಾತಾನಾಡುತ್ತಿದ್ದಾರೆ. ಇವರ ಪತ್ನಿಯಾದರೂ ಕೊಂಚ ಬುದ್ಧಿ ಹೇಳಲಿ ಎಂದು ಸಂಘಟನಾ ಸದಸ್ಯರು ಕಿಡಿಕಾರಿದ್ದಾರೆ.

    ಮದ್ಯಪಾನ ನಿಷೇಧ ಮಾಡಬೇಕು ಎಂದು ಮಹಿಳೆಯರು ಹಾಗೂ ಕೆಲ ಸ್ವಾಮೀಜಿಗಳು ಒತ್ತಾಯ ಮಾಡುತ್ತಿದ್ದಾರೆ. ಅವರು ಒಳ್ಳೆಯ ದೃಷ್ಟಿಯಿಂದಲೇ ಹೇಳುತ್ತಾರೆ. ಆದರೆ ನಮ್ಮ ರಾಜ್ಯಕ್ಕೆ ಒಳ್ಳೆಯದಾಗಬೇಕಲ್ವ ಎಂದು ಸಚಿವರು ಪ್ರಶ್ನಿಸಿದ್ದರು. ಅಲ್ಲದೆ ಯಾರೋ ಕೆಲವು ಮಹಿಳೆಯರು ಹೇಳಿದ್ದಾರೆ ಎಂದು ಮದ್ಯ ನಿಷೇಧ ಮಾಡಲು ಸಾಧ್ಯವಿಲ್ಲ ಎಂದೂ ಹೇಳಿಕೆ ನೀಡಿದ್ದರು. ಸಚಿವರ ಈ ಹೇಳಿಕೆಯನ್ನು ಮಹಿಳಾ ಹೋರಾಟಗಾರ್ತಿಯರು ಖಂಡಿಸಿದ್ದಾರೆ.

    ಬುಧವಾರ ಸುದ್ದಿಗೋಷ್ಠಿ ನಡೆಸಿದ್ದ ಸಚಿವರು, ಮನೆ ಮನೆಗೆ ಮದ್ಯ ಪಾರ್ಸೆಲ್ ಮಾಡುವ ಚಿಂತನೆಯನ್ನು ಸರ್ಕಾರ ನಡೆಸಿದೆ ಎಂದು ತಿಳಿಸಿದ್ದರು. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಎಚ್ಚೆತ್ತ ಅಬಕಾರಿ ಸಚಿವರು ಇಂದು ಮತ್ತೆ ಸುದ್ದಿಗೋಷ್ಠಿ ಕರೆದು ಬಾಯಿ ತಪ್ಪಿನಿಂದ ಹಾಗೆ ಆಗಿದೆ. ಮನೆ ಮನೆಗೆ ಮದ್ಯ ಪೂರೈಕೆ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಹೇಳಿದ್ದಾರೆ.

  • ಮನೆ ಮನೆಗೆ `ಎಣ್ಣೆ’ – ಮಹಿಳೆಯರ ಕ್ಷಮೆ ಕೋರಿದ ನಾಗೇಶ್

    ಮನೆ ಮನೆಗೆ `ಎಣ್ಣೆ’ – ಮಹಿಳೆಯರ ಕ್ಷಮೆ ಕೋರಿದ ನಾಗೇಶ್

    ಬೆಂಗಳೂರು: ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡುವ ವಿಚಾರದ ಕುರಿತು ಅಬಕಾರಿ ಸಚಿವ ನಾಗೇಶ್ ಅವರು ಇದೀಗ ಮಹಿಳೆಯ ಬಳಿ ಕ್ಷಮೆ ಕೋರಿದ್ದಾರೆ.

    ಈ ಸಂಬಂಧ ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮನೆಮನೆಗೆ ಮದ್ಯಪಾನ ಪೂರೈಕೆ ನಿರ್ಧಾರವನ್ನು ಸರ್ಕಾರ ಕೈ ಬಿಟ್ಟಿದೆ. ಸರ್ಕಾರ ಯಾವುದೇ ಆದೇಶ ಹೊರಡಿಸಿರಲಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಿನ್ನೆ ಕೊಟ್ಟಂತಹ ಹೇಳಿಕೆಯನ್ನು ವಾಪಸ್ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ನಿನ್ನೆ ಸಭೆಯ ವೇಳೆ ಮಾತನಾಡುವಾಗ ತಪ್ಪಾಗಿದೆ. ಆದರೆ ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ. ಮದ್ಯ ಪೂರೈಕೆ ವಿಚಾರದಿಂದ ಮಹಿಳೆಯರಿಗೆ ಬೇಸರವಾಗಿದ್ದು, ಅವರ ಬಳಿ ಕ್ಷಮೆಯಾಚಿಸುವುದಾಗಿ ತಿಳಿಸಿದರು.

    ಮನೆ ಮನೆಗೆ ಮದ್ಯ ಅನ್ನೋ ಪರಿಕಲ್ಪನೆಯೇ ಇಲ್ಲ. ನಿನ್ನೆ ಸಭೆಯಲ್ಲಿ ಹಿಂದೆ ಗುಜರಾತ್ ಮತ್ತು ಬೇರೆ ಕಡೆಗಳಲ್ಲಿ ಇತ್ತು ಎಂಬ ವಿಚಾರವನ್ನು ಮಾತ್ರ ಪ್ರಸ್ತಾಪ ಮಾಡಿದ್ದೆ. ಮತ್ತು ಮಾತನಾಡಿದ ಸಂದರ್ಭದಲ್ಲಿ ಮಿಸ್ಟೇಕ್ ಆಗಿದೆ. ಒಂದು ವೇಳೆ ಇಂತಹ ನೀತಿ ಬಂದರೆ ಹೆಣ್ಣುಮಕ್ಕಳಿಗೆ ಕಷ್ಟವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಬುಧವಾರ ಸುದ್ದಿಗೋಷ್ಠಿ ನಡೆಸಿದ್ದ ಸಚಿವರು, ಗುಣಮಟ್ಟದ ಮದ್ಯ ಕೊಡಬೇಕು ಎನ್ನುವುದು ನಮ್ಮ ಉದ್ದೇಶ. 2018-19 ರಲ್ಲಿ 19,750 ಸಾವಿರ ಕೋಟಿ ರೂ ಸಂಗ್ರಹ ಗುರಿ ನಿಗದಿ ಪಡಿಸಲಾಗಿತ್ತು. 19,943 ಕೋಟಿ ಗುರಿ ಸಾಧಿಸಿದ್ದೇವೆ. 2019-20 ನೇ ಸಾಲಿನಲ್ಲಿ 21 ಸಾವಿರ ಕೋಟಿ ಗುರಿ ನಿಗದಿ ಪಡಿಸಿದ್ದೇವೆ. ಪಾರ್ಟಿಗಳಲ್ಲಿ ಬೇರೆ ಕಡೆಯಿಂದ ಮದ್ಯ ತಂದು ಉಪಯೋಗಿಸುತ್ತಾರೆ. ಹೀಗಾಗಿ ಈ ರೀತಿಯ ಪಾರ್ಟಿಗಳ ಮೇಲೆ ನಮ್ಮ ಅಧಿಕಾರಿಗಳು ದಾಳಿ ಮಾಡುತ್ತಾರೆ. ಗಾಂಜಾ ಮತ್ತು ಮಾದಕವಸ್ತುಗಳ ಬಳಕೆಗೆ ಕಡಿವಾಣ ಹಾಕುತ್ತೇವೆ ಎಂದು ಹೇಳಿದ್ದರು. ಇದನ್ನೂ ಓದಿ: ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡಲು ಚಿಂತನೆ: ಸಚಿವ ನಾಗೇಶ್

    ಮದ್ಯಪಾನ ನಿಷೇಧದ ಬಗ್ಗೆ ಸರ್ಕಾರದ ಮುಂದೆ ಯಾವುದೇ ಚಿಂತನೆ ಇಲ್ಲ. ಈ ಹಿಂದೆ ಮಹಿಳೆಯರು ಪ್ರತಿಭಟನೆ ಮಾಡಿದ್ದು ನನಗೆ ಗೊತ್ತಿಲ್ಲ. ನಾನು ಬಹುಶಃ ಬಾಂಬೆಯಲ್ಲಿದ್ದೆ. ಆಗ ನನ್ನ ಫೋನ್ ಸ್ವಿಚ್ ಆಫ್ ಇತ್ತು ಎಂದು ಹೇಳಿದ್ದರು. ಇದೇ ವೇಳೆ ಡಿಕೆಶಿ ಬಗ್ಗೆ ಕೇಳಿದಾಗ, ಈ ಬಗ್ಗೆ ಸಿಎಂ ಆಗಲೇ ಮೂವರು ಸಚಿವರಿಗೆ ಹೇಳಿಕೆ ಕೊಡದಂತೆ ವಾರ್ನ್ ಮಾಡಿದ್ದಾರೆ. ಹೀಗಾಗಿ ಈ ಬಗ್ಗೆ ನಾನೇನು ಹೇಳಲ್ಲ ಎಂದು ತಿಳಿಸಿದ್ದರು.