Tag: ಅಬಕಾರಿ ಅಧಿಕಾರಿಗಳು

  • ಬೆಂಗಳೂರು ಮನೆಯಲ್ಲಿ ಗೋವಾ ಮದ್ಯ – 5 ಲಕ್ಷ ರೂ. ಮೌಲ್ಯದ 144 ಬಾಟಲಿ ಜಪ್ತಿ

    ಬೆಂಗಳೂರು ಮನೆಯಲ್ಲಿ ಗೋವಾ ಮದ್ಯ – 5 ಲಕ್ಷ ರೂ. ಮೌಲ್ಯದ 144 ಬಾಟಲಿ ಜಪ್ತಿ

    ಬೆಂಗಳೂರು: ನಗರದ ದಕ್ಷಿಣ ವಿಭಾಗ ಅಬಕಾರಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 5 ಲಕ್ಷ ರೂ. ಮೌಲ್ಯದ 144 ಬಾಟಲಿ ಗೋವಾ (Goa) ಲಿಕ್ಕರ್ ಪತ್ತೆಯಾಗಿದ್ದು, ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಕತ್ರಿಗುಪ್ಪೆ (Katriguppe) ನಿವಾಸಿ ಪುರುಷೋತ್ತಮ್ ಎಂದು ಗುರುತಿಸಲಾಗಿದೆ.

    ಆರೋಪಿ ಗೋವಾದಿಂದ ಕಡಿಮೆ ಬೆಲೆಗೆ ಮದ್ಯ ತರಿಸಿಕೊಳ್ಳುತ್ತಿದ್ದ. ಗೋವಾದಲ್ಲಿರುವ ಅಂಗಡಿಯವರ ಸಂಪರ್ಕದ ಮೇರೆಗೆ ಬೆಂಗಳೂರಿಗೆ ಮದ್ಯ ತರಿಸಿಕೊಳ್ಳುತ್ತಿದ್ದ. ತನಗೆ ಬೇಕಾದಾಗಲೆಲ್ಲಾ ತಿಳಿಸಿ ಬಸ್‌ನಲ್ಲಿ ಮದ್ಯದ ಬಾಟಲ್ ಇಡುವಂತೆ ಹೇಳುತ್ತಿದ್ದ. ಬಳಿಕ ಇಲ್ಲಿಗೆ ಬರುತ್ತಿದ್ದಂತೆ ಇಳಿಸಿಕೊಳ್ಳುತ್ತಿದ್ದ. ನಂತರ ಮನೆಗೆ ತೆಗೆದುಕೊಂಡು ಹೋಗಿ ಸ್ಟಾಕ್ ಮಾಡುತ್ತಿದ್ದ. ಇದನ್ನು ಕಡಿಮೆ ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ.ಇದನ್ನೂ ಓದಿ: ಸತತ 35 ಗಂಟೆಗಳ ಇಡಿ ದಾಳಿ ಅಂತ್ಯ – 2 ದಿನ, 5 ಅಧಿಕಾರಿಗಳಿಂದ ಮಹತ್ವದ ದಾಖಲೆ ಸಂಗ್ರಹ!

    ಅ.27 ರಂದು ಪುರುಷೋತ್ತಮ್ ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ಬನಶಂಕರಿ ಎರಡನೇ ಹಂತದಲ್ಲಿ ನಿಂತಿದ್ದ. ಆತನ ಚಲನವಲನ ಅಬಕಾರಿ ಅಧಿಕಾರಿಗಳಿಗೆ ಅನುಮಾನ ಹುಟ್ಟಿಸಿತ್ತು. ಈ ವೇಳೆ ಬ್ಯಾಗ್ ತೆಗೆದು ಪರಿಶೀಲಿಸಿದಾಗ ಮದ್ಯದ ಬಾಟಲ್ ಪತ್ತೆಯಾಗಿದೆ. ಬಾಟಲ್ ಮೇಲೆ ಫಾರ್ ಸೇಲ್ ಇನ್ ಗೋವಾ ಓನ್ಲಿ ಎಂದು ನಮೂದಾಗಿದ್ದು ಕಂಡು ಅವುಗಳು ಗೋವಾದಲ್ಲಿ ತಯಾರಿಸಲಾಗಿದ್ದ ಮದ್ಯದ ಬಾಟಲ್ ಎಂದು ತಿಳಿದಿದೆ.

    ಬಳಿಕ ಆತನ ಮೊಬೈಲ್ ಪರಿಶೀಲಿಸಿದಾಗ ಗೋವಾ ರಾಜ್ಯದ ಮದ್ಯದ ಅಂಗಡಿ ಜೊತೆಗಿನ ನಂಟು ಬಯಲಾಗಿದೆ. ಜೊತೆಗೆ ಮದ್ಯ ತರಿಸಿದ್ದ ಬಿಲ್ಲುಗಳು ಕೂಡ ಪತ್ತೆಯಾಗಿದೆ. ನಂತರ ಕತ್ರಿಗುಪ್ಪೆ ಮನೆಗೆ ಕರೆದೊಯ್ದು ಶೋಧಿಸಿದಾಗ ಅಕ್ರಮ ಮದ್ಯದ ಬಾಟಲ್‌ಗಳು ಇರುವುದು ತಿಳಿದುಬಂದಿದೆ. ಮನೆಯಲ್ಲಿದ್ದ ಮದ್ಯದ ಬಾಟಲ್‌ಗಳನ್ನು ನೋಡಿ ಅಬಕಾರಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

    ಸದ್ಯ ಅಬಕಾರಿ ಕಾಯ್ದೆ 1965ರ ಕಲಂ 11, 14, 15, 38(ಎ), 43(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಬೆಳಕಿನ ಹಬ್ಬ – ಶ್ರೀರಾಮನ ಪುನರಾಗಮನ!

  • ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ- ಇಬ್ಬರ ಬಂಧನ

    ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ- ಇಬ್ಬರ ಬಂಧನ

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ವಿವಿಧೆಡೆ ದಾಳಿ ನಡೆಸಿದ ಅಬಕಾರಿ ಪೊಲೀಸರು 12 ಬ್ಯಾರಲ್ ಗಳಲ್ಲಿನ 1,500 ಲೀಟರ್ ಬೆಲ್ಲದ ಕೊಳೆ, 50 ಲೀಟರ್ ಕಳ್ಳಭಟ್ಟಿ ಜಪ್ತಿ ಮಾಡಿದ್ದಾರೆ.

    ತಾಲೂಕಿನ ಗೋರೆಬಾಳ ಹಾಗೂ ಗೋರೆಬಾಳ ತಾಂಡಾದಲ್ಲಿ ದಾಳಿ ಮಾಡಿ ಕಳ್ಳಭಟ್ಟಿ ವಶಕ್ಕೆ ಪಡೆದಿದ್ದು, ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ರಾಯಚೂರು ಮತ್ತು ಲಿಂಗಸಗೂರು ಅಬಕಾರಿ ವಲಯದ ಅಧಿಕಾರಿಗಳ ನೇತೃತ್ವದ ತಂಡದಿಂದ ದಾಳಿ ನಡೆದಿದೆ.

    ಕಳ್ಳಭಟ್ಟಿ ತಯಾರಿಸಿ, ಮಾರಾಟಕ್ಕೆ ಯತ್ನಿಸಿದ್ದ ಅರುಣಕುಮಾರ್ ಹಾಗೂ ಖೂಬಣ್ಣ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ದಾಳಿ ವೇಳೆ ಕಳ್ಳಭಟ್ಟಿ ತಯಾರಿಕೆಗೆ ಬಳಕೆ ಮಾಡುತಿದ್ದ ಸಲಕರಣೆಗಳು ಹಾಗೂ ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.

  • 1,028 ಬಾಕ್ಸ್‌ಗಳಲ್ಲಿದ್ದ16 ಲಕ್ಷ ಮೌಲ್ಯದ ಮದ್ಯ ನಾಶ

    1,028 ಬಾಕ್ಸ್‌ಗಳಲ್ಲಿದ್ದ16 ಲಕ್ಷ ಮೌಲ್ಯದ ಮದ್ಯ ನಾಶ

    ಯಾದಗಿರಿ: ನಗರದ ಹೊರವಲಯದಲ್ಲಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ ಮದ್ಯ ಸಂಗ್ರಹ ಆವರಣದಲ್ಲಿ ಮಾರಾಟವಾಗದೆ ಉಳಿದುಕೊಂಡಿದ್ದ 16 ಲಕ್ಷ ಮೌಲ್ಯದ ಮದ್ಯವನ್ನು ಅಧಿಕಾರಿಗಳು ಇಂದು ನಾಶಪಡಿಸಿದ್ದಾರೆ.

    ನಾಕ್ ಔಟ್ ಕಂಪನಿಯ ಪೋಸ್ಟರ್ ಗೋಲ್ಡ್, ಲಾಗರ್, ನಾಕೌಟ್ ಸ್ಟ್ರಾಂಗ್‍ಗೆ ಸೇರಿದ ಒಟ್ಟು 1,028 ಬಾಕ್ಸ್‌ಗಳಲ್ಲಿದ್ದ ಲಕ್ಷಕ್ಕೂ ಅಧಿಕ ಬಿಯರ್ ಬಾಟಲಿಗಳನ್ನು ನಾಶಪಡಿಸಲಾಗಿದೆ. ಯಾದಗಿರಿ ನಗರದ ಹೊರ ವಲಯದಲ್ಲಿರುವ ಅಬಕಾರಿ ಉಗ್ರಾಣದ ಮುಂಭಾಗದಲ್ಲಿ ಅಧಿಕಾರಿಗಳು ಅವಧಿ ಮುಗಿದಿದ್ದ ಈ ಮದ್ಯವನ್ನು ನಾಶಪಡಿಸಿದ್ದಾರೆ. ಜಾನುವಾರುಗಳಿಗೆ ಹಾಗೂ ಪರಿಸರಕ್ಕೆ ತೊಂದರೆ ಆಗದಂತೆ ಇಲಾಖೆಯಿಂದ ಅಗತ್ಯ ಮುಂಜಾಗ್ರತೆ ಕ್ರಮ ಕೂಡ ಕೈಗೊಳ್ಳಲಾಗಿತ್ತು.

    ಅಬಕಾರಿ ಇಲಾಖೆಯ ಉಪ ನೀರಿಕ್ಷರಾದ, ಶ್ರೀರಾಮ್ ರಾಠೋಡ್, ಮಳಿಗೆ ಅಬಕಾರಿ ನೀರಿಕ್ಷಕ ಪ್ರಕಾಶ ಮಾಕೊಂಡ ನೇತೃತ್ವದ ತಂಡ ಪರಿಸರಕ್ಕೆ ಹಾನಿ ಆಗದಂತೆ ಎಚ್ಚರಿಕೆ ವಹಿಸಿ ದೊಡ್ಡ ಗುಂಡಿ ತೆಗೆದು ಅದರಲ್ಲಿ ಮದ್ಯವನ್ನು ಸುರಿದು ನಂತರ ಮಣ್ಣು ಮುಚ್ಚಲಾಯಿತು.

    ಈ ಸಂದರ್ಭದಲ್ಲಿ ಮಳಿಗೆ ವ್ಯವಸ್ಥಾಪಕ ವಿ.ಡಿ.ವೆಂಕಟೇಶ್, ಸಹಾಯಕ ವ್ಯವಸ್ಥಾಪಕ ಅಡಿವೆಪ್ಪ ಭಜಂತ್ರಿ, ಎಮ್.ಎಸ್.ಪಾಟೀಲ್, ಶಿವರಾಜ್ ಕುಮಾರ್ ಮುಂಡರಗಿಮಠ, ದೇವಿಂದ್ರ ಗೋನಾಳ, ಹತ್ತಿಕುಣಿ ನಾಡ ಕಛೇರಿ ಉಪ ತಹಶೀಲ್ದಾರ್ ಬಸವರಾಜ ಮತ್ತು ಕಂಪನಿಯ ಪ್ರತಿನಿಧಿ ಶಿವಕುಮಾರ್ ಹೇರೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.

  • ದುಡ್ಡಿನ ಆಮಿಷ ಒಡ್ಡಿ ರೈತರ ಜಮೀನಿನಲ್ಲಿ ಅಕ್ರಮ ಗಾಂಜಾ ಬೆಳೆ

    ದುಡ್ಡಿನ ಆಮಿಷ ಒಡ್ಡಿ ರೈತರ ಜಮೀನಿನಲ್ಲಿ ಅಕ್ರಮ ಗಾಂಜಾ ಬೆಳೆ

    – 5 ಎಕ್ರೆಯಲ್ಲಿ ಬೆಳೆದಿದ್ದ 70 ಕೆಜಿ ಗಾಂಜಾ ವಶ

    ಹಾಸನ: ಜಿಲ್ಲೆಯ ಅಬಕಾರಿ ಡಿಸಿ ಗೋಪಾಕೃಷ್ಣಗೌಡ ನೇತೃತ್ವದ ತಂಡ ದಾಳಿ ಮಾಡಿ ಹಾಸನದಲ್ಲಿ ಸುಮಾರು ಐದು ಎಕರೆ ಜಮೀನಿನಲ್ಲಿ ಬೆಳೆಗಳ ಮಧ್ಯೆ ಯಾರಿಗೂ ತಿಳಿಯದಂತೆ ಬೆಳೆಯಲಾಗಿದ್ದ ಸುಮಾರು 15 ಲಕ್ಷ ಮೌಲ್ಯದ 70 ಕೆಜಿ ಅಕ್ರಮ ಗಾಂಜಾ ಬೆಳೆಯನ್ನು ವಶಪಡಿಸಿಕೊಂಡಿದ್ದಾರೆ.

    ಅರಕಲಗೂಡು ತಾಲೂಕಿನ ಹೊಡೆನೂರು ಗ್ರಾಮದ ಮೂವರು ರೈತರ ಜಮೀನಿನ ಮೇಲೆ ದಾಳಿ ನಡೆಸಿ ಅಕ್ರಮ ಗಾಂಜಾ ಬೆಳೆದಿರೋದನ್ನು ಬಯಲು ಅಧಿಕಾರಿಗಳು ಮಾಡಿದ್ದಾರೆ. ಶುಂಠಿ ಬೆಳೆಯಲು ಕರ್ನಾಟಕಕ್ಕೆ ಬಂದ ಕೆಲವು ಕೇರಳ ಮೂಲದ ಮಂದಿಯೇ ರೈತರಿಗೆ ಗಾಂಜಾ ಬೀಜ ನೀಡಿ ಅವರ ಜಮೀನಿನಲ್ಲಿ ಗಾಂಜಾ ಬೆಳೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

    ಅಷ್ಟೇ ಅಲ್ಲದೆ ತಾವೇ ಬೀಜ ನೀಡಿ ಬೆಳೆಸಿದ ಗಾಂಜವನ್ನು ಕೇರಳ ಮೂಲದವರೇ ಕೊಂಡು ಹಲವೆಡೆಗೆ ಕಳ್ಳಸಾಗಾಣೆ ಮಾಡುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಸೋಮೇಶ್, ದೇವರಾಜ್, ಹಾಗೂ ಪ್ರಕಾಶ್‍ನನ್ನು ಬಂಧಿಸಲಾಗಿದೆ. ಇವರು ತಮ್ಮ ಜಮೀನಿನಲ್ಲಿ ಶುಂಠಿ, ಕೋಸು ಹಾಗೂ ಜೋಳದ ಬೆಳೆಗಳ ಮಧ್ಯೆ ಅಲ್ಲಲ್ಲಿ ಗಾಂಜಾ ಗಿಡವನ್ನು ಹುಲುಸಾಗಿ ಬೆಳೆಸಿದ್ದರು.

    ಇದೇ ರೀತಿ ಕೆಲವು ದಿನಗಳ ಹಿಂದೆ ಆಲೂರು ತಾಲೂಕಿನಲ್ಲೂ ಕೂಡ ವ್ಯಕ್ತಿಯೊಬ್ಬ ಜಮೀನಿನಲ್ಲಿ ಗಾಂಜಾ ಬೆಳೆದು ಪೊಲೀಸರ ಅತಿಥಿಯಾಗಿದ್ದ. ಇತ್ತೀಚಿನ ಕೆಲ ಪ್ರಕರಣ ಗಮನಿಸಿದರೆ ರೈತರಿಗೆ ಕೆಲವರು ಹಣದಾಸೆ ತೋರಿಸಿ, ಅವರ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುವಂತೆ ಮಾಡುತ್ತಿರುವ ಅಂಶ ಬೆಳಕಿಗೆ ಬರುತ್ತಿದೆ. ಅಂತಹವರ ಬಗ್ಗೆ ರೈತರು ಎಚ್ಚರಿಕೆಯಿಂದ ಇರುವುದು ಒಳಿತು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

  • ಮಾನ್ವಿಯಲ್ಲಿ ಮದ್ಯದಂಗಡಿಗಳಿಗೆ ಸೀಲ್ ಇಲ್ಲ: 4 ಪಟ್ಟು ದುಬಾರಿ ಬೆಲೆಗೆ ಮಾರಾಟ

    ಮಾನ್ವಿಯಲ್ಲಿ ಮದ್ಯದಂಗಡಿಗಳಿಗೆ ಸೀಲ್ ಇಲ್ಲ: 4 ಪಟ್ಟು ದುಬಾರಿ ಬೆಲೆಗೆ ಮಾರಾಟ

    – ಮಾಜಿ ಸಂಸದರ ಸಂಬಂಧಿಯ ಕಾರಿನಲ್ಲಿ ಮದ್ಯ ಸಾಗಾಟ

    ರಾಯಚೂರು: ಮಾನ್ವಿಯಿಂದ ರಾಯಚೂರು ನಗರಕ್ಕೆ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಕಾರೊಂದನ್ನು ರಾಯಚೂರು ಅಬಕಾರಿ ಪೊಲೀಸರು ಜಪ್ತಿಮಾಡಿ ಆರೋಪಿಗಳನ್ನ ಬಂಧಿಸಿದ್ದಾರೆ.

    ಮಾಜಿ ಸಂಸದ ಬಿ.ವಿ.ನಾಯಕ್ ಸಂಬಂಧಿ ಶ್ರೀನಿವಾಸ್ ನಾಯಕ್‍ಗೆ ಸೇರಿದ ಫೋರ್ಡ್ ಎಂಡಿವಿಯರ್ ಕಾರ್ (ಸಂಖ್ಯೆ ಕೆ.ಎ36 ಎಂಸಿ 0005) ನಲ್ಲಿ 750 ಎಂ.ಎಲ್‍ನ 10 ಬಾಟಲ್ ವಿಸ್ಕಿ, 650 ಎಂ.ಎಲ್‍ನ 24 ಬಾಟಲ್ ಬಿಯರ್ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ತಾಲೂಕಿನ ಕಲ್ಲೂರು ಬಳಿ ಪರಿಶೀಲನೆ ಮಾಡಿದ ಅಬಕಾರಿ ಪೊಲೀಸರು ಮದ್ಯದ ಬಾಟಲಿಗಳನ್ನ ಜಪ್ತಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಕೇಶ್ ಹಾಗೂ ಅಜಯ್‍ಕುಮಾರ್ ಬಂಧಿತ ಆರೋಪಿಗಳು.

    ಲಾಕ್‍ಡೌನ್ ಹಿನ್ನೆಲೆ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿದೆಯಾದರೂ ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಮಾತ್ರ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ಯಾಕೆಂದರೆ ಇಲ್ಲಿನ ಮದ್ಯದ ಅಂಗಡಿಗಳಿಗೆ ಅಬಕಾರಿ ಅಧಿಕಾರಿಗಳು ಇದುವರೆಗೂ ಸೀಲ್ ಹಾಕಿಲ್ಲ. ಮಾನ್ವಿಯ ಬಸ್ ನಿಲ್ದಾಣ ಹಾಗೂ ಸಿಂಧನೂರು ರಸ್ತೆಯಲ್ಲಿರುವ ಬಾರ್ ಗಳಿಗೆ ಕೇವಲ ಬೀಗ ಮಾತ್ರ ಹಾಕಲಾಗಿದೆ.

    ಕೇವಲ ಬೀಗ ಹಾಕಿರುವುದರಿಂದ ರಾತ್ರಿ ವೇಳೆ ಮದ್ಯದಂಗಡಿಯಿಂದ ಮದ್ಯ ರಾಜಾರೋಷವಾಗಿ ಹೊರಹೋಗುತ್ತಿದೆ. ಇದರಿಂದ ಬೇಸತ್ತಿರುವ ಸ್ಥಳೀಯರು ಕೂಡಲೇ ಬಾರ್ ಗಳನ್ನು ಅಧಿಕಾರಿಗಳು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ. ತಾಲೂಕು ಅಬಕಾರಿ ಇನ್ಸ್ ಪೆಕ್ಟರ್ ಸಹಕಾರದಿಂದಲೇ ಅಗ್ಗದ ಮದ್ಯವನ್ನು ನಾಲ್ಕು ಪಟ್ಟು ದುಬಾರಿಗೆ ಮಾರಾಟ ಮಾಡಲಾಗುತ್ತಿದೆ ಅಂತ ಆರೋಪಿಸಿದ್ದಾರೆ. ಮಾನ್ವಿಯ ಮಲ್ಲಯ್ಯ ಹಾಗೂ ಸೋಮು ಎಂಬುವವರಿಗೆ ಸೇರಿದ 11 ಮದ್ಯದ ಅಂಗಡಿಗಳಿಗೆ ಮಾತ್ರ ಸೀಲ್ ಹಾಕಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಈ ಮಧ್ಯೆ ಕಳಭಟ್ಟಿ ಹಾಗೂ ಸಿಎಚ್ ಪೌಡರ್ ಸೇಂದಿ ಮಾರಾಟ ಕೂಡ ಜೋರಾಗಿದ್ದು ಅಬಕಾರಿ ಇಲಾಖೆ ಅಧಿಕಾರಿಗಳು ಲಿಂಗಸುಗೂರು ತಾಲೂಕಿನ ಬಗಾಡಿ ತಾಂಡದಲ್ಲಿ 250 ಕೊಡಗಳಲ್ಲಿದ್ದ 1500 ಲೀಟರ್ ಕಳ್ಳಭಟ್ಟಿ ಜಪ್ತಿ ಮಾಡಿದ್ದಾರೆ. ಮಾನ್ವಿ ತಾಲೂಕಿನ ಕುರಡಿ ಗ್ರಾಮದ ಬಳಿ 10 ಲೀಟರ್ ಕಳ್ಳಭಟ್ಟಿ ಹಾಗೂ ಒಂದು ಬೈಕ್ ಜಪ್ತಿಮಾಡಲಾಗದ್ದು ಆರೋಪಿಗಳು ಪರಾರಿಯಾಗಿದ್ದಾರೆ.

  • ಯಾದಗಿರಿಯಲ್ಲಿ ಅಬಕಾರಿ ಅಧಿಕಾರಿಗಳ ದಾಳಿ 14 ಪ್ರಕರಣ ದಾಖಲು

    ಯಾದಗಿರಿಯಲ್ಲಿ ಅಬಕಾರಿ ಅಧಿಕಾರಿಗಳ ದಾಳಿ 14 ಪ್ರಕರಣ ದಾಖಲು

    – 1 ಲಕ್ಷ ರೂ. ಅಬಕಾರಿ ಪದಾರ್ಥ ಜಪ್ತಿ

    ಯಾದಗಿರಿ: ಜಿಲ್ಲೆಯಾದ್ಯಂತ ಖಚಿತ ಬಾತ್ಮಿ ಮಾಹಿತಿ ಹಾಗೂ ದೂರಿನ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಈವರೆಗೆ ಒಟ್ಟು 14 ಪ್ರಕರಣಗಳನ್ನು ದಾಖಲಿಸಿಕೊಂಡು, ಸುಮಾರು 98,650 ರೂ. ಮೌಲ್ಯದ ಅಬಕಾರಿ ಪದಾರ್ಥಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

    ಈ ವರೆಗೆ ಜಿಲ್ಲೆಯಲ್ಲಿ 30.600 ಲೀಟರ್ ಮದ್ಯ, 9.120 ಲೀಟರ್ ಬೀಯರ್, 455 ಲೀಟರ್ ಸೇಂದಿ, 25 ಲೀಟರ್ ಕಳ್ಳಭಟ್ಟಿ ಸಾರಾಯಿ, 290 ಲೀಟರ್ ಬೆಲ್ಲದ ಕೊಳೆ, 20 ಕೆ.ಜಿ ಕೊಳೆತ ಬೆಲ್ಲ, 25 ಕೆ.ಜಿ ಸಿ.ಹೆಚ್.ಪೌಡರ್ ಮತ್ತು 8 ಕೆ.ಜಿ.ಕಳ್ಳಭಟ್ಟಿ ಸಾರಾಯಿಗೆ ಬಳಸುವ ಗಿಡದ ಚಕ್ಕೆ ಸೇರಿದಂತೆ ಸುಮಾರು 98,650 ರೂ. ಮೌಲ್ಯದ ಅಬಕಾರಿ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಅಬಕಾರಿ ಉಪ ಆಯುಕ್ತರ ಕಚೇರಿಯ ಪ್ರಭಾರಿ ಅಬಕಾರಿ ಉಪ ಅಧೀಕ್ಷಕ ಶ್ರೀರಾಮ ರಾಠೋಡ, ರಾಜ್ಯಾದ್ಯಂತ ಕೊರೊನಾ ವೈರಸ್ (ಕೋವಿಡ್-19) ನಿಯಂತ್ರಿಸಲು ಅನುಕೂಲವಾಗುವಂತೆ ಸಂಪೂರ್ಣ ಲಾಕ್‍ಡೌನ್ ಪರಿಸ್ಥಿತಿ ಘೋಷಿಸಲಾಗಿದೆ. ಈ ಹಿನ್ನೆಲೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಯುತ್ತಿವೆ. ಇವುಗಳನ್ನು ತಡೆಯಲು ಕಲಬುರಗಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಎಸ್.ಕೆ.ಕುಮಾರ ಅವರ ಆದೇಶಾನುಸಾರ ಅಬಕಾರಿ ಉಪ ಆಯುಕ್ತೆ ಶಶಿಕಲಾ ಒಡೆಯರ್ ಅವರ ಮಾರ್ಗದರ್ಶನದಲ್ಲಿ ಶಹಾಪೂರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಮಹಮ್ಮದ್ ಇಸ್ಮಾಯಿಲ್ ಇನಾಮದಾರ ನೇತೃತ್ವದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ. ಈ ತಂಡ ಅಕ್ರಮ ಮದ್ಯ ಹಾಗೂ ಸಂಬಂಧಿಸಿದ ಒಟ್ಟು 14 ಪ್ರಕರಣಗಳನ್ನು ದಾಖಲಿಸಿಕೊಂಡಿದೆ ಎಂದರು.

    ದಾಳಿಗಳಲ್ಲಿ ಅಬಕಾರಿ ನಿರೀಕ್ಷಕ ಪ್ರಕಾಶ ಮಾಕೊಂಡ, ಭೀಮಣ್ಣ ರಾಠೋಡ, ಶ್ರೀಶೈಲ್ ಒಡೆಯರ್, ಭಾರತಿ ಹಾಗೂ ಕೇದಾರನಾಥ ಇದ್ದರು.

  • ಹಾಲಾಯ್ತು, ಈಗ ಆಲ್ಕೋಹಾಲ್‍ನಲ್ಲೂ ಕಲಬೆರಕೆ – ಅರ್ಧ ಬಾಟಲ್ ಖಾಲಿ ಮಾಡ್ದಾಗ ಗೊತ್ತಾಯ್ತು ಸತ್ಯ

    ಹಾಲಾಯ್ತು, ಈಗ ಆಲ್ಕೋಹಾಲ್‍ನಲ್ಲೂ ಕಲಬೆರಕೆ – ಅರ್ಧ ಬಾಟಲ್ ಖಾಲಿ ಮಾಡ್ದಾಗ ಗೊತ್ತಾಯ್ತು ಸತ್ಯ

    ಕೋಲಾರ: ಬಿಯರ್ ಕುಡಿಯುವಾಗ ಬಾಟಲಿಯಲ್ಲಿ ಕಲಬೆರಕೆ ಮಾಡಿರುವುದು ಪತ್ತೆಯಾಗಿದ್ದು, ಕೋಲಾರದ ಗ್ರಾಹಕರೊಬ್ಬರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

    ಕೋಲಾರ ಜಿಲ್ಲೆಯ ಮಾಲೂರಿನ ಬೈರಸಂದ್ರ ಬಳಿಯ ಶ್ರೀ ಲಕ್ಷ್ಮೀ ವೈನ್ಸ್‍ನಲ್ಲಿ ಖರೀದಿಸಿದ ಬಿಯರ್ ನಲ್ಲಿ ಕಲಬೆರಕೆ ಮಾಡಿರುವುದು ಪತ್ತೆಯಾಗಿದೆ. ಚಿಲ್ಡ್ ಬಿಯರ್ ನಲ್ಲಿ ಕಲಬೆರಕೆಯಾಗಿದ್ದು, ಅರ್ಧ ಬಾಟಲಿ ಕುಡಿದ ಬಳಿಕ ಇದು ಗ್ರಾಹಕನ ಅರಿವಿಗೆ ಬಂದಿದೆ. ಈ ಕುರಿತು ಬಾರ್ ಮಾಲೀಕರ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಿಕ್ಸ್ ಮಾಡುವ ವೇಳೆ ಏನೋ ಬಿದ್ದಿದೆ ಎಂದು ಬಾರ್ ಮಾಲೀಕರು ಸಮರ್ಥಿಸಿಕೊಂಡಿದ್ದಾರೆ.

    ಕೋಲಾರದಲ್ಲಿ ಈ ಪ್ರಕರಣ ನಡೆದಿದ್ದು, ಟ್ಯೂಬರ್ಗ್ ಬಿಯರ್‍ಗೆ ಕಲಬೆರಕೆ ಮಾಡಲಾಗಿದೆ. ಇದನ್ನು ಕಂಡ ಗ್ರಾಹಕರು ಗಾಬರಿಯಾಗಿದ್ದು, ಮಾಲೀಕರ ವಿರುದ್ಧ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

    ಈ ಕುರಿತು ತನಿಖೆ ನಡೆಸಿ ಬಾರ್ ಅಥವಾ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಹಕರು ಅಬಕಾರಿ ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ. ಘಟನೆ ನಂತರ ಅಬಕಾರಿ ಸಬ್ ಇನ್ಸ್‍ಪೆಕ್ಟರ್ ನಾರಾಯಣಸ್ವಾಮಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಗ್ರಾಹಕರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ಪ್ರಾರಂಭಿಸಿದ್ದಾರೆ.

  • ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಲಾರಿ ಜಪ್ತಿ -50 ಲಕ್ಷ ರೂ. ಮೌಲ್ಯದ ವಸ್ತು ವಶ

    ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಲಾರಿ ಜಪ್ತಿ -50 ಲಕ್ಷ ರೂ. ಮೌಲ್ಯದ ವಸ್ತು ವಶ

    ಕಾರವಾರ: ಅಕ್ರಮವಾಗಿ ಗೋವಾದಿಂದ ತೆಲಂಗಾಣಕ್ಕೆ ಲಾರಿಯಲ್ಲಿ ಸಾಗಿಸುತ್ತಿದ್ದ 1.2 ಲಕ್ಷ ಮೌಲ್ಯದ ಮದ್ಯವನ್ನು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅನ್ ಮೋಡ್ ಚಕ್ ಪೋಸ್ಟ್ ನಲ್ಲಿ ವಶಕ್ಕೆ ಪಡೆದಿದ್ದು, ಲಾರಿ ಚಾಲಕನ್ನು ಬಂಧಿಸಿದ್ದಾರೆ.

    ತೆಲಂಗಾಣ ಮೂಲದ ರಾಮಸ್ವಾಮಿ ಬಂಧಿತ ಲಾರಿ ಚಾಲಕ. ಬೃಹತ್ ಮೊತ್ತದ ಮದ್ಯವನ್ನು ಎಲೆಕ್ಟ್ರಿಕ್ ಬೋರ್ಡ್ ಲಾರಿಯಲ್ಲಿ ಕರ್ನಾಟಕದ ಗಡಿ ಮಾರ್ಗವಾಗಿ ಗೋವಾದಿಂದ ತೆಲಂಗಾಣಕ್ಕೆ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಆಧಾರದ ಮೇಲೆ ಜಿಲ್ಲಾ ಅಬಕಾರಿ ಅಧಿಕಾರಿ ಮಂಜುನಾಥ್ ಅವರ ದಾಳಿ ನಡೆಸಿದ್ದರು, ಈ ವೇಳೆ ಲಾರಿ ಸಮೇತ ಚಾಲಕ ಸಿಕ್ಕಿಬಿದ್ದಿದ್ದಾನೆ.

    ಉತ್ತರ ಕನ್ನಡ ಜಿಲ್ಲೆಯ ಅನ್‍ಮೋಡ್ ಮಾರ್ಗವಾಗಿ ಹೊರಟಿದ್ದ ಲಾರಿಯನ್ನು ನಿಲ್ಲಿಸಿ, ಅದರಲ್ಲಿದ್ದ 1.2 ಲಕ್ಷ ಮೌಲ್ಯದ ಮದ್ಯ ಸೇರಿದಂತೆ ಒಟ್ಟು 50 ಲಕ್ಷ ಮೌಲ್ಯದ ವಸ್ತುಗಳನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಲಾರಿ ಚಾಲಕನನ್ನು ಬಂಧಿಸಿದ್ದಾರೆ. ಈ ಕುರಿತು ಜೋಯಿಡಾ ಅಬಕಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.