Tag: ಅಫಜಲಪುರ

  • ಆಕ್ಸಿಜನ್ ಇಲ್ಲದೇ ಸತ್ತಿಲ್ಲ ಅಂದ್ರು ಉಮೇಶ್ ಜಾಧವ್ – ಮತ್ತೆ ಸುಳ್ಳು ಹೇಳಲು ಇಳಿದ ಸರ್ಕಾರ!

    ಆಕ್ಸಿಜನ್ ಇಲ್ಲದೇ ಸತ್ತಿಲ್ಲ ಅಂದ್ರು ಉಮೇಶ್ ಜಾಧವ್ – ಮತ್ತೆ ಸುಳ್ಳು ಹೇಳಲು ಇಳಿದ ಸರ್ಕಾರ!

    ಕಲಬುರಗಿ: ಮೃತರು ಆಕ್ಸಿಜನ್ ಇಲ್ಲದೇ ಸಾವನ್ನಪ್ಪಿಲ್ಲ. ಅಫಜಲಪುರ ತಾಲೂಕಾಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ಸಂಸದ ಉಮೇಶ್ ಜಾಧವ್ ಸಮರ್ಥನೆಗೆ ಮುಂದಾಗಿದ್ದಾರೆ.

    ಆಕ್ಸಿಜನ್ ದುರಂತಕ್ಕೆ ತೇಪೆ ಹಚ್ಚೋಕೆ ಮುಂದಾಗಿರುವ ಮಾನ್ಯ ಸಂಸದರು, ಆಸ್ಪತ್ರೆಯಲ್ಲಿ ಆಮ್ಲಜನಕ, ರೆಮ್‍ಡಿಸಿವರ್ ಇಂಜೆಕ್ಷನ್ ಇದೆ. ಬೇಕಿದ್ರೆ ನನ್ನ ಜೊತೆ ಬನ್ನಿ, ನಾನು ತೋರಿಸುತ್ತೇನೆ ಎಂದು ಹೇಳಿದ್ದಾರೆ. ಮೃತರ ಕುಟುಂಬಸ್ಥರೇ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಬಗ್ಗೆ ಹೇಳುತ್ತಿದ್ರೆ ಸರ್ಕಾರ ಮಾತ್ರ ನುಣಚಿಕೊಳ್ಳೋಕೆ ಪ್ರಯತ್ನಕ್ಕೆ ಮುಂದಾಗಿದೆ.

    ಇತ್ತ ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಅಫಜಲಪುರ ತಾಲೂಕು ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡಲಾಗಿದೆ. ಇನ್ನು ಜಿಲ್ಲೆಯಲ್ಲಿರೋ ಆಕ್ಸಿಜನ್ ಪ್ಲಾಂಟ್ ಗಳು ದಂಧೆಗೆ ಇಳಿದಿದ್ದು, ನೆರೆಯ ಮಹಾರಾಷ್ಟ್ರಕ್ಕೆ ಪ್ರಾಣವಾಯು ಸರಬರಾಜು ಮಾಡುತ್ತಿರುವ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಇದನ್ನೂ ಓದಿ: ಮೂರು ಗಂಟೆ ಆಕ್ಸಿಜನ್ ಇಲ್ಲದೇ ನರಳಿ ನರಳಿ ಪ್ರಾಣ ಬಿಟ್ಟ ನಾಲ್ವರು

    ಚಾಮರಾಜನಗರದಲ್ಲಿ 24 ಜನ ಸಾವನ್ನಪ್ಪಿದ್ರೂ ಆರೋಗ್ಯ ಸಚಿವರು ಆಕ್ಸಿಜನ್ ಇಲ್ಲದೇ ಮೂವರು ಮೃತರಾಗಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದರು. ಇದೀಗ ಡೆತ್ ರಿಪೋರ್ಟ್ ನಲ್ಲಿ 24 ಜನರು ಕೋವಿಡ್ ನಿಂದಲೇ ಸಾವನ್ನಪ್ಪಿದ್ದಾರೆ ಹೊರತು ಆಕ್ಸಿಜನ್ ಕೊರತೆಯಿಂದಲ್ಲ ಅಂತ ತನಿಖೆಗೂ ಅವಕಾಶ ನೀಡದೇ ತಮಗೆ ತಾವೇ ಕ್ಲೀನ್ ಚಿಟ್ ಪಡೆದುಕೊಂಡಿದೆ. ಇದನ್ನೂ ಓದಿ: ಆಕ್ಸಿಜನ್ ಇಲ್ಲದೆ ಮೂವರಷ್ಟೇ ಸಾವು ಅಂತ ಸಚಿವರಿಬ್ಬರ ಸಮರ್ಥನೆ

  • ಮೂರು ಗಂಟೆ ಆಕ್ಸಿಜನ್ ಇಲ್ಲದೇ ನರಳಿ ನರಳಿ ಪ್ರಾಣ ಬಿಟ್ಟ ನಾಲ್ವರು

    ಮೂರು ಗಂಟೆ ಆಕ್ಸಿಜನ್ ಇಲ್ಲದೇ ನರಳಿ ನರಳಿ ಪ್ರಾಣ ಬಿಟ್ಟ ನಾಲ್ವರು

    – ಕಲಬುರಗಿಯಲ್ಲಿ ಮತ್ತೊಂದು ಆಕ್ಸಿಜನ್ ದುರಂತ
    – ಸಂಬಂಧಿಕರ ಗೋಳಾಟ ಕೇಳೋರೆ ಇಲ್ಲ

    ಕಲಬುರಗಿ: ಮೂರು ಗಂಟೆ ಪ್ರಾಣವಾಯು ಇಲ್ಲದೇ ನಾಲ್ವರು ನರಳಿ ನರಳಿ ಪ್ರಾಣಬಿಟ್ಟ ಹೃದಯವಿದ್ರಾವಕ ಘಟನೆ ಕಲಬುರಗಿಯ ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

    ಇಂದು ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿತ್ತು. ಆದ್ರೆ ಇದುವರೆಗೂ ತಾಲೂಕಾಸ್ಪತ್ರೆಗೆ ಆಕ್ಸಿಜನ್ ಪೂರೈಕೆ ಆಗಿಲ್ಲ. ಆದ್ರೆ ಇಷ್ಟೆಲ್ಲ ಆದ್ರೂ ಕಲಬುರಗಿ ಜಿಲ್ಲಾಡಳಿತ ಮಾತ್ರ ಜಾಣ ಮೌನಕ್ಕೆ ಶರಣಾಗಿದೆ. 35 ರೋಗಿಗಳು ದಾಖಲಾಗಿರುವ ಅಫಜಲಪುರ ಆಸ್ಪತ್ರೆಯ ಪರಿಸ್ಥಿತಿ ಕ್ಷಣದಿಂದ ಕ್ಷಣಕ್ಕೆ ಬಿಗಡಾಯಿಸುತ್ತಿದೆ. ರೋಗಿಗಳನ್ನು ಸಾವನ್ನಪ್ಪುತ್ತಿದ್ದಂತೆ ಮೃತದೇಹಗಳನ್ನ ಟೆಂಪೋಗಳಲ್ಲಿ ರವಾನಿಸಲಾಗಿದೆ.

    ನನ್ನ ಪತಿಗೆ ಯಾರು ಸರಿಯಾಗಿ ಚಿಕಿತ್ಸೆ ನೀಡಲಿಲ್ಲ. ಬೇರೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲ ಅಂತ ಹೇಳಿದ್ರು. ನಮಗೆ ಈ ಆಸ್ಪತ್ರೆ ಮತ್ತು ಸರ್ಕಾರದ ಸಹವಾಸವೇ ಸಾಕು ಎಂದು ಮೃತ ವ್ಯಕ್ತಿಯ ಪತ್ನಿ ಕಣ್ಣೀರು ಹಾಕಿದರು. ಕಲಬುರಗಿಯಲ್ಲಿರುವ ಆಕ್ಸಿಜನ್ ಪ್ಲಾಂಟ್ ಗಳು ದುಬಾರಿ ಬೆಲೆಗೆ ಮಾರಾಟಕ್ಕೆ ಮುಂದಾಗಿದ್ದು, ನೆರೆಯ ಮಹಾರಾಷ್ಟ್ರಕ್ಕೆ ಆಕ್ಸಿಜನ್ ಪೂರೈಸುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ.

    ಭಾನುವಾರ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನರು ಸಾವನ್ನಪ್ಪಿದ್ದರು. ಇದುವರೆಗೂ ರಾಜ್ಯದಲ್ಲಿ ಆಕ್ಸಿಜನ್ ಇಲ್ಲದೇ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

  • ಖರ್ಗೆ ಒಬ್ಬೊಬ್ಬರನ್ನು ಮುಗಿಸುತ್ತಿದ್ದಾರೆ, `ಕೈ’ ನಿಂದ ಹೊರ ಬಂದ್ರೆ ಈಡಿಗ ಶಕ್ತಿ ತೋರಿಸ್ತೀನಿ: ಗುತ್ತೇದಾರ್ ಗುಡುಗು

    ಖರ್ಗೆ ಒಬ್ಬೊಬ್ಬರನ್ನು ಮುಗಿಸುತ್ತಿದ್ದಾರೆ, `ಕೈ’ ನಿಂದ ಹೊರ ಬಂದ್ರೆ ಈಡಿಗ ಶಕ್ತಿ ತೋರಿಸ್ತೀನಿ: ಗುತ್ತೇದಾರ್ ಗುಡುಗು

    ಕಲಬುರಗಿ: ಬಿಜೆಪಿಗೆ ಸೇರ್ಪಡೆಯಾಗಲಿರುವ ಅಫಜಲಪುರದ ಕೈ ಶಾಸಕ ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ ಖರ್ಗೆ ವಿರುದ್ಧ ಕಿಡಿಕಾರುತ್ತಿರುವ ಆಡಿಯೋ ಈಗ ಲಭ್ಯವಾಗಿದೆ.

    ವಿಧಾನಸಭಾ ಚುನಾವಣೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಸೋಲಿಸುವುದಾಗಿ ಗುತ್ತೇದಾರ್ ಆಡಿಯೋದಲ್ಲಿ ಗುಡುಗಿದ್ದಾರೆ.

    ಆಡಿಯೋದಲ್ಲಿ ಏನಿದೆ?
    ಕಲಬುರಗಿಯಲ್ಲಿ ಖರ್ಗೆ ಒಬ್ಬೊಬರನ್ನು ಮುಗಿಸುತ್ತಾ ಬರುತ್ತಿದ್ದಾರೆ. ಯಾಕೆಂದರೆ ಆತನ ಮನೆಯಲ್ಲಿ ಆತನಿಗೆ ಶೂ ಹಾಕುವಂತಹ ಶರಣಪ್ರಕಾಶ ಪಾಟೀಲ್ ನಂತಹ ವ್ಯಕ್ತಿಗಳು ಬೇಕು. ಸಿಎಂ ವಿವೇಚನಾ ಖೋಟಾದಲ್ಲಿ ನನ್ನ ಕ್ಷೇತ್ರಕ್ಕೆ 25 ಕೋಟಿ ರೂ. ನೀಡುವುದಾಗಿ ಹೇಳಿ ನಂತರ ಕೇವಲ 5 ಕೋಟಿ ರೂ. ನೀಡಿ ವಂಚಿಸಿದ್ದಾರೆ. ಕಾಂಗ್ರೆಸ್ ನವರು ಈ ಹಿಂದೆ ನನ್ನನ್ನು ಕಾಡಿಸಿದ್ದಾರೆ. ನಾನು ಕಾಂಗ್ರೆಸ್ ನಿಂದ ಹೊರಬಂದರೆ ಈಡಿಗ ಶಕ್ತಿ ಏನು ಎನ್ನುವುದನ್ನು ತೋರಿಸಿಕೊಡುತ್ತೇನೆ. ದಲಿತರಿಗೆ ಖರ್ಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿ ಗುತ್ತೇದಾರ್ ಆಡಿಯೋದಲ್ಲಿ ಕಿಡಿಕಾರಿದ್ದಾರೆ.

    1985, 1989, 1994, 1999, 2008, 2013 ರಲ್ಲಿ ಮಾಲೀಕಯ್ಯ ಗುತ್ತೇದಾರ್ ಅಫಜಲಪುರ ಕ್ಷೇತ್ರದಿಂದ ಆಯ್ಕೆ ಆಗಿದ್ದಾರೆ. 2013ರಲ್ಲಿ ಗುತ್ತೇದಾರ್ 5,238 ಮತಗಳ ಅಂತರದಿಂದ ಜಯಗಳಿಸಿದ್ದರು. ಗುತ್ತೇದಾರ್ 38,093 ಮತಗಳನ್ನು ಪಡೆದಿದ್ದರೆ, ಕೆಜೆಪಿಯಿಂದ ಸ್ಪರ್ಧಿಸಿದ್ದ ಎಂವೈ ಪಟೀಲ್ 32,855 ಮತಗಳನ್ನು ಪಡೆದಿದ್ದರು.