Tag: ಅಪ್ಪ-ಮಗ

  • ಅಪ್ಪ-ಮಗನನ್ನು ಹಿಂಸಿಸಿ ಕೊಂದ ತಮಿಳುನಾಡಿನ ನಾಲ್ವರು ಪೊಲೀಸ್ ಅರೆಸ್ಟ್

    ಅಪ್ಪ-ಮಗನನ್ನು ಹಿಂಸಿಸಿ ಕೊಂದ ತಮಿಳುನಾಡಿನ ನಾಲ್ವರು ಪೊಲೀಸ್ ಅರೆಸ್ಟ್

    ಚೆನ್ನೈ: ಅಪ್ಪ-ಮಗನನ್ನು ಹಿಂಸಿಸಿ ಕೊಂದ ತಮಿಳುನಾಡಿನ ನಾಲ್ವರು ಪೊಲೀಸರನ್ನು ಸಿಬಿ-ಸಿಐಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.

    ಲಾಕ್‍ಡೌನ್ ಉಲ್ಲಂಘನೆ ಮಾಡಿದ್ದಾರೆ ಎಂಬ ಕ್ಷುಲಕ ಕಾರಣಕ್ಕೆ ಅಪ್ಪ-ಮತ್ತು ಮಗನ್ನು ಠಾಣೆಗೆ ಎಳೆತಂದ ಪೊಲೀಸರು ಸಾಯುವವರೆಗೂ ಹಲ್ಲೆ ಮಾಡಿದ್ದರು. ಈ ಹಲ್ಲೆ ಮಾಡಿದ ಇನ್ಸ್ ಪೆಕ್ಟರ್ ಶ್ರೀಧರ್, ಸಬ್ ಇನ್ಸ್ ಪೆಕ್ಟರ್ ಗಳಾದ ರಘು ಗಣೇಶ್ ಮತ್ತು ಬಾಲಕೃಷ್ಣನ್ ಹಾಗೂ ಕಾನ್‍ಸ್ಟೆಬಲ್ ಮುರುಗನ್ ಅವರನ್ನು ಸಿಐಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.

    ಲಾಕ್‍ಡೌನ್ ಅವದಿಗೂ ಮೀರಿ ಮೊಬೈಲ್ ಶಾಪ್ ಓಪನ್ ಮಾಡಿದ್ದಾರೆ ಎಂಬ ಕಾರಣಕ್ಕೆ ಠಾಣೆಗೆ ಅಪ್ಪ ಜಯರಾಜ್ ಮತ್ತು ಮಗ ಬೆನಿಕ್ಸ್ ಅನ್ನು ಕರೆತಂದಿದ್ದ ಪೊಲೀಸರು, ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಪರಿಣಾಮ ಇಬ್ಬರು ಸಾವನ್ನಪ್ಪಿದ್ದರು. ಪೊಲೀಸರ ಈ ಕ್ರೂರ ಕೃತ್ಯಕ್ಕೆ ಇಡೀ ದೇಶದಲ್ಲೇ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಜೊತೆಗೆ ನಟ ಕಮಲ್ ಹಾಸನ್ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಡ ಕೂಡ ಹಾಕಿದ್ದರು.

    ಇದರ ಜೊತೆಗೆ ಜೂನ್ 19ರಂದು ಘಟನೆ ನಡೆದಾಗ ಸಾಥನ್‍ಕುಲಂ ಪೊಲೀಸ್ ಠಾಣೆ ಸಿಸಿಟಿವಿ ದೃಶ್ಯಗಳನ್ನು ಡಿಲೀಟ್ ಕೂಡ ಮಾಡಲಾಗಿದೆ. ಇದರಿಂದ ಅನುಮಾನಗೊಂಡ ಮದ್ರಾಸ್ ಹೈಕೋರ್ಟ್ ಸರಿಯಾಗಿ ತನಿಖೆ ಮಾಡುವಂತೆ ಜೊತೆಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವಂತೆ ಸಿಐಡಿ ಅಧಿಕಾರಿಗಳಿಗೆ ಸೂಚಿಸಿತ್ತು. ಈಗ ಸಿಐಡಿ ತಂಡ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅರೆಸ್ಟ್ ಮಾಡಿ ತನಿಖೆ ಮಾಡುತ್ತಿದೆ.

    ಜೂನ್ 19ರಂದು ಮೊಬೈಲ್ ಅಂಗಡಿಯನ್ನು ನೀಡಿರುವ ಅವಧಿಗೂ ಹೆಚ್ಚು ಕಾಲ ತೆರೆದಿದ್ದಾರೆ ಎಂದು, ಜಯರಾಜ್ ಮತ್ತು ಜೆ ಬೆನಿಕ್ಸ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಈ ವೇಳೆ ಅವರನ್ನು ಕೋರ್ಟಿಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಮ್ಯಾಜಿಸ್ಟ್ರೇಟ್ ಬಿ ಸರವಣ ಅವರನ್ನು ವಿಚಾರಣೆ ಮಾಡುವಂತೆ ಅದೇಶ ಮಾಡಿದ್ದರು. ಈ ವೇಳೆ ಅವರನ್ನು ಠಾಣೆಗೆ ಕರೆದುಕೊಂಡು ಬಂದ ಪೊಲೀಸರು ಅಪ್ಪ-ಮಗನ ಮೇಲೆ ಹಲ್ಲೆ ಮಾಡಿದ್ದರು.

    ಪೊಲೀಸರ ಏಟನ್ನು ತಡೆಯಲಾಗದ ಬೆನಿಕ್ಸ್ ಅಲ್ಲೇ ಕುಸಿದು ಬಿದ್ದಿದ್ದರು, ಅವರನ್ನು ಜೂನ್ 22ರ ಸಂಜೆ ಕೋವಿಲ್ಪಟ್ಟಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಂದೇ ರಾತ್ರಿ ಆತ ಮೃತಪಟ್ಟಿದ್ದ. ಇದಾದ ನಂತರ ಅವರ ತಂದೆ ಜಯರಾಜ್ ಕೂಡ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಜೂನ್ 23ರ ಬೆಳಗ್ಗೆ ಅದೇ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಅವರು ಕೂಡ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

    ಡಿಎಂಕೆ ಪಕ್ಷದ ಸಂಸದ ಕನಿಮೋಜಿ ಅವರು ಈ ವಿಚಾರವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (ಎನ್.ಎಚ್.ಆರ್.ಸಿ) ಪತ್ರ ಬರೆದಿದ್ದು ಇದರಲ್ಲಿ, ಪೊಲೀಸ್ ಅಧಿಕಾರಿಗಳು ಬೆನ್ನಿಕ್ಸ್ ಅವರ ಗುದದ್ವಾರಕ್ಕೆ ಲಾಠಿ ಹಾಕಿದ್ದಾರೆ. ಈ ವೇಳೆ ರಕ್ತಸ್ರಾವ ಉಂಟಾಗಿ ಅವರು ಸಾವನ್ನಪ್ಪಿದ್ದಾರೆ ಮತ್ತು ಪೊಲೀಸ್ ಅಧಿಕಾರಿಗಳು ಜಯರಾಜ್ ಅವರನ್ನು ಮಾರಣಾಂತಿಕವಾಗಿ ಥಳಿಸಿದ್ದಾರೆ. ಪೊಲೀಸರು ಶೂಳಿಂದ ಜಯರಾಜ್ ಅವರ ಎದೆಗೆ ಮೇಲೆ ಅನೇಕ ಬಾರಿ ಒದ್ದಿರುವ ಕಾರಣ ಅವರು ಮೃತಪಟ್ಟಿದ್ದಾರೆ ಎಂದು ಹೇಳಿದ್ದರು.

  • ಬೈಕ್‍-ಖಾಸಗಿ ಬಸ್ ಮುಖಾಮುಖಿ ಡಿಕ್ಕಿ: ಬಸ್ ಹರಿದು ಅಪ್ಪ-ಮಗ ಸಾವು

    ಬೈಕ್‍-ಖಾಸಗಿ ಬಸ್ ಮುಖಾಮುಖಿ ಡಿಕ್ಕಿ: ಬಸ್ ಹರಿದು ಅಪ್ಪ-ಮಗ ಸಾವು

    ತುಮಕೂರು: ಖಾಸಗಿ ಬಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್‍ನಲ್ಲಿದ್ದ ಅಪ್ಪ-ಮಗ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿರಾ ತಾಲೂಕು ಬುಕ್ಕಾಪಟ್ಟಣ ಸಮೀಪದ ಕಂಬದಹಳ್ಳಿ ಗೇಟ್ ಬಳಿ ನಡೆದಿದೆ.

    ಬುಕ್ಕಾಪಟ್ಟಣ ಮೂಲದವರಾದ ತಿಮ್ಮಣ್ಣ (60) ಹಾಗೂ ಬಸವರಾಜ್(32) ಮೃತ ದುರ್ದೈವಿಗಳು. ಬುಕ್ಕಾಪಟ್ಟಣದ ಕಡೆಯಿಂದ ಶಿರಾ ಕಡೆಗೆ ಖಾಸಗಿ ಬಸ್ ಹೋಗುತಿತ್ತು. ಇತ್ತ ಬಸವರಾಜ್ ಅವರು ತಂದೆಯ ಜೊತೆಗೆ ಶಿರಾ ಕಡೆಯಿಂದ ಬುಕ್ಕಾಪಟ್ಟಣಕ್ಕೆ ಬರುತ್ತಿದ್ದರು. ಈ ವೇಳೆ ಕಂಬದಹಳ್ಳಿ ಬಳಿ ಇರುವ ತಿರುವಿನ ಸಮೀಪದಲ್ಲಿ ನಿಯಂತ್ರಣ ತಪ್ಪಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿವೆ.

    ಬಸ್ ಚಾಲಕ ಅತಿ ವೇಗದಲ್ಲಿ ಚಾಲನೆ ಮಾಡಿದ್ದು ಹಾಗೂ ತಿರುವು ಅಪಘಾಕ್ಕೆ ಕಾರಣ ಎನ್ನಲಾಗಿದೆ. ಮೃತರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಹಾಗೂ ಖಾಸಗಿ ಬಸ್‍ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಸಂಬಂಧ ಶಿರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ರೇಷನ್ ಅಕ್ಕಿಗಾಗಿ ಬಯೋಮೆಟ್ರಿಕ್ ಕೊಡಲು ಹೋಗುತ್ತಿದ್ದ ಅಪ್ಪ-ಮಗನ ಮೇಲೆ ಹರಿದ ಬಸ್

    ರೇಷನ್ ಅಕ್ಕಿಗಾಗಿ ಬಯೋಮೆಟ್ರಿಕ್ ಕೊಡಲು ಹೋಗುತ್ತಿದ್ದ ಅಪ್ಪ-ಮಗನ ಮೇಲೆ ಹರಿದ ಬಸ್

    ಮೈಸೂರು: ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್‌ಟಿಸಿ ಬಸ್ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪ್ಪ-ಮಗ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಮೈಸೂರು ತಾಲೂಕು ಕೋಟೆಹುಂಡಿ ಸರ್ಕಲ್ ಬಳಿ ನಡೆದಿದೆ.

    ಹೆಗ್ಗಡದೇವನಕೋಟೆ ತಾಲೂಕಿನ ಕಟ್ಟೆಹುಣಸೂರು ನಿವಾಸಿಗಳಾದ ಪ್ರಕಾಶ್ (50) ಹಾಗೂ ಸುರೇಶ್(23) ಮೃತ ದುರ್ದೈವಿಗಳು. ಇವರು ಮೈಸೂರಿನ ಜೆ.ಪಿ.ನಗರದ ಮಹದೇವುಪರದಲ್ಲಿ ವಾಸವಿದ್ದರು.

    ರೇಷನ್ ಅಕ್ಕಿಗಾಗಿ ಬೈಯೋಮೆಟ್ರಿಕ್ (ಥಂಬ್ ಇಂಪ್ರೆಷನ್) ಕೊಡಲು ಕಟ್ಟೆಹುಣಸೂರಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕೆಎಸ್ಆರ್‌ಟಿಸಿ ಬಸ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತಂದೆ ಹಾಗೂ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮೈಸೂರು ಗ್ರಾಮಾಂತರ ಪೊಲೀಸ್ ಪರಿಶೀಲನೆ ನಡೆಸಿದ್ದಾರೆ. ಪ್ರಕಾಶ್ ಹಾಗೂ ಸುರೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಮೈಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.