Tag: ಅಪ್ಪಚ್ಚು ರಂಜನ್

  • ಕೊಡಗಿನ ವೀರಯೋಧ ಅಜ್ಜಮಾಡ ದೇವಯ್ಯರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

    ಕೊಡಗಿನ ವೀರಯೋಧ ಅಜ್ಜಮಾಡ ದೇವಯ್ಯರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

    ಮಡಿಕೇರಿ: ಭಾರತ ಪಾಕ್ ನಡುವೆ 1965ರಲ್ಲಿ ನಡೆದ ಯುದ್ಧದಲ್ಲಿ ಶತ್ರು ರಾಷ್ಟ್ರದ ವಿಮಾನವನ್ನು ಹೊಡೆದುರುಳಿಸಿ ವೀರಮರಣವನ್ನಪ್ಪಿದ ಕೊಡಗಿನ ವೀರಯೋಧ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಆರು ಮೂಕ್ಕಾಲು ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದ್ದು, ನಗರದ ದೇವಯ್ಯ ವೃತ್ತದಲ್ಲಿ ಇಂದು ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

    ಅಜ್ಜಮಾಡ ಕುಟುಂಬಸ್ಥರು, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಮೆಮೋರಿಯಲ್ ಟ್ರಸ್ಟ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂ ಮತ್ತು ಕೊಡವ ಮಕ್ಕಡ ಕೂಟ ಆಶ್ರಯದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೇರವೇರಿಸಲಾಯಿತು. ಈ ಸಂದರ್ಭ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಪ್ರತಿಮೆ ತಲೆಎತ್ತಲಿರುವ ಜಾಗದಲ್ಲಿ ಇರುವ ಹೈ ಮಾಸ್ಕ್ ದೀಪವನ್ನು ನಾಳೆಯೇ ತೆರವುಗೊಳಿಸಬೇಕು, ನಾಳೆಯಿಂದಲೇ ಇಲ್ಲಿ ಪ್ರತಿಮೆ ನಿರ್ಮಾಣ ಸಂಬಂಧ ಕಾಮಗಾರಿ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಮೊಮೇರಿಯಲ್ ಟ್ರಸ್ಟ್ ನ ಅಜ್ಜಮಾಡ ಕಟ್ಟಿ ಮಂದಯ್ಯ, ನಿವೃತ್ತ ಏರ್ ಮಾರ್ಷಲ್ ನಂದಾ ಕಾರ್ಯಪ್ಪ, ಮಾಜಿ ಸೈನಿಕರು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

    ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಕಂಚಿನ ಪತ್ರಿಮೆ ಈಗಾಗಲೇ ಸಿದ್ಧವಾಗಿದ್ದು, ಅಜ್ಜಮಾಡ ಐನ್‍ಮನೆಯಲ್ಲಿದೆ. ಕಂಚಿನ ಪ್ರತಿಮೆಗೆ 20 ಲಕ್ಷ ರೂ. ವೆಚ್ಚವಾಗಿದೆ. ಬೆಂಗಳೂರಿನ ಕೆಂಗೇರಿಯಲ್ಲಿ ಪುತ್ಥಳಿಯನ್ನು ಸಿದ್ಧಗೊಳಿಸಲಾಗಿದೆ.

    ಯಾರಿದು ಅಜ್ಜಮಾಡ ದೇವಯ್ಯ?
    ದೇವಯ್ಯ ವಿರಾಜಪೇಟೆ ತಾಲೂಕಿನ ಕುಟ್ಟ ಸಮೀಪದ ಮಂಚಳ್ಳಿ ಗ್ರಾಮದ ಅಜ್ಜಮಾಡ ಕುಟುಂಬದ ಬೋಪಯ್ಯ ಹಾಗೂ ನೀಲಮ್ಮ ದಂಪತಿ ಪುತ್ರ. 1932 ಡಿ. 24ರಂದು ದೇವಯ್ಯ ಅವರು ಜನಿಸಿದರು. ದೇವಯ್ಯ ಅವರು 1954 ಡಿಸೆಂಬರ್ 6ರಂದು ಭಾರತೀಯ ವಾಯುಪಡೆಯ ಪೈಲಟ್ ಆಗಿ ನೇಮಕಗೊಂಡರು. 1965ರಲ್ಲಿ ಪಾಕಿಸ್ತಾನ ಭಾರತದ ಯುದ್ಧದಲ್ಲಿ ಅಜ್ಜಮಾಡ ದೇವಯ್ಯ ಪಾಕಿಸ್ತಾನದ ಮೇಲೆ ಬಾಂಬ್ ದಾಳಿ ನಡೆಸಿ ಹಿಂತಿರುಗುತ್ತಿದ್ದಾಗ ಪಾಕಿಸ್ತಾನದ ಯುದ್ಧ ವಿಮಾನ ಹಿಂಬಾಲಿಸಿ ಬರುತಿತ್ತು. ದೇವಯ್ಯ ಅವರು ಈ ಸಂದರ್ಭ ಪಾಕ್ ಸೈನಿಕರಿಂದ ತಪ್ಪಿಸಿಕೊಳ್ಳುವ ಎಲ್ಲ ಅವಕಾಶವೂ ಇತ್ತು. ಆದರೂ ಅವರು ಭಾರತದ ಉಳಿದ ವಿಮಾನಗಳ ರಕ್ಷಣೆಗಾಗಿ ಪಾಕ್ ವಿಮಾನದೊಂದಿಗೆ ಕಾದಾಟಕ್ಕೆ ನಿಂತು, ತಮ್ಮ ದುರ್ಬಲ ವಿಮಾನದಲ್ಲಿ ಕೆಚ್ಚೆದೆಯಿಂದ ನೇರವಾಗಿ ಹೋರಾಡಿ, ಶತ್ರುವಿನ ವಿಮಾನವನ್ನು ಹೊಡೆದುರುಳಿಸಿ ತಾವು ಕೂಡ ಹುತಾತ್ಮರಾದರು.

    1965ರಲ್ಲಿ ದೇವಯ್ಯ ಅವರ ಫೈಟರ್ ವಿಮಾನ ಕಣ್ಮರೆಯಾದ ನಂತರ ಅವರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಸೇನೆ ಅವರನ್ನು ನಾಪತ್ತೆಯಾದವರ ಪಟ್ಟಿಗೆ ಸೇರಿಸಿತ್ತು. ಆದರೆ 1979ರಲ್ಲಿ ಬ್ರಿಟನ್ ಲೇಖಕರೊಬ್ಬರು ಬರೆದ ಪುಸ್ತಕದಲ್ಲಿ ದೇವಯ್ಯ ತನ್ನ ಪ್ರಾಣ ಹಂಗನ್ನು ತೊರೆದು ದೇಶದ ರಕ್ಷಣೆಗೆ ಮುಂದಾದ ಸಂದರ್ಭವನ್ನು ಹೇಳಿದ್ದರು. ನಂತರ ಸರ್ಕಾರ ದೇವಯ್ಯ ಅವರನ್ನು ಹುತಾತ್ಮರೆಂದು ಪರಿಗಣಿಸಿ 1988ರಲ್ಲಿ ಮರಣೋತ್ತರ ಮಹಾವೀರ್ ಪ್ರಶಸ್ತಿ ನೀಡಿ ಗೌರವಿಸಿತ್ತು.

  • ನನಗೂ ಸಚಿವ ಸ್ಥಾನ ಬೇಕು: ಅಪ್ಪಚ್ಚು ರಂಜನ್

    ನನಗೂ ಸಚಿವ ಸ್ಥಾನ ಬೇಕು: ಅಪ್ಪಚ್ಚು ರಂಜನ್

    ಮಡಿಕೇರಿ: ಐದು ಬಾರಿ ಶಾಸಕನಾಗಿ ಗೆದ್ದಿರುವ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಮಡಿಕೇರಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೆದ್ದು ಬರುವ ಅನರ್ಹ ಶಾಸಕರಿಗೆ ಸಚಿವ ಸ್ಥಾನ ಕೊಡ್ತೇವೆ ಎಂದು ಪಕ್ಷ ಹೇಳಿದೆ. ಹೀಗಾಗಿ ಅವರಿಗೆ ಕೊಟ್ಟು ಉಳಿದ ಸ್ಥಾನಗಳಲ್ಲಿ ನನಗೂ ಸಚಿವ ಸ್ಥಾನ ಬೇಕು ಎಂದು ಶಾಸಕರು ತಿಳಿಸಿದರು. ಇದನ್ನೂ ಓದಿ: ಸಚಿವ ಸ್ಥಾನ ಕೊಟ್ರೆ ನಿಭಾಯಿಸುವೆ: ಶಾಸಕ ಕೆ.ಜಿ ಬೋಪಯ್ಯ

    ಈ ಹಿಂದೆಯೂ ನನಗೆ ಸಚಿವ ಸ್ಥಾನ ಕೈತಪ್ಪಿದೆ. ಈಗಲಾದರೂ ಸಿಗುತ್ತೇ ಅನ್ನೋ ನಿರೀಕ್ಷೆಯಲ್ಲಿದ್ದೇನೆ. ಎಲ್ಲವೂ ಹೈಕಮಾಂಡ್‍ಗೆ ಬಿಟ್ಟ ವಿಷಯ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದರು.

    ಇದೇ ವೇಳೆ ಟಿಪ್ಪು ವಿಷಯವನ್ನು ಪಠ್ಯದಲ್ಲಿ ಅಳವಡಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಟಿಪ್ಪು ವಿಷಯ ಪಠ್ಯದಲ್ಲಿ ಉಳಿಸಿಕೊಳ್ಳುವುದಾದರೆ ಆತನ ಕ್ರೌರ್ಯವನ್ನೂ ಉಳಿಸಿಕೊಳ್ಳಬೇಕು. ಅದನ್ನು ಬಿಟ್ಟು ಟಿಪ್ಪುವನ್ನು ಇಂದ್ರ, ಚಂದ್ರ ಎಂದು ಹೊಗಳುವುದು ಬೇಡ. ಪಠ್ಯಪುಸ್ತಕ ತಜ್ಞರ ಸಮಿತಿ ನೀಡಿರುವ ವರದಿಯನ್ನು ನನಗೂ ಕೊಡಬೇಕು. ಆದರೆ ಇದುವರೆಗೆ ನನಗೆ ವರದಿ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಇನ್ನೂ ಎರಡು ಮೂರು ದಿನಗಳಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ಮಾಡುವುದಾಗಿ ತಿಳಿಸಿದರು.

  • ಪಠ್ಯ ಪುಸ್ತಕದಿಂದ ಟಿಪ್ಪು ಪಾಠ ಕೈಬಿಡುವಂತೆ ಶಾಸಕ ಅಪ್ಪಚ್ಚು ರಂಜನ್ ಪತ್ರ

    ಪಠ್ಯ ಪುಸ್ತಕದಿಂದ ಟಿಪ್ಪು ಪಾಠ ಕೈಬಿಡುವಂತೆ ಶಾಸಕ ಅಪ್ಪಚ್ಚು ರಂಜನ್ ಪತ್ರ

    ಮಡಿಕೇರಿ: ಪಠ್ಯ ಪುಸ್ತಕದಿಂದ ಟಿಪ್ಪು ಪಾಠವನ್ನು ಕೈಬಿಡುವಂತೆ ಮಡಿಕೇರಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.

    ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್‍ಗೆ ಪತ್ರ ಬರೆದಿರುವ ಅವರು, ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ. ಆದರೆ ಸ್ವಾತಂತ್ರ್ಯ ಹೋರಾಟಗಾರ ಎಂದು ಪಠ್ಯಪುಸ್ತಕಗಳಲ್ಲಿ ವೈಭವೀಕರಿಸಲಾಗಿದೆ. ಟಿಪ್ಪು ಫ್ರೆಂಚ್‍ರೊಂದಿಗೆ ಕೈ ಜೋಡಿಸಿದ್ದ, ತನ್ನ ಸಾಮ್ರಾಜ್ಯ ವಿಸ್ತರಿಸಿಕೊಳ್ಳಲು ಫ್ರೆಂಚ್ ಸಹಾಯ ಪಡೆಯುತ್ತಿದ್ದನು. ಅಲ್ಲದೆ ಆತ ಹಿಂದೂ ಮತ್ತು ಕ್ರಿಶ್ಚಿಯನ್ ವಿರೋಧಿಯಾಗಿದ್ದ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಮಂಗಳೂರಿನಲ್ಲಿ 50 ಸಾವಿರಕ್ಕೂ ಅಧಿಕ ಕ್ರೈಸ್ತರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ್ದನು. ಕೊಡಗಿನಲ್ಲಿಯೂ ಹಿಂದೂಗಳನ್ನು ಮತಾಂತರ ಮಾಡಿದ್ದ ಮತ್ತು ಹತ್ಯೆ ಮಾಡಿದ್ದ. ಟಿಪ್ಪು ಒಬ್ಬ ಮತಾಂಧನಾಗಿದ್ದ. ಇಂತಹವನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ವೈಭವೀಕರಿಸಲಾಗಿದೆ ಎಂದು ಆರೋಪಿಸಿದ್ದಾರೆ.

    ಈ ಎಲ್ಲ ಕಾರಣಗಳಿಂದ ಪಠ್ಯಪುಸ್ತಕದಿಂದ ಟಿಪ್ಪು ಕುರಿತ ಪಠ್ಯವನ್ನು ಕೈಬಿಡಬೇಕು. ಮುಂದಿನ ದಿನಗಳಲ್ಲಿ ಇತಿಹಾಸ ತಜ್ಞರ ಅಭಿಪ್ರಾಯ ಸಂಗ್ರಹಿಸಿ ಸ್ವಾತಂತ್ರ್ಯ ಹೋರಾಟಗಾರರ ಪಠ್ಯ ಸೇರಿಸಬೇಕು ಎಂದು ಪತ್ರದ ಮೂಲಕ ಅಪ್ಪಚ್ಚು ರಂಜನ್ ಆಗ್ರಹಿಸಿದ್ದಾರೆ.

  • ಶಾಸಕ ಅಪ್ಪಚ್ಚು ರಂಜನ್ ಮನೆ ಮುಂಭಾಗದಲ್ಲಿದ್ದ 6 ಶ್ರೀಗಂಧ ಮರ ಕದ್ದ ಕಳ್ಳರು

    ಶಾಸಕ ಅಪ್ಪಚ್ಚು ರಂಜನ್ ಮನೆ ಮುಂಭಾಗದಲ್ಲಿದ್ದ 6 ಶ್ರೀಗಂಧ ಮರ ಕದ್ದ ಕಳ್ಳರು

    ಮಡಿಕೇರಿ: ಶಾಸಕ ಅಪ್ಪಚ್ಚು ರಂಜನ್ ಮನೆಯ ಗಾರ್ಡನ್ ನಲ್ಲಿ ಇದ್ದ ಬೆಲೆ ಬಾಳುವ ಆರು ಶ್ರೀ ಗಂಧದ ಮರವನ್ನು ಕತ್ತರಿಸಿ ಕಳ್ಳರು ಸಾಗಾಟ ಮಾಡಿದ್ದಾರೆ. ಸೋಮವಾರಪೇಟೆ ತಾಲೂಕಿನ ಕುಂಬೂರು ಗ್ರಾಮದಲ್ಲಿ ತಡರಾತ್ರಿ ಕಳ್ಳತನ ನಡೆದಿದೆ.

    ವಿಧಾನಸಭೆ ಅಧಿವೇಶನ ಹಿನ್ನೆಲೆ ಮನೆಗೆ ಬೀಗ ಹಾಕಿಕೊಂಡು ಪತ್ನಿಯ ಸಮೇತ ಬೆಂಗಳೂರಿಗೆ ಅಪ್ಪಚ್ಚು ರಂಜನ್ ಬಂದಿದ್ದಾರೆ. ಇದನ್ನೇ ಗಮನಿಸಿದ ಕಳ್ಳರು ಮನೆಯ ವಾಚ್ ಮ್ಯಾನ್ ಮಲಗಿದ ಮೇಲೆ ಬಂದು ಮನೆಯ ಗಾರ್ಡನ್ ನಲ್ಲಿ ವಿವಿಧ ಕಡೆ ಇದ್ದ ಮರಗಳನ್ನು ಕಡಿದು ಒಂದೇ ರಾತ್ರಿಯಲ್ಲಿ ಹೊತ್ತುಕೊಂಡು ಹೋಗಿದ್ದಾರೆ.

    ಅಂದಾಜು 2 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಆರು ಶ್ರೀಗಂಧ ಮರವನ್ನು ಕತ್ತರಿಸಿ ಕದ್ದೊಯ್ದಿರುವ ಕಳ್ಳರು, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ಕೃತ್ಯ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಸೋಮವಾರಪೇಟೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

  • ಕೊಡಗಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ, ನೆರೆ ಸಂತ್ರಸ್ತರಿಗೆ ಸೂರು

    ಕೊಡಗಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ, ನೆರೆ ಸಂತ್ರಸ್ತರಿಗೆ ಸೂರು

    ಮಡಿಕೇರಿ: ನದಿ ತೀರದಲ್ಲಿ ಮನೆಗಳನ್ನು ಕಳೆದುಕೊಂಡಿರುವ ಹಾಗೂ ಹಾನಿಗೊಳಗಾದ ಕುಟುಂಬಗಳಿಗೆ ಶಾಶ್ವತ ಸೂರು ಒದಗಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತ ವಿನೂತನ ಚಿಂತನೆ ನಡೆಸಿದ್ದು, ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡಿಕೊಂಡಿರುವ ಜಾಗವನ್ನು ತೆರವು ಗೊಳಿಸಿ ಸಂತ್ರಸ್ತರಿಗೆ ಶಾಶ್ವತ ಸೂರು ಕಟ್ಟಿಕೊಡಲು ತೀರ್ಮಾನಿಸಿದೆ.

    ಕೊಡಗು ಜಿಲ್ಲಾಧಿಕಾರಿ ಹಾಗೂ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಇಗಾಗಲೇ ಜಾಗ ಪರಿಶೀಲನೆ ನಡೆಸುತ್ತಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದಕಾಡು ಹಾಗೂ ಕುಂಬಾರಗುಂಡಿ ಭಾಗದ ನದಿ ತೀರದ ಮನೆಗಳು ಪ್ರವಾಹಕ್ಕೆ ಸಿಲುಕಿ ಹಾನಿಯಾಗಿ ನೂರಾರು ಮನೆಗಳು ಕುಸಿದಿವೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಡಳಿತ ತ್ವರಿತಗತಿಯಲ್ಲಿ ನೆಲ್ಯಹುದಿಕೇರಿಯಲ್ಲಿ ಪೈಸಾರಿ ಜಾಗಗಳನ್ನು ಗುರುತಿಸಿದೆ.

    ಅನೇಕ ವರ್ಷಗಳಿಂದ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡಿಕೊಂಡಿರುವ ಜಾಗವನ್ನು ತೆರವು ಗೊಳಿಸಿ ಸಂತ್ರಸ್ತರಿಗೆ ಸರಕಾರದ ವತಿಯಿಂದ ಶಾಶ್ವತ ಸೂರು ಕಲ್ಪಿಸಲು ನಿರ್ಧರಿಸಲಾಗಿದೆ. ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಸುಮಾರು 50 ಎಕರೆಯಷ್ಟು ಪೈಸಾರಿ ಜಾಗ ಒತ್ತುವರಿಯಾಗಿರುವುದು ಕುಂಡುಬಂದಿದ್ದು, ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ಸರಿ ಸರ್ಕಾರ ಕ್ರಮ ಕೈಗೊಂಡು ಒತ್ತುವರಿ ತೆರವುಗೊಳಿಸುವುದಾಗಿ ಜಿಲ್ಲಾಧಿಕಾರಿ ಅನಿಸ್ ಕಣ್ಮಣಿ ಜಾಯ್ ಹಾಗೂ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

    ಸಿದ್ದಾಪುರ ಸಮೀಪದಲ್ಲೂ ಸಂತ್ರಸ್ತರಿಗಾಗಿ ಮನೆ ನಿರ್ಮಿಸಲು ಜಾಗವನ್ನು ಪರಿಶೀಲಿಸಲಾಗಿದ್ದು, ಕರಡಿಗೋಡು ಸೇರಿದಂತೆ ವಿವಿಧ ಗ್ರಾಮಗಳ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಲು ಚಿಂತನೆ ನಡೆಸಲಾಗಿದೆ. ಸರ್ಕಾರಿ ಜಾಗ ಒತ್ತುವರಿ ಮಾಡಿ ಅಕ್ರಮವಾಗಿ ತೋಟಗಳನ್ನು ನಿರ್ಮಾಣ ಮಾಡಿಕೊಂಡಿದ್ದು, ತೋಟಗಳನ್ನು ತೆರವು ಮಾಡಿ ಲೇಔಟ್ ನಿರ್ಮಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಈ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಸಂತ್ರಸ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅದಷ್ಟು ಬೇಗ ಕಾಮಗಾರಿ ಪ್ರಾರಂಭಿಸಿ, ಸಂತ್ರಸ್ತರಿಗೆ ಸೂರು ಕಲ್ಪಿಸಲಿ ಎಂದು ನಾಗರಿಕರು ಮನವಿ ಮಾಡಿದ್ದಾರೆ.

  • ದೇವೇಗೌಡರದ್ದು ಬ್ಲಾಕ್‍ಮೇಲ್ ತಂತ್ರ- ಅಪ್ಪಚ್ಚು ರಂಜನ್

    ದೇವೇಗೌಡರದ್ದು ಬ್ಲಾಕ್‍ಮೇಲ್ ತಂತ್ರ- ಅಪ್ಪಚ್ಚು ರಂಜನ್

    ಮಡಿಕೇರಿ: ದೇವೇಗೌಡರದ್ದು ಬ್ಲಾಕ್ ಮೇಲ್ ತಂತ್ರವಾಗಿದೆ. ಕಾಂಗ್ರೆಸ್‍ಗೆ ಬ್ಲಾಕ್ ಮೇಲ್ ಮಾಡಿ ಸೀಟಲ್ಲಿ ಗಟ್ಟಿಯಾಗಿ ಕೂರೋ ಪ್ಲಾನ್ ಇದಾಗಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ವಿರುದ್ಧ ಹಾಲಿ ಶಾಸಕ ಅಪ್ಪಚ್ಚು ರಂಜನ್ ಟೀಕೆ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಧ್ಯಂತರ ಚುನಾವಣೆ ನಡೆಯಬಹುದು ಎಂಬ ಮಾಜಿ ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇವೇಗೌಡರು ಪ್ರಧಾನಿ, ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾಗಿದ್ದವರು. ಹೀಗಾಗಿ ಅವರಿಗೆ ಎಲ್ಲಾ ರೀತಿಯ ಸ್ಟ್ರಾಟಜಿ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಇತ್ತ ಸಿದ್ದರಾಮಯ್ಯ ಅವರಿಗೂ ಒಂದು ರೀತಿಯಲ್ಲಿ ಬೇಕಾಗುವಂತ ಕೆಲಸವನ್ನು ಮಾಡುತ್ತಾರೆ. ಒಟ್ಟಿನಲ್ಲಿ ಸ್ಟ್ರಾಟಜಿ ಅನುಭವದಿಂದ ಒಂದು ರೀತಿಯಲ್ಲಿ ಬ್ಲಾಕ್ ಮಾಡಿಕೊಂಡು ಉದ್ದೇಶಪೂರ್ವಕವಾಗಿ ಇಂತಹ ಹೇಳಿಕೆಗಳನ್ನು ಹೇಳಿಕೊಂಡು ಬರುತ್ತಿದ್ದಾರೆ ಎಂದರು.

    ಒಂದು ವೇಳೆ ಮಧ್ಯಂತರ ಚುನಾವಣೆ ನಡೆದರೆ ಇನ್ನು ಕೂಡ ಸರ್ಕಾರಕ್ಕೆ ಹೊರೆಯಾಗಲಿದೆ. ಹೀಗಾಗಿ ಇನ್ನೂ 4 ವರ್ಷ ಚುನಾವಣೆ ಆಗಬಾರದು. ಇವರಿಗೆ ಸರ್ಕಾರ ನಡೆಸಲು ಸಾಧ್ಯವಾಗಿಲ್ಲವಾದ್ರೆ ರಾಜೀನಾಮೆ ಕೊಡಲಿ. ಬಿಜೆಪಿ ಸರ್ಕಾರವೇ ಬರಬೇಕು ಎಂದು ಜನರ ಆದೇಶವಿತ್ತು. ಯಾಕಂದ್ರೆ ಬಿಜೆಪಿ ಸರ್ಕಾರದಲ್ಲಿ 104 ಇದ್ದಿದ್ದು, 105 ಆಗಿದೆ. ಸುಮಾರು ಶೇ.45ರಷ್ಟು ವೋಟು ಕೂಡ ಬಿಜೆಪಿಗೆ ಸಿಕ್ಕಿದೆ. ಬಿಜೆಪಿ ಸರ್ಕಾರವೇ ಬರಬೇಕು ಎಂಬುದು ಕರ್ನಾಟಕ ಜನರ ಚಿಂತನೆಯಾಗಿದೆ. ಹೀಗಾಗಿ ರಾಜೀನಾಮೆ ಕೊಡುವ ಕೆಲಸವನ್ನು ಅವರು ಮೊದಲು ಮಾಡಲಿ. ಸರ್ಕಾರದಿಂದ ಹೊರಗುಳಿದು ಯಾರು ಹೆಚ್ಚು ಗೆದ್ದಿದ್ದಾರೆ ಅವರಿಗೆ ಸರ್ಕಾರ ನಡೆಸಲು ಅವಕಾಶ ಕೊಡುವ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಬಾಯಿಗೆ ಬಂದಂಗೆ ಮಾತಾಡಿ ಕೆರಳಿಸ್ಬೇಡ, ನಾನು ಗಂಡು ಮಗನೇ- ಕಾರ್ಯಕರ್ತನಿಗೆ ಅಪ್ಪಚ್ಚುರಂಜನ್ ಅವಾಜ್

    ಬಾಯಿಗೆ ಬಂದಂಗೆ ಮಾತಾಡಿ ಕೆರಳಿಸ್ಬೇಡ, ನಾನು ಗಂಡು ಮಗನೇ- ಕಾರ್ಯಕರ್ತನಿಗೆ ಅಪ್ಪಚ್ಚುರಂಜನ್ ಅವಾಜ್

    ಮಡಿಕೇರಿ: ಶಾಸಕ ಅಪ್ಪಚ್ಚು ರಂಜನ್ ಅವರನ್ನು ಬಿಜೆಪಿ ಕಾರ್ಯಕರ್ತರೇ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.

    ಕಡಗದಾಳ್ ಗ್ರಾಮಕ್ಕೆ ಅಪ್ಪಚ್ಚುರಂಜನ್ ಚುನಾವಣಾ ಪ್ರಚಾರಕ್ಕೆ ಹೋಗಿದ್ರು. ಈ ವೇಳೆ ಆರ್‍ಎಸ್‍ಎಸ್ ಬಗ್ಗೆ ಅಪ್ಪಚ್ಚುರಂಜನ್ ಉಡಾಫೆ ವರ್ತನೆ ತೋರುತ್ತಿರುವುದಕ್ಕೆ ಬಿಜೆಪಿ ಕಾರ್ಯಕರ್ತರೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:  ಮಸೀದಿಯ ಕೆಲ್ಸ ಮಾಡಿದ್ರಿ, ದೇವಸ್ಥಾನದ ಅಭಿವೃದ್ಧಿ ಯಾಕ್ ಮಾಡಿಲ್ಲವೆಂದ ಯುವಕನಿಗೆ ಆನಂದ್ ಸಿಂಗ್ ಅವಾಜ್

    ನೀವು ಮಾಡ್ತಿರೋದ ಸರೀನಾ ಅಂತಾ ಪ್ರಶ್ನಿಸಿದ್ರು. ಇದ್ರಿಂದ ಕೋಪಗೊಂಡ ಶಾಸಕ ಅಪ್ಪಚ್ಚು ರಂಜನ್, ಕುಳಿತ ಸ್ಥಳದಿಂದ ಎದ್ದು ಬಂದು ಕಾರ್ಯಕರ್ತನಿಗೆ ಅವಾಜ್ ಹಾಕಿದ್ದಾರೆ. ಬಾಯಿಗೆ ಬಂದಂಗೆ ಮಾತಾಡಬೇಡ, ನನ್ನನ್ನ ಕೆರಳಿಸಬೇಡ. ನಾನು ಗಂಡು ಮಗನೇ ಅಂತಾ ಕೈ ತಟ್ಟಿ ಅಪ್ಪಚ್ಚುರಂಜನ್ ಅಬ್ಬರಿಸಿದ್ದಾರೆ. ಇದನ್ನೂ ಓದಿ: ಜಗ್ಗೇಶ್ ಗೆದ್ದರೆ ಹಿಂದು ಗೆದ್ದಂತೆ ಟ್ವೀಟ್ – ವಿಡಿಯೋ ಮೂಲಕ ಯುವತಿಯಿಂದ ಜಗ್ಗೇಶ್‍ಗೆ ತರಾಟೆ

    ಶಾಸಕರ ಈ ನಡೆಗೆ ಬಿಜೆಪಿ ವಲಯದಲ್ಲಿಯೇ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.