Tag: ಅಪಹರಣ

  • ಪಾಕ್‍ನಲ್ಲಿ ಅಪಹರಣ ಆಗಿದ್ದ ಸಿಖ್ ಯುವತಿ ವಾಪಾಸ್ – 8 ಮಂದಿ ಅರೆಸ್ಟ್

    ಪಾಕ್‍ನಲ್ಲಿ ಅಪಹರಣ ಆಗಿದ್ದ ಸಿಖ್ ಯುವತಿ ವಾಪಾಸ್ – 8 ಮಂದಿ ಅರೆಸ್ಟ್

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಯುವಕರ ಗುಂಪೊಂದು ಸಿಖ್ ಯುವತಿಯನ್ನು ಅಪಹರಣ ಮಾಡಿ ಬಲವಂತವಾಗಿ ಮದುವೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ.

    ಈ ಪ್ರಕರಣಕ್ಕೆ ಒತ್ತಡ ಹೆಚ್ಚುತ್ತಿದ್ದಂತೆಯೇ ಯುವತಿಯನ್ನು ಆಕೆಯ ಮನೆಗೆ ಕಳುಹಿಸಿದ್ದರು. ಪಂಜಾಬ್ ಪ್ರಾಂತ್ಯದ ನಂಕನಾ ಸಾಹಿಬ್ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ಆರೋಪಿಯನ್ನು ಬಂಧಿಸಿದ್ದಾರೆ. ಗುರುವಾರ ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪಾಕಿಸ್ತಾನದ ಜೊತೆ ಭಾರತದಲ್ಲೂ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಕೇಂದ್ರ ಸರ್ಕಾರ ಶುಕ್ರವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಸರ್ಕಾರದ ಜೊತೆ ಮಾತುಕತೆ ನಡೆಸಿ ಶೀಘ್ರದಲ್ಲೇ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದೆ. ಇದನ್ನೂ ಓದಿ: ಪಾಕ್‍ನಲ್ಲಿ ಸಿಖ್ ಯುವತಿಯ ಕಿಡ್ನಾಪ್ – ಮತಾಂತರಗೊಳಿಸಿ ಬಲವಂತವಾಗಿ ಮದುವೆ

    ವರದಿಗಳ ಪ್ರಕಾರ, ಯುವತಿಯನ್ನು ಮದುವೆಯಾದ ಮೊಹಮ್ಮದ್ ಹಸನ್ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಸ್ ಸಯ್ಯದ್ ಸಂಘಟನೆಯಾದ ಜಮಾತ್ ಉದ್-ದವಾ ಸದಸ್ಯ ಎಂಬು ಹೇಳಲಾಗುತ್ತಿದೆ.

    ನಡೆದಿದ್ದೇನು?
    ಪಾಕಿಸ್ತಾನದಲ್ಲಿ ಯುವಕರ ಗುಂಪು ಸಿಖ್ ಯುವತಿಯನ್ನು ಅಪಹರಣ ಮಾಡಿ ಬಲವಂತವಾಗಿ ಮತಾಂತರಗೊಳಿಸಿ ಮದುವೆ ಮಾಡಿದ್ದಾರೆ. ಈ ವಿಷಯದ ಕುರಿತು ಯುವತಿಯ ಕುಟುಂಬಸ್ಥರು ಪ್ರಧಾನಿ ಇಮ್ರಾನ್ ಖಾನ್ ಅವರ ಮೊರೆ ಹೋಗಿದ್ದರು. ಗುರುವಾರ ಶಿರೋಮಣಿ ಅಕಾಲಿ ದಳ ಶಾಸಕ ಮಂಜಿಂದರ್ ಎಸ್ ಸಿರ್ಸಾ ಅವರು ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಯುವತಿಯ ಕುಟುಂಬಸ್ಥರು, ತನ್ನ ಸಹೋದರ ಹಾಗೂ ತಂದೆಯನ್ನು ಗುಂಡಿಕ್ಕಿ ಕೊಲೆ ಮಾಡುವುದಾಗಿ ಬೆದರಿಸಿ ಯುವತಿಯನ್ನು ಬಲವಂತವಾಗಿ ಮತಾಂತರಗೊಳಿಸಿದ್ದಾರೆ ಎಂದು ಆರೋಪಿಸಿದ್ದರು.

    ಗುರುವಾರ ಅಪಹರಣ ಆದ ಯುವತಿ ನನ್ನ ಸಹೋದರಿ. ಇಸ್ಲಾಂ ಧರ್ಮವನ್ನು ಒಪ್ಪಲಿಲ್ಲ ಎಂದು ತನ್ನ ತಂದೆ ಹಾಗೂ ಸಹೋದರನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ನನ್ನ ಸಹೋದರಿಯನ್ನು ಹಿಂತಿರುಗಿ ಕರೆದುಕೊಂಡು ಬರಲು ನಾನು ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪಾಕಿಸ್ತಾನದ ಸೇನಾ ಮುಖ್ಯಸ್ಥ ಬಜ್ವಾ ಅವರ ಬಳಿ ಸಹಾಯ ಕೇಳುತ್ತೇನೆ ಎಂದು ಯುವತಿಯ ಸಹೋದರ ಮನ್‍ಮೋಹನ್ ಸಿಂಗ್ ಅವರು ವಿಡಿಯೋದಲ್ಲಿ ತಿಳಿಸಿದ್ದರು.

  • ಪಾಕ್‍ನಲ್ಲಿ ಸಿಖ್ ಯುವತಿಯ ಕಿಡ್ನಾಪ್ – ಮತಾಂತರಗೊಳಿಸಿ ಬಲವಂತವಾಗಿ ಮದುವೆ

    ಪಾಕ್‍ನಲ್ಲಿ ಸಿಖ್ ಯುವತಿಯ ಕಿಡ್ನಾಪ್ – ಮತಾಂತರಗೊಳಿಸಿ ಬಲವಂತವಾಗಿ ಮದುವೆ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಯುವಕರ ಗುಂಪು ಸಿಖ್ ಯುವತಿಯನ್ನು ಅಪಹರಣ ಮಾಡಿ ಬಲವಂತವಾಗಿ ಮತಾಂತರಗೊಳಿಸಿ ಮದುವೆ ಮಾಡಿದ್ದಾರೆ. ಈ ವಿಷಯದ ಕುರಿತು ಯುವತಿಯ ಕುಟುಂಬಸ್ಥರು ಪ್ರಧಾನಿ ಇಮ್ರಾನ್ ಖಾನ್ ಅವರ ಮೊರೆ ಹೋಗಿದ್ದಾರೆ.

    ಗುರುವಾರ ಶಿರೋಮಣಿ ಅಕಾಲಿ ದಳ ಶಾಸಕ ಮಂಜಿಂದರ್ ಎಸ್ ಸಿರ್ಸಾ ಅವರು ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಯುವತಿಯ ಕುಟುಂಬಸ್ಥರು, ತನ್ನ ಸಹೋದರ ಹಾಗೂ ತಂದೆಯನ್ನು ಗುಂಡಿಕ್ಕಿ ಕೊಲೆ ಮಾಡುವುದಾಗಿ ಬೆದರಿಸಿ ಯುವತಿಯನ್ನು ಬಲವಂತವಾಗಿ ಮತಾಂತರಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಗುರುವಾರ ಅಪಹರಣ ಆದ ಯುವತಿ ನನ್ನ ಸಹೋದರಿ. ಇಸ್ಲಾಂ ಧರ್ಮವನ್ನು ಒಪ್ಪಲಿಲ್ಲ ಎಂದು ತನ್ನ ತಂದೆ ಹಾಗೂ ಸಹೋದರನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ನನ್ನ ಸಹೋದರಿಯನ್ನು ಹಿಂತಿರುಗಿ ಕರೆದುಕೊಂಡು ಬರಲು ನಾನು ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪಾಕಿಸ್ತಾನದ ಸೇನಾ ಮುಖ್ಯಸ್ಥ ಬಜ್ವಾ ಅವರ ಬಳಿ ಸಹಾಯ ಕೇಳುತ್ತೇನೆ ಎಂದು ಯುವತಿಯ ಸಹೋದರ ಮನ್‍ಮೋಹನ್ ಸಿಂಗ್ ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.

    ಶಾಸಕ ಮಂಜಿಂದರ್ ಅವರು ಈ ವಿಡಿಯೋ ಟ್ವೀಟ್ ಮಾಡಿ ಅದಕ್ಕೆ, ಬಾಲಕಿಯರನ್ನು ಬಲವಂತವಾಗಿ ಮತಾಂತರ ಮಾಡುತ್ತಿರುವ ವಿಷಯವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕೆಂದು ನಾನು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್. ಜಯಶಂಕರ್ ಅವರ ಬಳಿ ಮನವಿ ಮಾಡಿಕೊಳ್ಳುತ್ತೇನೆ. ಪಾಕಿಸ್ತಾನದಲ್ಲಿ ಸಿಖ್ ಧರ್ಮಕ್ಕೆ ಅಪಾಯವಿದೆ. ಆದ್ದರಿಂದ ಈ ವಿಷಯವನ್ನು ವಿಶ್ವಸಂಸ್ಥೆಯಲ್ಲೂ ಧ್ವನಿ ಎತ್ತಬೇಕು ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಯುವತಿಯ ತಂದೆ ಭಗವಾನ್ ಸಿಂಗ್ ಅವರು ಗುರುದ್ವಾರದ ತಂಬು ಸಾಹೇಬರ ಮುಖ್ಯ ಗ್ರಂಥಿ(ಗುರುದ್ವಾರದಲ್ಲಿ ಗುರು ಗ್ರಂಥ ಸಾಹೀಬ್ ಓದುವ ವ್ಯಕ್ತಿ) ಆಗಿ ಕೆಲಸ ಮಾಡುತ್ತಿದ್ದಾರೆ. ದೂರನ್ನು ಹಿಂಪಡೆಯದಿದ್ದರೆ ಭೀಕರ ಪರಿಣಾಮ ಅನುಭವಿಸುತ್ತೀರಿ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇತ್ತ ಯುವಕರ ಗುಂಪು ವಿಡಿಯೋವೊಂದನ್ನು ವೈರಲ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಯುವತಿ ತನ್ನ ಧರ್ಮವನ್ನು ಬದಲಾಯಿಸಿ ಮುಸ್ಲಿಂ ಯುವಕನ ಜೊತೆ ಮದುವೆಯಾಗಿದ್ದೇನೆ. ಈ ಮದುವೆಗೆ ನನ್ನ ಒಪ್ಪಿಗೆ ಇದೆ ಎಂದು ಎಂದು ಮೂರು ಬಾರಿ ಹೇಳಿದ್ದಾಳೆ.

  • ಅಪಹರಣವಾಗಿದ್ದ ರಾಜ್‍ಕುಮಾರ್ ಬಿಡುಗಡೆಗೆ ಸಹಾಯ ಮಾಡಿದ್ದ ಸಿದ್ಧಾರ್ಥ್

    ಅಪಹರಣವಾಗಿದ್ದ ರಾಜ್‍ಕುಮಾರ್ ಬಿಡುಗಡೆಗೆ ಸಹಾಯ ಮಾಡಿದ್ದ ಸಿದ್ಧಾರ್ಥ್

    ಬೆಂಗಳೂರು: ವರ ನಟ ಡಾ. ರಾಜ್‍ಕುಮಾರ್ ಅವರು 19 ವರ್ಷಗಳ ಹಿಂದೆ ಗಾಜನೂರಿನಿಂದ ಅಪಹರಣಕ್ಕೀಡಾಗಿದ್ದ ಸಂದರ್ಭದಲ್ಲಿ ಕಾಡುಗಳ್ಳ ವೀರಪ್ಪನ್‍ನಿಂದ ಬಿಡುಗಡೆ ಮಾಡಿದ್ದರ ಹಿಂದೆ ಸಿದ್ಧಾರ್ಥ್ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ.

    ಅಪಹರಣದ ಬಳಿಕ ರಾಜಣ್ಣನ ಕುಟುಂಬಸ್ಥರೊಂದಿಗೆ ಸಭೆ ನಡೆಸಿದ ಸಿದ್ಧಾರ್ಥ್ ಅವರು, ತಮಿಳುನಾಡು ಸರ್ಕಾರದ ಸಹಾಯ ಪಡೆದಿದ್ದರು. ಸಿಎಂ ಆಗಿದ್ದ ಎಸ್‍ಎಂ ಕೃಷ್ಣ ಅವರು ಆದಿಕೇಶವಲು ಜೊತೆ ಚೆನ್ನೈಗೆ ಹೋಗಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದರು.

    ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಬಳಸಿಕೊಂಡು ರಾಜ್ ಬಿಡುಗಡೆಗೆ ಪ್ರಯತ್ನಗಳು ಸಿದ್ದಾರ್ಥ್ ನೇತೃತ್ವದಲ್ಲಿ ನಡೆದಿದ್ದವು. ಬಳಿಕ ವೀರಪ್ಪನ್ ಸಂಪರ್ಕದಲ್ಲಿದ್ದ ತಮಿಳುನಾಡಿನ ಧನು, ನೆಡುಮಾರನ್ ಹಾಗೂ ಕೊಳತ್ತೂರು ಮಣಿಯನ್ನು ಸಂಪರ್ಕಿಸಿ ಕೊನೆಗೂ ರಾಜ್‍ಕುಮಾರ್ ಅವರನ್ನು ಬಿಡುಗಡೆ ಮಾಡಲಾಯ್ತು.

    ಇದೆಲ್ಲ ಪರಿಶ್ರಮದ ಹಿಂದೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಇದ್ದರು. ಇಂದು ಅದೇ ಸಿದ್ಧಾರ್ಥ್ ಮಂಗಳೂರಿನ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸೋಮವಾರ ರಾತ್ರಿಯಿಂದ ಸಿದ್ಧಾರ್ಥ್ ಕಾಣೆಯಾಗಿದ್ದರು. ಆ ಬಳಿಕ ಅವರ ಪತ್ತೆಗಾಗಿ ಸಾಕಷ್ಟು ಕುಡುಕಾಟ ನಡೆಸಲಾಗಿತ್ತು.

    ಆದರೆ ಇಂದು ಬೆಳಗ್ಗೆ ಸಿದ್ಧಾರ್ಥ್ ಮೃತದೇಹ ಮಂಗಳೂರು- ಉಳ್ಳಾಲ ನಡುವೆ ಇರುವ ನೇತ್ರಾವತಿ ನದಿ ಸಮೀಪದ ಹೊಯಿಗೆ ಬಜಾರ್ ಎಂಬ ಪ್ರದೇಶದಲ್ಲಿ ದೊರಕಿದೆ. ಇಂದು ಬೆಳಗ್ಗೆ 6.30ರ ಸುಮಾರಿಗೆ ಸ್ಥಳೀಯ ಮೀನುಗಾರರು ಮೀನು ಹಿಡಿಯಲು ಹೋದಾಗ ನದಿಯಲ್ಲಿ ತೇಲಾಡುತ್ತಿದ್ದ ಶವವನ್ನು ಕಂಡು ಅನುಮಾನದಿಂದ ದೋಣಿ ಬದಿಯಲ್ಲಿ ಹಿಡಿದುಕೊಂಡು ದಡ ತಲುಪಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

  • ಚಾಕ್ಲೇಟ್ ಕೊಡ್ತೀನೆಂದು ಮಗುವನ್ನು ಅಪಹರಿಸಿ ಮುಖ್ಯರಸ್ತೆಯಲ್ಲಿ ಬಿಟ್ಟ

    ಚಾಕ್ಲೇಟ್ ಕೊಡ್ತೀನೆಂದು ಮಗುವನ್ನು ಅಪಹರಿಸಿ ಮುಖ್ಯರಸ್ತೆಯಲ್ಲಿ ಬಿಟ್ಟ

    ಬೆಂಗಳೂರು: ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಅಪಹರಿಸಿ, ನಂತರ ವಿಜಯನಗರದ ಮುಖ್ಯರಸ್ತೆಯಲ್ಲಿ ಆಕೆಯನ್ನು ಬಿಟ್ಟು ಹೋಗಿರುವ ಆತಂಕಕಾರಿ ಘಟನೆಯೊಂದು ಸಿಲಿಕಾನ್ ಸಿಟಿಯ ವಿಜಯನಗರದಲ್ಲಿ ಇಂದು ಮಧ್ಯಾಹ್ನ ನಡೆದಿದೆ.

    ಗೋವಿಂದರಾಜನಗರದ ಬಿಬಿಎಂಪಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಈ ಘಟನೆ ನಡೆದಿದೆ. 8 ವರ್ಷದ ಬಾಲಕಿಯನ್ನು ಬೈಕ್ ನಲ್ಲಿ ಬಂದ ವ್ಯಕ್ತಿ ಅಪಹರಿಸಿದ್ದಾನೆ.

    ಬಾಲಕಿ ಮನೆ ಮುಂದೆ ಆಟ ಆಡುತ್ತಿದ್ದಳು. ಈ ವೇಳೆ ಬೈಕ್ ನಲ್ಲಿ ಬಂದ ದುಷ್ಕರ್ಮಿ ಆಕೆಯ ಬಳಿ ತನ್ನ ಬೈಕ್ ನಿಲ್ಲಿಸಿ, ಚಾಕ್ಲೇಟ್ ಆಸೆ ತೋರಿಸಿದ್ದಾನೆ. ಹೀಗೆ ಬಾಲಕಿಯನ್ನು ಪುಸಲಾಯಿಸಿ ಇದ್ದಕ್ಕಿದ್ದಂತೆ ಬೈಕ್ ಹತ್ತಿಸಿಕೊಂಡು ಪರಾರಿಯಾಗಿದ್ದಾನೆ. ಬಾಲಕಿಯನ್ನು ಅಪಹರಿಸಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸರೆಯಾಗಿದೆ.

    ಬಾಲಕಿ ನಗರದ ನಾಗೇಶ್ ಹಾಗೂ ಪುಷ್ಪಲತಾ ದಂಪತಿಯ ಪುತ್ರಿ. ಅಪಹರಿಸಿದ ನಂತರ ಬಾಲಕಿಯನ್ನು ವಿಜಯನಗರದ ಮುಖ್ಯರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತಾಯಿಯಿಂದ್ಲೇ ಮಗಳ ಅಪಹರಣಕ್ಕೆ ಯತ್ನ

    ತಾಯಿಯಿಂದ್ಲೇ ಮಗಳ ಅಪಹರಣಕ್ಕೆ ಯತ್ನ

    ಲಕ್ನೋ: ಉತ್ತರ ಪ್ರದೇಶದ ಸೀತಾಪುರ್ ಎಂಬಲ್ಲಿ ತಾಯಿಯೇ ತನ್ನ ಸ್ವಂತ ಮಗಳನ್ನು ಅಪಹರಣ ಮಾಡಲು ಯತ್ನಿಸಿದ ಆಘಾತಕಾರಿ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ತಾನು ಆಯ್ಕೆ ಮಾಡಿಕೊಂಡ ಯುವಕನ ಜೊತೆ ಇತ್ತೀಚೆಗೆ ಮಗಳು ಮದುವೆ ಮಾಡಿಕೊಂಡಿದ್ದಳು. ಈ ಮದುವೆಗೆ ತಾಯಿಯ ವಿರೋಧವಿತ್ತು. ಮದುವೆಯಾದ ಬಳಿಕ ತನ್ನ ಪತಿ ಜೊತೆ ಮಗಳು ತನ್ನ ತಾಯಿ ಮನೆಗೆ ಬಂದಿದ್ದಾಳೆ. ಈ ವೇಳೆ, ತಾಯಿ ಅಳಿಯನ ವಿರುದ್ಧ ಕಿರುಕುಳದ ಆರೋಪ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

    ಮಗಳ ಮದುವೆಗೆ ತಾಯಿಯ ವಿರೋಧವಿತ್ತು. ಹೀಗಾಗಿ ಕಿರುಕುಳ ನೀಡಿರುವ ಆರೋಪದ ಮೇಲೆ ಅಳಿಯನ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸುತ್ತಿದ್ದೇವೆ. ಆದರೆ ಇಂದು ಜೋಡಿ ಮತ್ತೊಂದು ವಿಚಿತ್ರ ವಿಷಯವನ್ನಿಟ್ಟುಕೊಂಡು ಬಂದಿದ್ದಾರೆ. ತಾಯಿ ನನ್ನನ್ನು ಅಪಹರಣ ಮಾಡಲು ಯತ್ನಿಸಿದ್ದಾಳೆ ಎಂದು ಜೋಡಿ ಪೊಲೀಸ್ ಠಾಣೆಗೆ ಬಂದಿದೆ. ಈ ಸಂಬಂಧವೂ ಕ್ರಮ ಕೈಗೊಂಡಿರುವುದಾಗಿ ಎಎಸ್‍ಪಿ ಮಧುಬಾನ್ ಸಿಂಗ್ ಹೇಳಿದ್ದಾರೆ.

    ಇಬ್ಬರು ವ್ಯಕ್ತಿಗಳೊಂದಿಗೆ ಬಂದ ನನ್ನ ತಾಯಿ ಹಾಗೂ ಸಹೋದರಿ ನನ್ನನ್ನು ಎಳೆದು ಕಾರಿನೊಳಗೆ ಹಾಕಲು ಯತ್ನಿಸಿದ್ದಾರೆ. ಆದರೆ ಇದನ್ನು ನಾನು ವಿರೋಧಿಸಿದ್ದೇನೆ. ನನ್ನ ಮದುವೆಗೆ ತಾಯಿ ವಿರೋಧ ವ್ಯಕ್ತಪಡಿಸಿದ್ದರು. ಆದರೆ ನಾನು ಓಡಿ ಹೋಗಿ ಮದುವೆಯಾಗಿದ್ದೇನೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.

  • ಬೀದರ್‌ನಲ್ಲಿ ಯುವ ಉದ್ಯಮಿ ಕಿಡ್ನಾಪ್

    ಬೀದರ್‌ನಲ್ಲಿ ಯುವ ಉದ್ಯಮಿ ಕಿಡ್ನಾಪ್

    ಬೀದರ್: ನಗರದ ಯುವ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಅಪಹರಣ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದ್ದು, ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

    ನಗರದ ನಿವಾಸಿ ಅಭಿಷೇಕ್ ಇನಾನಿ ಅಪಹರಣವಾದ ಯುವ ಉದ್ಯಮಿ. ಅಭಿಷೇಕ್ ಅವರು ಬುಧವಾರ ಸಂಜೆ ಕಂಪನಿ ಕೆಲಸ ಮುಗಿಸಿ ಸ್ಕೂಟಿಯಲ್ಲಿ ಬರುತ್ತಿದ್ದರು. ಈ ವೇಳೆ ಕೋಳಾರದ ಕೈಗಾರಿಕಾ ಪ್ರದೇಶದಲ್ಲಿರುವ ಆಂಜನೇಯ ದೇವಸ್ಥಾನ ಸಮೀಪದ ನಿರ್ಜನ ಪ್ರದೇಶದಲ್ಲಿ ಅಪಹರಣ ಮಾಡಿದ್ದಾರೆ.

    ಅಭಿಷೇಕ್ ಅವರು ಕೋಳಾರ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ದಾಲ್ ಮಿಲ್ ಫ್ಯಾಕ್ಟರಿ ನಡೆಸುತ್ತಿದ್ದರು. ಅಪಹರಣಕ್ಕೂ ಎರಡು ದಿನ ಮುಂಚೆ ಅಭಿಷೇಕ್ ಅವರಿಗೆ ದುಷ್ಕರ್ಮಿಗಳು ಕರೆ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಅಭಿಷೇಕ್ ಅವರು ಬೀದರ್ ಜಿಲ್ಲಾ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅವರಿಗೆ ದೂರು ನೀಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ದುಷ್ಕರ್ಮಿಗಳು ಹಣದಾಸೆಗೆ ಅಭಿಷೇಕ್ ಅವರನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬುಧವಾರ ರಾತ್ರಿಯಿಂದಲೇ ಶೋಧ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

  • ನಶೆ ಬರುವ ಜ್ಯೂಸ್‍ ನೀಡಿ, ಬಾಲಕಿಯನ್ನು ಸ್ಮಶಾನಕ್ಕೆ ಹೊತ್ತೊಯ್ದು ಗ್ಯಾಂಗ್‍ರೇಪ್

    ನಶೆ ಬರುವ ಜ್ಯೂಸ್‍ ನೀಡಿ, ಬಾಲಕಿಯನ್ನು ಸ್ಮಶಾನಕ್ಕೆ ಹೊತ್ತೊಯ್ದು ಗ್ಯಾಂಗ್‍ರೇಪ್

    ಜೈಪುರ: ಜ್ಯೂಸ್‍ನಲ್ಲಿ ನಶೆ ಬರುವ ರಾಸಾಯನಿಕ ಬೆರೆಸಿ, ಇಬ್ಬರು ಕಾಮುಕರು 17 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಬೂಂದಿ ಜಿಲ್ಲೆಯಲ್ಲಿ ನಡೆದಿದೆ.

    ಬಾಲಕಿಯು ನೈನ್ವಾ ನಗರದಲ್ಲಿರುವ ಚಿಕ್ಕಮ್ಮನ ಮನೆಗೆ ತೆರಳಲು ಶನಿವಾರ ಸಂಜೆ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಳು. ಅವಳ ಊರಿನವರೇ ಆದ ಇಬ್ಬರು ಯುವಕರು ಬಸ್ ನಿಲ್ದಾಣದ ಬಳಿ ಬಂದು ಆಕೆಯನ್ನು ಮಾತನಾಡಿಸಿದ್ದಾರೆ. ನಂತರ ಜ್ಯೂಸ್ ಕುಡಿಯುವಂತೆ ಒತ್ತಾಯಿಸಿದ್ದಾರೆ. ಜ್ಯೂಸ್ ಕುಡಿಯುತ್ತಿದ್ದಂತೆ ಬಾಲಕಿ ಪ್ರಜ್ಞಾಹೀನಳಾಗಿದ್ದಾಳೆ. ಆಗ ಯುವಕರು ಆಕೆಯನ್ನು ಹೊತ್ತೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ನೈನ್ವಾ ಠಾಣೆಯ ಪೊಲೀಸ್ ಅಧಿಕಾರಿ ಲಖನ್ ಲಾಲ್ ತಿಳಿಸಿದ್ದಾರೆ.

    ಜ್ಯೂಸ್ ಕುಡಿಸಿ, ಅಪಹರಣ: ಘಟನೆ ಶನಿವಾರ ನಡೆದಿದ್ದು, ಬಾಲಕಿ ಬುಧವಾರ ದೂರು ದಾಖಲಿಸಿದ್ದಾಳೆ. ಆರೋಪಿ ಅರವಿಂದ ದರೋಗಾ ಮತ್ತು ರಾಜಕುಮಾರ್ ಮಾಲಿ ಎಂಬುವರು ಜ್ಯೂಸ್ ನೀಡಿದರು. ನಾನು ತಿರಸ್ಕರಿಸಿದರೂ ಒತ್ತಾಯಪೂರ್ವಕವಾಗಿ ಜ್ಯೂಸ್ ಕುಡಿಸಿದರು. ಕುಡಿಯುತ್ತಿದ್ದಂತೆ ತಲೆ ಸುತ್ತಿದ ಹಾಗಾಯಿತು. ಆಗ ಸಹಾಯ ಮಾಡುವ ನೆಪದಲ್ಲಿ ನನ್ನನ್ನು ಹೊತ್ತುಕೊಂಡು ದುಗರಿ ಗ್ರಾಮದ ಸಮೀಪವಿರುವ ಸ್ಮಶಾನದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿರುವ ಕುರಿತು ಬಾಲಕಿ ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಳು ಈ ಕೃತ್ಯದ ವಿಡಿಯೊ ರೆಕಾರ್ಡ್ ಮಾಡಿಕೊಂಡಿದ್ದು, ಯಾರಿಗಾದರೂ ಹೇಳಿದರೆ ಅಥವಾ ದೂರು ನೀಡಿದರೆ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಅಪ್‍ಲೋಡ್ ಮಾಡುವುದಾಗಿ ಹೆದರಿಸಿದ್ದಾರೆ. ಭಾನುವಾರ ರಾತ್ರಿ ನೈನ್ವಾಳನ್ನು ಪೊಲೀಸ್ ಠಾಣೆಯ ಬಳಿ ಬಿಡಲಾಗಿತ್ತು ಲಖನ್ ಲಾಲ್ ತಿಳಿಸಿದ್ದಾರೆ.

    ಘಟನೆ ಕುರಿತು ಬಾಲಕಿಯು ತನ್ನ ತಂದೆಯ ಬಳಿ ಹೇಳಿಕೊಂಡಿದ್ದು, ಬುಧವಾರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು ಐಪಿಸಿ ಸೆಕ್ಷನ್ 363(ಅಪಹರಣ) ಮತ್ತು 376-ಡಿ(ಅತ್ಯಾಚಾರ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಲಾಲ್ ತಿಳಿಸಿದ್ದಾರೆ.

  • ತಾಯಿ ಮೇಲಿದ್ದ ಆಸೆಗೆ 9 ವರ್ಷದ ಮಗಳನ್ನು ಅಪಹರಿಸಿದ

    ತಾಯಿ ಮೇಲಿದ್ದ ಆಸೆಗೆ 9 ವರ್ಷದ ಮಗಳನ್ನು ಅಪಹರಿಸಿದ

    ನವದೆಹಲಿ: ಪ್ರೀತಿಯನ್ನು ಮಹಿಳೆ ತಿರಸ್ಕರಿಸಿದ್ದಕ್ಕೆ ಸಿಟ್ಟಾದ ವ್ಯಕ್ತಿಯೊಬ್ಬ ಸೇಡಿಗಾಗಿ 9 ವರ್ಷ ಮಗಳನ್ನು ಅಪಹರಣಗೈದ ಘಟನೆ ದೆಹಲಿಯಲ್ಲಿ ನಡೆದಿದೆ.

    ಆರೋಪಿಯನ್ನು 28 ವರ್ಷದ ಕಮಲೇಶ್ ಎಂದು ಗುರುತಿಸಲಾಗಿದೆ. ಪತಿಯಿಂದ ದೂರವಾಗಿರುವ ಮಹಿಳೆ ತಾನೇ ದುಡಿದುಕೊಂಡು ಮೂವರು ಹೆಣ್ಣು ಮಕ್ಕಳು ಮತ್ತು ಮಗನನ್ನು ಸಾಕುತ್ತಿದ್ದಾಳೆ.

    ಮೂರು ತಿಂಗಳ ಹಿಂದೆ ಮಹಿಳೆ ಕಮಲೇಶ್ ನನ್ನು ಭೇಟಿಯಾಗಿದ್ದರು. ತಮ್ಮ ರೂಮ್‍ನ ಮೇಲ್ಛಾವಣಿ ರಿಪೇರಿ ಮಾಡಿಸಲು ಕಮಲೇಶ್‍ನನ್ನು ಮಹಿಳೆ ಕೆಲಸಕ್ಕೆ ಕರೆದಿದ್ದರು. ಹೀಗೆ ಕೆಲವು ಬಾರಿ ಭೇಟಿಯ ಬಳಿಕ ಆತನಿಗೆ ಮಹಿಳೆ ಮೇಲೆ ಪ್ರೀತಿ ಹುಟ್ಟಿದೆ. ಈ ಬಗ್ಗೆ ಮಹಿಳೆಗೆ ಕಮಲೇಶ್ ತಿಳಿಸಿ, ಮದುವೆಯಾಗೋಣ ಎಂದಾಗ ಆಕೆ ನಿರಾಕರಿಸಿದ್ದಾರೆ.

    ಇದರಿಂದ ಸಿಟ್ಟಿಗೆದ್ದ ಕಮಲೇಶ್ ಹೇಗಾದರೂ ಮಹಿಳೆಯನ್ನು ಮದುವೆಯಾಗಬೇಕು ಎಂದು ನಿರ್ಧಸಿದ್ದಾನೆ. ಆಗ ಆಕೆಯ ಮಗಳನ್ನು ಅಪಹರಿಸಿ, ಹೆದರಿಸಿ ಮಹಿಳೆಯನ್ನು ಮದುವೆಯಾಗಲು ಮುಂದಾಗಿದ್ದನು. ಭಾನುವಾರ ಅಂಗಡಿಗೆ ಬಾಲಕಿ ಹೋದಾಗ ಆಕೆಯನ್ನು ಆರೋಪಿ ಅಪಹರಿಸಿ ಉತ್ತರ ಪ್ರದೇಶಕ್ಕೆ ಕರೆದೋಯ್ದಿದ್ದಾನೆ. ಆದರೆ ಅಂಗಡಿಗೆ ಹೋದ ಮಗಳು ವಾಪಸ್ ಬಾರದೇ ಇದ್ದಾಗ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ಸಂಬಂಧ ಪೊಲೀಸರು ತನಿಖೆಗೆ ಇಳಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ದೆಹಲಿಯಿಂದ ಉತ್ತರ ಪ್ರದೇಶಶಕ್ಕೆ ಬಾಲಕಿಯನ್ನು ಆರೋಪಿ ರೈಲಿನಲ್ಲಿ ಕರೆದೋಯ್ಯುತ್ತಿರುವ ಬಗ್ಗೆ ಮಾಹಿತಿ ತಿಳಿದ ತಕ್ಷಣ ಯುಪಿ ಪೊಲೀಸರಿಗೆ ದೆಹಲಿ ಪೊಲೀಸರು ತಿಳಿಸಿದ್ದಾರೆ. ಅವರ ಸಹಾಯದಿಂದ ಆರೋಪಿಯನ್ನು ಯಶಸ್ವಿಯಾಗಿ ಸೆರೆಹಿಡಿದು, ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದಾರೆ.

  • ಪ್ರೇಯಸಿಯ ತಂದೆಯನ್ನು ಕಿಡ್ನಾಪ್ ಮಾಡಿ ‘ಒಳ್ಳೆ ಹುಡ್ಗ ಮದ್ವೆಯಾಗು’ ಎಂದು ಹೇಳಿಸ್ದ

    ಪ್ರೇಯಸಿಯ ತಂದೆಯನ್ನು ಕಿಡ್ನಾಪ್ ಮಾಡಿ ‘ಒಳ್ಳೆ ಹುಡ್ಗ ಮದ್ವೆಯಾಗು’ ಎಂದು ಹೇಳಿಸ್ದ

    ನವದೆಹಲಿ: 24 ವರ್ಷದ ಯುವಕನೊಬ್ಬ ಪ್ರಿಯತಮೆಗಾಗಿ ಆಕೆಯ ತಂದೆಯನ್ನೇ ಅಪಹರಿಸಿ ಅರೆಸ್ಟ್ ಆಗಿದ್ದಾನೆ.

    ಸಂಜು ಬಂಧಿತ ಆರೋಪಿ. ಪೊಲೀಸರು ಸಂಜುವನ್ನು ಉತ್ತರ ಪ್ರದೇಶದ ಮಥುರಾ ಪಟ್ಟಣದಲ್ಲಿ ಬಂಧಿಸಿದ್ದಾರೆ.

    ಭಾನುವಾರ ಬೆಳಗ್ಗೆ ತನ್ನ ಮೂವರು ಸ್ನೇಹಿತರ ಜೊತೆ ಸಂಜು ದ್ವಾರಾಕಾದಲ್ಲಿರುವ ಅಂಗಡಿಯಿಂದ ಯುವತಿಯ ತಂದೆಯನ್ನ ಅಪಹರಿಸಿದ್ದಾನೆ. ನಂತರ ಸಂಜು ಯುವತಿಯ ತಂದೆಯನ್ನು ಕೂಡಿ ಹಾಕಿ ಮಗಳಿಗೆ ಫೋನ್ ಮಾಡಿಸಿ ‘ಸಂಜು ತುಂಬಾ ಒಳ್ಳೆಯ ಹುಡುಗ, ಆತನನ್ನು ಮದುವೆಯಾಗು’ ಎಂದು ಬಲವಂತವಾಗಿ ಹೇಳಿಸಿದ್ದಾನೆ.

    ಈ ವೇಳೆ ತಂದೆ, ತನ್ನನ್ನು ಹರ್ಯಾಣದ ಸೋನಿಪತ್‍ನಲ್ಲಿ ಕೂಡಿ ಹಾಕಿರುವುದಾಗಿ ತಿಳಿಸಿದ್ದಾರೆ. ಪೊಲೀಸರು ಫೋನ್ ಕರೆ ಲೋಕೇಶನ್ ಪರಿಶೀಲಿಸಿ ಮಥುರಾದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಎಸಿಪಿ ರಾಜೇಂದರ್ ಸಿಂಗ್ ಯಾದವ್ ಮತ್ತು ಸಂಜಯ್ ಕುಮಾರ್ ನೇತೃತ್ವದ ತಂಡವು ಯುವತಿಯ ತಂದೆಯನ್ನು ರಕ್ಷಿಸಿದ್ದಾರೆ ಎಂದು ಡಿಸಿಪಿ ಆಂಟೊ ಆಲ್ಫೋನ್ಸ್ ಹೇಳಿದ್ದಾರೆ.

    ತನಿಖೆ ವೇಳೆ, ಯುವತಿ ಸಂಜು ಪರಿಚಯವಿದ್ದನು. ಹೀಗಾಗಿ ಆತನೇ ನನ್ನ ತಂದೆಯನ್ನು ಅಪಹರಣ ಮಾಡಿರಬಹುದು ಎಂದು ಶಂಕಿಸಿದ್ದರು. ಬಳಿಕ ನಾವು ಆತ ಫೋನ್ ಮಾಡಿದ್ದಾಗ ಲೋಕೇಶನ್ ಟ್ರೇಸ್ ಮಾಡಿ ಬಂಧಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ನಾನು ಯುವತಿಯನ್ನು ಪ್ರೀತಿ ಮಾಡುತ್ತಿದ್ದು, ಮದುವೆಯಾಗಬೇಕೆಂದು ಬಯಸಿದ್ದೆ. ಆದರೆ ಇದಕ್ಕೆ ಯುವತಿಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಆಕೆಯನ್ನು ಊರಿಗೆ ಕಳಿಸಿಬಿಟ್ಟಿದ್ದರು ಎಂದು ಹೇಳಿದ್ದಾನೆ. ಅದಕ್ಕೆ ಸ್ನೇಹಿತರ ಸಹಾಯದಿಂದ ಈ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಸಂಜು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

    ಸದ್ಯಕ್ಕೆ ಈ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸಂಜುಗೆ ಸಹಾಯ ಮಾಡಿದ್ದ ಮೂವರು ಸ್ನೇಹಿತರಿಗಾಗಿ ಪೊಲೀಸರು ಹುಡುಕಾಟ ಮಾಡುತ್ತಿದ್ದಾರೆ.

  • ಅಂಧ ದಂಪತಿಯ ಮಗು ಕಿಡ್ನಾಪ್ ಪ್ರಕರಣ – 3 ದಿನಗಳ ಬಳಿಕ ಮಗು ಪತ್ತೆ

    ಅಂಧ ದಂಪತಿಯ ಮಗು ಕಿಡ್ನಾಪ್ ಪ್ರಕರಣ – 3 ದಿನಗಳ ಬಳಿಕ ಮಗು ಪತ್ತೆ

    ಬೆಂಗಳೂರು: ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಏ.27 ರಂದು ಅಂಧ ದಂಪತಿಯ ಮಗು ಕಿಡ್ನಾಪ್ ಆಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಮಹಿಳೆಯೊಬ್ಬರು ಮಗುವನ್ನು ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ.

    ರಾಯಚೂರಿನ ರಾಯದುರ್ಗಾ ಮೂಲದ ಬಸವರಾಜು, ಚಿನ್ನು ದಂಪತಿಯ ಎಂಟು ತಿಂಗಳ ಮಗು ಸಾಗರ್‍ನನ್ನು ಮಹಿಳೆಯೊಬ್ಬಳು ಸಹಾಯ ಮಾಡುವ ನೆಪದಲ್ಲಿ ಕಿಡ್ನಾಪ್ ಮಾಡಿದ್ದಳು. ಮಗು ಕಳೆದುಕೊಂಡ ಬಗ್ಗೆ ದಂಪತಿ ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ಕೂಡ ವರದಿ ಮಾಡಿತ್ತು.

    ಈ ನಡುವೆಯೇ ನಗರದ ಕೆಂಗೇರಿ ನಿವಾಸಿ ಪಾರ್ವತಮ್ಮ ಎಂಬವರು ಮಗು ಸಾಗರ್‍ನನ್ನು ಇಂದು ಉಪ್ಪಾರಪೇಟೆ ಪೊಲೀಸ್ ಠಾಣೆ ತಂದು ಒಪ್ಪಿಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ, ಈ ಮಗು ನಮಗೆ ಎರಡು ದಿನದ ಹಿಂದೆ ಇದೇ ಮೆಜೆಸ್ಟಿಕ್ ಬಳಿ ಬಸ್‍ಗೆ ಕಾಯುತ್ತಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರು ಕೊಟ್ಟರು. ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿದ ಕಾರಣ ನಾನು ಮಗುವನ್ನು ನೋಡಿಕೊಳ್ಳಲು ಒಪ್ಪಿದೆ. ಆದರೆ ಆ ಬಳಿಕ ಮಹಿಳೆ ಎಷ್ಟು ಸಮಯ ಕಾದರು ಬರಲಿಲ್ಲ. ಏನು ಮಾಡುವುದೆಂದು ತಿಳಿಯದೇ ಮಗುವನ್ನು ಮನೆಗೆ ತೆಗೆದುಕೊಂಡು ಬಂದು ನಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದೆ. ಮಾಧ್ಯಮಗಳಲ್ಲಿ ಮಗುವಿನ ಸುದ್ದಿ ಪ್ರಸಾರ ವೇಳೆ ನನಗೆ ಇದರ ಅರಿವಾಗಿದ್ದು, ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ.

    ಸದ್ಯ ಮಗು ಸಿಕ್ಕಿರುವುದಿಂದ ಪ್ರಕರಣವನ್ನು ಕೈ ಬಿಡುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದು, ಮಗು ಅಪಹರಣ ಹಿಂದಿನ ಮಹಿಳೆ ಯಾರು? 3 ದಿನಗಳ ಬಳಿಕ ಮಗು ಪತ್ತೆಯಾದ ಹಿಂದಿನ ಘಟನೆ ಬಗ್ಗೆ ಹಲವು ಅನುಮಾನಗಳು ಇರುವ ಕಾರಣ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಕಳೆದುಕೊಂಡಿದ್ದ ಮಗು ಮತ್ತೆ ತಾಯಿಯ ಮಡಿಲು ಸೇರಿದ್ದರಿಂದ ದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ.