Tag: ಅಪಹರಣ

  • ಕಾರಿನ ಚಕ್ರಗಳನ್ನು ಕದಿಯುತ್ತಿದ್ದ ಇಬ್ಬರ ಬಂಧನ

    ಕಾರಿನ ಚಕ್ರಗಳನ್ನು ಕದಿಯುತ್ತಿದ್ದ ಇಬ್ಬರ ಬಂಧನ

    ಶಿವಮೊಗ್ಗ: ವ್ಯಕ್ತಿ ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಹಾಗೂ ಪ್ರತಿಷ್ಠಿತ ಕಂಪನಿಯ ಕಾರುಗಳ ಚಕ್ರಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಿನೋಬನಗರ ಪೊಲೀಸರು ಬಂಧಿಸಿದ್ದಾರೆ.

    ಭದ್ರಾವತಿಯ ಹಳೆನಗರ ಬಡಾವಣೆಯ ನಿತಿನ್ ಶೆಟ್ಟಿ (25), ಧರ್ಮ (30) ಬಂಧಿತ ಆರೋಪಿಗಳು.

    ವಿನೋಬನಗರ ಠಾಣಾ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಸ್ವಿಪ್ಟ್ ಕಾರಿನಲ್ಲಿ ಬಂದ ಇಬ್ಬರು, ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದನ್ನು ಗಮನಿಸಿ ಕಾರನ್ನು ಹಿಂದಕ್ಕೆ ತಿರುಗಿಸಿಕೊಂಡು ಹೋಗಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಕಾರನ್ನು ಬೆನ್ನಟ್ಟಿ ತಪಾಸಣೆ ಮಾಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

    ಇತ್ತೀಚೆಗೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪ ಸಹ ಈ ಆರೋಪಿಗಳ ಮೇಲಿದೆ. ಆರೋಪಿಗಳಿಂದ 60 ಸಾವಿರ ನಗದು, ಮಾರುತಿ ಸ್ವಿಪ್ಟ್ ಕಾರು ಹಾಗೂ ಕಳ್ಳತನ ಮಾಡಿದ್ದ ಕಾರಿನ ಚಕ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

  • ಲಿಂಗಸಗೂರಿನಲ್ಲಿ ಹಾಡಹಗಲೇ ಕಿಡ್ನಾಪ್ ಮಾಡಿದ್ದ ಆರೋಪಿಗಳ ಬಂಧನ

    ಲಿಂಗಸಗೂರಿನಲ್ಲಿ ಹಾಡಹಗಲೇ ಕಿಡ್ನಾಪ್ ಮಾಡಿದ್ದ ಆರೋಪಿಗಳ ಬಂಧನ

    – ಕೇವಲ 24 ಗಂಟೆಗಳಲ್ಲಿ ಪ್ರಕರಣ ಬೇಧಿಸಿದ ಪೊಲೀಸರು

    ರಾಯಚೂರು: ಹಾಡಹಗಲೇ ಸಿನಿಮಾ ಶೈಲಿಯಲ್ಲಿ ವ್ಯಕ್ತಿಯೊಬ್ಬರನ್ನು ಅಪಹರಿಸಿದ್ದ ಪ್ರಕರಣ ಸುಖಾಂತ್ಯ ಕಂಡಿದ್ದು, ಪೊಲೀಸರು ಕೇವಲ 24 ಗಂಟೆಯೊಳಗೆ ಪ್ರಕರಣವನ್ನು ಬೇಧಿಸಿದ್ದಾರೆ.

    ನಾಲ್ವರು ಅಪಹರಣಕಾರರು ಸೇರಿ ಒಟ್ಟು ಐವರನ್ನು ಬಂಧಿಸಲಾಗಿದ್ದು, ಸಿಂಧಗಿ ಮೂಲದ ಚಂದನಸಾಬ್, ರಮೇಶ್, ಸಂತೋಷ್, ಮಿರಾಜ್ ಮತ್ತು ಶಬ್ಬೀರ್ ಬಂಧಿತ ಆರೋಪಿಗಳಾಗಿದ್ದಾರೆ. ಎಸ್‍ಪಿ ವೇದಮೂರ್ತಿ ನೇತೃತ್ವದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮಸ್ಕಿ ತಾಲೂಕಿನ ಮಾರಲದಿನ್ನಿ ತಾಂಡಾದ ಶರಣಪ್ಪ ಎಂಬವರನ್ನು ರಕ್ಷಿಸಿದ್ದಾರೆ.

    ಶರಣಪ್ಪರ ದೊಡ್ಡಪ್ಪನ ಮಗ ಕೃಷ್ಣ ಕಬ್ಬಿನ ಕಟಾವಿಗೆ ಕಾರ್ಮಿಕರನ್ನು ಕರೆ ತರುವುದಾಗಿ ಸಿಂಧಗಿ ಮೂಲದ ನಾಲ್ವರಿಂದ ಹಣ ಪಡೆದಿದ್ದ. ಹಣ ಪಡೆಯುವಾಗ ಶರಣಪ್ಪ ಸಹ ಹಾಜರಿದ್ದ. ಕೃಷ್ಣ ಕಬ್ಬಿನ ಕಟಾವಿಗೆ ಕಾರ್ಮಿಕರನ್ನು ಕರೆದೊಯ್ಯದೆ, ಹಣವನ್ನೂ ಮರಳಿ ನೀಡದೆ ತಲೆ ಮರೆಸಿಕೊಂಡಿದ್ದ. ಹೀಗಾಗಿ ಶನಿವಾರ ಮಧ್ಯಾಹ್ನ ಕಾರಲ್ಲಿ ಬಂದ ನಾಲ್ವರು ಲಿಂಗಸಗೂರನಲ್ಲಿ ಶರಣಪ್ಪ ಅವರನ್ನು ಬಲವಂತವಾಗಿ ಕರೆದೊಯ್ದಿದ್ದರು. ಅಪಹರಣ ತಡೆಯಲು ಯತ್ನಿಸಿದ್ದ ಸ್ಥಳೀಯರಿಗೂ ಪಿಸ್ತೂಲ್ ತೋರಿಸಿ ಆರೋಪಿಗಳು ಅಪಹರಿಸಿದ್ದರು.

    ಘಟನೆ ನಡೆಯುತ್ತಿದ್ದಂತೆಯೇ ಎಸ್ಪಿ ವೇದಮೂರ್ತಿ ಅವರು ಎಸ್ಪಿ ಹರಿಬಾಬು ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಪ್ರಕರಣ ನಡೆದು 24 ಗಂಟೆಯೊಳಗೆ ರಾಯಚೂರು ಪೊಲೀಸರ ವಿಶೇಷ ಪ್ರಕರಣ ಬೇಧಿಸಿದ್ದು, ಅಪಹರಣಕ್ಕೊಳಗಾದ ಶರಣಪ್ಪ ಅವರನ್ನು ಸುರಕ್ಷಿತವಾಗಿ ರಾಯಚೂರಿಗೆ ಕರೆತಂದಿದ್ದಾರೆ. ಇದೀಗ ನಾಲ್ವರು ಅಪಹರಣಕಾರರು ಮತ್ತು ತೋಟದ ಮನೆಯಲ್ಲಿ ಕಾವಲು ಕಾಯುತ್ತಿದ್ದ ಓರ್ವ ಸೇರಿ ಒಟ್ಟು ಐವರನ್ನು ಬಂಧಿಸಿದ್ದಾರೆ. ಈ ಬಗ್ಗೆ ಲಿಂಗಸಗೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ನಡೆದಿದ್ದೇನು..?
    ಶನಿವಾರ ಹಾಡಹಗಲೇ ಜಿಲ್ಲೆಯ ಲಿಂಗಸುಗೂರು ಬಸ್ ನಿಲ್ದಾಣದ ಬಳಿ ಸ್ನೇಹಿತರಂತೆ ಶರಣಪ್ಪರನ್ನು ಮಾತನಾಡಿಸಿದ್ದ ದುಷ್ಕರ್ಮಿಗಳು ಪಿಸ್ತೂಲ್ ತೋರಿಸಿ ಅಪಹರಣ ಮಾಡಿದ್ದರು. ಎಂಎಚ್ 14, 3566 ನಂಬರ್ ಕಾರಿನಲ್ಲಿ ಬಂದ ಕೆಲ ದುಷ್ಕರ್ಮಿಗಳು ಶರಣಪ್ಪರನ್ನು ಸ್ನೇಹಿತರಂತೆ ಮಾತನಾಡಿಸಿದ್ದರು. ಬಳಿಕ ಆತನ ಹೆಗಲ ಮೇಲೆ ಕೈ ಹಾಕಿ ಕಾರಿನ ಬಳಿ ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದರು. ದುಷ್ಕರ್ಮಿಗಳ ಸಂಚು ತಿಳಿಯುತ್ತಿದಂತೆಯೇ ಶರಣಪ್ಪ ರಕ್ಷಣೆಗೆ ಕೂಗಿಕೊಂಡಿದ್ದರು.

    ಬಲವಂತವಾಗಿ ಕರೆದುಕೊಂಡು ಹೋಗಲು ಯತ್ನಿಸುತ್ತಿರುವುದನ್ನು ಕಂಡ ಕೆಲ ಸಾರ್ವಜನಿಕರು ಕೂಡಲೇ ರಕ್ಷಣೆಗೆ ಮುಂದಾಗಿದ್ದರು. ಆದರೆ ದುಷ್ಕರ್ಮಿಗಳ ಗುಂಪಿನಲ್ಲಿದ್ದ ಮತ್ತೊಬ್ಬ ತನ್ನ ಬಳಿ ಇದ್ದ ಪಿಸ್ತೂಲ್ ತೋರಿಸಿ ಸಾರ್ವಜನಿಕರನ್ನು ಹೆದರಿಸಿದ್ದ. ಪಿಸ್ತೂಲ್ ಕಂಡ ಸಾರ್ವಜನಿಕರು ಏನು ಮಾಡಲಾಗದೆ ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು. ಶರಣಪ್ಪ ಕಾರನ್ನು ಹತ್ತಲು ನಿರಾಕರಿಸಿ ಸ್ಥಳದಲ್ಲಿ ರಂಪಾಟ ನಡೆಸಿದ್ದ. ಆದರೂ ಬಿಡದ ದುಷ್ಕರ್ಮಿಗಳು ಬಲವಂತವಾಗಿ ಕಾರಿಗೆ ಎತ್ತಿಹಾಕಿ ಸ್ಥಳದಿಂದ ಕೆಲವೇ ನಿಮಿಷಗಳಲ್ಲಿ ಪರಾರಿಯಾಗಿದ್ದರು. ಈ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

    ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದರು. ಸ್ಥಳೀಯರು ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ ಹಣಕಾಸಿನ ವಿಚಾರದಲ್ಲಿ ಅಪಹರಣವಾದ ವ್ಯಕ್ತಿ ಹಾಗೂ ದುಷ್ಕರ್ಮಿಗಳ ನಡುವೆ ಮಾತುಕತೆ ನಡೆಸುತ್ತಿದ್ದರು ಎಂದು ತಿಳಿಸಿದ್ದರು.

  • ವ್ಯಕ್ತಿಯ ಅಪಹರಣ- ಕೇವಲ 7 ನಿಮಿಷದಲ್ಲಿ ಆರೋಪಿಯನ್ನ ಬಂಧಿಸಿದ ಪೊಲೀಸರು

    ವ್ಯಕ್ತಿಯ ಅಪಹರಣ- ಕೇವಲ 7 ನಿಮಿಷದಲ್ಲಿ ಆರೋಪಿಯನ್ನ ಬಂಧಿಸಿದ ಪೊಲೀಸರು

    ನವದೆಹಲಿ: ಅಪಹರಿಸಿದ್ದ ಗ್ಯಾಂಗ್ ಪತ್ತೆ ಹಚ್ಚಿ ಕೇವಲ 7 ನಿಮಿಷದಲ್ಲಿ ಪೊಲೀಸರು ಯುವಕನನ್ನು ರಕ್ಷಿಸಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

    ಮೋಹನ್ ಗಾರ್ಡನ್ ನಿಂದ ಯುವಕನನ್ನು ಅಪಹರಿಸಿದ ನಂತರ ಕಾರ್ ಜಾಕರ್ ಗ್ಯಾಂಗ್‍ನ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತನನ್ನು ರಿಜ್ವಲ್ ಎಂದು ಗುರುತಿಸಲಾಗಿದ್ದು, ಶಿಮ್ಲಾ ಮೂಲದವರಾಗಿದ್ದಾರೆ. ಅಪಹರಣ ಘಟನೆ ವರದಿಯಾಗಿ ಕೇವಲ ಏಳು ನಿಮಿಷಗಳಲ್ಲಿ ಸಂತ್ರಸ್ತನನ್ನು ರಕ್ಷಿಸಿ, ಆರೋಪಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಶರತ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.

    ಪೊಲೀಸರ ಮಾಹಿತಿ ಪ್ರಕಾರ, ತನ್ನ ಸಹೋದರನನ್ನು ಜನಕ್‍ಪುರಿಯಿಂದ ನಾಲ್ವರು ಅಪಹರಿಸಿದ್ದಾರೆ ಎಂದು ಸಂತ್ರಸ್ತನ ಸಹೋದರ ದೂರು ನೀಡಿದ್ದ. ಅಪಹರಿಸಿದ ವಿಂಡ್‍ಶೀಲ್ಡ್ ಕಾರ್ ಮೇಲೆ ‘ಹೈ ಲ್ಯಾಂಡರ್’ ಎಂದು ಬರೆಯಲಾಗಿದೆ ಎಂದು ವಿವರಿಸಿದ. ನಂತರ ಪೊಲೀಸ್ ಕಂಟ್ರೋಲ್ ರೂಂ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಆಪಾದಿತ ಕಾರನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಆಗ ಉತ್ತಮ್ ನಗರದ ರೆಡ್ ಲೈಟ್ ಬಳಿ ಕಾರು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಪೊಲೀಸರು ತಮ್ಮನ್ನು ಹಿಂಬಾಲಿಸುತ್ತಿದ್ದಾರೆ ಎಂಬುದನ್ನು ಮನಗಂಡ ಅಪಹರಣಕಾರರು, ತಂಡದಲ್ಲಿನ ಮೂವರು ನಜಾಫ್‍ಗಢ ರಸ್ತೆಯ ಟ್ರಾಫಿಕ್ ಜಾಮ್‍ನಲ್ಲಿ ತಪ್ಪಿಸಿಕೊಂಡಿದ್ದಾರೆ. ಆದರೆ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿದ್ದು, ಸಂತ್ರಸ್ತನನ್ನು ಸಹ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

    ಬಂಧಿತ ಆರೋಪಿಯನ್ನು ರವಿ ಎಂದು ಗುರುತಿಸಲಾಗಿದ್ದು, ಉತ್ತಮ್ ನಗರದ ನಿವಾಸಿಯಾಗಿದ್ದಾನೆ. ಮೋಹನ್ ಗಾರ್ಡನ್ ಪ್ರದೇಶದಿಂದ ಬಲವಂತವಾಗಿ ನನ್ನನ್ನು ಅಪಹರಿಸಲಾಗಿತ್ತು. ಅಪಹರಣಕಾರರು ನನ್ನ ಕಾರ್ ಕೀಯನ್ನು ಕಿತ್ತುಕೊಂಡು ಕಾರ್ ಪಾರ್ಕ್ ಮಾಡಿದ ಜನಕ್‍ಪುರಿ ಇನ್ಸಿಟಿಟ್ಯೂಟ್ ಸ್ಥಳಕ್ಕೆ ಆಟೋದಲ್ಲಿ ಕರೆದೊಯ್ದರು ಎಂದು 21 ವರ್ಷದ ಸಂತ್ರಸ್ತ ವಿವರಿಸಿದ್ದಾನೆ.

    ಪೊಲೀಸರು ಸಂತ್ರಸ್ತನ ಕಾರ್ ಕೀ ಹಾಗೂ ಆತನ 1,650 ರೂ.ಗಳನ್ನು ಮರಳಿ ನೀಡಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಮನೆಮುಂದೆ ಆಟವಾಡ್ತಿದ್ದಾಗ ನಾಪತ್ತೆಯಾಗಿದ್ದ ಬಾಲಕಿ ಬಾವಿಯಲ್ಲಿ ಶವವಾಗಿ ಪತ್ತೆ

    ಮನೆಮುಂದೆ ಆಟವಾಡ್ತಿದ್ದಾಗ ನಾಪತ್ತೆಯಾಗಿದ್ದ ಬಾಲಕಿ ಬಾವಿಯಲ್ಲಿ ಶವವಾಗಿ ಪತ್ತೆ

    – ಕೈ ಕಾಲು ಕಟ್ಟಿದ ಸ್ಥಿತಿಯಲ್ಲಿ ಬಾವಿಯಲ್ಲಿ ಶವ

    ಬೆಳಗಾವಿ(ಚಿಕ್ಕೋಡಿ): ಮನೆ ಮುಂದೆ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದ 8 ವರ್ಷದ ಬಾಲಕಿಯ ಶವ, ಕೈ ಕಾಲು ಕಟ್ಟಿ ಎಸೆದ ಸ್ಥಿತಿಯಲ್ಲಿ ಬಾವಿಯೊಂದರಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದಲ್ಲಿ ನಡೆದಿದೆ.

    ಪರಮಾನಂದವಾಡಿ ಗ್ರಾಮದ ನಿವಾಸಿ ಲಕ್ಷ್ಮೀ ಅತಾಲಟ್ಟಿ(8) ಅಕ್ಟೋಬರ್ 15ರ ಸಂಜೆ ಮನೆ ಮುಂದೆ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದಳು. ಆಕೆಯನ್ನು ಯಾರೋ ಅಪಹರಣ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಕುಡಚಿ ಪೊಲೀಸ್ ಠಾಣೆಯಲ್ಲಿ ಬಾಲಕಿ ಪೋಷಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದರು.

    ಬುಧವಾರ ರಾತ್ರಿ ಬಾಲಕಿ ಶವ ಆಕೆಯ ಮನೆ ಹತ್ತಿರವಿದ್ದ ಬಾವಿಯಲ್ಲಿ ಪತ್ತೆಯಾಗಿದೆ. ಬಾಲಕಿಯ ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮನೆ ಮುಂದೆ ಆಟವಾಡುತ್ತಿದ್ದ ಅಪಹರಣಗೊಂಡ ಬಾಲಕಿ, ಮರುದಿನ ಮನೆಯ ಹತ್ತಿರದ ಬಾವಿಯಲ್ಲಿಯೇ ಶವವಾಗಿ ಪತ್ತೆಯಾಗಿದ್ದಾಳೆ.

    ಬಾಲಕಿಯ ಸಾವಿನ ಸುತ್ತ ಹಲವು ಅನುಮಾನಗಳ ಹುತ್ತ ಬೆಳೆದು ನಿಂತಿದ್ದು, ಸದ್ಯ ಬಾವಿಯಿಂದ ಬಾಲಕಿಯ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿಡಿಯೋ: ಹೆತ್ತವರ ಜೊತೆ ಮಲಗಿದ್ದ ಗಂಡು ಮಗು ಕಿಡ್ನಾಪ್

    ವಿಡಿಯೋ: ಹೆತ್ತವರ ಜೊತೆ ಮಲಗಿದ್ದ ಗಂಡು ಮಗು ಕಿಡ್ನಾಪ್

    ಲಕ್ನೋ: ಇತ್ತೀಚೆಗೆ ದೇಶದ ಕೆಲವೆಡೆ ಮಕ್ಕಳ ಕಳ್ಳರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ದಿನಕ್ಕೊಂದು ಘಟನೆಗಳು ಕೂಡ ನಡೆಯುತ್ತಲೇ ಇರುತ್ತವೆ. ಇದೀಗ ಉತ್ತರ ಪ್ರದಶದಲ್ಲಿಯೂ ಇಂತದ್ದೇ ಘಟನೆ ನಡೆದಿದ್ದು, ಮಕ್ಕಳ ಹೆತ್ತವರು ಆತಂಕಕ್ಕೀಡಾಗಿದ್ದಾರೆ.

    ಹೌದು. ಗಲ್ಶಹೀದ್ ಪ್ರದೇಶದಲ್ಲಿರುವ ಬಸ್ ನಿಲ್ದಾಣದಲ್ಲಿ 8 ತಿಂಗಳ ಪುಟ್ಟ ಕಂದಮ್ಮವೊಂದು ತನ್ನ ತಂದೆ-ತಾಯಿ ಜೊತೆ ಮಲಗಿತ್ತು. ಈ ವೇಳೆ ಅಲ್ಲಿಗೆ ಬಂದ ಮಹಿಳೆ ಹಾಗೂ ಪುರುಷ ಮಗುವನ್ನು ಕದ್ದು ಅಲ್ಲಿಂದ ಕಾಲ್ಕಿತ್ತಿರುವುದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಈ ಘಟನೆ ಸೋಮವಾರ ನಡೆದಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಕಳ್ಳತನಕ್ಕೂ ಮೊದಲು ಆರೋಪಿ ಮಹಿಳೆ, ಮಗುವಿನ ತಾಯಿ ರಾಣಿ ಜೊತೆ ಮಾತನಾಡಿ ಸ್ನೇಹ ಬೆಳೆಸಿಕೊಳ್ಳುವ ಮೂಲಕ ಆಕೆಯ ಬಗ್ಗೆ ಮಾಹಿತಿ ಕಲೆಹಾಕಿಕೊಂಡಿದ್ದಳು. ಆ ನಂತರ ರಸ್ತೆ ಬದಿಯಲ್ಲಿ ರಾಣಿ ತನ್ನ ಪತಿ ಹಾಗೂ ಮಗುವಿನೊಂದಿಗೆ ರಸ್ತೆ ಬದಿಯ ಬಸ್ ನಿಲ್ದಾಣದಲ್ಲಿ ಮಲಗಿದ್ದ ಸಂದರ್ಭದಲ್ಲಿ ಮಗುವನ್ನು ಅಪಹರಿಸಿದ್ದಾರೆ. ರಾಣಿಗೆ ಎಚ್ಚರಗೊಂಡಾಗ ತನ್ನ ಮಗುವನ್ನು ಕದ್ದೊಯ್ಯುತ್ತಿರುವುದನ್ನು ನೋಡನೋಡುತ್ತಿದ್ದಂತೆಯೇ ಆರೋಪಿ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ. ಇದರಿಂದ ಗಾಬರಿಗೊಂಡ ಆಕೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ಅಧಿಕ್ಷಕ ಅಂಕಿತ್ ಮಿತ್ತಲ್ ತಿಳಿಸಿದ್ದಾರೆ.

    ವ್ಯಕ್ತಿ ಹಾಗೂ ಮಹಿಳೆ ನನ್ನ ಜೊತೆ ಮಾತುಕತೆ ನಡೆಸಿದ್ದರು. ಈ ವೇಳೆ ನಾನು ಅವರೊಂದಿಗೆ ಚೆನ್ನಾಗಿಯೇ ಮಾತನಾಡಿದ್ದೇನೆ. ಇದನ್ನೇ ಬಂಡವಾಳ ಮಾಡಿಕೊಂಡ ಅವರು ಕಂಬಳಿ ಹಾಗೂ ಮಗುವಿಗೆ ಬೇಕಾದ ಔಷಧಿಗಳನ್ನು ನೀಡುವ ಮೂಲಕ ಸಹಾಯ ಮಾಡಿದವರಂತೆ ನಟಿಸಿ ಮಗುವನ್ನೇ ಅಪಹರಿಸಿದ್ದಾರೆ ಎಂದು ರಾಣಿ ಪೊಲೀಸರ ಜೊತೆ ಅಳಲು ತೋಡಿಕೊಂಡಿದ್ದಾರೆ.

    ನನ್ನ ಜೊತೆ ಮಾತನಾಡಿದ ಬಳಿಕ ಅವರೇ ನಮ್ಮನ್ನು ಬಸ್ ನಿಲ್ದಾಣಕ್ಕೆ ಬಿಟ್ಟರು. ಅಲ್ಲದೆ ಅದೇ ದಿನ ರಾತ್ರಿ ಅವರು ಕೂಡ ಅದೇ ಬಸ್ ನಿಲ್ದಾಣದಲ್ಲಿ ಉಳಿದುಕೊಂಡರು. ಆದರೆ 12 ಗಂಟೆ ಸುಮಾರಿಗೆ ನಾನು ನಿದ್ದೆಗೆ ಜಾರಿದೆ. ಈ ವೇಳೆ ಅವರು ನನ್ನ ಮಗನನ್ನು ಕದ್ದೊಯ್ದರು. ಮಧ್ಯ ಎಚ್ಚರವಾದಾಗ ಮಗ ನನ್ನ ಹತ್ತಿರ ಇರಲಿಲ್ಲ. ಅಲ್ಲದೆ ನನ್ನ ಜೊತೆ ಮಾತನಾಡಿದ್ದ ಇಬ್ಬರು ಕೂಡ ಅಲ್ಲಿರಲಿಲ್ಲ. ಹೀಗಾಗಿ ಕೂಡಲೇ ನಾನು ಗಲ್ಶಹೀದ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಾಗಿ ರಾಣಿ ತಿಳಿಸಿದ್ದಾರೆ.

  • ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಯುವತಿ ಕಿಡ್ನಾಪ್ – ಪೊಲೀಸರಿಂದ ಚೇಸಿಂಗ್

    ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಯುವತಿ ಕಿಡ್ನಾಪ್ – ಪೊಲೀಸರಿಂದ ಚೇಸಿಂಗ್

    ಶಿವಮೊಗ್ಗ: ರಿಟ್ಜ್ ಕಾರಿನಲ್ಲಿ ಬಂದ ಯುವಕರ ಗುಂಪೊಂದು ಸಿನಿಮೀಯ ರೀತಿಯಲ್ಲಿ ಯುವತಿಯನ್ನು ಅಪಹರಣ ಮಾಡಲು ಯತ್ನಿಸಿದ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಯಡಿಯೂರು ಬಳಿ ನಡೆದಿದೆ.

    ಯಡಿಯೂರು ಗ್ರಾಮದ ಯುವತಿ, ತಾಯಿಯೊಂದಿಗೆ ಇಂದು ರೇಣುಕಾಂಬ ದೇವಾಲಯಕ್ಕೆ ತೆರಳಿದ್ದಳು. ಈ ವೇಳೆ ಕಾರಿನಲ್ಲಿ ಬಂದ ಯುವಕರು ಮಚ್ಚು, ಲಾಂಗ್ ತೋರಿಸಿ ಯುವತಿಯನ್ನು ಅಪಹರಿಸಿ ಪರಾರಿಯಾಗಿದ್ದಾರೆ. ಈ ವಿಷಯ ಪೊಲೀಸರಿಗೆ ತಿಳಿಯುತ್ತಿದ್ದಂತೆ ಕಾರನ್ನು ತೀರ್ಥಹಳ್ಳಿ ಬಳಿ ತಡೆ ಹಿಡಿದಿದ್ದಾರೆ. ಪೊಲೀಸರನ್ನು ನೋಡುತ್ತಿದ್ದಂತೆ ಅಪಹರಣಕಾರರು ಯುವತಿ ಹಾಗೂ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಕಾಡಿನೊಳಗೆ ಓಡಿ ಹೋಗಿದ್ದಾರೆ.

    ಪ್ರಕರಣದ ಕುರಿತು ಕೂಡಲೇ ಕಾರ್ಯಾಚರಣೆಗೆ ನಡೆಸಿದ ಪೊಲೀಸರು ಯುವತಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದು, ಈ ವೇಳೆ ತೀರ್ಥಹಳ್ಳಿ ತಾಲೂಕಿನ ಕುರುವಳ್ಳಿ ಗ್ರಾಮದ ಯುವಕ ನಾಗ ಆಕೆಯನ್ನು ಅಪಹರಿಸಲು ಯತ್ನಿಸಿದ್ದಾಗಿ ಮಾಹಿತಿ ತಿಳಿಸಿದ್ದಾಳೆ. ಅಂದಹಾಗೇ ಅಪಹರಣ ಮಾಡಲು ಯತ್ನಿಸಿದ ಯುವಕ ಹಾಗೂ ಯುವತಿ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

    ಆರೋಪಿ ನಾಗ ಈಗಾಗಲೇ ಹಲವು ಯುವತಿಯರನ್ನು ಪ್ರೀತಿಯ ಬಲೆಗೆ ಬೀಳಿಸಿ ಯುವತಿಯರಿಗೆ ಮೋಸ ಮಾಡಿದ್ದಾನೆ. ಈ ವಿಷಯ ತಿಳಿದ ಯುವತಿ ಆರೋಪಿಯಿಂದ ಇತ್ತೀಚೆಗೆ ದೂರವಾಗಿದ್ದಳು. ಇದರಿಂದ ಸಿಟ್ಟಿಗೆದ್ದ ಆರೋಪಿ ಇಂದು ತನ್ನ ಸ್ನೇಹಿತರೊಂದಿಗೆ ಸೇರಿ ಯುವತಿಯನ್ನು ಅಪಹರಿಸಲು ಯತ್ನಿಸಿದ್ದ. ಘಟನೆಯ ಕುರಿತು ಶಿಮೊಗ್ಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಲೆ ಮರೆಸಿಕೊಂಡಿರುವ ಆರೋಪಿ ನಾಗನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

  • ಬೀದಿಯಲ್ಲಿ ಮಲಗಿದ್ದ ಗೋವನ್ನು ಅಪಹರಿಸಿದ ಕಳ್ಳರು

    ಬೀದಿಯಲ್ಲಿ ಮಲಗಿದ್ದ ಗೋವನ್ನು ಅಪಹರಿಸಿದ ಕಳ್ಳರು

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಗೋವಿನ ಕಳ್ಳತನ ಅವ್ಯಾಹತವಾಗಿ ಮುಂದುವರಿದಿದೆ. ಕುಂದಾಪುರ ತಾಲೂಕಿನ ಅಂಪಾರು ಎಂಬಲ್ಲಿನ ಪೆಟ್ರೋಲ್ ಬಂಕ್ ಬಳಿಯಿದ್ದ ಜಾನುವಾರನ್ನು ಕಾರಿನಲ್ಲಿ ತುಂಬಿಸಿ ದುಷ್ಕರ್ಮಿಗಳು ಕದ್ದು ಹೋದ ಘಟನೆ ಬೆಳಕಿಗೆ ಬಂದಿದೆ.

    ಈ ದೃಶ್ಯಗಳು ಪೆಟ್ರೋಲ್ ಬಂಕ್‍ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕುಂದಾಪುರ-ಸಿದ್ದಾಪುರ ಹೆದ್ದಾರಿಯ ಸಮೀಪವೇ ಇರುವ ಅಂಪಾರು ಪೆಟ್ರೋಲ್ ಬಂಕಿನಲ್ಲಿ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ. ಪೆಟ್ರೋಲ್ ಬಂಕ್ ಎದುರು ಕಾರು ನಿಂತಿರುತ್ತದೆ. ಕಾರಿನಿಂದ ಇಬ್ಬರು ಇಳಿಯುತ್ತಾರೆ. ಬಂಕ್ ಎದುರು ಮಲಗಿದ್ದ ದನವನ್ನು ಹಿಡಿದು ಕಾರಿನಲ್ಲಿ ತುಂಬಿಸಿ ಕ್ಷಣಾರ್ಧದಲ್ಲಿ ಅಲ್ಲಿಂದ ಪರಾರಿಯಾಗುತ್ತಾರೆ.

    ಸುಮಾರು 2-3 ನಿಮಿಷಗಳ ಅಂತರದಲ್ಲಿ ಕಾರ್ಯಾಚರಣೆ ನಡೆಯುತ್ತದೆ. ಗೋಕಳ್ಳರನ್ನು ಕಂಡು ಬೊಗಳಿದ ನಾಯಿಯೊಂದು ಬೆನ್ನಟ್ಟುತ್ತದೆ. ಗೋವು ಕಳ್ಳರು ನಾಯಿಗೆ ಕಲ್ಲು ಹೊಡೆದು ಅಟ್ಟಿಸಿ, ಅಲ್ಲಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಜಾನುವಾರು ಕಳೆದುಕೊಂಡ ಕೃಷಿಕ ಪ್ರಸನ್ನ ಕುಮಾರ್ ಶೆಟ್ಟಿ ಎನ್ನುವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಶಂಕರನಾರಾಯಣ ಠಾಣೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿಗಳ ದೃಶ್ಯಗಳನ್ನು ಜಾಲಾಡುತ್ತಿದ್ದಾರೆ. ಇದನ್ನು ಓದಿ: ಸುಳ್ಯದಲ್ಲಿ ರಾತ್ರೋರಾತ್ರಿ ದನಕಳ್ಳತನ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

  • ಯುವತಿಯನ್ನು ಅಪಹರಿಸಿ, ಚಲಿಸುತ್ತಿದ್ದ ಕಾರಿನಲ್ಲಿ ನಾಲ್ವರಿಂದ ಗ್ಯಾಂಗ್ ರೇಪ್

    ಯುವತಿಯನ್ನು ಅಪಹರಿಸಿ, ಚಲಿಸುತ್ತಿದ್ದ ಕಾರಿನಲ್ಲಿ ನಾಲ್ವರಿಂದ ಗ್ಯಾಂಗ್ ರೇಪ್

    ಪಾಟ್ನಾ: ನಿರಾಶ್ರಿತ ಕೇಂದ್ರದಿಂದ ರಕ್ಷಿಸಲ್ಪಟ್ಟ 18 ವರ್ಷದ ಯುವತಿಯನ್ನು ಅಪಹರಿಸಿ 4 ಮಂದಿ ಕಾಮುಕರು ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿರುವ ಅಮಾನವೀಯ ಘಟನೆ ಬಿಹಾರದಲ್ಲಿ ನಡೆದಿದೆ.

    ಶುಕ್ರವಾರದಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ, ಮುಜಾಫರ್‍ಪುರ ನಿರಾಶ್ರಿತ ಕೇಂದ್ರದಿಂದ ರಕ್ಷಿಸಲ್ಪಟ್ಟ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ನಿರಾಶ್ರಿತ ಕೇಂದ್ರದಿಂದ ರಕ್ಷಿಸಿದ ಬಳಿಕ ಯುವತಿ ಮುಜಾಫರ್ ಪುರದ ಪಶ್ಚಿಮ ಚಂಪರನ್ ಜಿಲ್ಲೆಯಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಳು. ಶುಕ್ರವಾರ ಸಂಜೆ ಯುವತಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ನಾಲ್ವರು ಮುಸುಕುಧಾರಿಗಳು ಅವಳನ್ನು ಅಪಹರಿಸಿದ್ದಾರೆ. ಬಳಿಕ ಆಕೆಯನ್ನು ಕಾರಿನಲ್ಲಿ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ.

    ಈ ಬಗ್ಗೆ ಯುವತಿ ಶನಿವಾರ ಸಂಜೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ಈಗ ಅದರ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಸ್ಟೆಷನ್ ಹೌಸ್ ಆಫಿಸರ್(ಎಸ್‍ಎಚ್‍ಓ), ಯುವತಿಯನ್ನು ನಿರಾಶ್ರಿತ ಕೇಂದ್ರದಿಂದ ರಕ್ಷಿಸಿರುವ ವಿಚಾರ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಆರೋಪಿಗಳನ್ನು ಬಂಧಿಸಲು ತಂಡವನ್ನು ರಚಿಸಿ ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.

    ಶುಕ್ರವಾರ ಸಂಜೆ ಸಂಬಂಧಿಕರನ್ನು ಭೇಟಿ ಮಾಡಲು ಹೋಗುತ್ತಿದ್ದ ವೇಳೆ 4 ಮಂದಿ ನನ್ನನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

  • ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಅರ್ಧ ಕಿ.ಮೀ ನಗ್ನಳಾಗಿ ಓಡಿದ ಬಾಲಕಿ

    ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಅರ್ಧ ಕಿ.ಮೀ ನಗ್ನಳಾಗಿ ಓಡಿದ ಬಾಲಕಿ

    ಜೈಪುರ: ಮೂವರು ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಬಾಲಕಿ ಅರ್ಧ ಕಿ.ಮೀವರೆಗೂ ನಗ್ನಳಾಗಿ ಓಡಿದ ಘಟನೆ ರಾಜಸ್ಥಾನದ ಬಿಲ್‍ವಾರಾದಲ್ಲಿ ನಡೆದಿದೆ.

    ಬಾಲಕಿ ತನ್ನ ಸಹೋದರ ಸಂಬಂಧಿ ಹಾಗೂ ಸಹೋದರಿ ಜೊತೆ ಜಾತ್ರೆಯಿಂದ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಮೂವರು ಯುವಕರು ಅವರನ್ನು ಅಡ್ಡ ಹಾಕಿದ್ದಾರೆ. ಯುವಕರನ್ನು ನೋಡುತ್ತಿದ್ದಂತೆ ಬಾಲಕಿಯ ಜೊತೆಯಲ್ಲಿ ಇದ್ದವರು ಓಡಿ ಹೋಗಿದ್ದಾರೆ. ಆದರೆ ಯುವಕರು ಬಾಲಕಿಯನ್ನು ಅಪಹರಿಸಿ ಮರುಭೂಮಿಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಬಳಿಕ ಆಕೆಯನ್ನು ಅತ್ಯಾಚಾರ ಮಾಡಿದ್ದಾರೆ.

    ಬಾಲಕಿಯನ್ನು ಅಪಹರಿಸುತ್ತಿದ್ದಂತೆ ಆಕೆಯ ಸಹೋದರ ಹತ್ತಿರದಲ್ಲಿದ್ದ ಮಾರ್ಕೆಟ್‍ಗೆ ಓಡಿ ಹೋಗಿದ್ದಾನೆ. ಬಳಿಕ ಅಲ್ಲಿದ ಅಂಗಡಿ ಮಾಲೀಕನಿಗೆ ನಡೆದ ಘಟನೆಯನ್ನು ವಿವರಿಸಿ ಸಹಾಯ ಮಾಡುವಂತೆ ಬೇಡಿಕೊಂಡಿದ್ದಾನೆ. ಯುವಕನ ಮಾತು ಕೇಳಿದ ಅಂಗಡಿ ಮಾಲೀಕ ಸ್ಥಳಕ್ಕೆ ತಲುಪಿದ್ದಾಗ ಮೂವರು ಅತ್ಯಾಚಾರಿಗಳು ಬಾಲಕಿಯನ್ನು ಥಳಿಸುತ್ತಿದ್ದರು. ಬಳಿಕ ಆರೋಪಿಗಳು ಅಂಗಡಿ ಮಾಲೀಕನನ್ನು ನೋಡುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾರೆ.

    ಈ ಘಟನೆಯಿಂದ ಆಘಾತಗೊಂಡಿದ್ದ ಬಾಲಕಿ ನನ್ನನ್ನು ನೋಡಿ ಹೆದರಿಕೊಂಡು ನಗ್ನಳಾಗಿ ಓಡಲು ಶುರು ಮಾಡಿದ್ದಾಳೆ. ಬಾಲಕಿ ಅರ್ಧ ಕಿ.ಮೀವರೆಗೂ ನಗ್ನಳಾಗಿ ಓಡಿ ಹೋಗಿದ್ದಾಳೆ. ಬಳಿಕ ಸ್ವಲ್ಪ ದೂರ ಹೋದ ಬಳಿಕ ನಾನು ನೀಡಿದ್ದ ಉಡುಪನ್ನು ತೆಗೆದುಕೊಂಡಳು ಎಂದು ಅಂಗಡಿ ಮಾಲೀಕ ಪೊಲೀಸರ ಬಳಿ ತಿಳಿಸಿದ್ದಾರೆ.

    ಆರೋಪಿಗಳ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ಅಪರಾಧ ಮತ್ತು ಪರಿಶಿಷ್ಟ ಜಾತಿ ವಿರುದ್ಧದ ದೌರ್ಜನ್ಯದ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಪೊಲೀಸರು ಮೂವರು ಅತ್ಯಾಚಾರಿಗಳನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ಅಂಗಡಿ ಮಾಲೀಕ, ಬಾಲಕಿಯ ಸಹೋದರ ಹಾಗೂ ಸಹೋದರಿಯ ಹೇಳಿಕೆಯನ್ನು ಪಡೆದಿದ್ದಾರೆ.

  • ಮನೆ ಮಾಲೀಕನನ್ನೇ  ಫ್ರಿಡ್ಜ್‌ನಲ್ಲಿ ಹೊತ್ತೊಯ್ದ ಕೆಲಸಗಾರ

    ಮನೆ ಮಾಲೀಕನನ್ನೇ ಫ್ರಿಡ್ಜ್‌ನಲ್ಲಿ ಹೊತ್ತೊಯ್ದ ಕೆಲಸಗಾರ

    ನವದೆಹಲಿ: 91 ವರ್ಷದ ವೃದ್ಧ ವ್ಯಕ್ತಿಯನ್ನು ಅವರ ಮನೆಯ ಕೆಲಸದವನ ಸಹಾಯದಿಂದಲೇ ಅಪಹರಿಸಿ, ಫ್ರಿಡ್ಜ್‌ನಲ್ಲಿ ಸಾಗಿಸಿರುವ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.

    ಕಿಶನ್ ತನ್ನ ಮಾಲೀಕ ಕೃಷ್ಣಾ ಖೋಸ್ಲಾ ಅವರೊಂದಿಗೆ ಅಸಮಾಧಾನಗೊಂಡು ಅವರ ಅಪಹರಣಕ್ಕೆ ಸಹಾಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

    ಶನಿವಾರ ಸಂಜೆ, ಗ್ರೇಟರ್ ಕೈಲಾಶ್-2 ಪ್ರದೇಶದ ಖೋಸ್ಲಾ ಅವರ ಮನೆಗೆ ಟೆಂಪೋದಲ್ಲಿ ಇತರ ಐವರೊಂದಿಗೆ ಕಿಶನ್ ಆಗಮಿಸಿ, ತನ್ನ ಯಜಮಾನನನ್ನು ಅಪಹರಿಸಿದ್ದಾನೆ. ಖೋಸ್ಲಾ ಹಾಗೂ ಅವರ ಪತ್ನಿಯನ್ನು ಈ ಆರು ಜನ ಸೇರಿ ಪ್ರಜ್ಞೆ ತಪ್ಪಿಸಿದ್ದು, ನಂತರ ಖೋಸ್ಲಾ ಅವರನ್ನು ಅಪಹರಿಸಿ ಫ್ರಿಡ್ಜ್‌ನಲ್ಲಿ ಕೂಡಿಹಾಕಿಕೊಂಡು ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

    ಕಿಶನ್ ಬಿಹಾರ ಮೂಲವನಾಗಿದ್ದು, ಖೋಸ್ಲಾ ಅವರ ಮನೆಯಲ್ಲಿ ಒಂದು ವರ್ಷದ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದನು. ಕೆಲಸದ ವಿಚಾರದಲ್ಲಿ ಅಸಮಾಧಾನಗೊಂಡು ಅಪಹರಿಸಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯಿಂದ ಸ್ಥಳೀಯರು ದಿಗ್ಭ್ರಮೆಗೊಂಡಿದ್ದು, ಈ ಪ್ರದೇಶದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚು ನಡೆಯುತ್ತವೆ. ಆದರೆ ಈ ರೀತಿ ಒಬ್ಬ ವ್ಯಕ್ತಿಯನ್ನು ಅಪಹರಿಸಿ, ಫ್ರಿಡ್ಜ್‌ನಲ್ಲಿ ಕೂಡಿ ಹಾಕಿಕೊಂಡು ಹೋಗಿರುವುದನ್ನು ಕೇಳಿದ್ದು ಇದೇ ಮೊದಲು ಎಂದು ಅಲ್ಲಿನ ನಿವಾಸಿ ಶ್ಯಾಮ್ ಕಲ್ರಾ ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಲು ಹಲವು ಪೊಲೀಸರ ತಂಡವನ್ನು ರಚಿಸಲಾಗಿದೆ.