Tag: ಅಪಹರಣ

  • 7 ತಿಂಗಳಲ್ಲಿ 7 ಬಾರಿ 18ರ ಯುವತಿಯ ಮಾರಾಟ

    7 ತಿಂಗಳಲ್ಲಿ 7 ಬಾರಿ 18ರ ಯುವತಿಯ ಮಾರಾಟ

    – ಕೆಲಸ ಕೊಡಿಸುವುದಾಗಿ ನಂಬಿಸಿ ಮಾರಾಟ
    – ಕೊನೆಗೆ ಬುದ್ಧಿಮಾಂದ್ಯನೊಂದಿಗೆ ವಿವಾಹ

    ಭೋಪಾಲ್: 18 ವರ್ಷದ ಯುವತಿಯನ್ನು 7 ತಿಂಗಳಲ್ಲಿ 7 ಬಾರಿ ಮಾರಾಟ ಮಾಡಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

    ಛತ್ತಿಸ್‍ಗಡದ 18 ವರ್ಷದ ಬಾಲಕಿಯನ್ನು ಮಧ್ಯ ಪ್ರದೇಶ ಹಾಗೂ ಉತ್ತರ ಪ್ರದೇಶಗಳಲ್ಲಿ 7 ತಿಂಗಳಲ್ಲಿ ಬರೋಬ್ಬರಿ 7 ಬಾರಿ ಮಾರಾಟ ಮಾಡಲಾಗಿದೆ. ಕಳೆದ ವರ್ಷ ಘಟನೆ ನಡೆದಿದ್ದು, ಮನನೊಂದ ಯುವತಿ 2019ರ ಸೆಪ್ಟೆಂಬರ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. ಛತ್ತಿಸ್‍ಗಡ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ ಮೂರು ರಾಜ್ಯದ ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಒತ್ತಾಯ ಪೂರ್ವಕವಾಗಿ ಯುವತಿಯನ್ನು ವಿವಾಹವಾಗಿದ್ದ ಬುದ್ಧಿಮಾಂದ್ಯ ವ್ಯಕ್ತಿ ಬಬ್ಲೂ ಕುಶ್ವಾಹ್‍ನನ್ನು ಇನ್ನೂ ಪತ್ತೆಹಚ್ಚಬೇಕಿದೆ. ಛತ್ತಿಸ್‍ಗಡದ ಜಶ್ಪುರ ಜಿಲ್ಲೆಯಿಂದ ಯುವತಿಯನ್ನು ಅಪಹರಿಸಿದ ಆರೋಪಿಗಳು, ಆಕೆಯ ಪೋಷಕರಿಗೆ ಹಣದ ಬೇಡಿಕೆ ಇಟ್ಟಿದ್ದಾರೆ. ಬಳಿಕ ಈ ಭೀಕರ ಮಾನವ ಕಳ್ಳ ಸಾಗಣೆ ಬೆಳಕಿಗೆ ಬಂದಿದೆ.

    ಯುವತಿ ಛತ್ತಿಸ್‍ಗಡದ ಜಶ್ಪುರ ನಿವಾಸಿಯಾಗಿದ್ದು, ತಂದೆಗೆ ಕೃಷಿಯಲ್ಲಿ ಸಹಾಯ ಮಾಡಿಕೊಂಡು ಇದ್ದಳು. ಬಳಿಕ ಸಂಬಂಧಿಕರೊಬ್ಬರು ಕೆಲಸ ಕೊಡಿಸುವುದಾಗಿ ಆಕೆಯನ್ನು ಮಧ್ಯ ಪ್ರದೇಶದ ಛತರ್‍ಪುರಕ್ಕೆ ಕರೆದೊಯ್ದು, ಅಪಹರಿಸಿದ್ದರು. ಅಪಹರಣಕಾರರು ಯುವತಿಯ ಪೋಷಕರಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದಲ್ಲಿ ಮಗಳ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಬಳಿಕ ಪೋಷಕರು ಪೊಲೀಸ್ ಠಾಣೆ ಸಂಪರ್ಕಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಸಂಬಂಧಿಕರಾದ ಪಂಚಮ್ ಸಿಂಗ್ ರೈ ಹಾಗೂ ಈತನ ಪತ್ನಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗಿದೆ. ಕೆಲಸ ಕೊಡಿಸುವುದಾಗಿ ಯುವತಿಯನ್ನು ಜಶ್ಪುರದಿಂದ ಛತ್ತರ್‍ಪುರಕ್ಕೆ ಕರೆ ತಂದಿದ್ದೆವು ಎಂದು ಒಪ್ಪಿಕೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಸಚಿನ್ ಶರ್ಮಾ ತಿಳಿಸಿದ್ದಾರೆ.

    ಈ ದಂಪತಿ ಯುವತಿಯನ್ನು 20 ಸಾವಿರ ರೂ.ಗೆ ಛತ್ತರ್‍ಪುರದ ಕಲ್ಲು ರೈಕ್ವಾರ್ ಗೆ 7 ತಿಂಗಳ ಹಿಂದೆ ಮಾರಾಟ ಮಾಡಿದ್ದು, ಕೊನೇಯ ವ್ಯಕ್ತಿಯಾಗಿ ಉತ್ತರ ಪ್ರದೇಶದ ಲಲಿತ್‍ಪುರದ ಸಂತೋಷ್ ಕುಶ್ವಾಹ್ 70 ಸಾವಿರ ರೂ.ಗೆ ಯುವತಿಯನ್ನು ಕೊಂಡುಕೊಂಡಿದ್ದ. ಬಳಿಕ ಯುವತಿಯನ್ನು ಸಂತೋಷ್ ಕುಶ್ವಾಹ್ ಮಗ ಬುದ್ಧಿಮಾಂದ್ಯ ಬಬ್ಲೂ ಕುಶ್ವಾಹ್ ಜೊತೆ ವಿವಾಹ ಮಾಡಲಾಗಿದೆ. ಇದರಿಂದ ಬೇಸತ್ತ ಯುವತಿ ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಲಲಿತ್‍ಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಪ್ರಕರಣದ ಕುರಿತು ಛತ್ತರ್‍ಪುರ ಪೊಲೀಸರು ತನಿಖೆ ಆರಂಭಿಸಿದ್ದು, ಛತ್ತಿಸ್‍ಗಡ, ಮಧ್ಯ ಪ್ರದೇಶಗಳಲ್ಲಿನ ಬುಡಕಟ್ಟು ಪ್ರದೇಶಗಳಿಂದ ಹೆಚ್ಚಿನ ಹುಡುಗಿಯರನ್ನು ಇತರ ರಾಜ್ಯಗಳಿಗೆ ಆರೋಪಿಗಳು ಕಳ್ಳ ಸಾಗಣೆ ಮಾಡಿರುವ ಕುರಿತು ಪರಿಶೀಲಿಸುತ್ತಿದ್ದಾರೆ.

  • ಮೆಡಿಕಲ್ ಕಾಲೇಜು ವಿದ್ಯಾರ್ಥಿ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿ – ಮೂವರ ಬಂಧನ

    ಮೆಡಿಕಲ್ ಕಾಲೇಜು ವಿದ್ಯಾರ್ಥಿ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿ – ಮೂವರ ಬಂಧನ

    ಲಕ್ನೋ: ಜನವರಿ 18 ರಂದು ಅಪಹರಣಕ್ಕೊಳಗಾಗಿದ್ದ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಯನ್ನು ಜಂಟಿ ಕಾರ್ಯಾಚರಣೆಯ ಮೂಲಕ ಉತ್ತರ ಪ್ರದೇಶದ ಗುಂಡಾ ಜಿಲ್ಲೆಯ ವಿಶೇಷ ಕಾರ್ಯಪಡೆ ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಅಪಹರಣಕ್ಕೊಳಗಾಗಿದ್ದ ವಿದ್ಯಾರ್ಥಿ ಕುಟುಂಬಸ್ಥರ ಬಳಿ 70 ಲಕ್ಷ ಬೇಡಿಕೆ ಇಟ್ಟಿದ್ದ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.

    ನಾಲ್ಕು ಜನ ಆರೋಪಿಗಳಲ್ಲಿ ಇಬ್ಬರು ವೈದ್ಯರು ಎಂದು ತಿಳಿದುಬಂದಿದ್ದು, ಅದರಲ್ಲಿ ಓರ್ವ ಮಹಿಳೆ ದೆಹಲಿ ಮೂಲದವಳಾಗಿದ್ದಾಳೆ. ಆರೋಪಿಗಳನ್ನು ಡಾ. ಅಭಿಷೇಕ್, ಡಾ. ಪ್ರೀತಿ ಮೆಹ್ರಾ, ನಿತೀಷ್ ಮತ್ತು ಮೋಹಿತ್ ಸಿಂಗ್ ಎಂದು ಗುರುತಿಸಲಾಗಿದ್ದು, ಇದೀಗ ಮೂರು ಜನ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ಅಪಹರಣಕ್ಕೊಳಗಾದ ಗೌರವ್ ಹಾಲ್ಡರ್ ಎಸ್‍ಸಿಪಿಎಸ್ ಕಾಲೇಜಿನ ಬಿಎಎಂಎಸ್ ವಿದ್ಯಾರ್ಥಿಯಾಗಿದ್ದು, ಉತ್ತರ ಪ್ರದೇಶದ ಬಹೇಚ್ ಜಿಲ್ಲೆಯ ನಿವಾಸಿ. ತನಿಖೆ ವೇಳೆ ಗೌರವ್ ಹಾಲ್ಡರ್, ಡಾ. ಅಭಿಷೇಕ್ ಸಿಂಗ್ ಸ್ನೇಹಿತೆ ಮತ್ತು ಡಾ ಪ್ರೀತಿ ಮೆಹ್ರಾರವರು ನಡೆಸಿದ ಹನಿಟ್ರ್ಯಾಪ್ ನಂತರ ಆರೋಪಿಗಳು ಅನಸ್ತೆಷಿಯಾ(ಮಾದಕ ವಸ್ತು) ನೀಡಿ ನನ್ನನ್ನು ದೆಹಲಿಯಿಂದ ಅಪಹರಿಸಿದ್ದಾರೆ ಹಾಗೂ ತನ್ನ ಕುಟುಂಬಸ್ಥರ ಬಳಿ 70 ಲಕ್ಷ ರೂ ನೀಡುವಂತೆ ಬೇಡಿಕೆ ಇಟ್ಟಿರುವುದಾಗಿ ತಿಳಿಸಿದ್ದಾರೆ.

    ಈ ಕುರಿತಂತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಶ್ಚಿಮ ಉತ್ತರ ಪ್ರದೇಶದ ಪೊಲೀಸ್ ವರಿಷ್ಠಾಧಿಕಾರಿ(ಎಸ್‍ಪಿ) ಕುದೀಪ್ ನಾರಾಯಣ್ ಮತ್ತು ಗೊಂಡಾ ಎಸ್ ಪಿ ಶೈಲೇಂದ್ರ ಪಾಂಡೆ, ಇದೀಗ ಹಾಲ್ಡರ್ ಅವರನ್ನು ಎನ್‍ಸಿಆರ್ ನಲ್ಲಿ ಇರಿಸಲಾಗಿದೆ. ಈ ಕುರಿತಂತೆ ತನಿಖೆ ನಡೆಸುತ್ತಿರುವಾಗ ಆರೋಪಿಗಳ ಸುಳಿವು ಸಿಕ್ಕ ಬಳಿಕ ನೋಯ್ಡಾದ ಎಸ್‍ಟಿಎಫ್ ಮೆಹ್ರಾರವರು, ಶುಕ್ರವಾರ ನೋಯ್ಡಾ ಎಕ್ಸ್‍ಪ್ರೆಸ್ ವೇ ನಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಪಹರಣ ವೇಳೆ ಆರೋಪಿಗಳು ಬಳಸಿದ್ದ ಕಾರು, ಪಿಸ್ತೂಲ್, ಡ್ರಗ್ ಇಂಜೆಕ್ಷನ್‍ನನ್ನು ವಶಪಡಿಕೊಂಡಿದ್ದಾರೆ ಎಂದು ಹೇಳಿದರು.

    ಈ ಪ್ರಕರಣದ ಪ್ರಮುಖ ಆರೋಪಿ ಡಾ. ಅಭಿಷೇಕ್ ಗುಂಡಾ ಜಿಲ್ಲೆಯ ನಿವಾಸಿ. ಆರೋಪಿ ಅಭಿಷೇಕ್ ದೆಹಲಿಯ ನಜಾಫ್ ಗರ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರೀತಿ ಮೆಹ್ರಾ ಜೊತೆ ಅಪರಿಹಿಸಲು ಸಂಚು ರೂಪಿಸಿ ಆಕೆಗೆ ಗೌರವ್ ಹಾಲ್ಡರ್ ನೊಂದಿಗೆ ಹನಿಟ್ರ್ಯಾಪ್ ಮಾಡಿ ನಂತರ ಆತನನ್ನು ಗುಂಡಾಗೆ ಬಂದು ಭೇಟಿ ಮಾಡುವಂತೆ ತಿಳಿಸುವುದಾಗಿ ಸೂಚಿಸಿದ್ದಾನೆ.

    ಬಳಿಕ ಆರೋಪಿಗಳು ಆತನಿಗೆ ಡ್ರಗ್ ಇಂಜೆಕ್ಷನ್ ನೀಡಿ ದೆಹಲಿಯ ಬಕ್ಕರ್ ವಾಲಾ ಪ್ರದೇಶದ ಡಿಡಿಎ ಫ್ಲ್ಯಾಟ್ ವೊಂದರಲ್ಲಿ ಅಡವಿಸಿಟ್ಟಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ರೋಹಿತ್ ಮತ್ತು ಸತೀಶ್ ಎಂಬ ಇಬ್ಬರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ನಿತೀಶ್ ಕಾಲ್ ಸೆಂಟರ್ ಮೂಲಕ ಜನರಿಗೆ ನಕಲಿ ಕರೆ ಮಾಡಿ ಮೋಸ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಅಲ್ಲದೆ ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಗೌರವ್ ನನ್ನು ಅಪಹರಿಸಲು ಸಂಚು ರೂಪಿಸಿದ್ದೆವು ಎಂದು ಸತ್ಯ ಬಹಿರಂಗ ಪಡಿಸಿದ್ದಾರೆ.

  • ವೆಬ್ ಸಿರೀಸ್ ನೋಡಿ ಕಿಡ್ನ್ಯಾಪ್ ನಾಟಕ- 2 ಲಕ್ಷಕ್ಕೆ ಬೇಡಿಕೆ ಇಟ್ಟ ಯುವಕರು

    ವೆಬ್ ಸಿರೀಸ್ ನೋಡಿ ಕಿಡ್ನ್ಯಾಪ್ ನಾಟಕ- 2 ಲಕ್ಷಕ್ಕೆ ಬೇಡಿಕೆ ಇಟ್ಟ ಯುವಕರು

    – ತಂದೆಗೆ ಕರೆ ಮಾಡಿ ಬೆದರಿಕೆ, ಹಣಕ್ಕಾಗಿ ಒತ್ತಾಯ

    ನವದೆಹಲಿ: ಜನಪ್ರಿಯ ವೆಬ್ ಸಿರೀಸ್ ನೋಡಿ 22 ವರ್ಷದ ಇಬ್ಬರು ಸೋದರ ಸಂಬಂಧಿ ಯುವಕರು ಕಿಡ್ನ್ಯಾಪ್ ಮಾಡಿದ್ದಾರೆಂದು ನಾಟಕವಾಡಿ ತಮ್ಮ ಮನೆಯವರಗೇ ಬೆದರಿಕೆ ಹಾಕಿದ್ದು, 2 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದಾರೆ.

    ಆರೋಪಿಗಳನ್ನು ನದೀಮ್ ಹಾಗೂ ಅಫ್ತಾಬ್ ಎಂದು ಗುರುತಿಸಲಾಗಿದ್ದು, ಝಾಕೀರ್ ನಗರದ ನಿವಾಸಿಗಳಾಗಿದ್ದಾರೆ. ಕಿಡ್ನ್ಯಾಪ್ ಮಾಡಿದ್ದಾರೆಂದು ನಾಟಕವಾಡುವ ದಿನವೇ ಆರೋಪಿಗಳು ಮಹಿಳೆಯ ಮೊಬೈಲ್ ಕದ್ದಿದ್ದಾರೆ. ಅದೇ ಮೊಬೈಲ್‍ನಿಂದ ಕರೆ ಮಾಡಿ ಮನೆಯವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ನದೀಮ್ ತನ್ನ ತಂದೆಯ ಜೊತೆಗೆ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ತಂದೆ ಮದ್ಯ ಸೇವಿಸಲು ಬಿಡುತ್ತಿರಲಿಲ್ಲ. ಅಲ್ಲದೆ ಕುಡಿಯಲು ಹಣ ನೀಡುತ್ತಿರಲಿಲ್ಲ. ಇದರಿಂದ ಬೇಸತ್ತಿದ್ದ ಯುವಕ ‘ಬ್ರೀಥ್: ಇಂಟು ದಿ ಶಾಡೋಸ್’ ಎಂಬ ವೆಬ್ ಸರಣಿಯ ಘಟನೆಯಂತೆ ಕಿಡ್ನ್ಯಾಪ್ ನಾಟಕವಾಡುವ ಬಗ್ಗೆ ನಿರ್ಧರಿಸಿದ್ದಾನೆ. ಬಳಿಕ ತನ್ನ ಸೋದರ ಸಂಬಂಧಿ ಅಫ್ತಾಬ್ ಜೊತೆ ಸೇರಿ ಕಿಡ್ನ್ಯಾಪ್ ನಾಟಕವಾಡಿ ತಂದೆಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ 2 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

    ಇದನ್ನರಿಯದ ಅಫ್ತಾಬ್ ತಂದೆ ಕಿಡ್ನ್ಯಾಪ್ ಆಗಿರುವ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ ತಮ್ಮ ಸೋದರಳಿಯ ನದೀಮ್‍ನನ್ನು ಅಪಹರಿಸಲಾಗಿದೆ ಎಂದು ತಿಳಿಸಿದ್ದಾರೆ. ನದೀಮ್ ಬಿಡುಗಡೆ ಮಾಡಬೇಕೆಂದರೆ 2 ಲಕ್ಷ ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.

    ಈ ಬಗ್ಗೆ ಆಗ್ನೇಯ ಡಿಸಿಪಿ ಆರ್.ಪಿ.ಮೀನಾ ಮಾತನಾಡಿ, ನಮ್ಮ ಪೊಲೀಸ್ ತಂಡ ತನಿಖೆ ಆರಂಭಿಸಿದ್ದು, ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೆ ನದೀಮ್ ಮೊಬೈಲ್‍ನ ಕಾಲ್ ರೆಕಾರ್ಡ್‍ಗಳನ್ನು ಸಹ ಪಡೆದಿದ್ದೇವೆ. ಈ ವೇಳೆ ಆತ ತನ್ನ ಗೆಳತಿಯೊಂದಿಗೆ ನಿರಂತರ ಸಂಪರ್ಕ ಹೊಂದಿರುವುದು ತಿಳಿಯಿತು. ಬಳಿಕ ಅವರನ್ನು ಸಂಪರ್ಕಿಸಿದ್ದು, ನದೀಮ್ ತನ್ನ ಸೋದರ ಸಂಬಂಧಿ ಅಫ್ತಾಬ್ ಜೊತೆಗೇ ಇದ್ದಾನೆ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ.

    ಬಳಿಕ ಪೊಲೀಸರು ತಂದೆಯ ಬಳಿ ವಿಚಾರಣೆ ನಡೆಸಿದ್ದು, ತಮ್ಮ ಮಗ ಅಫ್ತಾಬ್ ಸಹ ಕಾಣೆಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಅಲ್ಲದೆ ಸಿಸಿಟಿವಿ ಪರಿಶೀಲಿಸಿದ್ದು, ಯಾವುದೇ ಅಪಹರಣ ನಡೆದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ಇದೆಲ್ಲದರ ಮಧ್ಯೆ ಮಹಿಳೆಯೊಬ್ಬರು ಜಾಮಿಯಾ ನಗರದಲ್ಲಿ ಯಾರೋ ನನ್ನ ಮೊಬೈಲ್ ಕದ್ದಿದ್ದಾರೆ ಎಂದು ಪೊಲೀಸರಿಗೆ ಕರೆ ಮಾಡಿದ್ದಾಳೆ. ಪೊಲೀಸರು ಈ ಕುರಿತು ಸಿಸಿಟಿವಿ ಪರಿಶೀಲಿಸಿದ್ದು, ಮೊಬೈಲ್ ಕಳವು ಪ್ರಕರಣದಲ್ಲಿ ಅಫ್ತಾಬ್ ಹಾಗೂ ನದೀಮ್ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ದಾಳಿ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ.

  • 100 ಮಂದಿಯಿಂದ ಅಪಹರಣಕ್ಕೊಳಗಾದ 38 ಮಹಿಳೆಯರು, ಮಕ್ಕಳ ರಕ್ಷಣೆ

    100 ಮಂದಿಯಿಂದ ಅಪಹರಣಕ್ಕೊಳಗಾದ 38 ಮಹಿಳೆಯರು, ಮಕ್ಕಳ ರಕ್ಷಣೆ

    ಜೈಪುರ: ರಾಜಸ್ಥಾನದ ಜಲ್ವಾರ್‍ನಲ್ಲಿ ಅಪಹರಣಕ್ಕೊಳಗಾದ 38 ಜನ ಮಹಿಳೆಯರು ಹಾಗೂ ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ.

    ರಾಜಸ್ಥಾನದ ಜಲ್ವಾರ್ ಬಾಮನ್ ದೇವರಿಯನ್ ಗ್ರಾಮಕ್ಕೆ ಖಡ್ಗ, ಚಾಕು ಮುಂತಾದ ಮಾರಕಾಸ್ತ್ರಗಳೊಂದಿಗೆ ಗ್ರಾಮಕ್ಕೆ ಬಂದಿರುವ 100 ಮಂದಿ ದುಷ್ಕರ್ಮಿಗಳು, ಮಹಿಳೆಯರು ಮತ್ತು ಮಕ್ಕಳನ್ನು ಟೆಂಪೋದಲ್ಲಿ ಅಪಹರಿಸಿಕೊಂಡು ಹೋಗಿದ್ದರು. ಈ ಪ್ರಕರಣದಲ್ಲಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದೆವು ಎಂದು ಜಲ್ವಾರ್ ಎಸ್.ಪಿ ಡಾ.ಕಿರಣ್ ಕಾಂಗ್ ಸಿಂಧು ಹೇಳಿದ್ದಾರೆ.

    ತನಿಖೆ ನಡೆಸುತ್ತಿರುವ ನಮಗೆ ಆರೋಪಿಗಳು ಹೇಗೆ ಬಂದರು ಎಂಬ ಸುಳಿವು ಸಿಕ್ಕಿತ್ತು. ಮಧ್ಯಪ್ರದೇಶದ ರಟ್ಲಾಂ ಜಿಲ್ಲೆಯಿಂದ ಬಸ್ ಹಾಗೂ ಇತರ ವಾಹನಗಳ ಮೂಲಕವಾಗಿ ಗ್ರಾಮವನ್ನು ಪ್ರವೇಶಿಸಿದ್ದರು. ಅವರ ಬಳಿ ಚಾಕು, ಕತ್ತಿ ಸೇರಿದಂತೆ ಹಲವು ಮಾರಕಾಸ್ತ್ರಗಳು ಇದ್ದವು ಎಂದು ಮೂಲಗಳಿಂದ ತಿಳಿದುಬಂದಿದೆ ಎಂದು ಎಸ್‍ಪಿ ತಿಳಿಸಿದ್ದಾರೆ.

    ಅಪಹರಣ ಪ್ರಕರಣದ ಕುರಿತಾಗಿ ತನಿಖೆ ನಡೆಸುತ್ತಿರುವ ನಮಗೆ ಅರೋಪಿಗಳ ಸುಳಿವು ಸಿಕ್ಕಿದ ಹಿನ್ನೆಲೆಯಲ್ಲಿ ನಮ್ಮ ತಂಡದೊಂದಿಗೆ ಸ್ಥಳಕ್ಕೆ ಹೋಗಿ ಕಾರ್ಯಾಚರಣೆ ನಡೆಸಿದ್ದೇವೆ. ಈ ವೇಳೆ 38 ಜನ ಮಹಿಳೆಯರು ಹಾಗೂ ಮಕ್ಕಳನ್ನು ರಕ್ಷಿಸಿದ್ದೇವೆ. ಈ ಪ್ರಕರಣದಲ್ಲಿ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದೇವೆ. ಪರಾರಿಯಾಗಿರುವ ಇನ್ನು ಕೆಲವು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

  • ವರ್ತೂರು ಕಿಡ್ನ್ಯಾಪ್ ಕೇಸ್ ಮಹಾ ರಹಸ್ಯ – ಹುಡುಗಿ ವಿಚಾರಕ್ಕೆ ಆಯ್ತಾ ಅಪಹರಣ?

    ವರ್ತೂರು ಕಿಡ್ನ್ಯಾಪ್ ಕೇಸ್ ಮಹಾ ರಹಸ್ಯ – ಹುಡುಗಿ ವಿಚಾರಕ್ಕೆ ಆಯ್ತಾ ಅಪಹರಣ?

    – ಕಿಡ್ನ್ಯಾಪ್ ಕಹಾನಿಗೆ ಹನಿಟ್ರ್ಯಾಪ್ ಲಿಂಕ್!

    ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದ ಮಹಾ ರಹಸ್ಯ ಬಯಲಾಗಿದೆ. ಮಾಜಿ ಸಚಿವರು ಹನಿಟ್ರ್ಯಾಪ್ ನಲ್ಲಿ ಸಿಲುಕಿದ್ರಾ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ.

    ವರ್ತೂರು ಪ್ರಕಾಶ್ ಅವರ ಕಾರಿನಲ್ಲಿ ವೇಲ್ ಮಾದರಿಯ ಬಟ್ಟೆ ಪತ್ತೆಯಾಗಿದ್ದು, ಮಾಜಿ ಸಚಿವರು ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿದ್ರಾ ಎಂಬ ಅನುಮಾನಗಳು ದಟ್ಟವಾಗ್ತಿವೆ. ತಮ್ಮನ್ನ ಅಪಹರಿಸಿದವರು ಯಾರು ಎಂದು ತಿಳಿದಿದ್ದರೂ ವರ್ತೂರು ಪ್ರಕಾಶ್ ಅಪಹರಣಕಾರರ ಹೆಸರು ಹೇಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಕಾರಿನಲ್ಲಿ ಸಿಕ್ಕ ವೇಲ್ ಸುತ್ತ ಸಾಕಷ್ಟು ಅನುಮಾನದ ಹುತ್ತ ಹುಟ್ಟಿಕೊಂಡಿದೆ. ಅಪಹರಣ ವೇಳೆ ವರ್ತೂರು ಪ್ರಕಾಶ್ ಕಾರಿನಲ್ಲಿ ಯಾರಿದ್ರು ಎಂಬುದರ ಬಗ್ಗೆಯೂ ನಿಖರ ಮಾಹಿತಿ ಲಭ್ಯವಾಗಿಲ್ಲ.

    ಇನ್ನೂ ವರ್ತೂರು ಪ್ರಕಾಶ್ ನೀಡಿರುವ ಹೇಳಿಕೆಗಳಿಗೂ ಘಟನೆಗಳಿಗೂ ಸಾಮ್ಯತೆ ಕಂಡು ಬಂದಿಲ್ಲ. ಹಣಕಾಸು ವ್ಯವಹಾರದ ಜೊತೆ ಹುಡುಗಿಯ ನಂಟು ಪ್ರಕರಣದಲ್ಲಿ ಸೇರ್ಪಡೆಯಾಗಿದೆ. ವರ್ತೂರು ಪ್ರಕಾಶ್ ಪುಣೆ ಮೂಲದ ವ್ಯಕ್ತಿಯೊಬ್ಬರಿಂದ 10 ಕೋಟಿ ರೂ. ಸಾಲ ಪಡೆದಿದ್ದರು. ಆ ಹಣ ಬಡ್ಡಿ ಸೇರಿದಂತೆ 30 ಕೋಟಿ ರೂ.ಗೆ ತಲುಪಿದೆ. ಅದೇ ಹಣಕ್ಕಾಗಿ ವರ್ತೂರು ಪ್ರಕಾಶ್ ಅಪಹರಣ ನಡೆದಿತ್ತು ಎಂದು ಹೇಳಲಾಗುತ್ತಿದೆ.

    ಹೌದು. ವರ್ತೂರ್ ಪ್ರಕಾಶ್ ಮಾಜಿ ಸಚವರಾಗಿದ್ದಾರೆ. ಅಷ್ಟೇ ಅಲ್ಲದೇ ಹಲವು ರಾಜಕೀಯ ನಾಯಕರಿಗೆ ಪರಿಚಯ ಹೊಂದಿದ್ದಾರೆ. ಸಾಧಾರಣವಾಗಿ ಹೊರ ಹೋದ ವ್ಯಕ್ತಿ ಒಂದು ದಿನ ಮನೆಗೆ ಬಾರದೇ ಇದ್ದರೂ ಕುಟುಂಬದ ಸದಸ್ಯರು ಆತನನ್ನು ಹುಡುಕಲು ಆರಂಭಿಸಿ ಕೊನೆಗೆ ನಾಪತ್ತೆ ದೂರನ್ನು ದಾಖಲಿಸುತ್ತಾರೆ. ಹೀಗಿರುವಾಗ ಮೂರು ದಿನ ಕಿಡ್ನಾಪ್ ಆಗಿದ್ದರೂ ಮನೆಯವರು ದೂರನ್ನು ಯಾಕೆ ದಾಖಲಿಸಿಲ್ಲ ಎಂಬ ಗಂಭೀರವಾದ ಪ್ರಶ್ನೆ ಎದ್ದಿದೆ.

    ದೂರು ತಡ ಯಾಕೆ?
    ಅಪಹರಣಕಾರರು ಕಾರಿನಿಂದ ಇಳಿಸಿದ ಬಳಿಕ ಅಪರಿಚಿತ ಕಾರನ್ನು ಅಡ್ಡ ಹಾಕಿ ಕೆ.ಆರ್ ಪುರಂನಲ್ಲಿರುವ ಸಾಯಿ ಆಸ್ಪತ್ರೆವರೆಗೆ ಡ್ರಾಪ್ ಪಡೆದಿದ್ದೆ. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದಾಗ ಮಂಗಳವಾರ ಬೆಳ್ಳಂದೂರು ಸ್ಮಶಾನದ ಬಳಿ ನನ್ನ ಕಾರು ಪತ್ತೆಯಾಗಿದೆ. ಗಾಯಗೊಂಡಿದ್ದ ಕಾರಣ ಈಗ ತಡವಾಗಿ ದೂರು ನೀಡುತ್ತಿದ್ದೇನೆ ಎಂದು ವರ್ತೂರ್ ಪ್ರಕಾಶ್ ತಿಳಿಸಿದ್ದಾರೆ.

    ಯಾವ ದಿನ ಏನಾಯ್ತು?
    ನವೆಂಬರ್ 25:
    ಕೋಲಾರದ ಬೆಗ್ಲಿಹೊಸಹಳ್ಳಿ ಫಾರಂಹೌಸ್‍ನಿಂದ ಬೆಂಗಳೂರಿಗೆ ಬರುತ್ತಿದ್ದಾಗ ಸಂಜೆ 7 ಗಂಟೆಗೆ ಅಪಹರಣ ನಡೆದಿದೆ. ಎರಡು ಕಾಡುಗಳಲ್ಲಿ ಬಂದಿದ್ದ 8 ಜನರ ತಂಡ ಲಾಂಗ್ ತೋರಿಸಿ ಕಾರು ಅಡ್ಡಗಟ್ಟಿ ವರ್ತೂರ್ ಪ್ರಕಾಶ್, ಚಾಲಕನ ಅಪಹರಣ ಮಾಡಿದ್ದಾರೆ. ಕೈ ಕಾಲುಗಳನ್ನು ಹಗ್ಗದಿಂದ ಬಿಗಿದು ಹಲ್ಲೆ ನಡೆದುಕಣ್ಣಿಗೆ ಪಟ್ಟಿ ಕಟ್ಟಿ ರಹಸ್ಯ ಸ್ಥಳಕ್ಕೆ ಕರೆದೊಯ್ದು 30 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ.

    ನವೆಂಬರ್ 26:
    ಅಪಹರಣಕಾರರ ಹಿಂಸೆ ತಾಳಲಾರದೇ ನಯಾಜ್ ಎಂಬಾತನ ಮೂಲಕ 48 ಲಕ್ಷ ಹಣ ವರ್ತೂರ್ ತರಿಸಿಕೊಂಡಿದ್ದಾರೆ. ಕೋಲಾರದ ಕಾಫಿಡೇ ಶಾಪ್ ಬಳಿ ನಯಾಜ್‍ನಿಂದ 48 ಲಕ್ಷ ರೂ. ಹಸ್ತಾಂತರವಾಗಿದೆ. ಈ ವೇಳೆ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟ ಅಪಹರಣಕಾರರು ಚಿತ್ರಹಿಂಸೆ ನೀಡಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ.

    ನವೆಂಬರ್ 27:
    ವರ್ತೂರು ಪ್ರಕಾಶ್ ಕೊಟ್ಟ ದೂರಿನಲ್ಲಿ ಈ ದಿನದ ಬಗ್ಗೆ ಉಲ್ಲೇಖ ಇಲ್ಲ

    ನವೆಂಬರ್ 28:

    ಮುಂಜಾನೆಯವರೆಗೂ ಚಿತ್ರಹಿಂಸೆ ನೀಡಿ ಹಣ ಇಲ್ಲ ಎಂದಾಗ ಚಾಲಕನ ತಲೆಗೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಮಧ್ಯರಾತ್ರಿ 1 ಗಂಟೆಗೆ ಕಾರು ಚಾಲಕ ಮೂರ್ಛೆ ತಪ್ಪಿಬಿದ್ದಿದ್ದ. ಸತ್ತು ಹೋಗಿದ್ದಾನೆ ಭಾವಿಸಿ ಸ್ವಲ್ಪ ದೂರದಲ್ಲಿ ಅಪಹರಣಕಾರರಿಂದ ಮದ್ಯಪಾನ ಪಾರ್ಟಿ ಮಾಡಿದ್ದಾರೆ. ಆದರೆ ಪ್ರಜ್ಞೆ ಬಂದ ಬಳಿಕ ಅಪಹರಣಕಾರರಿಂದ ಕಾರು ಚಾಲಕ ತಪ್ಪಿಸಿಕೊಂಡಿದ್ದಾನೆ. ಬಳಿಕ ವರ್ತೂರು ಪ್ರಕಾಶ್ ಅವರನ್ನು ಹೊಸಕೋಟೆಯ ಶಿವನಾಪುರ ಬಳಿ ಕಾರಿನಿಂದ ಇಳಿಸಿದ ಅಪಹರಣಕಾರರು ದೂರು ನೀಡಿದರೆ ನಿನ್ನ ಮಕ್ಕಳು ಕೊಲೆ ಆಗ್ತಾರೆ ಎಂದು ಧಮ್ಕಿ ಹಾಕಿ ಪರಾರಿಯಾಗಿದ್ದಾರೆ.

  • ಸಿನಿಮಾ ಶೈಲಿಯಲ್ಲಿ ವರ್ತೂರ್ ಕಿಡ್ನಾಪ್ – ಪ್ರಕರಣದ ಸುತ್ತ ಅನುಮಾನದ ಹುತ್ತ

    ಸಿನಿಮಾ ಶೈಲಿಯಲ್ಲಿ ವರ್ತೂರ್ ಕಿಡ್ನಾಪ್ – ಪ್ರಕರಣದ ಸುತ್ತ ಅನುಮಾನದ ಹುತ್ತ

    – ಬೆಂಗಳೂರಿಗೆ ಬರುತ್ತಿದ್ದಾಗ ನ.26ರಂದು ಕಿಡ್ನಾಪ್
    – ಕೈ ಕಾಲುಗಳನ್ನು ಹಗ್ಗದಿಂದ ಬಿಗಿದು ಲಾಂಗ್, ರಾಡ್‍ಗಳಿಂದ ಹಲ್ಲೆ

    ಬೆಂಗಳೂರು: ಸಿನಿಮೀಯ ಶೈಲಿಯಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್‍ರನ್ನು ಅಪಹರಿಸಿ ಹಿಂಸೆ ನೀಡಿದ ಪ್ರಕರಣದ ಸುತ್ತ ಅನುಮಾನ ಹುತ್ತ ಸೃಷ್ಟಿಯಾಗಿದೆ. ದೂರಿನ ಪ್ರಕಾರ ವರ್ತೂರು ಪ್ರಕಾಶ್ 3 ದಿನ ಕಿಡ್ನಾಪ್ ಆಗಿದ್ದರು. ಕಿಡ್ನಾಪ್ ಆಗಿದ್ದರೂ ವರ್ತೂರು ಕುಟುಂಬಸ್ಥರು ನಾಪತ್ತೆ ದೂರನ್ನು ಯಾಕೆ ನೀಡಿಲ್ಲ ಎಂಬ ಪ್ರಶ್ನೆ ಎದ್ದಿದೆ.

    ಹೌದು. ವರ್ತೂರ್ ಪ್ರಕಾಶ್ ಮಾಜಿ ಸಚವರಾಗಿದ್ದಾರೆ. ಅಷ್ಟೇ ಅಲ್ಲದೇ ಹಲವು ರಾಜಕೀಯ ನಾಯಕರಿಗೆ ಪರಿಚಯ ಹೊಂದಿದ್ದಾರೆ. ಸಾಧಾರಣವಾಗಿ ಹೊರ ಹೋದ ವ್ಯಕ್ತಿ ಒಂದು ದಿನ ಮನೆಗೆ ಬಾರದೇ ಇದ್ದರೂ ಕುಟುಂಬದ ಸದಸ್ಯರು ಆತನನ್ನು ಹುಡುಕಲು ಆರಂಭಿಸಿ ಕೊನೆಗೆ ನಾಪತ್ತೆ ದೂರನ್ನು ದಾಖಲಿಸುತ್ತಾರೆ. ಹೀಗಿರುವಾಗ ಮೂರು ದಿನ ಕಿಡ್ನಾಪ್ ಆಗಿದ್ದರೂ ಮನೆಯವರು ದೂರನ್ನು ಯಾಕೆ ದಾಖಲಿಸಿಲ್ಲ ಎಂಬ ಗಂಭೀರವಾದ ಪ್ರಶ್ನೆ ಎದ್ದಿದೆ.

    ದೂರು ತಡ ಯಾಕೆ?
    ಅಪಹರಣಕಾರರು ಕಾರಿನಿಂದ ಇಳಿಸಿದ ಬಳಿಕ ಅಪರಿಚಿತ ಕಾರನ್ನು ಅಡ್ಡ ಹಾಕಿ ಕೆ.ಆರ್.ಪುರಂನಲ್ಲಿರುವ ಸಾಯಿ ಆಸ್ಪತ್ರೆವರೆಗೆ ಡ್ರಾಪ್ ಪಡೆದಿದ್ದೆ. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದಾಗ ಮಂಗಳವಾರ ಬೆಳ್ಳಂದೂರು ಸ್ಮಶಾನದ ಬಳಿ ನನ್ನ ಕಾರು ಪತ್ತೆಯಾಗಿದೆ. ಗಾಯಗೊಂಡಿದ್ದ ಕಾರಣ ಈಗ ತಡವಾಗಿ ದೂರು ನೀಡುತ್ತಿದ್ದೇನೆ ಎಂದು ವರ್ತೂರ್ ಪ್ರಕಾಶ್ ತಿಳಿಸಿದ್ದಾರೆ.

    ಯಾವ ದಿನ ಏನಾಯ್ತು?
    ನವೆಂಬರ್ 25:
    ಕೋಲಾರದ ಬೆಗ್ಲಿಹೊಸಹಳ್ಳಿ ಫಾರಂಹೌಸ್‍ನಿಂದ ಬೆಂಗಳೂರಿಗೆ ಬರುತ್ತಿದ್ದಾಗ ಸಂಜೆ 7 ಗಂಟೆಗೆ ಅಪಹರಣ ನಡೆದಿದೆ. ಎರಡು ಕಾರುಗಳಲ್ಲಿ ಬಂದಿದ್ದ 8 ಜನರ ತಂಡ ಲಾಂಗ್ ತೋರಿಸಿ ಕಾರು ಅಡ್ಡಗಟ್ಟಿ ವರ್ತೂರ್ ಪ್ರಕಾಶ್, ಚಾಲಕನ ಅಪಹರಣ ಮಾಡಿದ್ದಾರೆ. ಕೈ ಕಾಲುಗಳನ್ನು ಹಗ್ಗದಿಂದ ಬಿಗಿದು ಹಲ್ಲೆ ನಡೆಸಿ ಕಣ್ಣಿಗೆ ಪಟ್ಟಿ ಕಟ್ಟಿ ರಹಸ್ಯ ಸ್ಥಳಕ್ಕೆ ಕರೆದೊಯ್ದು 30 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ.

    ನವೆಂಬರ್ 26:
    ಅಪಹರಣಕಾರರ ಹಿಂಸೆ ತಾಳಲಾರದೇ ನಯಾಜ್ ಎಂಬಾತನ ಮೂಲಕ 48 ಲಕ್ಷ ಹಣ ವರ್ತೂರ್ ತರಿಸಿಕೊಂಡಿದ್ದಾರೆ. ಕೋಲಾರದ ಕಾಫಿಡೇ ಶಾಪ್ ಬಳಿ ನಯಾಜ್‍ನಿಂದ 48 ಲಕ್ಷ ರೂ. ಹಸ್ತಾಂತರವಾಗಿದೆ. ಈ ವೇಳೆ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟ ಅಪಹರಣಕಾರರು ಚಿತ್ರಹಿಂಸೆ ನೀಡಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ.

    ನವೆಂಬರ್ 27:
    ವರ್ತೂರು ಪ್ರಕಾಶ್ ಕೊಟ್ಟ ದೂರಿನಲ್ಲಿ ಈ ದಿನದ ಬಗ್ಗೆ ಉಲ್ಲೇಖ ಇಲ್ಲ.

     

    ನವೆಂಬರ್ 28:
    ಮುಂಜಾನೆಯವರೆಗೂ ಚಿತ್ರಹಿಂಸೆ ನೀಡಿ ಹಣ ಇಲ್ಲ ಎಂದಾಗ ಚಾಲಕನ ತಲೆಗೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಮಧ್ಯರಾತ್ರಿ 1 ಗಂಟೆಗೆ ಕಾರು ಚಾಲಕ ಮೂರ್ಛೆ ತಪ್ಪಿಬಿದ್ದಿದ್ದ. ಸತ್ತು ಹೋಗಿದ್ದಾನೆ ಭಾವಿಸಿ ಸ್ವಲ್ಪ ದೂರದಲ್ಲಿ ಅಪಹರಣಕಾರರು ಮದ್ಯಪಾನ ಪಾರ್ಟಿ ಮಾಡಿದ್ದಾರೆ. ಆದರೆ ಪ್ರಜ್ಞೆ ಬಂದ ಬಳಿಕ ಅಪಹರಣಕಾರರಿಂದ ಕಾರು ಚಾಲಕ ತಪ್ಪಿಸಿಕೊಂಡಿದ್ದಾನೆ. ಬಳಿಕ ವರ್ತೂರು ಪ್ರಕಾಶ್ ಅವರನ್ನು ಹೊಸಕೋಟೆಯ ಶಿವನಾಪುರ ಬಳಿ ಕಾರಿನಿಂದ ಇಳಿಸಿದ ಅಪಹರಣಕಾರರು ದೂರು ನೀಡಿದರೆ ನಿನ್ನ ಮಕ್ಕಳು ಕೊಲೆ ಆಗ್ತಾರೆ ಎಂದು ಧಮ್ಕಿ ಹಾಕಿ ಪರಾರಿಯಾಗಿದ್ದಾರೆ.

    ಅನುಮಾನಕ್ಕೆ ಕಾರಣ ಏನು?
    1. ದೂರಿನ ಪ್ರಕಾರ ವರ್ತೂರು ಪ್ರಕಾಶ್ 3 ದಿನ ಕಿಡ್ನಾಪ್ ಆಗಿದ್ದಾರೆ. ಆದರೂ, ವರ್ತೂರು ಕುಟುಂಬಸ್ಥರು ನಾಪತ್ತೆ ದೂರನ್ನು ನೀಡಲಿಲ್ಲ ಯಾಕೆ?
    2. ರಿಲೀಸ್ ಆದ ತಕ್ಷಣ ವರ್ತೂರ್ ಪ್ರಕಾಶ್ ದೂರು ನೀಡಲಿಲ್ಲ ಯಾಕೆ?
    3. ತಡವಾಗಿ ಕೊಟ್ಟ ದೂರಿನಲ್ಲಿ ಅಪಹರಣಕಾರರ ವೇಷಭೂಷಣ, ಭಾಷೆ ಬಗ್ಗೆ ಉಲ್ಲೇಖವಿಲ್ಲ ಏಕೆ?
    4. 30 ಕೋಟಿಗೆ ಬೇಡಿಕೆ ಇಟ್ಟವರು ಕೇವಲ 48 ಲಕ್ಷಕ್ಕೆ ಸುಮ್ಮನಾದರೇ?
    5. ಅಪಹರಣಕಾರರಿಂದ ತಪ್ಪಿಸಿಕೊಂಡಿದ್ದಾನೆ ಎನ್ನಲಾದ ಚಾಲಕ ದೂರು ನೀಡಲಿಲ್ಲ ಯಾಕೆ?
    6. ಅಪಹರಣಕಾರರಿಗೆ 48 ಲಕ್ಷ ತಲುಪಿಸಿದ್ದ ನಯಾಜ್ ದೂರು ಕೊಡಲಿಲಲ್ಲ ಯಾಕೆ?

     

  • ವರ್ತೂರು ಪ್ರಕಾಶ್ ಅಪಹರಣ, ಬಿಡುಗಡೆ- 30 ಕೋಟಿಗೆ ಡಿಮ್ಯಾಂಡ್?

    ವರ್ತೂರು ಪ್ರಕಾಶ್ ಅಪಹರಣ, ಬಿಡುಗಡೆ- 30 ಕೋಟಿಗೆ ಡಿಮ್ಯಾಂಡ್?

    – ಮೂರು ದಿನ ಒತ್ತೆಯಳಾಗಿರಿಸಿಕೊಂಡು ಹಣಕ್ಕೆ ಬೇಡಿಕೆ

    ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನ ಅಪಹರಣ ಮಾಡಿ ಮೂರು ದಿನ ಕೂಡಿಟ್ಟು ಬಿಡುಗಡೆಗೊಳಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತೂರು ಪ್ರಕಾಶ್, ಬೆಳ್ಳಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ನವೆಂಬರ್ 25ರಂದು ಕೋಲಾರದ ಬೇಗ್ಲಿಯ ಹೊಸಹಳ್ಳಿಯಲ್ಲಿ ಸುಮಾರು ಎಂಟು ಜನರು ನನ್ನ ಮೇಲೆ ಹಲ್ಲೆ ಮಾಡಿದರು. ಮೂರು ದಿನಗಳ ಕಾಲ ಒತ್ತೆಯಾಗಿರಿಸಿಕೊಂಡು 30 ಕೋಟಿ ರೂ.ಗೆ ಬೇಡಿಕೆ ಇರಿಸಿದ್ದರು. ನನ್ನ ಕೈ ಮತ್ತು ಕಾಲಿನ ಭಾಗದಲ್ಲಿ ಅಪಹರಣಕಾರರು ಹಲ್ಲೆ ನಡೆಸಿದ್ದಾರೆ. ಜೊತೆಯಲ್ಲಿದ್ದ ಚಾಲಕ ಸುನಿಲ್ ಮೇಲೆಯೂ ಹಲ್ಲೆ ನಡೆದಿದೆ. ಆದ್ರೆ ಸುನಿಲ್ ಘಟನಾ ಸ್ಥಳದಿಂದ ತಪ್ಪಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಮೂರು ದಿನಗಳ ಬಳಿಕ ನನ್ನನು ಹೊಸಕೋಟೆಯಲ್ಲಿ ಬಿಟ್ಟು ಅಪಹರಣಕಾರರು ಎಸ್ಕೇಪ್ ಆಗಿದ್ದಾರೆ ಎಂದು ವರ್ತೂರು ಪ್ರಕಾಶ್ ದೂರಿನಲ್ಲಿ ದಾಖಲಸಿದ್ದಾರೆ.

    ದೂರು ದಾಖಲಿಸಿ ಹೊರ ಬಂದ ವರ್ತೂರು ಪ್ರಕಾಶ್ ಯಾವುದೇ ಹೇಳಿಕೆ ನೀಡದೇ ಹೋಗಿದ್ದಾರೆ. ಮೂರು ದಿನಗಳ ಹಿಂದೆ ನಂಬರ್ ಪ್ಲೇಟ್ ಇಲ್ಲದ ಕಾರ್ ಜುನ್ನಸಂದ್ರದಲ್ಲಿ ಪತ್ತೆಯಾಗಿತ್ತು. ಸ್ಥಳೀಯರು ಅನುಮಾನಾಸ್ಪದವಾಗಿ ನಿಂತಿದ್ದ ಕಾರಿನ ಬಗ್ಗೆ ಬೆಳ್ಳಂದೂರರು ಠಾಣೆಯ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.

  • ಉಡುಪಿಯಲ್ಲಿ ಅಪ್ರಾಪ್ತ ಬಾಲಕಿ ಅಪಹರಣ – ಠಾಣೆಗೆ ಹಿಂದೂ ಸಂಘಟನೆಗಳ ಮುತ್ತಿಗೆ

    ಉಡುಪಿಯಲ್ಲಿ ಅಪ್ರಾಪ್ತ ಬಾಲಕಿ ಅಪಹರಣ – ಠಾಣೆಗೆ ಹಿಂದೂ ಸಂಘಟನೆಗಳ ಮುತ್ತಿಗೆ

    ಉಡುಪಿ: ಅಪ್ರಾಪ್ತ ಬಾಲಕಿಯನ್ನು ಅನ್ಯಕೋಮಿನ ಯುವಕ ಅಪಹರಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಯ ಸದಸ್ಯರು ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಪ್ರತಿಭಟಿಸಿದ ಘಟನೆ ಉಡುಪಿ ಜಿಲ್ಲೆ ಹಿರಿಯಡ್ಕದಲ್ಲಿ ನಡೆದಿದೆ. ಘಟನೆ ನಡೆದು ಮೂರು ದಿನ ಕಳೆದರೂ ಬಾಲಕಿ ಪತ್ತೆಯಾಗದೆ ಇರುವುದನ್ನು ಖಂಡಿಸಿ ಹಿಂದೂ ಸಂಘಟನೆಗಳು ಬೀದಿಗಿಳಿದಿದೆ.

    ಹಿರಿಯಡ್ಕ ಪೊಲೀಸ್ ಠಾಣೆ ಮುಂಭಾಗ ಮುನ್ನೂರಕ್ಕೂ ಹೆಚ್ಚು ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡರು ಜಮಾಯಿಸಿದ್ದರು. ಅಪ್ರಾಪ್ತ ಬಾಲಕಿಯನ್ನು ಅನ್ಯಕೋಮಿನ ಯುವಕ ಅಪಹರಣ ಮಾಡಿದ್ದಾನೆ. ಇದೊಂದು ಲವ್ ಜಿಹಾದ್ ಎಂದು ಸಂಘಟನೆಯ ಪ್ರಮುಖರು ಆಪಾದಿಸಿದ್ದಾರೆ. ಈ ಘಟನೆಗೆ ಯಾರೆಲ್ಲಾ ಕುಮ್ಮಕ್ಕು ನೀಡಿದ್ದಾರೆ ಎಲ್ಲರನ್ನೂ ತಕ್ಷಣಕ್ಕೆ ಬಂಧಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಉಪ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಮನವಿಯನ್ನು ಸಲ್ಲಿಸಲಾಯ್ತು.

    ಮನವಿ ಸ್ವೀಕರಿಸಿ ಉಪ ಪೊಲೀಸ್ ಅಧೀಕ್ಷಕ ಜೈಶಂಕರ್ ಮಾತನಾಡಿ, ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಅಲ್ಲದೆ ಸಿಸಿಟಿವಿ ಫುಟೇಜ್ ಲಭ್ಯವಾಗಿದ್ದು ಆರೋಪಿಯ ಚಲನವಲನಗಳ ಬಗ್ಗೆ ನಿಗಾ ಇರಿಸಲಾಗಿದೆ. ತನಿಖೆಯ ಬಗ್ಗೆ ಈಗಾಲೇ ಏನು ಹೇಳಲಿಕ್ಕೆ ಆಗುವುದಿಲ್ಲ. ಇದರಿಂದ ಆರೋಪಗಳಿಗೆ ಅನುಕೂಲವಾಗಬಹುದು ಆರೋಪಿಯನ್ನು ತಕ್ಷಣ ಬಂಧಿಸುವ ವಿಶ್ವಾಸ ನಮಗಿದೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದರು.

    ಆರೋಪಿ ಬಂಧನ ಶೀಘ್ರ ಆಗದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಪ್ರತಿಭಟನಾಕಾರರು ಕೊಟ್ಟರು. ಬಜರಂಗದಳ ಪ್ರಾಂತ ಸಂಚಾಲಕರು ಸುನಿಲ್ ಕೆ.ಆರ್. ಇದು ಲವ್ ಜಿಹಾದ್ ಷಡ್ಯಂತ್ರ ಇದರ ಹಿಂದೆ ಮತಾಂಧ ಸಂಘಟನೆಗಳ ಪಾತ್ರ ಇದೆ. ಯುವಕನ ಜೊತೆ ಕೈಜೋಡಿಸಿರುವ ವ್ಯಕ್ತಿಗಳನ್ನು ಮೊದಲು ಬಂಧಿಸಿ ವಿಚಾರಣೆ ನಡೆಸಿದ್ದರೆ ಬಾಲಕಿಯನ್ನು ಪತ್ತೆಹಚ್ಚಲು ಸುಲಭವಾಗುತ್ತದೆ. ಇನ್ನೆರಡು ದಿನದಲ್ಲಿ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

  • ತವರು ಮನೆ ಸೇರಿದ್ದ ಪತ್ನಿಗಾಗಿ ಮಗನನ್ನೇ ಕಿಡ್ನಾಪ್ ಮಾಡಿದ!

    ತವರು ಮನೆ ಸೇರಿದ್ದ ಪತ್ನಿಗಾಗಿ ಮಗನನ್ನೇ ಕಿಡ್ನಾಪ್ ಮಾಡಿದ!

    – ಸ್ನೇಹಿತರ ಸಹಾಯ ಪಡೆದು ಅಪಹರಣ
    – ಬಾಲಕನನ್ನು ತಾಯಿಗೆ ಒಪ್ಪಿಸಿದ ಪೊಲೀಸರು

    ಪುಣೆ: ಮಕ್ಕಳನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಡುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನೊಂದಿಗೆ ಮುನಿಸಿಕೊಂಡು ಪತ್ನಿ ತವರು ಮನೆ ಸೇರಿದ್ದಕ್ಕಾಗಿ ಮಗನನ್ನೇ ಕಿಡ್ನಾಪ್ ಮಾಡಿರುವ ಅಚ್ಚರಿಯ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.

    ಮಹಾರಾಷ್ಟ್ರದ ಸೊಲ್ಹಾಪುರ ಮೂಲದ 30 ವರ್ಷದ ವ್ಯಕ್ತಿ, ಆತನ 3 ವರ್ಷದ ಮಗನೊಂದಿಗೆ ಪಿಂಪ್ರಿ ಚಿಂಚ್ ವಾಡ್ ನಲ್ಲಿ ಪತ್ತೆಯಾಗಿದ್ದಾನೆ. ಸ್ವಂತ ಮಗನನ್ನೇ ಅಪಹರಿಸಿದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ.

    ಪತ್ನಿ ಕೆಲವು ತಿಂಗಳ ಹಿಂದೆ ಆಕೆಯ ತವರು ಮನೆಗೆ ತೆರಳಿದ್ದು, ವಾಪಸ್ ಬಂದಿರಲಿಲ್ಲ. ಹೀಗಾಗಿ ಪತ್ನಿ ನೆನಪಲ್ಲೇ ಇದ್ದ ವ್ಯಕ್ತಿ ಆಕೆ ವಾಪಸ್ ಬರುವಂತೆ ಮಾಡಲು ತನ್ನ ಮಗನನ್ನೇ ಕಿಡ್ನಾಪ್ ಮಾಡುವ ಪ್ಲಾನ್ ಮಾಡಿ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿ ದ್ದಾನೆ. ಅಂತೆಯೇ ಬಾಲಕನನ್ನು ಅಪಹರಿಸುವ ಮೂಲಕ ಸ್ನೇಹಿತರು ವ್ಯಕ್ತಿಗೆ ಸಹಾಯ ಮಾಡಿದ್ದಾರೆ.

    ಇತ್ತ 3 ವರ್ಷದ ಪುಟ್ಟ ಕಂದಮ್ಮ ಎಲ್ಲೂ ಕಾಣಿಸದಿದ್ದಾಗ ಮಹಿಳೆಯ ತಾಯಿ, ಮೊಮ್ಮಗನನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ದೂರಿನಲ್ಲಿ ಮಧ್ಯಾಹ್ನದ ವೇಳೆ ತನ್ನ ಮನೆಯ ಬಳಿ ಅಪರಿಚಿತ ವ್ಯಕ್ತಿಗಳು ಓಡಾಡಿದ್ದನ್ನು ನೋಡಿರುವುದಾಗಿ ಉಲ್ಲೇಖಿಸಿದ್ದಾರೆ.

    ದೂರು ಸ್ವೀಕರಿಸಿರುವ ಪೊಲೀಸರು ಮಗುವಿನ ಪತ್ತೆಗಾಗಿ ಬಲೆ ಬೀಸಿದರು. ಈ ವೇಳೆ ಅಪರಿಚಿತ ವ್ಯಕ್ತಿಗಳನ್ನು ಪತ್ತೆ ಮಾಡಿದ ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ಆರೋಪಿಗಳು ಮಗುವಿನ ತಂದೆಯ ಸ್ನೇಹಿತರು ಎಂಬುದಾಗಿ ತಿಳಿದುಬಂತು. ಅಲ್ಲದೆ ತನ್ನ ಸ್ನೇಹಿತನಿಗೆ ಸಹಾಯ ಮಾಡುವ ಸಲುವಾಗಿ ಬಾಲಕನನ್ನು ಕಿಡ್ನಾಪ್ ಮಾಡಿರುವುದಾಗಿ ಪೊಲೀಸರ ಮುಂದೆ ಸತ್ಯ ಒಪ್ಪಿಕೊಂಡಿದ್ದಾರೆ.

    ಘಟನೆ ಸಂಬಂಧ ಇಬ್ಬರನ್ನು ಬಂಧಿಸಿರುವ ಪೊಲೀಸರು ಮಗುವನ್ನು ತಾಯಿಗೆ ಒಪ್ಪಿಸಿದ್ದಾರೆ.

  • 12 ದಿನ ಮಾರುವೇಷದಲ್ಲಿ ಸುತ್ತಿ ಹಸುಗೂಸನ್ನು ಅಮ್ಮನ ಮಡಿಲು ಸೇರಿಸಿದ ಪೊಲೀಸ್ರು

    12 ದಿನ ಮಾರುವೇಷದಲ್ಲಿ ಸುತ್ತಿ ಹಸುಗೂಸನ್ನು ಅಮ್ಮನ ಮಡಿಲು ಸೇರಿಸಿದ ಪೊಲೀಸ್ರು

    ಚಿಕ್ಕಮಗಳೂರು: ಸಂಬಂಧಿಗಳೇ 9 ತಿಂಗಳ ಮಗುವನ್ನು ಕದ್ದು ಮತ್ತೊಬ್ಬರಿಗೆ ಮಾರಿದ್ದ ಪ್ರಕರಣವನ್ನು ಜಿಲ್ಲೆಯ ಅಜ್ಜಂಪುರ ಪೊಲೀಸರು 12 ದಿನಗಳ ಕಾಲ ಮಾರುವೇಷದಲ್ಲಿ ಸುತ್ತಾಡಿ ಮಗುವನ್ನು ಪತ್ತೆಹಚ್ಚಿದ್ದಾರೆ.

    ಕಳೆದ ಹತ್ತನ್ನೆರಡು ದಿನಗಳ ಹಿಂದೆ ಅಜ್ಜಂಪುರ ತಾಲೂಕಿನ ಬಾಳಯ್ಯನ ಹೊಸೂರು ಗ್ರಾಮದ ಪ್ರೇಮ-ರಾಜು ದಂಪತಿಯ ಮಗುವಿಗೆ ಕಿವಿ ಚುಚ್ಚಿಸಲು ಅಜ್ಜಂಪುರಕ್ಕೆ ಬಂದಿದ್ದರು. ಈ ವೇಳೆ ಇವರ ಜೊತೆ ದೂರದ ಸಂಬಂಧಿಗಳು ಆಗಿದ್ದ ಹಾಸನ ಜಿಲ್ಲೆ ಅರಸೀಕರೆ ತಾಲೂಕಿನ ಯಾದಪುರದ ಪ್ರದೀಪ್ ಹಾಗೂ ಆನಂದ್ ಕೂಡ ಇದ್ದರು.

    ಮಗುವಿಗೆ ಕಿವಿ ಚುಚ್ಚಿಸಿ ಬಂದ ಬಳಿಕ ಅಮ್ಮ ಶೌಚಾಯಲಯಕ್ಕೆ ಹೋಗಿ ಬರುವಷ್ಟರಲ್ಲಿ ಮಗುವಿನ ಸಮೇತ ಇಬ್ಬರೂ ಆರೋಪಿಗಳು ಎಸ್ಕೇಪ್ ಆಗಿದ್ದರು. ಅಮ್ಮ-ಅಜ್ಜಿ ಕಣ್ಣೀರಾಕುತ್ತ ಇಡೀ ಊರನ್ನು ಹುಡುಕಿದರು ಮಗು ಸಿಕ್ಕಿರಲಿಲ್ಲ. ಕೊನೆಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ, ಸ್ವಾಮಿ 9 ತಿಂಗಳ ಮಗು ನೀವೇ ನಮ್ಮ ಪಾಲಿನ ದೇವರು, ದಯವಿಟ್ಟು ಮಗುವನ್ನು ಹುಡುಕಿಕೊಡಿ ಎಂದು ಪೊಲೀಸರ ಬಳಿ ಅಂಗಲಾಚಿದ್ದರು.

    ಖಾಕಿ ಪಡೆಯ ಮಾರುವೇಶ: ಒಂಬತ್ತು ತಿಂಗಳ ಮಗುವನ್ನು ಎತ್ತಿಕೊಂಡು ಹೋಗಿದ್ದಾರೆಂದು ತಿಳಿದ ಬಳಿಕ ಅಜ್ಜಂಪುರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬಸವರಾಜ್ ಮೂರ್ನಾಲ್ಕು ಸಿಬ್ಬಂದಿಗಳೊಂದಿಗೆ ಮಾರುವೇಶದಲ್ಲಿ ಅಜ್ಜಂಪುರ, ಬಾಣಾವರ, ಕಡೂರು, ಬೀರೂರು, ಚಿತ್ರದುರ್ಗ, ಅರಸೀಕೆರೆ ಅಂತ ಊರೂರು ಸುತ್ತಿದ್ದಾರೆ. ಕೊನೆಗೆ ಮಗು ಯಾದಪುರದಲ್ಲಿದೆ ಎಂಬ ಮಾಹಿತಿ ಆಧರಿಸಿ ಯಾದಪುರಕ್ಕೆ ಭೇಟಿ ಕೊಟ್ಟಾಗ ಮಗು ದೇವಸ್ಥಾನದ ಬಾಗಿಲಲ್ಲಿನಲ್ಲಿ ಸಿಕ್ಕಿದೆ. ಸದ್ಯ ಮಗುವನ್ನು ಅಮ್ಮನ ಮಡಿಲಿಗೆ ಸೇರಿಸಿ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

    ಅಜ್ಜಂಪುರದಿಂದ ಕದ್ದ ಮಗುವನ್ನು ಆನಂದ್ ಹಾಗೂ ಪ್ರದೀಪ್ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಯಾದಪುರದ ದಂಪತಿಗೆ ಕೊಟ್ಟಿದ್ದರು. ಆ ದಂಪತಿಗೆ ಮದುವೆಯಾಗಿ ಎಂಟತ್ತು ವರ್ಷವಾದರೂ ಮಕ್ಕಳಿರಲಿಲ್ಲ ಎಂಬ ಕಾರಣಕ್ಕೆ ಅವರಿಗೆ ಮಗುವನ್ನು ಕೊಟ್ಟಿದ್ದರು. ಆದರೆ ಯಾವಾಗ ಪೊಲೀಸರು ಪ್ರಕರಣದ ಬೆನ್ನು ಬಿದ್ದಿದ್ದಾರೆ ಎಂಬ ವಿಷಯ ತಿಳಿದ ಆನಂದ್-ಪ್ರದೀಪ್ ಮಗುವನ್ನು ಯಾದಾಪುರದ ದೇವಸ್ಥಾನದ ಬಾಗಿಲಲ್ಲಿ ಇಟ್ಟು ನಾಪತ್ತೆಯಾಗಿದ್ದಾರೆ.

    ಸದ್ಯ ಪ್ರಕಣ ದಾಖಲಿಸಿಕೊಂಡಿರುವ ಅಜ್ಜಂಪುರ ಪೊಲೀಸರು ತನಿಖೆಗೆ ಇಳಿದಿದ್ದು, ಇದು ಮಕ್ಕಳ ಕಳ್ಳರ ದಂಧೆಯಾ ಎಂಬ ದೃಷ್ಠಿಯಲ್ಲಿ ತನಿಖೆ ಆರಂಭಿಸಿದ್ದಾರೆ. ಜೊತೆಗೆ ತಲೆಮರೆಸಿಕೊಂಡಿರೋ ಪ್ರದೀಪ್ ಹಾಗೂ ಆನಂದ್‍ಗಾಗಿ ಬಲೆ ಬೀಸಿದ್ದಾರೆ.