Tag: ಅಪಹರಣ

  • ಪ್ರಿಯತಮೆಗೆ ಐ-ಫೋನ್ ಖರೀದಿಸಲು ಬಾಲಕನ ಅಪಹರಿಸಿ ಹತ್ಯೆಗೈದ ಅಪ್ರಾಪ್ತನ ಬಂಧನ!

    ಪ್ರಿಯತಮೆಗೆ ಐ-ಫೋನ್ ಖರೀದಿಸಲು ಬಾಲಕನ ಅಪಹರಿಸಿ ಹತ್ಯೆಗೈದ ಅಪ್ರಾಪ್ತನ ಬಂಧನ!

    ಲಕ್ನೋ: ತನ್ನ ಪ್ರಿಯತಮೆಗೆ ಐ-ಫೋನ್ ಕೊಡಬೇಕೆಂಬ ಉದ್ದೇಶದಿಂದ 14 ವರ್ಷದ ಬಾಲಕನನ್ನು ಅಪಹರಿಸಿ ಹತೈಗೈದ 17 ವರ್ಷದ ಯುವಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಹೌದು, ಪ್ರಿಯತಮೆಗೆ ಐ-ಫೋನ್ ಕೊಡಿಸಬೇಕೆಂಬ ಉದ್ದೇಶದಿಂದ 17 ವರ್ಷ ಯುವಕನೊಬ್ಬ 14 ವರ್ಷದ ಬಾಲಕನನ್ನು ಅಪಹರಿಸಿ, ಬಳಿಕ ಬರ್ಬರವಾಗಿ ಹತ್ಯೆ ಮಾಡಿ, ಸುಟ್ಟುಹಾಕಿದ್ದರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪುರ ಪೊಲೀಸರು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    14 ವರ್ಷದ ಅಭಿಷೇಕ್ ಮೃತ ಬಾಲಕ. ಮೃತ ಬಾಲಕನ ತಂದೆ ಸರ್ವೇಶ್ ಯಾದವ್ ಖಾಸಗಿ ಕಂಪನಿಯ ಬಸ್ ಚಾಲಕನಾಗಿದ್ದಾರೆ. ಸರ್ವೇಶ್ ಆರೋಪಿಯ ತಂದೆಯ ಮನೆಯಲ್ಲಿ ಬಾಡಿಗೆಗಿದ್ದರು. ಅಲ್ಲದೇ ಆರೋಪಿಯ ತಂದೆಯೂ ಸಹ ಸರ್ವೇಶ್ ಯಾದವ್ ಕಂಪನಿಯಲ್ಲೇ ಬಸ್ ನಿರ್ವಾಹಕರಾಗಿದ್ದರು.

    ಏನಿದು ಘಟನೆ?
    ಕಳೆದ ಮಂಗಳವಾರ ಸಂಜೆ 8 ನೇ ತರಗತಿ ಓದುತ್ತಿದ್ದ ಅಭಿಷೇಕ್ ಕೋಚಿಂಗ್ ಕ್ಲಾಸ್‍ಗೆ ಹೋಗಿದ್ದವನು ವಾಪಾಸ್ಸು ಬಂದಿರಲಿಲ್ಲ. ಅದೇ ದಿನ ಸಂಜೆ ಅಭಿಷೇಕ್ ತಾಯಿ ಹಾಗೂ ತಂದೆಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ನಿಮ್ಮ ಮಗನನ್ನು ಅಪಹರಿಸಿದ್ದು, ಬಿಡುಗಡೆ ಮಾಡಲು 20 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಇಟ್ಟಿದ್ದರು. ಕೂಡಲೇ ಎಚ್ಚೆತ್ತ ಪೋಷಕರು ಶಾಲೆ ಹಾಗೂ ಕೋಚಿಂಗ್ ಸೆಂಟರ್ ಬಳಿ ವಿಚಾರಿಸಿದಾಗ ಮಗ ನಾಪತ್ತೆಯಾಗಿರುವುದು ತಿಳಿದು ಬಂದಿದೆ.

    ಕೂಡಲೇ ಆರೋಪಿಗೆ ಕರೆ ಮಾಡಿದ್ದ ಪೋಷಕರು, ಅಷ್ಟು ದೊಡ್ಡ ಮೊತ್ತದ ಹಣವನ್ನು ಹೊಂದಿಸಲು ನಮ್ಮಿಂದ ಸಾಧ್ಯವಿಲ್ಲ. ನಮಗೆ ನಾಳೆ ಬೆಳಗ್ಗೆಯವರೆಗೂ ಸಮಯ ಕೊಡುವಂತೆ ಕೇಳಿಕೊಂಡಿದ್ದರು. ಇದರ ಜೊತೆ ಪೋಷಕರು ಮಣಿಪುರ ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದರು.

    ಪತ್ತೆಯಾಗಿದ್ದು ಹೇಗೆ?
    ಮಣಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಕರೆ ಬಂದಿದ್ದರ ಕುರಿತು ತನಿಖೆ ನಡೆಸಿದರು. ತನಿಖೆ ವೇಳೆ ಅಭಿಷೇಕ್ ವಾಸವಿದ್ದ ಮನೆಯ ಆಸುಪಾಸಿನಲ್ಲೇ ಕರೆ ಮಾಡಿರುವುದು ಪತ್ತೆಯಾಗಿತ್ತು. ಅಲ್ಲದೆ ಕರೆ ಮಾಡಿದ್ದ ಮೊಬೈಲ್ ನಂಬರ್ ಅನ್ನು ಪರೀಕ್ಷಿಸಿದಾಗ ಅದು ನಕಲಿ ದಾಖಲೆಗಳಿಂದ ಖರೀದಿಸಿರುವುದು ಬೆಳಕಿಗೆ ಬಂದಿತ್ತು.

    ಮೊಬೈಲ್ ನೆಟ್‍ವರ್ಕ್ ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಮೊಬೈಲ್‍ನಲ್ಲಿ ಮತ್ತೊಂದು ಸಿಮ್ ಸಂಖ್ಯೆ ದಾಖಲಾಗಿರುವುದು ಪತ್ತೆಯಾಗಿತ್ತು. ಅದನ್ನು ಪರೀಕ್ಷಿಸಿದಾಗ ಆ ಮೊಬೈಲ್ ಸಂಖ್ಯೆ ಆರೋಪಿಯ ಸಹೋದರಿಗೆ ಸೇರಿದ ನಂಬರ್ ಎನ್ನುವುದು ಬೆಳಕಿಗೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಮನೆ ದಾಳಿ ನಡೆಸಿ ಅಪಹರಣಕಾರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

    ಬಂಧಿತ ಅಪ್ರಾಪ್ತ ಬಾಲಕನನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ, ನನ್ನ ಪ್ರಿಯತಮೆಗಾಗಿ ಐ-ಫೋನ್ ಖರೀದಿಸಲು ಅಭಿಷೇಕ್‍ನನ್ನು ಮಂಗಳವಾರ ಅಪಹರಿಸಿದ್ದೆ. ಆದರೆ ಆತ ಜೋರಾಗಿ ಅಳಲು ಪ್ರಾರಂಭಿಸಲು ಶುರುಮಾಡಿದ. ಇದರಿಂದ ನಾನು ಆತನನ್ನು ಕೊಂದು ಸುಟ್ಟು ಹಾಕಿದೆ ಎಂದು ಪೊಲೀಸರ ಬಳಿ ಬಾಯಿ ಬಿಟ್ಟಿದ್ದಾನೆ.

    ಘಟನೆ ಸಂಬಂಧ ಅಭಿಷೇಕ್ ತಂದೆ ದೂರಿನ ಆಧಾರ ಮೇಲೆ ಆರೋಪಿ, ಆತನ ತಂದೆ ಹಾಗೂ ಸಹೋದರರನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಮಣಿಪುರ ಪೊಲೀಸರು ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 302 (ಕೊಲೆ), 364 ಎ (ಅಪಹರಣ ಹಾಗೂ ಹಲ್ಲೆ) 201 (ಸಾಕ್ಷ್ಯ ನಾಶ) ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಭಿಷೇಕ್ ತಂದೆ ಸರ್ವೇಶ್ ಯಾದವ್, ಕೇವಲ 17 ವರ್ಷದ ಬಾಲಕನೊಬ್ಬನೇ ಹತ್ಯೆ ಮಾಡಿ, ಆತನನ್ನು ಸುಟ್ಟು ಹಾಕಿ ನಂತರ ಗುಂಡಿ ತೆಗೆದು ಹೂಳಲು ಹೇಗೆ ಸಾಧ್ಯ? ಇದಕ್ಕೆ ಆತನ ಕುಟುಂಬದವರು ಸಹ ಬೆಂಬಲ ನೀಡಿದ್ದಾರೆ. ನನ್ನ ಮಗನ ಹತ್ಯೆ ಪೂರ್ವನಿಯೋಜಿತ ಕೊಲೆ ಎಂದು ತಮ್ಮ ಆಕ್ರೋಶ ತೋಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚುನಾವಣೆ ರಾಜಕೀಯ – ನೋಡನೋಡುತ್ತಿದ್ದಂತೆ ಹಾಲು ಒಕ್ಕೂಟದ ಮಹಿಳಾ ಕಾರ್ಯದರ್ಶಿ ಕಿಡ್ನಾಪ್!

    ಚುನಾವಣೆ ರಾಜಕೀಯ – ನೋಡನೋಡುತ್ತಿದ್ದಂತೆ ಹಾಲು ಒಕ್ಕೂಟದ ಮಹಿಳಾ ಕಾರ್ಯದರ್ಶಿ ಕಿಡ್ನಾಪ್!

    ತುಮಕೂರು: ಹಾಲು ಒಕ್ಕೂಟದ ಚುನಾವಣಾ ಕಣದ ಗಲಾಟೆಯಲ್ಲಿ ದುಷ್ಕರ್ಮಿಗಳು ಹಾಲು ಉತ್ಪಾದಕ ಸಂಘದ ಮಹಿಳಾ ಕಾರ್ಯದರ್ಶಿಯನ್ನೇ ಕಿಡ್ನಾಪ್ ಮಾಡಿರುವ ಘಟನೆ ಶಿರಾ ತಾಲೂಕಿನ ಯಲದಬಾಗಿಯಲ್ಲಿ ಘಟನೆ ನಡೆದಿದೆ.

    ಬೆಳಗ್ಗೆ 9 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದ್ದು, ಹಾಲು ಉತ್ಪಾದಕರ ಸಂಘದ ಚುನಾವಣೆ ವಿಚಾರವಾಗಿ ನಡೆದ ಗಲಾಟೆಯಿಂದಾಗಿ ಗ್ರಾಮದ ಹಾಲು ಉತ್ಪಾದಕ ಸಂಘದ ಕಾರ್ಯದರ್ಶಿ ಅನ್ನಪೂರ್ಣಮ್ಮ ಅವರನ್ನು ಪುಂಡರು ಎಳೆದೊಯ್ದಿದ್ದಾರೆ.

    ಇಂದೇ ತಿಂಗಳು 30 ರಂದು ಯಲದಬಾಗಿ ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ ಚುನಾವಣೆ ಘೋಷಣೆಯಾಗಿದೆ. ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಅನ್ನಪೂರ್ಣಮ್ಮ ಅವರು ಜೆಡಿಎಸ್ ಮುಖಂಡರಿಗೆ ಬೆಂಬಲ ನೀಡಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಬಹಿರಂಗವಾಗಿಯೇ ಬೆಂಬಲ ನೀಡುತ್ತಿರುವುದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿಗರು ಆಕ್ರೋಶಗೊಂಡಿದ್ದರು.

    ಹಾವಿನಾಳು ಹಾಗೂ ಯಲದಬಾಗಿ ಗ್ರಾಮದ ರಂಗನಾಥ್, ನವೀನ್, ಆನಂದ್, ಗುರುಪ್ರಸಾದ್ ಕಿಡ್ನಾಪ್ ಮಾಡಿದ್ದಾರೆ ಎನ್ನುವ ವಿಚಾರ ತಿಳಿದುಬಂದಿದೆ. ಕಿಡ್ನಾಪ್ ಆಗುತ್ತಿರುವ ದೃಶ್ಯವನ್ನು ಗ್ರಾಮಸ್ಥರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ಘಟನೆ ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜ್ ಕಿಡ್ನಾಪ್ ಕೇಸ್: ಎಲ್ಲ ಆರೋಪಿಗಳು ಖುಲಾಸೆ – ಕೋರ್ಟ್ ಹೇಳಿದ್ದು ಏನು?

    ರಾಜ್ ಕಿಡ್ನಾಪ್ ಕೇಸ್: ಎಲ್ಲ ಆರೋಪಿಗಳು ಖುಲಾಸೆ – ಕೋರ್ಟ್ ಹೇಳಿದ್ದು ಏನು?

    ಚೆನ್ನೈ: ವರನಟ ಡಾ.ರಾಜ್‍ಕುಮಾರ್ ಅವರ ಅಪಹರಣ ಪ್ರಕರಣ ಸಂಬಂಧ 18 ವರ್ಷಗಳ ಬಳಿಕ ತೀರ್ಪು ಪ್ರಕಟಗೊಂಡಿದ್ದು, 9 ಆರೋಪಿಗಳನ್ನು ಈರೋಡ್ ಜಿಲ್ಲೆಯ ಗೋಬಿಚೆಟ್ಟಿಪಾಳ್ಯಂ ಕೋರ್ಟ್ ಖುಲಾಸೆಗೊಳಿಸಿದೆ.

    ರಾಜ್‍ಕುಮಾರ್ ಅಪಹರಣ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಪೊಲೀಸ್ ಇಲಾಖೆ ಅಪಹರಣದ ಕುರಿತು ಸಾಕ್ಷ್ಯ ನೀಡುವಲ್ಲಿ ವಿಫಲ ಹಾಗೂ ರಾಜ್‍ಕುಮಾರ್ ಕುಟುಂಬಸ್ಥರು ಸಾಕ್ಷ್ಯ ಹೇಳದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಮಣಿ ವೀರಪ್ಪನ್ ಸಹಚರರನ್ನು ಖುಲಾಸೆಗೊಳಿಸಿದ್ದಾರೆ.

    ಅಪಹರಣವನ್ನು ಕಣ್ಣಾರೆ ಕಂಡಿದ್ದ ಪಾರ್ವತಮ್ಮ ಕೂಡಾ ಸಾಕ್ಷಿ ಹೇಳಲು ಹಿಂದೇಟು ಹಾಕಿದ್ದರು. ಜೊತೆಗೆ 42 ಜನ ಸಾಕ್ಷಿದಾರರು, 52 ದಾಖಲೆ ಹಾಗೂ 31 ಗನ್ ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ವಸ್ತುಗಳ ತನಿಖೆಯ ಬಳಿಕವೂ, ಸೂಕ್ತ ಸಾಕ್ಷಾಧಾರಗಳು ಸಿಕ್ಕಿರಲಿಲ್ಲ. ಹೀಗಾಗಿ ಇಂದು ಕೋರ್ಟ್ ಪ್ರಕರಣವನ್ನು ಖುಲಾಸೆಗೊಳಿಸಿದೆ.

    ಏನಿದು ಪ್ರಕರಣ?
    ಜುಲೈ 30, 2000ರಂದು ರಾಜ್‍ಕುಮಾರ್ ಹಾಗೂ ಪತ್ನಿ ಪಾರ್ವತಮ್ಮ ತಲವಾಡಿಯ ದೊಡ್ಡಗಾಜನೂರು ಗ್ರಾಮದ ಗೃಹ ಪ್ರವೇಶಕ್ಕೆ ಹೊರಟಿದ್ದರು. ಈ ವೇಳೆ ವೀರಪ್ಪನ್ ಹಾಗೂ ಆತನ ಸಹಚರರು ಕಾರನ್ನು ಅಡ್ಡಗಟ್ಟಿ ಪಾರ್ವತಮ್ಮ ಅವರ ಎದುರೇ ರಾಜ್‍ಕುಮಾರ್, ಅಳಿಯ ಎಸ್.ಎ.ಗೋವಿಂದರಾಜು, ಸಂಬಂಧಿ ನಾಗೇಶ್ ಹಾಗೂ ಸಹಾಯಕ ನಿರ್ದೇಶಕ ನಾಗಪ್ಪ ಅವರನ್ನು ಅಪಹರಿಸಿದ್ದರು. ಈ ವಿಷಯ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಭಾರೀ ಹಿಂಸಾಚಾರಕ್ಕೆ ಕಾರಣವಾಗಿತ್ತು.

    ಬಳಿಕ ಎಲ್ಲರನ್ನೂ ಕಾಡಿನಲ್ಲಿ ಇಟ್ಟುಕೊಂಡು ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು. ರಾಜ್ ಬಿಡಿಸಲು ಉಭಯ ರಾಜ್ಯಗಳು ಭಾರೀ ಶ್ರಮವಹಿಸಿದ್ದವು. ಅದೇ ವರ್ಷ ಸೆಪ್ಟೆಂಬರ್ 28ರಂದು ರಾಜ್‍ಕುಮಾರ್ ಅಳಿಯ ಗೋವಿಂದರಾಜು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದರು. 108 ದಿನಗಳ ಕಾಲ ಇರಿಸಿಕೊಂಡು, ನವೆಂಬರ್ 15ರಂದು ರಾಜ್‍ಕುಮಾರ್ ಅವರನ್ನು ಬಿಟ್ಟು ಕಳುಹಿಸಿದ್ದ.

    ಈ ಕುರಿತು ಆರೋಪಿಗಳ ಮೇಲೆ ತಲವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2004ರ ಅಕ್ಟೋಬರ್ 18ರಂದು ಆಪರೇಷನ್ ಕೋಕೂನ್ ಹೆಸರಲ್ಲಿ ನಡೆಸ ಪೊಲೀಸ್ ಎನ್‍ಕೌಂಟರ್ ನಲ್ಲಿ ವೀರಪ್ಪನ್ ಬಲಿಯಾಗಿದ್ದ. ವೀರಪ್ಪನ್ ಸಹಚರ ಸೇತುಕುಡಿ, ಗೋವಿಂದನ್, ರಂಗಸಾಮಿ ಸಾವನ್ನಪ್ಪಿದ್ದರು. ಉಳಿದ ಒಂಬತ್ತು ಜನರನ್ನು ಪೊಲೀಸರು ಬಂಧಿಸಿ, ತನಿಖೆ ಆರಂಭಿಸಿದ್ದರು. 2006ರಲ್ಲಿ ರಾಜ್ ನಿಧನರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಾಲೆಗೆ ನುಗ್ಗಿ ಬಾಲಕಿಯ ಅಪಹರಣಕ್ಕೆ ಯತ್ನ- ಆರೋಪಿಗಳನ್ನು ಕೊಂದ ಗ್ರಾಮಸ್ಥರು

    ಶಾಲೆಗೆ ನುಗ್ಗಿ ಬಾಲಕಿಯ ಅಪಹರಣಕ್ಕೆ ಯತ್ನ- ಆರೋಪಿಗಳನ್ನು ಕೊಂದ ಗ್ರಾಮಸ್ಥರು

    ಪಾಟ್ನಾ: ವಿದ್ಯಾರ್ಥಿನಿಯನ್ನು ಅಪಹರಿಸಲು ಬಂದಿದ್ದ ನಾಲ್ವರಲ್ಲಿ ಮೂವರನ್ನು ಹಿಡಿದು, ಗ್ರಾಮಸ್ಥರು ಮನಬಂದಂತೆ ಥಳಿಸಿ ಕೊಲೆ ಮಾಡಿದ ಘಟನೆ ಬಿಹಾರ ಬೇಗುಸಾರೈ ಜಿಲ್ಲೆಯಲ್ಲಿ ನಡೆದಿದೆ.

    ಬೇಗುಸಾರೈ ಜಿಲ್ಲೆಯ ಮುಖೇಶ್ ಮಾಹ್ತೊ, ಬೌನಾ ಸಿಂಗ್ ಹಾಗೂ ಸಮಸ್ತಿಪುರ್ ಸಮೀಪ ರೋಸೆರಾ ಗ್ರಾಮದ ಹೀರಾ ಸಿಂಗ್ ಮೃತ ದುರ್ದೈವಿಗಳು.

    ನಡೆದದ್ದು ಏನು?
    ಹೊಸದಾಗಿ ಪ್ರಾರಂಭವಾಗಿದ್ದ ನಾರಾಯಣಿಪಾರ್ ಸರ್ಕಾರಿ ಪ್ರಾಥಮಿಕ ಶಾಲೆಗೆ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ನಾಲ್ವರು ನುಗ್ಗಿದ್ದು, ಬಾಲಕಿಯೊಬ್ಬಳ ಬಗ್ಗೆ ಮಾಹಿತಿ ಕೇಳಿದ್ದಾರೆ. ಅವರಿಗೆ ಹೆದರಿ ಯಾರು ಮಾಹಿತಿ ನೀಡದಿದ್ದಾಗ ಮಾರಕಾಸ್ತ್ರ ಹಿಡಿದು ಬೆದರಿಕೆ ಹಾಕಿದ್ದಾರೆ. ಅವರ ಕೈಗೆ ಬಾಲಕಿ ಸಿಗುತ್ತಿದ್ದಂತೆ ಆಕೆಯನ್ನು ಅಪಹರಿಸಲು ಮುಂದಾಗಿದ್ದರು. ಇದರಿಂದಾಗಿ ಗಾಬರಿಗೊಂಡು ಮಕ್ಕಳು ಕಿರುಚಲು ಪ್ರಾರಂಭಿಸಿದ್ದಾರೆ.

    ಹುಲ್ಲು ಕೊಯ್ದುಕೊಂಡು ಮನೆಗೆ ಮರಳುತ್ತಿದ್ದ ಮಹಿಳೆಯೊಬ್ಬಳು ಶಾಲೆಯಲ್ಲಿ ಮಕ್ಕಳು ಅಳುವ ಧ್ವನಿ ಕೇಳಿಸಿಕೊಂಡಿದ್ದು, ತಕ್ಷಣವೇ ಗ್ರಾಮಸ್ಥರನ್ನು ಕೂಗಿ ಕರೆದಿದ್ದಾರೆ. ಗ್ರಾಮಸ್ಥರು ಶಾಲೆಗೆ ಬರುತ್ತಿದ್ದಂತೆ ಪರಾರಿಯಾಗಲು ಆರೋಪಿಗಳು ಯತ್ನಿಸಿದ್ದರು. ಆದರೆ ನಾಲ್ವರಲ್ಲಿ ಒಬ್ಬ ಮಾತ್ರ ತಪ್ಪಿಸಿಕೊಂಡು ಹೋಗಿದ್ದು, ಉಳಿದ ಮೂವರು ಗ್ರಾಮಸ್ಥರ ಕೈಗೆ ಸಿಕ್ಕಿದ್ದರು.

    20ಕ್ಕೂ ಹೆಚ್ಚು ಜನರು ಕೋಲು ಹಿಡಿದು, ಬಂಧಿಸಿದ್ದ ಮೂವರ ಮೇಲೆ ಹಲ್ಲೆ ಮಾಡಿದ್ದಾರೆ. ಪರಿಣಾಮ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತಿಬ್ಬರು ಆಸ್ಪತ್ರೆಗೆ ಸಾಗಿಸು ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಪ್ರಾಪ್ತ ಸೋದರಿಯರ ಕಿಡ್ನಾಪ್-ಅತ್ಯಾಚಾರಗೈದು ಊರಿಗೆ ಬಿಟ್ಟು ಹೋದ್ರು

    ಅಪ್ರಾಪ್ತ ಸೋದರಿಯರ ಕಿಡ್ನಾಪ್-ಅತ್ಯಾಚಾರಗೈದು ಊರಿಗೆ ಬಿಟ್ಟು ಹೋದ್ರು

    ಭೋಪಾಲ್: ಅಪ್ರಾಪ್ತ ಇಬ್ಬರು ಸಹೋದರಿಯರನ್ನು ಅಪಹರಿಸಿ, ಅತ್ಯಾಚಾರ ಎಸೆಗಿದ ಬಳಿಕ ಗ್ರಾಮಕ್ಕೆ ಬಿಟ್ಟು ಹೋದ ಘಟನೆ ಮಧ್ಯಪ್ರದೇಶ ರಾಜ್ಯದ ಅಷ್ಟತೆಹಸಿಲ್ ಎಂಬಲ್ಲಿ ನಡೆದಿದೆ.

    9 ಮತ್ತು 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಹೋದರಿಯರು ಅತ್ಯಾಚಾರಕ್ಕೊಳಗಾದ ಬಾಲಕಿಯರು. ಬಾಲಕಿ ಇಬ್ಬರನ್ನು ಅಪಹರಿಸಿದ ಇಂದೋರ್-ಭೋಪಾಲ್ ರಸ್ತೆಯ ಹೋಟೆಲ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿದ್ದಾರೆ. ಈಗಾಗಲೇ ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಅತ್ಯಾಚಾರಗೈದ ಇಬ್ಬರು ಯುವಕರು ಬಾಲಕಿಯರ ಗ್ರಾಮದ ನಿವಾಸಿಗಳಾಗಿದ್ದು, ಇನ್ನಿಬ್ಬರ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಲೋಕೇಂದ್ರ (19) ಮತ್ತು ಕ್ರಿಪಲ್ (21) ಬಂಧಿತ ಆರೋಪಿಗಳಾಗಿದ್ದು, ಸಂಜಯ್ ಹಾಗು ರಾಜ್ ಎಂಬಾತರು ಘಟನೆ ಬಳಿಕ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶುಕ್ರವಾರ ಬಾಲಕಿಯರಿಬ್ಬರನ್ನು ಅಪಹರಿಸಿದ ಯುವಕರು ಹೋಟೆಲ್ ಗೆ ಕರೆದುಕೊಂಡು ಹೋಗಿ ಇಬ್ಬರನ್ನ ಬೇರೆ ಬೇರೆ ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಹೋಟೆಲ್‍ನಲ್ಲಿ ಕಿರುಚಿದ್ರೆ ನಿಮ್ಮನ್ನು ಕೊಲ್ಲುತ್ತೇವೆ ಎಂದು ಕಾಮುಕರು ಜೀವ ಬೆದರಿಕೆ ಹಾಕಿ ಅತ್ಯಾಚಾರ ಎಸೆಗಿದ್ದಾರೆ. ಸಂಜೆ ಹೋಟೆಲಿಗೆ ಬಂದ ಮತ್ತಿಬ್ಬರು ಸಹ ಬಾಲಕಿಯರನ್ನು ಅತ್ಯಾಚಾರಗೈದಿದ್ದಾರೆ.

    ಆರೋಪಿಗಳು ಶನಿವಾರ ಇಬ್ಬರು ಸಹೋದರಿಯರನ್ನು ಅವರ ಗ್ರಾಮಕ್ಕೆ ಬಿಟ್ಟು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಮನೆ ತಲುಪಿದ ಸಹೋದರಿಯರ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಪೋಷಕರಿಗೆ ತಿಳಿಸಿದ್ದಾರೆ. ಕೂಡಲೇ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಇಬ್ಬರ ಪತ್ತೆಗಾಗಿ ಬಲೆ ಬೀಸಿದ್ದಾರೆ. ಪೊಲೀಸರು ಹೋಟೆಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಹಶೀಲ್ದಾರ್ ಕಿಡ್ನಾಪ್ ಪ್ರಕರಣ: ರೈತರ ಸಂಪೂರ್ಣ ಸಾಲಮನ್ನಾಕ್ಕಾಗಿ ಅಪಹರಿಸಿದ್ದ ಅಪಹರಣಕಾರರು!

    ತಹಶೀಲ್ದಾರ್ ಕಿಡ್ನಾಪ್ ಪ್ರಕರಣ: ರೈತರ ಸಂಪೂರ್ಣ ಸಾಲಮನ್ನಾಕ್ಕಾಗಿ ಅಪಹರಿಸಿದ್ದ ಅಪಹರಣಕಾರರು!

    ಮೈಸೂರು: ಮಂಡ್ಯ ತಹಶೀಲ್ದಾರ್ ಮಹೇಶ್ ಚಂದ್ರರವರನ್ನು ಅಪಹರಣ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕೆ.ಆರ್.ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

    ಆಗಸ್ಟ್ 3 ರಂದು ನಿಗೂಢವಾಗಿ ನಾಪತ್ತೆಯಾಗಿ ಬಳಿಕ ಪತ್ತೆಯಾಗಿದ್ದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ತಹಶೀಲ್ದಾರ ಮಹೇಶ್ ಚಂದ್ರರವರ ಅಪಹರಣವನ್ನು ಭೇದಿಸಿರುವ ಕೆ.ಆರ್.ನಗರ ಪೊಲೀಸರು ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಕೆ.ಆರ್.ಪೇಟೆಯ ರೈಲ್ವೇ ಇಲಾಖೆಯ ಸ್ಟೋರ್ ಕೀಪರ್ ಯೋಗೇಂದ್ರ.ಕೆ.ಎನ್ (31), ಖಾಸಗಿ ಹೋಟೆಲ್ ಕ್ಯಾಪ್ಟನ್ ಸೋಮಶೇಖರ್.ಎಸ್.ಎನ್ (31), ಖಾಸಗಿ ಕಾರು ಚಾಲಕ ಚಂದು.ಎಸ್.ಎಸ್ (24) ಹಾಗೂ ಮೈಸೂರಿನ ಬೃಂದಾವನ ಬಡಾವಣೆಯ ದೀಪು.ಎಸ್.ಎನ್ (28) ಬಂಧಿತ ಆರೋಪಿಗಳಾಗಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಕೆ.ಆರ್.ಪೇಟೆಯ ತಹಶೀಲ್ದಾರ್ ಅಪಹರಣ?

    ಇತ್ತೀಚೆಗಷ್ಟೇ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಗೆ ವರ್ಗಾವಣೆಯಾಗಿದ್ದ ಮಹೇಶ್ ಚಂದ್ರರವರನ್ನು ಆರೋಪಿಗಳು, ಕೆ.ಆರ್.ನಗರದ ಹೊಸ ಅಗ್ರಹಾರದ ಬಳಿ ಅಪಹರಿಸಿದ್ದರು. ತಹಶೀಲ್ದಾರ್ ರವರನ್ನು ಒತ್ತೆಯಾಳಾಗಿಟ್ಟುಕೊಂಡು, ರೈತರ ಸಂಪೂರ್ಣ ಸಾಲಮನ್ನಾ ಮಾಡುವಂತೆ ಸರ್ಕಾರಕ್ಕೆ ಒತ್ತಡ ಹೇರುವ ಉದ್ದೇಶವನ್ನು ಹೊಂದಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ಕೆ.ಆರ್.ಪೇಟೆಯ ತಹಶೀಲ್ದಾರ್ ಸಂಜೆ ವೇಳೆ ಪತ್ತೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮದುವೆಗೆ ಒಪ್ಪದ್ದಕ್ಕೆ ಫಿಲ್ಮಿ ಸ್ಟೈಲ್‍ನಲ್ಲಿ ಯುವಕನಿಂದ ಯುವತಿಯ ಅಪಹರಣಕ್ಕೆ ಯತ್ನ!

    ಮದುವೆಗೆ ಒಪ್ಪದ್ದಕ್ಕೆ ಫಿಲ್ಮಿ ಸ್ಟೈಲ್‍ನಲ್ಲಿ ಯುವಕನಿಂದ ಯುವತಿಯ ಅಪಹರಣಕ್ಕೆ ಯತ್ನ!

    ಮಂಡ್ಯ: ಪ್ರೀತಿಸಲಿಲ್ಲ ಹಾಗೂ ಮದುವೆಯಾಗಲು ಒಪ್ಪುತ್ತಿಲ್ಲ ಅಂತಾ ಸಿನಿಮೀಯ ರೀತಿ ಯುವಕನೊಬ್ಬ ತನ್ನ ಸಂಬಂಧಿ ಯುವತಿಯನ್ನು ಅಪಹರಿಸಲು ಯತ್ನಿಸಿ, ವಿಫಲನಾದ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

    ಸುನೀಲ್ (26) ಅಪಹರಣಕ್ಕೆ ಯತ್ನಿಸಿದ್ದ ಯುವಕ. ಯುವತಿಯು ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಆಕೆಗೆ ಕಳೆದ ಆರು ತಿಂಗಳಿನಿಂದ ಪ್ರೀತಿಸುವಂತೆ ಹಾಗೂ ಮದುವೆ ಆಗುವಂತೆ ಸುನೀಲ್ ಕಿರುಕುಳ ನೀಡುತ್ತಿದ್ದ. ಈ ಕುರಿತು ಯುವತಿ ಕುಟುಂಬದವರಿಗೆ ತಿಳಿಸಿದ್ದಳು. ಅವರು ಕೂಡಾ ಆಕೆಯ ತಂಟೆಗೆ ಬರದಂತೆ ಎಚ್ಚರಿಗೆ ನೀಡಿದ್ದರು.

    ಕುಟುಂಬಸ್ಥರ ಎಚ್ಚರಿಕೆಗೂ ಜಗ್ಗದ ಸುನೀಲ್ ಇಂದು ಕೆಲವು ಸ್ನೇಹಿತರೊಂದಿಗೆ ಕಾರಿನಲ್ಲಿ ಬಂದು ಯುವತಿ ತಾಯಿ ಮತ್ತು ಸಹೋದರನ ಮೇಲೆ ಹಲ್ಲೆ ನಡೆಸಿ ಅಪಹರಣಕ್ಕೆ ಯತ್ನಿಸಿದ್ದನು. ಸ್ಥಳದಲ್ಲಿಯೇ ಇದ್ದ ಕೆಲ ಗ್ರಾಮಸ್ಥರು ಯುವತಿಯನ್ನು ರಕ್ಷಿಸುತ್ತಿದ್ದಂತೆ ಯುವಕ ಕಾರು ಹತ್ತಿ ಪರಾರಿಯಾಗಿದ್ದನು.

    ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಯುವತಿ ಕುಟುಂಬಸ್ಥರು, ಯುವಕನಿಂದ ಪುನಃ ತೊಂದರೆಯಾಗದಂತೆ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಆರೋಪಿ ಸುನೀಲ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಾಲಕಿಯ ಅಪಹರಣಕ್ಕೆ ಯತ್ನ!

    ಬಾಲಕಿಯ ಅಪಹರಣಕ್ಕೆ ಯತ್ನ!

    ಬಾಗಲಕೋಟೆ: ಬಿಸ್ಕೇಟ್‍ನಲ್ಲಿ ಮದ್ದು ಬರಿಸಿ ಬಾಲಕಿ ಅಪಹರಣಕ್ಕೆ ಯತ್ನಿಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

    ಗದಗದಲ್ಲಿ ಮೂವರಿಂದ ಬಾಲಕಿ ಅಪಹರಣ ಮಾಡಲಾಗಿದೆ. ಚಾಕುವಿನಿಂದ ಹಲ್ಲೆ ಮಾಡೋದಾಗಿ ಹೇಳಿ ಬಾಲಕಿ ಬೆದರಿಸಿ, ಬಾಯಿಗೆ ಬಟ್ಟೆ ಕಟ್ಟಿ ರೈಲ್ವೆಯಲ್ಲಿ ಕರೆದುಕೊಂಡು ಬಂದಿದ್ದಾರೆ. ಗದಗದಿಂದ ಸೋಲಾಪೂರ ಕಡೆಗೆ ಹೋಗುವ ಮಾರ್ಗ ಮಧ್ಯೆ ಅದೃಷ್ಟವಶಾತ್ ಆ ಬಾಲಕಿ ಬಾಗಲಕೋಟೆ ರೈಲ್ವೆ ಪೊಲೀಸರ ಬಳಿ ಬಂದು ನಡೆದ ಘಟನೆ ಎಲ್ಲವನ್ನು ತಿಳಿಸಿದ್ದಾಳೆ.

    ಗದಗ ಮೂಲದ 11 ವಷ9ದ ಬಾಲಕಿ ಶಿವಪ್ಪ ಮತ್ತು ಶಾರದಾ ಎಂಬ ದಂಪತಿಗಳ ಪುತ್ರಿಯಾಗಿದ್ದು, ತನ್ನ ಅಜ್ಜಿಯೊಂದಿಗೆ ಗದಗನಲ್ಲಿ ವಾಸವಾಗಿದ್ದಳು. ರಾತ್ರಿ 11:30ರ ವೇಳೆಗೆ ಮನೆಯ ಬಾಗಿಲು ತೆಗೆದು ತನ್ನ ಬಾಯಿಗೆ ಬಟ್ಟೆ ಕಟ್ಟಿ ಅಪರಿಚಿತರು ಕರೆದುಕೊಂಡು ಬಂದಿದ್ದಾರೆ. ನಂತರ ಬಾಗಲಕೋಟೆ ಬರುತ್ತಿದ್ದಂತೆ ನನಗೆ ಮದ್ದು ಬೆರಸಿರುವ ಬಿಸ್ಕೇಟ್ ನೀಡಿದರು. ಕೊನೆಗೆ ನಿಲ್ದಾಣ ಬರುತ್ತಿದ್ದಂತೆ ನಾನು ಎಲ್ಲರಿಂದಲೂ ತಪ್ಪಿಸಿಕೊಂಡು ಬಂದಿದ್ದೇನೆ ಎಂದು ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

    ಬಾಲಕಿ ಕ್ಷಣ ಕ್ಷಣಕ್ಕೂ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾಳೆ. ಬಾಲಕಿಯೇ ಮನೆಯಿಂದ ಹೊರ ಬಂದಳಾ? ಆಕೆಯನ್ನು ಅಪಹರಿಸಿದವರು ಯಾರು? ಎಂಬ ಹಲವು ಪ್ರಶ್ನೆಗಳು ಪೊಲೀಸರನ್ನು ಕಾಡುತ್ತಿವೆ. ಸದ್ಯ ಪೊಲೀಸರ ರಕ್ಷಣೆಯಲ್ಲಿದ್ದ ಬಾಲಕಿಯನ್ನು ಆಕೆಯ ಪೋಷಕರ ವಶಕ್ಕೆ ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕಿಯ ಗೊಂದಲಮಯ ಹೇಳಿಕೆಗಳನ್ನಾಧರಿಸಿ ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ದಿನಕ್ಕೆ 20 ಜನರ ಜೊತೆ ಸೆಕ್ಸ್ ಮಾಡಬೇಕಾಯ್ತು – ಮಹಿಳೆಯ ಕಿಡ್ನ್ಯಾಪ್ ಕತೆ

    ದಿನಕ್ಕೆ 20 ಜನರ ಜೊತೆ ಸೆಕ್ಸ್ ಮಾಡಬೇಕಾಯ್ತು – ಮಹಿಳೆಯ ಕಿಡ್ನ್ಯಾಪ್ ಕತೆ

    ನವದೆಹಲಿ: ಒಂದು ದಿನಕ್ಕೆ ನಾನು 20 ಮಂದಿಯ ಜೊತೆ ಮಲಗಬೇಕಾಯಿತು. ಊಟ ಕೊಡದೆ ಚಿತ್ರಹಿಂಸೆ ಕೊಡುತ್ತಿದ್ದರು ಎಂದು ವೇಶ್ಯಾವಾಟಿಕೆಯಿಂದ ಹೊರ ಬಂದ ಮಹಿಳೆಯೊಬ್ಬರು ತಮ್ಮ ನೋವಿನ ಕತೆಯನ್ನು ಹೇಳಿಕೊಂಡಿದ್ದಾರೆ.

    ರೊಮೇನಿಯಾದ ಮಹಿಳೆಯನ್ನು ಲಂಡನ್ ಬೀದಿಯಲ್ಲಿ ಅಪಹರಿಸಿ ವೇಶ್ಯಾವಾಟಿಕೆಗೆ ಮಾರಾಟ ಮಾಡಲಾಗಿತ್ತು. ಈಕೆಯನ್ನು ಬಲವಂತವಾಗಿ ಸಾವಿರ ಜನರ ಜೊತೆಗೆ ಸೆಕ್ಸ್ ಮಾಡುವಂತೆ ಹಿಂಸೆ ನೀಡಿದ್ದರಂತೆ. ತಾನು ಅನುಭವಿಸಿದ ಹಿಂಸೆಯ ಕತೆಯನ್ನು ಹಂತ ಹಂತವಾಗಿ ನೊಂದ ಮಹಿಳೆ ಸ್ಥಳೀಯ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.

    2011 ಮಾರ್ಚ್ ರಲ್ಲಿ ನಾನು ನಮ್ಮ ಮನೆಯ ಮುಂಭಾಗದಲ್ಲಿ ಸಂಗೀತ ಕೇಳುತ್ತಾ ನಿಂತಿದೆ. ಈ ವೇಳೆ ಹಿಂದೆಯಿಂದ ವ್ಯಕ್ತಿಯೊಬ್ಬ ಬಂದು ಕಿಡ್ನ್ಯಾಪ್ ಮಾಡಿ ಕಾರಿನಲ್ಲಿ ಕರೆದುಕೊಂಡು ಹೋದನು. ಅಚ್ಚರಿ ಎಂದರೆ ಆತ ನನ್ನ ಕುಟುಂಬಸ್ಥರ ಎಲ್ಲ ವಿವರಗಳನ್ನು ತಿಳಿದುಕೊಂಡಿದ್ದನು. ಬಳಿಕ ಇಬ್ಬರು ಯುವಕರು ಮತ್ತು ಮಹಿಳೆ ಒಳಗೊಂಡ ಗ್ಯಾಂಗ್ ಬಲವಂತವಾಗಿ ಐರ್ಲೆಂಡ್ ಏರ್ವೇಸ್ ವಿಮಾನದಲ್ಲಿ ನನ್ನನ್ನು ಹತ್ತಿಸಿದ್ದರು. ನನ್ನ ಪಾಸ್ ಪೋರ್ಟ್ ಕಸಿದುಕೊಂಡಿದ್ದರು. ಆಗ ನನಗೆ ಅವರು ವೇಶ್ಯಾವಾಟಿಕೆಗೆ ತಳ್ಳುತ್ತಾರೆ ಅಥವಾ ಅಂಗಗಳನ್ನು ಮಾರಾಟ ಮಾಡುತ್ತಾರೆ ಎಂದು ಅರಿತುಕೊಂಡೆ ಅಂತ ಮಹಿಳೆ ಹೇಳಿದ್ದಾರೆ.

    ಫೋಟೋಶೂಟ್:
    ಒಬ್ಬ ವ್ಯಕ್ತಿಯು ನನ್ನನ್ನು ಅಪಹರಿಸಿದ್ದನು. ಆತ ನನ್ನನ್ನ ಮಾರಾಟ ಮಾಡುತ್ತಾನೆ ಎಂದು ತಿಳಿಯಿತು. ಮೊದಲು 9 ತಿಂಗಳು ಅಪಾರ್ಟ್ ಮೆಂಟ್ ನಲ್ಲಿ ಇಟ್ಟು ಹಿಂಸೆ ಕೊಟ್ಟಿದ್ದರು. ಬಳಿಕ ಕೆಂಪು ಬಟ್ಟೆ ಧರಿಸಿ, ಗೋಡೆ ಮೇಲೆ ನಿಲ್ಲಿಸಿ ತಮಗೆ ಬೇಕಾದಂತೆ ಫೋಟೋ ತೆಗೆದುಕೊಂಡರು. ಬಳಿಕ ಅದನ್ನು ಜಾಹೀರಾತಿನಂತೆ ಆನ್‍ಲೈನ್ ನಲ್ಲಿ ಅಪ್ಲೋಡ್ ಕೂಡ ಮಾಡಿದ್ದರು. ಸಾವಿರಾರು ಜನರು ಆ ಜಾಹೀರಾತಿಗೆ ಪ್ರತಿಕ್ರಿಯೆ ನೀಡಿದರು. ಜೊತೆಗೆ ಸೆಕ್ಸ್ ಮಾಡಲು ಹಣವನ್ನು ನೀಡಿದರು ಎಂದು ಹೇಳಿದ್ದಾರೆ.

    ಕೆಲವು ಸಮಯದಲ್ಲಿಯೇ ನನ್ನದೊಂದಿಗೆ 20 ಜನರು ಸೆಕ್ಸ್ ಮಾಡಿದ್ದು, ಊಟವನ್ನೂ ಸರಿಯಾಗಿ ಕೊಡದೆ, ನಿದ್ದೆ ಮಾಡಲು ಬಿಡದೆ ರಾತ್ರಿ-ಹಗಲು ಚಿತ್ರಹಿಂಸೆ ನೀಡುತ್ತಿದ್ದರು. ಬಳಿಕ ಪೊಲೀಸರು ರೇಡ್ ಮಾಡಿದಾಗ ಅಪಹರಣಕಾರರು ಪರಾರಿಯಾಗಿದ್ದು, ಮಹಿಳೆಯನ್ನು ಪೊಲೀಸರು ಬಂಧಿಸಿ ರಕ್ಷಿಸಿದ್ದಾರೆ.

    ನಾನು ಪೊಲೀಸರಿಗೆ ಸತ್ಯವನ್ನು ಹೇಳಲು ಪ್ರಯತ್ನಿಸಿದೆ. ಆದರೆ ಇತರರ ಜೊತೆ ನ್ಯಾಯಾಲಯಕ್ಕೆ ಕರೆದುಕೊಂಡು ಹೋದರು. ಅಲ್ಲಿ ಎಲ್ಲರಿಗು ಶಿಕ್ಷೆ ವಿಧಿಸಲಾಯಿತು. ಬಳಿಕ ನಾನು ಪೊಲೀಸರನ್ನು ಸಂಪರ್ಕಿಸಿ ತನ್ನ ಅಪಹರಿಸಿದವರ ಬಗ್ಗೆ ಮಾಹಿತಿ ನೀಡಿದೆ. ನಂತರ ಪೊಲೀಸರು ಎರಡು ವರ್ಷಗಳ ತನಿಖೆಯಲ್ಲಿ ಇಬ್ಬರು ಆರೋಪಿಗಳನ್ನು ಸೆರೆಹಿಡಿದಿದ್ದರು. ಆದರೆ ಅವರಿಗೆ ಇದುವರೆಗೂ ಕಠಿಣ ಶಿಕ್ಷೆಯನ್ನು ನೀಡಲಾಗಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ನಾಪತ್ತೆಯಾಗಿದ್ದ ಕೆ.ಆರ್.ಪೇಟೆಯ ತಹಶೀಲ್ದಾರ್ ಸಂಜೆ ವೇಳೆ ಪತ್ತೆ!

    ನಾಪತ್ತೆಯಾಗಿದ್ದ ಕೆ.ಆರ್.ಪೇಟೆಯ ತಹಶೀಲ್ದಾರ್ ಸಂಜೆ ವೇಳೆ ಪತ್ತೆ!

    ಮಂಡ್ಯ: ಇಂದು ಬೆಳಗ್ಗೆ ನಿಗೂಢವಾಗಿ ನಾಪತ್ತೆಯಾಗಿ ಅಪಹರಣಕ್ಕೊಳಗಾಗಿದ್ದ ತಹಶೀಲ್ದಾರ್ ರವರು ಕೆ.ಆರ್.ಪೇಟೆಯ ತೆಂಡೇಕೆರೆ ಗ್ರಾಮದ ಬಳಿ ಪತ್ತೆಯಾಗಿದ್ದಾರೆ.

    ತಹಶೀಲ್ದಾರ್ ಮಹೇಶ್ ಚಂದ್ರರವರು ಪತ್ತೆಯಾಗಿರುವ ಕುರಿತು ಖುದ್ದು ಮೈಸೂರು ಜಿಲ್ಲಾ ವರಿಷ್ಠಾಧಿಕಾರಿಗಳಾದ ಅಮಿತ್ ಸಿಂಗ್‍ ರವರು ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಮಹೇಶ್ ಚಂದ್ರರವರು ಸದ್ಯ ಕೆ.ಆರ್.ಪೇಟೆಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

    ಖುದ್ದು ತಹಶೀಲ್ದಾರರಾದ ಮಹೇಶ್ ಚಂದ್ರರವರು ಕೆ.ಆರ್.ಪೇಟೆ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಅಲ್ಲದೇ ಸರ್ಕಲ್ ಇನ್ಸ್ ಪೆಕ್ಟರ್ ಹೆಚ್.ಬಿ. ವೆಂಕಟೇಶಯ್ಯ ಅವರಿಂದ ತಹಶೀಲ್ದಾರ್ ಮಹೇಶ್ ಚಂದ್ರರ ವಿಚಾರಣೆ ನಡೆಯುತ್ತಿದ್ದು, ವಿಚಾರಣೆ ವೇಳೆ ಇಂದು ಬೆಳಗ್ಗೆ ಎರಡು ಮೋಟಾರ್ ಬೈಕುಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ನನ್ನನ್ನು ಅಪಹರಣ ಮಾಡಿ, ತೆಂಡೇಕೆರೆ ಗ್ರಾಮದ ಬಳಿ ಬಿಟ್ಟು ಹೋಗಿದ್ದಾರೆ ಎಂದು ಮಹೇಶ್ ಚಂದ್ರರವರು ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಕೆ.ಆರ್.ಪೇಟೆಯ ತಹಶೀಲ್ದಾರ್ ಅಪಹರಣ

    ತಹಶೀಲ್ದಾರ್ ಮಹೇಶ್ ಚಂದ್ರರವರ ಯೋಗಕ್ಷೇಮವನ್ನು ವಿಚಾರಿಸಲು ಶಾಸಕ ಡಾ.ನಾರಾಯಣಗೌಡರವರು ಠಾಣೆಗೆ ಆಗಮಿಸಿದ್ದಾರೆ. ಅಲ್ಲದೇ ನಾಪತ್ತೆಯಾಗಿದ್ದ ತಹಶೀಲ್ದಾರ್ ನೋಡಲು ಗ್ರಾಮಾಂತರ ಪೊಲೀಸ್  ಠಾಣೆಯ ಮುಂದೆ ನೂರಾರು ಸಾರ್ವಜನಿಕರು ಜಮಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews