Tag: ಅಪರ ಜಿಲ್ಲಾಧಿಕಾರಿ

  • ಹೆರಿಗೆ ವೇಳೆ ಸಾವನ್ನಪ್ಪಿದ ಪತ್ನಿಯನ್ನು ನೆನೆದು ವೇದಿಕೆಯಲ್ಲೇ ಅಪರ ಜಿಲ್ಲಾಧಿಕಾರಿ ಕಣ್ಣೀರು

    ಹೆರಿಗೆ ವೇಳೆ ಸಾವನ್ನಪ್ಪಿದ ಪತ್ನಿಯನ್ನು ನೆನೆದು ವೇದಿಕೆಯಲ್ಲೇ ಅಪರ ಜಿಲ್ಲಾಧಿಕಾರಿ ಕಣ್ಣೀರು

    ಯಾದಗಿರಿ: ಹೆರಿಗೆ ಸಮಯದಲ್ಲಿ ಸಾವನ್ನಪ್ಪಿದ ತನ್ನ ಪತ್ನಿಯನ್ನು ನೆನಪಿಸಿಕೊಂಡು ಯಾದಗಿರಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ.

    ಯಾದಗಿರಿಯಿಂದ ಕಲಬುರಗಿ ಮಹಾನಗರ ಪಾಲಿಕೆ ಉಪ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಭವನದಲ್ಲಿ ಪ್ರಕಾಶ್ ರಜಪೂತ ಅವರಿಗೆ ಬಿಳ್ಕೋಡಿಗೆ ಸಮಾರಂಭ ಏರ್ಪಡಿಸಲಾಗಿತ್ತು. ವಿವಿಧ ಇಲಾಖೆಯ ಸಿಬ್ಬಂದಿ ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದ ಅವರು, ಕಳೆದ ಮೂರು ವರ್ಷದಿಂದ ಯಾದಗಿರಿ ಅಪರ ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಇದೇ ಅವಧಿಯಲ್ಲಿ ತಮ್ಮ ನೆಚ್ಚಿನ ಮಡದಿಯನ್ನು ಕಳೆದುಕೊಂಡಿದ್ದರು. ಹೀಗಿದ್ದರೂ ಸಹ ಯಾವುದೇ ರಜೆ ಪಡೆಯದೆ, ಕೊರೊನಾ ಮೊದಲ ಅಲೆ ಮತ್ತು ಕೃಷ್ಣ ಮತ್ತು ಭೀಮಾ ನದಿ ಪ್ರವಾಹ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ್ದರು. ತಮ್ಮ ಭಾಷಣದಲ್ಲಿ ಇದನ್ನು ನೆನಪು ಮಾಡಿಕೊಂಡ ಅವರು ತಮ್ಮ ಮಡದಿ ತ್ಯಾಗ ನೆನೆದು ಕಣ್ಣೀರು ಹಾಕಿದರು.

    ಯಾದಗಿರಿ ಸಹಾಯಕ ಆಯುಕ್ತರಾಗಿದ್ದ ಶಂಕರಗೌಡ ಸೋಮನಾಳ ಯಾದಗಿರಿ ಅಪರ ಜಿಲ್ಲಾಧಿಕಾರಿ ಭಡ್ತಿ ಹೊಂದಿದ್ದು, ಅವರನ್ನು ಮತ್ತು ಅವರ ಜಾಗಕ್ಕೆ ನೇಮಕವಾದ ಪ್ರಕಾಶ್ ಹನಗಂಡಿ ಸನ್ಮಾನಿಸಿದ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಇಬ್ಬರನ್ನೂ ಸ್ವಾಗತಿಸಿದರು.

  • ಅಪರ ಜಿಲ್ಲಾಧಿಕಾರಿಗೆ 10 ಸಾವಿರ ರೂ. ದಂಡ

    ಅಪರ ಜಿಲ್ಲಾಧಿಕಾರಿಗೆ 10 ಸಾವಿರ ರೂ. ದಂಡ

    ರಾಯಚೂರು: ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಹಾಕಿದ್ದ ಅರ್ಜಿದಾರನಿಗೆ ಮಾಹಿತಿ ನೀಡದ್ದಕ್ಕೆ ಜಿಲ್ಲೆಯಲ್ಲಿ ಈ ಹಿಂದೆ ಅಪರ ಜಿಲ್ಲಾಧಿಕಾರಿಯಾಗಿದ್ದ ಗೋವಿಂದರೆಡ್ಡಿಗೆ 10 ಸಾವಿರ ರೂ. ದಂಡ ವಿಧಿಸಿ ರಾಜ್ಯ ಮಾಹಿತಿ ಆಯೋಗ ಆಯುಕ್ತರು ಆದೇಶ ಹೊರಡಿಸಿದ್ದಾರೆ.

    ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆ ಬಗ್ಗೆ ಆರ್ ಟಿಐ ಕಾರ್ಯಕರ್ತ ಯಶವಂತ್ ಕೋವಿ ಕೇಳಿದ ಮಾಹಿತಿ ನೀಡದ ಹಿನ್ನೆಲೆ ಕ್ರಮ ಜರುಗಿಸಲಾಗಿದೆ. ಸೂಕ್ತ ಸಮಯಕ್ಕೆ ಮಾಹಿತಿ ನೀಡದಕ್ಕೆ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಮಾಹಿತಿ ಆಯೋಗದ ನೋಟಿಸ್ ಗೂ ಯಾವುದೇ ಉತ್ತರ ನೀಡದೇ ನಿರ್ಲಕ್ಷ್ಯ ಮಾಡಿದ್ದಕ್ಕೆ ರಾಯಚೂರಿನ ಹಿಂದಿನ ಎಡಿಸಿ ಗೋವಿಂದರೆಡ್ಡಿಗೆ ಮಾಹಿತಿ ಆಯೋಗ ದಂಡ ಹಾಕಿದೆ.

    ಎರಡು ತಿಂಗಳ ವೇತನದಲ್ಲಿ 10 ಸಾವಿರ ರೂ. ಹಿಡಿಯಲು ಆದೇಶ ಮಾಡಲಾಗಿದೆ. ಅಲ್ಲದೆ ದಂಡ ಕಟ್ಟಿ ಬಳಿಕ ಮಾಹಿತಿ ನೀಡುವಂತೆ ಮಾಹಿತಿ ಆಯೋಗ ಸೂಚಿಸಿದೆ. ಗೋವಿಂದರೆಡ್ಡಿ ಸದ್ಯ ವಿಜಯಪುರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

  • ಕೊಪ್ಪಳದ ಅಪರ ಜಿಲ್ಲಾಧಿಕಾರಿ ನಾಪತ್ತೆ!

    ಕೊಪ್ಪಳದ ಅಪರ ಜಿಲ್ಲಾಧಿಕಾರಿ ನಾಪತ್ತೆ!

    ಕೊಪ್ಪಳ: ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಮೇಲೆ ಹಲ್ಲೆ ಪ್ರಕರಣದಿಂದಾಗಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳು ನಾಪತ್ತೆಯಾಗಿದ್ದಾರೆ.

    ಅಪರ ಜಿಲ್ಲಾಧಿಕಾರಿ ರುದ್ರೇಶ್ ಘಾಳಿ ಕುಟುಂಬದವರು ಇದೇ ತಿಂಗಳು 3 ರಂದು ಗಣಿ ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆ ನಡೆದ ದಿನದಿಂದ ಅಪರ ಜಿಲ್ಲಾಧಿಕಾರಿಗಳು ಕಚೇರಿಯತ್ತ ಸುಳಿಯದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಕಳೆದ 20 ದಿನಗಳಿಂದ ರುದ್ರೇಶ್ ಘಾಳಿಯು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕಚೇರಿಗೆ ಬಾರದೇ ಇರುವುದರಿಂದ ಅವರ ಕೊಠಡಿಗೆ ಬೀಗ ಹಾಕಲಾಗಿದೆ. ಇನ್ನು ರುದ್ರೇಶ್ ಘಾಳಿಯವರು ದೀರ್ಘರಜೆಯ ಮೇಲೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಆದರೆ ಕೆಲವು ಮೂಲಗಳ ಪ್ರಕಾರ ರುದ್ರೇಶ್ ಘಾಳಿಯವರು ಕೊಪ್ಪಳದಿಂದ ಬೇರೆ ಕಡೆಗೆ ವರ್ಗಾವಣೆಯಾಗಲು ಬೆಂಗಳೂರಿನಲ್ಲೇ ಬೀಡುಬಿಟ್ಟಿದಾರೆಂಬ ಮಾತುಗಳು ಕೇಳಿಬಂದಿವೆ.