Tag: ಅಪರಾಧಿ

  • 6ರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸೆದ ಕಾಮುಕನಿಗೆ 10 ವರ್ಷ ಜೈಲು, 20 ಸಾವಿರ ರೂ. ದಂಡ

    6ರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸೆದ ಕಾಮುಕನಿಗೆ 10 ವರ್ಷ ಜೈಲು, 20 ಸಾವಿರ ರೂ. ದಂಡ

    ರಾಮನಗರ: ಆರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಕಾಮುಕನಿಗೆ 10 ವರ್ಷ ಜೈಲು, 20 ಸಾವಿರ ರೂ. ದಂಡ ವಿಧಿಸಿ ರಾಮನಗರ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ  ಶಿಕ್ಷೆ ವಿಧಿಸಿದೆ.

    ತಮಿಳುನಾಡು ಮೂಲದ ಮಂಜುನಾಥ್ ಜೈಲು ಶಿಕ್ಷೆಗೆ ಒಳಗಾದ ಕಾಮುಕ. 2018 ರಲ್ಲಿ ಕನಕಪುರ ನಗರದ ಪ್ರಶಾಂತನಗರದಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದ ಆರೋಪಿ ಮಂಜುನಾಥ್ ತನ್ನ ಪತ್ನಿಯ ಸಹಾಯದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದ. ಅಪರಾಧಿ ಮಂಜುನಾಥ್‍ನ ಕೃತ್ಯ ಎರಡು ದಿನಗಳ ಬಳಿಕ ಬಾಲಕಿಯ ತಂದೆ-ತಾಯಿಗೆ ತಿಳಿದು ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಬಾಲಕಿಯ ಪೋಷಕರ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಠಾಣೆಯ ವೃತ್ತ ನಿರೀಕ್ಷಕ ಮಲ್ಲೇಶ್ ಅವರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಬಗ್ಗೆ ಸರ್ಕಾರಿ ಅಭಿಯೋಜಕಿ ಶಿಲ್ಪಾ ಅವರು ವಾದ ಮಂಡಿಸಿದ್ದು, ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರು ಅಪರಾಧಿ ಮಂಜುನಾಥ್‍ಗೆ 10 ವರ್ಷ ಜೈಲು 20 ಸಾವಿರ ದಂಡ ಶಿಕ್ಷೆ ನೀಡಿ ಆದೇಶಿಸಿದ್ದಾರೆ.

    ಅಲ್ಲದೇ ಬಾಲಕಿ ಮೇಲಿನ ಹಲ್ಲೆಗೆ ಒಂದು ತಿಂಗಳ ಹೆಚ್ಚುವರಿ ಜೈಲುವಾಸ ಹಾಗೂ ದಂಡ ಕಟ್ಟಲು ವಿಫಲವಾದರೆ 6 ತಿಂಗಳ ಕಾಲ ಹೆಚ್ಚುವರಿ ಜೈಲುವಾಸ ಅನುಭವಿಸುವಂತೆ ನ್ಯಾಯಾಲಯ ಆದೇಶಿಸಿದೆ.

  • 6ರ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿದ ಆರೋಪಿಗೆ ಮರಣದಂಡನೆ

    6ರ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿದ ಆರೋಪಿಗೆ ಮರಣದಂಡನೆ

    ಭುವನೇಶ್ವರ: 6 ವರ್ಷದ ಬಾಲಕಿಯನ್ನು ಅತ್ಯಾಚಾರಗೈದು, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ ಆರೋಪಿಗೆ ಒಡಿಶಾ ವಿಶೇಷ ಪೋಸ್ಕೋ ನ್ಯಾಯಾಲಯವು ಮರಣದಂಡನೆ ವಿಧಿಸಿದೆ.

    ಕಳೆದ ವರ್ಷ ಅಪರಾಧಿ ಮುಸ್ತಾಕ್ ಒಡಿಶಾದ ಸಲಿಪುರ ಗ್ರಾಮದಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಬಳಿಕ ಕಲ್ಲಿನಿಂದ ಜಜ್ಜಿ ಬಾಲಕಿಯನ್ನು ಕೊಲೆ ಮಾಡಿದ್ದನು. ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ, ಆಕೆಯನ್ನು ಶಾಲೆಯ ಆವರಣಕ್ಕೆ ಕರೆದೊಯ್ದು ಮುಸ್ತಾಕ್ ಅತ್ಯಾಚಾರ ಮಾಡಿದ್ದನು. ಬಳಿಕ ಈ ಬಗ್ಗೆ ಬಾಲಕಿ ಯಾರಿಗಾದರೂ ಹೇಳುತ್ತಾಳೆ ಎಂಬ ಭಯದಿಂದ ಬಾಲಕಿಯ ತಲೆಯನ್ನು ಕಲ್ಲಿನಿಂದ ಜಜ್ಜಿ ಅಮಾನುಷವಾಗಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದನು.

    ಮಗಳು ಮನೆಯಲ್ಲಿ ಕಾಣದಿದ್ದಾಗ ಪೋಷಕರು ಆಕೆಗಾಗಿ ಹುಡುಕಾಟ ನಡೆಸಿದ್ದಾಗ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಾಗ ಆರೋಪಿ ಮುಸ್ತಾಕ್ ಎಂಬುದು ತಿಳಿದುಬಂದು, ಆತನನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ಬಗ್ಗೆ ಒಡಿಶಾದ ವಿಶೇಷ ಪೋಸ್ಕೋ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಗುರುವಾರ ಆರೋಪ ಪ್ರಕರಣ ಸಾಬೀತಾಗಿದ್ದು ನ್ಯಾಯಾಧೀಶರು ಅಪರಾಧಿಗೆ ಮರಣದಂಡನೆ ವಿಧಿಸಿದ್ದಾರೆ.

    ಈ ಬಗ್ಗೆ ಸಂತ್ರಸ್ತ ಬಾಲಕಿಯ ತಾಯಿ ಮಾತನಾಡಿ, ನನ್ನ ಮಗಳ ಸಾವಿಗೆ ಕಾರಣವಾದ ವ್ಯಕ್ತಿಗೆ ಮರಣದಂಡನೆ ಶಿಕ್ಷೆ ನೀಡಿರುವುದು ಖುಷಿಯಾಗಿದೆ. ಇದರಿಂದ ನನ್ನ ಮಗಳ ಸಾವಿಗೆ ನ್ಯಾಯ ಸಿಕ್ಕಿದೆ, ನ್ಯಾಯಾಲಯಕ್ಕೆ ಧನ್ಯವಾದ. ಈ ತೀರ್ಪು ಅತ್ಯಾಚಾರಿಗಳಿಗೆ ಪಾಠವಾಗಲಿದೆ ಎಂದು ಹೇಳಿದ್ದಾರೆ.

    ಪೋಸ್ಕೋ ಕಾಯ್ದೆ ಅನ್ವಯ 12 ವರ್ಷದ ಒಳಗಿನ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದರೆ ಅಪರಾಧಿಗೆ ಮರಣದಂಡನೆ ಶಿಕ್ಷೆ ನೀಡಲಾಗುತ್ತದೆ. ಐಪಿಸಿ ಸೆಕ್ಷನ್ 302(ಕೊಲೆ), 363(ಅಪಹರಣ), 376ಬಿ (12 ವರ್ಷದ ಒಳಗಡೆ ಇರುವ 12 ವರ್ಷದೊಳಗಿನ ಬಾಲಕಿ ಮೇಲೆ ಅತ್ಯಾಚಾರ) ಅಡಿಯಲ್ಲಿ ಮುಸ್ತಾಕ್ ದೋಷಿ ಎಂದು ಕೋರ್ಟ್ ತೀರ್ಪು ಪ್ರಕಟಿಸಿದೆ. ವಾದ, ಪ್ರತಿವಾದ ಹಾಗೂ ಸಾಕ್ಷಿಯ ಆಧಾರದ ಮೇಲೆ ನ್ಯಾಯಾಲಯವು ಆರೋಪಿಯನ್ನು ಅಪರಾಧಿ ಎಂದು ಘೋಷಿಸಿ ಮರಣದಂಡನೆ ವಿಧಿಸಿದೆ.

  • ಜೈಲಿನಲ್ಲಿ ಅಪರಾಧಿಯಿಂದ ಭರ್ಜರಿ ಹುಟ್ಟುಹಬ್ಬ ಆಚರಣೆ

    ಜೈಲಿನಲ್ಲಿ ಅಪರಾಧಿಯಿಂದ ಭರ್ಜರಿ ಹುಟ್ಟುಹಬ್ಬ ಆಚರಣೆ

    – ಮಟನ್ ಸಾರು ಸವಿದ ಕೈದಿಗಳು

    ಪಾಟ್ನಾ: ಕೊಲೆ ಅಪರಾಧಿಯೊಬ್ಬ ಬಿಹಾರದ ಜೈಲಿನೊಳಗೆ ಕೇಕ್ ಕಟ್ ಮಾಡಿ ಭರ್ಜರಿಯಾಗಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪಿಂಟು ತಿವಾರಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅಪರಾಧಿಯಾಗಿದ್ದು, ಈತ 2015ರಲ್ಲಿ ಇಬ್ಬರು ಎಂಜಿನಿಯರ್ ಗಳನ್ನು ಕೊಲೆ ಮಾಡಿ ಜೈಲು ಸೇರಿದ್ದಾನೆ. ಇತ್ತೀಚೆಗೆ ಪಿಂಟು ಬಿಹಾರ ಜೈಲಿನಲ್ಲಿ ಕೇಕ್ ಕಟ್ ಮಾಡಿ ತನ್ನ ಬರ್ತ್ ಡೇಯನ್ನು ಆಚರಿಸಿಕೊಂಡಿದ್ದಾನೆ. ಜೈಲಿನಲ್ಲಿರುವ ಇತರರಿಂದ ಗಿಫ್ಟ್ ಸಹ ಪಡೆದುಕೊಂಡಿದ್ದಾನೆ. ಈತ ಕೇಕ್ ಕಟ್ ಮಾಡುವಾಗ ಉಳಿದ ಕೈದಿಗಳು ಪಿಂಟುಗೆ ಹ್ಯಾಪಿ ಬರ್ತ್ ಡೇ ಎಂದು ಹಾಡು ಹಾಡಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.

    ಮತ್ತೊಂದು ವಿಡಿಯೋದಲ್ಲಿ, ಸುಮಾರು 12ಕ್ಕೂ ಹೆಚ್ಚು ಮಂದಿ ನೆಲದ ಮೇಲೆ ಕುಳಿತುಕೊಂಡು ಅನ್ನ ಹಾಗೂ ಮಟನ್ ಸಾರು ಸವಿದಿದ್ದಾರೆ. ಪಾರ್ಟಿಯ ಬಳಿಕ ಇತರ ಕೈದಿಗಳಿಗೆ ಪಿಂಟು ಸಿಹಿ ಹಂಚುವ ಮೂಲಕ ಬರ್ತ್ ಡೇಯನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾನೆ. ಅಲ್ಲದೆ ಹುಟ್ಟುಹಬ್ಬದ ಪ್ರಯುಕ್ತ ಊಟದ ವ್ಯವಸ್ಥೆಗಾಗಿ ಕ್ಯಾಟರಿಂಗ್ ಅವರನ್ನು ಜೈಲಿನ ಆವರಣದೊಳಗೆ ಕರೆಸಲಾಗಿದೆ. ಈ ಎಲ್ಲಾ ಘಟನೆಗಳು ವಿಡಿಯೋದಲ್ಲಿ ಸೆರೆಯಾಗಿದೆ. ಇಡೀ ಹುಟ್ಟುಹಬ್ಬದ ಆಚರಣೆಯನ್ನು ಮೊಬೈಲ್ ಫೋನ್ ನಲ್ಲಿ ವಿಡಿಯೋ ಮಾಡಿರುವುದರಿಂದ ಜೈಲಿನೊಳಗೆ ಮೊಬೈಲ್ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂಬುದನ್ನು ಗಮನಿಸಬಹುದು.

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ಪೊಲೀಸ್ ಇಲಾಖೆಯೊಳಗೆ ಭಾರೀ ಕೊಲಾಹಲಕ್ಕೆ ಕಾರಣವಾಗಿದೆ. ಐಜಿ ಮಿಥಿಲೇಶ್ ಮಿಶ್ರಾ ಅವರು ಈ ಘಟನೆಯ ತನಿಖೆಗೆ ಆದೇಶಿಸಿ ಜಿಲ್ಲಾ ಹಾಗೂ ಜೈಲು ಆಡಳಿತದಿಂದ ವರದಿ ಕೋರಿದ್ದಾರೆ. ಜೈಲಿನೊಳಗೆ ಮೊಬೈಲ್ ಬಳಕೆ ಮಾಡಿರುವುದು ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಐಜಿ ತಿಳಿಸಿದ್ದಾರೆ.

    ಪ್ರಕರಣ ಸಂಬಂಧ ಈಗಾಗಲೇ ಜೈಲಿನ ನಾಲ್ವರು ಗಾರ್ಡ್ ಗಳನ್ನು ಅಮಾನತುಗೊಳಿಸಲಾಗಿದೆ ಎಂಬುದಾಗಿ ವರದಿಯಾಗಿದೆ.

  • ಪೆರೋಲ್ ಮೇಲೆ ಹೊರಬಂದವ 11 ವರ್ಷದ ನಂತ್ರ ಸೆರೆಸಿಕ್ಕ!

    ಪೆರೋಲ್ ಮೇಲೆ ಹೊರಬಂದವ 11 ವರ್ಷದ ನಂತ್ರ ಸೆರೆಸಿಕ್ಕ!

    ಚಿಕ್ಕಮಗಳೂರು: ಪೆರೋಲ್ ಮೇಲೆ ಹೊರಬಂದು 11 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿಕೊಂಡು ಮರುಮದುವೆಯಾಗಿ ಮೂರು ಮಕ್ಕಳ ತಂದೆಯಾಗಿದ್ದ ಅಪರಾಧಿಯನ್ನು ಇದೀಗ ಬಂಧಿಸುವಲ್ಲಿ ಚಿಕ್ಕಮಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

    2007ರಲ್ಲಿ ಹೆಂಡತಿಯನ್ನು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಆರೋಪದಡಿ ಶಿವಮೊಗ್ಗ ಸಾಗರ ಮೂಲದ ಅಬ್ದಲ್ ಘನಿ ಪೆರೋಲ್ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದನು. ಆ ನಂತ್ರ ಆತ ಪೆರೋಲ್ ಮೇಲೆ ಹೊರಬಂದಿದ್ದ. ಬಂದವನು ವಾಪಸ್ ಹೋಗದೆ ತನ್ನ ಇತಿಹಾಸವನ್ನೆಲ್ಲಾ ಬದಲಿಸಿಕೊಂಡು, ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬೈಕಿನ ಲೈಸನ್ಸ್ ಎಲ್ಲವನ್ನೂ ಮಾಡಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಿದ್ದನು. ಆದರೆ ಈತ ತನ್ನ ದ್ವಿಚಕ್ರವನ್ನು ಸ್ನೇಹಿತನಿಗೆ ನೀಡಿದ್ದನು.

    ಕುರಿ ಕದ್ದು ಸಿಕ್ಕಿಬಿದ್ದ:
    ಕುರಿ ಕದಿಯುವಾಗ ಸಿಕ್ಕಿಬಿದ್ದ ಅಬ್ದುಲ್ ಘನಿ, ದಕ್ಷಿಣ ಕನ್ನಡದ ಕಡಬ ಠಾಣೆ ಮೆಟ್ಟಿಲೇರಿದ್ದ. ಅಲ್ಲಿನ ಪೊಲೀಸರು ಈತನ ಫಿಂಗರ್ ಪ್ರಿಂಟ್ ಅನ್ನು ಪೊಲೀಸ್ ಇಲಾಖೆಯ ಕ್ರೈಂ ವಿಭಾಗದ ಡಾಟಾಸ್‍ಗೆ ಅಪ್‍ಲೋಡ್ ಮಾಡಿದ್ದಾರೆ. 11 ವರ್ಷದ ಹಿಂದೆ ಇದೇ ಅಬ್ದುಲ್ ಘನಿ ನೀಡಿದ್ದ ಫಿಂಗರ್ ಪ್ರಿಂಟ್ ಮ್ಯಾಚ್ ಆಗಿ ಪೂರ್ವಪರ ಕೆದಕಿದಾಗ ಸಿಕ್ಕಿ ಬಿದ್ದಿದ್ದಾನೆ.

    ಜಾಮೀನು ಫೋರ್ಜರಿ:
    ಈತನ ಮೂಲ ಶಿವಮೊಗ್ಗ. ಪೆರೋಲ್ ಮೇಲೆ ಬಂದವನು ತನ್ನ ಜೀವನದ ಸತ್ಯವನ್ನೆಲ್ಲಾ ಬದಲಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಿದ್ದನು. ಆದ್ರೆ ಇದೀಗ ಈತನನ್ನು ಬಂಧಿಸಿದ್ದು ಮಾತ್ರ ಚಿಕ್ಕಮಗಳೂರಿನ ಪೊಲೀಸರು. ಯಾಕಂದ್ರೆ ಈತ 2007ರಲ್ಲಿ ಪೆರೋಲ್ ಮೇಲೆ ಹೊರಬರುವಾಗ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಜ್ಜಂಪುರ ಹೋಬಳಿಯ ಸೊಲ್ಲಾಪುರ ಗ್ರಾಮ ಪಂಚಾಯತಿಯ ಅಧ್ಯಕ್ಷ ಪೆರೋಲ್ ಗೆ ಜಾಮೀನಾಗಿದ್ದನು. ಆದರೆ ಈತ ಜೈಲಿಗೆ ವಾಪಸ್ ಬರದಾಗ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಜಾಮೀನು ಫೋರ್ಜರಿ ಎಂದು ತಿಳಿದು ಪೊಲೀಸರು ಕೈಚೆಲ್ಲಿದ್ರು. ಆದರೆ ಸದ್ಯ ಅಪರಾಧಿಯ ಫಿಂಗರ್ ಪ್ರಿಂಟ್ ಬರೋಬ್ಬರಿ 11 ವರ್ಷಗಳ ಬಳಿಕ ಈತನನ್ನು ಬಂಧಿಸುವಲ್ಲಿ ಸಹಾಯ ಮಾಡಿದೆ.

  • 1993ರ ಮುಂಬೈ ಸ್ಫೋಟದ ಅಪರಾಧಿ ತಾಹೀರ್ ಮರ್ಚಂಟ್ ಸಾವು

    1993ರ ಮುಂಬೈ ಸ್ಫೋಟದ ಅಪರಾಧಿ ತಾಹೀರ್ ಮರ್ಚಂಟ್ ಸಾವು

    ಮುಂಬೈ: 1993 ರ ಮುಂಬೈ ಸ್ಫೋಟದ ಅಪರಾಧಿ 56 ವರ್ಷದ ತಾಹೀರ್ ಮರ್ಚಂಟ್ ಇಂದು ಮುಂಜಾನೆ ಮೃತಪಟ್ಟಿದ್ದಾನೆ.

    ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಮರ್ಚಂಟ್ ನನ್ನು ಸಾಸೂನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ತಾಹೀರ್ 3.45ರ ಸುಮಾರಿಗೆ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. ತಾಹೀರ್ ಪುಣೆಯ ಯೆರವಾಡ ಜೈಲಿನಲ್ಲಿದ್ದನು.

    ಈ ಮೊದಲು ಅಂದ್ರೆ ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗುವ ಮುನ್ನ ಸಹಕೈದಿಯಾಗಿದ್ದ ಮುಸ್ತಾಫ ದೊಸಾ ಎಂಬಾತ ಮುಂಬೈನಲ್ಲಿ ಮೃತಪಟ್ಟಿದ್ದನು. ಅವನಿಗೂ ಕೂಡ ಜೈಲಿನಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದನು.

    1993ರ ಮಾರ್ಚ್ 12ರಂದು ನಡೆದ ಮುಂಬೈ ಸ್ಫೋಟದಲ್ಲಿ 257 ಮಂದಿ ಮೃತಪಟ್ಟು, 700ಕ್ಕಿಂತಲೂ ಅಧಿಕ ಮಂದಿ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಜೂನ್ 28ರಂದು ನ್ಯಾಯಮೂರ್ತಿ ಜಿ.ಎ.ಸನಾಪ್ ಅವರ ಪೀಠ ವಿಚಾರಣೆ ನಡೆಸಿದ್ದು, ಸ್ಫೋಟದ ರೂವಾರಿ ಮುಸ್ತಫಾ ದೊಸಾ ಮತ್ತು ಅಬು ಸಲೇಂ ಸೇರಿ ಆರು ಆರೋಪಿಗಳಾದ ಫಿರೋಜ್ ಖಾನ್, ಮೊಹಮ್ಮದ್ ತಾಹೀರ್ ಮರ್ಚಂಟ್, ಕರಿಮುಲ್ಲಾ ಖಾನ್ ಮತ್ತು ರಿಯಾಜ್ ಅಹ್ಮದ್ ಸಿದ್ದಿಕಿ ಮುಂತಾದವರನ್ನು ದೋಷಿಗಳೆಂದು ತೀರ್ಪು ನೀಡಿತ್ತು.

  • ಅತ್ಯಾಚಾರ ಕೇಸಲ್ಲಿ 7 ವರ್ಷ ಜೈಲುಶಿಕ್ಷೆ ಅನುಭವಿಸಿದ ನಿರಪರಾಧಿ!

    ಅತ್ಯಾಚಾರ ಕೇಸಲ್ಲಿ 7 ವರ್ಷ ಜೈಲುಶಿಕ್ಷೆ ಅನುಭವಿಸಿದ ನಿರಪರಾಧಿ!

    – ವೆಂಕಟೇಶ್ ಪಾಲಿಗೆ ಕೊನೆಗೂ ನ್ಯಾಯದೇವತೆ ಕಣ್ಣು ಬಿಟ್ಟಳು
    – ರೇಪ್ ತನಿಖೆಯ ಹಾದಿ ತಪ್ಪಿಸಿದ ಪೊಲೀಸರಿಗೆ ಯಾವ ಶಿಕ್ಷೆ?

    ಕಾರವಾರ: ತನ್ನ ದ್ವಿಚಕ್ರ ವಾಹನವನ್ನು ಕೃತ್ಯ ನಡೆದಿದ್ದ ಜಾಗದಲ್ಲಿಟ್ಟು ಹೋಗಿದ್ದಕ್ಕೆ ಅಪರಾಧಿಯಾಗಿ 7 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಯಿತು ಅಂದ್ರೆ ನೀವು ನಂಬಲು ಸಾಧ್ಯವೇ? ಇಂತಹ ಎಡವಟ್ಟನ್ನು ಪೊಲೀಸರು ಮಾಡಿಬಿಟ್ಟಿದ್ದಾರೆ. ಆದರೆ 7 ವರ್ಷದ ಬಳಿಕ ಜೈಲು ಹಕ್ಕಿ ಸ್ವಚ್ಛಂದವಾಗಿ ಹಾರುತ್ತಿದೆ. ಆದರೆ ಮಾಡದ ತಪ್ಪಿಗೆ ಈ ಕುಟುಂಬ ನಿತ್ಯ ಅವಮಾನಕ್ಕೀಡಾಯಿತು. ಪೊಲೀಸರ ದೌರ್ಜನ್ಯಕ್ಕೆ ಬೆಚ್ಚಿಬಿದ್ದ ಒಂದೇ ಒಂದು ಸಣ್ಣ ತಪ್ಪಿಗೆ ಈತನ ಜೀವನದ 7 ಅಮೂಲ್ಯ ವರ್ಷ ಹಾಳಾಯಿತು.

    ಹೌದು. ಆತ ಏಳು ವರ್ಷ ತನ್ನ ಪುಟ್ಟ ಮಕ್ಕಳನ್ನು ಎತ್ತಾಡಿಸದೇ ತನ್ನ ಕುಟುಂಬವನ್ನು ಬಿಟ್ಟು ಜೈಲಿನಲ್ಲೇ ನೋವನ್ನು ಅನುಭವಿಸಿದ್ದು, ಕೊನೆಗೂ ನ್ಯಾಯಾಲಯ ಆತ ನಿರಪರಾಧಿ ಎಂದು ಬಿಡುಗಡೆ ಮಾಡಿದೆ.

    ಏನಿದು ಪ್ರಕರಣ: ಅಂದು ಅಕ್ಟೋಬರ್ 23, 2010 ಉತ್ತರ ಕನ್ನಡ ಜಿಲ್ಲೆಯ ಮುರಡೇಶ್ವರದ ಹಿರೇಧೋಮಿಯ ನಿವಾಸಿ ಮಹ್ಮದ್ ಸಾಧಿಕ್ ಎಂಬವರ ಮನೆಯ ಹಿಂಭಾಗದಲ್ಲಿ ಅದೇ ಮನೆಯಲ್ಲಿ ಕೆಲಸ ಮಾಡುವ ಯಮುನಾ ಎಂಬ ಯುವತಿಯನ್ನು ಅತ್ಯಾಚಾರವೆಸಗಿ ಅಮಾನುಷವಾಗಿ ಹತ್ಯೆಗೈಯಲಾಗಿತ್ತು. ಈ ವಿಷಯ ಸುತ್ತಮುತ್ತ ಹಬ್ಬಿ ಒಂದು ವಾರ ಕೋಮು ಗಲಭೆಯಾಗಿ ನಿಷೇಧಾಜ್ಞೆ ಜಾರಿಯಾಗುವ ಮಟ್ಟಿಗೆ ಈ ಹತ್ಯೆ ಪ್ರಾಮುಖ್ಯತೆ ಪಡೆದು ರಾಜ್ಯದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವಾಗಲೇ ಅದೇ ಊರಿನ ವಿವಾಹಿತ ವೆಂಕಟೇಶ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದೇವೆ. ಆತ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅಂದಿನ ಭಟ್ಕಳ ಡಿವೈಎಸ್‍ಪಿ ಎಂ.ನಾರಾಯಣ್ ಘೋಷಿಸಿದ್ರು.

    ಯಾರೂ ಸಿಗದಿದ್ದಾಗ ಈತ ಸಿಕ್ಕಾಕಿಕೊಂಡ!: ಬಳಿಕ ವೆಂಕಟೇಶ್‍ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಚಾರ್ಜ್‍ಶೀಟ್ ಸಲ್ಲಿಸಿದ್ರು. ವೆಂಕಟೇಶ್ ಮುರಡೇಶ್ವರದಲ್ಲಿ ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು, ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಅತ್ಯಾಚಾರ ನೆಡೆದು ಕೊಲೆಯಾದ ಸ್ಥಳದಲ್ಲಿ ಪ್ರತಿ ದಿನ ತನ್ನ ಬೈಕ್ ನಿಲ್ಲಿಸಿ ಮುರಡೇಶ್ವರದ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುತಿದ್ದರು. ಅಂದು ವೆಂಕಟೇಶ್ ಗ್ರಹಚಾರ ಕೆಟ್ಟಿತ್ತೋ ಏನೋ, ಬೈಕ್ ನಿಲ್ಲಿಸಿದ ಹತ್ತಿರದಲ್ಲಿಯೇ ಯಮುನಾ ಎಂಬ ಯುವತಿ ಅತ್ಯಾಚಾರವಾಗಿ ಹೆಣವಾಗಿ ಬಿದ್ದಿದ್ದಳು. ಈಕೆಯ ತಂದೆ ನಾಗಪ್ಪ ಅವರು ಯುವತಿ ಕೆಲಸ ಮಾಡುತ್ತಿದ್ದ ಮನೆಯ ಮಾಲೀಕ ಮಹ್ಮದ್ ಸಾದಿಕ್ ಸೇರಿದಂತೆ ಒಂಭತ್ತು ಜನರ ಮೇಲೆ ದೂರು ದಾಖಲಿಸಿದ್ರು.

    ಇದೇ ಸಂದರ್ಭದಲ್ಲಿ ಕೋಮು ಘರ್ಷಣೆ ಕೂಡ ದೊಡ್ಡದಾಗಿತ್ತು. ಜನರನ್ನ ಸಮಾಧಾನ ಮಾಡುವ ನಿಟ್ಟಿನಲ್ಲಿ ಪೊಲೀಸರು ಎಲ್ಲಿಲ್ಲದ ಸಾಹಸ ಮಾಡಿದ್ರು. ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಕೂಡ ದೊಡ್ಡ ಘರ್ಷಣೆಯ ಕಿಚ್ಚು ಹಚ್ಚಿಬಿಟ್ಟಿದ್ರು. ಇನ್ನೇನೂ ಮುರಡೇಶ್ವರ ರಣರಂಗವಾಗುತ್ತೆ ಎನ್ನುವುದರೊಳಗೆ ವೆಂಕಟೇಶ್ ಬಂಧಿಯಾಗಿದ್ದು, ಎಲ್ಲವನ್ನ ತಣ್ಣಗಾಗಿಸಿತ್ತು. ವೆಂಕಟೇಶ್ ನನ್ನು ಬಂಧಿಸಿ ಖಾಸಗಿ ಲಾಡ್ಜ್ ನಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿ ಬಲವಂತವಾಗಿ ತಾನೇ ಅಪರಾಧಿ ಎಂದು ಸಹಿ ಹಾಕಿಸಿ ವೀಡಿಯೋ ರೆಕಾರ್ಡ್ ಕೂಡ ಮಾಡಿಸಲಾಯ್ತು. ಹೀಗೆ ಪೊಲೀಸರು ಬಲವಂತವಾಗಿ ಅಪರಾಧಿ ಮಾಡಿದ್ರು.

    ಅತ್ಯಾಚಾರವಾಗಿ ಹತ್ಯೆಯಾಗಿದ್ದ ಯುವತಿಯ ಕೈಯಲ್ಲಿ ಅಪರಾಧಿಯ ಕೂದಲುಗಳು ದೊರಕಿದ್ದವು. ಜೊತೆಗೆ ಸ್ಥಳದಲ್ಲಿ ವೀರ್ಯದ ಅಂಶವೂ ಪತ್ತೆಯಾಗಿತ್ತು. ಇದನ್ನು ಹೈದ್ರಬಾದ್ ನ (ಸಿ.ಡಿ.ಎಫ್.ಡಿ) ವಿಧಿ ವಿಜ್ಞಾನ ಇಲಾಖೆಗೆ ಕಳುಹಿಸಿದ್ದು, ಶವಪರೀಕ್ಷೆಯನ್ನು ಮಣಿಪಾಲದ ಕಿಮ್ಸ್ ನಲ್ಲಿ ಡಾ ಶಂಕರ್ ಬಕ್ಕಣ್ಣನವರ್ ನೆಡೆಸಿದ್ರು. ಇದಲ್ಲದೇ ಐದು ಬಾರಿ ವೆಂಕಟೇಶ್ ನ ಡಿಎನ್‍ಎ ಪರಿಕ್ಷೆ ಸಹ ಮಾಡಿಸಲಾಯ್ತು. ವಿಶೇಷ ಅಂದ್ರೆ ಅತ್ಯಾಚಾರವಾಗಿ ಹತ್ಯೆಯಾಗಿದ್ದ ಯುವತಿಯ ಕುಟುಂಬದವರೂ ಪೊಲೀಸರ ಒತ್ತಡಕ್ಕೆ ಮಣಿದು ವೆಂಕಟೇಶ್ ಹೆಸರನ್ನ ಎಫ್.ಐ.ಆರ್.ನಲ್ಲಿ ಸೇರಿಸುವಂತಾಯ್ತು. ಹೀಗೆ ತನಿಖೆ ನಡೆಸುತ್ತಿದ್ದ ಅಂದಿನ ಭಟ್ಕಳದ ಡಿವೈಎಸ್‍ಪಿ ಎಂ. ನಾರಾಯಣ್ ಒಬ್ಬ ನಿರಪರಾಧಿಯನ್ನ ಅಪರಾಧಿಯಾಗಿ ಕಟಕಟೆಯಲ್ಲಿ ನಿಲ್ಲಿಸಿದ್ರು.

    ಅತ್ಯಾಚಾರ ಮಾಡಿ ಕೊಲೆ ಮಾಡಿದ ಅಪರಾಧವಿದ್ದಿದ್ದರಿಂದ ಬಂಧನದ ಮೂರು ತಿಂಗಳೊಳಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಹೀಗಾಗಿ ವೆಂಕಟೇಶ್ ಗೆ ಬೇಲ್ ಕೂಡ ಸಿಗಲಿಲ್ಲ. ಇಡೀ ಊರೇ ವೆಂಕಟೇಶ್ ಕುಟುಂಬದ ವಿರುದ್ಧ ನಿಂತುಬಿಟ್ಟಿತ್ತು. ಚಿಕ್ಕ ಮಕ್ಕಳನ್ನು ಎದೆಯಲ್ಲಿ ಅವಚಿ ಜೀವನ ಮಾಡಲು ಪತ್ನಿ ಮಾದೇವಿಗೆ ಕಷ್ಟವಾಗಿತ್ತು. ಇಂತಹ ಪರಿಸ್ಥಿತಿಯಲ್ಲೂ ತನ್ನ ಗಂಡ ನಿರಪರಾಧಿ ಎಂಬುದನ್ನ ಅರಿತಿದ್ದ ಈಕೆ ನ್ಯಾಯಕ್ಕಾಗಿ ಮುರಡೇಶ್ವರದ ವಕೀಲ ರವಿಕಿರಣ್ ಅವರ ಮೊರೆ ಹೋದ್ರು.

    ಘಟನೆಯ ಸಂಪೂರ್ಣ ಮಾಹಿತಿ ತಿಳಿದಿದ್ದ ವಕೀಲ ರವಿಕಿರಣ್ ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡಿದ್ರೆ, ತನಿಖೆಯ ಭಾರ ಹೊತ್ತಿದ್ದ ಭಟ್ಕಳದ ಡಿವೈಎಸ್‍ಪಿ ಎಂ. ನಾರಾಯಣ್ 2011ರಲ್ಲಿ ವಿಧಿವಿಜ್ಞಾನ ಇಲಾಖೆಯಿಂದ ಬಂದಿದ್ದ ವರದಿಯನ್ನ ಒಂದು ವರ್ಷಗಳ ಕಾಲ ನ್ಯಾಯಾಲಯಕ್ಕೆ ನೀಡಲಿಲ್ಲ. ಹೀಗಾಗಿ ನ್ಯಾಯಾಲಯದಲ್ಲೂ ವಾದ ಪ್ರತಿವಾದಗಳು ದೀರ್ಘಾವಧಿ ನಡೆದು 51 ಜನರ ಸಾಕ್ಷಿ ಹೇಳಿಕೆ ನಂತರ ಡಿಎನ್‍ಎ ವರದಿ ಆಧರಿಸಿ ಇದೇ ತಿಂಗಳ 28 ರಂದು ಕಾರವಾರ ನ್ಯಾಯಾಲಯ ಅತ್ಯಾಚಾರ ಮತ್ತು ಹತ್ಯೆಯಲ್ಲಿ ವೆಂಕಟೇಶ್ ಪಾತ್ರವಿಲ್ಲವೆಂದು, ನಿರಪರಾಧಿ ಎಂದು ತೀರ್ಪು ನೀಡಿ ಬಿಡುಗಡೆಗೊಳಿಸುವ ಮೂಲಕ ನ್ಯಾಯವನ್ನು ಎತ್ತಿಹಿಡಿದಿದೆ.

    ಇನ್ನು 2010 ರಿಂದ ಈವರೆಗೆ ಮಾಡದ ತಪ್ಪಿಗೆ ವೆಂಕಟೇಶ್ ಜೈಲು ಶಿಕ್ಷೆ ಅನುಭವಿಸಿದ್ದಾರೆ. ತನಿಖೆಯನ್ನು ಸಮರ್ಪಕವಾಗಿ ಮಾಡದ ಭಟ್ಕಳದ ಅಂದಿನ ಡಿವೈಎಸ್‍ಪಿ ಎಂ.ನಾರಾಯಣ್ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲು ವೆಂಕಟೇಶ್ ಕುಟುಂಬ ತೀರ್ಮಾನಿಸಿದೆ.

    ಪೊಲೀಸರು ಮಾಡಿದ ಮೋಸದಿಂದ ಒಬ್ಬ ನಿರಪರಾಧಿಯ ಜೀವನದ ಅಮೂಲ್ಯ ಕ್ಷಣಗಳು ವ್ಯರ್ಥವಾಗಿ ಹೋಗಿದೆ. ಗಂಡನಿಲ್ಲದೆ, ತಂದೆಯಿಲ್ಲದೆ ಹೆಂಡತಿ ಮಕ್ಕಳು ಕಷ್ಟದ ಜೀವನ ಸಾಗಿಸಿದ್ದಾರೆ. ಇವರ ಹಿಂದಿನ ಜೀವನವನ್ನ ಮತ್ತೆ ಮರಳಿ ನೀಡಲಾಗದು. ಆದ್ರೆ ಕೊನೆ ಪಕ್ಷ ಅತ್ಯಾಚಾರವಾಗಿ ಹತ್ಯೆಯಾಗಿದ್ದ ಯಮುನಾಳ ಸಾವಿಗೆ ನ್ಯಾಯ ಸಿಗಬೇಕಿದೆ. ತನಿಖೆಯ ದಿಕ್ಕು ತಪ್ಪಿಸಿ ಅನ್ಯಾಯವೆಸಗಿದ ಅಂದಿನ ಭಟ್ಕಳ ಡಿವೈಎಸ್‍ಪಿಗೆ ಶಿಕ್ಷೆಯಾಗಬೇಕು ಅಂತಾ ಇದೀಗ ಬಿಡುಗಡೆಗೊಂಡ ವೆಂಕಟೇಶ್ ಒತ್ತಾಯಿಸಿದ್ದಾರೆ.