Tag: ಅಪರಾಧಿಗಳು

  • ಕಾನೂನು ಕಸರತ್ತಿಗೆ ಒಂದೇ ವಾರ ಟೈಮ್ – ನಿರ್ಭಯಾ ಅತ್ಯಾಚಾರಿಗಳಿಗೆ ಹೈಕೋರ್ಟ್ ಡೆಡ್‍ಲೈನ್

    ಕಾನೂನು ಕಸರತ್ತಿಗೆ ಒಂದೇ ವಾರ ಟೈಮ್ – ನಿರ್ಭಯಾ ಅತ್ಯಾಚಾರಿಗಳಿಗೆ ಹೈಕೋರ್ಟ್ ಡೆಡ್‍ಲೈನ್

    ನವದೆಹಲಿ: ಗಲ್ಲು ಶಿಕ್ಷೆಯಿಂದ ಪಾರಾಗಲು ದಿನಕ್ಕೊಂದು ನೆಪವೊಡ್ಡಿ ಕಾನೂನು ಕಸರತ್ತು ಮಾಡುತ್ತಿರುವ ನಿರ್ಭಯಾ ಅತ್ಯಾಚಾರಿಗಳಿಗೆ ದೆಹಲಿ ಹೈಕೋರ್ಟ್ 1 ವಾರ ಕಾಲಾವಕಾಶ ನೀಡಿದೆ. ಆ ಬಳಿಕ ಅತ್ಯಾಚಾರಿಗಳನ್ನು ಗಲ್ಲಿಗೇರಿಸೋದು ಖಚಿತವೆಂದು ಹೈಕೋರ್ಟ್ ತಿಳಿಸಿದೆ.

    ನಿರ್ಭಯಾ ಅತ್ಯಾಚಾರಿಗಳ ಗಲ್ಲು ಶಿಕ್ಷೆಗೆ ಅನಿರ್ಧಿಷ್ಟಾವಧಿ ತಡೆ ನೀಡಿ ಕೆಳ ಹಂತದ ನ್ಯಾಯಾಲಯ ಕೆಲವು ದಿನಗಳ ಹಿಂದೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಮತ್ತು ತಿಹಾರ್ ಜೈಲು ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಒಂದು ವಾರದ ಒಳಗೆ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಮುಗಿಸುವಂತೆ ಸೂಚಿಸಿದೆ. ಆ ಬಳಿಕ ಅಪರಾಧಿಗಳು ಏನೇ ಕಸರತ್ತು ಮಾಡಿದರು ಪ್ರಯೋಜನಕ್ಕಿಲ್ಲ, ಗಲ್ಲು ಶಿಕ್ಷೆಯ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ವಿಚಾರಣಾ ನ್ಯಾಯಾಲಯ ಹೇಳಿದೆ.

    ವಿಚಾರಣೆ ವೇಳೆ ನ್ಯಾ. ಸುರೇಶ್ ಕೇತ್, ಒಬ್ಬ ಅಪರಾಧಿಯ ಕ್ಷಮಾದಾನ ಅರ್ಜಿ ಬಾಕಿ ಉಳಿದಿದ್ದರೆ, ಇತರೆ ಅಪರಾಧಿಗಳನ್ನು ನೇಣಿಗೇರಿಸಬಹುದು ಎಂದು ದೆಹಲಿ ಜೈಲು ನಿಯಮಗಳು ಹೇಳುವುದಿಲ್ಲ. ಸುಪ್ರೀಂ ಕೋರ್ಟಿನಲ್ಲಿ ಅಪರಾಧಿಗಳ ಹಣೆ ಬರಹ ಒಂದೇ ತೀರ್ಪಿನಿಂದ ನಿರ್ಧಾರವಾಗಿದೆ. ಎಲ್ಲಾ ಅಪರಾಧಿಗಳ ಗಲ್ಲು ಒಟ್ಟಾಗಿ ಜಾರಿಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ತೀರ್ಪಿನ ನಂತರ ನಿರ್ಭಯಾ ತಾಯಿ ಆಶಾ ದೇವಿ ಪ್ರತಿಕ್ರಿಯಿಸಿ, ಪ್ರಕ್ರಿಯೆಗೆ ಹೈಕೋರ್ಟ್ ಗಡುವು ನೀಡಿರುವುದಕ್ಕೆ ಖುಷಿಯಾಗಿದೆ. ಅಪರಾಧಿಗಳು ಗಲ್ಲು ಶಿಕ್ಷೆಯ ಪ್ರಕ್ರಿಯೆಯನ್ನು ಮುಂದೂಡಿಕೆ ಮಾಡುತ್ತಾ ಬಂದಿದ್ದರು. ಇದೀಗ ಇದನ್ನು ಒಂದು ವಾರದ ಒಳಗೆ ಮುಗಿಸಬೇಕಾಗಿದೆ. ಇದು ಸಂತಸದ ವಿಚಾರ ಎಂದರು.

    ಈ ಹಿಂದೆ ಫೆ. 1ರಂದು ಬೆಳಗ್ಗೆ 6 ಗಂಟೆಗೆ ನಿರ್ಭಯಾ ಅಪರಾಧಿಗಳಿಗೆ ಗಲ್ಲಿಗೆ ಏರಿಸಲು ಕೋರ್ಟ್ ಆದೇಶ ನೀಡಿತ್ತು. ಆದರೆ ಅಪರಾಧಿಗಳು ಗಲ್ಲುಶಿಕ್ಷೆ ಜಾರಿ ಮುಂದೂಡಲು ನಾನಾ ಪ್ರಯತ್ನವನ್ನು ಮುಂದುವರಿಸಿದ್ದರು. ಬುಧವಾರ ಅಪರಾಧಿ ವಿನಯ್ ಶರ್ಮಾ ರಾಷ್ಟ್ರಪತಿ ಅವರಿಗೆ ಎರಡನೇ ಬಾರಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದನು. ಆದರೆ ರಾಷ್ಟ್ರಪತಿಗಳ ತೀರ್ಮಾನ ಪ್ರಕಟವಾಗದ ಹಿನ್ನೆಲೆಯಲ್ಲಿ ಪಟಿಯಾಲ ಕೋರ್ಟ್ ಗಲ್ಲುಶಿಕ್ಷೆಗೆ ತಡೆಯಾಜ್ಞೆ ನೀಡಿತ್ತು.

    ಇನ್ನೊಂದೆಡೆ ಮತ್ತೋರ್ವ ದೋಷಿ ಪವನ್, ನಾನು ಅಪ್ರಾಪ್ತನಾಗಿದ್ದಾಗ ಈ ಘಟನೆ ನಡೆದಿತ್ತು. ಹೀಗಾಗಿ ನನ್ನನ್ನು ಮರಣದಂಡನೆಗೆ ಒಳಪಡಿಸಬಾರದು ಎಂದು ಸುಪ್ರಿಂ ಕೋರ್ಟ್‍ಗೆ ಮತ್ತೊಮ್ಮೆ ಮನವಿ ಮಾಡಿದ್ದನು. ಈ ಹಿಂದೆಯೇ ತ್ರಿಸದಸ್ಯ ಪೀಠ ಪವನ್ ಅರ್ಜಿಯನ್ನು ತಿರಸ್ಕೃತ ಮಾಡಿತ್ತು. ಹೀಗಾಗಿ ಸುಪ್ರೀಂಕೋರ್ಟಿನ ಸಂವಿಧಾನಿಕ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದನು.

    ರಾಷ್ಟ್ರಪತಿಗಳ ಕ್ಷಮಾದಾನದ ತೀರ್ಪಿನ ವಿರುದ್ಧ ಮುಖೇಶ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದನು. ಕಳೆದ ಬುಧವಾರ ಸುಪ್ರೀಂಕೋರ್ಟ್ ಮುಖೇಶ್ ಅರ್ಜಿಯನ್ನು ವಜಾಗೊಳಿಸಿತ್ತು. ಮುಖೇಶ್ ನಂತೆಯೇ ಉಳಿದ ಅಪರಾಧಿಗಳು ಅರ್ಜಿ ಸಲ್ಲಿಸುವ ಮೂಲಕ ಗಲ್ಲು ಏರುವುದಕ್ಕೆ ವಿಳಂಬ ಮಾಡುವ ತಂತ್ರ ಮಾಡುತ್ತಿದ್ದಾರೆ. ಆದರೆ ಅಪರಾಧಿಗಳು ಏನೇ ಮಾಡಿದರೂ ಗಲ್ಲು ಶಿಕ್ಷೆಯನ್ನು ಮಾತ್ರ ತಡೆಯಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

  • ನಿಮ್ಮ ಕೊನೆಯ ಆಸೆ ಏನು? ನಿರ್ಭಯಾ ದೋಷಿಗಳ ಗಲ್ಲು ಶಿಕ್ಷೆಗೆ ಶುರುವಾಯ್ತು ದಿನಗಣನೆ

    ನಿಮ್ಮ ಕೊನೆಯ ಆಸೆ ಏನು? ನಿರ್ಭಯಾ ದೋಷಿಗಳ ಗಲ್ಲು ಶಿಕ್ಷೆಗೆ ಶುರುವಾಯ್ತು ದಿನಗಣನೆ

    ನವದೆಹಲಿ : ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ದೋಷಿಗಳ ಗಲ್ಲು ಶಿಕ್ಷೆಗೆ ದಿನಗಣನೆ ಶುರುವಾಗಿದೆ. ಫೆಬ್ರವರಿ 1 ರಂದು ಬೆಳಗ್ಗೆ ಆರು ಗಂಟೆಗೆ ಗಲ್ಲು ಶಿಕ್ಷೆ ವಿಧಿಸಲಿದ್ದು ಈ ನಿಟ್ಟಿನಲ್ಲಿ ಸಿದ್ಧತೆಗಳು ಆರಂಭವಾಗಿದೆ.

    ನಾಲ್ವರು ದೋಷಿಗಳಿಗೆ ತಮ್ಮ ಕೊನೆಯ ಆಸೆ ತಿಳಿಸುವಂತೆ ತಿಹಾರ್ ಜೈಲು ಅಧಿಕಾರಿಗಳು ಲಿಖಿತ ರೂಪದಲ್ಲಿ ಪತ್ರವೊಂದನ್ನ ನೀಡಿದ್ದಾರೆ. ಕಳೆದ ವಾರ ಈ ಮಾಹಿತಿ ಕೇಳಿರುವ ಹೆಚ್ಚುವರಿ ಇನ್ಸ್‍ಪೆಕ್ಟರ್ ಜನರಲ್ ರಾಜ್‍ಕುಮಾರ್, ಈಡೇರಿಸಬಹುದಾದ ಆಸೆಗಳನ್ನು ಪಟ್ಟಿ ಮಾಡುವಂತೆ ಸೂಚಿಸಿದ್ದಾರೆ.

    ಈ ಮಾಹಿತಿ ಧೃಡಪಡಿಸಿರುವ ಎಐಜಿ ರಾಜಕುಮಾರ್, ಗಲ್ಲಿಗೇರಿಸುವ ಮೊದಲು ನಾಲ್ಕು ಜನರನ್ನು ತಮ್ಮ ಕೊನೆಯ ಆಶಯವನ್ನು ಪಟ್ಟಿ ಮಾಡಲು ಲಿಖಿತವಾಗಿ ಕೇಳಿಕೊಂಡಿದೆ. ಅವರಲ್ಲಿ ಯಾರೂ ಇಲ್ಲಿಯವರೆಗೆ ಪ್ರತಿಕ್ರಿಯಿಸಿಲ್ಲ ಅವರ ಉತ್ತರಕ್ಕಾಗಿ ಕಾಯುತ್ತಿದ್ದೇವೆ, ನಾಲ್ವರು ದೋಷಿಗಳ ಕೊನೆಯ ಆಸೆ ಏನೆಂದು ಒಮ್ಮೆ ನಮಗೆ ತಿಳಿಸಿದರೆ, ಆಸೆ ಈಡೇರಲು ಸಾಧ್ಯವಾದರೆ ತಿಹಾರ್ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ಪ್ರತಿ ಆಸೆ ಪೂರ್ಣಗೊಳ್ಳಲು ಸಾಧ್ಯವಿಲ್ಲ. ಅವರು ಲಿಖಿತವಾಗಿ ನಮಗೆ ಪಟ್ಟಿ ನೀಡಿದಲ್ಲಿ ಜೈಲು ಆಡಳಿತವು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

    ನಾಲ್ಕು ಅಪರಾಧಿಗಳು ತಾವು ಕೊನೆಯ ಬಾರಿಗೆ ಯಾರನ್ನಾದರೂ ಭೇಟಿಯಾಗಲು ಬಯಸಿದರೆ ಅವರು ಹೆಸರಗಳು ಮತ್ತು ಅಪರಾಧಿಗಳು ಹೊಂದಿರುವ ಯಾವುದೇ ಆಸ್ತಿ ಅಥವಾ ವಸ್ತುಗಳನ್ನು ಅವರು ಬಯಸುವ ಯಾರಿಗಾದರೂ ವರ್ಗಾಯಿಸಲು ಕೇಳಿಕೊಳ್ಳಲಾಗಿದೆ ಎಂದು ಜೈಲು ಅಧಿಕಾರಿಗಳು ಹೇಳಿದರು.

    ಫೆಬ್ರವರಿ 1 ರಂದು ಬೆಳಗ್ಗೆ 6 ಗಂಟೆಗೆ ವಿನಯ್ ಶರ್ಮಾ (26), ಅಕ್ಷಯ್ ಕುಮಾರ್ ಸಿಂಗ್ (31), ಮುಖೇಶ್ ಕುಮಾರ್ ಸಿಂಗ್ (32) ಮತ್ತು ಪವನ್ (26) ಅವರನ್ನು ಗಲ್ಲಿಗೇರಿಸಿಸಲು ದೆಹಲಿ ನ್ಯಾಯಾಲಯವು ಜನವರಿ 17 ರಂದು ಹೊಸ ಡೆತ್ ವಾರಂಟ್ ಹೊರಡಿಸಿದೆ.

  • ಅಂತರಾಜ್ಯಕ್ಕೆ ಅಪ್ರಾಪ್ತೆಯರನ್ನು ಮಾರಾಟ ಮಾಡ್ತಿದ್ದ ಮೂವರಿಗೆ ಜೀವಾವಧಿ ಶಿಕ್ಷೆ

    ಅಂತರಾಜ್ಯಕ್ಕೆ ಅಪ್ರಾಪ್ತೆಯರನ್ನು ಮಾರಾಟ ಮಾಡ್ತಿದ್ದ ಮೂವರಿಗೆ ಜೀವಾವಧಿ ಶಿಕ್ಷೆ

    ಬೆಳಗಾವಿ: ಹಣದಾಸೆಗೆ ಅಂತರಾಜ್ಯಕ್ಕೆ ಅಪ್ರಾಪ್ತ ಬಾಲಕಿಯರನ್ನು ಮಾರಾಟ ಮಾಡುವ ಉದ್ದೇಶದಲ್ಲಿ ಮನೆಯಲ್ಲಿ ಕೂಡಿಟ್ಟ ಪ್ರಕರಣವನ್ನು 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಿದ್ದು, ಇಂದು ಮೂವರು ಅಪರಾಧಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಜೊತೆಗೆ ದಂಡ ವಿಧಿಸಿ ತೀರ್ಪು ಹೊರಡಿಸಿದೆ.

    ಕಿತ್ತೂರು ತಾಲೂಕಿನ ಹೊಳಿನಾಗಲಾಪುರ ಗ್ರಾಮದ ಮಂಜುಳಾ ಅಡಿವೆಪ್ಪ ಚೌಡಪ್ಪನವರ(60), ಬೈಲಹೊಂಗಲ ತಾಲೂಕಿನ ಅಮಟೂರ ಗ್ರಾಮದ ಈರನಗೌಡ ಅಣ್ಣಪ್ಪಗೌಡ ಪಾಟೀಲ್(37), ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಸಂದೀಪ ಪಾರಸ್ ಗಳಗ(32) ಶಿಕ್ಷೆಗೆ ಗುರಿಯಾದವರು.

    2015 ಅಕ್ಟೋಬರ್ 5ರಂದು ಹೊಳಿನಾಗಲಾಪುರ ಗ್ರಾಮದಲ್ಲಿ ಮಂಜುಳಾ ಇಬ್ಬರು ಪುರುಷರೊಂದಿಗೆ ಸೇರಿ ಈ ಕೃತ್ಯವೆಸೆಗಿದ್ದಳು. ತನ್ನ ಮನೆಯಲ್ಲಿ ಇಬ್ಬರು ಅಪ್ರಾಪ್ತೆಯರನ್ನು ಬೇರೆ ಕಡೆಗಳಿಂದ ಕರೆತಂದು ವೇಶ್ಯಾವಾಟಿಕೆಗಾಗಿ ಮಾರಾಟ ಮಾಡುವ ಮೂಲಕ ಹಣಗಳಿಕೆಗೆ ಮುಂದಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೆರೆಗೆ ಕಿತ್ತೂರು ಠಾಣೆಯ ಪಿಎಸ್‍ಐ ನಿಂಗನಗೌಡ ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಅರುಣ ನೀರಗಟ್ಟಿ ಹಾಗೂ ಸ್ಪಂದನ ಸಂಸ್ಥೆ ಸುಶೀಲಾ ಅವರು ದಾಳಿ ನಡೆಸಿ ಮೂವರು ಅಪರಾಧಿಗಳನ್ನು ಬಂಧಿಸಿ, ಅಪ್ರಾಪ್ತೆಯರನ್ನು ರಕ್ಷಣೆ ಮಾಡಿದ್ದರು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‍ಐ ನಿಂಗನಗೌಡ ಪಾಟೀಲ್ ಸ್ವಂ ದೂರು ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದರು.

  • ನಿರ್ಭಯಾ ಅತ್ಯಾಚಾರಿಗಳನ್ನು ಹ್ಯಾಂಗ್ ಮಾಡೋನಿಗೆ ಜಗ್ಗೇಶ್ ಉಡುಗೊರೆ

    ನಿರ್ಭಯಾ ಅತ್ಯಾಚಾರಿಗಳನ್ನು ಹ್ಯಾಂಗ್ ಮಾಡೋನಿಗೆ ಜಗ್ಗೇಶ್ ಉಡುಗೊರೆ

    ಬೆಂಗಳೂರು: ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸುವ ಹ್ಯಾಂಗ್ ಮ್ಯಾನ್ ಪವನ್ ಜಲ್ಲಾದ್‍ಗೆ ನವರಸ ನಾಯಕ ಜಗ್ಗೇಶ್ ಒಂದು ಲಕ್ಷ ಘೋಷಣೆ ಮಾಡಿದ್ದಾರೆ.

    ಹೌದು. ಹ್ಯಾಂಗ್‍ಮ್ಯಾನ್ ಪವನ್ ಅವರು ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿದರೆ ಅದರಿಂದ ಬರುವ ದುಡ್ಡಿನಲ್ಲಿ ನನ್ನ ಮಗಳ ಮದುವೆ ಮಾಡುತ್ತೇನೆ. ಸರ್ಕಾರ ನಂಗೆ ಒಂದು ಲಕ್ಷ ನೀಡುತ್ತದೆ. ನಾನು ಬಡತನದಿಂದ ಕುಸಿದು ಹೋಗಿದ್ದೆ. ಈಗ ಈ ಕರ್ತವ್ಯ ನಿರ್ವಹಿಸಲು ಹೇಳಿದ್ದಾರೆ. ಹೀಗಾದರೆ ನನಗೆ ಒಂದು ಲಕ್ಷ ದುಡ್ಡು ಬರುತ್ತದೆ. ಮಗಳ ಮದುವೆ ಮಾಡುತ್ತೇನೆ. ಗಲ್ಲಿಗೇರಿಸಲು ನಾನು ಸಿದ್ಧವಾಗಿದ್ದೇನೆ. ಇದು ನನ್ನ ಮಗಳ ಮದುವೆಗೆ ಹಣ ಹೊಂದಿಸುವುದಕ್ಕಾಗಿ ದೇವರೇ ಕೊಟ್ಟ ಅವಕಾಶ ಎಂದು ಭಾವುಕರಾಗಿ ಪವನ್ ಜಲ್ಲಾದ್ ಮಾಧ್ಯಮಕ್ಕೆ ಹೇಳಿಕೆ ಕೊಟ್ಟಿದ್ದರು.

    ಇದಕ್ಕೆ ಟ್ಬೀಟ್ ಮಾಡಿರುವ ಜಗ್ಗೇಶ್, ರಾಕ್ಷಸ ಸಂಹಾರ ಮಾಡುವ ಈ ಕಾರ್ಯವನ್ನು ನೀವು ಮಾಡಿದರೆ ಒಂದು ಲಕ್ಷ ನಿಮಗೆ ನೀಡುತ್ತೇನೆ. ಮಗಳ ಮದುವೆ ಮಾಡುವ ಎನ್ನುವ ನಿಮ್ಮ ಮಾತು ನನ್ನನ್ನು ಭಾವುಕನಾಗಿಸಿದೆ. ಇಂದೇ ನಾನು ದುಡಿದ ಹಣದಲ್ಲಿ ನಿಮಗೆ ದುಡ್ಡು ಎತ್ತಿಡುವೆ ಅಂತ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:ನಿರ್ಭಯಾ ಪ್ರಕರಣ – ಜನವರಿ 22 ಬೆಳಗ್ಗೆ 7ಕ್ಕೆ ಕಾಮುಕರು ನೇಣಿಗೆ

    ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಜನವರಿ 22ರಂದು ಗಲ್ಲಿಗೇರಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದಕ್ಕೆ ಪೂರಕವಾಗಿ ಉತ್ತರ ಪ್ರದೇಶ ಸರ್ಕಾರ ಕೂಡ ಸಿದ್ಧತೆ ನಡೆಸಿದೆ. ಅಪರಾಧಿಗಳನ್ನು ಗಲ್ಲಿಗೇರಿಸುವ ಕೆಲಸವನ್ನು ಪೊಲೀಸ್ ಇಲಾಖೆ ಪವನ್ ಜಲ್ಲಾದ್ ಗೆ ಒಪ್ಪಿಸಿದೆ.

  • ಕ್ರಿಕೆಟ್ ಆಡುವಾಗ ಹೊಟ್ಟೆ, ಎದೆಗೆ ಚಾಕು ಇರಿದು ಕೊಲೆ – 12 ಮಂದಿಗೆ ಜೀವಾವಧಿ ಶಿಕ್ಷೆ

    ಕ್ರಿಕೆಟ್ ಆಡುವಾಗ ಹೊಟ್ಟೆ, ಎದೆಗೆ ಚಾಕು ಇರಿದು ಕೊಲೆ – 12 ಮಂದಿಗೆ ಜೀವಾವಧಿ ಶಿಕ್ಷೆ

    ಹುಬ್ಬಳ್ಳಿ: ಆರು ವರ್ಷದ ಹಿಂದೆ ಕ್ರಿಕೆಟ್ ಆಟದ ಸಂದರ್ಭದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ 12 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 6.65 ಲಕ್ಷ ರೂಪಾಯಿ ದಂಡ ವಿಧಿಸಿ ಹುಬ್ಬಳ್ಳಿಯ 5ನೇ ಹೆಚ್ಚುವರಿ ಜಿಲ್ಲಾ ಸ್ಪೇಷನ್ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.

    ಹುಬ್ಬಳ್ಳಿಯ ನಿವಾಸಿಗಳಾದ ಕಲ್ಲಪ್ಪ ಶಿರಕೋಳ, ಸಿದ್ಧಾರೂಡ ಶಿರಕೋಳ, ಅಯ್ಯಪ್ಪ ಶಿರಕೋಳ, ನಿಂಗಪ್ಪ ಶಿಂಧೆ, ಅಯ್ಯಪ್ಪ ಲಕ್ಕುಂಡಿ, ಮಂಜುನಾಥ್ ಉಪ್ಪಾರ, ಶ್ರೀಪಾದ ಪೂಜಾರಿ, ವಿಶಾಲ್ ಜಾಧವ್, ಅಜಯ್ ಗುತ್ತಲ, ಮಂಜುನಾಥ್ ಗೋಕಾಕ್, ಸಂತೋಷ್ ಸುನಾಯಿ, ಅನಿಲ್ ಸಾವಂತ ಈ 12 ಮಂದಿ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಗಳಾಗಿದ್ದಾರೆ.

    ಏನಿದು ಪ್ರಕರಣ?
    2013ರ ಜೂನ್ 16ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಕ್ರಿಕೆಟ್ ಆಡುವ ವೇಳೆ ಯಲ್ಲಾಪುರ ಓಣಿಯ ನಜೀರ್ ಮುದಗಲ್ ಜೊತೆ ಅಪರಾಧಿಗಳು ಜಗಳ ತೆಗೆದು ಹಲ್ಲೆ ನಡೆಸಿದ್ದರು. ನಂತರ ಚಿಟಗುಪ್ಪಿ ವೃತ್ತದಲ್ಲಿ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಚಾಕು ಇರಿದು ಕೊಲೆಗೆ ಯತ್ನಿಸಿದ್ದರು. ಘಟನೆಯ ವೇಳೆ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ನಜೀರ್, ಚಿಕಿತ್ಸೆ ಫಲಕಾರಿಯಾಗಿದೇ ಮೃತಪಟ್ಟಿದ್ದನು. ಈ ಕೊಲೆ ಪ್ರಕರಣದ ಬಗ್ಗೆ ಹುಬ್ಬಳ್ಳಿಯ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಈ ಘಟನೆಯ ಕುರಿತು ಸುದೀರ್ಘ ವಿಚಾರಣೆ ವಾದ-ವಿವಾದ ಆಲಿಸಿದ್ದ ನ್ಯಾಯಾಲಯ ಡಿಸೆಂಬರ್ 23ರಂದು ಅಂತಿಮ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು. ನ್ಯಾಯಾಧೀಶರಾದ ಕೆ.ಎನ್ ಗಂಗಾಧರ್ ಅವರು ಇದೀಗ ಆರೋಪಿಗಳನ್ನು ಅಪರಾಧಿಗಳೆಂದು ಘೋಷಣೆ ಮಾಡಿ, ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

  • ಕೊನೆಗೂ ಸಿಕ್ಕಿದ್ರು ನಿರ್ಭಯ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ವ್ಯಕ್ತಿ

    ಕೊನೆಗೂ ಸಿಕ್ಕಿದ್ರು ನಿರ್ಭಯ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ವ್ಯಕ್ತಿ

    ನವದೆಹಲಿ: ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಹಂತಕರನ್ನು ಗಲ್ಲಿಗೇರಿಸಲು ತಿಹಾರ್ ಜೈಲಿನಲ್ಲಿ ಪೂರ್ವತಯಾರಿ ನಡೆಯುತ್ತಿದ್ದು, ಕಾಮುಕರನ್ನು ಗಲ್ಲಿಗೇರಿಸುವ ವ್ಯಕ್ತಿಗಾಗಿ ಜೈಲಿನ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದರು. ಕೊನೆಗೂ ಕಾಮುಕರ ಹುಟ್ಟಡಗಿಸಲು ಉತ್ತರ ಪ್ರದೇಶದ ಮೀರತ್ ಜೈಲಿನಿಂದ ಹ್ಯಾಂಗ್‍ಮ್ಯಾನ್ ಬರಲಿದ್ದಾರೆ.

    ಈಗಾಗಲೇ ನಿರ್ಭಯ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಲು ಅಗತ್ಯವಾಗಿರುವ ನೇಣು ಕುಣಿಕೆಯನ್ನು ತಯಾರಿಸುವಂತೆ ಬಿಹಾರದ ಬಕ್ಸರ್ ಜೈಲು ಅಧಿಕಾರಿಗಳಿಗೆ ತಿಹಾರ್ ಜೈಲಿನ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೆ ತಿಹಾರ್ ಜೈಲಿನಲ್ಲಿ ಯಾವುದೇ ಹ್ಯಾಂಗ್‍ಮ್ಯಾನ್ ಇರದ ಹಿನ್ನೆಲೆ ಸೋಮವಾರ ಈ ಕೆಲಸಕ್ಕಾಗಿ ಸಿಬ್ಬಂದಿ ಬೇಕು ಎಂದು ಅಧಿಕಾರಿಗಳು ದೇಶದ ಹಲವು ಜೈಲುಗಳ ಮೊರೆಹೋಗಿದ್ದರು.

    ಈ ವೇಳೆ ಮೀರತ್ ಜೈಲಿನಲ್ಲಿ ಇಬ್ಬರು ಹ್ಯಾಂಗ್‍ಮೆನ್ ಇರುವ ಬಗ್ಗೆ ತಿಹಾರ್ ಜೈಲಿನ ಅಧಿಕಾರಿಗಳಿಗೆ ತಿಳಿದಿದ್ದು, ಬುಧವಾರ ಮೀರತ್ ಜೈಲಿಗೆ ಪತ್ರ ಬರೆದು ಓರ್ವ ಹ್ಯಾಂಗ್‍ಮ್ಯಾನ್‍ನನ್ನು ತಿಹಾರ್ ಜೈಲಿಗೆ ಕಳುಹಿಸಿಕೊಡಿ ಎಂದು ಮನವಿ ಮಾಡಲಾಗಿತ್ತು. ಆದರೆ ಯಾರನ್ನು? ಯಾವಾಗ ಗಲ್ಲಿಗೇರಿಸಲಾಗುತ್ತಿದೆ ಎಂಬ ಬಗ್ಗೆ ಪತ್ರದಲ್ಲಿ ತಿಳಿಸಿರಲಿಲ್ಲ. ಅದರ ಬದಲಿಗೆ ಕೆಲವು ಅಪರಾಧಿಗಳಿಗೆ ಗಲ್ಲಿಗೇರಿಸಬೇಕಿದೆ, ಎಲ್ಲಾ ಕಾನೂನು ಪ್ರಕಿಯೆ ಮುಗಿದಿದೆ ಎಂದು ಉಲ್ಲೇಖಿಸಲಾಗಿತ್ತು.

    ಈ ಮನವಿ ಮೇರೆಗೆ ಮೀರತ್ ಜೈಲಿನ ಹ್ಯಾಂಗ್‍ಮ್ಯಾನ್ ಪವನ್ ಕುಮಾರ್ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗುತ್ತಿದೆ. ಇವರು ನಿರ್ಭಯ ಪ್ರಕರಣದ ಅಪರಾಧಿಗಳನ್ನು ಸದ್ಯದಲ್ಲೇ ಗಲ್ಲಿಗೇರಿಸಲಿದ್ದಾರೆ.

    ತಿಹಾರ್ ಜೈಲಿನ ಅಧಿಕಾರಿಗಳು ಹ್ಯಾಂಗ್‍ಮ್ಯಾನ್‍ಗಾಗಿ ಹುಡುಕಾಟ ನಡೆದಿಸುತ್ತಿದ್ದ ವೇಳೆ ತಮಿಳುನಾಡಿನ ರಾಮನಾಥಪುರಂನ ಹೆಡ್ ಕಾನ್‍ಸ್ಟೇಬಲ್ ಎಸ್. ಸುಭಾಷ್ ಶ್ರೀನಿವಾಸನ್(42) ಸ್ವಯಂಪ್ರೇರಿತರಾಗಿ ಈ ಕಾರ್ಯವನ್ನು ನಡೆಸಲು ಮುಂದೆ ಬಂದಿದ್ದರು.

    ಈ ಬಗ್ಗೆ ತಿಹಾರ್ ಜೈಲಿಗೆ ಪತ್ರ ಬರೆದಿದ್ದ ಸುಭಾಷ್ ಅವರು, ನೀವು ನನಗೆ ಈ ಕಾರ್ಯ ನಿರ್ವಹಿಸಲು ಯಾವುದೇ ಸಂಬಳವನ್ನು ನೀಡಬೇಡಿ, ನೀವು ನನಗೆ ಈ ಅಪರಾಧಿಗಳನ್ನು ಗಲ್ಲಿಗೇರಿಸಲು ಅವಕಾಶ ಕೊಡಿ ಅಷ್ಟೇ ಸಾಕು ಎಂದು ತಿಳಿಸಿದ್ದರು.

    ಈ ಹಿಂದೆ 2015ರಲ್ಲಿ ಪವನ್ ಕುಮಾರ್ ಅವರು ಭಾರೀ ಸುದ್ದಿಯಾಗಿದ್ದರು. ಗಲ್ಲಿಗೇರಿಸುವ ಕೆಲಸಕ್ಕೆ ಅವರಿಗೆ ಸರಿಯಾಗಿ ಸಂಬಳ ನೀಡುತ್ತಿರಲಿಲ್ಲ. ಹೀಗಾಗಿ ಹಣಕ್ಕಾಗಿ ಅವರು ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಅಲೆದು ಬೇಸತ್ತು ಹೋಗಿದ್ದರು. ತಿಂಗಳ ಸಂಬಳ ಮಾತ್ರವಲ್ಲ ಅಪರಾಧಿಗಳನ್ನು ಗಲ್ಲಿಗೇರಿಸಿದರೆ 3 ಸಾವಿರ ರೂ. ನನಗೆ ನೀಡಬೇಕು. ಆದರೆ ಯಾವ ಹಣವು ನನಗೆ ಸಿಗುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದರು.

    ಪವನ್ ಕುಮಾರ್ ಅವರು ಭಾರತದಲ್ಲಿರುವ ಕೆಲವೇ ಕೆಲವು ಅಧಿಕೃತ ನೊಂದಾಯಿತ ವೃತ್ತಿಪರ ಹ್ಯಾಂಗ್‍ಮ್ಯಾನ್‍ಗಳಲ್ಲಿ ಒಬ್ಬರು. ಈ ಹಿಂದೆ ಅವರು ಮೀರತ್ ಜೈಲಿನಲ್ಲಿ ನಿಥಾರಿ ಸಿರಿಯಲ್ ಕಿಲ್ಲರ್ ಸುರೇಂದ್ರ ಕೋಲಿಯನ್ನು ಗಲ್ಲಿಗೇರಿಸಿದ್ದರು.

  • 22 ವರ್ಷದ ಹಳೆಯ ಶೂಟೌಟ್ ಪ್ರಕರಣ – ಬಿಜೆಪಿ ಶಾಸಕನಿಗೆ ಜೀವಾವಧಿ ಶಿಕ್ಷೆ

    22 ವರ್ಷದ ಹಳೆಯ ಶೂಟೌಟ್ ಪ್ರಕರಣ – ಬಿಜೆಪಿ ಶಾಸಕನಿಗೆ ಜೀವಾವಧಿ ಶಿಕ್ಷೆ

    ಅಲಹಾಬಾದ್: 22 ವರ್ಷ ಹಿಂದೆ ನಡೆದಿದ್ದ ಸಾಮೂಹಿಕ ಹತ್ಯೆ ಪ್ರಕರಣಕ್ಕೆ ಶುಕ್ರವಾರದಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಬಿಜೆಪಿ ಶಾಸಕ ಸೇರಿ ಒಟ್ಟು 9 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

    ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಅಶೋಕ್ ಸಿಂಗ್ ಚಂದೇಲ್ ಮೇಲಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ ಶಿಕ್ಷೆ ವಿಧಿಸಿದೆ.

    1997 ಜನವರಿ 26ರಂದು ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಶೂಟೌಟ್ ನಡೆದಿತ್ತು. ಬಿಜೆಪಿ ನಾಯಕರಾದ ರಾಜೀವ್ ಶುಕ್ಲಾ ಮತ್ತು ಅವರ ಇಬ್ಬರು ಸಹೋದರರಾದ ರಾಕೇಶ್ ಮತ್ತು ರಾಜೇಶ್, 9 ವರ್ಷದ ಸಹೋದರಿಯ ಮಗು ಅಂಬುಜ್, ವೇದ್ ನಾಯಕ್ ಮತ್ತು ಶ್ರೀಕಾಂತ್ ಪಾಂಡೆ ಅವರ ಹತ್ಯೆ ನಡೆದಿತ್ತು. ಇಬ್ಬರು ಮಕ್ಕಳು ಸೇರಿದಂತೆ ಐವರು ರಾಜಕೀಯ ದ್ವೇಷಕ್ಕೆ ಬಲಿಯಾಗಿದ್ದರು.

    ಈ ಐದು ಮಂದಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಬಿಜೆಪಿ ಹಾಲಿ ಎಂಎಲ್‍ಎ ಅಶೋಕ್ ಚಂದೇಲ್ ಸೇರಿದಂತೆ 10 ಮಂದಿ ಭಾಗಿಯಾಗಿದ್ದರು ಎಂದು ಆರೋಪ ಕೇಳಿಬಂದಿತ್ತು. ಆದರೆ 22 ವರ್ಷಗಳ ಕಾಲ ವಿವಿಧ ನ್ಯಾಯಲಯಗಳಲ್ಲಿ ಸುದೀರ್ಘ ವಿಚಾರಣೆ ನಡೆದ ಬಳಿಕ ಶುಕ್ರವಾರ ತೀರ್ಪು ಹೊರಬಿದ್ದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಶೋಕ್ ಚಂದೇಲ್, ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಗೌರವಿಸುತ್ತೇನೆ. ನ್ಯಾಯಕ್ಕಾಗಿ ಹೋರಾಡುತ್ತೇನೆ. ನಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ.

    ಮಾಜಿ ಸಂಸದ ಚಂದೇಲ್ ಹಮೀರ್‌ಪುರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಇವರು 1989ರಲ್ಲಿ ಸ್ವತಂತ್ರ ಶಾಸಕರಾಗಿ ರಾಜಕೀಯಕ್ಕೆ ಪ್ರವೇಶಿಸಿದ್ದರು. 1999 ರಲ್ಲಿ ಬಿಎಸ್‍ಪಿ  ಟಿಕೆಟ್ ನಲ್ಲಿ ಹಮೀರ್‌ಪುರದ ಎಂಪಿ ಆಗಿದ್ದರು. ಪ್ರಸ್ತುತ ಅವರು ಬಿಜೆಪಿ ಪಕ್ಷದಿಂದ ಶಾಸಕರಾಗಿದ್ದಾರೆ.