Tag: ಅಪರಾಧಿಗಳು

  • ಯೋಗಿ 2.0 ಆಡಳಿತ: 2 ಎನ್‍ಕೌಂಟರ್ – ಪರಾರಿಯಾಗಿದ್ದ 50ಕ್ಕೂ ಹೆಚ್ಚು ಅಪರಾಧಿಗಳು ಶರಣು

    ಯೋಗಿ 2.0 ಆಡಳಿತ: 2 ಎನ್‍ಕೌಂಟರ್ – ಪರಾರಿಯಾಗಿದ್ದ 50ಕ್ಕೂ ಹೆಚ್ಚು ಅಪರಾಧಿಗಳು ಶರಣು

    ಲಕ್ನೋ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ 2ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೇ ತಡ, ರಾಜ್ಯದಲ್ಲಿ 50 ಕ್ಕೂ ಹೆಚ್ಚು ಅಪರಾಧಿಗಳು ಪೊಲೀಸರಿಗೆ ಶರಣಾಗಿದ್ದಾರೆ ಅಂತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

    ಇಬ್ಬರು ಅಪರಾಧಿಗಳನ್ನು ಎನ್‍ಕೌಂಟರ್ ಮಾಡಿ ಹತ್ಯೆ ಮಾಡಲಾಗಿದೆ. ಹಲವು ಅಪರಾಧಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: 89 ಜನರಿಗೆ ಕೊರೊನಾ, 85 ಜನ ಡಿಸ್ಚಾರ್ಜ್ – 4 ಸಾವು

    ತಲೆಮರೆಸಿಕೊಂಡಿದ್ದ ಅನೇಕ ಕ್ರಿಮಿನಲ್‍ಗಳು ನಾನು ಶರಣಾಗುತ್ತಿದ್ದೇನೆ. ದಯವಿಟ್ಟು ನನ್ನನ್ನು ಶೂಟ್ ಮಾಡಬೇಡಿ ಎಂಬ ಸಂದೇಶಗಳಿರುವ ಫಲಕಗಳನ್ನು ಕುತ್ತಿಗೆಗೆ ನೇತುಹಾಕಿಕೊಂಡು ಪೊಲೀಸ್ ಠಾಣೆಗೆ ಹಿಂತಿರುಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

    ಕಳೆದ ವಾರ ರೈಲ್ವೆ ನಿಲ್ದಾಣದ ಬಳಿಯ ಶೌಚಾಲಯದಲ್ಲಿ ಮಹಿಳೆಯ ಮೇಲೆ ಆರೋಪಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿ ಪತ್ತೆ ಕಾರ್ಯ ಕಷ್ಟವಾಗಿತ್ತು. ಹೀಗಾಗಿ ಆರೋಪಿಯ ಮನೆ ಮುಂದೆ ಬುಲ್ಡೋಜರ್ ನಿಲ್ಲಿಸಲಾಗಿತ್ತು. 24 ಗಂಟೆಯ ಒಳಗಡೆ ಶರಣಾಗದೇ ಇದ್ದರೆ ಮನೆಯನ್ನು ಕೆಡವಲಾಗುತ್ತದೆ ಎಂದು ಸಂದೇಶವನ್ನು ಅಧಿಕಾರಿಗಳು ರವಾನೆ ಮಾಡಿದ್ದರು. ಈ ವಿಚಾರ ತಿಳಿದಿದ್ದೇ ತಡ ಆರೋಪಿ ಠಾಣೆಗೆ ಬಂದು ಶರಣಾಗಿದ್ದ.

     

    ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಏರಿದ ಯೋಗಿ ಆದಿತ್ಯನಾಥ್ ಸರ್ಕಾರ ಅಕ್ರಮ ಕಟ್ಟಡಗಳೆಂದು ಬಹಳಷ್ಟು ಕಟ್ಟಡಗಳನ್ನು ಕೆಡವಿ ಹಾಕಿತ್ತು. ಯೋಗಿ ಈ ತೆರವು ಕ್ರಮಗಳನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟೀಕಿಸಿ ಬುಲ್ಡೋಜರ್ ಬಾಬಾ ಎಂದು ವ್ಯಂಗ್ಯವಾಡಿದ್ದರು. ಇದನ್ನೂ ಓದಿ: ವುಹಾನ್‌ ನಂತರ ಚೀನಾದಲ್ಲಿ ಅತಿದೊಡ್ಡ ಲಾಕ್‌ಡೌನ್: 2.6 ಕೋಟಿ ಜನ ಮನೆಯಲ್ಲೇ ಲಾಕ್

    ಯೋಗಿ ಆದಿತ್ಯನಾಥ್ ಬುಲ್ಡೋಜರ್ ಅನ್ನು ಅಭಿವೃದ್ಧಿ ಹಾಗೂ ಶಕ್ತಿಯ ಸಂಕೇತ ಎಂದು ಬಿಂಬಿಸಿದ್ದರು. ಬಿಜೆಪಿ ತನ್ನ ಚುನಾವಣಾ ಪ್ರಚಾರದಲ್ಲಿ ಅನಧಿಕೃತ, ಅಕ್ರಮ ಕಟ್ಟಡಗಳನ್ನು ಕೆಡವುವ ಮೂಲಕ ಭೂಮಾಫಿಯಾಗೆ ಬಿಸಿ ಮುಟ್ಟಿಸುವ ಹಾಗೂ ಎಕ್ಸ್‌ಪ್ರೆಸ್ ಹೈವೇಗಳನ್ನು ಕಟ್ಟುವ ಸಾಧನವಾಗಿ ಅದನ್ನು ಬಿಂಬಿಸಿತ್ತು.

     

  • ಕೊರೊನಾದಿಂದ ಕೈದಿಗಳಿಗೆ ಸಿಕ್ತು ಗುಡ್‍ನ್ಯೂಸ್- 17 ಸಾವಿರ ಮಂದಿಗೆ ತಾತ್ಕಾಲಿಕ ಬಿಡುಗಡೆ?

    ಕೊರೊನಾದಿಂದ ಕೈದಿಗಳಿಗೆ ಸಿಕ್ತು ಗುಡ್‍ನ್ಯೂಸ್- 17 ಸಾವಿರ ಮಂದಿಗೆ ತಾತ್ಕಾಲಿಕ ಬಿಡುಗಡೆ?

    ನವದೆಹಲಿ: ಮಹಾರಾಷ್ಟ್ರದ ಜೈಲುಗಳಲ್ಲಿರುವ 35,539 ಕೈದಿಗಳ ಪೈಕಿ ಶೇ.50 ಅಂದ್ರೆ 17,000 ಕೈದಿಗಳನ್ನು ಬಿಡುಗಡೆ ಮಾಡಲು ಉನ್ನತ ಮಟ್ಟದ ಸಮಿತಿ ಇಂದು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದೆ.

    ಮಹಾರಾಷ್ಟ್ರದ ‘ಆರ್ಥರ್ ರೋಡ್’ನಲ್ಲಿರುವ ಜೈಲಿನಲ್ಲಿ 185 ಮಂದಿ ಕೈದಿಗಳಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಮುಂಬೈನಲ್ಲಿರುವ ಬೈಕುಲ್ಲಾ ಮಹಿಳಾ ಕಾರಾಗೃಹದಲ್ಲಿ ಮಹಿಳಾ ಕೈದಿಗಳಲ್ಲಿ ಸೋಂಕು ಕಾಣಿಸಿಕೊಳುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕೈದಿಗಳನ್ನು ಬಿಡುಗಡೆ ಮಾಡಲು ಸೂಚಿಸಲಾಗಿದೆ.

    ಹೈಕೋರ್ಟ್ ನ್ಯಾಯಮೂರ್ತಿ ಅಮ್ಜದ್ ಸಯೀದ್ ನೇತೃತ್ವದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಸಂಜಯ್ ಚಹಂಡೆ ಮತ್ತು ಮಹಾರಾಷ್ಟ್ರದ ಕಾರಾಗೃಹಗಳ ಮಹಾನಿರ್ದೇಶಕ ಎಸ್.ಎನ್.ಸಮ್ಮುಖದಲ್ಲಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗಿತ್ತು.

    ಸೋಂಕು ಹತೋಟಿಗೆ ತರುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಅನಿವಾರ್ಯವಾಗಿದ್ದು, ಸಣ್ಣ ಪುಟ್ಟ ಅಪರಾಧಗಳು ಹಾಗೂ ವಿಚಾರಣಾಧೀನ ಕೈದಿಗಳನ್ನು ಪರೋಲ್ ಅಥವಾ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡುವ ಬಗ್ಗೆ ಸಲಹೆ ನೀಡಿತ್ತು. ಹೀಗಾಗಿ ಕೈದಿಗಳು ವಕೀಲರ ಮೂಲಕ ಜಾಮೀನು ಪಡೆದು ಬಿಡುಗಡೆಯಾಗಲು ಅವಕಾಶ ಕಲ್ಪಿಸಲಾಗಿದೆ.

    ಮಹಾರಾಷ್ಟ್ರ ರಾಜ್ಯ ಸರ್ಕಾರ ಬೆಳಗ್ಗೆ ನೀಡಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ 23,401 ಜನರಿಗೆ ಸೋಂಕು ಪತ್ತೆಯಾಗಿದ್ದು, ಈ ಪೈಕಿ 4,786 ಜನರು ಮಾತ್ರ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜೊತೆಗೆ ಈವರೆಗೂ ಡೆಡ್ಲಿ ಕೊರೊನಾಗೆ 868 ಜನರು ಬಲಿಯಾಗಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಸೋಂಕಿತರು ಮಹಾರಾಷ್ಟ್ರದಲ್ಲೇ ಇದ್ದಾರೆ.

  • ನಿರ್ಭಯಾ ದೋಷಿಗಳನ್ನ ಕೈಯಾರ ಗಲ್ಲಿಗೇರಿಸಿದ್ದು ಖುಷಿ ತಂದಿದೆ: ಪವನ್ ಜಲ್ಲಾದ್

    ನಿರ್ಭಯಾ ದೋಷಿಗಳನ್ನ ಕೈಯಾರ ಗಲ್ಲಿಗೇರಿಸಿದ್ದು ಖುಷಿ ತಂದಿದೆ: ಪವನ್ ಜಲ್ಲಾದ್

    – ಅಪರಾಧಿಗಳನ್ನು ಗಲ್ಲಿಗೇರಿಸಿದ್ದನ್ನು ವಿವರಿಸಿದ ಪವನ್
    – ನನ್ನ ಮಕ್ಕಳು ಗಲ್ಲಿಗೇರಿಸುವ ವೃತ್ತಿಗೆ ಬರುವುದು ನನಗಿಷ್ಟವಿಲ್ಲ

    ಲಕ್ನೋ: ನಾನು ನನ್ನ ಧರ್ಮವನ್ನು ಪಾಲಿಸಿದ್ದೇನೆ. ಇದು ನಮ್ಮ ಪೂರ್ವಜರ ಕೆಲಸ. ಅಪರಾಧಿಗಳನ್ನು ನೇಣಿಗೆ ಹಾಕುವ ಮುನ್ನ ಪಶ್ಚಾತ್ತಾಪ ಪಡಬೇಕಿತ್ತು. ಆದರೆ ಹಾಗೆ ಮಾಡಲಿಲ್ಲ ಎಂದು ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಿದ ಪವನ್ ಜಲ್ಲಾದ್ ಹೇಳಿದ್ದಾರೆ.

    ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಿರ್ಭಯಾ ಪ್ರಕರಣದ ನಾಲ್ವರು ಆರೋಪಿಗಳನ್ನು ಶುಕ್ರವಾರ ಬೆಳಗ್ಗೆ 5:30ಕ್ಕೆ ಗಲ್ಲಿಗೇರಿಸಲಾಯಿತು. ನೇಣು ಹಾಕುವ ಮನೆಯಲ್ಲಿ ಮಾತನಾಡಲು ಯಾರಿಗೂ ಅವಕಾಶವಿಲ್ಲ. ಆದ್ದರಿಂದ ಕೆಲಸವು ಸನ್ನೆಗಳ ಮೂಲಕ ಮಾತ್ರ ನಡೆಯಿತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: “ನಾಲ್ವರಲ್ಲಿ ಕೊನೆಯಾಸೆ ಹೇಳಿದ್ದು ವಿನಯ್ ಮಾತ್ರ”

    ನಾನು ಮಾರ್ಚ್ 17ರಂದು ತಿಹಾರ್ ಜೈಲಿಗೆ ಹೋಗಿದ್ದೆ. ಬಳಿಕ ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧತೆ ನಡೆಸಲಾಯಿತು. ಗುರುವಾರ ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ನೇಣುಗಳನ್ನು ಸರಿಪಡಿಸಲಾಗಿತ್ತು. ಬಳಿಕ ಅಪರಾಧಿಗಳನ್ನು ಅಲ್ಲಿಗೆ ತಂದು ನಿಲ್ಲಿಸಲಾಗಿತ್ತು. ಮೊದಲು ಅಕ್ಷಯ್ ಮತ್ತು ಮುಖೇಶ್, ನಂತರ ಪವನ್ ಹಾಗೂ ವಿನಯ್‍ನನ್ನು ಹಲಗೆಯ ಮೇಲೆ ಕರೆದೊಯ್ಯಲಾಗಿತ್ತು. ಬಳಿಕ ಅಧಿಕಾರಿಗಳು ಸನ್ನೆಯ ಮೂಲಕ ಆಜ್ಞೆ ನೀಡಿದಾಗ ನೇಣು ಹಾಕಲಾಯಿತು ಎಂದು ಪವನ್ ಜಲ್ಲಾದ್ ವಿವರಿಸಿದ್ದಾರೆ.

    ನನ್ನ ಮಟ್ಟಿಗೆ, ಅಪರಾಧಿಗಳನ್ನು ನೇಣಿಗೆ ಹಾಕುವುದು ಸಮಾಜದಿಂದ ಕೆಟ್ಟ ಜನರನ್ನು ತೆಗೆದುಹಾಕುವ ದೊಡ್ಡ ವೃತ್ತಿಯಾಗಿದೆ. ನಾನು ಕೂಡ ಓರ್ವ ಮಗಳ ತಂದೆ. ಆದ್ದರಿಂದ ಯುವತಿಯ ಮೇಲೆ ಅತ್ಯಾಚಾರಿ ಎಸಗಿ, ಕೊಲೆಗೈದವರನ್ನು ಗಲ್ಲಿಗೇರಿಸಿದ್ದು ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಿರ್ಭಯಾ ಪ್ರಕರಣದ ಅಪರಾಧಿಗಳು ಸಿಕ್ಕಿಬಿದ್ದಿದ್ದು ಹೇಗೆ?

    ಗಲ್ಲು ಶಿಕ್ಷೆ ಅಪರಾಧಿಗಳಿಗೆ ನೇಣು ಹಾಕುವ ಕೆಲಸವನ್ನು ಮಾಡುತ್ತಿರುವ ಪವನ್ ಜಲ್ಲಾದ್ ಅವರ ಕುಟುಂಬದಲ್ಲಿ ಮೂರನೇ ವ್ಯಕ್ತಿ. ಈ ಕುರಿತು ಮಾತನಾಡಿದ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹತ್ಯೆಗೈದಿದ್ದವರಿಗೆ ನಮ್ಮ ಅಜ್ಜ ನೇಣು ಹಾಕಿದ್ದರು. ಅವರು ಕೊನೆಯದಾಗಿ ಅಪರಾಧಿಯೊಬ್ಬನನ್ನು 1989ರ ಜನವರಿಯಲ್ಲಿ ಗಲ್ಲಿಗೇರಿಸಿದ್ದರು. ಬಳಿಕ ನಮ್ಮ ತಂದೆ ಮಮ್ಮು ಜುಲ್ಲಾದ್ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಅಫ್ಜಲ್‍ಗೆ ನೇಣುಹಾಕಲು ಉತ್ಸುಕರಾಗಿದ್ದರು. ಆದರೆ ದುರದೃಷ್ಟವಶಾತ್ ಅಫ್ಜಲ್ ಮರಣದಂಡನೆಗೂ ಒಂಬತ್ತು ತಿಂಗಳ ಮೊದಲು ಅವರು ಫೆಬ್ರವರಿ 2013ರಲ್ಲಿ ನಿಧನರಾಗಿದ್ದರು. ನನ್ನ ತಂದೆ ತಮ್ಮ 47 ವರ್ಷಗಳ ಸೇವೆಯಲ್ಲಿ 12 ಕೈದಿಗಳನ್ನು ಗಲ್ಲಿಗೇರಿಸಿದ್ದಾರೆ ಎಂದು ತಿಳಿಸಿದ್ದಾರೆ.

    ‘ಭಾರತದಲ್ಲಿ ನೇಣು ಹಾಕುವ ವ್ಯಕ್ತಿಗಳಲ್ಲಿ ಹೆಚ್ಚಿನವರು ತಲಾತಲಾಂತದಿಂದ ಬಂದವರಾಗಿದ್ದಾರೆ. ಆದರೆ ನನ್ನ ಮಕ್ಕಳು ನನ್ನ ಹೆಜ್ಜೆಗಳನ್ನು ಅನುಸರಿಸಬೇಕೆಂದು ನಾನು ಬಯಸುವುದಿಲ್ಲ ಎಂದು ಪವನ್ ಜಲ್ಲಾದ್ ಹೇಳಿದ್ದಾರೆ. ಇದನ್ನೂ ಓದಿ: ನನ್ನ ಮಗನನ್ನು ಜೈಲಿನಲ್ಲಿಯೇ ಸುರಕ್ಷಿತವಾಗಿ ನೋಡಿಕೊಳ್ಳಿ: ವೈರಲ್ ಆಯ್ತು ಅಪರಾಧಿ ತಾಯಿಯ ವಿಡಿಯೋ

  • ನಿರ್ಭಯಾ ಪ್ರಕರಣದ ಅಪರಾಧಿಗಳು ಸಿಕ್ಕಿಬಿದ್ದಿದ್ದು ಹೇಗೆ?

    ನಿರ್ಭಯಾ ಪ್ರಕರಣದ ಅಪರಾಧಿಗಳು ಸಿಕ್ಕಿಬಿದ್ದಿದ್ದು ಹೇಗೆ?

    ನವದೆಹಲಿ: ನಿರ್ಭಯಾಳನ್ನು ಅತ್ಯಾಚಾರಿಗಳು ಎಷ್ಟರ ಮಟ್ಟಿಗೆ ಕ್ರೌರ್ಯ ಮೆರೆದಿದ್ದರೆಂದರೆ, ಆಕೆಯ ಬಟ್ಟೆಗಳನ್ನು ಕಳಚಿ ಬಸ್ ಅನ್ನು ಸ್ವಚ್ಛಗೊಳಿಸಿದ್ದರು. ಆಗ ಬಟ್ಟೆ ಹರಿದು ಹೋಗಿತ್ತು. ಅಷ್ಟೇ ಅಲ್ಲದೆ ದೋಷಿಗಳು ಯುವತಿ ಮತ್ತು ಸ್ನೇಹಿತನ ಎಲ್ಲ ವಸ್ತುಗಳನ್ನು ಸಹ ಲೂಟಿ ಮಾಡಿದ್ದರು. ಕೆಲವು ವಸ್ತುಗಳು ಬಿಹಾರದ ಔರಂಗಾಬಾದ್‍ನಿಂದ ಮತ್ತು ಕೆಲವು ರಾಜಸ್ಥಾನದ ಕರೌಲಿ ಗ್ರಾಮದಲ್ಲಿ ಪೊಲೀಸರಿಗೆ ದೊರೆತಿದ್ದವು. ಜೊತೆಗೆ ದೆಹಲಿಯ ಕೊಳೆಗೇರಿಯಲ್ಲಿರುವ ರವಿದಾಸ್ ಶಿಬಿರದಿಂದ ಪೊಲೀಸರು ಅನೇಕ ವಿಷಯಗಳನ್ನು ವಶಪಡಿಸಿಕೊಂಡಿದ್ದರು.

    ಯಾರೋ ಫೋನ್ ಇಟ್ಟುಕೊಂಡ್ರೆ, ಯಾರೋ ಶೂ ತೆಗೆದುಕೊಂಡ್ರು:
    16 ಡಿಸೆಂಬರ್ 2012ರಂದು ಯುವತಿ ತನ್ನ ಸ್ನೇಹಿತನೊಂದಿ ರಾತ್ರಿ 9 ಗಂಟೆಗೆ ಬಸ್ ಹತ್ತಿದ ಕೂಡಲೇ ದುಷ್ಕರ್ಮಿಗಳು ಅವರನ್ನು ಸ್ನೇಹಿತರು ಅವಳನ್ನು ನಿಂದಿಸಲು ಪ್ರಾರಂಭಿಸಿದ್ದರು. ಎಲ್ಲಾ 6 ಅಪರಾಧಿಗಳು ಆ ರಾತ್ರಿ ಹೆಚ್ಚು ಮಾದಕ ವ್ಯಸನಿಯಾಗಿದ್ದರು. ಓರ್ವ ಯುವತಿಯ ಸ್ನೇಹಿತನ ಮೇಲೆ ಹಲ್ಲೆ ಮಾಡಿದ್ದ. ಮತ್ತೊಬ್ಬ ಯುವತಿಯನ್ನು ಹಿಡಿದ್ದ. ನಂತರ ಎಲ್ಲರೂ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅಷ್ಟೇ ಅಲ್ಲದೆ ಅಪರಾಧಿಗಳು ಅವರಿಂದ ಎಲ್ಲವನ್ನೂ ದೋಚಿದ್ದರು.

    ಹಣ, ಚಿನ್ನಾಭರಣ ಸೇರಿದಂತೆ ಅನೇಕ ವಸ್ತುಗಳನ್ನು ದೋಚಿದ್ದ ಕ್ರೂರಿಗಳು ಯುವತಿ ಹಾಗೂ ಸ್ನೇಹಿತನನ್ನು ಬಸ್ಸಿನಿಂದ ಕೆಳಕ್ಕೆ ಎಸೆದಿದ್ದರು. ನಂತರ ಎಲ್ಲಾ ವಸ್ತುಗಳನ್ನು ತಮ್ಮೊಳಗೆ ಹಂಚಿಕೊಂಡಿದ್ದರು. ಅಪರಾಧಿ ಅಕ್ಷಯ್ ಯುವತಿಯ ಸ್ನೇಹಿತನ ಬೆಳ್ಳಿ ಮತ್ತು ಚಿನ್ನದ ಉಂಗುರದೊಂದಿಗೆ ಬಿಹಾರಕ್ಕೆ ಹೋಗಿದ್ದ. ಮುಖೇಶ್ ಸಿಂಗ್ ಯುವಕನ ಸ್ಮಾರ್ಟ್ ಫೋನ್ ತೆಗೆದುಕೊಂಡು ರಾಜಸ್ಥಾನದ ಕರೌಲಿಯಲ್ಲಿರುವ ತನ್ನ ಹಳ್ಳಿಗೆ ತೆರಳಿದ್ದ. ಮುಖ್ಯ ಅಪರಾಧಿ ರಾಮ್ ಸಿಂಗ್ ಯುವತಿಯ ತಾಯಿಯ ಡೆಬಿಟ್ ಕಾರ್ಡ್ ಇಟ್ಟುಕೊಂಡಿದ್ದರೆ, ಅಪ್ರಾಪ್ತ ಅತ್ಯಾಚಾರಿ ಯುವತಿಯ ಬಳಿಯಿದ್ದ ಹಣವನ್ನು ಇಟ್ಟುಕೊಂಡಿದ್ದ. ಮತ್ತೊರ್ವ ಅಪರಾಧಿ ವಿನಯ್ ಶರ್ಮಾ ಯುವಕನ ಶೂ, ಯುವತಿಯ ನೋಕಿಯಾ ಮೊಬೈಲ್ ಫೋನ್ ಹಾಗೂ ಪವನ್ ಗುಪ್ತಾ ಯುವಕನ ಸೊನಾಟಾ ವಾಚ್ ಮತ್ತು 1,000 ರೂ. ಇಟ್ಟುಕೊಂಡಿದ್ದ.

    ಸಾಮೂಹಿಕ ಅತ್ಯಾಚಾರದ ಮೂರು ದಿನಗಳ ನಂತರ ಅಂದ್ರೆ 2012ರ ಡಿಸೆಂಬರ್ 19ರಂದು ಮಧ್ಯಾಹ್ನ 3:30 ಕ್ಕೆ ಯುವತಿಯ ಸ್ನೇಹಿತ ತನ್ನ ಹೇಳಿಕೆಯನ್ನು ದಾಖಲಿಸಿದ್ದ. ತನ್ನ ಹೇಳಿಕೆಯಲ್ಲಿ ಯುವಕ, ‘ಅಪರಾಧಿಗಳು ಆತನಿಂದ ಸ್ಯಾಮ್‍ಸಂಗ್ ಸ್ಮಾರ್ಟ್‍ಫೋನ್‍ಗಳು, 1000 ರೂ. ಇದ್ದ ವ್ಯಾಲೆಟ್, ಸಿಟಿಬ್ಯಾಂಕ್‍ನ ಕ್ರೆಡಿಟ್ ಕಾರ್ಡ್, ಐಸಿಐಸಿಐ ಬ್ಯಾಂಕಿನ ಡೆಬಿಟ್ ಕಾರ್ಡ್, ಕಂಪನಿ ಐಡಿ ಕಾರ್ಡ್, ದೆಹಲಿ ಮೆಟ್ರೊದ ಸ್ಮಾರ್ಟ್ ಕಾರ್ಡ್ ಅನ್ನು ಕಿತ್ತುಕೊಂಡಿದ್ದಾರೆ. ಇದರೊಂದಿಗೆ ಚಿನ್ನ ಮತ್ತು ಬೆಳ್ಳಿಯ ಉಂಗುರ, ಬಟ್ಟೆ ಮತ್ತು ಶೂಗಳನ್ನು ಸಹ ತೆಗೆದುಕೊಂಡು ಹೋಗಿದ್ದಾರೆ. ಸ್ನೇಹಿತೆಯ ನೋಕಿಯಾ ಮೊಬೈಲ್ ಮತ್ತು ಪರ್ಸ್ ಅನ್ನು ದುಷ್ಕರ್ಮಿಗಳು ಕಸಿದುಕೊಂಡಿದ್ದಾರೆ’ ಎಂದು ತಿಳಿಸಿದ್ದ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿ ಮೊಬೈಲ್ ಫೋನ್ ಟ್ರ್ಯಾಪ್ ಮಾಡಿದ್ದಾಗ ಅಪರಾಧಿಗಳು ಸಿಕ್ಕಿಬಿದ್ದಿದ್ದರು. ಬಳಿಕ ಅಪರಾಧಿಗಳಿಂದ ಯುವತಿ ಹಾಗೂ ಆಕೆಯ ಸ್ನೇಹಿತನಿಂದ ದೋಚಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

  • ಗಲ್ಲು ವಿಧಿಸುವ ಪ್ರಕ್ರಿಯೆ ಹೇಗಿತ್ತು? ಗಲ್ಲು ಶಿಕ್ಷೆಗೆ ಒಳಗಾದವರ್ಯಾರು?

    ಗಲ್ಲು ವಿಧಿಸುವ ಪ್ರಕ್ರಿಯೆ ಹೇಗಿತ್ತು? ಗಲ್ಲು ಶಿಕ್ಷೆಗೆ ಒಳಗಾದವರ್ಯಾರು?

    ನವದೆಹಲಿ: ನಿರ್ಭಯಾ ಹಂತಕರನ್ನು ಗಲ್ಲಿಗೇರಿಸುವ ಮೂಲಕ ಕೋಟ್ಯಂತರ ಜನರ ಅಭಿಲಾಶೆ ನೆರವೇರಿದೆ. ಸೂರ್ಯ ಹುಟ್ಟೋ ಮೊದಲೇ ಕೀಚಕರ ವಧೆಯಾಗಿದೆ. 7 ವರ್ಷಗಳ ಬಳಿಕ ನಿರ್ಭಯಾ ಹಂತಕರಿಗೆ ನೇಣು ಕುಣಿಕೆ ಬಿದ್ದಿದೆ. ಒಟ್ಟೊಟ್ಟಿಗೆ ಮಾಡಿದ ಪಾಪಕ್ಕೆ ನಾಲ್ವರು ಒಟ್ಟಿಗೆ ಶಿಕ್ಷೆ ಅನುಭವಿಸಿದ್ದಾರೆ.

    ಮೊದಲೇ ನಿಗದಿ ಆಗಿದ್ದಂತೆ ಮುಂಜಾನೆ 5.30ಕ್ಕೆ ಸರಿಯಾಗಿ ತಿಹಾರ್ ಜೈಲಿನಲ್ಲಿ ಪಾತಕಿಗಳಾದ ಪವನ್ ಗುಪ್ತಾ, ವಿನಯ್ ಶರ್ಮಾ, ಮುಖೇಶ್ ಸಿಂಗ್ ಹಾಗೂ ಅಕ್ಷಯ್ ಸಿಂಗ್‍ರನ್ನ ವದಾ ಸ್ಥಳಕ್ಕೆ ಕರೆತಂದು ಮುಖಕ್ಕೆ ಕಪ್ಪು ಬಟ್ಟೆ ಹಾಕಿ, ನೇಣುಗಂಬಕ್ಕೆ ಏರಿಸಲಾಯಿತು. ಕುರ್ತಾ-ಪೈಜಾಮ ಧಾರಿಯಾಗಿದ್ದ ಕೀಚಕರ ವಧೆಯಾಯ್ತು. ಬೆಳಗ್ಗೆ 6.00 ಗಂಟೆ ಸುಮಾರಿಗೆ ಪಾಪಿಗಳು ಸತ್ತಿರುವುದನ್ನು ಜೈಲಾಧಿಕಾರಿಗಳು ದೃಢಪಡಿಸಿದರು.

    ಸದ್ಯ ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಸಂಬಂಧಿಕರಿಗೆ ಮೃತದೇಹ ನೀಡುವುದು ಅನುಮಾನವಾಗಿದೆ. ಕಾನೂನು ಸುವ್ಯವಸ್ಥೆಯ ಸಲುವಾಗಿ ಸಾಮೂಹಿಕ ಅಂತ್ಯಕ್ರಿಯೆ ನಡೆಸುವ ಸಾಧ್ಯತೆಗಳಿವೆ.

    ಗಲ್ಲು ಶಿಕ್ಷೆಗೆ ಒಳಗಾದವರ್ಯಾರು?
    22 ವರ್ಷದ ಪವನ್ ಗುಪ್ತಾ ಬಸ್ ಕ್ಲೀನರ್ ಆಗಿದ್ದು, ಅರ್ಧಕ್ಕೆ ಶಾಲೆಯಿಂದ ಡ್ರಾಪ್‍ಔಟ್ ಆಗಿದ್ದನು. ಹಣ್ಣಿನ ವ್ಯಾಪಾರಿ ಹಾಗೂ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಬಿಕಾಂ ಪದವಿದರನಾದ ವಿನಯ್ ಶರ್ಮಾ(23) ಜಿಮ್ ಇನ್‍ಸ್ಟ್ರಕ್ಟರ್ ಆಗಿದ್ದನು. ಅಲ್ಲದೆ ಐಎಎಫ್ ಕ್ಲರ್ಕ್ ಪರೀಕ್ಷೆಗೆ ಕೋರ್ಟ್ ಅನುಮತಿ ಕೋರಿದ್ದನು. ಇನ್ನು ಮುಖೇಶ್ ಸಿಂಗ್(29) ನಿರುದ್ಯೋಗಿ ಆಗಿದ್ದು, ಆತನ ಸಹೋದರ ರಾಮ್‍ಸಿಂಗ್ ಬಸ್ ಚಾಲಕನಾಗಿದ್ದನು. ಆತ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದನು. ವಿವಾಹಿತನಾಗಿರುವ ಅಕ್ಷಯ್ ಸಿಂಗ್(31) ಬಸ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದನು.

    ಗಲ್ಲು ವಿಧಿಸುವ ದಿನ ಪ್ರಕ್ರಿಯೆ ಹೇಗಿರುತ್ತೆ?
    1. ಮರಣದಂಡನೆ ವಿಧಿಸುವ ದಿನ ಜೈಲು ಎಸ್‍ಪಿ, ಡಿಎಸ್‍ಪಿ ಕೈದಿ ಇರುವ ಸೆಲ್‍ಗೆ ಹೋಗಿ ಈತನೇ ಮರಣದಂಡನೆಗೆ ಗುರಿಯಾಗಿರುವ ಕೈದಿ ಎಂದು ಖಚಿತಪಡಿಸಿಕೊಳ್ಳಬೇಕು.
    2. ಕೈದಿ ಎದುರು ಮರಣದಂಡನೆ ಜಾರಿ ಆದೇಶ ಪ್ರತಿಯನ್ನು ಓದಬೇಕು.
    3. ಇದಾದ ತರುವಾಯ ಕೈದಿಯಿಂದ ದಾಖಲೆಗಳಿಗೆ ಸಹಿ ಪಡೆದುಕೊಳ್ಳಬೇಕು.
    4. ಕೈದಿಯ 2 ಕಾಲುಗಳನ್ನು ಕಬ್ಬಿಣದ ಸಂಕೋಲೆಯಿಂದ ಬಂಧಿಸಿದ್ದಲ್ಲಿ ಅದನ್ನು ತೆಗೆಯಬೇಕು.
    5. ಕೈದಿಯನ್ನು ಗಲ್ಲು ಪೀಠದ ಕಡೆಗೆ ಕರೆದೊಯ್ಯುವ ಹೊಣೆ ಡಿಎಸ್‍ಪಿಯದ್ದು.
    6. ಕೈದಿಗೆ ಜೈಲಿನ ಹೆಡ್ ವಾರ್ಡರ್ ಮತ್ತು ಆರು ಮಂದಿ ವಾರ್ಡರ್ ಕಾವಲು
    7. ವಾರ್ಡರ್ ಗಳಲ್ಲಿ ಇಬ್ಬರು ಕೈದಿಯ ಹಿಂಭಾಗದಲ್ಲೂ, ಇಬ್ಬರು ಮುಂಭಾಗದಲ್ಲೂ. ಉಳಿದಿಬ್ಬರು ಕೈದಿಯ ಎರಡೂ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡು ವಧಾಪೀಠದ ಬಳಿಗೆ ಕರೆದುಕೊಂಡು ಬರುತ್ತಾರೆ.
    8. ಕೈದಿಯನ್ನು ನಿಖರವಾಗಿ ನೇಣಿನ ಕೆಳಗೆ ನಿಲ್ಲಿಸುತ್ತಾರೆ.
    9. ಗಲ್ಲಿಗೂ ಮೊದಲು ಕೊನೆಯದಾಗಿ ಕೈದಿಗೆ ಮರಣದಂಡನೆ ಜಾರಿ ಆದೇಶವನ್ನು ಓದಿ ಹೇಳಲಾಗುತ್ತದೆ.
    10. ನಂತರ ಕೈದಿಯ ಎರಡೂ ಕಾಲುಗಳನ್ನು ಬಿಗಿಯಾಗಿ ಕಟ್ಟಿ ಆತನ ತಲೆಗೆ ಕಪ್ಪು ಬಣ್ಣದ ಬಟ್ಟೆ ಹಾಕಲಾಗುತ್ತದೆ.
    11. ಕೈದಿ ಕುತ್ತಿಗೆಗೆ ನೇಣು ಹಗ್ಗವನ್ನು ಇಳಿಸಲಾಗುತ್ತದೆ
    12. ಈ ನೇಣು ಹಗ್ಗ ಕುತ್ತಿಗೆಯ ಮಧ್ಯ ಭಾಗದ 1.5 ಇಂಚು ಎಡ ಅಥವಾ ಬಲ ಭಾಗಕ್ಕೆ ವಾಲಿರಬೇಕು.
    13. ಈ ಪ್ರಕ್ರಿಯೆ ಮುಗಿದ ಬಳಿಕ ಇಬ್ಬರೂ ವಾರ್ಡರ್ ಗಳು ಕೈದಿಯನ್ನು ವಧಾ ಸ್ಥಳದಲ್ಲಿ ಬಿಟ್ಟು ತೆರಳುತ್ತಾರೆ.
    14. ಎಸ್‍ಪಿ ಸಿಗ್ನಲ್ ಕೊಟ್ಟ ನಂತರ ವಧಾಕಾರ (ಹ್ಯಾಂಗ್ ಮ್ಯಾನ್) ಗಲ್ಲು ಬಿಗಿಗೊಳಿಸುತ್ತಾರೆ.
    15. ಗಲ್ಲು ಶಿಕ್ಷೆ ವಿಧಿಸಿದ 30 ನಿಮಿಷದವರೆಗೂ ದೇಹವನ್ನು ಮೇಲೆತ್ತುವಂತಿಲ್ಲ
    16. ಜೈಲಿನ ವೈದ್ಯಾಧಿಕಾರಿ ಪ್ರಾಣ ಹೋಗಿದೆಯೆಂದು ಧೃಡಪಡಿಸಿದ ನಂತರ ದೇಹ ಮೇಲಕ್ಕೆತ್ತಲಾಗುತ್ತದೆ
    17. ಕೈದಿಯ ಮೃತದೇಹವನ್ನು ಆತನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ.
    18. ಒಂದು ವೇಳೆ ಕೈದಿಯ ಕುಟುಂಬಸ್ಥರು ಶವವನ್ನು ತೆಗೆದುಕೊಳ್ಳದೇ ಇದ್ದಲ್ಲಿ ಆಗ ಜೈಲಿನಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ.

  • ಈಗ ಅಧಿಕೃತ, ನಿರ್ಭಯಾ ಅತ್ಯಾಚಾರಿಗಳಿಗೆ ನಾಳೆ ಗಲ್ಲು

    ಈಗ ಅಧಿಕೃತ, ನಿರ್ಭಯಾ ಅತ್ಯಾಚಾರಿಗಳಿಗೆ ನಾಳೆ ಗಲ್ಲು

    ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣ ನಾಲ್ವರು ಅಪರಾಧಿಗಳು ನೇಣು ಕುಣಿಕೆಗೇರುವುದು ಖಾಯಂ ಆಗಿದೆ. ಹಿಂದೆ ನೀಡಿದ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ದೆಹಲಿ ಪಟಿಯಾಲ ಕೋರ್ಟ್ ಹೇಳಿದೆ.

    ಮಾರ್ಚ್ 20 ಬೆಳಗ್ಗೆ 5:30 ನಿಗದಿಯಾಗಿದ್ದ ಗಲ್ಲು ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ.ಧರ್ಮೇಂದ್ರ ರಾಣಾ ನೇತೃತ್ವದ ಪೀಠವು ಅರ್ಜಿಯನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಲ್ಲ ಬಗೆಯ ಕಾನೂನು ಹೋರಾಟ ಅಂತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

    ಇದಕ್ಕೂ ಮುನ್ನ ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ವಜಾ ಮಾಡಿದ್ದನ್ನು ಪ್ರಶ್ನಿಸಿ ದೋಷಿ ವಿನಯ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು. ಇದಲ್ಲದೇ ದೋಷಿ ಪವನ್ ಗುಪ್ತಾ, ಅಕ್ಷಯ್ ಠಾಕೂರ್ ಎರಡನೇ ಬಾರಿ ಕ್ಷಮಾದಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ವಜಾ ಮಾಡಿದ್ದರು.

    ನಾಲ್ವರು ದೋಷಿಗಳು ಕಾನೂನು ಹೋರಾಟ ಬಹುತೇಕ ಅಂತ್ಯವಾಗಿದ್ದು ಹಿಂದೆ ನಿಗದಿಯಂತೆ ನಾಳೆ ಬೆಳಗ್ಗೆ 5:30 ಗಲ್ಲು ಶಿಕ್ಷೆಯಾಗಲಿದೆ. ಗಲ್ಲು ಶಿಕ್ಷೆ ಹಿನ್ನೆಲೆಯಲ್ಲಿ ತಿಹಾರ್ ಜೈಲು ಸಿಬ್ಬಂದಿ ಎಲ್ಲ ರೀತಿಯ ತಯಾರಿ ನಡೆಸಿದ್ದಾರೆ. ಉತ್ತರ ಪ್ರದೇಶದಿಂದ ಆಗಮಿಸಿರುವ  ಗಲ್ಲಿಗೇರಿಸುವ ಪವನ್ ಜೆಲ್ಲದಾ ತಿಹಾರ್ ಜೈಲಿಗೆ ಆಗಮಿಸಿದ್ದು, ನಿನ್ನೆ ಪ್ರಾಯೋಗಿಕ ಪ್ರಯೋಗ ನಡೆಸಿದ್ದಾರೆ.

  • ನಿರ್ಭಯಾ ದೋಷಿಗಳಿಗೆ ನಾಳೆಯೇ ಗಲ್ಲು- ಕಾನೂನು ತಜ್ಞರು ಏನು ಹೇಳುತ್ತಾರೆ?

    ನಿರ್ಭಯಾ ದೋಷಿಗಳಿಗೆ ನಾಳೆಯೇ ಗಲ್ಲು- ಕಾನೂನು ತಜ್ಞರು ಏನು ಹೇಳುತ್ತಾರೆ?

    ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿಗಳು ಕೃತ್ಯ ಎಸಗಿ 2012ರ ಡಿಸೆಂಬರ್ 16ರಿಂದ ಇಂದಿನವರೆಗೆ ಅಂದ್ರೆ 7 ವರ್ಷ 3 ತಿಂಗಳು, 3 ದಿನಗಳು ಕಳೆದಿವೆ. ಮುಖೇಶ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ ಮತ್ತು ಅಕ್ಷಯ್ ಠಾಕೂರ್ ಈವರೆಗೂ ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳುತ್ತಲೇ ಬಂದಿದ್ದಾರೆ. ಆದರೆ ನಾಳೆ ಬೆಳಗ್ಗೆ ನಾಲ್ವರನ್ನೂ ಗಲ್ಲಿಗೆ ಏರಿಸುವುದು ಖಚಿತವಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ನಾಲ್ಕನೇ ಬಾರಿ ಸಾವಿನ ಬಾಗಿಲಲ್ಲಿ ನಿಂತಿರುವ ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ದೋಷಿಗಳು ನೇಣಿಗೆ ಕೊರೊಳುಡ್ಡುವ ಕಡೆಯ ಕ್ಷಣದವರೆಗೂ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. ಮಾರ್ಚ್ 20ರ ಬೆಳಗ್ಗೆ 5:30ಕ್ಕೆ ನಿಗದಿಯಾಗಿರುವ ಗಲ್ಲು ಶಿಕ್ಷೆಗೆ ತಡೆ ನೀಡುವಂತೆ ದೆಹಲಿಯ ಪಟಿಯಾಲ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಇಂದು ಈ ಅರ್ಜಿ ವಿಚಾರಣೆಗೆ ನಡೆಯಲಿದೆ. ನಿನ್ನೆ ಅರ್ಜಿ ಸಲ್ಲಿಸಿರುವ ನಾಲ್ವರು ದೋಷಿಗಳು ಶಿಕ್ಷೆಗೆ ತಡೆ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಪ್ರಕರಣದ ನಾಲ್ವರು ದೋಷಿಗಳ ಕಾನೂನು ಹೋರಾಟ ಬಾಕಿ ಉಳಿದಿದ್ದು, ಅದಕ್ಕೆ ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

    ಕ್ಷಮಾದಾನ ಅರ್ಜಿ ವಜಾ ಮಾಡಿರುವುದನ್ನು ಪುನರ್ ಪರಿಶೀಲನೆ ನಡೆಸುವಂತೆ ಸಲ್ಲಿಸಿದ್ದ ಅರ್ಜಿ ಇನ್ನು ಬಾಕಿ ಇದ್ದು, ಈ ಅರ್ಜಿ ಇತ್ಯರ್ಥವಾಗಬೇಕಿದೆ. ಘಟನೆ ನಡೆದ ವೇಳೆ ಬಾಲಾಪರಾಧಿಯಾಗಿದ್ದೆ. ಹೀಗಾಗಿ ಶಿಕ್ಷೆ ಕಡಿತಗೊಳಿಸಬೇಕೆಂದು ಕೋರಿ ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ ಕ್ಯುರೆಟಿವ್ ಅರ್ಜಿ ಬಾಕಿ ಇದೆ. ಅಲ್ಲದೆ ತಿಹಾರ್ ಜೈಲು ಸಿಬ್ಬಂದಿ ಥಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಬೇಕಿದ್ದು, ಈ ವೇಳೆ ಗಲ್ಲು ಶಿಕ್ಷೆಗೆ ಒಳಪಡಿಸುವುದು ಸರಿಯಲ್ಲ ಎಂದು ದೋಷಿ ಪವನ್ ಗುಪ್ತಾ ಅರ್ಜಿಯಲ್ಲಿ ಮನವಿ ಮಾಡಿದ್ದಾನೆ.

    ಪ್ರಕರಣದ ಮತ್ತೊರ್ವ ಆರೋಪಿ ಅಕ್ಷಯ್ ಕುಮಾರ್ ಪತ್ನಿ ವಿಚ್ಛೇದನ ನೀಡುವಂತೆ ಬಿಹಾರದಲ್ಲಿ ಕೊರ್ಟ್ ಮೊರೆ ಹೋಗಿದ್ದು, ಅದರ ವಿಚಾರಣೆ ಸಹ ನಡೆಬೇಕಿದೆ. ವಿನಯ್ ಶರ್ಮಾ ತನ್ನ ಕ್ಷಮದಾನ ಅರ್ಜಿ ವಜಾ ಮಾಡಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆ ಮಾಡಿದ್ದು, ಈ ಕುರಿತು ವಿಚಾರಣೆ ನಡೆಬೇಕಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದೆ.

    ಇಷ್ಟು ಮಾತ್ರವಲ್ಲದೆ ಮೂವರು ದೋಷಿಗಳು ಅಂತರರಾಷ್ಟ್ರೀಯ ಕೋರ್ಟ್ ಮೊರೆ ಹೋಗಿದ್ದು, ತುರ್ತು ವಿಚಾರಣೆಗೆ ಮನವಿ ಮಾಡಿದ್ದಾರೆ. ಈ ಎಲ್ಲ ಪ್ರಕರಣಗಳು ವಿಚಾರಣೆ ನಡೆಯಬೇಕಿದ್ದು, ಇದಕ್ಕೂ ಮುನ್ನ ಅಪರಾಧಿಗಳನ್ನು ಶಿಕ್ಷಿಸುವುದು ಸರಿಯಲ್ಲ ಎಂದು ವಕೀಲ ಎ.ಪಿ.ಸಿಂಗ್ ಪಟಿಯಾಲ ಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿದ್ದಾರೆ.

    ಇಂದು ಈ ಅರ್ಜಿ ನ್ಯಾ.ಧರ್ಮೇಂದ್ರ ರಾಣಾ ಪೀಠದ ಮುಂದೆ ವಿಚಾರಣೆಗೆ ಬರಲಿದ್ದು, ಈಗಾಗಲೇ ನಾಲ್ಕು ಬಾರಿ ಜೀವದಾನ ಸಿಕ್ಕಿರುವ ನಾಲ್ವರು ದೋಷಿಗಳಿಗೆ ಸಾವಿನ ಕಡೆಯ ದಿನ ಐದನೇ ಬಾರಿ ಜೀವದಾನ ಸಿಕ್ಕುತ್ತಾ, ಅಥವಾ ಗಲ್ಲು ನಿಶ್ಚಿತವೇ ಎಂಬುದನ್ನು ಕಾದು ನೋಡಬೇಕಿದೆ.

    ವಿಚ್ಛೇದನ ಅರ್ಜಿ:
    ಗಲ್ಲಿಗೇರಿಸುವ ಎರಡು ದಿನಗಳ ಮೊದಲು ತಪ್ಪಿತಸ್ಥ ಅಕ್ಷಯ್ ಪತ್ನಿ ಪುನಿತಾ ವಿಚ್ಛೇದನ ಕೋರಿ ಬಿಹಾರದ ಔರಂಗಾಬಾದ್ ಜಿಲ್ಲೆಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಳು. ನಾನು ವಿಧವೆಯಾಗಿ ಬದುಕಲು ಬಯಸುವುದಿಲ್ಲ. ಆದ್ದರಿಂದ ನೇಣು ಹಾಕುವ ಮೊದಲು ನಾವು ಕಾನೂನುಬದ್ಧವಾಗಿ ವಿಚ್ಛೇದನ ಪಡೆಯುತ್ತೇನೆ ಎಂದು ಅರ್ಜಿಯಲ್ಲಿ ತಿಳಿಸಿದ್ದಳು.

    ಈ ಅರ್ಜಿಯಿಂದಾಗಿ ಅಪರಾಧಿಗಳ ಗಲ್ಲಿಗೇರಿಸುವುದನ್ನು ಮುಂದೂಡಬಹುದೇ ಎಂಬ ಪ್ರಶ್ನೆ ಎದ್ದಿತ್ತು. ಆದರೆ ವಿಚ್ಛೇದನವು ಸಿವಿಲ್ ಪ್ರಕರಣಗಳಲ್ಲಿ ಬರುತ್ತದೆ. ಹೀಗಾಗಿ ಆ ಅರ್ಜಿ ಕ್ರಿಮಿನಲ್ ಪ್ರಕರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಕಾರಣಕ್ಕಾಗಿ ಮಾರ್ಚ್ 20ರಂದು ಬೆಳಗ್ಗೆ 5:30ಕ್ಕೆ ಅಪರಾಧಿಗಳನ್ನು ಗಲ್ಲಿಗೇರಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.

    ದೋಷಿಗಳಿಗೆ ಎಲ್ಲಾ ಮಾರ್ಗ ಬಂದ್:
    ಡೆತ್ ವಾರಂಟ್ ಮತ್ತು ಮರಣದಂಡನೆ ದಿನಾಂಕದ ನಡುವೆ 14 ದಿನಗಳ ವ್ಯತ್ಯಾಸ ಇರಬೇಕು ಎಂದು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳು ಹೇಳುತ್ತವೆ. ಮಾರ್ಚ್ 5ರಂದು ಅಪರಾಧಿಗಳ ಡೆತ್ ವಾರಂಟ್ ಹೊರಡಿಸಲಾಗಿದೆ. ಅಷ್ಟೇ ಅಲ್ಲದೆ ಅಪರಾಧಿಗಳಿಗೆ ಎಲ್ಲಾ ಕಾನೂನು ಮಾರ್ಗಗಳು ಸಹ ಮುಗಿದಿವೆ. ಮರಣದಂಡನೆಗೆ ಗುರಿಯಾದ ಅಪರಾಧಿಗೆ ಎಲ್ಲಾ ಕಾನೂನು ಮಾರ್ಗಗಳನ್ನು ಬಳಸುವ ಹಕ್ಕಿದೆ. ಈ ನಿಟ್ಟಿನಲ್ಲಿ ನಾಲ್ವರು ಸಹ ತಮ್ಮ ಎಲ್ಲಾ ಕಾನೂನು ಹಕ್ಕುಗಳನ್ನು ಸಹ ಬಳಸಿದ್ದಾರೆ. ನಾಲ್ವರ ಪರಿಶೀಲನಾ ಅರ್ಜಿಗಳು ಮತ್ತು ಕ್ಷಮಾದಾನ ಅರ್ಜಿಗಳನ್ನು ಸಹ ವಜಾಗೊಂಡಿವೆ.

    ಅಪರಾಧಿಗಳು ಗಲ್ಲಿಗೇರಿಸುವುದನ್ನು ತಪ್ಪಿಸಲು ಇಂದು ಕೂಡ ಅರ್ಜಿಯನ್ನು ಹಾಕಿದರೂ ಅವರನ್ನು ಗಲ್ಲಿಗೇರಿಸುವುದನ್ನು ತಪ್ಪಿಸುವುದು ತುಂಬಾ ಕಡಿಮೆ. ಏಕೆಂದರೆ ಭಯೋತ್ಪಾದಕ ಯಾಕೂಬ್ ಮೆಮನ್ ನೇಣು ಹಾಕುವ ಒಂದು ದಿನ ಮೊದಲು ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ಆದರೆ ಅರ್ಜಿಯನ್ನು ತಿರಸ್ಕರಿಸಿದ ನಂತರ ಅವರ ವಕೀಲರು ರಾತ್ರಿ ಸುಪ್ರೀಂ ಕೋರ್ಟಿಗೆ ತಲುಪಿದರು. ಆದರೆ ಇದರ ಹೊರತಾಗಿಯೂ ಅವನ ನೇಣು ನಿಲ್ಲಲಿಲ್ಲ.

  • ‘ಕಕ್ಷಿದಾರ ಘಟನಾ ಸ್ಥಳದಲ್ಲೇ ಇರಲಿಲ್ಲ’- ನಿರ್ಭಯಾ ದೋಷಿ ಪರ ವಕೀಲರಿಂದ ಮೇಲ್ಮನವಿ

    ‘ಕಕ್ಷಿದಾರ ಘಟನಾ ಸ್ಥಳದಲ್ಲೇ ಇರಲಿಲ್ಲ’- ನಿರ್ಭಯಾ ದೋಷಿ ಪರ ವಕೀಲರಿಂದ ಮೇಲ್ಮನವಿ

    ನವದೆಹಲಿ: ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳನ್ನು ಮಾರ್ಚ್ 20ರಂದು ಗಲ್ಲಿಗೇರಿಸಲು ಸಿದ್ಧತೆ ನಡೆದಿದೆ. ಆದರೆ ಇದನ್ನು ತಪ್ಪಿಸಲು ಎಲ್ಲಾ ಅಪರಾಧಿಗಳು ವಿಭಿನ್ನ ಕಾನೂನು ಹಕ್ಕುಗಳನ್ನು ಬಳಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಪರಾಧಿ ಮುಖೇಶ್ ಸಿಂಗ್ ಪರ ವಕೀಲ ಎಂ.ಎಲ್.ಶರ್ಮಾ ಅವರು ದೆಹಲಿ ಕೋರ್ಟಿಗೆ ಮಂಗಳವಾರ ಮೇಲ್ಮನವಿ ಸಲ್ಲಿಸಿದ್ದಾರೆ.

    ‘ಘಟನಾ ಸ್ಥಳದಲ್ಲಿ ಮುಖೇಶ್ ಇರಲಿಲ್ಲ. ಮುಖೇಶ್‍ಗೆ ಜೈಲಿನಲ್ಲಿ ಚಿತ್ರಹಿಂಸೆ ಕೊಟ್ಟು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಎಂ.ಎಲ್.ಶರ್ಮಾ ಮೇಲ್ಮನವಿಯಲ್ಲಿ ಆರೋಪಿಸಿದ್ದಾರೆ.

    ಈ ತಿಂಗಳ ಆರಂಭದಲ್ಲಿ ದೆಹಲಿ ನ್ಯಾಯಾಲಯವು ಮಾರ್ಚ್ 20ರಂದು ಮುಂಜಾನೆ 5:30 ಕ್ಕೆ ಮುಖೇಶ್ (32), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಅಕ್ಷಯ್ ಸಿಂಗ್ (31) ಎಂಬ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ವಾರಂಟ್ ಹೊರಡಿಸಿತ್ತು. ಅಷ್ಟೇ ಅಲ್ಲದೆ ಇದಕ್ಕೂ ಮುನ್ನ ಮೂರು ಬಾರಿ ಗಲ್ಲಿಗೇರಿಸುವುದನ್ನು ಮುಂದೂಡಲಾಗಿದೆ.

    ದೋಷಿ ಮುಖೇಶ್‍ನನ್ನು ಡಿಸೆಂಬರ್ 17ರಂದು ರಾಜಸ್ಥಾನದಲ್ಲಿ ಬಂಧಿಸಲಾಗಿತ್ತು ಎಂದು ವಕೀಲ ಶರ್ಮಾ ಮಂಗಳವಾರ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ಹೇಳಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಅವನು ಇರಲಿಲ್ಲ. ಆದರೆ ತಿಹಾರ್ ಜೈಲಿನಲ್ಲಿ ಪೊಲೀಸರು ಮುಖೇಶ್‍ಗೆ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂದು ಮೇಲ್ಮನವಿಯಲ್ಲಿ ಆರೋಪಿಸಲಾಗಿದೆ.

    ತಿಹಾರ್ ಜೈಲು ಆಡಳಿತ ಅಧಿಕಾರಿಗಳು ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧತೆ ನಡೆಸಿದ್ದಾರೆ. ಉತ್ತರ ಪ್ರದೇಶದ ಮೀರತ್ ನಿವಾಸಿ ಪವನ್ ಜಲ್ಲಾಡ್ ಅವರನ್ನು ಗಲ್ಲಿಗೇರಿಸುವ ಮೂರು ದಿನಗಳ ಮೊದಲು ಅಂದ್ರೆ ಮಾರ್ಚ್ 17ರಂದು ತಿಹಾರ್ ಜೈಲಿಗೆ ಬಂದು ವರದಿ ಸಲ್ಲಿಸುವಂತೆ ಜೈಲು ಅಧಿಕಾರಿಗಳು ಕೋರಿದ್ದಾರೆ. ಪವನ್ ಆಗಮನದ ನಂತರ ಅಧಿಕಾರಿಗಳು ಅಪರಾಧಿಗಳನ್ನು ನೇಣು ಹಾಕಲು ನಡೆಸಿದ ಸಿದ್ಧತೆಯನ್ನು ಪರೀಕ್ಷಿಸುತ್ತಾರೆ.

    ಏನಿದು ಪ್ರಕರಣ?:
    ದೆಹಲಿಯಲ್ಲಿ 2012ರ ಡಿಸೆಂಬರ್ 16ರ ರಾತ್ರಿ ಬಸ್‍ನಲ್ಲಿ ಚಲಿಸುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ 6 ಜನರು ಅತ್ಯಾಚಾರ ಎಸಗಿದ್ದರು. ತೀವ್ರ ಗಾಯಗೊಂಡಿದ್ದ ನಿರ್ಭಯಾ ಸಿಂಗಾಪುರದಲ್ಲಿ ಡಿಸೆಂಬರ್ 26ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. 2013ರ ಸೆಪ್ಟೆಂಬರ್ ಅಂದ್ರೆ ಘಟನೆ ನಡೆದ 9 ತಿಂಗಳ ನಂತರ ನ್ಯಾಯಾಲಯವು 5 ಅಪರಾಧಿಗಳಾದ ರಾಮ್ ಸಿಂಗ್, ಪವನ್, ಅಕ್ಷಯ್, ವಿನಯ್ ಮತ್ತು ಮುಖೇಶ್‍ಗೆ ಮರಣದಂಡನೆ ವಿಧಿಸಿತ್ತು. 2014ರ ಮಾರ್ಚ್ ನಲ್ಲಿ ಹೈಕೋರ್ಟ್ ಮತ್ತು 2017ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಮರಣದಂಡನೆಯನ್ನು ಎತ್ತಿಹಿಡಿದಿದ್ದವು. ವಿಚಾರಣೆಯ ವೇಳೆ ಮುಖ್ಯ ಅಪರಾಧಿ ರಾಮ್ ಸಿಂಗ್ ತಿಹಾರ್ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದ. ಓರ್ವ ಅಪ್ರಾಪ್ತ ವಯಸ್ಕನಾಗಿದ್ದರಿಂದ ಆತನಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

  • ಹನಿಟ್ರ್ಯಾಪ್ ಕೇಸ್: ಯುವತಿಯರು ಸೇರಿ 8 ಜನರಿಗೆ 3 ವರ್ಷ ಜೈಲು ಶಿಕ್ಷೆ

    ಹನಿಟ್ರ್ಯಾಪ್ ಕೇಸ್: ಯುವತಿಯರು ಸೇರಿ 8 ಜನರಿಗೆ 3 ವರ್ಷ ಜೈಲು ಶಿಕ್ಷೆ

    ಮಂಗಳೂರು: ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಇಬ್ಬರು ಯುವತಿಯರ ಸಹಿತ 8 ಮಂದಿ ಅಪರಾಧಿಗಳಿಗೆ ಮಂಗಳೂರಿನ 4ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ಕೊಣಾಜೆಯ ಶಿಲ್ಪಾ (27), ಅವಿನಾಶ್ (25), ಯತೀಶ್ (26) ಮತ್ತು ರಂಜಿತ್ (23), ದೇರಳಕಟ್ಟೆಯ ನಿತಿನ್ (23), ಕೊಣಾಜೆಯ ಶ್ರೀಜಿತ್ (24), ಬೋಂದೆಲ್‍ನ ಸಚಿನ್ (23), ಕೋಟೆಕಾರ್ ಬೀರಿಯ ತೃಪ್ತಿ (25) ಶಿಕ್ಷೆಗೆ ಗುರಿಯಾದ ಅಪರಾಧಿಗಳು.

    ಅಪರಾಧಿಗಳು ಮಂಗಳೂರು ನಗರದ ಬಳ್ಳಾಲ್‍ಬಾಗ್‍ನ ಫ್ಲ್ಯಾಟ್‍ವೊಂದರಲ್ಲಿ 4 ವರ್ಷಗಳ ಹಿಂದೆ ಹನಿಟ್ರ್ಯಾಪ್ ಮೂಲಕ ಬ್ಯಾಂಕ್ ಮ್ಯಾನೇಜರ್ ಒಬ್ಬರಿಂದ ಹಣ ಲಪಟಾಯಿಸಲು ಯತ್ನಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

    ಪ್ರಕರಣದ ಕುರಿತು ವಿಚಾರಣೆ ನಡೆಸಿದ ಕೋರ್ಟ್ ಅಪರಾಧಿಗಳಿಗೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ 6,000 ರೂ. ದಂಡ ವಿಧಿಸಿದೆ. ನ್ಯಾಯಾಧೀಶ ರಾಮಲಿಂಗೇ ಗೌಡ 19 ಸಾಕ್ಷಿಗಳ ಪೈಕಿ 10 ಮಂದಿ ಸಾಕ್ಷಿಗಳ ವಿಚಾರಣೆಯನ್ನು ನಡೆಸಿ ಆರೋಪ ಸಾಬೀತಾಗಿದೆ ಎಂದು ತಿಳಿಸಿ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಶ್ಚಂದ್ರ ಉದ್ಯಾವರ್ ವಾದ ಮಂಡಿಸಿದ್ದರು.

  • ನಿರ್ಭಯಾ ಪ್ರಕರಣ- ಅಪರಾಧಿಗಳಿಗೆ ಗಲ್ಲು ಶಿಕ್ಷೆ ಮತ್ತಷ್ಟು ದಿನ ಮುಂದೂಡಿಕೆ ಸಾಧ್ಯತೆ

    ನಿರ್ಭಯಾ ಪ್ರಕರಣ- ಅಪರಾಧಿಗಳಿಗೆ ಗಲ್ಲು ಶಿಕ್ಷೆ ಮತ್ತಷ್ಟು ದಿನ ಮುಂದೂಡಿಕೆ ಸಾಧ್ಯತೆ

    – ದೋಷಿ ಅಕ್ಷಯ್ ಕ್ಷಮಾಧಾನ ಅರ್ಜಿ ಸಲ್ಲಿಕೆ

    ನವದೆಹಲಿ: ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದ ದೋಷಿಗಳು ಗಲ್ಲು ಶಿಕ್ಷಯನ್ನು ಮುಂದೂಡಲು ಪದೇ ಪದೇ ಯತ್ನಿಸುತ್ತಿದ್ದಾರೆ. ಅಪರಾಧಿಗಳ ಪೈಕಿ ಓರ್ವನಾದ ಅಕ್ಷಯ್ ಕುಮಾರ್ ಠಾಕೂರ್ (31) ರಾಷ್ಟ್ರಪತಿಗಳಿಗೆ ಕ್ಷಮಾದಾನ ಮನವಿ ಸಲ್ಲಿಸಿದ್ದಾನೆ.

    ಅಪರಾಧಿಗಳು ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ರಾಷ್ಟ್ರಪತಿಗಳಿಗೆ ಕ್ಷಮಾದಾನ ಮನವಿ ಸಲ್ಲಿಸುತ್ತಿದ್ದಾರೆ. ಇದರಿಂದಾಗಿ ದೋಷಿಗಳಿಗೆ ಗಲ್ಲು ಶಿಕ್ಷೆಯು ಮತ್ತಷ್ಟು ದಿನ ಮುಂದೂಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದನ್ನೂ ಓದಿ: ನಿರ್ಭಯಾ ಪ್ರಕರಣ: ಕೇಂದ್ರದ ಅರ್ಜಿ ವಿಚಾರಣೆ ವೇಳೆ ಪ್ರಜ್ಞೆ ತಪ್ಪಿದ ನ್ಯಾಯಾಧೀಶೆ

    ಪ್ರಕರಣದ ಅಪರಾಧಿಗಳ ಪೈಕಿ ಒಬ್ಬನಾಗಿರುವ ವಿನಯ್ ಶರ್ಮಾ ತಿಹಾರ್ ಜೈಲಿನಲ್ಲಿ ಫೆಬ್ರವರಿ 16ರಂದು ಹೈ ಡ್ರಾಮಾ ನಡೆಸಿದ್ದ. ಗೋಡೆಗೆ ತಲೆ ಚಚ್ಚಿಕೊಳ್ಳುವ ಮೂಲಕ ನಾಟಕವಾಡಿದ್ದ. ತಕ್ಷಣವೇ ಜೈಲು ಅಧಿಕಾರಿಗಳು ಆತನನ್ನು ತಡೆದಿದ್ದರು.

    ಇತ್ತೀಚೆಗಷ್ಟೇ ವಿನಯ್ ಪರ ವಕೀಲರು ಕೋರ್ಟಿಗೆ ಹೇಳಿಕೆ ನೀಡಿದ್ದು, ವಿನಯ್ ಜೈಲಿನಲ್ಲಿಯೇ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾನೆ. ಅಲ್ಲದೆ ಸೆಲ್‍ನಲ್ಲಿ ವಿನಯ್ ಮೇಲೆ ಹಲ್ಲೆ ನಡೆಸಲಾಗಿದ್ದು, ತಲೆಗೆ ಪೆಟ್ಟು ಬಿದ್ದಿದೆ. ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ. ಆದ್ದರಿಂದ ಮರಣದಂಡನೆ ವಿಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಹೇಳಿಕೆ ನಂತರ ಜೈಲು ಅಧಿಕಾರಿಗೆ ಈ ಕುರಿತು ಕೋರ್ಟ್ ಸಹ ಸೂಚನೆ ನೀಡಿದ್ದು, ಕಾನೂನಿನ ಪ್ರಕಾರ ವಿನಯ್ ಕುರಿತು ಕಾಳಜಿ ವಹಿಸುವಂತೆ ಆದೇಶಿಸಿದೆ.

    ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಮಾರ್ಚ್ 3ರಂದು ಗಲ್ಲಿಗೇರಿಸುವಂತೆ ದೆಹಲಿ ನ್ಯಾಯಾಲಯ ಫೆಬ್ರವರಿ 17 ಆದೇಶಿಸಿದೆ. ಅಲ್ಲದೆ ಹೊಸ ಮರಣದಂಡನೆ ಜಾರಿಗೊಳಿಸಿದ ನಂತರ ಗಲ್ಲು ಶಿಕ್ಷೆ ಮುಂದೂಡುವುದು ಸಂತ್ರಸ್ತರ ಹಕ್ಕುಗಳಿಗೆ ಚ್ಯುತಿ ತಂದಂತೆ ಎಂದು ದೆಹಲಿ ನ್ಯಾಯಾಲಯ ವ್ಯಾಖ್ಯಾನಿಸಿದೆ.

    ಮುಖೇಶ್ ಕುಮಾರ್ ಸಿಂಗ್(32), ಪವನ್ ಗುಪ್ತಾ(25), ವಿನಯ್ ಕುಮಾರ್ ಶರ್ಮಾ(26), ಅಕ್ಷಯ್ ಕುಮಾರ್(31) ಈ ನಾಲ್ವರು ಅಪರಾಧಿಗಳನ್ನು ಮಾರ್ಚ್ 3ರಂದು ಬೆಳಗ್ಗೆ 6ಕ್ಕೆ ಗಲ್ಲಿಗೇರಿಸುವಂತೆ ಕೋರ್ಟ್ ಆದೇಶಿಸಿದೆ. ಇದು ಕೋರ್ಟ್ ನೀಡುತ್ತಿರುವ ಮೂರನೇ ಆದೇಶವಾಗಿದ್ದು, ಈ ಬಾರಿಯಾದರೂ ಗಲ್ಲಿಗೇರಿಸಲಾಗುತ್ತದೆಯೇ ಎಂಬುದು ಸಂತ್ರಸ್ತರ ಪ್ರಶ್ನೆಯಾಗಿದೆ.

    ಜನವರಿ 7ರಂದು ಕೋರ್ಟ್ ಈ ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಿ ಅಡಿಷನಲ್ ಸೆಶನ್ ಜಡ್ಜ್ ಧರ್ಮೇಂದ್ರ ರಾಣಾ ಅವರು ಆದೇಶ ಹೊರಡಿಸಿದ್ದರು. ನಂತರ ಜನವರಿ 17 ಹಾಗೂ 31ರಂದು ನಡೆದ ವಿಚಾರಣೆ ವೇಳೆ ಶಿಕ್ಷೆಯನ್ನು ಮುಂದೂಡಲಾಗಿದೆ. ಅದರಂತೆ ಮಾರ್ಚ್ 3ರಂದು ಬೆಳಗ್ಗೆ 6ಕ್ಕೆ ಗಲ್ಲಿಗೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.