Tag: ಅನ್ ಲಾಕ್

  • ಎರಡೂವರೆ ತಿಂಗಳ ಬಳಿಕ ಅನ್‍ಲಾಕ್ – ಮಾಲ್, ಶಾಪಿಂಗ್ ಕಾಂಪ್ಲೆಕ್ಸ್‌ಗಳು ಓಪನ್

    ಎರಡೂವರೆ ತಿಂಗಳ ಬಳಿಕ ಅನ್‍ಲಾಕ್ – ಮಾಲ್, ಶಾಪಿಂಗ್ ಕಾಂಪ್ಲೆಕ್ಸ್‌ಗಳು ಓಪನ್

    ಬೆಂಗಳೂರು: ಇಂದಿನಿಂದ ಇಡೀ ಕರ್ನಾಟಕ ಕಂಪ್ಲೀಟ್ ಅನ್‍ಲಾಕ್ ಆಗ್ತಿದೆ. ಇಂದು ಬೆಳಗ್ಗೆ 5 ಗಂಟೆಯಿಂದ ಹೆಚ್ಚು ಕಡಿಮೆ ಇಡೀ ರಾಜ್ಯ ಸಂಪೂರ್ಣ ಅನ್‍ಲಾಕ್ ಆಗಿದೆ. ಬರೋಬ್ಬರಿ ಎರಡೂವರೆ ತಿಂಗಳ ಬಳಿಕ ರಾಜ್ಯ ಸಂಪೂರ್ಣ ಸಹಜ ಸ್ಥಿತಿಗೆ ಮರಳಿದೆ. ಕೊರೋನಾ ಎರಡನೇ ಅಲೆ ಇಳಿಕೆ ಬೆನ್ನಲ್ಲೇ ಲಾಕ್ ನಿಯಮಗಳನ್ನು ಸರ್ಕಾರ ಸಡಿಲ ಮಾಡಿದ್ದು, ಮಾರ್ಗಸೂಚಿ ಹೊರಡಿಸಿದೆ. ಅದರ ಅನ್ವಯ ಒಂದೆರಡನ್ನು ಬಿಟ್ರೆ ಬಹುತೇಕ ಎಲ್ಲಾ ರೀತಿಯ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳಲಿವೆ.

    ಸತತ 2 ತಿಂಗಳ ಬಳಿಕ ಶಾಪಿಂಗ್ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್‌ಗಳು ಓಪನ್ ಆಗ್ತಿವೆ. ಮಾಲ್ ಸೇರಿದಂತೆ ಇತರೆ ಮಳಿಗೆಗಳನ್ನು ರಾತ್ರಿ 9 ಗಂಟೆವರೆಗೂ ತೆರೆಯಬಹುದಾಗಿದೆ. ಇತ್ತ ಬಾರ್, ರೆಸ್ಟೋರೆಂಟ್‍ಗಳಲ್ಲಿ ರಾತ್ರಿ 9 ಗಂಟೆವರೆಗೂ ಕುಳಿತು ಕುಡಿಯಲು ಸರ್ಕಾರ ಅನುಮತಿ ನೀಡಿದೆ. ಅಲ್ಲದೆ ಹೋಟೆಲ್‍ಗಳಲ್ಲೂ ರಾತ್ರಿ 9 ಗಂಟೆವರೆಗೂ ಕುಳಿತು ಅಲ್ಲೇ ಆಹಾರ ಸೇವಿಸಬಹುದಾಗಿದೆ.

    ಇಂದಿನಿಂದ ಬೆಂಗಳೂರಿನ ಜೀವನಾಡಿ ಬಿಎಂಟಿಸಿಯ 4,500 ಬಸ್‍ಗಳು ರಸ್ತೆಗೆ ಇಳಿಯಲಿವೆ. ಸರ್ಕಾರ ಶೇ.100ರಷ್ಟು ಸೀಟ್ ಭರ್ತಿಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆಗಂತ ಬಸ್ಸಿನಲ್ಲಿ ಸೀಟಿಲ್ಲ ಅಂತ ನಿಂತ್ಕೊಂಡು ಪ್ರಯಾಣ ಮಾಡುವಂತಿಲ್ಲ. ಎಷ್ಟು ಸೀಟ್ ಇದ್ಯೋ ಅಷ್ಟೆ ಪ್ರಯಾಣಿಕರಿಗೆ ಅವಕಾಶ. ಇತ್ತ ಮೆಟ್ರೋದಲ್ಲಿ 100 ಪರ್ಸೆಂಟ್ ಸೀಟ್ ಭರ್ತಿಗೆ ಒಪ್ಪಿಗೆ ಸಿಕ್ಕಿದೆ. ವಾರ ಪೂರ್ತಿ ಮೆಟ್ರೋ ಸೇವೆ ಸಿಗಲಿದೆ.

    ಬೇಜಾರ್ ಆದ್ರೆ ಮನರಂಜನಾ ಪಾರ್ಕ್‍ಗಳಿಗೂ ಇಂದಿನಿಂದ ಹೋಗಬಹುದಾಗಿದೆ. ನೂರು ಮಂದಿ ಬಂಧು ಬಾಂಧವರನ್ನು ಕರೆಯಿಸಿ ಮದ್ವೆಗಳನ್ನು ಕೂಡ ಮಾಡಬಹುದಾಗಿದೆ. ಅಂತ್ಯಕ್ರಿಯೆಗೆ 20 ಜನರಷ್ಟೇ ಭಾಗಿಯಾಗಬಹುದಾಗಿದೆ. ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಶೇ.100ರಷ್ಟು ಸಿಬ್ಬಂದಿ ಕಾರ್ಯ ನಿರ್ವಹಿಸಬಹುದಾಗಿದೆ. ಕೈಗಾರಿಕೆಗಳಲ್ಲೂ ಶೇ.100ರಷ್ಟು ಕಾರ್ಮಿಕರ ಬಳಕೆಗೆ ಅವಕಾಶವಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ನಿಧಿ ಔಟ್

    ಎಲ್ಲಾ ವಲಯಗಳು ಅನ್‍ಲಾಕ್ ಆದ್ರೂ ಥಿಯೇಟರ್, ಪಬ್, ಶಾಲಾ-ಕಾಲೇಜು, ಕೋಚಿಂಗ್ ಸೆಂಟರ್, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸಭೆ-ಸಮಾರಂಭಗಳಿಗೆ ನಿರ್ಬಂಧವಿದೆ. ಈಜುಕೊಳಕ್ಕೂ ನಿರ್ಬಂಧ ಇದೆ. ಆದ್ರೆ ಕ್ರೀಡಾಪಟುಗಳು ಅಭ್ಯಾಸಕ್ಕೆ ಅನುಮತಿ ಇದೆ. ಅಲ್ಲದೆ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್‍ ಕರ್ಫ್ಯೂ ಇರಲಿದೆ. ವೀಕೆಂಡ್ ಕರ್ಫ್ಯೂ ವಾಪಸ್ ಪಡೆಯಲಾಗಿದೆ.

    ಒಟ್ಟಿನಲ್ಲಿ ಇಂದಿನಿಂದ ರಾಜ್ಯದಲ್ಲಿ ಒಂಥರಾ ಬಿಂದಾಸ್ ದುನಿಯಾ ಅನಾವರಣಗೊಳ್ಳಲಿದೆ. ಆಗಂತ ಮೈಮರೆತ್ರೆ ಕಂಟಕ ತಪ್ಪಿದ್ದಲ್ಲ. ಈಗಾಗಲೇ ಡೆಲ್ಟಾ ಹಾಗೂ 3ನೇ ಅಲೆಯ ಭೀತಿ ಕಾಡುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರಬೇಡಿ. ಮಾಸ್ಕ್, ಸಾಮಾಜಿಕ ಅಂತರ ಪಾಲಿಸಿ. ಮಕ್ಕಳನ್ನು ಹೊರಗೆ ಕರ್ಕೊಂಡ್ ಹೋಗೋದು ಆದಷ್ಟು ಅವಾಯ್ಡ್ ಮಾಡಿ.

  • ವೀಕೆಂಡ್ ಕರ್ಫ್ಯೂ ಇರಲ್ಲ, ಸಭೆ ಸಮಾರಂಭಕ್ಕೆ ಅವಕಾಶವಿಲ್ಲ – ಲಾಕ್‍ಡೌನ್ ಇನ್ನಷ್ಟು ಸಡಿಲ

    ವೀಕೆಂಡ್ ಕರ್ಫ್ಯೂ ಇರಲ್ಲ, ಸಭೆ ಸಮಾರಂಭಕ್ಕೆ ಅವಕಾಶವಿಲ್ಲ – ಲಾಕ್‍ಡೌನ್ ಇನ್ನಷ್ಟು ಸಡಿಲ

    – ನೈಟ್ ಕರ್ಫ್ಯೂ ಸಮಯ ಬದಲಾವಣೆ

    ಬೆಂಗಳೂರು: ಇನ್ನು ಮುಂದೆ ವೀಕೆಂಡ್ ಕರ್ಫ್ಯೂ ಇರಲ್ಲ. ಸಭೆ ಸಮಾರಂಭಕ್ಕೆ ಅವಕಾಶ ಇಲ್ಲ. ಜುಲೈ 5ರಿಂದ ರಿಂದ 19ರವರೆಗೆ ಅನ್ ಲಾಕ್ ಜಾರಿಯಲ್ಲಿರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

    ಕೋವಿಡ್-19 ನಿಯಂತ್ರಣ ತಾಂತ್ರಿಕ ಸಲಹೆಗಳನ್ನು ಗಮನಿಸಿ ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮೂರನೇ ಅನ್ ಲಾಕ್ ಘೋಷಣೆ ಮಾಡಿದರು. ಸರ್ಕಾರಿ, ಖಾಸಗಿ, ಕೈಗಾರಿಕೆ, ವಾಣಿಜ್ಯ ಚಟುವಟಿಕೆಗಳು, ಮಾಲ್ ಗಳಿಗೆ ಅನುಮತಿ, ಮೆಟ್ರೋ, ಕಾರ್ಮಿಕ ಕಾರ್ಯಗಳಿಗೆ ಅವಕಾಶ ನೀಡಲಾಗಿದೆ ಎಂದರು.

    ಯಾವುದಕ್ಕೆಲ್ಲ ವಿನಾಯ್ತಿ..?
    1. ಸರ್ಕಾರಿ/ಖಾಸಗಿ ಕಛೇರಿಗಳು ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳು ಶೇ. 100 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.
    2. ಮಾಲ್ ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
    3. ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆ ಶೇ. 100 ರಷ್ಟು ಪ್ರಮಾಣಿಕರೊಂದಿಗೆ ಸಂಚರಿಸಲು ಅವಕಾಶ ನೀಡಲಾಗಿದೆ.

    4. ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗಿದೆ.
    5. ಮದುವೆ ಹಾಗೂ ಇನ್ನಿತರೆ ಕೌಟುಂಬಿಕ ಶುಭ ಸಮಾರಂಭಗಳಿಗೆ 100 ಜನರೊಂದಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ.
    6. ಈಜುಕೊಳಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ ನೀಡಲಾಗಿದೆ.

    7. ಕ್ರೀಡಾ ಸಂಕೀರ್ಣಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ ನೀಡಲಾಗಿದೆ.
    8. ಅಂತ್ಯ ಸಂಸ್ಕಾರಕ್ಕೆ 20 ಸದಸ್ಯರು ಭಾಗವಹಿಸಲು ಅವಕಾಶ ನೀಡಲಾಗಿದೆ.
    9. ಕೊರೋನಾ ಕರ್ಫ್ಯೂ (ನೈರ್ಟ್ ಕರ್ಫ್ಯೂ) ರಾತ್ರಿ 9.00 ರಿಂದ ಬೆಳಿಗ್ಗೆ 5.00 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.

    10. ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುವುದಿಲ್ಲ.
    11. ಸಾಮಾಜಿಕ, ಧಾರ್ಮಿಕ, ಮತ್ತು ರಾಜಕೀಯ ಸಭೆ ಸಮಾರಂಭಗಳಿಗೆ, ಪ್ರತಿಭಟನೆಗಳಿಗೆ ಹಾಗೂ ಇತರೆ ಸಮಾರಂಭಗಳಿಗೆ ಅವಕಾಶವಿಲ್ಲ.
    12. ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವ ಬಗ್ಗೆ ಪ್ರತ್ಯೇಕವಾಗಿ ತೀರ್ಮಾನಿಸಲಾಗುವುದು.

    13. ಪಬ್ ಗಳು ಕಾರ್ಯನಿರ್ವಹಿಸಲು ಅವಕಾಶವಿಲ್ಲ. ಬಾರ್ ಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.
    14. ಚಿತ್ರಮಂದಿರಗಳು ಕಾರ್ಯನಿರ್ವಹಣೆಗೆ ಅವಕಾಶವಿಲ್ಲ.
    15. ಜಿಲ್ಲೆಯಲ್ಲಿರುವ ಪರಿಸ್ಥಿತಿಗನುಗುಣವಾಗಿ ಆಯಾಯ ಜಿಲ್ಲೆಯ ಜಿಲ್ಲಾಡಳಿತಗಳು ಇನ್ನೂ ಹೆಚ್ಚಿನ ನಿರ್ಬಂಧಗಳು ಅವಶ್ಯವಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳೊಂದಿಗೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳಲು ಸೂಚಿಸಿದೆ.
    16. ಕೋವಿಡ್-19 ನಿಯಂತ್ರಿಸುವ ದೃಷ್ಟಿಯಿಂದ ಸಾರ್ವಜನಿಕರು ನಿಯಂತ್ರಣ ಕ್ರಮಗಳಾದ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ವೈಯಕ್ತಿಕ ಮತ್ತು ಸಾಮಾಜಿಕ ಸ್ವಚ್ಛತೆ ಕಡೆಗೆ ಗಮನ ಹರಿಸಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲು ಸಿಎಂ ವಿನಂತಿಸಿದರು.

  • ದಕ್ಷಿಣ ಕನ್ನಡದಲ್ಲಿ ಇಂದಿನಿಂದ ಬಸ್ ಸಂಚಾರಕ್ಕೆ ಜಿಲ್ಲಾಡಳಿತ ಗ್ರೀನ್ ಸಿಗ್ನಲ್

    ದಕ್ಷಿಣ ಕನ್ನಡದಲ್ಲಿ ಇಂದಿನಿಂದ ಬಸ್ ಸಂಚಾರಕ್ಕೆ ಜಿಲ್ಲಾಡಳಿತ ಗ್ರೀನ್ ಸಿಗ್ನಲ್

    – ಖಾಸಗಿ ಬಸ್ ಸಂಚಾರ ಇಲ್ಲ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಭಾಗಶಃ ಅನ್ ಲಾಕ್ ಆಗಿದ್ದು ಮಾಲ್, ಸಿನಿಮಾ ಥಿಯೇಟರ್, ಧಾರ್ಮಿಕ ಕ್ಷೇತ್ರಗಳನ್ನು ಹೊರತುಪಡಿಸಿ ಬೆಳಗ್ಗೆ 7 ರಿಂದ ಮಧ್ಯಾಹ್ನ 2 ರವರೆಗೂ ಎಲ್ಲಾ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

    ಪಾಸಿಟಿವಿಟಿ ರೇಟ್ ಹಾಗೂ ಸಾವಿನ ಸಂಖ್ಯೆ ಕಡಿಮೆಯಾಗದಿದ್ರೂ ಅನ್ ಲಾಕ್ ಮಾಡಲಾಗಿದ್ದು ಬಸ್ ಸಂಚಾರಕ್ಕೂ ಅನುಮತಿಸಲಾಗಿದೆ. ಬಸ್ ಗಳಲ್ಲಿ ಶೇ.50 ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ಇರೋದ್ರಿಂದ ಕೆಎಸ್ ಆರ್ ಟಿಸಿ ಬಸ್ಸುಗಳು ಮಾತ್ರ ಸದ್ಯ ರಸ್ತೆಗಿಳಿಯಲಿದ್ದು, ಖಾಸಗಿ ಬಸ್ಸುಗಳು ಈ ತಿಂಗಳ ಅಂತ್ಯದವರೆಗೂ ಸೇವೆ ಆರಂಭಿಸೋದಿಲ್ಲ. ಬಸ್ಸಿನ ತಾಂತ್ರಿಕ ಸ್ಥಿತಿ ನೋಡಿ ಬಳಿಕ ಪೂರ್ಣ ಪ್ರಮಾಣದ ಪ್ರಯಾಣಿಕರ ಸಂಚಾರಕ್ಕೆ ಅನುಮತಿ ಸಿಕ್ಕಿದ ಬಳಿಕವೇ ರಸ್ತೆಗಿಳಿಯಲು ತೀರ್ಮಾನಿಸಲಾಗಿದೆ.

    ಸೋಂಕು ಹೆಚ್ಚಾಗಲು ಕಾರಣವೇನು..?
    ರಾಜ್ಯದ ಇತರೆ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಇಳಿಕೆಯಾದ್ರೂ ದಕ್ಷಿಣ ಕನ್ನಡದಲ್ಲಿ ಮಾತ್ರ ಸೋಂಕಿನ ಪ್ರಯಾಣ ಏರಿಕೆ ಆಗ್ತಾನೇ ಇದೆ. ಜಿಲ್ಲೆಯಲ್ಲಿ ನಿನ್ನೆ 374 ಪಾಸಿಟಿವ್ ಕೇಸ್ ದಾಖಲಾಗಿದ್ರೆ, 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಶೇ. 5.68 ಇದೆ. ಒಟ್ಟು 6,820 ಆಕ್ಟೀವ್ ಕೇಸ್‍ಗಳು ಜಿಲ್ಲೆಯಲ್ಲಿವೆ. ಈವರೆಗೂ 1,080 ಮಂದಿ ಕೊರೋನಾ ಹೆಮ್ಮಾರಿಗೆ ಬಲಿಯಾಗಿದ್ದಾರೆ.

    ಕೆಲ ದಿನಗಳಿಂದ ಜಿಲ್ಲೆಯಲ್ಲಿ ಪಾಸಿಟಿವಿಟಿ ಏರುತ್ತಲೇ ಇದೆ. ಇದಕ್ಕೆ ಕಾರಣ ಟೆಸ್ಟಿಂಗ್ ಪ್ರಕ್ರಿಯೆ. ಹೌದು, ಈ ಹಿಂದೆ ಜಿಲ್ಲೆಯಲ್ಲಿ ಸಾಮಾನ್ಯವಾಗಿ 2 ರಿಂದ 3 ಸಾವಿರ ಸ್ಯಾಂಪಲ್‍ಗಳನ್ನು ಆರ್‍ಟಿಪಿಸಿಆರ್ ಟೆಸ್ಟ್‍ಗೆ ಒಳಪಡಿಸಲಾಗ್ತಿತ್ತು. ಆದರೆ ಇದೀಗ ಜಿಲ್ಲಾಡಳಿತದ ಸೂಚನೆಯಂತೆ ದಿನವೊಂದಕ್ಕೆ 8 ರಿಂದ 9 ಸಾವಿರ ಕೊರೋನಾ ಟೆಸ್ಟಿಂಗ್ ನಡೀತಿದೆ. ಗ್ರಾಮಗಳಲ್ಲಿ ಕೊರೋನಾ ಟೆಸ್ಟಿಂಗ್ ಹೆಚ್ಚಾಗಿ ನಡೀತಿದ್ದು ಪಾಸಿಟಿವ್ ಕೇಸ್‍ಗಳು ದಾಖಲಾಗ್ತಾನೇ ಇವೆ.

  • ಬರೋಬ್ಬರಿ 54 ದಿನಗಳ ಬಳಿಕ ಇಂದಿನಿಂದ ಸಾರಿಗೆ ಬಸ್ ಸಂಚಾರ ಆರಂಭ

    ಬರೋಬ್ಬರಿ 54 ದಿನಗಳ ಬಳಿಕ ಇಂದಿನಿಂದ ಸಾರಿಗೆ ಬಸ್ ಸಂಚಾರ ಆರಂಭ

    ಬೆಂಗಳೂರು: ಬರೋಬ್ಬರಿ 54 ದಿನಗಳ ಬಳಿಕ ಸಾರಿಗೆ ಬಸ್ ಸಂಚಾರ ಆರಂಭವಾಗಿದೆ. ಇಂದಿನಿಂದ ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಬಸ್ ಸೇವೆ ಪುನರ್ ಆರಂಭವಾಗಿದೆ.

    ಹೌದು. ಇಂದು ಸುಮಾರು 2 ಸಾವಿರ ಬಿಎಂಟಿಸಿ ಬಸ್ಸುಗಳು ರಸ್ತೆಗಿಳಿಯಲಿವೆ. 3000 ಕೆಎಸ್‍ಆರ್‍ಟಿಸಿ, 2,000 ಈಶಾನ್ಯ ಸಾರಿಗೆ ಬಸ್ ಗಳು ಹಾಗೂ 1,500 ವಾಯುವ್ಯ ಸಾರಿಗೆ ಬಸ್ ಗಳು ಇಂದು ಸಂಚಾರ ಮಾಡಲಿವೆ. ಇದನ್ನೂ ಓದಿ: ಮತ್ತೆ ಬಿಜೆಪಿ ಜೊತೆ ಹೋಗೋಣ: ಸಿಎಂ ಠಾಕ್ರೆಗೆ ಪತ್ರ ಬರೆದ ಶಿವಸೇನೆ ಎಂಎಲ್‍ಎ

    ಬೆಳಗ್ಗೆ 6ರಿಂದ ಸಂಜೆ 7 ಗಂಟೆಯವರೆಗೆ ಬಸ್ ಸಂಚಾರ ಇರಲಿದೆ. ಈ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆಯೇ ಮೆಜೆಸ್ಟಿಕ್ ನಲ್ಲಿ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿರುವುದು ಕಂಡು ಬಂದಿದೆ. ಬಿಎಂಟಿಸಿ, ಕೆ ಎಸ್ ಆರ್ ಟಿಸಿ ಬಸ್ ಗಳಿಗಾಗಿ ಪ್ರಯಾಣಿಕರು ಕಾದು ಕುಳಿತಿದ್ದಾರೆ.

    ಇತ್ತ ಕೆಎಸ್‍ಆರ್‍ಟಿಸಿ ಸಂಚಾರಕ್ಕೆ ಅವಕಾಶ ಬೆನ್ನಲ್ಲೆ ಜನ ಊರಿನತ್ತ ಹೊರಟಿದ್ದಾರೆ. ಅನ್ ಲಾಕ್ ಹಿನ್ನೆಲೆ ಜನ ಊರುಗಳತ್ತ ತಂಡೋಪ ತಂಡವಾಗಿ ಹೊರಟಿದ್ದಾರೆ. ಸರ್ಕಾರಿ ಬಸ್ ಗಳಲ್ಲಿ ಕೇವಲ 50ರಷ್ಟು ಜನರಿಗೆ ಮಾತ್ರ ಅವಕಾಶ ಹಿನ್ನೆಲೆಯಲ್ಲಿ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ. ತುಮಕೂರು ರಸ್ತೆಯ ಗೋವರ್ಧನ ಬಸ್ ನಿಲ್ದಾಣದ ಬಳಿ ಊರಿನತ್ತ ಹೋಗಲು ಸರ್ಕಾರಿ ಬಸ್, ಖಾಸಗಿ ವಾಹನಗಳಿಗೆ ಜನ ಕಾದು ನಿಂತಿರುವುದು ಕಂಡು ಬಂದಿದೆ.

  • ಅನ್‍ಲಾಕ್ 2.0 ಬಿಬಿಎಂಪಿ ಪ್ರಸ್ತಾವನೆ: ಗೌರವ್ ಗುಪ್ತಾ

    ಅನ್‍ಲಾಕ್ 2.0 ಬಿಬಿಎಂಪಿ ಪ್ರಸ್ತಾವನೆ: ಗೌರವ್ ಗುಪ್ತಾ

    ಬೆಂಗಳೂರು: ಲಾಕ್‍ಡೌನ್ ರಿಲ್ಯಾಕ್ಸ್ ಎಲ್ಲ ವಲಯಕ್ಕೂ ಬೇಕಾಗಿದೆ. ಅದರಲ್ಲೂ ಆರ್ಥಿಕ ಚೇತರಿಕೆಗಾಗಿ ಬೇಡಿಕೆಗಳ ಸರಮಾಲೆ ಬರುತ್ತಿದೆ. ಸದ್ಯ ಬಿಬಿಎಂಪಿ ಈ ರೀತಿ ಆರ್ಥಿಕ ಚೇತರಿಕೆ ಹಾಗೂ ಕೊರೊನಾ ಮುನ್ನಚ್ಚರಿಕೆ ಎರಡನ್ನು ಆಧಾರವಾಗಿಸಿ ಏನೆಲ್ಲ ಓಪನ್ ಮಾಡಲು ಅವಕಾಶ ಇದೆ, ಯಾವುದೆಲ್ಲ ಬೇಡ ಅಂತ ಪಟ್ಟಿ ಸಿದ್ಧಪಡಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದೆ.

    ನಗರದಲ್ಲಿ ಈ ಸಂಬಂಧ ಬಿಬಿಎಂಪಿ ಚೀಫ್ ಕಮೀಷನರ್ ಗೌರವ್ ಗುಪ್ತಾ ಮಾತನಾಡಿ, ಅನ್ ಲಾಕ್ 2.0 ಜಾರಿ ವಿಚಾರವನ್ನು ಬಿಬಿಎಂಪಿ ಗಂಭೀರವಾಗಿ ಪರಿಗಣಿಸಿದೆ. ಅನ್ ಲಾಕ್ ಅದ ಮೇಲೆ ಸೋಂಕಿನ ಕಡೆ ಹೆಚ್ಚಿನ ಗಮನ ಹರಿಸಿದ್ವಿ. ನಾಲ್ಕೈದು ದಿನಗಳಿಂದ ಸೋಂಕಿನ ಪ್ರಮಾಣ ಯಥಾಸ್ಥಿತಿ ಇದೆ. ಜನ ಸಾಮನ್ಯರ ಜೀವನ ಸಹಜ ಸ್ಥಿತಿಗೆ ತರಬೇಕಿದೆ. ಇಂದು ಸಿಎಂ ಜತೆ ಅನ್‍ಲಾಕ್ ಬಗ್ಗೆ ಚರ್ಚೆ ಆಗುತ್ತದೆ. ಅಂಗಡಿ, ಕೈಗಾರಿಕೆಗಳನ್ನ ಆರಂಭಿಸೋ ಬಗ್ಗೆ ಚಿಂತನೆ ಇದೆ ಎಂಬ ಅಂಶವನ್ನು ಹೇಳಿದರು.

    ಬಸ್ ಗಳನ್ನ ಓಡಿಸೋ ಬಗ್ಗೆಯೂ ಚಿಂತನೆ ಇದೆ. ಕೋವಿಡ್ ನಿಯಮ ಪಾಲನೆ ಕಡ್ಡಾಯವಾಗಿದೆ. ಹೊಟೇಲ್ ಗಳಲ್ಲಿ ಕೂತು ಊಟ ಮಾಡುವ ಬಗ್ಗೆಯೂ ಇಂದು ನಿರ್ಧಾರವಾಗಲಿದೆ. ಕಮರ್ಷಿಯಲ್ ಕಾಂಪ್ಲೆಕ್ಸ್, ಮಾರ್ಕೇಟ್ ಆರಂಭಿಸುವ ಕುರಿತು ಇಂದು ನಿರ್ಧಾರ ಹೊರಬೀಳಬೇಕಾಗಿದೆ. ಮಾಲ್, ಸಿನೆಮಾ ಮಂದಿರಗಳ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಮಾಲ್, ಸಿನೆಮಾ ಮಂದಿರ ನಷ್ಟದಲ್ಲಿದೆ ಅಂತ ಓಪನ್ ಮಾಡಿದ್ರೆ ಕಷ್ಟವಾಗುತ್ತದೆ ಎಂದರು. ಇದನ್ನೂ ಓದಿ: ಅನ್‍ಲಾಕ್ ಬೆನ್ನಲ್ಲೇ ಮತ್ತೆ ಮಹಾನಗರಗಳತ್ತ ಯಾದಗಿರಿ ಜನರ ಮಹಾ ವಲಸೆ

    ಯಾವುದೇ ಹೆಜ್ಜೆ ಇಡಬೇಕು ಅಂದರೆ ಅತ್ಯಂತ ಜಾಗರೂಕರಾಗಿ ಇಡಬೇಕಿದೆ. ಹೀಗಾಗಿ ಸದ್ಯಕ್ಕೆ ಈ ವಿನಾಯಿತಿ ಬಗ್ಗೆ ಪ್ರಸ್ತಾಪ ನೀಡಿಲ್ಲ. ವಾಣಿಜ್ಯ ಚಟುವಟಿಕೆ ನಷ್ಟದಲ್ಲಿದೆ ಎಂಬ ಕಾರಣಕ್ಕೆ ಆಸ್ತಿ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಕಾರಣ ಮುಖ್ಯಮಂತ್ರಿಗಳು ಬಹುತೇಕ ವಲಯಗಳಿಗೆ ಪ್ಯಾಕೇಜ್ ಘೋಷಿಸಿದ್ದಾರೆ ಎಂದರು.

  • ಅನ್‍ಲಾಕ್‍ನಿಂದ ಸೋಂಕು ಹೆಚ್ಚಳ ಆದ್ರೆ ಕಠಿಣ ಕ್ರಮ: ಸುಧಾಕರ್

    ಅನ್‍ಲಾಕ್‍ನಿಂದ ಸೋಂಕು ಹೆಚ್ಚಳ ಆದ್ರೆ ಕಠಿಣ ಕ್ರಮ: ಸುಧಾಕರ್

    ಬೆಂಗಳೂರು: ಸೋಮವಾರದಿಂದ ಕೆಲ ಜಿಲ್ಲೆಗಳು ಹಾಗೂ ಕೆಲ ವಲಯಗಳಿಗೆ ಅನ್ ಲಾಕ್ ಘೋಷಣೆ ಮಾಡಿರುವ ಸರ್ಕಾರ ಒಂದು ವೇಳೆ ಅನ್ ಲಾಕ್ ನಿಂದ ಸೋಂಕು ಹೆಚ್ಚಳ ಆದ್ರೆ ಮತ್ತೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತೆ ಅಂತ ಎಚ್ಚರಿಕೆ ಕೊಟ್ಟಿದೆ. ಬೆಂಗಳೂರಿನಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ರಾಜ್ಯದಲ್ಲಿ ಅನ್ ಲಾಕ್ ನಿಂದ ಸೋಂಕು ಹೆಚ್ಚಾದರೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳೋದು ಅನಿವಾರ್ಯ ಅಂತ ಎಚ್ಚರಿಕೆ ನೀಡಿದ್ದಾರೆ.

    ಅನ್ ಲಾಕ್ ಮಾಡಿದರು ಜನರು ಎಚ್ಚರಿಕೆಯಿಂದ ಇರಬೇಕು. ಎರಡು ಡೋಸ್ ಲಸಿಕೆ ಪಡೆಯೋವರೆಗೂ ಜನ ಎಚ್ಚರವಾಗಿ ಇರಬೇಕು. ರಾಜ್ಯದಲ್ಲಿ ಕನಿಷ್ಟ ಶೇ.70 ಜನರಿಗೆ ಲಸಿಕೆ ಕಂಪ್ಲೀಟ್ ಆದ ಮೇಲೆ ನಾವು ಮೊದಲಿನಂತೆ ಆರಾಮಾಗಿ ಇರಬಹುದು. ಲಸಿಕೆ ಹಾಕಿಸಿಕೊಳ್ಳೋವರೆಗೂ ಯಾರೂ ಮೈ ಮರೆಯಬೇಡಿ ಅಂತ ಮನವಿ ಮಾಡಿದ್ರು.

    ರಾಜ್ಯದಲ್ಲಿ ಆರ್ಥಿಕ ನಷ್ಟ ಆಗಿದೆ. ಹೀಗಾಗಿ ಕೆಲ ವಿನಾಯ್ತಿ ಕೊಡಲಾಗಿದೆ. ಅಳೆದು ತೂಗಿ ನಿರ್ಧಾರ ಮಾಡಿದ್ದೇವೆ. ಒಂದು ವೇಳೆ ರಿಯಾಯ್ತಿಯಿಂದ ಸೋಂಕು ಹೆಚ್ಚಳ ಆದ್ರೆ ಮತ್ತೆ ಕಠಿಣ ಕ್ರಮ ಗ್ಯಾರಂಟಿ ತೆಗೆದುಕೊಳ್ತೀವಿ ಅಂತ ಎಚ್ಚರಿಕೆ ಕೊಟ್ರು. ಶೇ.10ಕ್ಕಿಂತ ಹೆಚ್ಚು ಸೋಂಕು ಇರೋ ಜಿಲ್ಲೆಗಳು ಗಂಭೀರವಾಗಿ ಪರಿಗಣಿಸಬೇಕು. ಶೇ.5 ಒಳಗೆ ಸೋಂಕು ಇರೋ ಜಿಲ್ಲೆಗಳು ಎಚ್ಚರ ತಪ್ಪಬಾರದು. ಹೆಚ್ಚು ಹೆಚ್ಚು ಟೆಸ್ಟ್ ಗಳನ್ನು ಮಾಡಲು ಕ್ರಮವಹಿಸಬೇಕು. ಅಂತರ್ ರಾಜ್ಯ, ಹೊರ ದೇಶದಿಂದ ಬರೋರಿಗೆ ಚೆಕ್ ಪಾಯಿಂಟ್ ಗಳಲ್ಲಿ ಕಡ್ಡಾಯವಾಗಿ ಟೆಸ್ಟ್ ಆಗಬೇಕು ಅಂತ ತಿಳಿಸಿದ್ರು.

    ಗ್ರಾಮೀಣ ಭಾಗದಲ್ಲಿ ಎಚ್ಚರವಹಿಸಬೇಕು. ಒಂದು ಗ್ರಾಮದಲ್ಲಿ 5 ಸೋಂಕಿತರು ಕಂಡು ಬಂದರೇ ಅ ಗ್ರಾಮವನ್ನೆ ಸೀಲ್ ಡೌನ್ ಮಾಡಬೇಕು. ಗ್ರಾಮ ಭಾಗದಲ್ಲಿ ಸೋಂಕು ಬಂದ ವ್ಯಕ್ತಿಯನ್ನ ಕೂಡಲೇ ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಬೇಕು ಅಂತ ಮನವಿ ಮಾಡಿದ್ರು. ಇದನ್ನೂ ಓದಿ: ಕೋವಿನ್ ಪೋರ್ಟಲ್ ಹ್ಯಾಕ್ ಆಗಿಲ್ಲ, ಸುಳ್ಳು ಸುದ್ದಿ- ಕೇಂದ್ರ ಸರ್ಕಾರ ಸ್ಪಷ್ಟನೆ

    ನಗರ ಭಾಗದಲ್ಲಿ ಜನ ಅನಗತ್ಯವಾಗಿ ಓಡಾಡಬಾರದು. ಬೆಂಗಳೂರು ನೋಡಿದ್ರೆ ನನಗೂ ಭಯ ಆಗುತ್ತೆ. ಸ್ವಲ್ಪ ಎಚ್ಚರ ತಪ್ಪಿದ್ರು ಆಪಾಯ ಗ್ಯಾರಂಟಿ. ಜನರು ಎಚ್ಚರಿಕೆಯಿಂದ ಇರಬೇಕು. ಸರ್ಕಾರದ ನಿಯಮ ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕು ಅಂತ ಮನವಿ ಮಾಡಿದ್ರು. 3-4 ತಿಂಗಳಲ್ಲಿ ರಾಜ್ಯದಲ್ಲಿ ಎಲ್ಲರಿಗೂ ಲಸಿಕೆ ಸಿಗುತ್ತೆ. ಅಲ್ಲಿಯವರೆಗೂ ಎಲ್ಲರೂ ಎಚ್ಚರವಾಗಿ ನಿಯಮ ಪಾಲನೆ ಮಾಡಬೇಕು ಅಂತ ಮನವಿ ಮಾಡಿದ್ರು.

    ಸರ್ಕಾರ ಸಾವಿನ ಸಂಖ್ಯೆ ಮುಚ್ಚಿಟ್ಟಿಲ್ಲ:
    ರಾಜ್ಯದಲ್ಲಿ ಸಾವಿನ ಸಂಖ್ಯೆಯನ್ನ ಸರ್ಕಾರ ಮುಚ್ಚಿಟ್ಟಿಲ್ಲ ಅಂತ ಆರೋಗ್ಯ ಸಚಿವ ಸುಧಾಕರ್ ಇದೇ ವೇಳೆ ಸ್ಪಷ್ಟಪಡಿಸಿದರು. ಸರ್ಕಾರ ಸಾವಿನ ಸಂಖ್ಯೆ ಮುಚ್ಚಿಟ್ಟಿಲ್ಲ. ಇದನ್ನ ಪದೇ ಪದೇ ಹೇಳುತ್ತಿದ್ದೇನೆ. ನಮ್ಮ ರಾಜ್ಯವನ್ನ ಬಿಹಾರಕ್ಕೆ ಹೋಲಿಸಬೇಡಿ. ಕರ್ನಾಟಕಕ್ಕೂ ಬಿಹಾರಕ್ಕೂ ಹೋಲಿಕೆ ಮಾಡೋದು ಸರಿಯಲ್ಲ. ಯಾವುದೇ ಮಾಹಿತಿ ನಾವು ಮುಚ್ಚಿಟ್ಟಿಲ್ಲ. ಅಂತಹ ಅವಕಾಶವೇ ಇಲ್ಲ ಅಂತ ಸಚಿವ ಸುಧಾಕರ್ ಸ್ಪಷ್ಟಪಡಿಸಿದರು.

  • ರಾಜ್ಯ ಅನ್‍ಲಾಕ್ ಆದ್ರೂ ದೇಗುಲ ತಕ್ಷಣ ತೆರೆಯಲ್ಲ: ಕೋಟ ಶ್ರೀನಿವಾಸ ಪೂಜಾರಿ

    ರಾಜ್ಯ ಅನ್‍ಲಾಕ್ ಆದ್ರೂ ದೇಗುಲ ತಕ್ಷಣ ತೆರೆಯಲ್ಲ: ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ: ಜೂನ್ 14ರ ನಂತರ ರಾಜ್ಯದಲ್ಲಿ ಅನ್ ಲಾಕ್ ಪ್ರಕ್ರಿಯೆಗಳು ಆರಂಭವಾಗುತ್ತದೆ. ಜನಜಂಗುಳಿ ಆಗುವ ಕಾರಣ ದೇಗುಲಗಳು ತಕ್ಷಣ ತೆರೆಯಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಮಾಡಿ ಬಳಿಕ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ಕೆಲವೇ ದಿನಗಳಲ್ಲಿ ಲಾಕ್ ಡೌನ್ ತೆರವಾಗುತ್ತದೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಹಂತ ಹಂತವಾಗಿ ಲಾಕ್​​ಡೌನ್ ಸಡಿಲಿಕೆ: ಸುಧಾಕರ್

    ಶೇಕಡಾ ಐದಕ್ಕಿಂತ ಕಡಿಮೆ ಪಾಸಿಟಿವಿಟಿ ಇದ್ರೆ ಬೇಗ ಅನ್ಲಾಕ್ ಆಗುತ್ತದೆ. ಏಕಾಏಕಿ ದೇವಸ್ಥಾನಗಳು ತೆರೆದರೆ ಸಮಸ್ಯೆ ಆಗುತ್ತದೆ. ಜನಜಂಗುಳಿ ಜಾಸ್ತಿಯಾಗುವ ಸಾಧ್ಯತೆಯಿದೆ. ಸ್ವಲ್ಪ ದಿನ ಬಿಟ್ಟು ದೇವಾಲಯ ತೆರೆಯುವ ಬಗ್ಗೆ ಚಿಂತನೆ ಇದೆ. ಆದಷ್ಟು ಬೇಗ ದೇವಸ್ಥಾನ ತೆರೆಯಲು ಕ್ರಮ ಕೈಗೊಳ್ಳಲಾಗುವುದು. ಯಾವತ್ತು ಮತ್ತು ಯಾವ ರೀತಿ ದೇವಸ್ಥಾನ ತೆರೆಯಬೇಕು ಎಂಬ ಬಗ್ಗೆ ಶೀಘ್ರ ನಿರ್ಧಾರ ಮಾಡುತ್ತೇವೆ ಎಂದರು.

  • ಸಿಎಂ ಬದಲಾವಣೆ ಚರ್ಚೆಯಿಂದ ಸರ್ಕಾರದ ಇಮೇಜ್‌ಗೆ ಧಕ್ಕೆ ಬರಲಿದೆ: ಶೆಟ್ಟರ್

    ಸಿಎಂ ಬದಲಾವಣೆ ಚರ್ಚೆಯಿಂದ ಸರ್ಕಾರದ ಇಮೇಜ್‌ಗೆ ಧಕ್ಕೆ ಬರಲಿದೆ: ಶೆಟ್ಟರ್

    – ಜೂನ್ 14ರ ನಂತ್ರ ಹಂತ ಹಂತವಾಗಿ ಅನ್ ಲಾಕ್

    ಹುಬ್ಬಳ್ಳಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ನಾಯಕತ್ವ ಬದಲಾವಣೆ ಚರ್ಚೆಯಿಂದ ಸಿಎಂ ಬಿಎಸ್ ಯಡಿಯೂರಪ್ಪ ಮನಸ್ಸಿಗೆ ಬೇಸರವಾಗಿದೆ. ಅಲ್ಲದೇ ಪದೇ ಪದೇ ನಾಯಕತ್ವ ಬದಲಾವಣೆ ಚರ್ಚೆ ನಡೆಯುವುದರಿಂದ ಸರ್ಕಾರದ ಇಮೇಜ್‌ಗೆ ಧಕ್ಕೆ ಬರಲಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಯಡಿಯೂರಪ್ಪರಿಗೆ ವಯಸ್ಸಾದ್ರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸಕ್ಕೆ ವಯಸ್ಸು ಅಡ್ಡಿ ಬಂದಿಲ್ಲ. ಹೈಕಮಾಂಡ್ ಮಟ್ಟದಲ್ಲೂ ನಾಯಕತ್ವ ಬದಲಾವಣೆ ವಿಚಾರ ಚರ್ಚೆಗೆ ಬಂದಿಲ್ಲ. ಹೀಗಾಗಿ ಪದೇ ಪದೇ ನಾಯಕತ್ವ ಬದಲಾವಣೆ ಪ್ರಶ್ನೆ ಕೇಳಿ ಬರುತ್ತಾ ಇರುವುದರಿಂದ ಬಿಎಸ್‍ವೈ ನಿನ್ನೆ ಆ ರೀತಿ ಹೇಳಿಕೆ ನೀಡಿದ್ದಾರೆ. ಆದರೆ ಸದ್ಯಕ್ಕೆ ಯಾವುದೇ ರೀತಿಯ ಬದಲಾವಣೆ ಇಲ್ಲವೆಂದರು.

    ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಎಲ್ಲಿಂದ ಶುರುವಾಗಿದೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಶಾಸಕರ ಸಹಿ ಸಂಗ್ರಹ ವಿಚಾರ ಸಹ ಕೇವಲ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಆದರೆ ಆ ರೀತಿಯ ಯಾವುದೇ ಬದಲಾವಣೆಗಳು ನಡೆದಿಲ್ಲವೆಂದು ಶೆಟ್ಟರ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಜೀನಾಮೆಗೆ ಸಿದ್ಧ, ಅವಮಾನ ಮಾಡಿ ಕೆಳಗೆ ಇಳಿಸುತ್ತೇವೆ ಎಂದರೆ ನಾನು ಬಗ್ಗಲ್ಲ

    ಹಂತಹಂತವಾಗಿ ಅನ್ ಲಾಕ್..!:
    ಜೂನ್ 14 ರಂದು ರಾಜ್ಯದಲ್ಲಿ ಲಾಕಡೌನ್ ಮುಕ್ತಾಯವಾಗಲಿದೆ. ಆದರೆ ಶೇ.5ಕ್ಕಿಂತ ಕಡಿಮೆ ಪಾಸಿಟಿವ್ ರೇಟ್ ಬರೋ ಮುನ್ನ ಅನ್ ಲಾಕ್ ಮಾಡೋದು ಅಸಾಧ್ಯವಾಗುತ್ತೆ. ಹೀಗಾಗಿ ಹಂತಹಂತವಾಗಿ ಅನಲಾಕ್ ಮಾಡಲಾಗುವುದೆಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ತಜ್ಞರು ಮೂರನೇ ಅಲೆ ಬರೋ ಎಚ್ಚರಿಕೆ ನೀಡಿದ್ದಾರೆ. ಆದರೆ ಮೂರನೇ ಅಲೆ ಬರುತ್ತೋ ಇಲ್ವೋ ಗೊತ್ತಿಲ್ಲ. ಏಕಾಏಕಿ ಅನ್‍ಲಾಕ್ ಮಾಡಿದ್ರೆ ಮತ್ತೆ ಕೊರೊನಾ ಹರಡುವ ಸಾಧ್ಯತೆಗಳು ಹೆಚ್ಚಿದೆ. ಹೀಗಾಗಿ ಹಂತಹಂತವಾಗಿ ಅನ್‍ಲಾಕ್ ಮಾಡುವ ಯೋಜನೆ ಇದೆ ಎಂದರು. ಇದನ್ನೂ ಓದಿ: ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ, ಬಿಎಸ್‍ವೈ ಸಿಎಂ ಆಗಿರೋದು ಅಷ್ಟೇ ಸತ್ಯ: ರೇಣುಕಾಚಾರ್ಯ