Tag: ಅನ್ಮೋಲ್

  • ಬ್ರಹ್ಮಚಾರಿಗೆ ಜೂನಿಯರ್ ರಾಕಿ ಭಾಯ್ ಸಾಥ್!

    ಬ್ರಹ್ಮಚಾರಿಗೆ ಜೂನಿಯರ್ ರಾಕಿ ಭಾಯ್ ಸಾಥ್!

    ಬೆಂಗಳೂರು: ಒಂದು ಕಾಲದಲ್ಲಿ ಕೆಜಿಎಫ್ ಅಂದರೆ ಬಹುತೇಕರ ಕಣ್ಣುಗಳಲ್ಲಿ ಚಿನ್ನವೇ ಫಳಫಳಿಸುತ್ತಿತ್ತು. ಆದರೀಗ ಈ ಹೆಸರು ಕೇಳಿದಾಕ್ಷಣ ಕನ್ನಡದ ಕೀರ್ತಿ ಪತಾಕೆಯನ್ನು ದೇಶಾದ್ಯಂತ ಎತ್ತಿ ಹಿಡಿದ ಯಶ್ ಅಭಿನಯದ ಚಿನ್ನದಂಥಾ ಚಿತ್ರ ನೆನಪಾಗುವಂತಾಗಿದೆ. ಅಷ್ಟರ ಮಟ್ಟಿಗೆ ಪುಷ್ಕಳ ಗೆಲುವು ತನ್ನದಾಗಿಸಿಕೊಂಡ ಈ ಸಿನಿಮಾದ ಭಾಗವಾಗಿದ್ದ ಪ್ರತಿಯೊಬ್ಬರೂ ಈಗ ಒಂದಿಲ್ಲೊಂದು ರೀತಿಯಲ್ಲಿ ಬ್ಯುಸಿಯಾಗಿದ್ದಾರೆ. ಭರಪೂರ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.

    ಕೆಜಿಎಫ್ ಚಿತ್ರದಲ್ಲಿ ಜ್ಯೂನಿಯರ್ ರಾಕಿ ಭಾಯ್ ಆಗಿ ನಟಿಸಿದ್ದ ಅನ್ಮೋಲ್ ಎಂಬ ಹುಡುಗ ಪ್ರೇಕ್ಷಕರೆಲ್ಲರ ಮನ ಗೆದ್ದಿದ್ದ. ಪುಟ್ಟ ವಯಸ್ಸಿನಲ್ಲಿಯೇ ನಟನೆಯ ಎಲ್ಲ ಪಟ್ಟುಗಳನ್ನು ಅರಗಿಸಿಕೊಂಡವನಂತೆ ನಟಿಸಿದ್ದ ಈ ಹುಡುಗನ ಲಕ್ಕು ಸದರಿ ಪಾತ್ರದಿಂದಲೇ ಖುಲಾಯಿಸಿ ಬಿಟ್ಟಿದೆ. ಇದಾದ ನಂತರ ಬಹಳಷ್ಟು ಅವಕಾಶಗಳೂ ಕೂಡಾ ಅನ್ಮೋಲ್ ನನ್ನು ಅರಸಿ ಬಂದಿವೆ. ಸದ್ಯಕ್ಕೆ ಅನ್ಮೋಲ್ ಬ್ರಹ್ಮಚಾರಿಯ ಗೆಟಪ್ಪಿನಲ್ಲಿರೋ ನೀನಾಸಂ ಸತೀಶ್ ಅವರ ಜೊತೆ ನಟಿಸೋ ಮೂಲಕ ಸುದ್ದಿ ಕೇಂದ್ರದಲ್ಲಿದ್ದಾನೆ.

    ನೀನಾಸಂ ಸತೀಶ್ ನಾಯಕನಾಗಿರೋ ಬ್ರಹ್ಮಚಾರಿ ಚಿತ್ರದ ಚಿತ್ರೀಕರಣವೀಗ ಭರದಿಂದ ಸಾಗುತ್ತಿದೆ. ಈ ಸೆಟ್‍ನಲ್ಲಿ ಅನ್ಮೋಲ್ ಜೊತೆಗಿರೋ ಫೋಟೋವೊಂದನ್ನು ಸತೀಶ್ ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರು ಮಾಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ಅನ್ಮೋಲ್ ಪಾತ್ರ ಹೇಗಿದೆ? ಇಲ್ಲಿಯೂ ಸತೀಶ್ ಅವರ ಜ್ಯೂನಿಯರ್ ಶೇಡಿನ ಪಾತ್ರವನ್ನೇನಾದರೂ ಆತ ಮಾಡಿದ್ದಾನಾ ಎಂಬುದೂ ಸೇರಿದಂತೆ ಯಾವ ವಿಚಾರವನ್ನೂ ಸತೀಶ್ ಅವರಾಗಲಿ, ಚಿತ್ರತಂಡವಾಗಲಿ ಬಿಟ್ಟು ಕೊಟ್ಟಿಲ್ಲ.

    ಬ್ರಹ್ಮಚಾರಿ ರೊಮ್ಯಾಂಟಿಕ್ ಕಾಮಿಡಿ ಜಾನರಿನ ಚಿತ್ರ. ಅಯೋಗ್ಯ ಚಿತ್ರದ ನಂತರ ಭರ್ಜರಿ ಯಶಸ್ಸಿನ ಅಲೆಯಲ್ಲಿರೋ ಸತೀಶ್ ಪಾಲಿಗೆ ಈ ಚಿತ್ರವೂ ಅಂಥಾದ್ದೇ ಗೆಲುವು ತಂದು ಕೊಡಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಈ ಚಿತ್ರದ ತಾರಾಗಣವೂ ಕೂಡಾ ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಕೆಜಿಎಫ್ ಖ್ಯಾತಿಯ ಅನ್ಮೋಲ್ ನಟಿಸುತ್ತಿರೋ ವಿಚಾರ ಮಾತ್ರವೇ ಬಯಲಾಗಿದೆ.

  • ಕೆಜಿಎಫ್‍ನಲ್ಲಿ ಅವಕಾಶ ಸಿಕ್ಕಿದ್ದು ಹೇಗೆ – ಬಾಲ ರಾಕಿ ಹೇಳ್ತಾನೆ ಓದಿ

    ಕೆಜಿಎಫ್‍ನಲ್ಲಿ ಅವಕಾಶ ಸಿಕ್ಕಿದ್ದು ಹೇಗೆ – ಬಾಲ ರಾಕಿ ಹೇಳ್ತಾನೆ ಓದಿ

    ಬೆಂಗಳೂರು: ಕನ್ನಡದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ನಲ್ಲಿ ಬಾಲನಟನಾಗಿ ಅಭಿನಯಿಸಿರುವ ಮಾಸ್ಟರ್ ಅನ್ಮೋಲ್ ಚಿತ್ರದ ಕುರಿತು ಪಬ್ಲಿಕ್ ಟಿವಿ ಜೊತೆ ಚಿತ್ರದ ಅನುಭವ ಹಂಚಿಕೊಂಡಿದ್ದಾನೆ.

    ಬಾಕ್ಸ್ ಆಫೀಸ್‍ನಲ್ಲಿ ದೂಳೆಬ್ಬಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದಲ್ಲಿ ಅನ್ಮೋಲ್ ಯಶ್ ಬಾಲ್ಯದ ಪಾತ್ರಧಾರಿಯಾಗಿ ಅಭಿನಯಿಸಿದ್ದಾನೆ. ಮಾಸ್ಟರ್ ಅನ್ಮೋಲ್ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೆಜಿಎಫ್ ಚಿತ್ರಕ್ಕೆ ಅವಕಾಶ ಹೇಗೆ ದೊರೆಯಿತು, ಚಿತ್ರದಲ್ಲಿ ನಟಿಸಿದ ಅನಿಭವವನ್ನು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾನೆ.

    ಹಲವು ವರ್ಷಗಳಿಂದ ಡ್ಯಾನ್ಸ್, ಜಿಮ್ನಾಸ್ಟಿಕ್, ಕರಾಟೆ ಹೀಗೆ ಎಲ್ಲತರಹದ ಕಲೆಯನ್ನು ನನ್ನ ಗುರುಗಳಾದ ಚಾಮರಾಜ್ ಸಾರ್ ಬಳಿ ಕಲಿಯುತ್ತಿದ್ದೇನೆ. ಕೆಜಿಎಫ್ ಚಿತ್ರದಲ್ಲಿ ಬಾಲನಟನಾಗಿ ನಟಿಸಲು ಅವರೇ ನಿರ್ದೇಶಕ ಪ್ರಶಾಂತ್ ನೀಲ್ ಬಳಿ ಮಾತನಾಡಿ ಅವಕಾಶ ಕೊಡಿಸಿದ್ದರು ಎಂದು ತಿಳಿಸಿದನು.

    ಮೊದಲು ಕೆಜಿಎಫ್ ಚಿತ್ರಕ್ಕೆ ಯಶ್ ಅವರು ನಾಯಕ ನಟ ಅಂತ ಗೊತ್ತಿರಲಿಲ್ಲ. ಬಳಿಕ ನಿರ್ದೇಶಕರು ಹೇಳಿದ ಮೇಲೆ ತಿಳಿಯಿತು. ಚಿತ್ರದಲ್ಲಿ ನಟಿಸುವಾಗ ನನ್ನ ಪೋಷಕರು, ಗುರುಗಳು ಹಾಗೂ ಕೆಜಿಎಫ್ ಚಿತ್ರ ತಂಡದವರು ತುಂಬಾ ಸರ್ಪೋಟ್ ಮಾಡಿದರು. ಇವತ್ತು ಬೆಳಗ್ಗೆ ಚಿತ್ರವನ್ನು ನಾನು ಚಿತ್ರಮಂದಿರಕ್ಕೆ ಹೋಗಿ ನೋಡಿದೆ. ಕೆಜಿಎಫ್ ಅಂತಹ ದೊಡ್ಡ ಚಿತ್ರದಲ್ಲಿ ನಟಿಸಿದಕ್ಕೆ ತುಂಬಾ ಖುಷಿಯಾಗ್ತಿದೆ. ಸುಮಾರು ಒಂದು ತಿಂಗಳು ಶೂಟಿಂಗ್ ಇತ್ತು, ಅದರಲ್ಲೂ ಮುಂಬೈನಲ್ಲಿ ಶೂಟಿಂಗ್ ನನಗೆ ತುಂಬಾ ಇಷ್ಟ. ಈ ಚಿತ್ರದಿಂದ ಬಹಳಷ್ಟು ಕಲಿತ್ತಿದ್ದೇನೆ. ಶೂಟಿಂಗ್ ಸಮಯದಲ್ಲಿ ತುಂಬಾ ಎಂಜಾಯ್ ಮಾಡಿದ್ದೀನಿ. ಚಿತ್ರವು ಕೂಡ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಅನ್ಮೋಲ್ ಅನುಭವ ಹಂಚಿಕೊಂಡನು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv