ನವದೆಹಲಿ: ರಾಜ್ಯದ ಅನ್ನಭಾಗ್ಯ ಯೋಜನೆಗೆ (Anna Bhagya Yojana) ಬೇಕಿರುವ ಅಗತ್ಯ ಅಕ್ಕಿ (Rice) ಪೂರೈಸಲು ಸಾಧ್ಯವಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪಿಯೂಷ್ ಗೋಯಲ್ (Piyush Goyal) ಹೇಳಿದ್ದಾರೆ ಎಂದು ರಾಜ್ಯದ ಆಹಾರ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಪ್ರತಿಕ್ರಿಯಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವರನ್ನು ಭೇಟಿ ಮಾಡಿ ಅನ್ನಭಾಗ್ಯ ಯೋಜನೆಗೆ ಅಗತ್ಯ ಅಕ್ಕಿ ಪೂರೈಕೆಗೆ ಮನವಿ ಮಾಡಿದೆ. ಆದರೆ ಅಕ್ಕಿ ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಆಶಾ ಭಾವನೆಯಿಂದ ಬಂದ ನಮಗೆ ಎರಡನೇ ಬಾರಿಗೆ ನಿರಾಸೆಯಾಗಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರದ ಬಳಿ ಸಾಕಷ್ಟು ಪ್ರಮಾಣದ ಅಕ್ಕಿ ಇದೆ. ಇದರಲ್ಲಿ ಪ್ರತಿ ತಿಂಗಳು ರಾಜ್ಯಕ್ಕೆ ಅಗತ್ಯ ಇರುವ 2.29 ಲಕ್ಷ ಮೆಟ್ರಿಕ್ ಟನ್ ಕೊಡಿ ಅಂತ ಕೇಳಿದರೂ ಕೊಡುತ್ತಿಲ್ಲ. ಇದರ ಹಿಂದೆ ರಾಜಕೀಯ ದುರುದ್ದೇಶ ಇದೆ ಎನಿಸುತ್ತಿದೆ. ಹೆಚ್ಚಿನ ಸ್ಟಾಕ್ ಇದ್ದರೂ ಯಾಕೆ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಂದ ಹೆಚ್ಚಿದ ಒತ್ತಡ; ಸಾರ್ವಜನಿಕರ ಎದುರೇ ಆಧಾರ್ ಕೇಂದ್ರದ ಸಿಬ್ಬಂದಿ ಕಣ್ಣೀರು
ಕೇಂದ್ರ ನಿರಾಕರಿಸಿರುವ ಹಿನ್ನೆಲೆ ನಾವು ನಮ್ಮ ದಾರಿ ಕಂಡುಕೊಳ್ಳಬೇಕಿದೆ. ಅನ್ನಭಾಗ್ಯ ಘೋಷಣೆ ಮಾಡಿದ್ದೇವೆ, ಅದನ್ನು ಜಾರಿ ಮಾಡುತ್ತೇವೆ. ಕೇಂದ್ರೀಯ ಭಂಡಾರ, ನಾಫೆಡ್ ಸೇರಿ 3 ಸ್ವತಂತ್ರ ಸಂಸ್ಥೆಗಳಿಗೆ ಮನವಿ ಮಾಡಿದ್ದೇವೆ. ಅವರ ಪ್ರತಿಕ್ರಿಯೆ ಬಳಿಕ ಎಲ್ಲಿಂದ ಅಕ್ಕಿ ಖರೀದಿಸಬೇಕು ಎಂಬುದನ್ನು ಪರಿಶೀಲಿಸುತ್ತೇವೆ. ಬೆಲೆಯಲ್ಲಿ ದೊಡ್ಡ ವ್ಯತಾಸ ಆಗುವುದಿಲ್ಲ ಎಂದುಕೊಂಡಿದ್ದೇವೆ. ಯೋಜನೆಗೆ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ ಎಂದರು. ಇದನ್ನೂ ಓದಿ: ಗೃಹಲಕ್ಷ್ಮಿಯನ್ನ ನಾನೇ ಹೋಲ್ಡ್ ಮಾಡಿಸಿದ್ದೇನೆ – ಡಿಸಿಎಂ ಡಿಕೆಶಿ
ತುಮಕೂರು: ಜನೋಪಕಾರಿ ಅಲ್ಲದ ಗೋಹತ್ಯೆ ನಿಷೇಧ ಹಾಗೂ ಮತಾಂತರ ನಿಷೇಧ ಕಾಯಿದೆಯನ್ನು ವಾಪಸ್ ಪಡೆಯುವುದಾಗಿ ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಪುನರುಚ್ಚರಿಸಿದ್ದಾರೆ.
ತುಮಕೂರಿನಲ್ಲಿ (Tumakuru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋವಿನ ಮೇಲೆ ಇರುವ ನಂಬಿಕೆ, ಪ್ರೀತಿಗೂ, ಸಂವಿಧಾನಕ್ಕೂ ವ್ಯತ್ಯಾಸ ಇದೆ. ಆರ್ಥಿಕತೆಯೇ ಬೇರೆ, ನಂಬಿಕೆಯೇ ಬೇರೆ. ಹೀಗಾಗಿ ಈ ಎರಡೂ ಕಾನೂನನ್ನು ರದ್ದುಗೊಳಿಸುತ್ತೇವೆ ಎಂದಿದ್ದಾರೆ.
ಅನ್ನ ಭಾಗ್ಯ ಯೋಜನೆ ಕುರಿತಂತೆ ಮಾತನಾಡಿದ ಪರಮೇಶ್ವರ್, ಈಗಾಗಲೇ ಸಿಎಂ ಸಿದ್ದರಾಮಯ್ಯ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಏನು ಮಾತುಕತೆಯಾಗಿದೆ ಎಂಬುದು ಗೊತ್ತಿಲ್ಲ. ಯಾವುದೋ ಮುಲಾಜಿಗೆ ಕೇಂದ್ರ ಅಕ್ಕಿ ಕೊಡುತ್ತಿಲ್ಲ. ಪ್ರತಿ ರಾಜ್ಯಕ್ಕೆ ಕೊಟ್ಟಂತೆ ಕರ್ನಾಟಕಕ್ಕೂ ಕೊಡುತ್ತಿದೆ. ಕೇಂದ್ರ ಕೊಟ್ಟ 5 ಕೆಜಿ ಸೇರಿಸಿ ಒಟ್ಟು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಣ್ಣ, ನಮಗೆಲ್ಲಾ ವಿಷದ ಬಾಟ್ಲಿ ಭಾಗ್ಯನೂ ಕೊಟ್ಬಿಡಿ: ಅಳಲು ತೋಡಿಕೊಂಡ ಆಟೋ ಚಾಲಕ
ನವದೆಹಲಿ: ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣದಿಂದ ಅಕ್ಕಿ (Rice) ಹೊಂದಿಸಿಕೊಳ್ಳುತ್ತಿರುವುದು ಸ್ವಲ್ಪ ವಿಳಂಬವಾಗುತ್ತಿದೆ. ಇದರಿಂದಾಗಿ ಜುಲೈ 1 ರಿಂದ ಅನ್ನಭಾಗ್ಯ ಯೋಜನೆ (Anna Bhagya Yojana) ಜಾರಿ ಅನುಮಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಕಿ ಹೊಂದಿಸಲು ಬೇರೆ ಬೇರೆ ರಾಜ್ಯಗಳ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ. ಯಾವ ರಾಜ್ಯಗಳಲ್ಲೂ ಬೇಡಿಕೆ ಇರುವಷ್ಟು ಸಾಮರ್ಥ್ಯದಲ್ಲಿ ಪೂರೈಕೆಯಾಗದ ಹಿನ್ನೆಲೆ ಯೋಜನೆ ಜಾರಿ ಮಾಡುವುದು ಕಷ್ಟವಾಗುತ್ತಿದೆ ಎಂದರು.
ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ಕೆಟ್ಟ ರಾಜಕೀಯ ಮಾಡುತ್ತಿದೆ. ಈಗಾಗಲೇ ತೆಲಂಗಾಣ, ಪಂಜಾಬ್ ಸೇರಿದಂತೆ ಎಲ್ಲಾ ಕಡೆ ಕೇಳಿದ್ದೇವೆ. ಆಂಧ್ರಪ್ರದೇಶದಿಂದ ಅಕ್ಕಿ ಆಮದು ಮಾಡಿಕೊಂಡರೆ ಪ್ರತಿ ಕೆಜಿಗೆ 42 ರೂ. ಆಗಲಿದೆ. 1 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಇದೆ ಆದರೆ ಅದು ಕೇವಲ ಒಂದು ತಿಂಗಳು ನೀಡಲು ಸಾಧ್ಯ ಎಂದು ಛತ್ತೀಸ್‌ಗಢ ಸರ್ಕಾರ ಹೇಳಿದೆ. ತೆಲಂಗಾಣ ಕೇವಲ ಗೋಧಿ ಮಾತ್ರ ಕೊಡೋಕೆ ಸಾಧ್ಯ ಅಂತ ಹೇಳಿದೆ ಎಂದು ತಿಳಿಸಿದರು. ಇದನ್ನೂ ಓದಿ: E-Rupi ಪೈಲಟ್ ಪ್ರಾಜೆಕ್ಟ್‌ಗೆ ಅನುಮತಿ ನೀಡಲು ಹೆಚ್.ಸಿ ಮಹದೇವಪ್ಪ ಮನವಿ
ಕರ್ನಾಟಕದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಅಕ್ಕಿ ಲಭ್ಯವಿಲ್ಲ. ಹೀಗಾಗಿ ಓಪನ್ ಮಾರ್ಕೆಟ್‌ಗೆ ಹೋಗಬೇಕು. ಇದಕ್ಕೆ ಟೆಂಡರ್ ಕರೆಯಬೇಕು ಈ ಎಲ್ಲ ಪ್ರಕ್ರಿಯೆಗೆ 2 ತಿಂಗಳು ಸಮಯ ತೆಗೆದುಕೊಳ್ಳಲಿದೆ. ಕೇಂದ್ರೀಯ ಭಂಡಾರ, ಎನ್‌ಸಿಸಿಎಫ್, ನಾಫೆಡ್‌ನಿಂದ ಅಕ್ಕಿ ಖರೀದಿಗೆ ಕೊಟೆಷನ್ ಕೇಳಿದೆ. ನಾಳೆ ಅವರು ದರಪಟ್ಟಿ ನೀಡಿದ ಬಳಿಕ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ. ಇದರಿಂದಾಗಿ ಜುಲೈ 1 ರಿಂದ ಅಕ್ಕಿ ನೀಡುವುದು ಕಷ್ಟ ಆಗಬಹುದು ಎಂದರು.
ಪೂರ್ಣಾವಧಿಯ ಸಿಎಂ ಎನ್ನುವ ಧೈರ್ಯ ಸಿದ್ದರಾಮಯ್ಯ ಅವರಿಗೆ ಇದೆಯೇ ಎನ್ನುವ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನು ಸಿಎಂ ಆಗಿದ್ದೇನೆ. ನಮ್ಮದು ಸಮ್ಮಿಶ್ರ ಸರ್ಕಾರ ಅಲ್ಲಾ, 136 ಶಾಸಕರು ನಮ್ಮ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಅವರು ನನ್ನನ್ನು ಆಯ್ಕೆ ಮಾಡಿದ್ದಾರೆ. ಉಳಿದ ಪ್ರಶ್ನೆ ಉದ್ಭವ ಆಗುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ಅವಧಿಯ ಬಿಡಿಎ, ಬಿಬಿಎಂಪಿ ಅಕ್ರಮಗಳ ತನಿಖೆಗೆ ಎಸ್‌ಐಟಿ ರಚನೆ: ಡಿಕೆಶಿ ಮಹತ್ವದ ಸುಳಿವು
ಮೈಸೂರು: ಸಂಸದ ಪ್ರತಾಪ್ ಸಿಂಹ (Pratap Simha) ಅವರಿಗೆ ತಲೆ ಕೆಟ್ಟಿದೆ. ಅರ್ಥವಿಲ್ಲದ ಹೇಳಿಕೆ ನೀಡುತ್ತಾ ಜಾತಿಗೆ ಒರೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ತಲೆ ಕೆಟ್ಟಿದೆ, ಅವರದ್ದು ಚಿಲ್ಲರೆ ಮನಸ್ಥಿತಿ ಎಂದು ಸಚಿವ ಎಂ.ಬಿ ಪಾಟೀಲ್ (MB Patil) ಗುಡುಗಿದ್ದಾರೆ.
ಪ್ರತಾಪ್ ಸಿಂಹ ಅವರಿಗೆ ತಲೆ ಕೆಟ್ಟಿದೆ, ಜಾತಿಗೆ ಒರೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದು ಅವರ ಚಿಲ್ಲರೆ ಮನಸ್ಥಿತಿ ತೋರಿಸುತ್ತಿದೆ. ಸಿದ್ದರಾಮಯ್ಯ ಅವ್ರು ನನ್ನ ಹೆಗಲ ಮೇಲೆ ಗನ್ ಇಟ್ಟು ಯಾರಿಗೂ ಗುಂಡು ಹೊಡೆಯುವ ಕೆಲಸ ಮಾಡಿಲ್ಲ. ನಾನೂ ಕೂಡ ಅದಕ್ಕೆ ಆಸ್ಪದ ಕೊಟ್ಟಿಲ್ಲ. ಹೊಡೆಯೋದಿದ್ದರೆ ನಾವೇ ಡೈರೆಕ್ಟ್ ಆಗಿ ಹೊಡಿಯುತ್ತೇವೆ. ನನ್ನ ಡಿ.ಕೆ ಶಿವಕುಮಾರ್ ಸಂಬಂಧ ಉತ್ತಮವಾಗಿದೆ. ಒಂದು ವಿಚಾರ ಬಂದಾಗ ಅಭಿಪ್ರಾಯ, ಭಿನ್ನಾಭಿಪ್ರಾಯ ಇರಬಹುದು. ಅದು ಪ್ರಜಾಪ್ರಭುತ್ವದಲ್ಲಿ ಸಹಜ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಎಳಸು ಅಂದ್ರೆ ಬೇಸರವಿಲ್ಲ, ಚೈಲ್ಡ್ ಆಗಿಯೇ ಪ್ರಶ್ನೆ ಕೇಳ್ತೀನಿ – ಪ್ರತಾಪ್ ಸಿಂಹ
ಇದೇ ವೇಳೆ BJP ಕೇಂದ್ರ ಸರ್ಕಾರ ಅಕ್ಕಿ ತಡೆಹಿಡಿದ ವಿಚಾರವಾಗಿ ಮಾತನಾಡಿ, ನಾವು ಕೇಂದ್ರಕ್ಕೆ ಉಚಿತವಾಗಿ ಅಕ್ಕಿ ಕೊಡಿ ಅಂತಾ ಹೇಳಿಲ್ಲ, ಹಣ ಕೊಡುತ್ತೇವೆ. ಮೊದಲು FCI ಅಧಿಕಾರಿಗಳು ಅಕ್ಕಿ ಕೊಡೋದಕ್ಕೆ ಒಪ್ಪಿದ್ದರು. ಆಮೇಲೆ ಕೇಂದ್ರ ಸರ್ಕಾರ ತಡೆಹಿಡಿದಿದೆ. ಇದು ಬಡವರ ವಿರುದ್ಧವಾಗಿ ಬಿಜೆಪಿ ಮಾಡುತ್ತಿರುವ ಸೇಡಿನ ರಾಜಕರಾಣವಾಗಿದೆ. ನಮ್ಮ ರಾಜ್ಯದ ಬಿಜೆಪಿ ನಾಯಕರು ರಾಜಕೀಯ ಮಾಡೋದು ಬಿಟ್ಟು, ಒಗ್ಗಟ್ಟಾಗಿ ಅಕ್ಕಿ ಕೊಡುವಂತೆ ಮನವಿ ಮಾಡಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಉರಿಯುವ ಬಿಸಿಲಿಗೆ 54 ಮಂದಿ ಬಲಿ, 400ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು
ಪ್ರತಾಪ್ ಸಿಂಹ ಹೇಳಿದ್ದೇನು?
ಎರಡು ದಿನಗಳ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪ್ರತಾಪ್ ಸಿಂಹ, ಎಂ.ಬಿ ಪಾಟೀಲ್ ಅವರ ಹೆಗಲ ಮೇಲೆ ಸಿದ್ದರಾಮಯ್ಯ ಇಟ್ಟು ಹೊಡೆದ ಗುಂಡು ಡಿಕೆ ಶಿವಕುಮಾರ್‌ಗೆ ತಗುಲಿಲ್ವಾ? ಯಡಿಯೂರಪ್ಪ ಜೈಲಿಗೆ ಹೋದರು ಎಂದು ಹಾದಿ ಬೀದಿಯಲ್ಲಿ ಎಂ.ಬಿ ಪಾಟೀಲ್, ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ಏನೂ ಮಾಡಿದೆ? ನನ್ನ ಹೆಗಲ ಮೇಲೆ ಯಾರು ಬಂದೂಕು ಇಟ್ಟಿಲ್ಲ. ಎಂ.ಬಿ ಪಾಟೀಲ್ ಮೇಲೆ ಯಾಕೆ ಸಿದ್ದರಾಮಯ್ಯ ಬಂದೂಕು ಇಟ್ಟು ಕೊಂಡಿದ್ದಾರೆ. ಯಡಿಯೂರಪ್ಪ ಜೈಲಿಗೆ ಹೋಗಲು ಕಾರಣ ಕಾಂಗ್ರೆಸ್ ನವರು. ಅಂದಿನ ರಾಜ್ಯಪಾಲ ಭಾರದ್ವಾಜ್ ಹೆಗಲ ಮೇಲೆ ಬಂದೂಕು ಇಟ್ಟು ಯಡಿಯೂರಪ್ಪ ಅವರ ಎದೆಗೆ ಹಾರಿಸಿದರು. ಭಾರದ್ವಾಜ್ ಅವರನ್ನ ಮುಂದಿಟ್ಟುಕೊಂಡು ಕಾಂಗ್ರೆಸ್ ಯಡಿಯೂರಪ್ಪ ವಿಚಾರದಲ್ಲಿ ಆಟ ಆಡಿದ್ದು ಮರೆತು ಹೋಯ್ತಾ? ಎಂದು ಪ್ರಶ್ನಿಸಿದ್ದರು.
ಬೆಂಗಳೂರು: ಕಮಿಷನ್‌ಗಾಗಿ ಹೊರ ರಾಜ್ಯಗಳಿಂದ ಅಕ್ಕಿ (Rice) ಖರೀದಿ ಮಾಡುತ್ತಾರೆ ಎಂದು ಶಾಸಕ ವಿಜಯೇಂದ್ರ (BY Vijayendra) ಮಾಡಿದ ಆರೋಪಕ್ಕೆ ಶನಿವಾರ ಸಿಎಂ ಸಿದ್ದರಾಮಯ್ಯ (Siddaramaiah) ಗುಡುಗಿದ್ದಾರೆ. ಇಲ್ಲಿ ಬೇಕೆಂದರೆ ಅವರೇ ಅಕ್ಕಿ ಕೊಡಿಸಲಿ. ವಿಜಯೇಂದ್ರ ಮಿಲ್‌ನಲ್ಲಿ ಇದೆಯಾ ಅಷ್ಟು ಅಕ್ಕಿ? ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಹೊರ ರಾಜ್ಯಗಳಿಂದ ಅಕ್ಕಿ ಖರೀದಿ ವಿಚಾರವಾಗಿ ಮಾತನಾಡಿದ ಸಿಎಂ, ತೆಲಂಗಾಣದ ಸಿಎಂ ಅವರೊಂದಿಗೆ ನಾನೇ ಖುದ್ದಾಗಿ ಮಾತನಾಡಿದ್ದೇನೆ. ಅಲ್ಲಿ ಅಕ್ಕಿ ಸಿಗುತ್ತಿಲ್ಲವಂತೆ. ನಮ್ಮ ಸಿಎಸ್ ಅವರಿಗೂ ಈ ಬಗ್ಗೆ ಮಾತನಾಡಲು ಹೇಳಿದ್ದೇನೆ. ಛತ್ತೀಸ್‌ಗಢ ರಾಜ್ಯದವರು 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ, ರಾಜಕೀಯ ಸಾಕಾಗಿದೆ – ಡಿಕೆ ಸುರೇಶ್ ವೈರಾಗ್ಯದ ಮಾತು
ಆಂಧ್ರ ಪ್ರದೇಶದವರೊಂದಿಗೆ ನಮ್ಮ ಸಿಎಸ್ ಅವರನ್ನು ಮಾತನಾಡಲು ಹೇಳಿದ್ದೇನೆ. ಛತ್ತೀಸ್‌ಗಢದ ಅಕ್ಕಿಗೆ ಸ್ವಲ್ಪ ದರ ಜಾಸ್ತಿ ಇದೆ. ಸಾಗಾಣೆಯ ವೆಚ್ಚವೂ ಜಾಸ್ತಿ ಬೀಳಲಿದೆ. ಈ ಬಗ್ಗೆ ಸಂಜೆ ಸಭೆ ಮಾಡಿ ಹೆಚ್ಚಿನ ಮಾಹಿತಿ ನೀಡುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದನ್ನೂ ಓದಿ: ಉಚಿತ ಪ್ರಯಾಣ ಹಿನ್ನೆಲೆ ಒಂದು ಇಡೀ ಬಸ್ ಬುಕ್ ಮಾಡೋಕೆ ಬಂದ ಅಜ್ಜಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಬಡವರ ವಿರೋಧಿ ಮತ್ತು ದ್ವೇಷಪೂರಿತ ನಿಲುವು ಬಹಿರಂಗವಾಗಿದೆ. ಕರ್ನಾಟಕಕ್ಕೆ (Karnataka) ಅಕ್ಕಿ ನೀಡಲು ಎಫ್‌ಸಿಐ (FCI) ನಿರಾಕರಿಸಿದೆ. ಪ್ರಧಾನಿ ಮೋದಿ ಮತ್ತು ಬಿಜೆಪಿ (BJP) ನಾಯಕರು ಸೋಲಿನ ಬಳಿಕ ಬಡವರಿಗೆ ಆಹಾರ ಧಾನ್ಯವನ್ನು ನಿರಾಕರಿಸುವಷ್ಟು ಕುರುಡರಾಗಬಹುದಾ? ಎಂದು ಕಾಂಗ್ರೆಸ್ (Congress) ಉಸ್ತುವಾರಿ ರಣದೀಪ್ ಸುರ್ಜೆವಾಲ (Randeep Surjewala) ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ (Delhi) ಮಾತನಾಡಿದ ಸುರ್ಜೆವಾಲ, ಅನ್ನ ಭಾಗ್ಯ ನೀಡುವುದು ಕಾಂಗ್ರೆಸ್ ಸರ್ಕಾರದ ಆಶಯವಾಗಿತ್ತು. ಸುಮಾರು 4.42 ಕೋಟಿ ಜನರಿಗೆ ಅಕ್ಕಿ ನೀಡುವ ಉದ್ದೇಶ ಹೊಂದಿತ್ತು. ಕೇಂದ್ರ ಸರ್ಕಾರಕ್ಕೆ ಖಾಸಗಿ ಅವರಿಗೆ ಅಕ್ಕಿ ನೀಡಲು ಸಮಸ್ಯೆ ಇಲ್ಲ. ಆದರೆ ರಾಜ್ಯ ಸರ್ಕಾರಗಳಿಗೆ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ಮೂಲಕ ಬಿಜೆಪಿ ಬಡವರ ವಿರೋಧಿಸಿ ಎನ್ನುವುದು ಸಾಬೀತಾಗಿದೆ ಎಂದರು.
ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಸೋಲಿನ ಬಳಿಕ ಬಡವರಿಗೆ ಆಹಾರ ಧಾನ್ಯವನ್ನು ನಿರಾಕರಿಸುವಷ್ಟು ಕುರುಡರಾಗಬಹುದಾ? ಎಫ್‌ಸಿಐ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿಯನ್ನು ವ್ಯಾಪಾರಿಗಳಿಗೆ ಮಾರಾಟ ಮಾಡಲು ಅನುಮತಿ ಇದೆ. ಆದರೆ ಸರಿಯಾದ ಹಣ ಪಾವತಿಯ ನಂತರ ರಾಜ್ಯಗಳಿಗೆ ಮಾರಾಟ ಮಾಡುವುದನ್ನು ಏಕೆ ನಿಷೇಧಿಸಲಾಗಿದೆ? ಕಾಂಗ್ರೆಸ್ ಸರ್ಕಾರವು ಬಡವರಿಗೆ ಅಕ್ಕಿಯನ್ನು ನೀಡುವಂತೆ ಎಫ್‌ಸಿಐಗೆ ಕೇಳಿದ ಮರುದಿನವೇ ಮೋದಿ ಸರ್ಕಾರವು ಎಫ್‌ಸಿಐ ಅಕ್ಕಿಯನ್ನು ರಾಜ್ಯಗಳಿಗೆ ಮಾರಾಟ ಮಾಡಬಾರದು ಆದರೆ ವ್ಯಾಪಾರಿಗಳಿಗೆ ಮಾತ್ರ ಮಾರಾಟ ಮಾಡಬಹುದು ಎಂದು ನಿರ್ದೇಶಿಸಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮದ್ಯ ಸಾಗಿಸುತ್ತಿದ್ದ ಆರ್ಮಿ ಫ್ಯಾಮಿಲಿಯನ್ನು ಬಸ್‌ನಿಂದ ಇಳಿಸಿದ್ದಕ್ಕೆ ಕಿರಿಕ್
ಕಾಂಗ್ರೆಸ್ ಸರ್ಕಾರ ಬಿಪಿಎಲ್ ಕುಟುಂಬಗಳು, ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಬಡವರಿಗೆ ಉಚಿತ ಅಕ್ಕಿ ನೀಡುವುದನ್ನು ತಡೆಯುವುದು ಇದರ ಹುನ್ನಾರ ಅಲ್ಲವೇ? ಖಾಸಗಿ ಅವರಿಗೆ ಮಾರಾಟ ಮಾಡಿ ಲಾಭ ಗಳಿಸಲು ಅವಕಾಶ ನೀಡುತ್ತಿದ್ದಿಯೇ? ಕರ್ನಾಟಕದ ಜನರಿಗೆ ಅನ್ಯಾಯವಾಗುವಾಗ ಸಂಸದರು ಯಾಕೆ ಸುಮ್ಮನೆ ಕೂತಿದ್ದಾರೆ? ಅವರು ಯಾಕೆ ರಾಜೀನಾಮೆ ನೀಡಬಾರದು? ಮೋದಿ ಸರ್ಕಾರದ ನೀತಿ ಬಗ್ಗೆ ಜೆಡಿಎಸ್ ಯಾಕೆ ಮೌನವಾಗಿದೆ? ಮೋದಿ ಸರ್ಕಾರ ಅನ್ನಭಾಗ್ಯ ತಡೆಯಲು ಏನೇ ಮಾಡಿದರು ಅದು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿ, ಜೆಡಿಎಸ್ ಒತ್ತಡಕ್ಕೆ ಒಳಗಾಗಿವೆ. ನಾನು ಹೋಟೆಲ್‌ನಲ್ಲಿದ್ದೆ. ಅದೇ ಹೋಟೆಲ್‌ನಲ್ಲಿ ನಮ್ಮ ಪಿಸಿಸಿ ಅಧ್ಯಕ್ಷರು, ಸಚಿವರು ಸಭೆ ನಡೆಸುತ್ತಿದ್ದರು. ಸಭೆ ಬಳಿಕ ನಾನು ಕಾಫಿ ಕುಡಿಯಲು ಅಲ್ಲಿಗೆ ತೆರಳಿದ್ದೆ. ನಾನು ನಮ್ಮ ಪಕ್ಷದ ನಾಯಕರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ? ಜೆಪಿ ನಡ್ಡಾ ಯಾವುದೇ ರಾಜ್ಯದ ಸಿಎಂ ಭೇಟಿಯಾದರೆ ಸಮಸ್ಯೆ ಇಲ್ಲ. ನಾನು ನಮ್ಮ ನಾಯಕರನ್ನು ಭೇಟಿಯಾದರೆ ಅದರಲ್ಲಿ ಅಪರಾಧ ಏನಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ವಾಪಸ್ – ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ
– ತೆರೆದ ಮಾರುಕಟ್ಟೆ ಮಾರಾಟ ಯೋಜನೆಯಡಿ ರಾಜ್ಯಗಳಿಗೆ ಅಕ್ಕಿ ಮಾರಾಟ ಸ್ಥಗಿತಗೊಳಿಸಿ ಕೇಂದ್ರ ಪತ್ರ
ಬೆಂಗಳೂರು: ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ಕೈಗೊಂಡು ಕನ್ನಡಿಗರ ಪಾಲು, ಬಡವರ ಪಾಲನ್ನು ಕಸಿದುಕೊಂಡಿದೆ. ಕೇಂದ್ರ ಸರ್ಕಾರ ಕನ್ನಡಿಗರ, ಬಡವರ ವಿರೋಧಿ ಎನ್ನುವುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.
ಶಕ್ತಿ ಭವನದಲ್ಲಿ ಬುಧವಾರ ಅನ್ನಭಾಗ್ಯ ಯೋಜನೆಗೆ (Anna Bhagya Scheme) ಸಂಬಂಧಿಸಿದಂತೆ ಕರೆಯಲಾಗಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಈಗಾಗಲೇ ಒಂದು ಗ್ಯಾರಂಟಿಯನ್ನು ಜಾರಿ ಮಾಡಿದ್ದು, ಜುಲೈ 1 ರಂದು ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ತಿಂಗಳು ತಲಾ 10 ಕೆಜಿ ಅಕ್ಕಿ ನೀಡಲು ತೀರ್ಮಾನಿಸಲಾಗಿದ್ದ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಮಂಡಳಿ ಉಪಪ್ರಧಾನ ವ್ಯವಸ್ಥಾಪಕರಿಗೆ 2.28 ಲಕ್ಷ ಮೆಟ್ರಿಕ್ ಟನ್ ಅಗತ್ಯವಿದೆ ಎಂದು ಕೋರಿ ಜೂ.9 ರಂದು ಪತ್ರ ಬರೆಯಲಾಗಿತ್ತು. ಇದಕ್ಕೆ ಜೂ.12 ರಂದು ಭಾರತೀಯ ಆಹಾರ ನಿಗಮವು ಒಪ್ಪಿಗೆ ಸೂಚಿಸಿ ಕ್ವಿಂಟಾಲ್‌ಗೆ 3,400 ರೂ. ದರದಲ್ಲಿ ಅಕ್ಕಿ ಪೂರೈಕೆ ಮಾಡವುದಾಗಿ ಪತ್ರ ಬರೆದಿತ್ತು. ಇದಾದ ನಂತರ ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ತೆಗೆದುಕೊಂಡಿದೆ ಎಂದು ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ತಿಂಗಳಿಗೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು, ಕೇಂದ್ರ ಕೊಡಲ್ಲ ಅಂತಾ ಹೇಳ್ತಿದೆ – ಸಿಎಂ ಕಿಡಿ
ಜೂ.13 ರಂದು ಭಾರತ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯವು ಭಾರತೀಯ ಆಹಾರ ನಿಗಮಕ್ಕೆ ಪತ್ರ ಬರೆದು 15 ಲಕ್ಷ ಮೆ. ಟನ್ ಗೋಧಿ ಹಾಗೂ ಅಕ್ಕಿಯನ್ನು ತೆರೆದ ಮಾರುಕಟ್ಟೆಯಲ್ಲಿ ಮಾರಾಟ ಯೋಜನೆಯಡಿ (ಒಎಂಎಸ್‌ಎಸ್‌ಡಿ) ಮಾರಾಟ ಮಾಡಲು ಸೂಚಿಸಿದೆ. ಅಲ್ಲದೇ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ, ಇತರ ರಾಜ್ಯಗಳಿಗೆ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿರುವ ಪತ್ರದ ವಿವರಗಳನ್ನು ಓದಿ ಹೇಳಿದ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರ ರಾಜಕೀಯವಾಗಿ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದರು.
ಎಫ್‌ಸಿಐ ಒಪ್ಪಿಗೆ ಪತ್ರದ ಆಧಾರದ ಮೇಲೆ ಜು.1 ರಿಂದ ಜಾರಿ ಮಾಡಲಾಗುವುದು ಎಂದು ಘೋಷಿಸಿದೆವು. ಎಫ್‌ಸಿಐನ ಪ್ರಧಾನ ವ್ಯವಸ್ಥಾಪಕ ಹರೀಶ್ ಎಂಬವರು 7 ಲಕ್ಷ ಟನ್ ಅಕ್ಕಿ ಸಂಗ್ರಹ ಇದೆ ಎಂದು ತಿಳಿಸಿದ್ದಾರೆ. ಅನ್ನಭಾಗ್ಯ ಕಾರ್ಯಕ್ರಮವನ್ನು ಜಾರಿಗೊಳಿಸದೇ ಇರುವಂತೆ ಅಡ್ಡಿಪಡಿಸುವುದು ಇದರ ಹಿಂದಿನ ಉದ್ದೇಶ ಎಂದು ಸಿಎಂ ಆರೋಪ ಮಾಡಿದರು. ಇದನ್ನೂ ಓದಿ: ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲ ಭಾಗಿ ವಿವಾದ : ಕಾಂಗ್ರೆಸ್ ವಿರುದ್ಧ ಫೀಲ್ಡಿಗಿಳಿದ ವಿಪಕ್ಷಗಳು
ಭತ್ತ ಬೆಳೆಯುವ ರಾಜ್ಯಗಳಾದ ಪಂಜಾಬ್, ತೆಲಂಗಾಣ, ಆಂಧ್ರ, ಛತ್ತೀಸ್‍ಗಢ, ಹರಿಯಾಣದವರಿಗೆ ಈಗಾಗಲೇ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿದ್ದಾರೆ. ಪಂಜಾಬ್ ರಾಜ್ಯದಲ್ಲಿ ಅಕ್ಕಿ ಸಂಗ್ರಹವಿಲ್ಲದಿರುವುದರಿಂದ ಅಕ್ಕಿ ಪೂರೈಸಲು ಆಗುವುದಿಲ್ಲ ಎಂದಿದ್ದಾರೆ. ನಾಳೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರು ತೆಲಂಗಾಣ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದಾರೆ. ಅಂತೆಯೇ ಛತ್ತೀಸ್‌ಗಢ ರಾಜ್ಯದಿಂದಲೂ ಲಭ್ಯವಿರುವ ಅಕ್ಕಿಯ ಮಾಹಿತಿ ಇಂದು ಸಂಜೆಯೊಳಗೆ ಲಭಿಸಲಿದೆ. ನಾಳೆ ಸಂಜೆಯೊಳಗೆ ಒಂದು ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.
ಅಕ್ಕಿ ಇಟ್ಟುಕೊಂಡು ಕೊಡಲಾಗುವುದಿಲ್ಲ ಎಂದರೆ ಇವರನ್ನು ಬಡವರ ವಿರೋಧಿಗಳು ಎಂದು ಕರೆಯಬೇಕು. ಕೇಂದ್ರ ಸರ್ಕಾರ ಉಚಿತವಾಗಿಯೇನೂ ಅಕ್ಕಿ ನೀಡುವುದಿಲ್ಲ. ನಾವು ಹಣ ನೀಡಿ ಪಡೆಯುವುದು. ಇತರರಿಗೆ ಕೊಡುವ ರೀತಿಯಲ್ಲಿ ನಮಗೂ ಕೊಡುತ್ತಿದ್ದರು. ಆದರೆ ಈಗ ಕರ್ನಾಟಕ ರಾಜ್ಯ ಸರ್ಕಾರಕ್ಕೆ ನೀಡುವುದಿಲ್ಲ ಎನ್ನುವ ತೀರ್ಮಾನಕ್ಕೆ ಅವರು ಬಂದಿದ್ದಾರೆ. ಈಗಲೂ ನಾವು ಪ್ರಯತ್ನ ಮಾಡುತ್ತಿದ್ದೇವೆ. ಪುನಃ ಮನವಿ ಮಾಡುವುದು ಇದ್ದೇ ಇರುತ್ತದೆ. ಆದರೆ ಈ ರೀತಿ ಮಾಡಿರುವುದರಿಂದ ಇದೊಂದು ಷಡ್ಯಂತ್ರ ಎಂದೇ ಪರಿಗಣಿಸಬೇಕಾಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಉಪಸ್ಥಿತರಿದ್ದರು.
– ಎಫ್‌ಸಿಐ ಅಕ್ಕಿ ಕೊಡಲು ಕೇಂದ್ರ ಅಡ್ಡಗಾಲು
– ಕೇಂದ್ರ ಬಿಜೆಪಿ ಬಡವರ ವಿರೋಧಿ ಸರ್ಕಾರ
– ಛತ್ತಿಸ್‌ಗಡ, ತೆಲಂಗಾಣ ವಿವಿಧ ರಾಜ್ಯಗಳೊಂದಿಗೆ ಮಾತುಕತೆ
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿದೆ. ಪ್ರತಿ ತಿಂಗಳು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಪೂರೈಸುತ್ತೇವೆ ಅಂತಾ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್‌ಸಿಐ) ಒಪ್ಪಿಕೊಂಡು, ಈಗ ಕೇಂದ್ರ ಸರ್ಕಾರದ ಕೊಡದಂತೆ ತಡೆಹಿಡಿದಿದೆ. ಕೇಂದ್ರ ಸರ್ಕಾರ ಬಡವರ ವಿರೋಧಿ ಸರ್ಕಾರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಹಾಗೂ ಎಫ್‌ಸಿಐ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಶಕ್ತಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆ ಜಾರಿ ಮಾಡೋದಕ್ಕೆ ನಮ್ಮ ಎಫ್‌ಸಿಎ ಜತೆ ನಮ್ಮ ಅಧಿಕಾರಿಗಳು ಮಾತಾಡಿದ್ದರು. ನಾನೂ ಕೂಡ ನೇರವಾಗಿ ಮಾತನಾಡಿದ್ದೆ. 10 ಕೆಜಿ ಅಕ್ಕಿ ಕೊಡಲು ನಮಗೆ ಪ್ರತಿ ತಿಂಗಳು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು ಅಂತಾ ಹೇಳಿದ್ದೆ. ಪ್ರತಿ ಕೆಜಿಗೆ 34 ರೂ. + 2 ರೂ. 60 ಪೈಸೆ ಟ್ರಾನ್ಸ್‌ಪೋರ್ಟ್ ಶುಲ್ಕ ಸೇರಿ ಒಂದು ಕೆಜಿ ಅಕ್ಕಿಗೆ 36.60 ರೂ.ಗೆ ಖರೀದಿ ಮಾಡಲು ತೀರ್ಮಾನ ಮಾಡಿದ್ದೆವು. ಎಫ್‌ಸಿಐ ಸಹ ಒಪ್ಪಿಕೊಂಡಿತ್ತು. ಇದರಿಂದ ರಾಜ್ಯ ಸರ್ಕಾರಕ್ಕೆ ತಿಂಗಳಿಗೆ 840 ಕೋಟಿ ರೂ.ನಂತೆ ವರ್ಷಕ್ಕೆ 10,092 ಕೋಟಿ ರೂ. ನಮಗೆ ಬೇಕಾಗುತ್ತದೆ. ನಮ್ಮ ಕ್ಯಾಬಿನೆಟ್‌ನಲ್ಲೂ ಕೊಡೋದಕ್ಕೆ ತೀರ್ಮಾನ ಮಾಡಿದ್ದೇವೆ ಎಂದು ನುಡಿದರು.
ನಾವು ಜೂನ್ 9 ರಂದು ಅಕ್ಕಿ ಕೋರಿ ಪತ್ರ ಬರೆದಿದ್ದೆವು. ಅಕ್ಕಿ ಕೊಡುತ್ತೇವೆ ಅಂತಾ ಒಪ್ಪಿ ಜೂನ್ 12 ರಂದು ಎಫ್‌ಸಿಐ ನಮಗೆ ಪತ್ರ ಬರೆದಿದ್ದರು. 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡೋದಕ್ಕೆ ಒಪ್ಪಿ ಪತ್ರ ಕಳಿಸಿದ್ರು. 13,819.485 ಮೆಟ್ರಿಕ್ ಟನ್ ಅಕ್ಕಿ ಕಳಿಸುವ ಬಗ್ಗೆ ಮತ್ತೊಂದು ಪತ್ರವನ್ನೂ ಬರೆದಿದ್ರು. ಒಟ್ಟು ಎರಡು ಒಪ್ಪಿಗೆ ಪತ್ರ ಬರೆದಿದ್ದರು. ಅದಾದ ಮೇಲೆ ಕೇಂದ್ರ ಸರ್ಕಾರ ಜೂನ್ 13 ರಂದು ಎಫ್‌ಸಿಐ ನವರಿಗೆ ಕೇಂದ್ರ ಸರ್ಕಾರದ ಗ್ರಾಹಕರ ಸರಬರಾಜು ಇಲಾಖೆ ಪತ್ರ ಬರೆದಿದೆ. ಓಪನ್ ಮಾರ್ಕೆಟ್ ನಲ್ಲಿ ಅಕ್ಕಿ, ಗೋದಿ ಮಾರಾಟ ನಿಲ್ಲಿಸುವ ಬಗ್ಗೆ ಕೇಂದ್ರ ಪತ್ರ ಬರೆದಿದೆ. ಗ್ರಾಹಕರ ಸರಬರಾಜು ಇಲಾಖೆಯಿಂದ ಎಫ್‌ಸಿಐಗೆ ಬರೆದ ಪತ್ರದಲ್ಲಿ ಅಕ್ಕಿ, ಗೋಧಿ ಮಾರಾಟ ಸ್ಥಗಿತ ಬಗ್ಗೆ ಪತ್ರ ಬರೆಯಲಾಗಿದೆ ಎಂದು ಪ್ರಸ್ತಾಪಿಸಿದರು.
ಎಫ್‌ಸಿಐ ನಮ್ಮ ರಾಜ್ಯಕ್ಕೆ ಅಕ್ಕಿ ಕೊಡೋದಾಗಿ ಒಪ್ಪಿದ್ದರಿಂದ ನಾವು ಅಕ್ಕಿ ಜುಲೈ 1 ರಿಂದ ಕೊಡೋದಾಗಿ ಘೋಷಣೆ ಮಾಡಿದ್ವಿ. ಇವರ ಮೇಲೆ ನಂಬಿಕೆಯಿಟ್ಟು ಅಕ್ಕಿ ಕೊಡೋದಾಗಿ ಘೋಷಣೆ ಮಾಡಿದ್ದವು. ಈ ಕೇಂದ್ರ ಸರ್ಕಾರ ಈ ರೀತಿ ತೀರ್ಮಾನ ಮಾಡ್ತಿರೋದು ರಾಜಕೀಯ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದಿತ್ತು. ಅಕ್ಕಿ ಇಟ್ಟುಕೊಂಡು ಕೊಡೋದಿಲ್ಲ ಅಂತಾ ಹೇಳ್ತಿರೋದು ಜನವಿರೋಧಿ ನೀತಿಯಾಗಿದೆ. ಈ ಯೋಜನೆಯಿಂದ ಕಾಂಗ್ರೆಸ್ ಸರ್ಕಾರದಕ್ಕೆ ಒಳ್ಳೆಯ ಹೆಸರು ಬರುತ್ತದೆ. ಅವರು ಜನಕಲ್ಯಾಣ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂಬ ಅಸೂಯೆಯಿಂದ ಮಹಾತ್ವಾಕಾಂಶಿ ಯೋಜನೆಗೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕುವ ಪ್ರಯತ್ನ ಮಾಡ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಬೇರೆ ರಾಜ್ಯಗಳೊಂದಿಗೆ ಮಾತುಕತೆ: ನಮ್ಮ ಅನ್ನಭಾಗ್ಯ ಯೋಜನೆಯನ್ನ ನಿಲ್ಲಿಸೋದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ನಮಗೆ ಅಕ್ಕಿ ಸಿಗದಂತೆ ಮಾಡ್ತಿದೆ. ನಾವು ಈಗ ತೆಲಂಗಾಣ, ಛತ್ತೀಸ್‌ಗಡ, ತೆಲಂಗಾಣ ಸರ್ಕಾರದವರ ಜತೆ ಅಕ್ಕಿ ಕೊಡುವಂತೆ ಮಾತುಕತೆ ಮಾಡ್ತಿದೀವಿ. ಪಂಜಾಬ್‌ನಲ್ಲಿ ಅಕ್ಕಿ ಇಲ್ಲ ಅಂದಿದ್ದಾರೆ. ನಮ್ಮ ಸರ್ಕಾರ ಬಡವರ ಕಲ್ಯಾಣ ಮಾಡಲು ಹೊರಟರೇ ಕೇಂದ್ರದವರು ಅದಕ್ಕೆ ಅಡ್ಡಗಾಲು ಹಾಕ್ತಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಬಡವರ ವಿರೋಧಿಗಳು. ಅಕ್ಕಿ ಇಟ್ಟುಕೊಂಡು ಇಲ್ಲಾ ಅಂತಿದ್ದಾರೆ. ಅವರೇನು ಪುಕ್ಕಟ್ಟೆ ಕೊಡಲ್ಲ. ದುಡ್ಡು ಕೊಡ್ತೀವಿ ಅಂದರೂ ಅಕ್ಕಿ ಇಲ್ಲ ಅಂತಿದ್ದಾರೆ ಎಂದಿ ಕಿಡಿ ಕಾರಿದರು.