Tag: ಅನ್ನಪೂರ್ಣೇಶ್ವರಿ ದೇವರ

  • ಸರ್ಕಾರ ಅನುಮತಿ ನೀಡಿದ್ರೂ ಸದ್ಯಕ್ಕಿಲ್ಲ ಅನ್ನಪೂರ್ಣೇಶ್ವರಿ ದರ್ಶನ

    ಸರ್ಕಾರ ಅನುಮತಿ ನೀಡಿದ್ರೂ ಸದ್ಯಕ್ಕಿಲ್ಲ ಅನ್ನಪೂರ್ಣೇಶ್ವರಿ ದರ್ಶನ

    ಚಿಕ್ಕಮಗಳೂರು: ಸರ್ಕಾರ ಜೂನ್ 8ರಿಂದ ರಾಜ್ಯಾದ್ಯಂತ ಎಲ್ಲಾ ದೇವಾಲಯಗಳಲ್ಲೂ ಭಕ್ತರ ಪ್ರವೇಶಕ್ಕೆ ಅನುವು ಮಾಡಿಕೊಟ್ಟರೂ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದರ್ಶನ ಸದ್ಯಕ್ಕಿಲ್ಲ.

    ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ಭಕ್ತರ ದರ್ಶನಕ್ಕೆ ಬ್ರೇಕ್ ಹಾಕಿದೆ. ಭಕ್ತರ ಹಿತದೃಷ್ಟಿ ಹಾಗೂ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಈ ಕ್ರಮ ಕೈಗೊಂಡಿದೆ. ಹೊರನಾಡು ಸುಪ್ರಸಿದ್ಧ ಅನ್ನಪೂರ್ಣೇಶ್ವರಿ ದೇವರ ದರ್ಶನಕ್ಕೆ ಸದ್ಯಕ್ಕೆ ಬ್ರೇಕ್ ಹಾಕಿರುವ ಆಡಳಿತ ಮಂಡಳಿ ಭಕ್ತರು ಸಹಕರಿಸುವಂತೆ ಮನವಿ ಮಾಡಿದೆ.

    ದೇಶ ಹಾಗೂ ರಾಜ್ಯಾದ್ಯಂತ ವೈರಸ್ ಅತಿವೇಗವಾಗಿ ಹರಡುತ್ತಿದ್ದು ಒಂದು ವೇಳೆ ದೇವಾಲಯದಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಸಮಸ್ಯೆ ಎದುರಾಗಬಹುದು ಹಾಗೂ ಕೆಲವೊಂದು ಧಾರ್ಮಿಕ ಪೂಜಾ ಕೈಂಕರ್ಯಗಳಿಗೆ ಸಮಸ್ಯೆಯಾಗುವ ನಿಟ್ಟಿನಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಆಡಳಿತ ಮಂಡಳಿ ಈ ಕ್ರಮಕೈಕೊಂಡಿದ್ದು, ದೇವಾಲಯದ ಧರ್ಮದರ್ಶಿ ಭೀಮೇಶ್ವರ ಜೋಶಿ ಭಕ್ತರಲ್ಲಿ ಮನವಿ ಮಾಡಿದ್ದಾರೆ.

    ಕೇವಲ ಆನ್‍ಲೈನ್ ಮೂಲಕ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡುವ ಮೂಲಕ ಭಕ್ತರಿಗೆ ಪಾರ್ಸೆಲ್ ಮೂಲಕ ಪ್ರಸಾದವನ್ನು ಕಳುಹಿಸಿಕೊಡಲಾಗುವುದು ಎಂದು ತಿಳಿಸಿದೆ. ಆ ಮೂಲಕ ಸರ್ಕಾರ ಜೂನ್ 8ರಿಂದ ದೇವಾಲಯಗಳ ಪ್ರವೇಶಕ್ಕೆ ಅನುಮತಿ ಕೊಟ್ಟರೂ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಆಡಳಿತ ಮಂಡಳಿ ಭಕ್ತರ ಹಿತದೃಷ್ಠಿಯಿಂದ ಭಕ್ತರಿಗೆ ಯಾವುದೇ ಪ್ರವೇಶ ನೀಡದಿರಲು ತೀರ್ಮಾನ ಕೈಗೊಂಡಿದೆ.