Tag: ಅನೇಕಲ್

  • ಪೊಲೀಸರ ಮೇಲೆ ಹಲ್ಲೆಗೆ ಯತ್ನ – ರೌಡಿಶೀಟರ್‌ಗೆ ಗುಂಡೇಟು

    ಪೊಲೀಸರ ಮೇಲೆ ಹಲ್ಲೆಗೆ ಯತ್ನ – ರೌಡಿಶೀಟರ್‌ಗೆ ಗುಂಡೇಟು

    ಅನೇಕಲ್: ಕೊಲೆ ಆರೋಪಿಯ ಬಂಧನಕ್ಕೆ ತೆರಳಿದ್ದ ವೇಳೆ ಆತ ಪೊಲೀಸರ (Police) ಮೇಲೆ ಹಲ್ಲೆಗೆ ಮುಂದಾಗಿದ್ದು, ಆತನ ಕಾಲಿಗೆ ಗುಂಡೇಟು ನೀಡಿ ಬಂಧಿಸಿದ ಘಟನೆ ಬಂಡಾಪುರ ಸಮೀಪದ ಮಡಿವಾಳದಲ್ಲಿ ನೆಡೆದಿದೆ.

    ರೌಡಿಶೀಟರ್ ಸುನೀಲ್ ಅಲಿಯಾಸ್ ಹಾವೇರಿ, ಅನೇಕಲ್‍ಗೆ (Anekal) ಬರುವ ಮಾಹಿತಿ ಆಧರಿಸಿ ಆತನ ಬಂಧನಕ್ಕೆ ಪೊಲೀಸರು ತೆರಳಿದ್ದರು. ಈ ವೇಳೆ ಆರೋಪಿ ಬರುವುದನ್ನು ಗಮನಿಸಿದ ಪೊಲೀಸರು ಆತನಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಆತ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಅತ್ತಿಬೆಲೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಘವ್ ಗೌಡ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

    ಕಳೆದ ನವೆಂಬರ್‌ನಲ್ಲಿ ಜಿಗಣಿ ಬಳಿ ರೌಡಿಶೀಟರ್ ಮನೋಜ್ ಗ್ಯಾಂಗ್ ಮೇಲೆ ಅಟ್ಯಾಕ್ ನಡೆದಿತ್ತು. ಈ ಪ್ರಕರಣ ಸಂಬಂಧಿಸಿದಂತೆ ಜಿಗಣಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದಾದ ಬಳಿಕ ಸುನೀಲ್‌ ತಲೆಮರೆಸಿಕೊಂಡಿದ್ದ. ಅಲ್ಲದೇ, ಆರೋಪಿ ವಿರುದ್ಧ ಮರಸೂರು ಗೇಟ್ ಪೆಟ್ರೋಲ್ ಬಂಕ್ ಗಲಾಟೆ, ಒಂದು ಕೊಲೆ ಎರಡು ಕೊಲೆ ಯತ್ನ ಸೇರಿದಂತೆ ಒಟ್ಟು 7 ಪ್ರಕರಣಗಳಿವೆ. ಆತನ ವಿರುದ್ಧ ಅರೆಸ್ಟ್‌ ವಾರೆಂಟ್‌ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ರೌಡಿಶೀಟರ್ ನಡೆಸಿದ ಹಲ್ಲೆಯಿಂದ ವಿನಯ್ ಎಂಬ ಕಾನ್‌ಸ್ಟೇಬಲ್ ಕೈಗೆ ಗಾಯವಾಗಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿ ಹಾಗೂ ರೌಡಿಶೀಟರ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್‍ಪಿ ನಾಗೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಬೆಂಗಳೂರು| ವುಡ್‌ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ದುರಂತ – ಕೋಟ್ಯಂತರ ಮೌಲ್ಯದ ವಸ್ತುಗಳು ಭಸ್ಮ

    ಬೆಂಗಳೂರು| ವುಡ್‌ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ದುರಂತ – ಕೋಟ್ಯಂತರ ಮೌಲ್ಯದ ವಸ್ತುಗಳು ಭಸ್ಮ

    ಬೆಂಗಳೂರು ಗ್ರಾಮಾಂತರ: ಅತ್ತಿಬೆಲೆ ಸಮೀಪದ ಯಡವನಹಳ್ಳಿ ಬಳಿ ಇರುವ ವುಡ್‌ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದ್ದು, ಕೋಟ್ಯಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

    ಶ್ರೀರಾಮ್ ವುಡ್‌ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನಗಳ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಿದವು.

    ಎಕರೆಗಟ್ಟಲೆ ಪ್ರದೇಶದಲ್ಲಿ ಕಾರ್ಖಾನೆ ಇದೆ. ಹೆದ್ದಾರಿಗೆ ಹೊಂದಿಕೊಂಡಿರುವ ಹಿನ್ನೆಲೆ ಆತಂಕ ಮೂಡಿಸಿದೆ. ಭಾರೀ ಪ್ರಮಾಣದಲ್ಲಿ ಬೆಂಕಿಯ ಕೆನ್ನಾಲಿಗೆ ಆವರಿಸಿತ್ತು. ಮೂರು ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ ನಡೆಸಲಾಯಿತು.

    ಆಶೀರ್ವಾದ್ ಕಂಪನಿಯವರು ಹತ್ತು ಕಡೆಗಳಲ್ಲಿ ಬೆಂಕಿ ಆರಿಸಲು ಸಹಕರಿಸಿದರು. ಸಿಬ್ಬಂದಿಯು ಹತ್ತು ಪೈಪ್‌ ಮೂಲಕ ಪಕ್ಕದ ‌ಕಂಪನಿಯ ಬೆಂಕಿ ಆರಿಸುತ್ತಿದ್ದಾರೆ. ಸದ್ಯ ಒಳಗಡೆ ಯಾರೂ ಇಲ್ಲ ಎನ್ನುವ ಮಾಹಿತಿ ಸಿಕ್ಕಿದೆ. ಅಧಿಕೃತ ಮಾಹಿತಿ ಸಿಕ್ಕ‌ ಬಳಿಕವಷ್ಟೇ ಸ್ಪಷ್ಟವಾಗಲಿದೆ.

    ಹರ್ಷದ್ ಪಟೇಲ್ ಎಂವವರಿಗೆ ಸೇರಿದ ಕಾರ್ಖಾನೆ ಇದ್ದಾಗಿದ್ದು, ಸುಮಾರು ಐದು ಕೋಟಿಗೂ ಹೆಚ್ಚು ಬೆಲೆ‌ ಬಾಳುವ ವುಡ್ ಬೆಂಕಿಗೆ ಆಹುತಿಯಾಗಿದೆ. ಆರಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳಿಂದ ಬೆಂಕಿ ಬೆಂಕಿ ನಂದಿಸುವ ಕಾರ್ಯ ನಡೆಯಿತು.

  • ಆನೇಕಲ್‍ನಲ್ಲಿ ಮತ್ತೊಂದು ಓಮಿಕ್ರಾನ್ ಪ್ರಕರಣ ದೃಢ – ರಾಜ್ಯದಲ್ಲಿ 39ಕ್ಕೇರಿದ ಸಂಖ್ಯೆ

    ಆನೇಕಲ್‍ನಲ್ಲಿ ಮತ್ತೊಂದು ಓಮಿಕ್ರಾನ್ ಪ್ರಕರಣ ದೃಢ – ರಾಜ್ಯದಲ್ಲಿ 39ಕ್ಕೇರಿದ ಸಂಖ್ಯೆ

    ಆನೇಕಲ್: ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಮಧ್ಯೆ ಆನೇಕಲ್ ನಲ್ಲಿ ಮತ್ತೊಂದು ಓಮಿಕ್ರಾನ್ ಪ್ರಕರಣ ದೃಢಪಟ್ಟಿದೆ.

    ಆನೇಕಲ್ ತಾಲೂಕಿನ ಬಳ್ಳೂರು ಅಪಾರ್ಟ್ಮೆಂಟ್ ಗೆ ಡಿ.23ರಂದು ದಕ್ಷಿಣ ಆಫ್ರಿಕಾದಿಂದ ವ್ಯಕ್ತಿಯೊಬ್ಬರು ಬಂದಿದ್ದು, ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಓಮಿಕ್ರಾನ್ ಇರುವುದು ಪತ್ತೆಯಾಗಿದೆ. ಇದನ್ನೂ ಓದಿ: ಟ್ರೆಡ್‍ಮಿಲ್‍ನಲ್ಲಿ 12 ಗಂಟೆಗಳಲ್ಲಿ 66 ಕಿಮೀ ಯುವಕನ ನಾನ್‍ಸ್ಟಾಪ್ ಓಟ

    ದಕ್ಷಿಣ ಆಫ್ರಿಕಾದಿಂದ ದೇವನಹಳ್ಳಿ ಏರ್ಪೋರ್ಟ್‍ಗೆ ಆಗಮಿಸಿದ್ದ ವ್ಯಕ್ತಿಯನ್ನು ತಪಾಸಣೆ ಮಾಡಲಾಗಿತ್ತು. ಅಲ್ಲಿಂದ ಆತ ನೇರವಾಗಿ ಬಳ್ಳೂರು ಅಪಾಟ್ರ್ಮೆಂಟ್ ಒಂದಕ್ಕೆ ಬಂದಿದ್ದ. ರಿಪೋರ್ಟ್ ಪಾಸಿಟಿವ್ ಬಂದ ಹಿನ್ನೆಲೆ, ಆರೋಗ್ಯ ಇಲಾಖೆ ಡಿ.24ರಂದು ಆತನನ್ನು ಬೋರಿಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದೆ.

    ಆತನ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಎಲ್ಲರ ವರದಿಯೂ ನೆಗೆಟಿವ್ ಬಂದಿದೆ. ಪ್ರಸ್ತುತ ಬಳ್ಳೂರು ಅಪಾರ್ಟ್ಮೆಂಟ್ ಬಳಿ ಆರೋಗ್ಯ ಇಲಾಖೆ ಸಿಬ್ಬಂದಿ ಬೀಡುಬಿಟ್ಟಿದ್ದು, ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಕಟ್ಟೆಚ್ಚರ ವಿಧಿಸಲಾಗಿದೆ. ಇದನ್ನೂ ಓದಿ: ಸಂಸತ್ತಿನಲ್ಲೇ ಪರಸ್ಪರ ಹೊಡೆದಾಡಿಕೊಂಡ ಜನಪ್ರತಿನಿಧಿಗಳು

    ರಾಜ್ಯದಲ್ಲಿ ಈವರೆಗೆ ಒಟ್ಟು 39 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.

  • ಕನ್ನಡ ಶಾಲೆಗೆ ಹೊಸ ರೂಪಕೊಟ್ಟ ಯುವ ಬ್ರಿಗೇಡ್ ತಂಡ

    ಕನ್ನಡ ಶಾಲೆಗೆ ಹೊಸ ರೂಪಕೊಟ್ಟ ಯುವ ಬ್ರಿಗೇಡ್ ತಂಡ

    – ಯುವಕರ ನಡೆಗೆ ಪ್ರಶಂಸೆ

    ಬೆಂಗಳೂರು: ರಾಜ್ಯದ ಗಡಿಭಾಗವಾದ ಆನೇಕಲ್ ತಾಲೂಕಿನ ಸೊಲೂರು ಗ್ರಾಮದ ಕನ್ನಡ ಶಾಲೆಗೆ ಹೊಸ ರೂಪ ಕೊಟ್ಟು ನವೀಕರಿಸುವ ಮೂಲಕ ಶಕ್ತಿ ಸೇವಾ ಟ್ರಸ್ಟ್ ಹಾಗೂ ವಿವೇಕಾನಂದ ಯುವ ಬ್ರಿಗೇಡ್ ತಂಡದ ಯುವಕರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ಶಾಲೆಯ ನೂತನ ಕಟ್ಟಡವನ್ನ ಉದ್ಘಾಟನೆ ಮಾಡಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೊಲೂರಿನ ವಿನೋಬ ಭಾವೆ ಸರ್ಕಾರಿ ಶಾಲೆ ಭೇಟಿ ಕೊಟ್ಟು ನೂತನ ಕೊಠಡಿಗಳ ಉದ್ಘಾಟನೆ ನೆರವೇರಿಸಿದರು. ಸುಮಾರು 35 ಲಕ್ಷ ವೆಚ್ಚ ಮಾಡಿ ಶಾಲೆಯ ಮೊದಲ ಮಹಡಿಯಲ್ಲಿ ಮೂರು ಅತ್ಯಾಧುನಿಕ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಅತ್ಯಾಧುನಿಕ ಶೌಚಾಲಯವನ್ನು ನಿರ್ಮಿಸಲಾಗಿದೆ. ಹೀಗಾಗಿ ಖುದ್ದು ಸಚಿವರೇ ಶಾಲೆಯನ್ನು ವೀಕ್ಷಣೆ ಮಾಡಿ ಯುವ ಬ್ರಿಗೇಡ್ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

    ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಗಡಿಭಾಗದ ಕನ್ನಡ ಶಾಲೆಗಳು ನಿಜಕ್ಕೂ ಶೋಚನೀಯ ಸ್ಥಿತಿಯಲ್ಲಿದ್ದು ಅವುಗಳನ್ನು ಅಭಿವೃದ್ಧಿ ಮಾಡುವ ಮೂಲಕ ಕನ್ನಡ ಶಾಲೆಗಳನ್ನು ಉನ್ನತೀಕರಿಸುವ ಕೆಲಸ ಇಂದು ಸೊಲೂರಿನಲ್ಲಿ ನಡೆದಿದೆ. ಚಕ್ರವರ್ತಿ ಸೂಲಿಬೆಲೆಯವರ ಯುವ ಬ್ರಿಗೇಡ್ ಸದಸ್ಯರು ರಾಜ್ಯದ ಹಲವು ಕಡೆಗಳಲ್ಲಿ ಕೈಗಾರಿಕೆಗಳ ಜೊತೆಗೂಡಿ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಸಮಾಜದ ಮೇಲಿನ ಕಳಕಳಿ ಇದೇ ರೀತಿ ಮುಂದುವರಿಯಲಿ ಎಂದರು.

    ಭಗವಾನ್ ಅವರ ವಿವಾದಾತ್ಮಕ ಪುಸ್ತಕದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸುರೇಶ್ ಕುಮಾರ್, ಚರ್ಚೆ ಬೇಡ ಭಗವಾನ್ ಪುಸ್ತಕ ಖರೀದಿ ಮಾಡಿಲ್ಲ. ಈ ಬಗ್ಗೆ ಫೇಸ್‍ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದೇನೆ ಎಂದು ತಿಳಿಸಿದರು.

    ಯುವ ಬ್ರಿಗೇಡ್ ರಾಜ್ಯಾಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಸೋಲೂರಿನ ಸರ್ಕಾರಿ ಶಾಲಾ ಕಟ್ಟ ತೀರಾ ಕೆಟ್ಟ ಸ್ಥಿತಿಯಲ್ಲಿತ್ತು. ನಮ್ಮ ಸದಸ್ಯರೊಬ್ಬರು ಇದನ್ನು ನಮ್ಮ ಗಮನಕ್ಕೆ ತಂದರು. ನಾವು ಕಂಪನಿಯ ಅಡಿಯಲ್ಲಿ 22 ಲಕ್ಷ ಹಾಗೂ ನಮ್ಮ ಯುವ ಬ್ರಿಗೇಡ್ ಸದಸ್ಯರು ಸಾಮಾಜಿಕ ಜಾಲತಾಣದ ಮೂಲಕ ಹಣವನ್ನು ದಾನಿಗಳಿಂದ ಸಂಗ್ರಹಿಸಿ ಒಟ್ಟು 35 ಲಕ್ಷ ವೆಚ್ಚ ಮಾಡಿ ಸರ್ಕಾರಿ ಶಾಲೆಗೆ ಮೂರು ಹೊಸ ಕಟ್ಟಡ ನಿರ್ಮಿಸಿ ಹೊಸ ರೂಪವನ್ನು ನೀಡಿದ್ದೇವೆ. ಶಿಕ್ಷಣ ಸಚಿವರು ನೂತನ ಕಟ್ಟಡವನ್ನು ಉದ್ಘಾಟನೆ ಮಾಡಿರುವುದು ನಿಜಕ್ಕೂ ಇನ್ನು ಹೆಚ್ಚು ಸಂತಸ ನೀಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ನಿಧಿ ಕದಿಯಲು ಹೋದ ಚೋರರ ಮೇಲೆ ಕುಸಿದ ಪಾಳು ಮಂಟಪ- ಓರ್ವ ಸಾವು

    ನಿಧಿ ಕದಿಯಲು ಹೋದ ಚೋರರ ಮೇಲೆ ಕುಸಿದ ಪಾಳು ಮಂಟಪ- ಓರ್ವ ಸಾವು

    ಆನೇಕಲ್: ನಿಧಿ ಕದಿಯಲು ಹೋದ ಕಳ್ಳರ ಮೇಲೆ ಪಾಳು ಬಿದ್ದ ಮಂಟಪ ಕುಸಿದು ಓರ್ವ ಮೃತಪಟ್ಟು, ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಹಿಂಡಿಗನಾಳ ಗ್ರಾಮದಲ್ಲಿ ನಡೆದಿದೆ.

    ಇದೇ ಗ್ರಾಮದ ಗ್ರಾಮದ ಸುರೇಶ್ (23) ನಿಧಿ ಮಂಟಪದ ಕೆಳಗೆ ಸಿಲುಕಿ ಮೃತಪಟ್ಟಿರುವ ದುರ್ದೈವಿ. ಒಟ್ಟು 9 ಜನರ ತಂಡ ಹಿಂಡಿಗನಾಳ ಗ್ರಾಮದ ಹೆದ್ದಾರಿ ರಸ್ತೆಯ ಬಳಿ ಇರುವ ಸುಮಾರು 1000 ವರ್ಷಗಳ ಪುರಾತನ ಸರೋವರ ಆಂಜನೇಯ ಸ್ವಾಮಿ ದೇವಾಲಯದ ನಿಧಿಗೆ ಕನ್ನ ಹಾಕಲು ಮುಂದಾಗಿದ್ದಾರೆ.

    ನಿಧಿ ತೆಗೆಯಲು ಈ ಚೋರರು ಮುಂದಾದಾಗ ದೇವಾಲಯ ಪುರಾತನವಾದ್ದರಿಂದ ಮಂಟಪ ಇದ್ದಕ್ಕಿದ್ದಂತೆ ಕುಸಿದಿದೆ. ಪರಿಣಾಮ ಮಂಟಪದ ಅಡಿಯಲ್ಲಿ ಸಿಲುಕಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಉಳಿದಂತೆ ಮಂಟಪದ ಅಡಿಯಲ್ಲಿ 3 ಜನ ಸಿಲುಕಿಕೊಂಡಿದ್ದಾರೆ.

    ಈ ಸಮಯದಲ್ಲಿ ಮಂಟಪದ ಅಡಿಯಲ್ಲಿ ಸಿಲುಕಿಕೊಂಡವರನ್ನು ರಕ್ಷಿಸುವ ಸಲುವಾಗಿ ಜೊತೆಯಲ್ಲಿಯೇ ನಿಧಿ ತೆಗೆಯಲು ಬಂದಂತಹ ಇತರೆ ಸಹಚರರು 108 ಅಂಬುಲೆನ್ಸ್ ಗೆ ಕರೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬಂದ ಅಂಬುಲೆನ್ಸ್ ಚಾಲಕನು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

    ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಕೆಂಬಡಿಗಾನಹಳ್ಳಿ ಗ್ರಾಮದ ಶ್ರೀನಿವಾಸ (22) ಮತ್ತು ಮಂಜುನಾಥ್ (23) ಹಾಗೂ ಯಲಹಂಕದ ಸಬಾಸಿನ್ (22) ಎಂಬವರನ್ನ ರಕ್ಷಿಸಿ ವಶಕ್ಕೆ ಪಡೆದಿದ್ದಾರೆ. ಮಧ್ಯರಾತ್ರಿ 12 ಗಂಟೆಯ ಸಮಯದಲ್ಲಿ ಈ ದುಷ್ಕರ್ಮಿಗಳು ದೇವಾಲಯದಲ್ಲಿ ನಿಧಿ ತೆಗೆಯಲು ಮುಂದಾದ ವೇಳೆ ಈ ಘಟನೆ ನಡೆದಿದೆ.

    ಈ ಸಂಬಂಧ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಇತಿಹಾಸ ಪ್ರಸಿದ್ಧ ಮದ್ದೂರಮ್ಮ ದೇವಿ ಜಾತ್ರೆಗೆ ರೈಲ್ವೆ ಹೈಟೆನ್ಷನ್ ವೈರ್ ಅಡ್ಡಿ

    ಇತಿಹಾಸ ಪ್ರಸಿದ್ಧ ಮದ್ದೂರಮ್ಮ ದೇವಿ ಜಾತ್ರೆಗೆ ರೈಲ್ವೆ ಹೈಟೆನ್ಷನ್ ವೈರ್ ಅಡ್ಡಿ

    ಅನೇಕಲ್: ಇತಿಹಾಸ ಪ್ರಸಿದ್ಧ ಇರುವ ಹಾಗೂ ಐತಿಹಾಸಿಕ ಪುರಾಣ ಪ್ರಸಿದ್ಧ ದೇವಾಲಯಗಳಲ್ಲೊಂದಾದ ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ರೈಲ್ವೆ ಹೈಟೆನ್ಷನ್ ವೈರ್ ಅಡ್ಡಿಯಾಗಿದೆ.

    ಬೆಂಗಳೂರಿನಿಂದ ಸೇಲಂ ರೈಲ್ವೆ ಮಾರ್ಗದ ದಾರಿಯಲ್ಲಿ ಹೈಟೆನ್ಷನ್ ವೈರ್ ಹಾದುಹೋಗಿರುವ ಪರಿಣಾಮ ಈ ಬಾರಿ ಜಾತ್ರೆ ನಡೆಯುತ್ತಾ ಇಲ್ವೋ ಅನ್ನೋದು ಗೊಂದಲಕ್ಕೆ ಕಾರಣವಾಗಿದೆ. ಹಾಗಾಗಿ ಜಾತ್ರಾ ಮಹೋತ್ಸವ ಸುಗಮವಾಗಿ ನಡೆಯಲು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಊರಿನ ಗ್ರಾಮಸ್ಥರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

    ಬೆಂಗಳೂರು ಕೂಗಳತೆ ದೂರದಲ್ಲಿರುವ ಹುಸ್ಕೂರು ಮದ್ದೂರಮ್ಮ ಜಾತ್ರೆ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಹೀಗಾಗಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಜಾತ್ರೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿ ಬೆಂಗಳೂರಿನಿಂದ ಸೇಲಂ ಮಾರ್ಗಕ್ಕೆ ಹೈಟೆನ್ಷನ್ ವೈರ್ ರೈಲ್ವೆ ಹಳಿ ಮೇಲೆ ಹಾದು ಹೋದ ಪರಿಣಾಮ ಜಾತ್ರೆ ನಡೆಸಲು ವಿಘ್ನ ಎದುರಾಗಿದೆ. ಹೀಗಾಗಿ ಜಾತ್ರೆ ನಡೆಸಲು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಊರಿನ ಗ್ರಾಮಸ್ಥರು ಹಾಗೂ ಹಲವು ಮುಖಂಡರು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಸುರೇಶ್ ಅಂಗಡಿಗೆ ಮನವಿ ಮಾಡಿಕೊಂಡಿದ್ದಾರೆ.

    ಈ ಬಗ್ಗೆ ಸ್ಥಳೀಯ ಶಾಸಕ ಬಿ. ಶಿವಣ್ಣ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತರುತ್ತೇನೆಂದು ತಿಳಿಸಿದರು. ಜಾತ್ರೆ ಪ್ರಮುಖ ಆಕರ್ಷಣೆ ಕುರ್ಜು. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆಯುವ ಹುಸ್ಕೂರ್ ಮದ್ದುರಮ್ಮ ಜಾತ್ರೆಗೆ 14 ಗ್ರಾಮಗಳಿಂದ ನೂರು ಅಡಿಗೂ ಎತ್ತರದ ಕುರ್ಜುಗಳು ಬರುತ್ತವೆ. ಈ ಕುರ್ಜುಗಳನ್ನ ಎತ್ತುಗಳು ತುಳಿದುಕೊಂಡು ಬರುವುದು ವಿಶೇಷ. ಈ ಬಾರಿ ಹೈಟೆನ್ಶನ್ ವೈರ್ ಅಳವಡಿಕೆ ಪರಿಣಾಮ ಕೊಡತಿ, ಸೂಲುಕುಂಟೆ, ಚೊಕ್ಕಸಂದ್ರ ಹಾರೋಹಳ್ಳಿ, ಕಗ್ಗಲಿಪುರ ನಾರಾಯಣಘಟ್ಟ, ಸಿಂಗೇನ ಅಗ್ರಹಾರ, ಗ್ರಾಮಗಳ ಕುರ್ಜು ಗಳು ಹುಸ್ಕೂರು ಜಾತ್ರೆಗೆ ಬರಬೇಕಾದರೆ ರೈಲ್ವೆ ಹಳಿಯನ್ನು ದಾಟಿ ಬರಬೇಕು. ಹಾಗಾಗಿ ಈ ಮಾರ್ಗದಲ್ಲಿ ರೈಲ್ವೆಯ ಹೈಟೆನ್ಷನ್ ವೈರ್ ಹಾದುಹೋದ ಪರಿಣಾಮ ಕುರ್ಜುಗಳು ರೈಲ್ವೇ ಹಳಿ ದಾಟಲು ಸಮಸ್ಯೆಯಾಗುತ್ತಿದೆ. ಹೀಗಾಗಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವಂತೆ ರಾಜ್ಯ ಸಚಿವರಿಗೆ ಮನವಿ ಮಾಡಿದ್ದಾರೆ.

  • ತಾಯಿ ಸಮಾಧಿಯಾದ ಮೇಲೆ ಮಗು ಹೇಳಿತು ಸತ್ಯ – ಪೊಲೀಸರಿಂದ ಕೊಲೆ ಆರೋಪಿ ಅರೆಸ್ಟ್

    ತಾಯಿ ಸಮಾಧಿಯಾದ ಮೇಲೆ ಮಗು ಹೇಳಿತು ಸತ್ಯ – ಪೊಲೀಸರಿಂದ ಕೊಲೆ ಆರೋಪಿ ಅರೆಸ್ಟ್

    ಬೆಂಗಳೂರು: ಸಹಜ ಸಾವು ಎಂದು ತಿಳಿದು ಮಹಿಳೆಯ ಅಂತ್ಯಸಂಸ್ಕಾರ ಮಾಡಲಾಗಿದ್ದ ಪ್ರಕರಣಕ್ಕೆ ಆಕೆಯ ಮಗು ಹೇಳಿದ ಭಯಾನಕ ಸತ್ಯದಿಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವೆಂಕಟೇಶ್ (28) ಎಂಬಾತ 30 ವರ್ಷದ ಗೃಹಿಣಿ ಸುಮಲತಾಳನ್ನು ಆಕೆಯ ಮಗುವಿನ ಮುಂದೆಯೇ ಕೊಲೆ ಮಾಡಿದ್ದಾನೆ. ನಂತರ ಯಾರಿಗೂ ಹೇಳಬೇಡ ಎಂದು ಮಗುವಿಗೆ ಹೇಳಿ ಪರಾರಿಯಾಗಿದ್ದ. ಆದರೆ ಅಪ್ಪನ ಜೊತೆ ಮಗು ಹೇಳಿದ ಒಂದು ಸತ್ಯದಿಂದ ಆರೋಪಿ ವೆಂಕಟೇಶ್ ಪೊಲೀಸರ ಅತಿಥಿಯಾಗಿದ್ದಾನೆ.

    ಸುಮಲತಾ ಆರು ವರ್ಷದ ಹಿಂದೆ ಆನೇಕಲ್ ತಾಲೂಕಿನ ಚಿನ್ನಯ್ಯನ ಪಾಳ್ಯದ ದೇವರಾಜು ಎಂಬುವನೊಂದಿಗೆ ಮದುವೆಯಾಗಿ ಸಂಸಾರ ಮಾಡುತ್ತಿದ್ದಳು. ಈಕೆಗೆ 5 ವರ್ಷ, 3 ವರ್ಷದ ಎರಡು ಗಂಡು ಮಕ್ಕಳಿದ್ದು ಅಕ್ಟೋಬರ್ 16 ರಂದು ಬೆಳಿಗ್ಗೆ ಪತಿ ದೇವರಾಜುಗೆ ಕರೆ ಮಾಡಿ ಎದೆ ನೋವು ಅಂದಿದ್ದಾಳೆ. ಜೊತೆಗೆ ಆಸ್ಪತ್ರೆಗೆ ಹೋಗುವುದಾಗಿ ತಿಳಿಸಿದ್ದಾಳೆ. ಮತ್ತೆ ರಾತ್ರಿ ಗಂಡನೊಂದಿಗೆ ಫೋನ್‍ನಲ್ಲಿ ಮಾತನಾಡಿ ಮಲಗಿದ್ದು ಬೆಳಗ್ಗೆ ಅಕ್ಕಪಕ್ಕದ ಮನೆಯವರು ಮಕ್ಕಳು ಅಳುತ್ತಿರುವುದನ್ನು ಕಂಡು ಒಂದು ನೋಡಿದಾಗ ಸುಮಲತಾ ಮೃತಪಟ್ಟಿದ್ದಳು.

    ಇತ್ತ ಪತಿ ದೇವರಾಜುಗೆ ಗ್ರಾಮಸ್ಥರು ವಿಷಯ ತಿಳಿಸಿದ್ದು, ದೇವರಾಜು ನಿನ್ನೆ ಎದೆನೋವು ಅಂದಿದ್ದಳು ಎಂದಿದ್ದಾನೆ. ಗ್ರಾಮಸ್ಥರು ಹೃದಯಾಘಾತದಿಂದ ಸಾವನಪ್ಪಿದ್ದಾಳೆ ಎಂದು ತಿಳಿದು ಗ್ರಾಮಸ್ಥರೆಲ್ಲ ಸೇರಿ ಅಂತ್ಯಸಂಸ್ಕಾರ ನಡೆಸಿದ್ದಾರೆ. ಅಂತ್ಯಸಂಸ್ಕಾರ ನಡೆದ ರಾತ್ರಿ ಮಗುವನ್ನು ಸೀರೆ ಜೋಲಿಗೆ ಮಲಗಿಸಲು ಮುಂದಾದಾಗ ಜೋಲಿ ನೋಡಿ ಮಗು ಮಾಮ ಅಮ್ಮನಿಗೆ ಹೊಡೆದಿದ್ದಾರೆ ಎಂದು ಹೇಳಿದೆ. ತಕ್ಷಣ ಪತಿ ದೇವರಾಜು ಮತ್ತವರ ತಂದೆ ತಾಯಿ ಪಕ್ಕದ ಮನೆಯಲ್ಲಿ ವಾಸವಿದ್ದ ವೆಂಕಟೇಶ್ (28) ಎಂಬುವವನ ಮೇಲೆ ಆನೇಕಲ್ ಪೊಲೀಸರಿಗೆ ದೂರು ನೀಡಿದ್ದು ಕೊಲೆ ಪ್ರಕರಣ ದಾಖಲಿಸಿದ್ದಾರೆ.

    ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ವೆಂಕಟೇಶನನ್ನು ಬಂಧಿಸಿ ಹೂತಿದ್ದ ಶವ ಹೊರತೆಗೆದು ಮಹಜರ್ ನಡೆಸಿ ಶವ ಪರೀಕ್ಷೆ ನಡೆಸಿದ್ದಾರೆ. ಸುಮಲತಾ ದೇವರಾಜು ಮದುವೆ ಆದ ನಂತರ ಚಿಣ್ಣಯ್ಯನಪಾಳ್ಯದಲ್ಲಿ ವಾಸವಿದ್ದರು. ದೇವರಾಜು ವೃತ್ತಿಯಲ್ಲಿ ಚಾಲಕನಾಗಿದ್ದು, ಕೆಲಸದ ಮೇಲೆ ಹೊರ ಹೋದ್ರೆ ತಿರುಗಿ ಬರುತಿದ್ದದ್ದು ಮೂರ್ನಾಲ್ಕು ದಿನ ಅಥವಾ ವಾರಗಳೇ ಕಳೆಯುತಿತ್ತು. ಈ ವೇಳೆ ದೇವರಾಜನ ದೂರದ ಸಂಬಂಧಿ ಆನೇಕಲ್ ತಾಲೂಕಿನ ಚಿಕ್ಕಹಾಗಡೆ ಗ್ರಾಮದ ವೆಂಕಟೇಶ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ದೇವರಾಜು ಮನೆಯ ಪಕ್ಕದಲ್ಲೇ ವಾಸಕ್ಕೆ ಬಂದಿದ್ದ.

    ಇತ್ತ ವಾರಗಟ್ಟಲೆ ಮನೆಯಿಂದ ಹೊರಗಿರುತ್ತಿದ್ದ ದೇವರಾಜು ವೆಂಕಟೇಶನನ್ನು ನಂಬಿ ಮನೆ ಕಡೆ ಸ್ವಲ್ಪ ನೋಡುಕೊಳ್ಳುವಂತೆ ತಿಳಿಸಿದ್ದ. ಮೊದಲಿಗೆ ಸಭ್ಯನಂತೆ ಇದ್ದ ವೆಂಕಟೇಶ ಸುಮಲತಾಳನ್ನು ಬಲೆಗೆ ಹಾಕಿಕೊಂಡಿದ್ದ. ಇತ್ತ ಗಂಡ ಹೊರಗೆ ಹೆಚ್ಚು ಇರುತ್ತಿದ್ದರಿಂದ ವೆಂಕಟೇಶನ ಸಹವಾಸ ಸುಮಲತಾಳಿಗೆ ಹಿತವಾಗಿತ್ತು. ಇನ್ನು ಕಾಲ ಕಳೆದಂತೆ ಇವರ ಸಂಬಂಧ ಜಗಜ್ಜಾಹೀರಾಗಿ ರಾಜಿ ಪಂಚಾಯಿತಿ ನಡೆದು ವೆಂಕಟೇಶನನ್ನು ಊರು ಬಿಡಿಸಲಾಗಿತ್ತು. ನಂತರ ಸುಮಲತಾ ಕೂಡ ಹಿರಿಯರ ಮಾತಿಗೆ ಬೆಲೆಕೊಟ್ಟು ಗಂಡನೊಂದಿಗೆ ಅನ್ಯೋನ್ಯವಾಗಿದ್ದಳು.

    ವೆಂಕಟೇಶ್ ಮಾತ್ರ ದೇವರಾಜು ಕೆಲಸಕ್ಕೆ ಹೋಗುವುದನ್ನು ನೋಡಿಕೊಂಡು ಮನೆಗೆ ಬಂದು ಸುಮಲತಾಳಿಗೆ ಗಂಡನನ್ನು ಬಿಟ್ಟು ಬರುವಂತೆ ಹಿಂಸಿಸತೊಡಗಿದ. ಹೀಗೆ ಆಕ್ಟೋಬರ್ 16 ರಂದು ರಾತ್ರಿ ಸುಮಲತಾಳ ಮನೆಗೆ ಕಬಾಬ್ ತೆಗೆದುಕೊಂಡು ಬಂದು ತನ್ನೊಂದಿಗೆ ಬರುವಂತೆ ಪೀಡಿಸಿದ್ದ. ಸುಮಲತಾ ಒಪ್ಪದಕ್ಕೆ ಮಗು ಮಲಗಿಸುವ ಸೀರೆಯ ಜೋಳಿಯಿಂದ ಕುತ್ತಿಗೆ ಬಿಗಿದು ಸಾಯಿಸಿ ಮಗುವಿಗೆ ಯಾರಿಗೂ ಹೇಳದಂತೆ ತಿಳಿಸಿ ಹೋಗಿ ತಲೆ ಮರೆಸಿಕೊಂಡಿದ್ದ.

    ಕೊಲೆಗಾರ ಎಷ್ಟೇ ಬುದ್ಧಿವಂತನಾಗಿದರೂ ಸಣ್ಣದೊಂದು ಸುಳಿವು ಬಿಟ್ಟಿರುತ್ತಾನೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದ್ದು, ಐದು ವರ್ಷದ ಮಗು ತನ್ನ ತಾಯಿಯ ರಹಸ್ಯ ಬಯಲು ಮಾಡಿ ಕೊಲೆ ಆರೋಪಿಯ ಬಂಧನಕ್ಕೆ ಕಾರಣವಾಗಿದೆ. ಸಹಜ ಸಾವೆಂದು ಸುಮನಿದ್ದವರಿಗೆ ಮಗುವಿನ ಮೂಲಕ ಸತ್ಯ ತಿಳಿದು ಗ್ರಾಮಸ್ಥರಿಗೆ ಶಾಕ್ ಆಗಿದೆ.

  • ದೇವಾಲಯಗಳನ್ನೇ ಟಾರ್ಗೆಟ್ ಮಾಡಿ ಸರಣಿ ಕಳ್ಳತನ

    ದೇವಾಲಯಗಳನ್ನೇ ಟಾರ್ಗೆಟ್ ಮಾಡಿ ಸರಣಿ ಕಳ್ಳತನ

    – ದೇವರ ಹುಂಡಿ, ಒಡವೆಯೊಂದಿಗೆ ಎಸ್ಕೇಪ್

    ಬೆಂಗಳೂರು: ದೇವಾಲಯಗಳನ್ನೇ ಟಾರ್ಗೆಟ್ ಮಾಡಿ ದೇವಾಲಯದ ಬೀಗ ಮುರಿದು ಸರಣಿ ಕಳ್ಳತನ ನಡೆಸಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ತಮ್ಮನಾಯಕನಹಳ್ಳಿಯಲ್ಲಿ ನಡೆದಿದೆ.

    ಕಳೆದ ರಾತ್ರಿ ಕಳ್ಳರು ತಮ್ಮ ಕೈಚಳಕವನ್ನು ತೋರಿದ್ದು, ಇಂಡ್ಲವಾಡಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ತಮ್ಮನಾಯಕನಹಳ್ಳಿಯಲ್ಲಿರುವ ಶನಿಮಹಾತ್ಮ ದೇವಸ್ಥಾನ, ಕಬ್ಬಾಳಮ್ಮ ದೇವಸ್ಥಾನ ಹಾಗೂ ಶಂಭುಲಿಂಗೇಶ್ವರ ದೇವಸ್ಥಾನಗಳ ಬೀಗ ಹೊಡೆದು ದೇವಾಲಯದಲ್ಲಿದ್ದ ಹುಂಡಿ , ಒಡವೆ, ದೇವರ ಕಿರೀಟವನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.

    ದೇವಾಲಯದ ಹುಂಡಿಗಳಲ್ಲಿದ್ದ ಹಣವನ್ನು ತೆಗೆದುಕೊಂಡ ಕಳ್ಳರು ಖಾಲಿ ಹುಂಡಿಗಳನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ. ಮುಂಜಾನೆ ದೇವಾಲಯದ ಬಳಿ ಗ್ರಾಮಸ್ಥರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಮಾಹಿತಿ ಪಡೆದ ಆನೇಕಲ್ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಸಿಕೊಂಡು ತನಿಖೆ ನಡೆಸಿದ್ದಾರೆ.

  • ಆನ್‍ಲೈನ್‍ಲ್ಲಿ ಸಿಗ್ತಿದೆ ಗಾಂಜಾ- ಕಾಲೇಜುಗಳೇ ಅಡ್ಡ, ವಿದ್ಯಾರ್ಥಿಗಳಿಗೆ ಕೆಡ್ಡ

    ಆನ್‍ಲೈನ್‍ಲ್ಲಿ ಸಿಗ್ತಿದೆ ಗಾಂಜಾ- ಕಾಲೇಜುಗಳೇ ಅಡ್ಡ, ವಿದ್ಯಾರ್ಥಿಗಳಿಗೆ ಕೆಡ್ಡ

    -ಸಿಂಗಂ ರವಿಚೆನ್ನಣ್ಣನವರ್ ಏರಿಯಾದಲ್ಲೇ ಗಾಂಜಾ ದಂಧೆ

    ಬೆಂಗಳೂರು: ಇತ್ತೀಚೆಗೆ ಜಿಲ್ಲೆಯಾದ್ಯಂತ ಗಾಂಜಾ ಮಾರಾಟ ದಂಧೆ ಮೇಲೆ ಪೊಲೀಸರು ಹೆಚ್ಚು ನಿಗಾ ವಹಿಸಿದ್ದರೂ ಗಾಂಜಾ ಮಾರಾಟ ಗ್ಯಾಂಗ್ ಮಾತ್ರ ಯಾವುದೇ ತಲೆ ಕೆಡಿಸಿಕೊಂಡಿಲ್ಲ. ಏನಾದರೂ ಮಾಡಿಕೊಳ್ಳಿ ಕ್ಯಾರೆ ಮಾಡಲ್ಲ ಎನ್ನುತ್ತ ಸಾಮಾಜಿಕ ಜಾಲತಾಣವನ್ನು ಬಳಸಿ ಗಾಂಜಾ ದಂಧೆಯನ್ನು ಎಗ್ಗಿಲ್ಲದಂತೆ ನಡೆಸುತ್ತಿದ್ದಾರೆ.

    ಸಾಮಾನ್ಯವಾಗಿ ನಾವೆಲ್ಲಾ ಆನ್‍ಲೈನ್‍ನಲ್ಲಿ ಊಟ, ಇಲ್ಲ ಬಟ್ಟೆ, ಎಲೆಕ್ಟ್ರಾನಿಕ್ ಐಟಮ್ಸ್ ಹೀಗೆ ವಸ್ತುಗಳನ್ನ ಆರ್ಡರ್ ಮಾಡಿ ತರಿಸಿಕೊಳ್ಳುತ್ತೇವೆ. ಆದರೆ ಆನ್‍ಲೈನ್‍ನಲ್ಲಿ ಗಾಂಜಾ ಸಿಗುತ್ತೆ ಎಂದರೆ ನಿಜಕ್ಕೂ ಶಾಕ್ ಆಗುತ್ತೆ. ಈ ದಂಧೆ ನಡೆಯುತ್ತಿರೋದು ಬೇರೆಲ್ಲೂ ಅಲ್ಲ, ನಮ್ಮ ಸಿಲಿಕಾನ್ ಸಿಟಿಯಲ್ಲಿ. ಹೌದು ಸಿಲಿಕಾನ್ ಸಿಟಿಯಲ್ಲಿ ಎಗ್ಗಿಲ್ಲದಂತೆ ಆನ್‍ಲೈನ್ ಗಾಂಜಾ ಗಂಧೆ ನಡೆಯುತ್ತಿದೆ. ಪೊಲೀಸರು ಚಾಪೆ ಕೆಳಗೆ ನುಗ್ಗಿದರೆ ನಾವು ಸುಮ್ನೆ ಇದ್ದರೆ ಹೇಗೆ ಅಂತ ಗಾಂಜಾ ಮಾರಾಟ ಗ್ಯಾಂಗ್ ರಂಗೋಲಿ ಕೆಳಗೆ ನುಗ್ಗಿ ಮಾಸ್ಟರ್ ಪ್ಲಾನ್ ಮಾಡಿದೆ. ಗಾಂಜಾ ದಂಧೆಕೋರರು ಆನ್‍ಲೈನ್‍ಗೂ ಲಗ್ಗೆ ಇಟ್ಟು ಪ್ರತಿಷ್ಠಿತ ಕಾಲೇಜು ಯುವಕ ಯುವತಿಯರನ್ನು ಟಾರ್ಗೆಟ್ ಮಾಡಿಕೊಂಡು ಗಾಂಜಾ ಮಾರಟ ಮಾಡುತ್ತಿದ್ದಾರೆ. ಈಗಿನ ಯುವಕ, ಯುವತಿಯರಿಗೆ ಅಗತ್ಯತೆಗೆ ಅನುಗುಣವಾಗಿ ಆನ್‍ಲೈನ್‍ನಲ್ಲಿ ಗಾಂಜಾ ಮಾರಾಟ ಮಾಡುವುದನ್ನ ಶುರುವಿಟ್ಟುಕೊಂಡಿದ್ದಾರೆ.

    ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಗಾಂಜಾ ಮಾರಾಟ ಜಾಲಾ ಹರಡಿಬಿಟ್ಟಿದೆ. ಇತ್ತೀಚೆಗೆ ಆನೇಕಲ್ ತಾಲೂಕಿನಲ್ಲಿ ವಿಬಿಎಚ್‍ಎಸ್ ಅಪಾಟ್‌ರ್ಮೆಂಟ್‌, ಅಲಯನ್ಸ್ ಕಾಲೇಜು ಸೇರಿದಂತೆ ಹಲವೆಡೆ ಗಾಂಜಾ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿ, ಅಂತರಾಜ್ಯ ದಂಧೆಕೋರ ಡೇವಿಡ್‍ನನ್ನು ಬಂಧಿಸಿದ್ದರು. ಆತನ ಬಳಿ ಇದ್ದ ಬರೋಬ್ಬರಿ 800 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದರು. ಆದರೂ ಭಯಬೀಳದ ದಂಧೆಕೋರರು ಹೊರ ರಾಜ್ಯಗಳಿಂದ ಬಂದು ವಿಬಿಎಚ್‍ಎಸ್ ಅಪಾಟ್‌ರ್ಮೆಂಟ್‌ ನ ಪ್ಲಾಟ್‍ಗಳನ್ನು ಬಾಡಿಗೆಗೆ ಪಡೆದು, ಆನ್‍ಲೈನ್ ಮೂಲಕ ಗಾಂಜಾ ವ್ಯಾಪಾರ ಶುರುವಿಟ್ಟುಕೊಂಡಿದ್ದಾರೆ. ಗಾಂಜಾ ಬುಕ್ ಮಾಡಿದ ಯುವಕ ಯುವತಿಯರ ಪೇಪರ್ ಮೇಲೆ ಹೆಸರು ಬರೆದು ಯಾರ ಭಯವು ಇಲ್ಲದೆ, ಎಗ್ಗಿಲ್ಲದೆ ಗಾಂಜಾ ಸಪ್ಲೈ ಮಾಡ್ತಿದ್ದಾರೆ.

    ಇಷ್ಟೇ ಅಲ್ಲ ಅವರ ಅಡ್ಡಾಕ್ಕೆ ಸ್ಥಳೀಯರು ಯಾರಾದರೂ ಕಾಲಿಟ್ಟರೆ ಗೇಟ್ ಬಳಿ ಬೌನ್ಸರ್ ಗಳನ್ನು ಇಟ್ಟು, ಯಾರು ಒಳ ಹೋಗದಂತೆ ತಡೆಯುತ್ತಿದ್ದಾರೆ. ಗಾಂಜಾ ಪಡೆದು ಸೇವನೆ ಮಾಡುವ ಪ್ರತಿಷ್ಠಿತ ಕಾಲೇಜಿನ ಯುವಕ ಯುವತಿಯರು ನಡುರಸ್ತೆಯಲ್ಲಿ ನಿಂತು ತೂರಾಡುತ್ತಿರುವ ದೃಶ್ಯಗಳು ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    https://www.youtube.com/watch?v=gVymkMfbH8A

  • ಬೆಂಗಳೂರಿನ ಚಂದಾಪುರದಲ್ಲಿ ಹೈವೇ ಜಲಾವೃತ – ಅರ್ಧ ಮುಳುಗಿದ ವಾಹನಗಳು

    ಬೆಂಗಳೂರಿನ ಚಂದಾಪುರದಲ್ಲಿ ಹೈವೇ ಜಲಾವೃತ – ಅರ್ಧ ಮುಳುಗಿದ ವಾಹನಗಳು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾತ್ರಿಯಿಡಿ ಭಾರೀ ಮಳೆಯಾಗಿದ್ದು, ಬೆಂಗಳೂರು ತಮಿಳುನಾಡು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 7 ಸಂಪೂರ್ಣ ಜಲಾವೃತವಾಗಿದೆ.

    ರಾತ್ರಿಯಿಡೀ ಎಡಬಿಡದೆ ಸುರಿದ ಭಾರಿ ಮಳೆಗೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಹೆದ್ದಾರಿ ಜಲಾವೃತವಾಗಿದ್ದು, ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.

    ಹೆದ್ದಾರಿಯಲ್ಲಿರುವ ರೈಲ್ವೇ ಸೇತುವೆ ಬಳಿ ಅಪಾರ ಪ್ರಮಾಣದ ನೀರು ಸಂಗ್ರಹವಾದ ಹಿನ್ನೆಲೆ ಅರ್ಧ ವಾಹನಗಳು ನೀರಿನಲ್ಲಿ ಮುಳುಗುತ್ತಿವೆ. ಈಗಾಗಲೇ ಮೂರು ವಾಹನಗಳು ನೀರಿನಲ್ಲಿ ಸಿಲುಕಿದ ಕಾರಣ ವಾಹನ ಚಲಾಯಿಸಲು ಚಾಲಕರು ಭಯಪಟ್ಟು ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ.