Tag: ಅನುರಾಧ ಮುತ್ತಪ್ಪ ರೈ.

  • ಮುತ್ತಪ್ಪ ರೈ ಆಸ್ತಿ ಮಾರಾಟಕ್ಕೆ ಹೈಕೋರ್ಟ್‌ ತಡೆಯಾಜ್ಞೆ

    ಮುತ್ತಪ್ಪ ರೈ ಆಸ್ತಿ ಮಾರಾಟಕ್ಕೆ ಹೈಕೋರ್ಟ್‌ ತಡೆಯಾಜ್ಞೆ

    ಬೆಂಗಳೂರು: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಆಸ್ತಿ‌ ಮಾರಾಟಕ್ಕೆ ಹೈ ಕೋರ್ಟ್ ತಡೆಯಾಜ್ಞೆ ನೀಡಿದೆ. ಮುತ್ತಪ್ಪ ರೈ ಪುತ್ರರಾದ ರಾಖಿ ರೈ, ರಿಕ್ಕಿ ರೈ ಸೇರಿ 20ಮಂದಿಯನ್ನ ಪ್ರತಿವಾದಿಯನ್ನಾಗಿಸಿ ತಡೆಯಾಜ್ಞೆ ನೀಡಿದೆ.

    ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ ಆಸ್ತಿಯಲ್ಲಿ ಮೂರನೇ ಒಂದು ಪಾಲು ಕೋರಿ ಕೇಸು ದಾಖಲಿಸಿದ್ದರು. ಈ ಕೇಸ್‌ಗೆ ಸಂಬಂಧಿಸಿದಂತೆ ಸಿವಿಲ್ ಕೋರ್ಟ್ ನಲ್ಲಿ ತಡೆಯಾಜ್ಞೆ ತೆರವಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಅನುರಾಧ ಹೈಕೋರ್ಟ್‌ ಮೆಟ್ಟಿಲೇರಿದ್ದರು.

    ಅನುರಾಧ ಅರ್ಜಿ ಪರಿಗಣಿಸಿದ ಕೋರ್ಟ್‌ ಯಾವುದೇ ಆಸ್ತಿ ಮಾರಾಟ ಮಾಡದಂತೆ ತಡೆಯಾಜ್ಞೆ ನೀಡಿ ಮಧ್ಯಂತರ ತೀರ್ಪು ಪ್ರಕಟಿಸಿದೆ.

    ಏನಿದು ಪ್ರಕರಣ?
    ಮುತ್ತಪ್ಪ ರೈ ಅವರು ಸಾಯುವ ಮುನ್ನವೇ ತನ್ನ ಆಸ್ತಿಯ ಬಗ್ಗೆ ವಿಲ್ ಬರೆದು ಇಟ್ಟಿದ್ದರು. ಇದರಲ್ಲಿ ಅವರ ಆಸ್ತಿ ಯಾರಿಗೇ ಸೇರಬೇಕು ಮತ್ತು ಎಷ್ಟು ಸೇರಬೇಕು ಎಂದು ತಿಳಿಸಿದ್ದರು.  ಮುತ್ತಪ್ಪ ರೈ ಸಾವಿನ ಬಳಿಕ ಅವರ ಎರಡನೇ ಪತ್ನಿ ಅನುರಾಧ ಪಾಲು ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.

    ಈಗಾಗಲೇ ಅನುರಾಧ ಅವರಿಗೂ ಆಸ್ತಿಯಲ್ಲಿ ಪಾಲು ನೀಡಲಾಗಿದೆ ಎಂದು ರೈ ವಿಲ್‍ನಲ್ಲಿ ತಿಳಿಸಿದ್ದರು. ಎರಡನೇ ಪತ್ನಿ ಅನುರಾಧಾಗೆ ಚಿನ್ನಾಭರಣ, ಕಾರು, ಕೋಟ್ಯಂತರ ರೂಪಾಯಿ ಹಣದ ಜೊತೆ ಹೆಚ್ ಡಿ ಕೋಟೆ ಆಸ್ತಿ, ಜೊತೆಗೆ ಸಹಕಾರ ನಗರದಲ್ಲಿ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿ ಕೊಡಲಾಗಿದೆ. ಅನುರಾಧಾ ಜೊತೆಗಿದ್ದ ಸಂದರ್ಭದಲ್ಲಿ ಅವರಿಗೆ ಸೇರಬೇಕಾದ ಆಸ್ತಿಯನ್ನು ನೀಡಲಾಗಿದೆ ಎಂದು ವಿಲ್‍ನಲ್ಲಿ ಉಲ್ಲೇಖವಾಗಿದೆ. ಇದನ್ನೂ ಓದಿ: ಅಮೆಜಾನ್‍ಗೆ 202 ಕೋಟಿ ರೂ. ದಂಡ ಹಾಕಿದ ಸ್ಪರ್ಧಾತ್ಮಕ ಆಯೋಗ

    ಆಸ್ತಿ ಎಷ್ಟಿದೆ?
    ವಿಲ್ ಪ್ರಕಾರ ಸುಮಾರು 2 ಸಾವಿರ ಕೋಟಿಗೂ ಅಧಿಕ ಆಸ್ತಿ ರೈ ಹೆಸರಿನಲ್ಲಿದೆ. ದೇವನಹಳ್ಳಿ, ಯಲಹಂಕ, ಬಿಡದಿಯಲ್ಲಿ 150ಕ್ಕೂ ಅಧಿಕ ಎಕರೆ ಜಾಗ, ಮೈಸೂರು, ಮಂಗಳೂರು, ಬಂಟ್ವಾಳ, ಪುತ್ತೂರಿನಲ್ಲಿ ನೂರಾರು ಎಕರೆ ಜಮೀನು ಮುತ್ತಪ್ಪ ರೈ ಹೆಸರಿನಲ್ಲಿದೆ. ಸಕಲೇಶಪುರದಲ್ಲಿ 200 ಎಕರೆ ಜಮೀನಿದೆ.

    ಹಂಚಿಕೆ ಹೇಗೆ?
    ಒಟ್ಟು 600ಕ್ಕೂ ಅಧಿಕ ಎಕರೆ ಜಮೀನನ್ನು ತನ್ನಿಬ್ಬರು ಮಕ್ಕಳಾದ ರಿಕ್ಕಿ ಹಾಗೂ ರಾಖಿ ರೈಗೆ ಗಿಫ್ಟ್ ಡೀಡ್ ಮಾಡಿದ್ದಾರೆ. ಆಸ್ತಿಗಳ ಪೈಕಿ ಮೈಸೂರು, ಪುತ್ತೂರು, ಬಂಟ್ವಾಳ, ಮಂಗಳೂರು ಜಾಗವನ್ನು ರಾಖಿ ರೈಗೆ ನೀಡಿದ್ದರೆ, ಸಕಲೇಶಪುರ, ಬಿಡದಿ, ಯಲಹಂಕ ಹಾಗೂ ದೇವನಹಳ್ಳಿ ಜಾಗವನ್ನು ಚಿಕ್ಕ ಮಗ ರಿಕ್ಕಿ ರೈಗೆ ಹಂಚಿಕೆ ಮಾಡಿದ್ದಾರೆ. ಆಪ್ತರು, ಸಂಬಂಧಿಕರಿಗೆ ಶೇ.20 ರಷ್ಟು ಆಸ್ತಿ ನೀಡಬೇಕೆಂದು ಸೂಚಿಸಿದ್ದಾರೆ. ಬಿಡದಿ ಹಾಗೂ ಸದಾಶಿವನಗರದ ಎರಡೂ ಮನೆಗಳ ಜವಾಬ್ದಾರಿಯನ್ನು ಚಿಕ್ಕ ಮಗ ರಿಕ್ಕಿ ರೈಗೆ ನೀಡಿದ್ದು ಟ್ರೇಡಿಂಗ್ ವ್ಯವಹಾರ ಕಂಪನಿಯನ್ನು ದೊಡ್ಡ ಮಗ ರಾಖಿ ನೋಡಿಕೊಳ್ಳುವಂತೆ ಸೂಚಿಸಿದ್ದರು. ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಲ್ಲಿ ಶೀಘ್ರವೇ 1 ನಿಮಿಷದ ಸ್ಟೋರಿ ಹಾಕಬಹುದು!

    ಕೆಲಸಗಾರರಿಗೆ ಸೈಟ್:
    ನಂಬಿಕೆಯಿಂದ 15 ವರ್ಷಗಳ ಕಾಲ ತನ್ನ ಬಳಿ ಕೆಲಸ ಮಾಡಿದ 25 ಕೆಲಸಗಾರರಿಗೆ ಒಂದೊಂದು ಸೈಟ್ ಹಾಗೂ ಕೈಲಾದಷ್ಟು ಹಣ ನೀಡುವಂತೆ ಕಿರಿಯ ಮಗ ರಿಕ್ಕಿ ರೈಗೆ ಸೂಚಿಸಿದ್ದರು. ತಂದೆಯ ಸೂಚನೆಯಂತೆ ರಿಕ್ಕಿ ಈಗಾಗಲೇ ತಲಾ ಒಬ್ಬೊಬ್ಬರಿಗೆ 3 ಲಕ್ಷ ರೂಪಾಯಿಗಳನ್ನು ಹಂಚಿಕೆ ಮಾಡಿದ್ದರು.

    ಸಂಘಟನೆ ಹೊಣೆ ಯಾರಿಗೆ?
    ಜಯ ಕರ್ನಾಟಕ ಸಂಘಟನೆ ಯಾವುದೇ ಕಾರಣಕ್ಕೂ ಒಡೆಯಬಾರದು ಎಂದು ಹೇಳಿರುವ ಮುತ್ತಪ್ಪ ರೈ ಈ ಸಂಘಟನೆಯ ಜವಾಬ್ದಾರಿಯನ್ನು ಚಿಕ್ಕಮಗ ರಿಕ್ಕಿ ರೈಗೆ ನೀಡಿದ್ದಾರೆ. ಜಗದೀಶ್ ಸಂಘಟನೆಯ ಅಧ್ಯಕ್ಷತೆಯನ್ನು ನೋಡಿಕೊಳ್ಳಬೇಕು. ಮುಂದೆ ಈ ಸಂಘಟನೆಯನ್ನು ಬೆಳೆಸುವಂತೆ ಕಾರ್ಯಕರ್ತರಲ್ಲಿ ರೈ ಮನವಿ ಮಾಡಿರುವ ವಿಚಾರ ವಿಲ್ ನಲ್ಲಿ ಉಲ್ಲೇಖವಾಗಿದೆ.