ಬೆಂಗಳೂರು: ತಾಜ್ ಮಹಲ್, ಚಾರ್‍ಮಿನಾರ್ ಮುಂತಾದ ಪ್ರೇಮಕಾವ್ಯದಂಥಾ ಸಿನಿಮಾಗಳ ಮೂಲಕವೇ ಯಶಸ್ವಿ ನಿರ್ದೇಶಕರಾಗಿ ನೆಲೆ ಕಂಡುಕೊಂಡಿರುವವರು ಆರ್ ಚಂದ್ರು. ಅವರು ಎರಡನೇ ಬಾರಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಐ ಲವ್ ಯೂ ಚಿತ್ರದ ಮೂಲಕ ಜೊತೆಯಾಗಿದ್ದಾರೆ. ಚಂದ್ರು ಅವರು ನಿರ್ದೇಶನ ಮಾಡಿರೋ ಐ ಲವ್ ಯೂ ಚಿತ್ರದ ಮತ್ತೊಂದು ಭಾವಪೂರ್ಣ ಲಿರಿಕಲ್ ವೀಡಿಯೋ ಇದೀಗ ಬಿಡುಗಡೆಯಾಗಿದೆ.

ನಿನ್ನ ಹೃದಯ ಇರೋ ಜಾಗದಲ್ಲಿ ಒಂದು ಕಲ್ಲು ಇದೆ, ಅದು ಕಲ್ಲು ಅಲ್ಲ ಸುಳ್ಳು ಅನ್ನೋ ವಿಷಯ ನಿಜವಾಗುತಿದೆ… ಲಹರಿ ಆಡಿಯೋ ಸಂಸ್ಥೆಯ ಮೂಲಕ ಹೊರ ಬಂದಿರೋ ಈ ಹಾಡಿಗೆ ಇಂದ್ರಾ ಕೆ ಎಂ ಅವರ ಸಾಹಿತ್ಯವಿದೆ. ಪ್ಯಾಥೋ ಮೂಡಿಗೆ ಜಾರಿಸುವಂಥಾ ಈ ಹಾಡಿಗೆ ಡಾ ಕಿರಣ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಒಂದೇ ಸಲಕ್ಕೆ ಭಾವಲೋಕದಲ್ಲೊಂದು ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿ ಬಿಡುವಷ್ಟು ಶಕ್ತವಾಗಿರೋ ಈ ಹಾಡಿಗೆ ಬಿಡುಗಡೆಯಾದ ಅತ್ಯಂತ ಕಡಿಮೆ ಅವಧಿಯಲ್ಲಿಯೇ ವ್ಯಾಪಕ ಮೆಚ್ಚುಗೆಗಳೂ ಕೇಳಿ ಬರುತ್ತಿವೆ. ಈ ಹಾಡು ಅನುರಾಧಾ ಭಟ್ ಅವರ ಮಧುರ ಕಂಠದಲ್ಲಿ ಮೂಡಿ ಬಂದಿದೆ.

ಆರ್ ಚಂದ್ರು ನವಿರು ಪ್ರೇಮ ಕಾವ್ಯಗಳಿಗೆ ದೃಶ್ಯ ರೂಪ ಕೊಡೋದರಲ್ಲಿ ನಿಸ್ಸೀಮರು. ಪ್ರೀತಿ ಎಂಬುದು ಸಿನಿಮಾ ನಿರ್ದೇಶಕರ ಪಾಲಿಗೆ ಎಂದೂ ಮುಗಿಯದ ಅಕ್ಷಯ ಪಾತ್ರೆಯಂಥಾದ್ದು. ಆದರೆ ಅದನ್ನು ಹೊಸಾ ಫೀಲ್‍ನೊಂದಿಗೆ ಕಟ್ಟಿಕೊಡುವ ಕಸುಬುದಾರಿಕೆ ಕೆಲವರಿಗಷ್ಟೇ ಸಿದ್ಧಿಸಿರುತ್ತದೆ. ಆ ಸಾಲಿನಲ್ಲಿ ಆರ್ ಚಂದ್ರು ಅವರೂ ಸೇರಿಕೊಳ್ಳುತ್ತಾರೆ.

ಚಂದ್ರು ನಿರ್ದೇಶನದ ಚಿತ್ರಗಳೆಂದ ಮೇಲೆ ಹಾಡುಗಳ ಬಗ್ಗೆ ಭಾರೀ ನಿರೀಕ್ಷೆಗಳು ಮೂಡಿಕೊಳ್ಳುತ್ತವೆ. ಅದನ್ನು ಗಮನದಲ್ಲಿಟ್ಟುಕೊಂಡೇ ಅವರು ಐ ಲವ್ ಯೂ ಚಿತ್ರದ ಹಾಡುಗಳನ್ನೂ ರೂಪಿಸಿದ್ದಾರೆ. ಇದೀಗ ಹೊರ ಬಂದಿರೋ ಈ ಲಿರಿಕಲ್ ವೀಡಿಯೋ ಕೂಡಾ ಟ್ರೆಂಡ್ ಸೆಟ್ ಮಾಡೋದು ಗ್ಯಾರೆಂಟಿ. ಈ ಸಿನಿಮಾದಲ್ಲಿ ಚಂದ್ರು ಅವರು ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಈ ಮೂಲಕ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆರ್ ಚಂದ್ರು ಕಾಂಬಿನೇಷನ್ನಿನ ಎರಡನೇ ಚಿತ್ರವಾದ ಐ ಲವ್ ಯೂಗಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.



