Tag: ಅನುದಾನ

  • ಮಠಗಳಿಗೆ 25 ಕೋಟಿ ರೂ.: ಯಾವೆಲ್ಲ ಮಠಗಳಿಗೆ ಅನುದಾನ ಸಿಗುತ್ತೆ?

    ಮಠಗಳಿಗೆ 25 ಕೋಟಿ ರೂ.: ಯಾವೆಲ್ಲ ಮಠಗಳಿಗೆ ಅನುದಾನ ಸಿಗುತ್ತೆ?

    ಬೆಂಗಳೂರು: ಕೃಷಿ ಸಾಲ ಮನ್ನಾ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಮಠ ಮತ್ತು ಸಮುದಾಯಗಳಿಗೆ ಕುಮಾರಸ್ವಾಮಿ ಅನುದಾನ ಕಡಿಮೆ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಕುಮಾರಸ್ವಾಮಿ ಪರಿಶಿಷ್ಟ ಜಾತಿ/ ಪಂಗಡದ ಮಠಗಳಿಗೆ 25 ಕೋಟಿ ರೂ. ಹಣವನ್ನು ಮೀಸಲಿಟ್ಟಿದ್ದಾರೆ.

    ಜಾತ್ಯಾತೀತವಾಗಿ ದಾಸೋಹ, ಶಿಕ್ಷಣ, ಸಾಮಾಜಿಕ ಸೇವೆ ಮತ್ತು ಅಭಿವೃಧ್ಧಿಗಾಗಿ ಶ್ರಮಿಸುತ್ತಿರುವ ಮಠಗಳಿಗೆ ಅನುದಾನ ನೀಡಲಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

    ಯಾವೆಲ್ಲ ಮಠಗಳಿಗೆ ಅನುದಾನ?
    ಶ್ರೀಭಗೀರಥ ಪೀಠ, ಮಧುರೆ(ಉಪ್ಪಾರ); ಶ್ರೀ ಮಾದಾರ ಚೆನ್ನಮ್ಮ ಗುರುಪೀಠ, ಚಿತ್ರದುರ್ಗ; ಶ್ರೀ ಸಿದ್ದರಾಮೇಶ್ವರ ಬೋವಿ ಗುರುಪೀಠ, ಚಿತ್ರದುರ್ಗ; ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ, ರಾಜನಹಳ್ಳಿ, ಹರಿಹರ ತಾಲೂಕು; ಶ್ರಿ ಯಾದವ ಮಹಾಸಂಸ್ಥಾನ ಮಠ, ಚಿತ್ರದುರ್ಗ; ಶ್ರೀ ನಾರಾಯಣಗುರು ಮಹಾಸಂಸ್ಥಾನ ನಿಟ್ಟೂರು, ತೀರ್ಥಹಳ್ಳಿ ತಾಲೂಕು; ಶ್ರೀ ಮಡಿವಾಳ ಗುರುಪೀಠ, ಚಿತ್ರದುರ್ಗ; ಶ್ರೀ ದೇವಾಂಗ ಗುರುಪೀಠ ಹಂಪಿ; ಹಡದಳ ಅಪ್ಪಣ್ಣ ಗುರುಪೀಠ, ತಂಗಡಂಗಿ ಮುದ್ದೇಬಿಹಾಳ; ಶ್ರೀ ಕಂಬಾರ ಗುರುಪೀಠ. ತೇಲಸಂಗ, ಅಥಣಿ; ಶ್ರೀ ಛಲವಾದಿ ಜಗದ್ಗುರು ಪೀಠ, ಚನ್ನೇನಹಳ್ಳಿ, ಶಿರಾ ತಾಲೂಕು; ಶ್ರೀ ವಿಜಯಸಂಗಮ(ಪ.ಜಾ./ಪ.ಪಂ) ವದ್ಯಾಪೀಠ, ಹೊಸದುರ್ಗ; ಶ್ರೀ ಶಿವಶಕ್ತಿ ಪೀಠ, ಇರಕಲ್ ಮಸ್ಕಿ; ಹೇಮಹೇಮ ಸದ್ಬೋಧನ ಪೀಠ, ಎರೆಹೊಸಳ್ಳಿ, ಹರಿಹರ; ಕರ್ನಾಟಕ ರಾಜ್ಯ ಕುಂಬಾರ ಕ್ಷೇಮಾಭಿವೃಧ್ಧಿ ಸಂಘ, ಬೆಂಗಳೂರು; ಗಂಗಾಮತಸ್ಥ/ಮೊಗವೀರ/ಬೆಸ್ತ/ಕೊಳಿ ಸಮಾಜ ಹಾಗೂ ಸವಿತಾ ಸಮಾಜ ಬೆಂಗಳೂರು ಮೊದಲಾದ ಧಾರ್ಮಿಕ ಪೀಠಗಳು ಹಾಗೂ ಸಂಘ ಸಂಸ್ಥೆಗಳಿಗೆ ಒಟ್ಟು 25 ಕೋಟಿ ರೂ. ಅನುದಾನ ಸಿಗಲಿದೆ.

  • ನಾನು ಅಧ್ಯಕ್ಷೆಯಾಗಿದ್ದಾಗ ಕೊಟ್ಟಿದ್ದೀನಿ, ಈಗ ನಂಗೂ ಕಮೀಷನ್ ಕೊಡ್ಲೇಬೇಕು-ಕಾರಟಗಿ ಪುರಸಭೆಯಲ್ಲಿ ಪರ್ಸೆಂಟೇಜ್ ಲೆಕ್ಕಾಚಾರ

    ನಾನು ಅಧ್ಯಕ್ಷೆಯಾಗಿದ್ದಾಗ ಕೊಟ್ಟಿದ್ದೀನಿ, ಈಗ ನಂಗೂ ಕಮೀಷನ್ ಕೊಡ್ಲೇಬೇಕು-ಕಾರಟಗಿ ಪುರಸಭೆಯಲ್ಲಿ ಪರ್ಸೆಂಟೇಜ್ ಲೆಕ್ಕಾಚಾರ

    ಕೊಪ್ಪಳ: ಕಾಮಗಾರಿಗಳಲ್ಲಿ ತಮಗೆ ಪರ್ಸೆಂಟೇಜ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಸದಸ್ಯೆಯೊಬ್ಬರು ಸಾಮಾನ್ಯ ಸಭೆಯಲ್ಲಿಯೇ ಗರಂ ಆದ ಘಟನೆ ಕೊಪ್ಪಳದ ಕಾರಟಗಿ ಪುರಸಭೆಯಲ್ಲಿ ನಡೆದಿದೆ.

    ಕೊಪ್ಪಳ ಜಿಲ್ಲೆ ಕಾರಟಗಿ ಪುರಸಭೆಯ ನಿಕಟಪೂರ್ವ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಅನ್ನಪೂರ್ಣಮ್ಮ ತಮಗೆ ಪುರಸಭೆ ನಡೆಸಿದ ಕಾಮಗಾರಿಯಲ್ಲಿ ಕಮೀಷನ್ ನೀಡಿಲ್ಲ ಎಂದು ಸಾಮಾನ್ಯ ಸಭೆ ನಡೆಯದಂತೆ ತಡೆದು ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ವಾಗ್ವಾದ ನಡೆಸಿದ್ದಾರೆ.

    ಸಂತೆ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿಗೆ ನೀಡಿದ್ದ ಅನುದಾನದಲ್ಲಿ ತಮಗೆ ಪರ್ಸೆಂಟೇಜ್ ಕೊಟ್ಟಿಲ್ಲ ಅಂತಾ ಅನ್ನಪೂರ್ಣಮ್ಮ ಫುಲ್ ಗರಂ ಆಗಿದ್ದಾರೆ. ಹೀಗೆ ಕಾಮಗಾರಿಯೊಂದರಲ್ಲಿ ತಮಗೆ ಪರ್ಸೆಂಟೇಜ್ ಸಿಕ್ಕಿಲ್ಲ ಅಂತಾ ಸಾಮಾನ್ಯ ಸಭೆಯಲ್ಲೇ ಅಧ್ಯಕ್ಷರು ಹಾಗೂ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ನಾನು ಅಧ್ಯಕ್ಷೆ ಆಗಿದ್ದಾಗ ನಿಮ್ಮೆಲ್ಲರಿಗೂ ಪಾಲು ಕೊಟ್ಟಿಲ್ಲವೇನು? ನೀವೆಲ್ಲ ತೆಗೆದುಕೊಂಡಿಲ್ಲವೇನು? ನನ್ನ ಪತಿಯನ್ನು ಕರೆಸುತ್ತೇನೆ, ಅವರ ಜೊತೆಯೇ ಮೀಟಿಂಗ್ ಮಾಡ್ರಿ ಅಂತಾ ಗುಟ್ಟು ರಟ್ಟು ಮಾಡಿದ್ದಾರೆ. ಪುರಸಭೆಯ 22 ಸದಸ್ಯರೂ ನಿಮ್ಮ ಪಾಲು ತೆಗೆದುಕೊಂಡಿದ್ದೀರಿ. ನಾನೇನು ಜನತೆಯಿಂದ ಆರಿಸಿ ಬಂದಿಲ್ಲವೇ? ಹಾಗಾದರೆ ನನಗೆ ಅದರಲ್ಲಿ ಯಾಕೆ ಪಾಲಿಲ್ಲ? ಪುರಸಭೆ ಹಾಲಿ ಅಧ್ಯಕ್ಷೆ ಭುವನೇಶ್ವರಿ ಪತಿ ಶಿವರೆಡ್ಡಿ, ನನ್ನ ಕಡೆಯಿಂದ ಹಣ ತಿಂದಿಲ್ವಾ ಎಂದು ಸದಸ್ಯೆ ಅನ್ನಪೂರ್ಣ ಅವರು ಬಹಿರಂಗವಾಗಿಯೇ ಅವಾಜ್ ಹಾಕಿದ್ದಾರೆ.

    ಸರ್ಕಾರಿ ಅನುದಾನ ಬಳಕೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ಪರ್ಸೆಂಟೇಜ್ ಕೊಡೋದು ತಗೋಳೋದು ಈವರೆಗೆ ಕದ್ದುಮುಚ್ಚಿ ನಡೆಯುತ್ತಿತ್ತು. ಆದರೆ ಅನ್ನಪೂರ್ಣಮ್ಮನ ಕೃಪೆಯಿಂದ ಈಗ ಜಾಣರ ಜಗಳ ಬೀದಿಗೆ ಬಂದಿದೆ.

    ಸಾರ್ವಜನಿಕರ ಕುಂದುಕೊರತೆ ಆಲಿಸಲು ಸ್ಥಳೀಯ ಸಂಸ್ಥೆಗಳು ಸಾಮಾನ್ಯ ಸಭೆ ನಡೆಸುತ್ತವೆ. ಆದರೆ ಇಲ್ಲಿನ ಸಾಮಾನ್ಯಸಭೆಯಲ್ಲಿ ಬರೀ ಪರ್ಸೆಂಟೇಜ್ ಲೆಕ್ಕಾಚಾರಕ್ಕೇ ಪ್ರತಿನಿಧಿಗಳು ಬರುವಂತೆ ಮಾತನಾಡುತ್ತಿದ್ದಾರೆ. ಇಷ್ಟರಲ್ಲೇ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಜಾಪ್ರಭುತ್ವ ಅದೆಷ್ಟು ಯಶಸ್ವಿಯಾಗಿದೆ, ಸಾರ್ವಜನಿಕರ ಹಣ ಎಷ್ಟು ಸದ್ಬಳಕೆ ಆಗುತ್ತಿದೆ ಅಂತಾ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

    https://www.youtube.com/watch?v=DBWmTehUvSI

  • SSLC ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡದ ಶಾಲೆಗಳ ಅನುದಾನ ಕಟ್!

    SSLC ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡದ ಶಾಲೆಗಳ ಅನುದಾನ ಕಟ್!

    ಬೆಂಗಳೂರು: ಶಿಕ್ಷಣ ಇಲಾಖೆಯಿಂದ ಎಡವಟ್ಟಿನ ಆದೇಶವೊಂದು ಹೊರಬಿದ್ದಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡದ ಶಾಲೆಗಳ ಅನುದಾನ ಕಟ್ ಮಾಡುವಂತೆ ಆದೇಶಿಸಿದೆ.

    ಅನುದಾನಿತ ಶಾಲೆಗಳ ಅನುದಾನ ತಡೆ ಹಿಡಿಯುವಂತೆ ಸರ್ಕಾರ ಆದೇಶ ನೀಡಿದೆ. 5 ವರ್ಷದ ಸರಾಸರಿ ಫಲಿತಾಂಶದಲ್ಲಿ ಒಂದು ಪರ್ಸೆಂಟ್ ಕಡಿಮೆ ಬಂದ್ರೂ ಅನುದಾನ ಕಟ್ ಮಾಡಬೇಕು ಅಂತ ಹೇಳೋ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜಿನೀಶ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.

    ಈ ಮೂಲಕ ಅನುದಾನಿತ ಶಾಲೆಗಳ ಮೇಲೆ ಸರ್ಕಾರ ಗಧಾ ಪ್ರಹಾರ ಮಾಡಿದೆ. ಆದ್ರೆ ಈ ನಿಯಮ ಸರ್ಕಾರಿ ಶಾಲೆಗಳಿಗೆ ಅನ್ವಯವಾಗದೆ, ಕೇವಲ ಅನುದಾನಿತ ಶಾಲೆಗಳಿಗೆ ಮಾತ್ರ ನಿಯಮ ಅನ್ವಯವಾಗಲಿದೆ ಅಂತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಸೂಚನೆ ಮೇಲೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ನೀಡಿದೆ.

    ಅನುದಾನ ನೀಡದಂತೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಆದೇಶ ನೀಡಿರುವುದು ಇದೀಗ ಸರ್ಕಾರಿ ಶಾಲೆಗಳಿಗೊಂದು ನ್ಯಾಯ, ಅನುದಾನಿತ ಶಾಲೆಗಳಿಗೊಂದು ನ್ಯಾಯ ಅನ್ನೋ ಪ್ರಶ್ನೆ ಮೂಡುವಂತೆ ಮಾಡಿದೆ.

  • ಅನುದಾನದ ಲೆಕ್ಕ ಕೇಳಿದ್ದಕ್ಕೆ ಆರ್‍ಟಿಐ ಕಾರ್ಯಕರ್ತನ ಮೇಲೆ ಹಲ್ಲೆ – ಆರೋಗ್ಯ ಕೇಂದ್ರದಲ್ಲಿ ಗುರಮ್ಮನ ಗೂಂಡಾಗಿರಿ

    ಅನುದಾನದ ಲೆಕ್ಕ ಕೇಳಿದ್ದಕ್ಕೆ ಆರ್‍ಟಿಐ ಕಾರ್ಯಕರ್ತನ ಮೇಲೆ ಹಲ್ಲೆ – ಆರೋಗ್ಯ ಕೇಂದ್ರದಲ್ಲಿ ಗುರಮ್ಮನ ಗೂಂಡಾಗಿರಿ

    ರಾಯಚೂರು: ಇದು ರಾಯಚೂರಿನ ಲಿಂಗಸುಗೂರು ತಾಲೂಕಿನ ಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಗುರಮ್ಮನ ಗೂಂಡಾಗಿರಿಯ ಸುದ್ದಿ.

    ಮಾಹಿತಿ ಹಕ್ಕು ಕಾಯ್ದೆಯಡಿ 2010ರಿಂದ ಇದುವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗು ಉಪಕೇಂದ್ರಕ್ಕೆ ಬಂದ ಅನುದಾನ ಎಷ್ಟು? ಅದನ್ನ ಯಾವುದಕ್ಕೆ ಬಳಸಿದ್ದೀರಿ ಅಂತ ಆರ್‍ಟಿಐ ಕಾರ್ಯಕರ್ತ ಹನುಮಂತ ನಂದಿಹಾಳ ಮಾಹಿತಿ ಕೇಳಿದ್ರು. 45 ದಿವಾದರೂ ಗುರಮ್ಮ ಮಾಹಿತಿ ನೀಡಿರಲಿಲ್ಲ. ಇದರ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗೆ ಹನುಮಂತ ಮೇಲ್ಮನವಿ ಸಲ್ಲಿಸಿದ್ದರು.

    ಮನವಿ ಮೇರೆಗೆ ನಾಲ್ಕು ಜನರ ತನಿಖಾ ತಂಡ ರಚಿಸಿದ್ದ ಡಿಎಚ್‍ಓ ಪರಿಶೀಲನೆಗೆ ಕಳುಹಿಸಿದ್ದರು. ತನಿಖಾ ತಂಡ ಪರಿಶೀಲನೆಗೆ ಬಂದಾಗ ಗುರಮ್ಮ ಆರ್‍ಟಿಐ ಕಾರ್ಯಕರ್ತನನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳಮೋಕ್ಷ ಮಾಡಿದ್ದಾಳೆ.

  • ಭಿಕ್ಷೆಯೆತ್ತಿ ಅನ್ನ ನೀಡುವ ಭರವಸೆ ನೀಡಿ ಮಾತು ಮರೆತ ಸಂಸದೆ ಶೋಭಾ ಕರಂದ್ಲಾಜೆ!

    ಭಿಕ್ಷೆಯೆತ್ತಿ ಅನ್ನ ನೀಡುವ ಭರವಸೆ ನೀಡಿ ಮಾತು ಮರೆತ ಸಂಸದೆ ಶೋಭಾ ಕರಂದ್ಲಾಜೆ!

    ಮಂಗಳೂರು: ಕಲ್ಲಡ್ಕದ ಎರಡು ಶಾಲೆಗಳಿಗೆ ರಾಜ್ಯ ಸರಕಾರ ಅನುದಾನ ಕಡಿತಗೊಳಿಸಿದಾಗ ಸಂಸದೆ ಶೋಭಾ ಕರಂದ್ಲಾಜೆ ಭಿಕ್ಷೆಯೆತ್ತಿ ಅನ್ನ ನೀಡುವ ಭರವಸೆ ನೀಡಿದ್ದರು.

    ಮಂಗಳೂರಿನ ಬಿಜೆಪಿ ಮುಖಂಡ ವೇದವ್ಯಾಸ ಕಾಮತ್ ಮನೆಯಲ್ಲಿ `ಅಕ್ಕಿ ಭಿಕ್ಷೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಅಲ್ಲದೆ ರಾಜ್ಯ ಮಹಿಳಾ ಮೋರ್ಚ ಘಟಕದ ಮೂಲಕ ಪ್ರತಿ ಸಂಕ್ರಾಂತಿಯಂದು ರಾಜ್ಯಾದ್ಯಂತ ಅಕ್ಕಿ ಭಿಕ್ಷೆ ಅಭಿಯಾನ ನಡೆಸುವ ಮೂಲಕ ಕಲ್ಲಡ್ಕದ ಎರಡು ಶಾಲೆಗಳಿಗೆ ಬಿಸಿಯೂಟದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು.

    ಅ. 1ರಂದು ಯೋಜನೆಗೆ ಚಾಲನೆ ನೀಡಿದ್ದು ಬಿಟ್ಟರೆ ಶೋಭಾ ಕರಂದ್ಲಾಜೆ ಸೇರಿ ಬಿಜೆಪಿ ಮುಖಂಡರು ಮಾತು ಮರೆತಿದ್ದಾರೆ. ಅದಾಕ್ಕಾಗಿ ಒಂದು ತಿಂಗಳ ಬಳಿಕ ದಕ್ಷಿಣ ಕನ್ನಡ ಮಹಿಳಾ ಮೋರ್ಚ ದವರು ಕಲ್ಲಡ್ಕ ಶಾಲೆಗೆ 11 ಕ್ವಿಂಟಾಲ್ ಅಕ್ಕಿ ನೀಡಿದ್ದಾರೆ. ಶಾಲೆಯಲ್ಲಿ ಪ್ರತಿದಿನ 3500 ಕ್ಕೂ ಹೆಚ್ಚು ಮಕ್ಕಳಿಗೆ ಬಿಸಿಯೂಟ ನೀಡುತ್ತಿದ್ದು, ಮಹಿಳಾ ಮೋರ್ಚ ನೀಡಿದ ಅಕ್ಕಿ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.

    ಶಾಲೆಯ ಮುಖ್ಯಸ್ಥರಾದ ಆರ್ ಎಸ್ ಎಸ್ ಮುಖಂಡ ಪ್ರಭಾಕರ ಭಟ್ ಮಾತ್ರ ಭಿಕ್ಷೆ ಎತ್ತಿಯಾದರೂ ಬಿಸಿಯೂಟ ನೀಡುತ್ತೀವಿ ಎಂದಿದ್ದರು. ಹಾಗಾದರೆ ಶೋಭಾ ಕರಂದ್ಲಾಜೆ ಅಕ್ಕಿ ಭಿಕ್ಷೆ ಹೆಸರಲ್ಲಿ ಜೋಳಿಗೆ ತೋರಿಸಿ ನಾಟಕವಾಡಿದರೇ ಎನ್ನುವ ಪ್ರಶ್ನೆ ಇದೀಗ ಅಲ್ಲಿನ ಜನರನ್ನು ಕಾಡುತ್ತಿದೆ.

  • ಜೆಡಿಎಸ್ ವಿರುದ್ಧ ಕಾಂಗ್ರೆಸ್ ಪಕ್ಷದ ಸದಸ್ಯರಿಂದ ಅಹೋರಾತ್ರಿ ಧರಣಿ

    ಜೆಡಿಎಸ್ ವಿರುದ್ಧ ಕಾಂಗ್ರೆಸ್ ಪಕ್ಷದ ಸದಸ್ಯರಿಂದ ಅಹೋರಾತ್ರಿ ಧರಣಿ

    ಮಂಡ್ಯ: ಅನುದಾನ ಹಂಚಿಕೆಯಲ್ಲಿ ಜೆಡಿಎಸ್ ಪಕ್ಷದ ಸದಸ್ಯರು ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಸದಸ್ಯರು ಮಂಡ್ಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ.

    ಮಂಡ್ಯ ಜಿಲ್ಲಾ ಪಂಚಾಯತಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಬಹುಮತವಿದೆ. ಅನುದಾನ ಹಂಚಿಕೆ ವಿಷಯ ಬಂದಾಗ ಜೆಡಿಎಸ್ ಪಕ್ಷದವರು ನಾವು ಬಹುಮತವಿದ್ದೇವೆ ಎಂದು ಹೆಚ್ಚಿನ ಅನುದಾನ ಇಟ್ಟುಕೊಂಡು ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ಕಡಿಮೆ ಅನುದಾನ ನೀಡುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ಇಬ್ಬರಿಂದ ಸೇರಿ ಸುಮಾರು ಒಂದು ಕೋಟಿ ಅನುದಾನ ಇಟ್ಟುಕೊಂಡಿದ್ದಾರೆ. ಆದರೆ ನಮಗೆ ಮಾತ್ರ ತಲಾ 3-5 ಲಕ್ಷ ಅನುದಾನ ನೀಡುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಕಾಂಗ್ರೆಸ್‍ನ 12 ಜನ ಜಿಲ್ಲಾಪಂಚಾಯಿತಿ ಸದಸ್ಯರು, ಮಂಡ್ಯ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿರುವ ಕಾವೇರಿ ಸಭಾಂಗಣದಲ್ಲಿ ಅಹೋರಾತ್ರಿ ಧರಣಿ ನಡೆಸಿದರು.

    ಅನುದಾನ ಹಂಚಿಕೆ ತಾರತಮ್ಯದಿಂದ ಕ್ಷೇತ್ರ ಅಭಿವೃದ್ಧಿ ಕಷ್ಟವಾಗಿದೆ. ಮತದಾರರ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. ಧರಣಿಯಲ್ಲಿ ಪಾಲ್ಗೊಂಡ ಒಟ್ಟು 12 ಜನ ಸದಸ್ಯರಲ್ಲಿ 6 ಮಂದಿ ಮಹಿಳಾ ಸದಸ್ಯರಿದ್ದು ಎಲ್ಲರೂ ಕೂಡ ಮನೆಗೆ ಹೋಗದೇ ಕಾವೇರಿ ಸಭಾಂಗಣದಲ್ಲೇ ರಾತ್ರಿಯೆಲ್ಲ ಧರಣಿ ನಡೆಸಿ ಜೆಡಿಎಸ್ ಪಕ್ಷದ ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದರು.

  • ನನ್ನ ಮಠಕ್ಕೆ 2 ಕೋಟಿ ಅನುದಾನ ಕೊಡಿ, ಇಲ್ಲಾಂದ್ರೆ ಪ್ರೊಟೆಸ್ಟ್ ಮಾಡ್ತೀನಿ- ಸಿಎಂಗೆ ಸ್ವಾಮೀಜಿ ಅವಾಜ್

    ನನ್ನ ಮಠಕ್ಕೆ 2 ಕೋಟಿ ಅನುದಾನ ಕೊಡಿ, ಇಲ್ಲಾಂದ್ರೆ ಪ್ರೊಟೆಸ್ಟ್ ಮಾಡ್ತೀನಿ- ಸಿಎಂಗೆ ಸ್ವಾಮೀಜಿ ಅವಾಜ್

    ಬೆಂಗಳೂರು: ಮಠಕ್ಕೆ 2 ಕೋಟಿ ರೂಪಾಯಿ ಅನುದಾನ ಕೊಡಿ, ಇಲ್ಲಾಂದ್ರೆ ಪ್ರೊಟೆಸ್ಟ್ ಮಾಡ್ತೀನಿ ಅಂತ ಅಖಿಲ ಕರ್ನಾಟಕ ಹಡಪದ ಅಪ್ಪಣ ಮಠದ ಅನ್ನದಾನ ಭಾರತಿ ಸ್ವಾಮಿಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅವಾಜ್ ಹಾಕಿದ ಘಟನೆ ನಡೆದಿದೆ.

    ಬೆಂಗಳೂರಿನ ಶಕ್ತಿ ಭವನದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಗೂ ಮುನ್ನ ಸ್ವಾಮೀಜಿ ಹಾಗೂ ಸಿಎಂ ನಡುವೆ ವಾಗ್ವಾದ ನಡೆಯಿತು. ತಂಗಡಿಗೆಯ ಮಠಕ್ಕೆ ಎರಡು ಕೋಟಿ ರೂ. ಅನುದಾನ ಕೊಡುವಂತೆ ಸ್ವಾಮೀಜಿ ಬೇಡಿಕೆ ಇಟ್ರು. ರೀ ಕೊಡ್ರಿ ಸ್ವಾಮಿ ಎರಡು ಕೋಟಿ, ಇಲ್ಲದಿದ್ದರೆ ಪ್ರತಿಭಟನೆ ಮಾಡ್ತೀನಿ ಅಂತ ಸಿಎಂಗೆ ಎಚ್ಚರಿಕೆ ನೀಡಿದ್ರು.

    ಸ್ವಾಮೀಜಿ ಮಾತಿಗೆ ಸಿಟ್ಟಿಗೆದ್ದು ರೇಗಿದ ಸಿಎಂ, ರೀ ಏನ್ರೀ.. ಕೇಳ್ರಿ ಮೊದಲು ಇಲ್ಲಿ, ಸ್ಟ್ರೈಕ್ ಗೀಕ್ ಗೆ ಎಲ್ಲ ಹೆದರಲ್ಲ ನಾವು ಅಂದ್ರು. ಇದಕ್ಕೆ ಪ್ರತಿಯಾಗಿ ಸ್ವಾಮೀಜಿ, ಕಳೆದ ಬಾರಿ ಕೊಡ್ತೀನಿ ಅಂತ ಹೇಳಿ ಕೊಟ್ಟಿಲ್ಲ. ಏನ್ ತಿಳ್ಕೊಂಡಿದ್ದೀರಿ ನೀವು? ಕೊಡಲಿಲ್ಲ ಅಂದ್ರೆ ಪ್ರೊಟೆಸ್ಟ್ ಮಾಡ್ತೀನಿ. ಇಲ್ಲೇ ಈಗಲೇ ಬರೆಯಿರಿ, ಬರೆದು ನನ್ನ ಕೈಯಲ್ಲೇ ಕೊಡ್ರಿ ಅಂತ ಏರು ಧ್ವನಿಯಲ್ಲಿ ಸಿಎಂಗೆ ಕೇಳಿದ್ರು.

    ನಂತರ ಮಾತನಾಡಿದ ಸ್ವಾಮೀಜಿ, ಮಠದ ಅಭಿವೃದ್ಧಿಗೆ 2 ಕೋಟಿ ರೂ. ಕೊಡ್ತೀನಿ ಎಂದು ಮಾತು ಕೊಟ್ಟಿದ್ದಾರೆ. ಅವರ ಮೇಲೆ ಭರವಸೆಯೂ ಇದೆ. ಕೊಟ್ಟೇ ಕೊಡ್ತಾರೆ ಅನ್ನೋ ನಂಬಿಕೆ ಇದೆ. ಗಟ್ಟಿಯಾಗೇ ಹೇಳಬೇಕಾದ ಪ್ರಸಂಗ ಬಂತು. ಅದಕ್ಕೆ ಸಿದ್ದರಾಮಯ್ಯ ಅವರು ಒಪ್ಪಿಕೊಂಡಿದ್ದಾರೆ. ಕೊಡ್ತೀನಿ ಎಂದು ಹೇಳಿದ್ದಾರೆ. ಆ ಭರವಸೆ ಮೇಲೆ ಹೋಗ್ತಾ ಇದ್ದೇನೆ ಅಂದ್ರು.

  • ಆರ್‍ಟಿಇ ಅಡಿ ಸೀಟು ಸಿಕ್ಕರೂ ರಾಯಚೂರಿನ ಮಕ್ಕಳಿಗೆ ಶಾಲಾ ಪ್ರವೇಶಾತಿ ಇಲ್ಲ!

    ರಾಯಚೂರು : ಬಡ ಮಕ್ಕಳಿಗೆ ಉತ್ತಮ ಶಾಲೆಗಳಲ್ಲಿ ಶಿಕ್ಷಣ ಸಿಗಲಿ ಅಂತ ಜಾರಿಗೆ ತಂದ ಆರ್‍ಟಿಇ ಕಾಯ್ದೆ ಸೌಲಭ್ಯ ರಾಯಚೂರಿನ ಮಕ್ಕಳಿಗೆ ಸಿಕ್ಕರೂ ಸಿಗದಂತಾಗಿದೆ.

    ಮಕ್ಕಳು ಸೀಟು ಪಡೆದ ರಾಯಚೂರಿನ ಪಂಚಲಿಂಗೇಶ್ವರ ಕಾಲೋನಿಯ ನಿಸರ್ಗ ವಿದ್ಯಾಲಯ ಶಾಲೆ ಏಕಾಏಕಿ ಮುಚ್ಚಿದ್ದರಿಂದ ಶಿಕ್ಷಣ ಇಲಾಖೆ ಮತ್ತೊಂದು ಖಾಸಗಿ ಶಾಲೆಯನ್ನ ಸೂಚಿಸಿತ್ತು. ಆದ್ರೆ ಇಲಾಖೆ ಸೂಚಿಸಿದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಆಡಳಿತ ಮಂಡಳಿ ಆರ್‍ಟಿಇ ಅನುದಾನವಿಲ್ಲದ ಕಾರಣ ಫೀಸ್ ಕಟ್ಟದಿದ್ದರೆ ಮಕ್ಕಳಿಗೆ ಪ್ರವೇಶ ನೀಡಲ್ಲ ಅಂತ ಪಟ್ಟುಹಿಡಿದಿರೋದು ಕಾಯ್ದೆ ವೈಫಲ್ಯಕ್ಕೆ ಕಾರಣವಾಗಿದೆ.

    ಆರ್‍ಟಿಇ ಅಡಿ ಸೀಟು ಪಡೆದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಈಗ ಕಂಗಾಲಾಗಿದ್ದಾರೆ. ಏಕಾಏಕಿ ಶಾಲೆ ಮುಚ್ಚಿದ್ದರಿಂದ ಇಲ್ಲಿನ ಮಕ್ಕಳ ಪರಸ್ಥಿತಿ ಡೋಲಾಯಮಾನವಾಗಿದೆ. 2013-14 ಹಾಗೂ 2015-16ರ ಸಾಲಿನಲ್ಲಿ ಆರ್‍ಟಿಇ ಅಡಿ ಸೀಟು ಪಡೆದ 13 ವಿದ್ಯಾರ್ಥಿಗಳಿಗೆ ಈಗ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದು ಮುಂದುವರೆಸಲು ಶಿಕ್ಷಣ ಇಲಾಖೆ ಕ್ರಮಕೈಗೊಂಡಿತ್ತು. ಆದ್ರೆ ಆರ್‍ಟಿಇ ಅನುದಾನವಿಲ್ಲದ ಕಾರಣ ಶಾಲಾ ಶುಲ್ಕ 10 ಸಾವಿರದ 400 ರೂಪಾಯಿ ಕೂಡಲೇ ಕಟ್ಟುವಂತೆ ಪೋಷಕರಿಗೆ ಒತ್ತಾಯಿಸಿದೆ.

    ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಆದ್ರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸುಮ್ಮನಿರುವುದರಿಂದ ಮಕ್ಕಳಿಗೆ ನಾವು ಪ್ರವೇಶಾತಿ ಕೊಡಲು ಸಾಧ್ಯವಿಲ್ಲ. ಪೋಷಕರು ಕೂಡಲೇ ಶಾಲಾ ಶುಲ್ಕ ಕಟ್ಟದಿದ್ದರೇ ಮಕ್ಕಳ ಪ್ರವೇಶಾತಿಯನ್ನ ರದ್ದುಗೊಳಿಸುತ್ತೇವೆ ಎಂದು ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ಮಂಜುಳಾದೇವಿ ಹೇಳಿದ್ದಾರೆ.

    ನಿಸರ್ಗ ವಿದ್ಯಾಲಯ ತಮ್ಮ ಸಂಸ್ಥೆಗೆ ಬರುತ್ತಿದ್ದ ಆರ್‍ಟಿಇ ಅನುದಾನವನ್ನ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ವರ್ಗಾಯಿಸುವಂತೆ ಶಿಕ್ಷಣ ಇಲಾಖೆಗೆ ಈಗಾಗಲೇ ಕೇಳಿಕೊಂಡಿದೆ. ಆದ್ರೆ ಇಲಾಖೆಯ ಸಾಫ್ಟವೇರ್‍ನಲ್ಲಿ ಪ್ರಸಕ್ತ ವರ್ಷದಲ್ಲಿ ನಿಸರ್ಗ ವಿದ್ಯಾಲಯ ಶಾಲೆಯ ಹೆಸರು ಹಾಗೂ ಡೈಸ್ ಸಂಖ್ಯೆಯೇ ಇಲ್ಲ. ಹೀಗಾಗಿ ಶಾಲೆಗೆ ಅನುಧಾನವೂ ಬಿಡುಗಡೆಯಾಗುವುದಿಲ್ಲ. ಈಗ ಶಿಕ್ಷಣ ಇಲಾಖೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸದಿರುವುದು ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಲ್ಲಿ ಭಯಹುಟ್ಟುವಂತೆ ಮಾಡಿದೆ.

    ಒಟ್ನಲ್ಲಿ, ದೇವರು ಕೊಟ್ರೂ ಪೂಜಾರಿ ವರ ಕೊಡಲಿಲ್ಲ ಅನ್ನೋ ಹಾಗೇ ಆರ್‍ಟಿಇ ಅಡಿ ಸೀಟು ಸಿಕ್ಕರೂ ಮಕ್ಕಳಿಗೆ ಶಾಲಾ ಪ್ರವೇಶಾತಿ ಸಿಗುತ್ತಿಲ್ಲ. ಕೂಡಲೇ ಶಿಕ್ಷಣ ಇಲಾಖೆ ಎಚ್ಚೆತ್ತು ಬಡ ಮಕ್ಕಳ ಸಮಸ್ಯೆಗೆ ಸ್ಪಂದಿಸಬೇಕಿದೆ. ಸಮಸ್ಯೆಯನ್ನ ಅರಿತು ಕೂಡಲೇ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದ್ದಾರೆ.