Tag: ಅನುದಾನ

  • ಶಾಸಕರ ಅನುದಾನವನ್ನು ಕಡಿತ ಮಾಡಬೇಡಿ – ಬಿಎಸ್‍ವೈಗೆ ಹೆಚ್‍ಡಿಕೆ ಮನವಿ

    ಶಾಸಕರ ಅನುದಾನವನ್ನು ಕಡಿತ ಮಾಡಬೇಡಿ – ಬಿಎಸ್‍ವೈಗೆ ಹೆಚ್‍ಡಿಕೆ ಮನವಿ

    ಬೆಂಗಳೂರು: ಶಾಸಕರ ಅನುದಾನವನ್ನು ಕಡಿತ ಮಾಡಬೇಡಿ ಎಂದು ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿಯವರು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

    ಕೊರೊನಾ ಕಾಲದಿಂದ ಕ್ಷೇತ್ರಗಳ ಅಭಿವೃದ್ಧಿ ಕುಂಠಿತವಾಗಿದೆ. ಹೀಗಾಗಿ ಶಾಸಕರಿಗೆ ನೀಡುವ ಅನುದಾನವನ್ನು ಕಡಿತಗೊಳಿಸದೆ ಬಿಡುಗಡೆ ಮಾಡಿ ಎಂದು ಮನವಿ ಮಾಡಿ ಕುಮಾರಸ್ವಾಮಿಯವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

    ಹಿಂದಿನ ಸರ್ಕಾರದಲ್ಲಿ ಪಕ್ಷಾತೀತವಾಗಿ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಘೋಷಿಸಲಾಗಿದ್ದ ಅನುದಾನವನ್ನು ಕಡಿತಗೊಳಿಸದೆ ಬಿಡುಗಡೆ ಮಾಡುವಂತೆ ಕುಮಾರಸ್ವಾಮಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಜೊತೆಗೆ ರಾಜ್ಯದ ಎಲ್ಲ ಶಾಸಕರುಗಳಿಗೆ ನೀಡಲಾಗಿದ್ದ ಅನುದಾನವನ್ನು ಪೂರ್ಣಪ್ರಮಾಣದಲ್ಲಿ ಬಿಡುಗಡೆ ಮಾಡುವ ಮೂಲಕ ಔದಾರ್ಯ ಪ್ರದರ್ಶಿಸುವಂತೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೋರಿದ್ದಾರೆ.

    ಕೊರೊನಾ ಸಂಕಷ್ಟ ಸಮಯದಲ್ಲಿ ಹಾಗೂ ಲಾಕ್‍ಡೌನ್ ನಂತರ ಜನಜೀವನ ತತ್ತರಗೊಂಡಿದೆ. ಅಭಿವೃದ್ಧಿ ಕಾಮಗಾರಿಗಳು ಆಮೆಗತಿಯಲ್ಲಿ ಸಾಗಿವೆ. ಈ ಪರಿಸ್ಥಿತಿಯನ್ನು ಮನಗಂಡು ಮುಖ್ಯಮಂತ್ರಿಗಳು ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವ ಮೂಲಕ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಆರ್ಥಿಕ ಸಂಪನ್ಮೂಲ ಸರಿದೂಗಿಸಿಕೊಂಡು ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಒದಗಿಸಬೇಕು ಎಂದು ಹೆಚ್‍ಡಿಕೆ ಕೇಳಿಕೊಂಡಿದ್ದಾರೆ.

  • ಪಿಎಂ ಕೇರ್ಸ್‍ನಿಂದ 2ನೇ ಹಂತದ ಅನುದಾನ ಬಿಡುಗಡೆ – ವೆಂಟಿಲೇಟರ್ ಖರೀದಿಗೆ ಆದ್ಯತೆ

    ಪಿಎಂ ಕೇರ್ಸ್‍ನಿಂದ 2ನೇ ಹಂತದ ಅನುದಾನ ಬಿಡುಗಡೆ – ವೆಂಟಿಲೇಟರ್ ಖರೀದಿಗೆ ಆದ್ಯತೆ

    ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ವೆಂಟಿಲೇಟರ್ ಗಳ ಖರೀದಿಗಾಗಿ ಕೇಂದ್ರ ಸರ್ಕಾರ ಪಿಎಂ ಕೇರ್ಸ್ ನಿಂದ ಎರಡನೇ ಹಂತದಲ್ಲಿ ಅನುದಾನ ಬಿಡುಗಡೆ ಮಾಡಿದೆ.

    ಎರಡನೇ ಹಂತದಲ್ಲಿ ಮೂರು ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ್ದು, ದೇಶದಲ್ಲಿ ತಯಾರಾದ ವೆಂಟಿಲೇಟರ್ ಖರೀದಿಗೆ 2,000 ಕೋಟಿ ವಲಸೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಹಂಚಿಕೆ 1,000 ಕೋಟಿ ಮೀಸಲಿಟ್ಟಿದೆ.

    2,000 ಕೋಟಿ ವೆಚ್ಚ ದಲ್ಲಿ ಸುಮಾರು 50,000 ವೆಂಟಿಲೇಟರ್ ಖರೀದಿ ಮಾಡಲು ನಿರ್ಧರಿಸಿದ್ದು ಈ ಪೈಕಿ 30,000 ವೆಂಟಿಲೇಟರ್ ಗಳನ್ನು ಭಾರತ್ ಎಲೆಕ್ಟ್ರಾನಿಕ್ಸ್ ತಯಾರಿಸುತ್ತಿದೆ. ಆಗ್ವಾ ಹೆಲ್ತ್‍ಕೇರ್ 10,000 ಎಎಂಟಿಝಡ್ ಬೇಸಿಕ್ 5,650 ಎಎಂಟಿಝಡ್ ಹೈ ಎಂಡ್ 4,000 ಹಾಗೂ ಅಲೈಡ್ ಮೆಡಿಕಲ್ ನಿಂದ 350 ವೆಂಟಿಲೇಟರ್ ಖರೀದಿಯಾಗಲಿದೆ.

    ಈವರೆಗೂ 2,923 ವೆಂಟಿಲೇಟರ್ ತಯಾರಿಸಿದ್ದು 1340 ವೆಂಟಿಲೇಟರ್ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈಗಾಗಲೇ ಹಂಚಿಕೆ ಮಾಡಿದೆ. ಇದರಲ್ಲಿ ಮಹಾರಾಷ್ಟ್ರಕ್ಕೆ 275, ದೆಹಲಿಗೆ 275, ಗುಜರಾತ್ 175, ಬಿಹಾರ್ 100, ಕರ್ನಾಟಕಕ್ಕೆ 90, ರಾಜಸ್ಥಾನಕ್ಕೆ 75 ವೆಂಟಿಲೇಟರ್ ನೀಡಿದ್ದು ಮುಂದಿನ ಹಂತದಲ್ಲಿ 14,000 ವೆಂಟಿಲೇಟರ್ ಹಂಚಿಕೆಯಾಗಲಿದೆ.

    ವಲಸೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಾವಿರ ಕೋಟಿ ನೀಡಿದ್ದು, ಕಾರ್ಮಿಕರ ಜನಸಂಖ್ಯೆ ಆಧಾರದಡಿ ಅನುದಾನ ನೀಡಿದೆ. ಮಹಾರಾಷ್ಟ್ರ 181 ಕೋಟಿ, ಉತ್ತರ ಪ್ರದೇಶ 103 ಕೋಟಿ, ತಮಿಳುನಾಡು 83 ಕೋಟಿ, ಗುಜರಾತ್ 66 ಕೋಟಿ, ದೆಹಲಿ 55 ಕೋಟಿ, ಪಶ್ಚಿಮ ಬಂಗಾಳ 53 ಕೋಟಿ, ಬಿಹಾರ 51 ಕೋಟಿ, ಮಧ್ಯಪ್ರದೇಶ 50 ಕೋಟಿ, ರಾಜಸ್ಥಾನ 50 ಕೋಟಿ ಮತ್ತು ಕರ್ನಾಟಕ 34 ಕೋಟಿ ನೀಡಲಾಗಿದೆ.

    ಈ ಹಿಂದೆ ಮೊದಲ ಹಂತದಲ್ಲಿ 3,100 ಕೋಟಿ ಹಣವನ್ನು ಪಿಎಂ ಕೇರ್ಸ್ ನಿಂದ ಬಿಡುಗಡೆ ಮಾಡಲಾಗಿತ್ತು. ಮೊದಲ ಕಂತಿನಲ್ಲೂ ವೆಂಟಿಲೇಟರ್ ಖರೀದಿಗೆ ಎರಡು ಸಾವಿರ, ವಲಸೆ ಕಾರ್ಮಿರಿಗೆ ಸಾವಿರ ಹಾಗೂ ಲಸಿಕೆ ಅಭಿವೃದ್ಧಿ ನೂರು ಕೋಟಿ ಬಿಡುಗಡೆ ಮಾಡಲಾಗಿತ್ತು.

    ಪಿಎಂ ಕೇರ್ಸ್ ಗೆ ಕೋಟ್ಯಾಂತರ ರೂ. ದಾನ ಬಂದಿದ್ದು ಕೇಂದ್ರ ಸರ್ಕಾರ ಇದರ ಲೆಕ್ಕ ನೀಡುತ್ತಿಲ್ಲ ಮತ್ತು ಅದರ ಬಳಕೆ ಮಾಡುತ್ತಿಲ್ಲ ಎನ್ನುವ ಟೀಕೆಗಳು ಕೇಳಿ ಬಂದಿದ್ದವು. ಈ ಬಗ್ಗೆ ಮಾಹಿತಿ ನೀಡಲು ಸೂಚಿಸುವಂತೆ ಸುಪ್ರೀಂಕೋರ್ಟ್, ದೆಹಲಿ ಮದ್ರಾಸ್ ಸೇರಿಸಂತೆ ಹಲವು ಹೈಕೋರ್ಟ್ ಗಳಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಬೆನ್ನಲ್ಲೆ ಕೇಂದ್ರ ಸರ್ಕಾರ ಪಿಎಂ ಕೇರ್ಸ್ ನಿಂದ ಅನುದಾನ ಬಿಡುಗಡೆ ಮಾಡಿದೆ.

  • ಈ ಸಮಯದಲ್ಲಿ ರಾಜಕೀಯ ಬೇಳೆ ಬೇಯಿಸಲು ಹೋಗೋದು ಸರಿಯಲ್ಲ: ಗೋಪಾಲಸ್ವಾಮಿ

    ಈ ಸಮಯದಲ್ಲಿ ರಾಜಕೀಯ ಬೇಳೆ ಬೇಯಿಸಲು ಹೋಗೋದು ಸರಿಯಲ್ಲ: ಗೋಪಾಲಸ್ವಾಮಿ

    – ರೇವಣ್ಣನ ಮೇಲೆ ಎಂಎಲ್‍ಸಿ ಗೋಪಾಲಸ್ವಾಮಿ ಆಕ್ರೋಶ

    ಹಾಸನ: ಜಿಲ್ಲೆಯಲ್ಲಿ ಕೊರೊನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನಡುವೆ ಕೊರೊನಾ ವಿರುದ್ಧ ಹೋರಾಡಲು ಬಳಸಬಹುದಾಗಿದ್ದ ಸುಮಾರು 112 ಕೋಟಿ ಹಣ ಮಾಜಿ ಸಚಿವ ರೇವಣ್ಣ ಅವರಿಂದ ಬಳಕೆಯಾಗದೆ ವಾಪಸ್ಸಾಗುವ ಪರಿಸ್ಥಿತಿ ಬಂದಿದೆ ಎಂದು ಎಂಎಲ್‍ಸಿ ಗೋಪಾಲಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

    15ನೇ ಹಣಕಾಸಿನಲ್ಲಿ ಜಿಲ್ಲಾಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಮೂರಕ್ಕೂ ಸೇರಿ ಹಾಸನ ಜಿಲ್ಲೆಗೆ ಸುಮಾರು 112 ಕೋಟಿ ಹಣ ಬಂದಿದೆ. ಈ ಹಣವನ್ನು ಅಭಿವೃದ್ಧಿ ಕಾರ್ಯದ ಜೊತೆಗೆ ಕೊರೊನಾ ವಿರುದ್ಧ ಹೋರಾಟಕ್ಕೆ ಬೇಕಾದ ವೈದ್ಯಕೀಯ ವಸ್ತುಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿಸಲು ಬಳಸಬಹುದಾಗಿದೆ ಎಂದು ಗೋಪಾಲಸ್ವಾಮಿ ಹೇಳಿದ್ದಾರೆ.

    ಈ ಹಣ ಬಳಸಬೇಕು ಅಂದರೆ ಮೇ 31ರ ಒಳಗೆ ಜಿಲ್ಲಾ ಪಂಚಾಯ್ತಿ ಸಭೆ ಕರೆದು ಅನುಮೋದನೆ ಮಾಡಿ ಎಂಬ ನಿಯಮವಿದೆ. ಆದ್ದರಿಂದ ಕೊರೊನಾ ಹಿನ್ನೆಲೆಯಲ್ಲಿ ಹಣ ಬಳಸುವ ಸಂಬಂಧ ನಿನ್ನೆ ಜಿಲ್ಲಾ ಪಂಚಾಯ್ತಿಯಲ್ಲಿ, ಅಧ್ಯಕ್ಷೆ ಶ್ವೇತಾ ದೇವರಾಜ್ ನೇತೃತ್ವದಲ್ಲಿ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿತ್ತು. ಜಿಲ್ಲಾ ಪಂಚಾಯ್ತಿಯಲ್ಲಿ ಜೆಡಿಎಸ್‍ನ 23, ಕಾಂಗ್ರೆಸ್ಸಿನ 16, ಬಿಜೆಪಿಯ ಒಬ್ಬರು ಸದಸ್ಯರಿದ್ದು, ನಿನ್ನೆ ಕರೆದಿದ್ದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಗೆ ಜೆಡಿಎಸ್‍ನ 23 ಸದಸ್ಯರು ಸಾಮೂಹಿಕವಾಗಿ ಗೈರಾಗಿದ್ದರು. ಇದರಿಂದ ಸಭೆಯಲ್ಲಿ ಕೋರಂ ಕೊರತೆಯಾಗಿ 112 ಕೋಟಿ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ಅನುಮೋದನೆಯಾಗಿಲ್ಲ. ಇದಕ್ಕೆಲ್ಲ ಮಾಜಿ ಸಚಿವ ರೇವಣ್ಣ ನೇರ ಹೊಣೆ ಎಂದು ಎಂಎಲ್‍ಸಿ ಗೋಪಾಲಸ್ವಾಮಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಗಂಭೀರ ಆರೋಪ ಮಾಡಿದ್ದಾರೆ.

    ನಮ್ಮ ವೈಯಕ್ತಿಕ ಕೆಲಸಕ್ಕೆ ಕೇಳಲು ಜಿಲ್ಲಾ ಪಂಚಾಯ್ತಿ ಸಭೆ ಕರೆದಿಲ್ಲ. ಪಿಪಿಇ ಕಿಟ್, ವೆಂಟಿಲೇಟರ್ ಸಾರ್ಟೆಜ್ ಇದೆ. 112 ಕೋಟಿಯಲ್ಲಿ ನಾವು ಇದನ್ನೆಲ್ಲ ತರಲು ಒಂದಷ್ಟು ಹಣ ಬಳಬಹುದು. ನಮ್ಮ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹೆಚ್ಚಾಗುತ್ತಿದೆ. ಈ ಸಮಯದಲ್ಲಿ ರಾಜಕೀಯ ಬೇಳೆ ಬೇಯಿಸಲು ಹೋಗೋದು ಸರಿಯಲ್ಲ. ಒಂದು ವೇಳೆ ಹಣ ವಾಪಸ್ ಹೋದರೆ ರೇವಣ್ಣ ಅವರು ನೇರವಾಗಿ ಇದರ ಜವಾಬ್ದಾರಿ ಹೊರಬೇಕಾಗುತ್ತೆ. ಇದೇ ತಿಂಗಳು 29ರಂದು ಮತ್ತೆ ಸಭೆ ಕರೆದಿದ್ದೇವೆ. ದಯಮಾಡಿ ಬನ್ನಿ ಎಂದು ಕಿಡಿಕಾರಿದರು.

  • ಸಂಸದರ ಪರಿಹಾರ ನಿಧಿಯಿಂದ ಒಂದು ಕೋಟಿ ರೂ. ನೀಡಿ: ಸ್ಪೀಕರ್ ಓಂ ಬಿರ್ಲಾ

    ಸಂಸದರ ಪರಿಹಾರ ನಿಧಿಯಿಂದ ಒಂದು ಕೋಟಿ ರೂ. ನೀಡಿ: ಸ್ಪೀಕರ್ ಓಂ ಬಿರ್ಲಾ

    ನವದೆಹಲಿ: ಪ್ರಪಂಚಾದ್ಯಂತ ಕೊರೊನಾ ಮಹಾಮಾರಿ ತಾಂಡವವಾಡುತ್ತಿದ್ದು, ದೇಶದಲ್ಲಿಯೂ ಸೋಂಕಿತರ ಸಂಖ್ಯೆ 933 ಕ್ಕೂ ಅಧಿಕವಾಗಿದೆ. ಹೀಗಾಗಿ ಎಲ್ಲ ನಟರು ಹಾಗೂ ಧನಿಕರು ಸಹಾಯ ಹಸ್ತ ಚಾಚುತ್ತಿದ್ದಾರೆ. ಇದರ ನಿಯಂತ್ರಣ ಅಗತ್ಯವಾಗಿದ್ದು, ಹೀಗಾಗಿ ಎಲ್ಲ ಸಂಸದರು ತಮ್ಮ ಪರಿಹಾರ ನಿಧಿಯಿಂದ ಕನಿಷ್ಟ ಒಂದು ಕೋಟಿ ರೂ.ಗಳನ್ನು ನೀಡುವಂತೆ ತಿಳಿಸಿದ್ದಾರೆ.

    ಕೆಲ ಸಂಸದರು ಈಗಾಗಲೇ ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಹಣ ನೀಡುತ್ತಿದ್ದಾರೆ. ಇನ್ನೂ ಕೆಲವರು ಬಿಡುಗಡೆ ಮಾಡಿಲ್ಲ. ಹೀಗಾಗಿ ಎಲ್ಲ ಸಂಸದರು ಕನಿಷ್ಟ ಒಂದು ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಬೇಕು ಎಂದು ಸೂಚಿಸಿದ್ದಾರೆ.

    ಇಡೀ ದೇಶವನ್ನು ಲಾಕ್‍ಡೌನ್ ಮಾಡಿ ನಾಲ್ಕು ದಿನಗಳು ಮಾತ್ರ ಆಗಿದ್ದು, ಸೋಂಕಿತರ ಸಂಖ್ಯೆ ಆಗಲೇ ಸಾವಿರಕ್ಕೆ ತಲುಪುತ್ತಿದೆ. ಒಟ್ಟು 922 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಇದರಲ್ಲಿ 76 ಜನ ಗುಣಮುಖರಾಗಿ ಡಿಸ್‍ಚಾರ್ಜ್ ಆಗಿದ್ದಾರೆ. ಪ್ರಸ್ತುತ 830 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

    ವಿಶ್ವಾದ್ಯಂತ 28,791 ಜನ ಸಾವನ್ನಪ್ಪಿದ್ದು, 6.21 ಲಕ್ಷ ಜನರಿಗೆ ಸೋಂಕು ತಗುಲಿದೆ. ಅಮೇರಿಕದಲ್ಲೇ ಹೆಚ್ಚು ಸೋಂಕಿತ ಪ್ರಕರಣಗಳಿದ್ದು, ಇಟಲಿ ಮೂರನೇ ಸ್ಥಾನದಲ್ಲಿದೆ. ಇದರ ಮಧ್ಯೆಯೇ ಇಂಗ್ಲೆಂಡ್‍ನಲ್ಲಿ ಒಟ್ಟು 1 ಸಾವಿರ ಜನ ಮೃತಪಟ್ಟಿದ್ದಾರೆ. ಯೂರೋಪ್‍ನಲ್ಲಿ 20 ಸಾವಿರ ಜನ ಸಾವನ್ನಪ್ಪಿದ್ದಾರೆ.

    ಇದೆಲ್ಲದರ ಮಧ್ಯೆ ದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ದೆಹಲಿಯ ತಿಹಾರ್ ಜೈಲಿನಲ್ಲಿನ 356 ಜನ ಖೈದಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗಿದೆ. ಸುಮಾರು 45 ದಿನಗಳ ಕಾಲ ಖೈದಿಗಳು ಹೊರಗಡೆಯೇ ಇರಲಿದ್ದಾರೆ. ಜೈಲಿನಲ್ಲಿ ಜನದಟ್ಟಣೆ ಉಂಟಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

  • ಬೇರೆ ಕಡೆ ಅನುದಾನ ನೀಡಲು ಮುಂದಾದ ಅಧಿಕಾರಿ – ಗ್ರಾ.ಪಂ ಅಧ್ಯಕ್ಷೆಯಿಂದ ತರಾಟೆ

    ಬೇರೆ ಕಡೆ ಅನುದಾನ ನೀಡಲು ಮುಂದಾದ ಅಧಿಕಾರಿ – ಗ್ರಾ.ಪಂ ಅಧ್ಯಕ್ಷೆಯಿಂದ ತರಾಟೆ

    ಚಿಕ್ಕೋಡಿ/ಬೆಳಗಾವಿ: ದಲಿತರಿಗೆ ಬಂದಿದ್ದ ಅನುದಾನವನ್ನ ಬೇರೆ ಕಡೆ ನೀಡಲು ಬಂದಿದ್ದ ಅಧಿಕಾರಿಯನ್ನ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ನಡೆದಿದೆ.

    ಎಲಿಮುನ್ನೋಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕಸ್ತೂರಿ ತಿಪ್ಪಾಗೋಳ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಹುಕ್ಕೇರಿ ತಾಲೂಕು ಪಂಚಾಯಿತಿ ಕಿರಿಯ ಅಭಿಯಂತರಾದ ಆರ್.ಬಿ.ಶ್ರೀಖಂಡೆ ಎಲಿಮುನ್ನೋಳಿ ಗ್ರಾಮದ ದಲಿತರಿಗೆ ಮೀಸಲಿಟ್ಟಿದ್ದ ಅನುದಾನವನ್ನ ಬೇರೆ ಕಡೆ ವರ್ಗಾವಣೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ವಿಚಾರಿಸಲು ತಾಲೂಕು ಪಂಚಾಯ್ತಿ ಕಚೇರಿಗೆ ಬಂದಿದ್ದರು. ಈ ವೇಳೆ ಅವರ ಜೊತೆಗೆ ಅಸಭ್ಯವಾಗಿ ವರ್ತಿಸಿದ ಅಭಿಯಂತರರ ವಿರುದ್ಧ ಗರಂ ಆದ ಅಧ್ಯಕ್ಷರು ಶ್ರೀಖಂಡೆರನ್ನು ತರಾಟೆಗೆ ತೆಗೆದುಕೊಂಡರು.

    ಇದನ್ನೆಲ್ಲಾ ಗಮನಿಸಿ ತೆಪ್ಪಗಾದ ಶ್ರೀಖಂಡೆ, ನೀವು ಎಲ್ಲಿ ಹೇಳುತ್ತೀರೋ ಅಲ್ಲಿಯೇ ಬೋರ್ ವೆಲ್ ಕೊರೆಸಿ ಕೊಡುತ್ತೇನೆ ಹೋಗಿ ಎಂದು ಸಮಾಧಾನ ಮಾಡಲು ಮುಂದಾಗಿದ್ದರು. ಅಧ್ಯಕ್ಷರು ತರಾಟೆಗೆ ತೆಗೆದುಕೊಳ್ಳುತ್ತಿದ್ದ ದೃಶ್ಯವನ್ನ ಮೊಬೈಲ್‍ನಲ್ಲಿ ಸೆರೆ ಹಿಡಿಯುತ್ತಿದ್ದ ಪತ್ರಕರ್ತರ ಮೇಲೂ ದರ್ಪ ತೋರಿದ್ದಾರೆ. ಮುಂದೆ ಬನ್ನಿ ಇನ್ನೂ ಚೆನ್ನಾಗಿ ಬರುತ್ತೆ ಎಂದು ಉಡಾಫೆಯಾಗಿ ಮಾತಾಡಿದ್ದಾರೆ. ಆಗ ಅಲ್ಲಿದ್ದ ಪತ್ರಕರ್ತರು ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡರು. ಬಳಿಕ ತೆಪ್ಪಗಾಗಿ ಕುಳಿತ ಅಧಿಕಾರಿ ಇರುಸು ಮುರಿಸುಗೊಂಡು ತಮ್ಮ ಕಾರ್ಯವನ್ನ ಆರಂಭಿಸಿದರು.

  • ಪ್ರವಾಹ ಪೀಡಿತ ತಾಲೂಕುಗಳ ರಸ್ತೆ ಅಭಿವೃದ್ಧಿಗೆ 1,500 ಕೋಟಿ ರೂ. ಬಿಡುಗಡೆ

    ಪ್ರವಾಹ ಪೀಡಿತ ತಾಲೂಕುಗಳ ರಸ್ತೆ ಅಭಿವೃದ್ಧಿಗೆ 1,500 ಕೋಟಿ ರೂ. ಬಿಡುಗಡೆ

    ಬಳ್ಳಾರಿ: ರಾಜ್ಯದಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹಕ್ಕೆ 103 ತಾಲೂಕುಗಳಲ್ಲಿ ರಸ್ತೆಗಳು ಹಾಳಾಗಿವೆ. ಇವುಗಳ ದುರಸ್ತಿ ಮತ್ತು ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ 1,500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಅವರು ತಿಳಿಸಿದರು.

    ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಘನತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ವಾಹನಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ 6,021 ಗ್ರಾ.ಪಂಚಾಯತ್‍ಗಳಲ್ಲಿ 3 ಸಾವಿರಕ್ಕೂ ಹೆಚ್ಚು ಗ್ರಾ.ಪಂ.ಗಳಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಕ್ರಮವಹಿಸಲಾಗುವುದು. 1,281 ಗ್ರಾ.ಪಂ.ಗಳಲ್ಲಿ ಕಸ ಸಂಗ್ರಹ ಮತ್ತು ನಿರ್ವಹಣೆಗೆ ಅನುಮೋದನೆ ನೀಡಲಾಗಿದೆ ಎಂದರು.

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯಲ್ಲಿ ಯಾವುದೇ ರೀತಿಯ ಹಣದ ಕೊರತೆ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ಬಗ್ಗೆ ಶಾಸಕ ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ-ಟಿಪ್ಪಣಿಗಳು ಸಹಜ, ಇದನ್ನು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು ಸಮರ್ಥಿಸಿಕೊಂಡರು.

    ಯತ್ನಾಳ್ ಹೇಳಿದ್ದೇನು?
    ಮಂಗಳವಾರ ವಿಜಯಪುರದಲ್ಲಿ ಯತ್ನಾಳ್ ಅವರು ದೊರೆಸ್ವಾಮಿ ವಿರುದ್ಧ ಹೇಳಿಕೆ ಕೊಟ್ಟಿದ್ದರು. ಮಾಧ್ಯಮಗಳ ಜೊತೆ ಮಾತನಾಡುತ್ತಾ, ದೇಶದ್ರೋಹಿ ಘೋಷಣೆ ಹಾಗೂ ಫೇಸ್‍ಬುಕ್ ಪೋಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಖಡಕ್ ವಾರ್ನಿಂಗ್ ನೀಡಿದ್ದರು. ದೇಶದ್ರೋಹಿಗಳಿಗೆ ಬೀಳುತ್ತವೆ ಗುಂಡೇಟು, ದೇಶದ್ರೋಹಿಗಳೇ ಹುಷಾರ್. ಇನ್ನು ಮುಂದೆ ಹಾಗೆಲ್ಲ ಮಾಡಿದರೆ ಗುಂಡೇಟು ಬೀಳುತ್ತವೆ. ಜೈಲಿಗೆ ಕಳುಹಿಸುವುದೆಲ್ಲ ಇಲ್ಲ, ಇನ್ಮೇಲೆ ದೇಶದ್ರೋಹದ ಹೇಳಿಕೆ ಕೊಟ್ಟರೆ ಅವರಿಗೆ ಗುಂಡು ಬೀಳುತ್ತೆ ಎನ್ನುವ ಮೂಲಕ ದೇಶದ್ರೋಹಿಗಳಿಗೆ ಎಚ್ಚರಿಕೆ ಕೊಟ್ಟಿದ್ದರು. ಅಷ್ಟೇ ಅಲ್ಲದೇ ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ. ಎಲ್ಲಿದ್ದಾನೆ ಆ ಮುತ್ಯಾ ಈಗ, ದೊರೆಸ್ವಾಮಿ ಪಾಕಿಸ್ತಾನ ಏಜೆಂಟ್. ಪಾಕಿಸ್ತಾನ ಏಜೆಂಟ್ರಂತೆ ದೊರೆಸ್ವಾಮಿ ಮಾತಾಡ್ತಿದ್ದಾನೆ ಎಂದು ಕಿಡಿಕಾರಿದ್ದರು.

  • ಕೇಂದ್ರದಿಂದ ರಾಜ್ಯಕ್ಕೆ ಮಹಾಮೋಸ- ಸಬ್ ಅರ್ಬನ್ ರೈಲು ಯೋಜನೆಗೆ ಕೊಟ್ಟಿದ್ದು 1 ಕೋಟಿ ಮಾತ್ರ

    ಕೇಂದ್ರದಿಂದ ರಾಜ್ಯಕ್ಕೆ ಮಹಾಮೋಸ- ಸಬ್ ಅರ್ಬನ್ ರೈಲು ಯೋಜನೆಗೆ ಕೊಟ್ಟಿದ್ದು 1 ಕೋಟಿ ಮಾತ್ರ

    ನವದೆಹಲಿ: ರಾಜ್ಯಕ್ಕೆ ನೀಡುವ ಅನುದಾನದಲ್ಲಿ ಪ್ರತಿ ಬಾರಿ ತಾರತಮ್ಯ ಮಾಡುವ ಕೇಂದ್ರ ಸರ್ಕಾರವು ಈ ಬಾರಿ ಬಜೆಟ್‍ನಲ್ಲೂ ಮಲಧೋರಣೆ ತಾಳಿದೆ. 18,618 ಕೋಟಿ ರೂ. ವೆಚ್ಚದಲ್ಲಿ ಸಬ್ ಅರ್ಬನ್ ರೈಲು ಯೋಜನೆ ಅನುಷ್ಠಾನಗೊಳಿಸುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ಪಿಂಕ್‍ಬುಕ್‍ನಲ್ಲಿ ಈ ಯೋಜನೆಗೆ ಕೇವಲ 1 ಕೋಟಿ ಮೊತ್ತವನ್ನು ಮೀಸಲಿಟ್ಟಿದೆ.

    ಸಬ್ ಅರ್ಬನ್ ರೈಲು ಯೋಜನೆ ಆರಂಭಕ್ಕಾಗಿ ಕೇಂದ್ರ ರಾಜ್ಯ ಸರ್ಕಾರ 20+20 ಹಾಗೂ ಖಾಸಗಿ ಬ್ಯಾಂಕುಗಳ ಸಹಭಾಗಿತ್ವದಲ್ಲಿ ಶೇ. 60 ಹೂಡಿಕೆ ಮಾಡಬೇಕಿದೆ. ಈ ಪೈಕಿ ಕೇಂದ್ರ ಸರ್ಕಾರದಿಂದ ಶೇ. 20 ಅಂದರೆ ಅಂದಾಜು ಮೂರೂವರೆ ಸಾವಿರ ಕೋಟಿ ರೂ. ಕಾಮಗಾರಿಗೆ ನೀಡಬೇಕಿತ್ತು. ಆದರೆ ಅನುದಾನ ಘೋಷಿಸಿದ್ದ ಕೇಂದ್ರ ಪಿಂಕ್ ಬುಕ್‍ನಲ್ಲಿ ಒಂದು ಕೋಟಿ ನೀಡಿದ್ದು, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಕೇಂದ್ರ ಸರ್ಕಾರದ ಈ ನಿಲುವಿನಿಂದ ಬೆಂಗಳೂರಿನ ಬಹುದಿನಗಳ ಕನಸು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: 7 ವರ್ಷದಿಂದ ಕನ್ನಡಿಗರ ಮೂಗಿಗೆ ತುಪ್ಪ- ಅನುಷ್ಠಾನಕ್ಕೆ ಬರಲೇ ಇಲ್ಲ ಕೋಲಾರ ರೈಲ್ವೇ ಕೋಚ್ ಫ್ಯಾಕ್ಟರಿ

    ಪ್ರಸ್ತುತ ವರ್ಷದಲ್ಲಿ ಬಜೆಟ್‍ನಲ್ಲಿ ಕನಿಷ್ಠ 500 ಕೋಟಿ ರೂಪಾಯಿಯಾದ್ರು ನೀಡಬೇಕಿದ್ದ ಸರ್ಕಾರ ಕೇವಲ ಯೋಜನೆ ಘೋಷಿಸಿ ಹಣ ನೀಡದೆ ವಂಚನೆ ಮಾಡಿದೆ ಎನ್ನುವ ಆರೋಪಗಳು ಕೇಳಿ ಬಂದಿದೆ. ಸದ್ಯ ಒಂದು ಕೋಟಿ ರೂ. ನೀಡಿದ್ದು ಡಿಪಿಆರ್ ಬಳಿಕ ಅನುದಾನ ನೀಡುವ ಭರವಸೆಯನ್ನು ಕೇಂದ್ರದ ಅಧಿಕಾರಿಗಳು ನೀಡುತ್ತಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರ ಯೋಜನೆ ಆರಂಭಿದರೆ ಕೇಂದ್ರ ಸರ್ಕಾರ ಬಳಿಕ ಅನುದಾನ ನೀಡಲಿದೆ ಎಂದು ಕೆಲ ಸಂಸದರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಬೇಸಿಗೆಯ ಬರ ನಿರ್ವಹಣೆಗೆ ಸಿದ್ಧತೆ- ಪಕೃತಿ ವಿಕೋಪ ಕಾರ್ಯಕ್ಕೂ ಸರ್ಕಾರದಿಂದ ಹಣ ಬಿಡುಗಡೆ

    ಬೇಸಿಗೆಯ ಬರ ನಿರ್ವಹಣೆಗೆ ಸಿದ್ಧತೆ- ಪಕೃತಿ ವಿಕೋಪ ಕಾರ್ಯಕ್ಕೂ ಸರ್ಕಾರದಿಂದ ಹಣ ಬಿಡುಗಡೆ

    – 112 ಕೋಟಿ ಅನುದಾನ ಬಿಡುಗಡೆ

    ಬೆಂಗಳೂರು: ಬೇಸಿಗೆಯಲ್ಲಿ ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಈಗಿನಿಂದಲೇ ಸಿದ್ಧವಾಗ್ತಿದೆ. ಬೇಸಿಗೆಯಲ್ಲಿ ಬರ ನಿರ್ವಹಣೆಗೆ ಅಗತ್ಯವಾದ ಅನುದಾನವನ್ನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಅಲ್ಲದೆ ಪ್ರಕೃತಿ ವಿಕೋಪಗಳ ತುರ್ತು ಕಾರ್ಯಗಳಿಗೂ ಅನುದಾನ ಬಿಡುಗಡೆ ಮಾಡಿದ್ದು, ಜಿಲ್ಲಾಧಿಕಾರಿಗಳ ವೈಯಕ್ತಿಕ ಠೇವಣಿ(ಪಿಡಿ) ಅಕೌಂಟಿಗೆ ಹಣ ಜಮೆ ಮಾಡಿದೆ.

    14 ಜಿಲ್ಲೆಗಳ 49 ತಾಲೂಕುಗಳಿಗೆ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ 112 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಬಳ್ಳಾರಿಗೆ 15 ಕೋಟಿ, ದಾವಣಗೆರೆಗೆ 14 ಕೋಟಿ, ಚಿತ್ರದುರ್ಗಕ್ಕೆ 13 ಕೋಟಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ, ಕೋಲಾರಕ್ಕೆ 10 ಕೋಟಿ ಬಿಡುಗಡೆ ಮಾಡಲಾಗಿದೆ. ಅದರಂತೆ ಬೀದರ್, ಚಾಮರಾಜನಗರ, ಕೊಪ್ಪಳ, ರಾಮನಗರ, ವಿಜಯಪುರ, ರಾಯಚೂರು, ತುಮಕೂರು, ಯಾದಗಿರಿ ಜಿಲ್ಲೆಗಳಿಗೆ ತಲಾ 5 ಕೋಟಿ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಮನೆ ಮನೆಗೆ ಗಂಗಾ ನೀರು ಕುಡಿಯೋ ಯೋಜನೆಗೆ ಸರ್ಕಾರದ ಸಿದ್ಧತೆ

    ಬಿಡುಗಡೆ ಮಾಡಿರುವ ಹಣದ ಖರ್ಚಿಗೂ ಕೆಲ ಷರತ್ತುಗಳನ್ನ ಸರ್ಕಾರ ವಿಧಿಸಿದೆ. ಜಿಲ್ಲಾಧಿಕಾರಿಗಳು ಈ ಷರತ್ತುಗಳ ಅನ್ವಯವೇ ಅನುದಾನ ಖರ್ಚು ಮಾಡಲು ಸೂಚನೆ ನೀಡಲಾಗಿದೆ. ಅನುದಾನ ಖರ್ಚಿಗೆ 3 ಷರತ್ತುಗಳನ್ನ ವಿಧಿಸಲಾಗಿದೆ. ಮಾರ್ಗಸೂಚಿ ಅನ್ವಯವೇ ಸಂಬಂಧಿಸಿದ ಪರಿಹಾರ ಕಾರ್ಯಗಳಿಗಾಗಿ ಅನುದಾನ ಖರ್ಚು ಮಾಡಬೇಕು. ಖರ್ಚು ಮಾಡಿದ ಅನುದಾನಕ್ಕೆ ಕಡ್ಡಾಯವಾಗಿ ಪ್ರಮಾಣ ಪತ್ರ ಸಲ್ಲಿಸಬೇಕು. ಅನುದಾನ ಬಳಕೆಯಲ್ಲಿ ಲೋಪ ಆದರೆ ಡಿಸಿಗಳೇ ನೇರ ಹೊಣೆ ಎಂಬ ಷರತ್ತು ವಿಧಿಸಿ ಅನುದಾನ ಸದ್ಬಳಕೆಗೆ ಮಾರ್ಗಸೂಚಿ ರೂಪಿಸಿದೆ. ಇದನ್ನೂ ಓದಿ: ಖಜಾನೆ ಖಾಲಿ ಎಂದವರಿಗೆ ಉತ್ತರ ಕೊಟ್ಟ ಸಿಎಂ ಬಿಎಸ್‍ವೈ

  • ಕೊಡಗಿನ ಬಾಳಗೋಡು ಏಕಲವ್ಯ ಶಾಲೆಗೆ 5 ಕೋಟಿ: ಡಿ.ವಿ ಸದಾನಂದಗೌಡ

    ಕೊಡಗಿನ ಬಾಳಗೋಡು ಏಕಲವ್ಯ ಶಾಲೆಗೆ 5 ಕೋಟಿ: ಡಿ.ವಿ ಸದಾನಂದಗೌಡ

    – ಕೈ ಮಿತ್ರರಿಗೆ ಕೇಂದ್ರ ಸಚಿವ ವಿನಂತಿ

    ಮಡಿಕೇರಿ: ರಾಜ್ಯದಲ್ಲಿರುವ ಬುಡಕಟ್ಟು ಇಲಾಖೆ ವ್ಯಾಪ್ತಿಯ ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ (ಇಎಂಆರ್‍ಎಸ್) ಕೇಂದ್ರ ಸರ್ಕಾರವು ಬರೋಬ್ಬರಿ 15 ಕೋಟಿ ಅನುದಾನ ಮಂಜೂರು ಮಾಡಿದೆ.

    ಡಿಸೆಂಬರ್ 31ರಂದು ಅನುದಾನ ಮಂಜೂರಾತಿ ಆದೇಶ ಹೊರಡಿಸಲಾಗಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. “ಕೇಂದ್ರ ಸರ್ಕಾರದ ಬುಡಕಟ್ಟು ಇಲಾಖೆಯು ನಮ್ಮ ಬೆಳಗಾವಿ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳ (EMRS) ಅಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ ರೂ.15 ಕೋಟಿ ಅನುದಾನವನ್ನು ಮಂಜೂರು ಮಾಡಿದೆ. ಸಮುದಾಯದ ಮಕ್ಕಳ ಏಳ್ಗೆಯತ್ತ ಮತ್ತೊಂದು ಪುಟ್ಟ ಹೆಜ್ಜೆ. ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

    ರಾಜ್ಯದ ಬೆಳಗಾವಿ, ಚಿಕ್ಕಮಗಳೂರು, ಕೊಡಗು ಶಾಲೆಗಳಿಗೆ ತಲಾ 5 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ವಿರಾಜಪೇಟೆ ತಾಲೂಕಿನ ಬಾಳಗೋಡು ಶಾಲೆಗೂ 5 ಕೋಟಿ ಲಭಿಸಿದೆ. ಅಲ್ಲದೇ ಸದಾನಂದಗೌಡ ಅವರು ನಿರಂತರವಾಗಿ ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿ ಅವರು ಜಾರಿ ಮಾಡಿರುವ ಅನುದಾಗಳ ಬಗ್ಗೆ ತಿಳಿಸಿದ್ದಾರೆ.

    ‘ಮನ್ರೆಗಾ’ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಈವರೆಗೆ ಕೇಂದ್ರವು ಕರ್ನಾಟಕಕ್ಕೆ ಒಟ್ಟು 3995.43 ಕೋಟಿ ರೂ. ಹಾಗೂ ಈ ಹಿಂದಿನ ಬಾಕಿ 500 ಕೋಟಿ ರೂ. ಅನುದಾನವನ್ನು ಸಹ ಬಿಡುಗಡೆ ಮಾಡಿದೆ. ಜಿ.ಎಸ್.ಟಿ.ಗೆ ಸಂಬಂಧಪಟ್ಟಂತೆ ಪ್ರಸಕ್ತ ಸಾಲಿನ ಇದುವರೆಗಿನ ಅವಧಿಯಲ್ಲಿ 12,483.73 ಕೋಟಿ ರೂ.ಗಳು ರಾಜ್ಯದ ಪಾಲು. ಇದು ನಿರಂತರ ಪ್ರಕ್ರಿಯೆಯಾಗಿದೆ.

    ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಸರ್ಕಾರವು 2019-20ರ ಸಾಲಿನಲ್ಲಿ ಈವರೆಗೆ ಕರ್ನಾಟಕ ರಾಜ್ಯಕ್ಕೆ 898.5 ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ. ಸಿಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದೊಂದಿಗೆ ಉತ್ತಮ ಸಮನ್ವಯ ಹೊಂದಿದೆ. ಶೈಕ್ಷಣಿಕ ಕ್ಷೇತ್ರದ ಅಮೂಲಾಗೃ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

    ಕೇಂದ್ರ ಸರ್ಕಾರವು 2019-20ರ ಆರ್ಥಿಕ ವರ್ಷದಲ್ಲಿ ಇಲ್ಲಿಯ ತನಕ ವಿವಿಧ ಯೋಜನೆಗಳಡಿಯಲ್ಲಿ ಕರ್ನಾಟಕಕ್ಕೆ 41,889.75 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಅನುದಾನ ಬಿಡುಗಡೆಗೆ ಪ್ರತಿಷ್ಠಾಪಿತ ಮಾರ್ಗಸೂಚಿಗಳಿವೆ. ಯಾವ ರಾಜ್ಯಗಳಿಗೂ ತಾರತಮ್ಯ ಎಸಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಟೀಕೆ ಮಾಡುವ ಮುನ್ನ ಅಂಕಿ-ಅಂಶ, ಸಂತ್ಯಾಂಶ ಏನೆಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಜನರಲ್ಲಿ ತಪ್ಪುಗ್ರಹಿಕೆ ಉಂಟುಮಾಡಲು ಪ್ರಯತ್ನಸಬೇಡಿ ಎಂದು ಕಾಂಗ್ರೆಸ್ ಮಿತ್ರರಿಗೆ ವಿನಂತಿ ಮಾಡಿಕೊಂಡಿದ್ದಾರೆ.

  • ಗ್ರಾಮೀಣ ರಸ್ತೆ ಅಭಿವೃದ್ಧಿಗೆ 124 ಕೋಟಿ ರೂಪಾಯಿ ಅನುದಾನ: ಜಿ.ಪಂ. ಸಿಇಒ

    ಗ್ರಾಮೀಣ ರಸ್ತೆ ಅಭಿವೃದ್ಧಿಗೆ 124 ಕೋಟಿ ರೂಪಾಯಿ ಅನುದಾನ: ಜಿ.ಪಂ. ಸಿಇಒ

    ಶಿವಮೊಗ್ಗ: ನೆರೆಯಿಂದ ಹಾನಿಗೊಳಗಾದ ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳ ದುರಸ್ಥಿಗಾಗಿ ಸಲ್ಲಿಸಿದ್ದ 124 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಎಂ.ಎಲ್ ವೈಶಾಲಿ ತಿಳಿಸಿದ್ದಾರೆ.

    ನಗರದ ಪ್ರೆಸ್ ಟ್ರಸ್ಟ್ ನಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿ, ಮಳೆಗಾಲದಲ್ಲಿ ಜಿಲ್ಲೆಯ ರಸ್ತೆಗಳು ಹೆಚ್ಚಿನ ಮಟ್ಟದಲ್ಲಿ ಹಾನಿಯಾಗಿವೆ. ಇವುಗಳ ದುರಸ್ಥಿ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕ್ರಿಯಾ ಯೋಜನೆ ಸಲ್ಲಿಸಲಾಗಿತ್ತು. ಹೀಗಾಗಿ 124 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಜಿಲ್ಲೆಯಲ್ಲಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿದ್ದು, ಇದರ ಜೊತೆಗೆ ಏಕ ಗ್ರಾಮ ಕುಡಿಯುವ ನೀರಿನ ಯೋಜನೆಯೂ ಸೇರಿಕೊಂಡಿದೆ. ಈ ಯೋಜನೆಗಾಗಿ ಕೇಂದ್ರದಿಂದ 86 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ ಸುಮಾರು 48 ಕೋಟಿ ರೂಪಾಯಿ ಈಗಾಗಲೇ ಕುಡಿಯುವ ನೀರಿನ ಯೋಜನೆಗೆ ವೆಚ್ಚ ಮಾಡಲಾಗಿದೆ ಎಂದರು.

    ಈಗಾಗಲೇ ಬಾರಂದೂರು, ಬಿಳಕಿ, ಕಂಬದಾಳ ಹೊಸೂರು, ಕೂಡ್ಲಿಗೆರೆ, ಮಂಡಗದ್ದೆಗಳಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ಸುಮಾರು 828 ಶಾಲೆಗಳು ದುಸ್ಥಿತಿಯಲ್ಲಿವೆ. ಇವುಗಳ ದುರಸ್ಥಿಗೆ ಸರ್ಕಾರದಿಂದ 34 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ಇದರಲ್ಲಿ 3 ಕೋಟಿ ಅನುದಾನವನ್ನು ಅಂಗನವಾಡಿಗಳಿಗೆ ನೀಡಲಾಗುತ್ತದೆ. ಜೊತೆಗೆ ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿ.ಪಂ ಸಿಇಒ ವೈಶಾಲಿ ತಿಳಿಸಿದರು.