– ಹಲವರ ಮನೆಗಳಲ್ಲಿ ಅನಾರೋಗ್ಯದಿಂದ ಔಷಧಿ ಕೊಳ್ಳಲು ಹಣವಿಲ್ಲ
ಬೆಂಗಳೂರು: ಕೊರೊನಾದಿಂದಾಗಿ ಅರ್ಚಕರ ಸಮುದಾಯ ಸಹ ಸಂಕಷ್ಟಕ್ಕೆ ಸಿಲುಕಿದ್ದು, ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲ 35 ಸಾವಿರಕ್ಕೂ ಅಧಿಕ ದೇವಾಲಯಗಳ ಅರ್ಚಕರಿಗೆ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಅರ್ಚಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್.ದೀಕ್ಷಿತ್ ಮನವಿ ಮಾಡಿದ್ದಾರೆ.
ವೀಡಿಯೋ ಮೂಲಕ ಕೇಳಿಕೊಂಡಿರುವ ಅವರು, ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ 35 ಸಾವಿರಕ್ಕೂ ಅಧಿಕ ದೇವಾಲಯಗಳ ಅರ್ಚಕರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನಾರೋಗ್ಯದಿಂದ ಕೆಲವರು ತುಂಬಾ ಕಷ್ಟಪಡುತ್ತಿದ್ದಾರೆ. ಔಷಧಿ, ಚಿಕಿತ್ಸೆಗಾಗಿ ಹಣವಿಲ್ಲ. ಹೀಗಾಗಿ ಎಲ್ಲ ಅರ್ಚಕರಿಗೂ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಹೇಳಿದ್ದಾರೆ.
ಗ್ರಾಮಾಂತರ ಪ್ರದೇಶದಲ್ಲಿರುವ ಮುಜರಾಯಿ ದೇವಾಲಯಗಳಿಗೆ ಪೂಜೆಯ ಸಾಮಗ್ರಿಗಳನ್ನು ಕೊಳ್ಳಲು ಹಾಗೂ ಪೂಜೆ ನಡೆಸುವ ಅರ್ಚಕರ ಸಂಭಾವನೆ ಎರಡೂ ಸೇರಿ ದಿನಕ್ಕೆ 135 ರೂ. ನೀಡಲಾಗುತ್ತಿದೆ. ಆದರೆ ಇದೀಗ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿದ್ದು, ದೇವಸ್ಥಾನಗಳಲ್ಲಿ ನಿತ್ಯ ಪೂಜೆ ನಡೆಸಲು ತುಂಬಾ ತೊಂದರೆಯಾಗುತ್ತಿದೆ. ಹೀಗಾಗಿ ಭತ್ಯೆಯನ್ನು ಇಂದಿನ ಬೆಲೆಗಳಿಗೆ ಅನುಗುಣವಾಗಿ ಪ್ರತಿ ದಿನಕ್ಕೆ 250 ರೂ.ಗೆ ಹೆಚ್ಚಿಸಬೇಕು ಎಂದು ದೀಕ್ಷಿತ್ ಮನವಿ ಮಾಡಿದ್ದಾರೆ.
ದೇವಸ್ಥಾನಗಳಿಗೆ ನೀಡುವ ಅನುದಾನ ಈಗಲೂ 1, 2 ರೂ ಇದೆ. ಅಲ್ಲದೆ ನಗದು ಅನುದಾನ ವಾರ್ಷಿಕ 6 ಸಾವಿರ ರೂ. ಮಾತ್ರ ಇದೆ. ಇದನ್ನೂ ಹೆಚ್ಚಿಸಬೇಕು ಎಂದು ಒಕ್ಕೂಟ ತಿಳಿಸಿದೆ.
ಬೆಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರು ಮೆಟ್ರೋಗೆ ಬಂಪರ್ ಕೊಡುಗೆ ನೀಡಿದ್ದು, ಮತ್ತೆರೆಡು ಮೆಟ್ರೋ ಮಾರ್ಗ ಘೋಷಣೆ ಮಾಡಿ 14,788 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ.
ಒಟ್ಟು 58.19ಕಿ.ಮೀ. ಉದ್ದದ ಮೆಟ್ರೋ ಮಾರ್ಗದ 2ಎ ಮತ್ತು 2ಬಿ ಹಂತಕ್ಕೆ ಅನುದಾನ ನೀಡಲಾಗಿದೆ. ಈ ಮೂಲಕ ಮೆಟ್ರೋಗೆ ಭರ್ಜರಿ ಕೊಡುಗೆ ನೀಡಿದಂತಾಗಿದೆ. ಇದರಿಂದ ಬೆಂಗಳೂರಿನಲ್ಲಿ ಮೆಟ್ರೋ ರೈಲು ಮಾರ್ಗ ಮತ್ತಷ್ಟು ವಿಸ್ತರಣೆಯಾಗಲಿದ್ದು, ಇದಕ್ಕಾಗಿ 14,788 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ.
ಪಿಪಿಪಿ ಮಾದರಿಯಲ್ಲಿ ಒಟ್ಟು 2 ಸಾವಿರ ಕೋಟಿ ರೂ. ವೆಚ್ಚದಲ್ಲಿ ದೇಶದ 7 ಬಂದರನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಮುಂದಾಗಿದ್ದು, ಇದರಲ್ಲಿ ಮಂಗಳೂರು ಬಂದರು ಸೇರಿದೆ.ಈ ಮೂಲಕ ಮಂಗಳೂರು ಬಂದರು ಅಭಿವೃದ್ಧಿಗೂ ಅನುದಾನ ಸಿಗಲಿದೆ.
ನವದೆಹಲಿ: ಕೃಷಿ ಕಾಯ್ದೆ ರದ್ದತಿಗೆ ಪಟ್ಟು ಹಿಡಿದಿರುವ ರೈತರ ಬೇಡಿಕೆಗಳಲ್ಲಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ನಿಗದಿ ವಿಚಾರವೂ ಒಂದು. ಎಲ್ಲಾ ಕಡೆ ಎಂಎಸ್‌ಪಿ ರದ್ದು ಮಾಡಲಾಗುತ್ತದೆ ಎಂಬ ಗುಲ್ಲೆದ್ದಿದೆ. ಆದರೆ ನಾವು ಯಾವುದೇ ಕಾರಣಕ್ಕೂ ಎಂಎಸ್‌ಪಿ ರದ್ದು ಮಾಡುವುದಿಲ್ಲ. ಎಂಎಸ್‌ಪಿ ಜಾಸ್ತಿ ಮಾಡುತ್ತೇವೆ. ನಮ್ಮ ಮೇಲಿನ ಆರೋಪ ಸುಳ್ಳು ಎಂದು ಇಂದಿನ ಬಜೆಟ್ ಮೂಲಕ ಮತ್ತೊಮ್ಮೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್, ಕನಿಷ್ಠ ಬೆಂಬಲ ಬೆಲೆ ನಿಲ್ಲಿಲ್ಲ. ಖರೀದಿ ಪ್ರಕ್ರಿಯೆ ಮುಂದುವರೆದಿದೆ. ಎಂಎಸ್‍ಪಿಗೆ ವೆಚ್ಚ ಮಾಡುತ್ತಿರುವ ಹಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂಬುದನ್ನು
ಗೋಧಿ ಎಂಎಸ್‍ಪಿ:
2013-14 – 33,874 ಕೋಟಿ ರೂ., 2019-20 – 62,804 ಕೋಟಿ ರೂ., 2020-21 – 75,050 ಕೋಟಿ ರೂ. ಏರಿಕೆ ಮಾಡಲಾಗಿದೆ. 2013-14ಕ್ಕೆ ಹೋಲಿಸಿದರೆ ಎಂಎಸ್‍ಪಿ ಒಂದೂವರೆ ಪಟ್ಟು ಹೆಚ್ಚಳ ಮಾಡಿದ್ದು ಇದರಿಂದ 43.36 ಲಕ್ಷ ರೈತರಿಗೆ ಅನುಕೂಲವಾಗಿದೆ.
ಭತ್ತ ಎಂಎಸ್‍ಪಿ:
2013-14 – 53,928 ಕೋಟಿ ರೂ., 2019-20 – 1,41 ಲಕ್ಷ ಕೋಟಿ ರೂ. 2020-21 – 1,72,752 ಕೋಟಿ ರೂ.ಗೆ ಏರಿಕೆ ಮಾಡಲಾಗಿದೆ. ಇದರಿಂದ 1.54 ಕೋಟಿ ರೈತರಿಗೆ ಲಾಭವಾಗಿದ್ದು 2013ಕ್ಕೆ ಹೋಲಿಸಿದರೆ ಶೇ.40ರಷ್ಟು ಹೆಚ್ಚಳವಾಗಿದೆ.
ಇಡೀ ಕೃಷಿ ವಲಯಕ್ಕೆ ಮೋದಿ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ಅದು ಎಪಿಎಂಸಿ ಆಗಿರಬಹುದು. ಕೃಷಿ ಉತ್ಪನ್ನಗಳ ಸಾಗಣೆ ವಿಚಾರ ಆಗಿರಬಹುದು. ರೈತರ ಹಲವು ಅನುಮಾನಗಳಿಗೆ ಇಲ್ಲಿ ತೆರೆ ಎಳೆಯುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಿದೆ.
ಕೃಷಿ ವಲಯಕ್ಕೆ ಏನೇನು..?
* ಕೃಷಿ ಸಾಲಕ್ಕಾಗಿ 16.5 ಲಕ್ಷ ಕೋಟಿ ಮೀಸಲು
* ಎಪಿಎಂಸಿ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತ್ತು/ ಎಪಿಎಂಸಿ ಸುಧಾರಣೆ
* ಕೃಷಿ ಕಾಯ್ದೆಗಳಿಂದ ಎಪಿಎಂಸಿ ಇಲ್ಲವಾಗುತ್ತೆ ಎಂಬ ವದಂತಿಗೆ ತೆರೆ
* 1000 ಮಂಡಿಗಳಲ್ಲಿ ಇ-ನ್ಯಾಮ್ ವ್ಯವಸ್ಥೆ
* 22 ಉತ್ಪನ್ನಗಳಿಗೆ ಆಪರೇಷನ್ ಗ್ರೀನ್ ಸ್ಕೀಮ್
* ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ವಾಮಿತ್ವ ಯೋಜನೆ
* ಕೃಷಿ ಮೂಲಸೌಕರ್ಯ ನಿಧಿ ಸ್ಥಾಪನೆ
* ಕೃಷಿಕರ ತುರ್ತು ಕೆಲಸಗಳಿಗಾಗಿ ಬಂಡವಾಳ
* ಹೈನುಗಾರಿಕೆ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ
* ಅಗತ್ಯ ವಸ್ತುಗಳ ಕಾಯ್ದೆಯಲ್ಲಿ ಹಲವು ತಿದ್ದುಪಡಿ
* ಚೆನ್ನೈ-ಕೊಚ್ಚಿ-ಪಾರಾದೀಪ್ ಸೇರಿ ಐದು ಮೀನುಗಾರಿಕಾ ಬಂದರುಗಳನ್ನು ಆರ್ಥಿಕ ಕೇಂದ್ರಗಳಾಗಿ ಅಭಿವೃದ್ಧಿ
* ತಮಿಳುನಾಡಿನಲ್ಲಿ ಸಮುದ್ರ ಕಳೆ ಕೃಷಿಗಾಗಿ ಸೀ ವಿಡ್ ಪಾರ್ಕ್
ಅನುದಾನ ಕಡಿತ:
ಕಳೆದ ಬಾರಿಗೆ ಹೋಲಿಸಿದರೆ ಕೃಷಿ ವಲಯಕ್ಕೆ ಈ ಬಾರಿ ಶೇ.6ರಷ್ಟು ಅನುದಾನ ಕಡಿತವಾಗಿದೆ. 1,54,775 ಕೋಟಿಯಿಂದ 1,48,301 ಕೋಟಿ ರೂ.ಗೆ ಅನುದಾನ ಇಳಿಕೆಯಾಗಿದೆ. ರೈತರ ಖಾತೆಗಳಿಗೆ ಹಣ ಹಾಕುವ ಕಿಸಾನ್ ಸಮ್ಮಾನ್ ಯೋಜನೆಗೆ ಶೇ.13ರಷ್ಟು ಅನುದಾನ ಕಡಿತ ವಾಗಿದೆ. 75 ಸಾವಿರ ಕೋಟಿಯಿಂದ 65 ಸಾವಿರ ಕೋಟಿ ರೂ.ಗೆ ಅನುದಾನ ಇಳಿಕೆ ಮಾಡಲಾಗಿದೆ.
ಬೆಂಗಳೂರು: ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಕ್ಷೇತ್ರಕ್ಕೆ 200 ಕೋಟಿ ರೂ. ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಶಿಫಾರಸು ಮಾಡಿರುವುದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಜಮೀರ್ ಪತ್ರ ಬರೆದು ಕ್ಷೇತ್ರಕ್ಕೆ 200 ಕೋಟಿ ರೂ. ಕೇಳಿದ್ದಾರೆ. ಅದಕ್ಕೆ ಸಿಎಂ ಬಿಎಸ್‍ವೈ ಕೇವಲ ಛೋಟಾ ಸಹಿ ಹಾಕಿ ಫೈನಾನ್ಸ್ ಡಿಪಾರ್ಟ್‍ಮೆಂಟ್‍ಗೆ ಮೂವ್ ಮಾಡಿದ್ದಾರೆ. ಒಂದುವೇಳೆ ಹಣ ಬಿಡುಗಡೆಯಾಗಿದ್ದರೆ ಹೌದಪ್ಪ ಅನ್ನಬಹುದಿತ್ತು. ಆದರೆ ಯತ್ನಾಳ್ ತರದವರು ಸುಮ್ಮನೆ ಏನೇನೋ ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಸಚಿವ ಯೋಗೇಶ್ವರ್ ಹಣ ಖರ್ಚು ಮಾಡಿರೋ ಬಗ್ಗೆ ಸಚಿವ ರಮೇಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ಆಪರೇಷನ್ ಕಮಲಕ್ಕೆ ಹಣ ಖರ್ಚು ಮಾಡಿದ್ದರೆ ಸೂಕ್ತ ತನಿಖೆ ಆಗಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಅಲ್ಲದೆ ಸಿಡಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಬಿಜೆಪಿ ಹಿರಿಯ ನಾಯಕ, ಯಡಿಯೂರಪ್ಪನವರ ಕೊಳಕು ಸಿಡಿ ಇದೆ ಎಂದು ಅವರೇ ಬಾಯಿ ಬಿಟ್ಟು ಹೆಳುತ್ತಿದ್ದಾರೆ. ಹೀಗಾಗಿ ಏನು ಸಿಡಿ ಎಂದು ತನಿಖೆ ಮೂಲಕ ಬಹಿರಂಗವಾಗಲಿ ಎಂದಿದ್ದಾರೆ.
ಕೊರೊನಾ ಲಸಿಕೆ ವಿತರಣೆ ಆರಂಭವಾಗಿದೆ. ಶಾಸಕರಿಗೆ ಕೊರೊನಾ ಲಸಿಕೆ ಹಾಕಲು ಇನ್ನೂ ಅನುಮತಿ ನೀಡಿಲ್ಲ. ಹಾಕುವ ಸಮಯ ಬಂದಾಗ ಹಾಕ್ತಾರೆ. ಇವಾಗ ಕೊರೊನಾ ವಾರಿಯರ್ಸ್ ಗೆ ಹಾಕುತ್ತಿದ್ದಾರೆ. ಎಲ್ಲ ಜನರಿಗೆ ಲಸಿಕೆ ಹಾಕಲೇಬೇಕು. ಅದರ ಬಗ್ಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹಾಸನ: ನೆರೆ ಪರಿಹಾರದ ವಿಚಾರದಲ್ಲಿ ಶಾಸಕರಿಬ್ಬರ ನಡುವೆ ವಾಕ್ಸಮರ ಏರ್ಪಟ್ಟಿದ್ದು, ಏಕವಚನದಲ್ಲೇ ವಾಗ್ವಾದ ನಡೆಸಿದ್ದಾರೆ. ಜೆಡಿಎಸ್‍ನ ಅರಿಸಿಕೇರೆ ಶಾಸಕ ಶಿವಲಿಂಗೇಗೌಡ ಹಾಗೂ ಬಿಜೆಪಿಯ ಹಾಸನ ಶಾಸಕ ಪ್ರೀತಂಗೌಡ ಅನುದಾನದ ವಿಚಾರದಲ್ಲಿ ಜಗಳವಾಡಿಕೊಂಡಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಇಬ್ಬರು ಶಾಸಕರು ಕಚ್ಚಾಡಿದ್ದು, ಬರಕ್ಕೆ ಹಣ ಬಂದ್ರೂ ನಿಮಗೇ, ಮಳೆಗೆ ಅನುದಾನ ಬಂದ್ರೂ ನಿಮಗೆ, ಹಾಗಿದ್ರೆ ನಾವ್ಯಾಕೆ ಇರೋದು ಎಂದು ಸಭೆಯಲ್ಲಿ ಶಿವಲಿಂಗೇಗೌಡ ಆಕ್ರೋಶ ಭರಿತವಾಗಿ ಮಾತನಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರೀತಂಗೌಡ ವಾಗ್ದಾಳಿ ನಡೆಸಿದ್ದು, ಹೌದು ಗೌಡ್ರೆ ನೀವು ಹೇಳ್ತಿರೋದು ಸರಿ, ಯಾವುದಕ್ಕೆ ಅನುದಾನ ಬಂದ್ರೂ ರೇವಣ್ಣೋರು ತಗೊಂಡ್ ಹೋಗ್ತಿದ್ದರು ಎಂದು ತಿರುಗೇಟು ನೀಡಿದ್ದಾರೆ.
ಶಿವಲಿಂಗೇಗೌಡರು ನೇರವಾಗಿ ರೇವಣ್ಣೋರಿಗೆ ಹೇಳೋಕ್ಕಾಗದೆ ನಮ್ಮೆದುರು ಹೇಳುತ್ತಿದ್ದಾರೆ. ರೇವಣ್ಣವರಿಗೆ ಹೇಳಿ, ಶಿವಲಿಂಗೇಗೌಡರು ನಿಮ್ಮ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದರು, ಪ್ರೀತಂಗೌಡ ಕೂಡ ಶಿವಲಿಂಗೇಗೌಡರಿಗೆ ಧ್ವನಿಗೂಡಿಸಿದರು ಎಂದು ಹೇಳಿ ಎಂದು ಶಿವಲಿಂಗೇಗೌಡರ ಮಾತಿಗೆ ಪ್ರೀತಂಗೌಡ ತಿರುಗೇಟು ನೀಡಿದ್ದಾರೆ.
ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಏಕವಚನದಲ್ಲಿ ಇಬ್ಬರು ಶಾಸಕರು ಜಗಳವಾಡಿದ್ದಾರೆ. ನೆರೆ ಪರಿಹಾರದಲ್ಲಿ ಸುಮಾರು 19 ಕೋಟಿ ರೂ. ಅನುದಾದ ಬಂದಿದೆ. ಸರಿಯಾಗಿ ಹಣ ಹಂಚಿಕೆ ಆಗಿಲ್ಲ. ಅರಸೀಕೆರೆ ಕ್ಷೇತ್ರಕ್ಕೆ ಏನೂ ಕೊಟ್ಟಿಲ್ಲ. ಇದೇನು ಜಿಲ್ಲೇನಾ? ಎಲ್ಲವನ್ನು ಬೇಕಾದಹಾಗೆ ಬಳಸಿಕೊಳ್ತಿದ್ದಾರೆ ಶಿವಲಿಂಗೇಗೌಡರು ಕಿಡಿಕಾರಿದ್ದಾರೆ. ಮಾತ್ರವಲ್ಲದೆ ನಿಂದು ಏನಿದೆ ಅದನ್ನು ನೀ ತಗೋ, ನಂದು ಏನಿದೆ ಅದನ್ನು ತಗೋತಿನಿ. ನಿನ್ನ ಕ್ಷೇತ್ರದ್ದು ನಾ ಕೇಳುತ್ತಿದ್ದೇನಾ ಎಂದು ಶಿವಲಿಂಗೇಗೌಡರು ಆಕ್ರೋಶ ಹೊರ ಹಾಕಿದ್ದಾರೆ.
ಅನುದಾನ ನೀನು ತಂದಿದ್ದು ಎನ್ನಬೇಡ, ಸರ್ಕಾರ ಕೊಟ್ಟಿರೋದು. ನಾವೇನು ದನ ಕಾಯೋಕೆ ಬಂದಿಲ್ಲ ಎಂದು ಮತ್ತೆ ಶಿವಲಿಂಗೇಗೌಡ ಕಿಡಿಕಾರಿದ್ದಾರೆ. ಶಿವಲಿಂಗೇಗೌಡರ ಆರೋಪಕ್ಕೆ ಪ್ರತ್ಯುತ್ತರ ನೀಡಲು ಮುಂದಾದ ಶಾಸಕ ಪ್ರೀತಂಗೌಡ, ನಿಮ್ಮ ಸರ್ಕಾರ ಇದ್ದಾಗ ನೀವು ತಂದಿದ್ದು ಅಂತೀರಿ, ನಮ್ಮ ಸರ್ಕಾರ ಇದ್ದಾಗ ನಾನೇ ತಂದಿದ್ದೇನೆ ಅಂತೀವಿ. ಇದು ಯಡಿಯೂರಪ್ಪನವರ ಸರ್ಕಾರ. ಯಡಿಯೂರಪ್ಪ ಅವರೇ ಕೊಟ್ಟಿರೊ ಅನುದಾನ ಎಂದೇ ಹೇಳೋದು. ನನಗೂ ಟೇಬಲ್ ಕುಟ್ಟಿ ಮಾತನಾಡಲು ಬರುತ್ತೆ ಎಂದು ಶಾಸಕ ಪ್ರೀತಂಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಇತ್ತೀಚೆಗಷ್ಟೇ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶ ಹೊರಡಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇದೀಗ ನಿಗಮಕ್ಕೆ ಆರಂಭಿಕ ಅನುದಾನವಾಗಿ 500 ಕೋಟಿ ರೂ.ಗಳ ಬಿಡುಗಡೆಗೆ ಅನುಮತಿ ನೀಡಿದ್ದಾರೆ.
ಈ ಕುರಿತು ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, 500 ಕೋಟಿ ರೂ. ಆರಂಭಿಕ ಅನುದಾನ ನೀಡಿದೆ. ತಾತ್ಕಾಲಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರಿಗೆ ನಿಗಮದ ಹೊಣೆ ನೀಡಲಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶ ಹೊರಡಿಸಿದ್ದರು.
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಬೆನ್ನಲ್ಲೇ ವೀರಶೈವ ಲಿಂಗಾಯತ ಸಮುದಾಯದ ನಾಯಕರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಒತ್ತಡ ಹೇರಿದ್ದರು. ಈ ಒತ್ತಡಕ್ಕೆ ಮಣಿದ ಯಡಿಯೂರಪ್ಪನವರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವಾರದ ಹಿಂದೆ ಆದೇಶ ನೀಡಿದ್ದರು.
ರಾಜ್ಯದಲ್ಲೀಗ ಪ್ರಾಧಿಕಾರ ಮತ್ತು ಮೀಸಲು ಪಾಲಿಟಿಕ್ಸ್ ಜೋರಾಗ್ತಿದೆ. ಬೈ ಎಲೆಕ್ಷನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುತ್ತಲೇ, ವೀರಶೈವ ಲಿಂಗಾಯತರು ಧ್ವನಿ ಮುನ್ನಲೆಗೆ ಬಂದಿದೆ. ವೀರಶೈವ ಲಿಂಗಾಯತ ಸಮುದಾಯದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡಬೇಕೆಂದು ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಸೋಮಣ್ಣ, ಬಿಸಿ ಪಾಟೀಲ್, ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರು ಅವರಿದ್ದ ನಿಯೋಗ ಮುಖ್ಯಮಂತ್ರಿಗೆ ಮನವಿ ಮಾಡಿತ್ತು.
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ ನಂತರ ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಯುವ ಘಟಕದ ರಾಜ್ಯಾಧಕ್ಷರು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ನಮ್ಮ ಸಮಾಜದ ಕಡು ಬಡವರು, ಸಮಾಜದ ಹಿಂದುಳಿದ ವರ್ಗಕ್ಕೆ ಮತ್ತು ಯುವಕರಿಗೆ ಸಹಾಯ ಆಗಬೇಕು. ಹೀಗಾಗಿ ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವಂತೆ ಆಗ್ರಹಿಸಿದ್ದರು.
ಬೆಂಗಳೂರು: ಉಪ ಚುನಾವಣೆ ಗೆಲ್ಲಲು ಬಿಜೆಪಿ ಮರಾಠಿ ಮಂತ್ರ ಜಪಿಸುತ್ತಿದ್ದು, ರಾಜ್ಯದಲ್ಲಿ ಸರ್ಕಾರ ಘೋಷಿಸಿರುವ ಮರಾಠ ಅಭಿವೃದ್ಧಿ ನಿಗಮ ಕರುನಾಡಿನಲ್ಲಿ ಕಿಚ್ಚು ಹೊತ್ತಿಸಿದೆ.
ಬಿಎಸ್‍ವೈ ಸರ್ಕಾರ ಶಿರಾ ಬೈ ಎಲೆಕ್ಷನ್ ಗೆಲ್ಲಲು ಕಾಡುಗೊಲ್ಲ ಸಮುದಾಯದ ಅಭಿವೃದ್ಧಿ ನಿಗಮ ರಚಿಸಿ, 50 ಕೋಟಿ ಮೀಸಲಿರಿಸಿತ್ತು. ಎರಡು ದಿನಗಳ ಹಿಂದೆ ಮಠ ಮಾನ್ಯಗಳಿಗೆ 88 ಕೋಟಿ ರೂಪಾಯಿಯ ಹೊಳೆ ಹರಿಸಿತ್ತು. ಬೆಳಗಾವಿ ಲೋಕಸಭೆ ಉಪ ಚುನಾವಣೆ ಮತ್ತು ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆ ಗೆಲ್ಲುವ ಸಲುವಾಗಿ ನಿನ್ನೆಯಷ್ಟೇ ಮರಾಠ ಅಭಿವೃದ್ಧಿ ನಿಗಮ ರಚಿಸಿ, ಅದಕ್ಕೂ 50 ಕೋಟಿ ಮೀಸಲಿರಿಸಿದೆ. ಮರಾಠ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಪ್ರಭು ಚೌಹಾಣ್ ಬಹಿರಂಗವಾಗಿ ಘೋಷಿಸಿದ್ದಾರೆ.
ಈ ಮೂಲಕ ಸಮುದಾಯಗಳ ಓಲೈಕೆ ಪಾಲಿಟಿಕ್ಸ್ ನ್ನು ಬಿಜೆಪಿ ಸರ್ಕಾರ ಮುಂದುವರಿಸಿದೆ. ಕಾರಣ ಬಸವ ಕಲ್ಯಾಣದಲ್ಲಿ ಮರಾಠ ಸಮುದಾಯದ 40 ಸಾವಿರ ಮತಗಳು ಇವೆ. ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಕೂಡ ಯಾರೇ ಗೆಲ್ಲಬೇಕಿದ್ರೂ ಮರಾಠ ಸಮುದಾಯದ ಬೆಂಬಲ ಬೇಕೇಬೇಕು. ಅಲ್ಲಿ ಅಂದಾಜು 6 ಲಕ್ಷಕ್ಕೂ ಹೆಚ್ಚು ಮರಾಠ ಮತಗಳಿವೆ. ಈ ಮತಗಳನ್ನು ಗುರಿಯಾಗಿಸಿಕೊಂಡೇ ಮರಾಠ ಸಮುದಾಯ ಅಭಿವೃದ್ಧಿ ನಿಗಮದ ಅಸ್ತ್ರವನ್ನು ಬಿಎಸ್‍ವೈ ಸರ್ಕಾರ ಪ್ರಯೋಗಿಸಿದೆ. ಇದನ್ನೂ ಓದಿ:ದುರ್ದೈವದಿಂದ KSRTC, BMTC ನೌಕರರ ಸಂಬಳ ನೀಡಲು ಆಗಿಲ್ಲ: ಲಕ್ಷ್ಮಣ ಸವದಿ
ಕೇವಲ ಮತಕ್ಕಾಗಿ ನಾಡದ್ರೋಹಿಗಳು ಎನಿಸಿಕೊಂಡ ಮರಾಠ ಸಮುದಾಯವನ್ನು ಈ ರೀತಿ ಓಲೈಸುವುದು ಎಷ್ಟು ಸರಿ ಅನ್ನೋದು ಕನ್ನಡ ಪರ ಹೋರಾಟಗಾರರ ಪ್ರಶ್ನೆ. ಸರ್ಕಾರ ಕೂಡಲೇ ಅಭಿವೃದ್ಧಿ ನಿಗಮ ರಚನೆಯ ಆದೇಶವನ್ನು ಹಿಂಪಡೆಯಬೇಕು. ಇಲ್ಲದೇ ಇದ್ರೇ ನಾಡಿದ್ದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕನ್ನಡ ಪರ ಹೋರಾಟಗಾರರು ಎಚ್ಚರಿಸ್ತಿದ್ದಾರೆ.
ಬೆಳಗಾವಿ- ಮರಾಠ ಸಮುದಾಯದ ಓಲೈಕೆ ಏಕೆ?
ಬೆಳಗಾವಿಯ 17 ಲಕ್ಷ ಮತಗಳ ಪೈಕಿ 6.5 ಲಕ್ಷಕ್ಕೂ ಹೆಚ್ಚು ಮರಾಠ ಮತಗಳಿವೆ. ಮರಾಠ ಸಮುದಾಯದ ಬೆಂಬಲ ಗಿಟ್ಟಿಸಿದ್ದ ಬಿಜೆಪಿಯ ಸುರೇಶ್ ಅಂಗಡಿ ಈಗಿಲ್ಲ. ಸುರೇಶ್ ಅಂಗಡಿ ಅನುಪಸ್ಥಿತಿಯಲ್ಲಿ ಮರಾಠ ವೋಟ್ ಬ್ಯಾಂಕ್ ಛಿದ್ರವಾಗುವ ಭೀತಿ ಬಿಜೆಪಿಗೆ ಕಾಡುತ್ತಿದೆ. ಮಹಾರಾಷ್ಟ್ರದ ರಾಜಕೀಯ ಉಪ ಲೋಕಸಮರದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ದಟ್ಟವಾಗಿವೆ. ಕಾಂಗ್ರೆಸ್ ಜೊತೆ ಶಿವಸೇನೆ ಇರುವ ಕಾರಣ, ಮರಾಠ ಮತಗಳು ಕೈಗೆ ಹೋಗುವ ಸಂಭವ ಹೆಚ್ಚು ಎನ್ನಲಾಗಿದೆ. ಹೀಗಾಗಿಯೇ ಮರಾಠ ಸಮುದಾಯದ ಓಲೈಕೆಗಾಗಿ ಸರ್ಕಾರ ಅಭಿವೃದ್ಧಿ ನಿಗಮ ರಚಿಸಿದೆ ಎಂದು ಹೇಳಲಾಗುತ್ತಿದೆ.
ಬಸವಕಲ್ಯಾಣ- ಮರಾಠ ಸಮುದಾಯದ ಓಲೈಕೆ ಏಕೆ?
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ 2.40 ಲಕ್ಷ ಮತಗಳನ್ನು ಹೊಂದಿದೆ. ಇದರಲ್ಲಿ ಮರಾಠ ಸಮುದಾಯದ ಅಂದಾಜು 45,000 ಮತಗಳಿವೆ. ಇಲ್ಲಿ ಯಾರೇ ಗೆಲ್ಲಬೇಕಿದ್ದರೂ ಮರಾಠ ಮತಗಳು ಬೇಕೇಬೇಕು. ಬಸವಕಲ್ಯಾಣದ ಮೇಲೆಯೂ ‘ಮಹಾ’ ಪಾಲಿಟಿಕ್ಸ್ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚು. ಹೀಗಾಗಿಯೇ, ಸಮುದಾಯದ ಓಲೈಕೆಗಾಗಿ ಮರಾಠ ಅಭಿವೃದ್ಧಿ ನಿಗಮದ ಅಸ್ತ್ರ ಪ್ರಯೋಗಿಸಿದೆ ಎಂಬುವುದು ರಾಜಕೀಯ ಅಂಗಳದ ಮಾತು.
ವಿರೋಧ ಏಕೆ?: ಮರಾಠ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರದಿಂದ ಕಡಿಮೆ ಅನುದಾನ ನೀಡಲಾಗಿದೆ. ಈ ವರ್ಷ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇವಲ 2 ಕೋಟಿ ರೂ. ನೀಡಲಾಗಿದೆ. ಈ ಮೊದಲು ವಾರ್ಷಿಕ 5 ಕೋಟಿ ರೂ. ನೀಡಲಾಗಗುತ್ತಿತ್ತು. 2 ಕೋಟಿ ಎಲ್ಲಿ?50 ಕೋಟಿ ಎಲ್ಲಿ? ಕನ್ನಡಕ್ಕಿಂತ ಮರಾಠಿನೇ ಮುಖ್ಯನಾ ಎಂದು ಕನ್ನಡ ಪರ ಹೋರಾಟಗಾರರು ಪ್ರಶ್ನೆ ಮಾಡುತ್ತಿದ್ದಾರೆ.
ಪ್ರತಿ ವರ್ಷ ನ.1ರಂದು ಮರಾಠಿಗರಿಂದ ಕರಾಳ ದಿನ ಆಚರಣೆ ಮಾಡುತ್ತಾರೆ. ಹೀಗಿದ್ದರೂ ಮರಾಠಿ ಸಮುದಾಯದ ಮೇಲೆ ಸರ್ಕಾರಕ್ಕೆ ಪ್ರೀತಿ ಏಕೆ?. ಹೀಗಾಗಿಯೇ ಕನ್ನಡ ಪರ ಹೋರಾಟಗಾರರಿಂದ ಮರಾಠ ನಿಗಮಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಬೊಕ್ಕಸದಲ್ಲಿ ದುಡ್ಡಿಲ್ಲ ಎಂಬ ನೆಪ ಹೆಳಿ, ವಿವಿಧ ಪ್ರಶಸ್ತಿಗಳು, ಪಿಹೆಚ್‍ಡಿ, ಎಂಫಿಲ್ ಮಾಡೋರ ವಿದ್ಯಾರ್ಥಿ ವೇತನಕ್ಕೂ ಕತ್ತರಿ ಹಾಕಿರೋದು ಕನ್ನಡ ಪರ ಹೋರಾಟಗಾರರನ್ನು ಸಿಟ್ಟಿಗೆಬ್ಬಿಸಿದೆ.
– ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ, ಪ್ರತಿಭಟನೆ ಮಾಡ್ತೇವೆ
ಬೆಂಗಳೂರು: ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ 50 ಕೋಟಿ ರೂಪಾಯಿ ಅನುದಾನ ನೀಡಿರುವುದನ್ನು ನಾನು ವಿರೋಧಿಸುತ್ತೇನೆ ಎಂದು ಸಾ.ರಾ ಗೋವಿಂದ್ ಅವರು ಹೇಳಿದ್ದಾರೆ.
ಇಂದು ನಗರದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಸಿಎಂ ನಿರ್ಧಾರವನ್ನು ಖಂಡಿಸಿ ನಾಡಿದ್ದು ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪ್ರತಿಭಟನೆ ಮಾಡುತ್ತೇವೆ. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ, ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಮುಂದಾಗಿ ಎಂದು ಮನವಿ ಮಾಡಿದರು.
ಬೇರೆ ರಾಜ್ಯಗಳಲ್ಲಿ ಭಾಷೆಯನ್ನು ಅಭಿವೃದ್ಧಿ ಮಾಡುವ ಕೆಲಸವಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಆಗಲೇ ಇಲ್ಲ. ಮರಾಠಿ ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂಪಾಯಿ ಕೊಟ್ಟಿದ್ದಾರೆ. 2020-21ರಲ್ಲಿ ಕನ್ನಡ ಅನುಷ್ಟಾನ ಮತ್ತು ಅಭಿವೃದ್ಧಿಗಾಗಿ ಪ್ರಯತ್ನ ಮಾಡೋಣ ಅಂತ ಸಿಎಂ ಹೇಳಿದ್ದರು, ಆದರೆ ಇಲ್ಲಿಯವರೆಗೆ 2 ಕೋಟಿ ಕೇಳಿದರೂ ಕನ್ನಡ ಅಭಿವೃದ್ಧಿಗೆ ಕೊಡುವುದಕ್ಕೆ ಆಗಲಿಲ್ಲ. ಆದರೆ ಮರಾಠ ಅಭಿವೃದ್ಧಿಗೆ 50 ಕೋಟಿ ಕೊಟ್ಟಿದ್ದಾರೆ ಎಂದು ಗುಡುಗಿದರು.
ನಿಮ್ಮ ಈ ನಿರ್ಧಾರಕ್ಕೆ ಸಲಹೆ ಕೊಟ್ಟವರು ಯಾರು? ಮರಾಠಿಗರು ನವೆಂಬರ್ 1ಕ್ಕೆ ಕರಾಳ ದಿನ ಆಚರಣೆ ಮಾಡುತ್ತಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ನೀಡುವ ಮೂಲಕ ಕನ್ನಡ ಪ್ರಾಧಿಕಾರವನ್ನು ಮುಚ್ಚುತ್ತಿರಾ? ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದು ಮಾಡಿ. ಕನ್ನಡ ಪರ ಹೋರಾಟಗಾರನಾಗಿ ನಾನು ವಿರೋಧ ಮಾಡುತ್ತೇನೆ ಎಂದು ಹೇಳಿದರು.
ಬೆಳಗಾವಿ ಬಸವ ಕಲ್ಯಾಣ ಉಪ ಚುನಾವಣೆ ಘೋಷಣೆಗೂ ಮುನ್ನವೇ, ಮರಾಠ ಸಮುದಾಯ ಓಲೈಸುವ ಸಲುವಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಸಿಎಂ ಬಿಎಸ್‍ವೈ ಆದೇಶ ಹೊರಡಿಸಿದ್ದರು. ಅಲ್ಲದೇ 50 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದಾರೆ.
ಯಾದಗಿರಿ: ಮೊದಲ ಬಾರಿಗೆ ಸಿಎಂ ಆಗಿದ್ದ ವೇಳೆ ಯಾದಗಿರಿಯನ್ನು ರಾಜ್ಯದ 30ನೇಯ ಜಿಲ್ಲೆಯಾಗಿ ಮಾಡಿದ್ದ ಸಿಎಂ ಯಡಿಯೂರಪ್ಪ, ಕಡಿಮೆ ಅವಧಿಯಲ್ಲಿ ಜಿಲ್ಲೆಯನ್ನು ಅಭಿವೃದ್ಧಿಪಡಿಸಿ ರಾಜ್ಯಕ್ಕೆ ಮಾದರಿ ಜಿಲ್ಲೆಯಾಗಿ ಮಾಡುತ್ತೆನೆಂದು ಜನರಿಗೆ ಮಾತು ಕೊಟ್ಟಿದ್ದರು.
ಈ ಮಾತನ್ನು ಮುಖ್ಯಮಂತ್ರಿಗಳು ಈಗ ಸಂಪೂರ್ಣವಾಗಿ ಮರೆತಿದ್ದು, ಕುಂಟು ನೆಪ ಹೇಳಿ ಜಿಲ್ಲೆಯ ಅಭಿವೃದ್ಧಿಗೆ ಸ್ವತಃ ಅವರೇ ಕೊಡಲಿ ಪೆಟ್ಟನ್ನು ನೀಡುತ್ತಿದ್ದಾರೆ. ಯಾದಗಿರಿ ಜಿಲ್ಲೆ ಈಗಾಗಲೇ ಭಾರತ ದೇಶದಲ್ಲಿಯೇ ಅತಿ ಹಿಂದುಳಿದ ಜಿಲ್ಲೆಯೆಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಹೀಗಾಗಿ ಕೇಂದ್ರ ಸರ್ಕಾರದ ಶೈಕ್ಷಣಿಕ ಮಹತ್ವಾಕಾಂಕ್ಷೆಯ ಜಿಲ್ಲೆ ಎನ್ನಿಸಿಕೊಂಡಿದೆ. ಎಲ್ಲ ಮಾದರಿಯ ಪರೀಕ್ಷೆಗಳಲ್ಲಿ ಜಿಲ್ಲೆ ಶೈಕ್ಷಣಿಕ ಮಟ್ಟದಲ್ಲಿ ಕೊನೆ ಸ್ಥಾನದಲ್ಲಿದೆ.
ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗಾಗಿ ವಿಜ್ಞಾನ ಕೇಂದ್ರ ಆರಂಭ ಮಾಡಲು, ವಿಜ್ಞಾನ ಪರಿಷತ್ತು ಸಂಸ್ಥೆಗೆ ಸರ್ಕಾರ ಹಣ ಬಿಡುಗಡೆ ಮಾಡಿತ್ತು. ಆದರೆ ಈಗ ಬಿಡುಗಡೆ ಮಾಡಿದ್ದ ಅನುದಾನವನ್ನು ಹಾಗೂ ಅನುದಾನಕ್ಕೆ ಇಲ್ಲಿಯವರಗೆ ದೊರೆತ ಬ್ಯಾಂಕ್ ಬಡ್ಡಿಯನ್ನು ವಾಪಸ್ ರಾಜ್ಯ ಸರ್ಕಾರದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕೆಂದು ಅಪಾರ ಮುಖ್ಯಕಾರ್ಯದರ್ಶಿ ಅವರು ಯಾದಗಿರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಈಗ ಜಿಲ್ಲೆಗೆ ಮಂಜೂರಾಗಿದ್ದ ವಿಜ್ಞಾನ ಕೇಂದ್ರವನ್ನು ಕೂಡ ಕೈಬಿಟ್ಟಿದ್ದು ಮತ್ತಷ್ಟು ಶೈಕ್ಷಣಿಕ ಮಟ್ಟದ ಹಿನ್ನೆಡೆಗೆ ಕಾರಣವಾಗಲಿದೆ.
ಜಿಲ್ಲೆಗೆ ಮಂಜೂರಾಗಿದ್ದ ಉಪಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಬಿಎಸ್‍ವೈ ಸರ್ಕಾರ ಕೋವಿಡ್ ಆರ್ಥಿಕ ಸಂಕಷ್ಟದ ನೆಪ ಹೇಳಿ ವಾಪಸ್ ಪಡೆದಿದೆ. ಈಗಾಗಲೇ ಯಾದಗಿರಿ ನಗರದ ಹೊರಭಾಗದ ಮುಂಡರಗಿಯಲ್ಲಿ 10 ಎಕರೆ ಜಾಗದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ವಿಜ್ಞಾನ ಕೇಂದ್ರ ನಿರ್ಮಾಣಕ್ಕೆ ಮಂಜೂರು ಪಡೆಯಲಾಗಿತ್ತು. ಈಗ ಏಕಾಏಕಿ ಹಣಕಾಸಿನ ಕೊರತೆ ಹಾಗೂ ವಿವಿಧ ಕಾರಣಗಳಿಟ್ಟುಕೊಂಡು ವಿಜ್ಞಾನ ಕೇಂದ್ರ ಕೈಬಿಟ್ಟಿರುವುದಕ್ಕೆ ಜಿಲ್ಲೆಯ ಜನರ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಕುರಿತು ಚರ್ಚಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಹಲವು ಸಚಿವರನ್ನು ಭೇಟಿ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.
ದೆಹಲಿಯಲ್ಲಿ 120 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕರ್ನಾಟಕ ಭವನ-1 ‘ಕಾವೇರಿ’ ಕಟ್ಟಡದ ಪುನರ್ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ರಾಜ್ಯದ ಬಗ್ಗೆ ಚರ್ಚೆ ಮಾಡಲಿದ್ದೇನೆ. ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಬಾಕಿ ಯೋಜನೆಗೆ ಅನುದಾನ ಮತ್ತು ಒಪ್ಪಿಗೆ ಪಡೆಯಲಿದ್ದೇವೆ ಎಂದರು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ವತಿಯಿಂದ ದೆಹಲಿಯ "ಕರ್ನಾಟಕ ಭವನ-1 ಕಾವೇರಿ" ಕಟ್ಟಡದ ಪುನರ್ ನಿರ್ಮಾಣ ಕಾಮಗಾರಿಗೆ ಮಾನ್ಯ ಮುಖ್ಯಮಂತ್ರಿ @BSYBJP ರವರು ಇಂದು ಚಾಲನೆ ನೀಡಿದರು. (1/2) pic.twitter.com/wD4a0zcCAs
ಇದಕ್ಕೂ ಮುನ್ನ ಕರ್ನಾಟಕ-1 ಕಾವೇರಿ ಕಟ್ಟಡದ ಪುನರ್ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದರು. ಎರಡು ತಳ ಮಹಡಿಗಳೂ, ನೆಲ ಮಹಡಿ ಹಾಗೂ ಆರು ಮಹಡಿ ಒಳಗೊಂಡಂತೆ ಒಟ್ಟು ಒಂಭತ್ತು ಮಹಡಿಗಳ ಈ ಕಟ್ಟಡವನ್ನು ನಿರ್ಮಾಣಕ್ಕೆ ಬಾಲಾಜಿ ಕೃಪಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್‍ಗೆ ನೀಡಿದೆ. ಮುಂದಿನ 24 ತಿಂಗಳಲ್ಲಿ ಕಟ್ಟಡದ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದರು.