Tag: ಅನಿಲ್ ಕುಂಬ್ಳೆ

  • ಧೋನಿಯನ್ನ ಮತ್ತೆ ಕುಟುಕಿ, ಕುಂಬ್ಳೆಯನ್ನು ಹೊಗಳಿದ ಗಂಭೀರ್

    ಧೋನಿಯನ್ನ ಮತ್ತೆ ಕುಟುಕಿ, ಕುಂಬ್ಳೆಯನ್ನು ಹೊಗಳಿದ ಗಂಭೀರ್

    ನವದೆಹಲಿ: ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಕಾಲ ಕಳೆಯುತ್ತಿರುವ ಟೀಂ ಇಂಡಿಯಾ ಮಾಜಿ ಹಾಗೂ ಹಾಲಿ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಅನೇಕರು ತಮ್ಮ ನೆಚ್ಚಿನ ನಾಯಕ ಯಾರು ಎಂದು ರಿವೀಲ್ ಮಾಡುತ್ತಿದ್ದಾರೆ. ಇತ್ತೀಚೆಗೆ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಅವರು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯನ್ನು ಬಣ್ಣಿಸಿದರೆ, ಸುರೇಶ್ ರೈನಾ ಅವರು ಮಹೇಂದ್ರ ಸಿಂಗ್ ಧೋನಿ ಅವರನ್ನು ತಮ್ಮ ನೆಚ್ಚಿನ ನಾಯಕ ಎಂದು ಹೊಗಳಿದ್ದರು. ಈಗ ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಅವರು ಅನಿಲ್ ಕುಂಬ್ಳೆ ಅವರನ್ನು ಭಾರತದ ಅತ್ಯುತ್ತಮ ನಾಯಕ ಎಂದು ಬಣ್ಣಿಸಿದ್ದಾರೆ.

    ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಗಂಭೀರ್, ”ದಾಖಲೆಗಳ ವಿಷಯದಲ್ಲಿ ಎಂ.ಎಸ್.ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಆದರೆ ನನ್ನ ಪ್ರಕಾರ ಕನ್ನಡಿಗ ಅನಿಲ್ ಕುಂಬ್ಳೆ ಒಬ್ಬ ಮಹಾನ್ ನಾಯಕ” ಎಂದು ಹೊಗಳಿದ್ದಾರೆ.

    ”ಅನಿಲ್ ಕುಂಬ್ಳೆ ಅವರು ದೀರ್ಘಕಾಲ ನಾಯಕತ್ವ ವಹಿಸಿದ್ದರೆ ಎಲ್ಲಾ ದಾಖಲೆಗಳನ್ನು ಮುರಿಯಬಹುದಿತ್ತು. ಸೌರವ್ ಗಂಗೂಲಿ ಅವರು ನಿಜವಾಗಿಯೂ ಉತ್ತಮ ನಾಯಕತ್ವ ವಹಿಸಿದ್ದರು. ಆದರೆ ಕುಂಬ್ಳೆ ಅವರು ದೀರ್ಘಕಾಲದವರೆಗೆ ನಾಯಕನಾಗಿರಬೇಕಿತ್ತು. ಕುಂಬ್ಳೆ ನಾಯಕತ್ವದಲ್ಲಿ ನಾನು 6 ಟೆಸ್ಟ್ ಪಂದ್ಯ ಆಡಿದ್ದೇನೆ. ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ನಾಯಕರ ಅಡಿಯಲ್ಲಿ ಆಡಿದ್ದೇನೆ. ಅವರಲ್ಲಿ ಕುಂಬ್ಳೆ ಅತ್ಯಂತ ನಿಸ್ವಾರ್ಥ ಮತ್ತು ಪ್ರಾಮಾಣಿಕ ವ್ಯಕ್ತಿ. ಅವರಿಂದ ಬಹಳಷ್ಟು ಕಲಿತಿದ್ದೇನೆ” ಎಂದು ಹೇಳಿದರು.

    ರಾಹುಲ್ ದ್ರಾವಿಡ್ ನಾಯಕತ್ವವನ್ನು ತ್ಯಜಿಸಿದ ಬಳಿಕ ಅನಿಲ್ ಕುಂಬ್ಳೆ 2007ರ ನವೆಂಬರ್ ನಲ್ಲಿ ಭಾರತೀಯ ತಂಡದ ಕ್ಯಾಪ್ಟನ್ ಜವಾಬ್ದಾರಿ ವಹಿಸಿಕೊಂಡರು. ಆಗ ಕುಂಬ್ಳೆ ಕ್ರಿಕೆಟಿಂಗ್ ವೃತ್ತಿಜೀವನದ 17ನೇ ವರ್ಷದಲ್ಲಿದ್ದರು. ಅದೇ ಸಮಯದಲ್ಲಿ, ಗಂಭೀರ್ ಐಪಿಎಲ್‍ನ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದರು. ಅವರ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿತ್ತು. ಅನಿಲ್ ಕುಂಬ್ಳೆ ಅವರು 132 ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್ ಮತ್ತು 271 ಏಕದಿನ ಪಂದ್ಯಗಳಲ್ಲಿ 337 ವಿಕೆಟ್ ಪಡೆದಿದ್ದಾರೆ.

    ಗಂಭೀರ್ ಗಂಗೂಲಿ ನಾಯಕತ್ವದಲ್ಲಿ 2004ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಂಬೈನಲ್ಲಿ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಆನಂತರ ಗಂಭೀರ್ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ಧೋನಿ ನಾಯಕತ್ವದಲ್ಲಿ ಪಂದ್ಯಗಳನ್ನು ಆಡಿದ್ದಾರೆ. ಗಂಭೀರ್ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ತಂಡಗಳ ಸದಸ್ಯರಾಗಿದ್ದಾರೆ. 2011ರ ವಿಶ್ವಕಪ್ ಫೈನಲ್‍ನಲ್ಲಿ ಅವರು ಶ್ರೀಲಂಕಾ ವಿರುದ್ಧ 97 ರನ್ ಚಚ್ಚುವ ಮೂಲಕ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಎಂ.ಎಸ್.ಧೋನಿ ನಾಯಕತ್ವದಲ್ಲಿ ಭಾರತವು ಟಿ20 ಹಾಗೂ ಏಕದಿನ ವಿಶ್ವಕಪ್‍ಗಳನ್ನು ಗೆದ್ದುಕೊಂಡಿತ್ತು.

    ಗೌತಮ್ ಗಂಭೀರ್ 58 ಟೆಸ್ಟ್ ಪಂದ್ಯಗಳಲ್ಲಿ 4,154 ರನ್, 147 ಏಕದಿನ ಪಂದ್ಯಗಳಲ್ಲಿ 5,238 ರನ್ ಮತ್ತು 37 ಟಿ20 ಪಂದ್ಯಗಳಲ್ಲಿ 932 ರನ್ ಗಳಿಸಿದ್ದಾರೆ. ಈ ಹಿಂದೆ ಟ್ವೀಟ್ ಮಾಡಿದ್ದ ಗಂಭೀರ್, `ಕೇವಲ ಒಂದು ಜ್ಞಾಪನೆ: ವಿಶ್ವಕಪ್ 2011 ಅನ್ನು ಇಡೀ ಭಾರತ, ಇಡೀ ಭಾರತೀಯ ತಂಡ ಮತ್ತು ಬೆಂಬಲ ನೀಡಿದ ಎಲ್ಲಾ ಸಿಬ್ಬಂದಿ ಗೆದ್ದಿದ್ದಾರೆ. ನಿಮ್ಮ ಗೀಳಿಗಾಗಿ ಅನೇಕ ಬಾರಿ ಸಿಕ್ಸ್ ಸಿಡಿಸಿದ್ದೀರಿ’ ಎಂದು ಖಾರವಾಗಿ ಬರೆದುಕೊಂಡಿದ್ದರು.

  • ಸ್ಪಿನ್ನರ್ ಕುಂಬ್ಳೆ ಕುಟುಂಬವನ್ನು ಭೇಟಿಯಾದ ಶೈನ್ ಶೆಟ್ಟಿ

    ಸ್ಪಿನ್ನರ್ ಕುಂಬ್ಳೆ ಕುಟುಂಬವನ್ನು ಭೇಟಿಯಾದ ಶೈನ್ ಶೆಟ್ಟಿ

    ಬೆಂಗಳೂರು: ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರ ಮನೆಗೆ ಬಿಗ್‍ಬಾಸ್ ಸೀಸನ್ 7 ವಿನ್ನರ್ ಶೈನ್ ಶೆಟ್ಟಿ ಅವರು ಭೇಟಿ ನೀಡಿದ್ದಾರೆ.

    ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್‍ಬಾಸ್-7 ರ ವಿನ್ನರ್ ಆಗಿರುವ ಶೈನ್, ಸಧ್ಯ ದೇವಸ್ಥಾನಗಳು, ಸ್ನೇಹಿತರು ಎಂದು ಭೇಟಿ ಮಾಡಿಕೊಂಡು ಆಯಾಗಿದ್ದಾರೆ. ಇದರ ಜೊತೆಗೆ ಕೆಲ ಶೋಗಳಿಗೆ ಅತಿಥಿಯಾಗಿ ಕೂಡ ಹೋಗುತ್ತಿದ್ದಾರೆ. ಈ ನಡುವೆ ಭಾರತದ ಲೆಜೆಂಡ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬದವರ ಜೊತೆ ಕಾಲಕಳೆದಿದ್ದಾರೆ.

    https://www.instagram.com/p/B9TBejEH1jK/

    ಈ ಬಗ್ಗೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಶೈನ್, ನಾನು ಅನಿಲ್ ಕುಂಬ್ಳೆ ಸರ್ ಮನೆಗೆ ಭೇಟಿ ನೀಡಿದ್ದೆ. ವಾವ್ ಚೇತನಾ ಕುಂಬ್ಳೆ ಅವರು ಒಳ್ಳೆಯ ಆತಿಥ್ಯ ನೀಡಿದರು. ಕುಂಬ್ಳೆಯವರ ಜೊತೆ ಒಂದು ಒಳ್ಳೆಯ ಸಂಜೆಯನ್ನು ಕಳೆದ ನಾನು ಧನ್ಯ. ನಮ್ಮ ದೇಶದ ಹೆಮ್ಮ ಅನಿಲ್ ಕುಂಬ್ಳೆ ಅವರು ತುಂಬ ಸರಳ ವ್ಯಕ್ತಿ ಎಂದು ಬರೆದುಕೊಂಡಿದ್ದಾರೆ.

    ಸ್ವತಃ ಅನಿಲ್ ಕುಂಬ್ಳೆ ಅವರೇ ಶೈನ್ ಅವರಿಗೆ ಫೋನ್ ಮಾಡಿ ಆಹ್ವಾನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಕುಂಬ್ಳೆ ಅವರ ಕುಟುಂಬ ಬಿಗ್‍ಬಾಸ್‍ನಲ್ಲಿ ಶೈನ್ ಶೆಟ್ಟಿ ಅವರ ಅಭಿಮಾನಿಗಳಾಗಿದ್ದು, ಅವರನ್ನು ಮಾತನಾಡಿಸಬೇಕು ಎಂದಿದ್ದರಂತೆ. ಆ ಕಾರಣಕ್ಕೆ ಕುಂಬ್ಳೆ ಅವರು ಶೈನ್ ಅವರಿಗೆ ಕಾಲ್ ಮಾಡಿ ಆಹ್ವಾನ ನೀಡಿದ್ದು, ಕುಂಬ್ಳೆ ಅವರ ಆಹ್ವಾನದ ಮೇರೆಗೆ ಶೈನ್ ಅವರ ಮನೆಗೆ ಹೋಗಿ ಬಂದಿದ್ದಾರೆ.

    https://www.instagram.com/p/B9JC2TkFPg1/

    ಇತ್ತೀಚೆಗಷ್ಟೇ ಶೈನ್ ಶೆಟ್ಟಿ ಅವರು ಬಿಗ್‍ಬಾಸ್‍ನಲ್ಲಿ ಸಹಸ್ಪರ್ಧಿಯಗಿದ್ದ ದೀಪಿಕಾ ದಾಸ್ ಅವರ ಹುಟ್ಟು ಹಬ್ಬದಲ್ಲಿ ಭಾಗವಹಿಸಿದ್ದರು. ದೀಪಿಕಾ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಬಿಗ್ ಬಾಸ್ ಮನೆಯ ಜೈ ಜಗದೀಶ್, ಅವರ ಪತ್ನಿ ವಿಜಯಲಕ್ಷ್ಮಿ, ಸುಜಾತ, ಶೈನ್ ಶೆಟ್ಟಿ, ಚಂದನ್ ಆಚಾರ್, ಕಿಶನ್, ವಾಸುಕಿ, ಚಂದನಾ, ಹರೀಶ್ ರಾಜ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಬಿಗ್‍ಬಾಸ್ ನಂತರ ದೀಪಿಕಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ಎಲ್ಲರೂ ಮತ್ತೆ ಒಟ್ಟಾಗಿ ಸೇರಿ ಸಖತ್ ಆಗಿ ಎಂಜಾಯ್ ಮಾಡಿದ್ದರು.

  • ಸ್ಪಿನ್ ಮಾಂತ್ರಿಕ ಕುಂಬ್ಳೆ 10 ವಿಕೆಟ್ ಸಾಧನೆಗೆ 21ರ ಸಂಭ್ರಮ

    ಸ್ಪಿನ್ ಮಾಂತ್ರಿಕ ಕುಂಬ್ಳೆ 10 ವಿಕೆಟ್ ಸಾಧನೆಗೆ 21ರ ಸಂಭ್ರಮ

    ಬೆಂಗಳೂರು: ಈ ದಿನ ಸುವರ್ಣ ಅಕ್ಷರಗಳನ್ನ ಬರೆದಿಡಬೇಕಾದ ದಿನ. ವೈಟ್ ಅಂಟ್ ವೈಟ್‍ನಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ ಕ್ರಿಕೆಟ್ ಇತಿಹಾಸ ಬರೆದ ದಿನ. 21 ವರ್ಷಗಳ ಹಿಂದೆ ಅಂದ್ರೆ 1999ರಲ್ಲಿ ಕನ್ನಡಿಗ ಸ್ಪಿನ್ ಮಾಂತ್ರಿಕ ಅನೀಲ್ ಕುಂಬ್ಳೆ ಒಂದೇ ಪಂದ್ಯದಲ್ಲಿ 10 ವಿಕೆಟ್ ಕಿತ್ತು ವಿಶ್ವದಾಖಲೆ ಬರೆದಿದ್ದರು.

    ಅದು 1999 ಫೆಬ್ರವರಿ 7ರಂದು ಬದ್ಧ ವೈರಿ ಪಾಕಿಸ್ತಾನ ವಿರುದ್ಧದ 2ನೇ ಟೆಸ್ಟ್ ಪಂದ್ಯ. ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಐತಿಹಾಸಿಕ ಹೋರಾಟ ಅದು. ಪಾಕಿಸ್ತಾನ ಚೇಸಿಂಗ್‍ಗೆ 420 ರನ್ ಪಡೆದುಕೊಂಡು ಕ್ರೀಸ್‍ಗಿಳಿದಿತ್ತು. ಆಗ ಪಾಕಿಸ್ತಾನ ಪರ ಆರಂಭಿಕರಾಗಿ ಮೈದಾಕ್ಕಿಳಿದು ಶಾಹೀದ್ ಅಫ್ರಿದಿ ಹಾಗೂ ಸಯೀದ್ ಅನ್ವರ್ ಜೊತೆಯಾಟ ನೋಡಿದ ಕ್ರಿಕೆಟ್ ಅಭಿಮಾನಿಗಳು ಇಂಡಿಯಾ ಟೆಸ್ಟ್ ಕೈ ಚೆಲ್ಲುತ್ತೆ ಎಂದು ಭಾವಿಸಿದ್ದರು. ಆದರೆ ಅಫ್ರಿದಿ ಅವರನ್ನ ತಮ್ಮ ಲೆಗ್ ಸ್ಪಿನ್ ಬಲೆಗೆ ಸಿಲುಕಿಸಿದ ಅನಿಲ್ ಕುಂಬ್ಳೆ ಮೊದಲ ವಿಕೆಟ್ ಪತನಕ್ಕೆ ಕಾರಣವಾದರು. ಕುಂಬ್ಳೆ ಎಸೆದ ಚೆಂಡಿಗೆ ಉತ್ತರ ಕೊಡಲು ಕ್ರೀಸ್ ಬಿಟ್ಟು ಮುಂದೆ ಬಂದ ಅಫ್ರಿದಿಯನ್ನು ವಿಕೆಟ್ ಕೀಪರ್ ನಯನ್ ಮೊಂಗಿಯಾ ಸ್ಟಂಪ್ ಮಾಡಿದ್ದರು. ಅಂದು ಪಾಕಿಸ್ತಾನ ಮೊದಲ ವಿಕೆಟ್‍ಗೆ ಶತಕದ ಜೊತೆಯಾಟವಾಡಿತ್ತು.

    ಇಲ್ಲಿಂದ ಕುಂಬ್ಳೆ ವಿಕೆಟ್ ಬೇಟೆ ಶುರುವಾಯಿತು. ನಂತರ ಇಜಾಜ್ ಅಹಮದ್, ದೈತ್ಯ ಇನ್ಜಮಾಮ್ ಉಲ್ ಹಕ್‍ರನ್ನು ತಮ್ಮ ಖೆಡ್ಡಾಗೆ ಕೆಡವಿದ ಕುಂಬ್ಳೆ ವಿಕೆಟ್‍ಗಳ ಸುರಿಮಳೆಗೈದರು. ಬ್ಯಾಟಿಂಗ್ ಪಿಚ್ ಆಗಿರುವ ಕೋಟ್ಲಾ ಮೈದಾನ ಬ್ಯಾಟ್ಸ್‍ಮನ್‍ಗಳಿಗೆ ತದ್ವಿರುದ್ಧವಾಗಿತ್ತು. ಈ ಪಿಚ್ ಕುಂಬ್ಳೆಗೆ ವರದಾನವಾಯಿತು. ಸ್ಪಿನ್ ಜಾದುವಿನಿಂದ ಪಾಕಿಸ್ತಾನದ ಆಟಗಾರರನ್ನು ಕಟ್ಟಿಹಾಕಿದ ಜಂಬೋ ಬ್ಯಾಕ್ ಟು ಬ್ಯಾಕ್ ವಿಕೆಟ್‍ಗಳನ್ನ ಉರುಳಿಸುತ್ತಾ ಹೋದರು.

    ಶ್ರೀನಾಥ್ ಸಾಥ್:
    ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಜೊತೆ ಟೀಂ ಇಂಡಿಯಾದಲ್ಲಿ ಮತ್ತೊಬ್ಬ ಕನ್ನಡಿಗ ಇದ್ದರು. ಅವರೇ ಅಂದಿನ ಸ್ಪೀಡ್ ಸ್ಟಾರ್ ಮೈಸೂರು ಎಕ್ಸ್‍ಪ್ರೆಸ್ ಜಾವಗಲ್ ಶ್ರೀನಾಥ್. ಒಂದು ಕಡೆ ತಮ್ಮ ಆಪ್ತ ಸ್ನೇಹಿತ ಪಾಕ್ ವಿಕೆಟ್‍ಗಳನ್ನು ಚೆಂಡಾಡುತ್ತಿದ್ದರೆ, ಮತ್ತೊಂದು ಕಡೆ ಶ್ರೀನಾಥ್ ಕುಂಬ್ಳೆ ದಾಖಲೆ ನಿರ್ಮಿಸುವುದಕ್ಕೆ ಆಸರೆಯಾಗಿ ನಿಂತಿದ್ದರು.

    ಕುಂಬ್ಳೆ ಪಾಕಿಸ್ತಾನದ 8 ಹಾಗೂ 9ನೇ ವಿಕೆಟ್ ಪಡೆದಿದ್ದಾಗ ಬೌಲಿಂಗ್ ಕ್ರೀಸ್‍ನಲ್ಲಿದ್ದಿದ್ದು ಜಾವಗಲ್ ಶ್ರೀನಾಥ್. ಹೇಗಾದರೂ ಮಾಡಿ ಕುಂಬ್ಳೆಗೆ 10ನೇ ವಿಕೆಟ್ ಸಿಗಬೇಕು ಅಂತ ಹಠಕ್ಕೆ ಬಿದ್ದ ಶ್ರೀನಾಥ್, ಕಳಪೆ ಬೌಲಿಂಗ್ ಮಾಡಿದರು. ಕೊನೆಗೂ ಇತಿಹಾಸ ಸೃಷ್ಟಿಸುವ ಸಮಯ ಬಂದೇ ಬಿಡ್ತು. ಪಾಕಿಸ್ತಾನದ ಕೊನೆ ವಿಕೆಟ್ ಕಬಳಿಸಿ, 2ನೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಪೂರೈಸಿದ ಅನಿಲ್ ಕುಂಬ್ಳೆ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವದಾಖಲೆ ಬರೆದರು. 207 ರನ್‍ಗೆ ಪಾಕಿಸ್ತಾನ ಆಲೌಟ್ ಆಯಿತು. 212ರನ್‍ಗಳಿಂದ ಭಾರತ ವಿಜಯೋತ್ಸವ ಆಚರಿಸಿತು. ಭಾರತ ಕ್ರಿಕೆಟ್ ಇತಿಹಾಸದಲ್ಲಿ ಅನಿಲ್ ಕುಬ್ಳೆ ಅವರ ಈ ಅಮೋಘ ಪ್ರದರ್ಶನಕ್ಕೆ ಇಂದಿಗೆ 21 ವರ್ಷಗಳ ಸಂಭ್ರಮ.

  • ನನ್ನ ದವಡೆ ಒಡೆಯಲು ಜಾನ್ ರೈಟ್ ಕಾರಣ- ರಹಸ್ಯ ಬಿಚ್ಚಿಟ್ಟ ಅನಿಲ್ ಕುಂಬ್ಳೆ

    ನನ್ನ ದವಡೆ ಒಡೆಯಲು ಜಾನ್ ರೈಟ್ ಕಾರಣ- ರಹಸ್ಯ ಬಿಚ್ಚಿಟ್ಟ ಅನಿಲ್ ಕುಂಬ್ಳೆ

    ವೆಲ್ಲಿಂಗ್ಟನ್: ದವಡೆ ಒಡೆದ್ರು ತಲೆಗೆ ದೊಡ್ಡ ಬ್ಯಾಂಡೇಜ್ ಸುತ್ತಿಕೊಂಡು ಅದ್ಬುತ ಬೌಲಿಂಗ್ ಮಾಡಿದ್ದ ಕನ್ನಡಿಗ ಅನಿಲ್ ಕುಂಬ್ಳೆ ಇತಿಹಾಸ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ವೆಸ್ಟ್ ಇಂಡೀಸ್ ವಿರುದ್ಧದ ಈ ಪಂದ್ಯ ಅನಿಲ್ ಕುಂಬ್ಳೆ ಅವ್ರ ಬದ್ಧತೆಗೆ(ಸಮರ್ಪಣೆ) ಸಾಕ್ಷಿ ಯಾಗಿತ್ತು. ಮೊನ್ನೆ ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಅನಿಲ್ ಕುಂಬ್ಳೆ ಸಾಧನೆ ಹಾಡಿ ಹೊಗಳಿದ್ದರು. ಸದ್ಯ ಅಂದು ತಮ್ಮ ದವಡೆ ಒಡೆತಕ್ಕೆ ಅಸಲಿ ಕಾರಣ ಏನು ಎಂಬ ರಹಸ್ಯವನ್ನ ಸ್ವತಃ ಅನಿಲ್ ಕುಂಬ್ಳೆ ಬಿಚ್ಚಿಟ್ಟಿದ್ದಾರೆ. ಶುಕ್ರವಾರ ನಡೆದ ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ ಪಂದ್ಯದ ವೇಳೆ ವೀಕ್ಷಕ ವಿವರಣೆಗೆ ಆಗಮಿಸಿದ ಕುಂಬ್ಳೆ ಆ ಘಟನೆಯ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದಾರೆ.

    ಅಂದು ಅನಿಲ್ ಕುಂಬ್ಳೆ ದವಡೆ ಒಡೆದುಕೊಳ್ಳೋಕೆ ಕಾರಣ ಕೋಚ್ ಜಾನ್ ರೈಟ್ ಅಂತೆ. ಆಂಟಿಗೋವಾದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 2ನೇ ನ್ಯೂ ಬಾಲ್ ತೆಗೆದುಕೊಂಡಿತ್ತು. ಇಂಡಿಯಾದ 6 ನೇ ವಿಕೆಟ್ ಪತನದ ನಂತರ ಕೀಪರ್ ಅಜಯ್ ರಾತ್ರಾ ಬ್ಯಾಟಿಂಗ್‍ಗೆ ಬರಬೇಕಿತ್ತು. ಆದರೆ ಹೊಸ ಬಾಲ್‍ಗೆ ಅಜಯ್ ರಾತ್ರಾ ಅಷ್ಟು ಚೆನ್ನಾಗಿ ಆಡುವುದಿಲ್ಲ. ನೀನು ಚೆನ್ನಾಗಿ ಆಡ್ತೀಯಾ ಹೀಗಾಗಿ ಬ್ಯಾಟಿಂಗ್‍ಗೆ ಹೋಗುವಂತೆ ಜಾನ್ ರೈಟ್ ತಮ್ಮನ್ನು ಕಳುಹಿಸಿದ್ದರು. 2ನೇ ನ್ಯೂ ಬಾಲ್ ನಾನು ಆಡೋವಾಗ ದವಡೆಗೆ ಬಿದ್ದು ಗಾಯವಾಗಿತ್ತು ಎಂದು ವಿವರಿಸಿದ್ದಾರೆ.

    ದವಡೆಗೆ ಬಿದ್ದ ಬಳಿಕ ನಾನು ವೈದ್ಯರಿಗೆ ತೋರಿಸಿದೆ. ವೈದ್ಯರು ಏನು ತೊಂದರೆ ಇಲ್ಲವೆಂದು ಹೇಳಿದ್ರು. ಆದರೆ ನನಗೆ ದವಡೆ ಸಮಸ್ಯೆ ಆಗಿದೆ ಎಂಬ ಫೀಲ್ ಆಗ್ತಿತ್ತು. ಹೀಗಾಗಿ 2ನೇ ಓಪಿನಿಯನ್ ತೆಗೆದುಕೊಳ್ಳಲು ಮುಂದಾದೆ. ಆಗ ಮೂಳೆ ಮುರಿದಿರೋದು ಗೊತ್ತಾಯ್ತು. ವೈದ್ಯರು ಮತ್ತೆ ಬೌಲಿಂಗ್ ಮಾಡಬೇಡಿ ಎಂದು ಹೇಳಿದ್ದರು. ಅಂದಿನ ಪಂದ್ಯದಲ್ಲಿ ಭಾರತ 3 ಜನ ಫಾಸ್ಟ್ ಬೌಲರ್, ಇಬ್ಬರು ಸ್ಪಿನ್ ಆಟಗಾರರೊಂದಿಗೆ ಕಣಕ್ಕಿಳಿದಿತ್ತು. ಕುಂಬ್ಳೆ ಗಾಯವಾದ್ದರಿಂದ ಸಚಿನ್ ತೆಂಡೂಲ್ಕರ್ ಮಾತ್ರ ಸ್ಪಿನ್ ಜವಾಬ್ದಾರಿ ವಹಿಸಬೇಕಿತ್ತು. ಇದನ್ನು ಅರಿತು ಪಿಸಿಯೋಥೆರಪಿಯನ್ನು ಪಡೆದು ಬೌಲಿಂಗ್ ಮಾಡುತ್ತೇನೆ ಎಂದು ಕೇಳಿದ್ದೆ. ಆಗ ಫಿಸಿಯೋಥೆರಪಿ ತಮಾಷೆ ಮಾಡಬೇಡಿ ಎಂದಿದ್ದರು. ಆದರೆ ಬೌಲಿಂಗ್ ಮಾಡ್ತೀನಿ ಎಂದು ದೊಡ್ಡ ಬ್ಯಾಂಡೇಜ್ ಕಟ್ಟಿಕೊಂಡು ಬೌಲ್ ಮಾಡಿದ್ದೆ ಎಂದು ಅಂದಿನ ಘಟನೆಯ ಸಂಪೂರ್ಣ ಮಾಹಿತಿಯನ್ನು ನೀಡಿದರು.

    ಪಂದ್ಯದ ಸಂದರ್ಭದಲ್ಲಿ ದವಡೆಗೆ ಯಾವುದೇ ತೊಂದರೆಯಾಗದಂತೆ ಎರಡು ಕಡೆ ಗಟ್ಟಿಯಾಗಿ ಬ್ಯಾಂಡೇಜ್ ಕಟ್ಟಿಕೊಂಡಿದ್ದ ಕುಂಬ್ಳೆ ಅವರು 14 ಓವರ್ ಬೌಲಿಂಗ್ ಮಾಡಿ 29 ರನ್ ಮಾತ್ರ ನೀಡಿದ್ದರು. ಅಲ್ಲದೇ ಎದುರಾಳಿ ತಂಡದ ದಿಗ್ಗಜ ಆಟಗಾರ ಲಾರಾ ವಿಕೆಟ್ ಕೂಡಾ ಕಬಳಿಸಿದ್ದರು. ತಮ್ಮ ಬದ್ಧತೆಯ ಮೂಲಕ ಅನಿಲ್ ಕುಂಬ್ಳೆ ಕ್ರಿಕೆಟ್ ಅಭಿಮಾನಿಗಳ ಮನಸ್ಸನ್ನು ಗೆದಿದ್ದರು.

  • ಧೋನಿ ಕಮ್‍ಬ್ಯಾಕ್ ಮಾಡ್ತಾರೋ, ಇಲ್ಲವೋ ಐಪಿಎಲ್‍ನಲ್ಲಿ ಸ್ಪಷ್ಟವಾಗಲಿದೆ: ಅನಿಲ್ ಕುಂಬ್ಳೆ

    ಧೋನಿ ಕಮ್‍ಬ್ಯಾಕ್ ಮಾಡ್ತಾರೋ, ಇಲ್ಲವೋ ಐಪಿಎಲ್‍ನಲ್ಲಿ ಸ್ಪಷ್ಟವಾಗಲಿದೆ: ಅನಿಲ್ ಕುಂಬ್ಳೆ

    ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಂಡಕ್ಕೆ ಮತ್ತೆ ವಾಪಾಸ್ ಆಗುತ್ತಾರಾ ಅಥವಾ ನಿವೃತ್ತಿ ಘೋಷಣೆ ಮಾಡುತ್ತಾರಾ ಎಂಬ ಗೊಂದಲ ಅಭಿಮಾನಿಗಳನ್ನು ಕಾಡುತ್ತಿದೆ. ಇದೇ ವೇಳೆ ಧೋನಿ ಕ್ರಿಕೆಟ್ ಭವಿಷ್ಯದ ಕುರಿತು ಮಾಜಿ ನಾಯಕ ಅನಿಲ್ ಕುಂಬ್ಳೆ ಪ್ರತಿಕ್ರಿಯೆ ನೀಡಿದ್ದು, ಐಪಿಎಲ್ ನಲ್ಲಿ ಧೋನಿ ಭವಿಷ್ಯ ನಿರ್ಧಾರವಾಗಲಿದೆ ಎಂದು ಹೇಳಿದ್ದಾರೆ.

    ಮಾಧ್ಯಮ ಸಂದರ್ಶನವೊಂದರಲ್ಲಿ ಧೋನಿ ಕುರಿತು ಮಾತನಾಡಿರುವ ಅನಿಲ್ ಕುಂಬ್ಳೆ, 2020ರ ಐಪಿಎಲ್ ಧೋನಿ ವಾಪಸ್ಸಾಗುತ್ತಾರಾ ಎಂಬುವುದನ್ನು ನಿರ್ಧರಿಸಲಿದೆ. ಅಲ್ಲದೇ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಂಡಕ್ಕೆ ಧೋನಿ ಅವರ ಅಗತ್ಯವಿದ್ದರೆ ಖಂಡಿತಾ ತಂಡದಲ್ಲಿ ಸ್ಥಾನ ಪಡೆಯುತ್ತಾರೆ. ಆದರೆ ಇದಕ್ಕೆ ಸ್ವಲ್ಪ ಸಮಯಾವಕಾಶ ಬೇಕಾಗಿದ್ದು, ನಾವು ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ.

    ಇದೇ ವೇಳೆ ಟೀಂ ಇಂಡಿಯಾ ತಂಡದ ಬೌಲಿಂಗ್ ಬಗ್ಗೆಯೂ ಸಲಹೆ ನೀಡಿರುವ ಅನಿಲ್ ಕುಂಬ್ಳೆ, ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಆಲ್‍ರೌಂಡರ್ ಆಟಗಾರರ ಬದಲು ವಿಕೆಟ್ ಪಡೆಯುವ ಸಾಮರ್ಥ್ಯವಿರುವ ಆಟಗಾರರನ್ನು ಆಯ್ಕೆ ಮಾಡಬೇಕಿದೆ. ಏಕೆಂದರೆ ವಿಶ್ವಕಪ್ ಟೂರ್ನಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ ಎಂದಿದ್ದಾರೆ.

    ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್ ತಂಡದಲ್ಲಿ ಇರುವುದು ಅಗತ್ಯ ಎಂದು ಅನಿಲ್ ಕುಂಬ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟೂರ್ನಿಯ ಸಂದರ್ಭದಲ್ಲಿ ಆಸ್ಟ್ರೇಲಿಯಾದಲ್ಲಿರುವ ಮಂಜಿನ ಪರಿಣಾಮ ಮಣಿಕಟ್ಟಿನ ಸ್ಪಿನ್ ಬೌಲರ್ ಗಳು ವಿಕೆಟ್ ಪಡೆಯುವ ಅವಕಾಶವಿದೆ. ಆಲ್‍ರೌಂಡರ್ ಆಟಗಾರರ ಬದಲು ವಿಕೆಟ್ ಪಡೆಯವಂತಹ ವೇಗದ ಬೌಲರ್ ಗಳು ತಂಡದಲ್ಲಿದ್ದರೆ ಉತ್ತಮ. ಆಸೀಸ್ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ತಂಡದ ಆಯ್ಕೆ ಮಾಡಿದರೆ ಉತ್ತಮ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.

  • ಸುದೀಪ್, ಪುನೀತ್‍ಗೆ ಅನಿಲ್ ಕುಂಬ್ಳೆ ಚಾಲೆಂಜ್

    ಸುದೀಪ್, ಪುನೀತ್‍ಗೆ ಅನಿಲ್ ಕುಂಬ್ಳೆ ಚಾಲೆಂಜ್

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಈಗ ಪದ್ಯ ಓದುವ ಚಾಲೆಂಜ್ ಶುರುವಾಗಿದೆ. ಈ ಚಾಲೆಂಜ್ ಅನ್ನು ವಿಶೇಷವಾಗಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಟ-ನಟಿಯರು ಆರಂಭಿಸಿದ್ದರು. ಈಗಾಗಲೇ ಈ ಸವಾಲನ್ನು ಅನೇಕ ನಟ-ನಟಿಯರು ಸ್ವೀಕರಿಸಿ, ಪೂರೈಸಿದ್ದಾರೆ.

    ಇದೀಗ ಗೋಲ್ಡನ್ ಸ್ಟಾರ್ ಗಣೇಶ್, ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ ಅವರಿಗೆ ಪದ್ಯ ಓದುವ ಚಾಲೆಂಜ್ ಹಾಕಿದ್ದರು. ಚಾಲೆಂಜ್ ಸ್ವೀಕರಿಸಿದ ಅನಿಲ್ ಕುಂಬ್ಳೆ ಅವರು, ರಾಷ್ಟ್ರಕವಿ ಕುವೆಂಪು ಅವರ “ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ಕವನವನ್ನು ಹಾಡಿದ್ದಾರೆ. ಈ ಮೂಲಕ ಗಣೇಶ್ ಅವರು ನೀಡಿದ್ದ ಪಂಥಾಹ್ವಾನ ಸವಾಲನ್ನು ಪೂರೈಸಿದ್ದಾರೆ.

    ಅನಿಲ್ ಕುಂಬ್ಳೆ ಅವರು ಟ್ವಿಟ್ಟರಿನಲ್ಲಿ ಈ ವಿಡಿಯೋ ಶೇರ್ ಮಾಡಿ, “ಈ ಸವಾಲನ್ನು ಮುಂದುವರಿಸಬೇಕು ಎಂದು ನನ್ನ ಸ್ನೇಹಿತರಾದ ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್ ಹಾಗೂ ವಿಜಯ ಪ್ರಕಾಶ್ ಅವರಿಗೆ ಕೇಳಿಕೊಳ್ಳುತ್ತೇನೆ. ಅದರಲ್ಲೂ ವಿಜಯ ಪ್ರಕಾಶ್ ಹಾಡಿನ ಮೂಲಕವೇ ಈ ಚಾಲೆಂಜ್ ಪೂರ್ಣಗೊಳಿಸಬೇಕು” ಎಂದಿದ್ದಾರೆ.

  • ಗಂಗೂಲಿ, ಕುಂಬ್ಳೆಯನ್ನು ಕೋಚ್ ಹುದ್ದೆಯಲ್ಲಿ ಉಳಿಸಿಕೊಳ್ಳುತ್ತಿದ್ದರು: ವಿನೋದ್ ರಾಯ್

    ಗಂಗೂಲಿ, ಕುಂಬ್ಳೆಯನ್ನು ಕೋಚ್ ಹುದ್ದೆಯಲ್ಲಿ ಉಳಿಸಿಕೊಳ್ಳುತ್ತಿದ್ದರು: ವಿನೋದ್ ರಾಯ್

    ಮುಂಬೈ: ಟೀಂ ಇಂಡಿಯಾ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಹಾಗೂ ನಾಯಕ ವಿರಾಟ್ ಕೊಹ್ಲಿ ನಡುವಿನ ಭಿನ್ನಾಭಿಪ್ರಾಯವೇ ಕುಂಬ್ಳೆ ಕೋಚ್ ಹುದ್ದೆಯಿಂದ ಕೆಳಗಿಳಿಯಲು ಕಾರಣ ಎಂಬುವುದು ಈಗಾಗಲೇ ತಿಳಿದಿದೆ. ಸದ್ಯ ಸಂದರ್ಶನವೊಂದರಲ್ಲಿ ಮಾತನಾಡಿರುವ ಬಿಸಿಸಿಐ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ವಿನೋದ್ ರಾಯ್ ಈ ಕುರಿತು ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.

    ಸಂದರ್ಶನದಲ್ಲಿ ಮಾತನಾಡಿರುವ ವಿನೋದ್ ರಾಯ್, ಕೋಚ್ ಹಾಗೂ ನಾಯಕನ ನಡುವಿನ ಭಿನ್ನಾಭಿಪ್ರಾಯವೇ ಕುಂಬ್ಳೆ ಕೋಚ್ ಸ್ಥಾನದಿಂದ ಕೆಳಗಿಳಿಯಲು ಕಾರಣ. ಆದರೆ ಅಂದು ನನಗೆ ಅವರನ್ನು ಉಳಿಸಿಕೊಳ್ಳುವ ಅಧಿಕಾರವಿರಲಿಲ್ಲ. ನನಗೆ ಅಧಿಕಾರವಿದ್ದಿದ್ದರೆ ಅವರನ್ನು ಕೋಚ್ ಸ್ಥಾನದಲ್ಲಿಯೇ ಉಳಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

    33 ತಿಂಗಳ ಕಾಲ ಸಿಒಎ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ 71 ವರ್ಷದ ವಿನೋದ್ ರಾಯ್ ಅವರು, ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದು ಹೇಳಿದ್ದಾರೆ. ಕುಂಬ್ಳೆ ತಾವು ಕಂಡ ಅದ್ಭುತ ಕೋಚ್ ಆಗಿದ್ದು, ಅವರ ಮೇಲೆ ನನಗೆ ಅತೀವ ಗೌರವವಿದೆ. ನನ್ನ ಅವಧಿಯಲ್ಲಿ ಅವರ ಕಾಲಾವಧಿಯನ್ನು ಹೆಚ್ಚಿಸುವ ಅವಕಾಶ ಲಭಿಸಿದ್ದರೆ ಖಂಡಿತ ನಾನು ಆ ಕೆಲಸ ಮಾಡುತ್ತಿದೆ. ಆದರೆ ಕೊಹ್ಲಿರೊಂದಿಗೆ ಭಿನ್ನಾಭಿಪ್ರಾಯ ಉಂಟಾದ ಬಳಿಕ ಅವರನ್ನು ಉಳಿಸಿಕೊಳ್ಳುವ ಅವಕಾಶ ನನಗೆ ಲಭಿಸಲಿಲ್ಲ. ಇಂದು ಅಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಗಂಗೂಲಿ ಬಲವಂತವಾಗಿಯಾದರೂ ಕೂಡ ಕುಂಬ್ಳೆರನ್ನು ಕೋಚ್ ಹುದ್ದೆಯಲ್ಲಿ ಮುಂದುವರಿಸುತ್ತಿದ್ದರು. ಆದರೆ ಅನಿಲ್ ಕುಂಬ್ಳೆ ವಿವಾದ ಉಂಟಾಗುವ ಮೊದಲೇ ಸ್ವತಃ ಕೋಚ್ ಹುದ್ದೆಯನ್ನು ಗೌರವಯುತವಾಗಿ ತೊರೆದರು ಎಂದು ತಿಳಿಸಿದ್ದಾರೆ.

    ಕುಂಬ್ಳೆರನ್ನು ಮುಂದುವರಿಸುವ ಕುರಿತು ನಾನು ಸಲಹಾ ಸಮಿತಿಯ ಸದಸ್ಯರಾಗಿದ್ದ ಸಚಿನ್, ಗಂಗೂಲಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದೆ. ಆದರೆ ಕೋಚ್ ಸ್ಥಾನದಲ್ಲಿ ಕುಂಬ್ಳೆ ಅವರು ಮುಂದುವರಿಯುವುದನ್ನು ಕೊಹ್ಲಿ ಬಯಸಿರಲಿಲ್ಲ. ಈ ಬಗ್ಗೆ ಸಚಿನ್, ಕೊಹ್ಲಿರೊಂದಿಗೆ ಮಾತನಾಡಿದ್ದರೂ ಕೂಡ ಅವರ ಮನವೊಲಿಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ.

    ಗಂಗೂಲಿ ಅಧ್ಯಕ್ಷ ಸ್ಥಾನಕ್ಕೆ ಬಂದಿರುವುದರಿಂದ ಇಂತಹ ಪರಿಸ್ಥಿತಿಗಳು ಮತ್ತೆ ಉದ್ಭವಿಸುವುದಿಲ್ಲ ಎಂಬ ವಿಶ್ವಾಸವಿದೆ. ಗಂಗೂಲಿ ಯಾವುದೇ ವಿಷಯವನ್ನಾದರೂ ಕೂಡ ಡೀಲ್ ಮಾಡುವ ಸಮರ್ಥರಾಗಿದ್ದಾರೆ ಎಂದು ವಿನೋದ್ ರಾಯ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಭಾರತದ ಪರ ಮತ್ತೊಂದು ದಾಖಲೆ ನಿರ್ಮಿಸಿದ ಬುಮ್ರಾ

    ಭಾರತದ ಪರ ಮತ್ತೊಂದು ದಾಖಲೆ ನಿರ್ಮಿಸಿದ ಬುಮ್ರಾ

    ಆಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಹೊಸ ದಾಖಲೆ ಬರೆದಿದ್ದು, ಅತಿ ಕಡಿಮೆ ಪಂದ್ಯಗಳಲ್ಲಿ ಭಾರತದ ಪರ 50 ವಿಕೆಟ್ ಪಡೆದ ವೇಗದ ಬೌಲರ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಬ್ರಾವೋ ವಿಕೆಟ್ ಪಡೆದ ಸಂದರ್ಭದಲ್ಲಿ ಬುಮ್ರಾ ಟೆಸ್ಟ್ ವೃತ್ತಿ ಜೀವನದ 50ನೇ ವಿಕೆಟ್ ಪಡೆದ ಸಾಧನೆ ಮಾಡಿದರು. ಟೀಂ ಇಂಡಿಯಾ ಪರ ವೆಂಕಟೇಶ್ ಪ್ರಸಾದ್, ಮೊಹಮ್ಮದ್ ಶಮಿ ಹೆಸರಿನಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಈ ಇಬ್ಬರು ಕೂಡ 13 ಟೆಸ್ಟ್ ಪಂದ್ಯಗಳಲ್ಲಿ 50 ವಿಕೆಟ್ ಪಡೆದರೆ, ಬುಮ್ರಾ 11 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

    ಉಳಿದಂತೆ ವೇಗವಾಗಿ 50ನೇ ಟೆಸ್ಟ್ ವಿಕೆಟ್ ಪಡೆದ ಪಟ್ಟಿಯಲ್ಲಿ ಆರ್. ಅಶ್ವಿನ್ (ಸ್ಪಿನ್ + ವೇಗದ ಬೌಲಿಂಗ್) ಮೊದಲ ಸ್ಥಾನದಲ್ಲಿದ್ದು, ತಮ್ಮ 9ನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಈ ಸಾಧನೆ ಮಾಡಿದ್ದರು. ಪಟ್ಟಿಯಲ್ಲಿ ಅನಿಲ್ ಕುಂಬ್ಳೆ 2ನೇ ಸ್ಥಾನದಲ್ಲಿದ್ದು, 10 ಪಂದ್ಯಗಳಲ್ಲಿ 50 ವಿಕೆಟ್ ಪಡೆದಿದ್ದರು. ಅಂದಹಾಗೇ ಎಸೆತಗಳ ಅಂತರದಲ್ಲಿ 50 ಟೆಸ್ಟ್ ವಿಕೆಟ್ ಸಾಧನೆ ಮಾಡಲು ಬುಮ್ರಾ 2,465 ಎಸೆತ ತೆಗೆದುಕೊಂಡಿದ್ದಾರೆ. ಅಶ್ವಿನ್ 2,579 ಎಸೆತಗಳಲ್ಲಿ 50 ವಿಕೆಟ್ ಪಡೆದ ಸಾಧನೆ ಮಾಡಿದ್ದರು.

    ಇದೇ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಇಶಾಂತ್ ಶರ್ಮಾ 5 ವಿಕೆಟ್ ಸಾಧನೆಯನ್ನು ಮಾಡಿದ್ದಾರೆ. ಪಂದ್ಯದ 2 ದಿನದಾಟದಲ್ಲಿ ರವೀಂದ್ರ ಜಡೇಜಾರ ಅರ್ಧ ಶತಕದ ನೆರವಿನಿಂದ ಟೀಂ ಇಂಡಿಯಾ 297 ರನ್ ಮೊದಲ ಇನ್ನಿಂಗ್ಸ್ ನಲ್ಲಿ ಅಲೌಟಯ್ತು. ಆ ಬಳಿಕ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ದಿನದಾಟದ ಅಂತ್ಯಕ್ಕೆ 189 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡಿತು. ಟೀಂ ಇಂಡಿಯಾ ಪರ ಇಶಾಂತ್ ಶರ್ಮಾ 42 ರನ್ ನೀಡಿ 5 ವಿಕೆಟ್ ಪಡೆದು ವೃತ್ತಿ ಜೀವನದಲ್ಲಿ 9 ಬಾರಿಗೆ 5 ವಿಕೆಟ್ ಪಡೆದ ಸಾಧನೆ ಮಾಡಿದರು. ಉಳಿದಂತೆ ಜಡೇಜಾ, ಶಮಿ ಹಾಗೂ ಬುಮ್ರಾ ತಲಾ 1 ವಿಕೆಟ್ ಪಡೆದಿದ್ದಾರೆ.

  • ಅನಿಲ್ ಕುಂಬ್ಳೆ ನೇತೃತ್ವದಲ್ಲಿ ‘ಬೌಂಡರಿ ಕೌಂಟ್’ ವಿವಾದಕ್ಕೆ ಬ್ರೇಕ್ ಬೀಳುತ್ತಾ?

    ಅನಿಲ್ ಕುಂಬ್ಳೆ ನೇತೃತ್ವದಲ್ಲಿ ‘ಬೌಂಡರಿ ಕೌಂಟ್’ ವಿವಾದಕ್ಕೆ ಬ್ರೇಕ್ ಬೀಳುತ್ತಾ?

    ದುಬೈ: ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿ ವಿವಾದಾತ್ಮಕ ‘ಬೌಂಡರಿ ಕೌಟ್’ ಸೇರಿದಂತೆ ಇತರೇ ಕ್ರಿಕೆಟ್ ನಿಯಮಗಳ ಬಗ್ಗೆ ಚರ್ಚೆ ನಡೆಸಲಿದೆ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬೌಂಡರಿಗಳ ಆಧಾರದಲ್ಲಿ ಇಂಗ್ಲೆಂಡ್ ನ್ಯೂಜಿಲೆಂಡ್ ಗೆಲುವು ಪಡೆದಿತ್ತು. ಆ ಬಳಿಕ ಐಸಿಸಿ ನಿಯಮಗಳ ಕುರಿತು ಹಲವರು ಕಿಡಿಕಾರಿದ್ದರು.

    ಸೂಪರ್ ಓವರಿನಲ್ಲಿ ಟೈ ಆದ ಸಂದರ್ಭದಲ್ಲಿ ಯಾವ ತಂಡ ಹೆಚ್ಚು ಬೌಂಡರಿ ಸಿಡಿಸಿದೆ ಎಂಬ ಆಧಾರದ ಮೇಲೆ ಗೆಲುವುವನ್ನು ನಿರ್ಧರಿಸಲಾಗುತ್ತದೆ. ಈ ಬಗ್ಗೆ ಕ್ರಿಕೆಟ್ ವಿಶ್ಲೇಷಕರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಪರಿಣಾಮ ಐಸಿಸಿ ಈ ಬಗ್ಗೆ ಸಮೀಕ್ಷಾ ಸಮಾವೇಶವನ್ನು ನಡೆಸಲು ತೀರ್ಮಾನಿಸಿದೆ. ಇದರ ಭಾಗವಾಗಿಯೇ ಕುಂಬ್ಳೆ ನೇತೃತ್ವದಲ್ಲಿ ಕಮಿಟಿ ರಚಿಸಲಾಗಿದೆ. ಈ ಕಮಿಟಿ ಸಭೆ ನಡೆಸಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಿದೆ.

    ಕುಂಬ್ಳೆ ನೇತೃತ್ವದ ಸಭೆ ಮುಂದಿನ ವರ್ಷ ನಡೆಯಲಿದೆ ಎಂದು ಐಸಿಸಿ ಪ್ರಧಾನ ವ್ಯವಸ್ಥಾಪಕ ಸ್ಪಷ್ಟಪಡಿಸಿದ್ದಾರೆ. ಪಂದ್ಯ ಟೈ ಆದರೆ ಸೂಪರ್ ಓವರ್ ಮೂಲಕ ಫಲಿತಾಂಶವನ್ನು ನಿರ್ಣಹಿಸುವ ಪದ್ಧತಿಯನ್ನ 2009 ರಿಂದ ಅನುಸರಿಸುತ್ತಿದ್ದೆವೆ. ಸೂಪರ್ ಓವರ್ ನಲ್ಲೂ ಟೈ ಆದರೆ ಬೌಂಡರಿಗಳ ಆಧಾರದ ಮೇಲೆ ಗೆಲುವು ತೀರ್ಮಾನಿಸಲಾಗುತ್ತದೆ. ಇದೇ ವಿಶ್ವಕಪ ಫೈನಲ್ ಪಂದ್ಯದಲ್ಲೂ ನಡೆದಿದೆ. ವಿಶ್ವದ ಎಲ್ಲಾ ಟಿ20 ಕ್ರಿಕೆಟ್ ಟೂರ್ನಿಗಳಲ್ಲೂ ಇದನ್ನೇ ಅನುಸರಿಸಲಾಗುತ್ತಿದೆ. ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಒಂದೇ ರೀತಿಯ ನಿಯಮಗಳು ಇರಬೇಕಾಗಿದ್ದು, ಈ ಬಗ್ಗೆ ಗೊಂದಲಗಳು ಇದ್ದರೆ ಅನಿಲ್ ಕುಂಬ್ಳೆ ನೇತೃತ್ವದ ಸಮಿತಿ ತೀರ್ಮಾನಿಸಲಿದೆ ಎಂದು ವಿವರಿಸಿದ್ದಾರೆ. ಅನಿಲ್ ಕುಂಬ್ಳೆ ನೇತೃತ್ವ ಸಮಿತಿ ಯಾವ ತೀರ್ಮಾನ ಕೈಗೊಳ್ಳಿಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

  • ಶಿವರಾಜ್‍ಕುಮಾರ್ ಹುಟ್ಟುಹಬ್ಬಕ್ಕೆ ಅನಿಲ್ ಕುಂಬ್ಳೆ ಸರ್ಪ್ರೈಸ್

    ಶಿವರಾಜ್‍ಕುಮಾರ್ ಹುಟ್ಟುಹಬ್ಬಕ್ಕೆ ಅನಿಲ್ ಕುಂಬ್ಳೆ ಸರ್ಪ್ರೈಸ್

    ಲಂಡನ್: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ಶುಕ್ರವಾರ ಲಂಡನ್‍ನಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವೇಳೆ ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಅವರು ಶಿವರಾಜ್ ಕುಮಾರ್ ಅವರಿಗೆ ಸರ್ಪ್ರೈಸ್ ನೀಡಿದ್ದಾರೆ.

    ಹೌದು. ಅನಿಲ್ ಕುಂಬ್ಳೆ ಅವರು ಶುಕ್ರವಾರ ಶಿವರಾಜ್‍ಕುಮಾರ್ ಹಾಗೂ ಅವರ ಕುಟುಂಬದವರನ್ನು ಭೇಟಿ ಮಾಡಿದ್ದಾರೆ. ಹಾಗೂ ಈ ವೇಳೆ ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅಲ್ಲದೆ ಅವರ ಆರೋಗ್ಯವನ್ನು ಕೂಡ ವಿಚಾರಿಸಿದ್ದಾರೆ.

    ಅನಿಲ್ ಕುಂಬ್ಳೆ ಅವರು ಶಿವಣ್ಣ ಹಾಗೂ ಅವರ ಕುಟುಂಬದ ಜೊತೆಯಿರುವ ಫೋಟೋ ಹಾಕಿ ಅದಕ್ಕೆ, “ಹುಟ್ಟುಹಬ್ಬದಂದೇ ಶಿವಣ್ಣ ಅವರನ್ನು ಭೇಟಿ ಮಾಡಿದ್ದು ಖುಷಿ ಆಗಿದೆ. ಶಿವಣ್ಣ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಹಾಗೂ ನಿಮ್ಮ ಆರೋಗ್ಯ ಬೇಗ ಚೇತರಿಸಿಕೊಳ್ಳಲಿ” ಎಂದು ಟ್ವೀಟ್ ಮಾಡಿದ್ದಾರೆ.

    ಶಿವಣ್ಣ ಕೂಡ ತಮ್ಮ ಟ್ವಿಟ್ಟರಿನಲ್ಲಿ, “ಕ್ರಿಕೆಟ್ ಅಂದ್ರೆ ನನಗೆ ಇಷ್ಟ, ಅದರಲ್ಲೂ ನಮ್ಮ ಕನ್ನಡದ ಕ್ರಿಕೆಟ್ ಆಟಗಾರರು ಅಂದ್ರೆ ನನಗೆ ಪ್ರೀತಿ ಜಾಸ್ತಿ. ನನ್ನ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಆಗಿ ಸಿಕ್ಕ ನನ್ನ ನೆಚ್ಚಿನ ಆಟಗಾರ, ನನ್ನ ಒಳ್ಳೆಯ ಸ್ನೇಹಿತ ಅನಿಲ್ ಕುಂಬ್ಳೆ ಅವರೇ ನಿಮ್ಮ ಭೇಟಿ ಖುಷಿ ಕೊಡ್ತು” ಎಂದು ಟ್ವೀಟ್ ಮಾಡಿದ್ದಾರೆ.

    ಕಳೆದ ಆರು ತಿಂಗಳಿನಿಂದ ಭುಜದ ನೋವಿನಿಂದ ಬಳುತ್ತಿದ್ದ ಶಿವಣ್ಣ ಅವರು ಶಸ್ತ್ರಚಿಕಿತ್ಸೆಗೆ ಎಂದು ಇತ್ತೀಚೆಗೆ ಲಂಡನ್‍ಗೆ ತೆರಳಿದ್ದರು. ಅನಿಲ್ ಕುಂಬ್ಳೆ ಅವರು ಇಂಗ್ಲೆಂಡ್‍ನಲ್ಲಿ ನಡೆಯುತ್ತಿದ್ದ ವಿಶ್ವಕಪ್ ಟೂರ್ನಿ ವೀಕ್ಷಿಸಲು ಹೋಗಿದ್ದರು. ಹೀಗಾಗಿ ಅವರು ಶಿವಣ್ಣ ಅವರನ್ನು ಭೇಟಿ ಮಾಡಿದ್ದಾರೆ.