Tag: ಅನಿಲ್ ಕುಂಬ್ಳೆ

  • ಕುಂಬ್ಳೆ 10 ವಿಕೆಟ್ ವಿಶ್ವದಾಖಲೆ ನೆನಪಿಸಿದ ಬಿಸಿಸಿಐ

    ಕುಂಬ್ಳೆ 10 ವಿಕೆಟ್ ವಿಶ್ವದಾಖಲೆ ನೆನಪಿಸಿದ ಬಿಸಿಸಿಐ

    ಮುಂಬೈ: ಫೆ. 7, 1999ರಲ್ಲಿ ಜಂಬೋ ಖ್ಯಾತಿಯ ಭಾರತದ ಮಾಜಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಟೆಸ್ಟ್ ಪಂದ್ಯವೊಂದರಲ್ಲಿ 10 ವಿಕೆಟ್ ಕಬಳಿಸಿ ವಿಶ್ವದಾಖಲೆ ನಿರ್ಮಿಸಿದ್ದರು. 22 ವರ್ಷಗಳ ಹಿಂದಿನ ಈ ದಿನವನ್ನು ಇಂದು ಬಿಸಿಸಿಐ ನೆನಪಿಸಿಕೊಂಡಿದೆ.

    ಫೆ.7 1999ರಂದು ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಜಂಬೋ ಪಾಕಿಸ್ತಾನದ ಮೇಲೆ ಸವಾರಿ ಮಾಡಿ 10 ವಿಕೆಟ್ ಕಬಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ಈ ದಾಖಲೆಯ ದಿನಕ್ಕೆ ಇಂದು 22 ವರ್ಷ ತುಂಬಿದ್ದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇಂಗ್ಲೆಂಡ್ ಮಾಜಿ ಆಟಗಾರ ಜಿಮ್ ಲೇಕರ್ ಬಳಿಕ ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್ ಕಬಳಿಸಿದ ವಿಶ್ವದ ಎರಡನೇ ಬೌಲರ್ ಎನಿಸಿಕೊಂಡಿರುವ ಜಂಬೋವಿನ ದಾಖಲೆಯನ್ನು ಬಿಸಿಸಿಐ ಮತ್ತೊಮ್ಮೆ ಟ್ವಿಟ್ಟರ್ ನಲ್ಲಿ  ವಿಡಿಯೋ ಪೋಸ್ಟ್ ಮಾಡುವ ಮೂಲಕ ಮೇಲುಕು ಹಾಕಿಕೊಂಡಿದೆ.

    ಕರ್ನಾಟಕದ ಹೆಮ್ಮೆಯ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಭಾರತದ ಪರವಾಗಿ 132 ಟೆಸ್ಟ್ ಪಂದ್ಯವನ್ನಾಡಿ 619 ವಿಕೆಟ್ ಕಬಳಿಸುವ ಮೂಲಕ ವಿಶ್ವದ ಶ್ರೇಷ್ಠ ಬೌಲರ್‍ಗಳ ಪಟ್ಟಿಯಲ್ಲಿ 3 ನೇ ಸ್ಥಾನ ಪಡೆದುಕೊಂಡಿದ್ದಾರೆ. ಶ್ರೀಲಂಕಾದ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್ ಮತ್ತು ಆಸ್ಟ್ರೇಲಿಯಾದ ಲೆಗ್ ಸ್ಪಿನ್ ಲೆಜೆಂಡ್ ಶೇನ್ ವಾರ್ನ್ ಈ ಪಟ್ಟಿಯಲ್ಲಿ ಒಂದು ಮತ್ತು ಎರಡನೇ ಸ್ಥಾನದಲ್ಲಿರುವ ಅಗ್ರಗಣ್ಯರೊಂದಿಗೆ ಕುಂಬ್ಳೆ ಗುರುತಿಸಿಕೊಂಡಿದ್ದಾರೆ.

    1999ರ ಫೆ.7ರಂದು ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ ನೀಡಿದ 420 ರನ್‍ಗಳ ಗುರಿ ಬೆನ್ನಟ್ಟಲು ಹೊರಟ ಪಾಕಿಸ್ತಾನ 101 ರನ್‍ಗಳಿಗೆ ಯಾವುದೇ ವಿಕೆಟ್ ನಷ್ಟವಿಲ್ಲದೇ ಮುನ್ನಡೆಯುತ್ತಿತ್ತು ಈ ವೇಳೆ ಪಂದ್ಯ ಭಾರತ ತಂಡದ ಕೈ ಜಾರಿತು ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಈ ವೇಳೆ ದಾಳಿಗಿಳಿದ ಕುಂಬ್ಳೆ ಸತತ ವಿಕೆಟ್ ಬೇಟೆಯಾಡಿ ಪಾಕಿಸ್ತಾನವನ್ನು ಸೋಲಿನ ಸುಳಿಗೆ ತಳ್ಳಿ ಭಾರತಕ್ಕೆ ಐತಿಹಾಸಿಕ ಗೆಲುವನ್ನು ತಂದುಕೊಟ್ಟಿದ್ದರು. ಈ ಪಂದ್ಯದಲ್ಲಿ ಕುಂಬ್ಳೆ ಎರಡು ಇನ್ನಿಂಗ್ಸ್ ನಲ್ಲಿ ಒಟ್ಟು 14 ವಿಕೆಟ್ ಬೇಟೆಯಾಡಿ ಭಾರತದ ಕ್ರಿಕೆಟ್‍ನ ಕಣ್ಮಣಿಯಾಗಿ ಮೂಡಿಬಂದಿದ್ದರು.

  • ನೀವು ಎಂದಿಗೂ ನಮ್ಮ ಹೆಮ್ಮೆ – ಅನಿಲ್ ಕುಂಬ್ಳೆಗೆ ಕಿಚ್ಚ ವಿಶ್

    ನೀವು ಎಂದಿಗೂ ನಮ್ಮ ಹೆಮ್ಮೆ – ಅನಿಲ್ ಕುಂಬ್ಳೆಗೆ ಕಿಚ್ಚ ವಿಶ್

    ಬೆಂಗಳೂರು: ಭಾರತ ಕ್ರಿಕೆಟ್ ಕಂಡ ಅದ್ಭುತ ನಾಯಕ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆಯವರ ಹುಟ್ಟುಹಬ್ಬಕ್ಕೆ ನಟ ಕಿಚ್ಚ ಸುದೀಪ್ ಅವರು ಶುಭಕೋರಿದ್ದಾರೆ.

    ಟೆಸ್ಟ್ ಪಂದ್ಯವೊಂದರಲ್ಲಿ ಪಾಕಿಸ್ತಾನದ ವಿರುದ್ಧ 10 ವಿಕೆಟ್ ಪಡೆದು ಮಿಂಚಿದ್ದ ಹೆಮ್ಮೆಯ ಕನ್ನಡಿಗ ಅನಿಲ್ ಕುಂಬ್ಳೆಯವರು ಇಂದು 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಸದ್ಯ ಐಪಿಎಲ್ ನಿಮಿತ್ತ ಯುಎಇಯಲ್ಲಿರುವ ಕುಂಬ್ಳೆಯವರಿಗೆ ಸಾವಿರಾರು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡುತ್ತಿದ್ದಾರೆ.

    ಅಂತೆಯೇ ಟ್ವಿಟ್ಟರ್ ಮೂಲಕ ಶುಭಕೋರಿರುವ ಸುದೀಪ್, ನೀವು ಮೈದಾನದಲ್ಲಿ ಹೀರೋ ಆಗಿದಕ್ಕೆ, ಅದು ನಿಮ್ಮನಿಂದು ಲೆಜೆಂಡ್ ಆಗಿ ಮಾಡಿದೆ ಅನಿಲ್ ಕುಂಬ್ಳೆ ಸರ್. ಆದರೆ ಎಲ್ಲ ಪರಿಸ್ಥಿತಿಯನ್ನು ನೀವು ನಿಭಾಯಿಸಿದ ರೀತಿ ನಿಮ್ಮನ್ನು ಗುರುತಿಸುವಂತೆ ಮಾಡಿದೆ. ಕೆಲ ಪರಿಸ್ಥಿತಿಯಲ್ಲಿ ನಿಮ್ಮ ಮಾತುಗಳು ನೀವು ಓರ್ವ ಜೆಂಟಲ್‍ಮ್ಯಾನ್ ಎಂಬುದನ್ನು ತೋರಿಸಿಕೊಟಿವೆ. ಅದೇ ನಮಗೆ ಸ್ಫೂರ್ತಿ. ನೀವು ಎಂದಿಗೂ ನಮ್ಮ ಹೆಮ್ಮೆ ಹುಟ್ಟುಹಬ್ಬದ ಶುಭಾಶಯಗಳು ಸರ್ ಎಂದು ಬರೆದುಕೊಂಡಿದ್ದಾರೆ.

    1990 ರಲ್ಲಿ ಭಾರತೀಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ ಅನಿಲ್ ಕುಂಬ್ಳೆಯವರು ಸುಮಾರು 18 ವರ್ಷಗಳ ಕಾಲ ಭಾರತಕ್ಕಾಗಿ ಕ್ರಿಕೆಟ್ ಆಡಿದರು. ಭಾರತದ ಪರ 132 ಟೆಸ್ಟ್ ಮ್ಯಾಚ್ ಆಡಿರುವ ಕುಂಬ್ಳೆ ಬರೋಬ್ಬರಿ 619 ವಿಕೆಟ್ ಪಡೆದುಕೊಂಡಿದ್ದಾರೆ. ಜೊತೆಗೆ 1999 ರಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ 10 ವಿಕೆಟ್ ಕಿತ್ತು ದಾಖಲೆ ಬರೆದಿದ್ದಾರೆ. ಭಾರತಕ್ಕಾಗಿ 271 ಏಕದಿನ ಪಂದ್ಯಗಳನ್ನು ಆಡಿರುವ ಕುಂಬ್ಳೆಯವರು 337 ವಿಕೆಟ್ ಕಿತ್ತು ಮಿಂಚಿದ್ದಾರೆ.

    ಭಾರತ ಕ್ರಿಕೆಟಿನಲ್ಲಿ ಜಂಬೋ ಎಂದೆ ಹೆಸರು ಮಾಡಿದ್ದ, ತನ್ನ ಲೆಗ್ ಸ್ಪಿನ್ ಮೂಲಕ ಎದುರಾಳಿಗಳನ್ನು ಕಾಡಿದ್ದ ಕುಂಬ್ಳೆ, 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದರು. ಸದ್ಯ ಐಪಿಎಲ್‍ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಡುವೆ ಭಾರತ ತಂಡಕ್ಕೂ ಕೂಡ ಮುಖ್ಯ ಕೋಚ್ ಆಗಿ ಕೆಲಸ ಮಾಡಿದ್ದಾರೆ. ಕಮೆಂಟೆಟರ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಕ್ರಿಕೆಟಿಗೆ ನಿವೃತ್ತಿ ಘೋಷಿಸದ ನಂತರ ಕ್ರಿಕೆಟಿನಲ್ಲೇ ಸಕ್ರಿಯವಾಗಿದ್ದಾರೆ.

  • ಐಪಿಎಲ್‍ನಲ್ಲಿ ಹೆಚ್ಚು ಇಂಡಿಯನ್ ಕೋಚ್‍ಗಳನ್ನು ನೋಡ ಬಯಸುತ್ತೇನೆ: ಅನಿಲ್ ಕುಂಬ್ಳೆ

    ಐಪಿಎಲ್‍ನಲ್ಲಿ ಹೆಚ್ಚು ಇಂಡಿಯನ್ ಕೋಚ್‍ಗಳನ್ನು ನೋಡ ಬಯಸುತ್ತೇನೆ: ಅನಿಲ್ ಕುಂಬ್ಳೆ

    – 40 ವರ್ಷದ ಗೇಲ್ ತಂಡದಲ್ಲಿ ಆಡುತ್ತಾರೆ

    ನವದೆಹಲಿ: ಐಪಿಎಲ್‍ನಲ್ಲಿ ಹೆಚ್ಚು ಭಾರತೀಯ ಮುಖ್ಯ ಕೋಚ್‍ಗಳನ್ನು ನೋಡಲು ನಾನು ಬಯಸುತ್ತೇನೆ ಎಂದು ಕಿಂಗ್ಸ್ ಇಲೆವೆನ್ ತಂಡದ ಮುಖ್ಯ ಕೋಚ್ ಕನ್ನಡಿಗ ಅನಿಲ್ ಕುಂಬ್ಳೆ ಅವರು ಹೇಳಿದ್ದಾರೆ.

    ಐಪಿಎಲ್-2020 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಯುಎಇ ತಲುಪಿರುವ ಎಲ್ಲ ತಂಡಗಳು ಖಾಲಿ ಮೈದಾನದಲ್ಲಿ ಆಡಲು ಭರ್ಜರಿ ಸಿದ್ಧತೆ ನಡೆಸಿವೆ. ಅಂತಯೇ ಕಿಂಗ್ಸ್ ಇಲೆವೆನ್ ತಂಡ ಕೂಡ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ತಾಲೀಮು ಮಾಡುತ್ತಿದೆ. ಈ ವೇಳೆ ಅನ್‍ಲೈನ್ ಸಂವಾದದಲ್ಲಿ ಮಾತನಾಡಿರುವ ಅನಿಲ್, 40 ವರ್ಷದ ಗೇಲ್ ತಂಡದಲ್ಲಿ ಆಡುತ್ತಾರೆ ಎಂದು ಹೇಳಿದ್ದಾರೆ.

    ಈ ಸಂವಾದ ಕಾರ್ಯಕ್ರಮದಲ್ಲಿ ಕೋಚ್‍ಗಳ ಬಗ್ಗೆ ಮಾತನಾಡಿರುವ ಅವರು, ನಾನು ಐಪಿಎಲ್‍ನಲ್ಲಿ ಹೆಚ್ಚು ಭಾರತೀಯ ಮುಖ್ಯ ಕೋಚ್‍ಗಳನ್ನು ನೋಡಲು ಬಯಸುತ್ತೇನೆ. ಆದರೆ ವಿಪರ್ಯಾಸ ಎಂಬಂತೆ ನಮ್ಮ ಐಪಿಎಲ್‍ನಲ್ಲಿ ಭಾರತೀಯರಿಗಿಂತ ವಿದೇಶಿಗರೇ ಮುಖ್ಯ ಕೋಚ್ ಆಗಿರುತ್ತಾರೆ. ಭಾರತೀಯರು ಕೋಚ್ ಆಗಿ ಕಾಣಿಸಿಕೊಳ್ಳುವುದು ಕಡಿಮೆ. ಮುಂದಿನ ದಿನಗಳಲ್ಲಿ ನಮ್ಮವರೇ ಹೆಚ್ಚು ಮುಖ್ಯ ಕೋಚ್‍ಗಳು ಆಗಿರುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

    ಇದೇ ವೇಳೆ 40 ವರ್ಷದ ಗೇಲ್ ತಂಡದಲ್ಲಿ ಆಡುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಕುಂಬ್ಳೆ, ಗೇಲ್ ತಂಡದಲ್ಲಿ ಇರುವುದು ಮುಖ್ಯವಾಗುತ್ತದೆ. ಏಕೆಂದರೆ ಗೇಲ್ ಕೇವಲ ಬ್ಯಾಟ್ಸ್ ಮ್ಯಾನ್ ಆಗಿ ಇರುವುದಿಲ್ಲ. ತಂಡದಲ್ಲಿ ಓರ್ವ ಮಾರ್ಗದರ್ಶಕನಾಗಿ, ಅನುಭವಿ ಆಟಗಾರನಾಗಿ ಇರುತ್ತಾರೆ. ಪಂದ್ಯದ ವೇಳೆ ಅವರ ಸಲಹೆಯನ್ನು ಸ್ವೀಕರಿಸಬೇಕಾಗುತ್ತದೆ. ಜೊತೆಗೆ ಟಾಪ್ ಆರ್ಡರ್ ನಲ್ಲಿ ಈಗಲೂ ದೊಡ್ಡ ಹೊಡೆತಗಳಿಗೆ ಗೇಲ್ ಹೆಸರುವಾಸಿ. ಹೀಗಾಗಿ ಅವರು ತಂಡದಲ್ಲಿ ಇರಬೇಕು ಎಂದು ತಿಳಿಸಿದ್ದಾರೆ.

    ನಮ್ಮ ತಂಡ ಎಲ್ಲ ವಿಭಾಗದಲ್ಲೂ ಬಹಳ ಬಲಿಷ್ಠವಾಗಿದೆ. ಯುವ ಆಟಗಾರರು ಇದ್ದಾರೆ. ಪ್ರತಿಭಾನ್ವಿತ ವಿದೇಶಿ ಆಟಗಾರರು ಇದ್ದಾರೆ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ. ಇದೇ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ ನಂತರ ಧೋನಿ ಐಪಿಎಲ್ ಆಡುತ್ತಿರುವ ಬಗ್ಗೆ ಮಾತನಾಡಿದ ಅವರು, ನನಗೆ ಧೋನಿ ಬಗ್ಗೆ ಚೆನ್ನಾಗಿ ಗೊತ್ತಿದೆ. ಆತ ಈ ಬಾರಿ ಐಪಿಎಲ್‍ನಲ್ಲಿ ಚೆನ್ನಾಗಿ ಆಡುತ್ತಾನೆ. ನಾನೂ ಕೂಡ ನಿವೃತ್ತಿ ಹೊಂದಿದ ಬಳಿಕ ಐಪಿಎಲ್ ಆಡಿದ್ದೇನೆ ಎಂದಿದ್ದಾರೆ.

    ಭಾರತೀಯರಲ್ಲದ ಮುಖ್ಯ ಕೋಚ್ ಹೊಂದಿರುವ ಐಪಿಎಲ್ ತಂಡಗಳು
    ರಿಕಿ ಪಾಂಟಿಂಗ್ (ದೆಹಲಿ ಕ್ಯಾಪಿಟಲ್ಸ್), ಬ್ರೆಂಡನ್ ಮೆಕಲಮ್ (ಕೆಕೆಆರ್), ಸ್ಟೀಫನ್ ಫ್ಲೆಮಿಂಗ್ (ಸಿಎಸ್‍ಕೆ), ಮಹೇಲಾ ಜಯವರ್ಧನೆ (ಮುಂಬೈ ಇಂಡಿಯನ್ಸ್), ಟ್ರೆವರ್ ಬೇಲಿಸ್ (ಸನ್‍ರೈಸರ್ಸ್), ಸೈಮನ್ ಕ್ಯಾಟಿಚ್ (ಆರ್.ಸಿ.ಬಿ) ಆಂಡ್ರ್ಯೂ ಮೆಕ್‍ಡೊನಾಲ್ಡ್ (ರಾಜಸ್ಥಾನ್ ರಾಯಲ್ಸ್). ಪಂಜಾಬ್ ತಂಡಕ್ಕೆ ಮಾತ್ರ ಭಾರತೀಯರಾದ ಅನಿಲ್ ಕುಂಬ್ಳೆ ಮುಖ್ಯ ಕೋಚ್ ಆಗಿದ್ದಾರೆ.

  • ಕ್ಯಾಪ್ಟನ್ ತ್ರಯರಿಂದ ಸಾಕಷ್ಟು ಕಲ್ತಿದ್ದೇನೆ: ಕೆಎಲ್ ರಾಹುಲ್

    ಕ್ಯಾಪ್ಟನ್ ತ್ರಯರಿಂದ ಸಾಕಷ್ಟು ಕಲ್ತಿದ್ದೇನೆ: ಕೆಎಲ್ ರಾಹುಲ್

    ಅಬುಧಾಬಿ: ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಾಯಕತ್ವ ಲಕ್ಷಣಗಳನ್ನು ಗಮನಿಸಿದ್ದು, ಸಾಕಷ್ಟು ಕಲಿತಿದ್ದೇನೆ. ಈ ಬಾರಿಯ ಟೂರ್ನಿಯಲ್ಲಿ ಅವುಗಳನ್ನು ಅಳವಡಿಸಿಕೊಳ್ಳುತ್ತೇನೆ ಎಂದು ಕಿಂಗ್ಸ್ ಇಲೆವೆನ್ ತಂಡದ ನಾಯಕ ಕೆಎಲ್ ರಾಹುಲ್ ಹೇಳಿದ್ದಾರೆ.

    ಪಂಜಾಬ್ ತಂಡದ ನಾಯಕತ್ವ ವಹಿಸಿಕೊಂಡಿರುವ ಬಗ್ಗೆ ಮಾತನಾಡಿರುವ ಕೆಎಲ್ ರಾಹುಲ್, ಧೋನಿ, ಕೊಹ್ಲಿ ರೋಹಿತ್ ಅವರೊಂದಿಗೆ ಕಳೆದ 10 ವರ್ಷಗಳಿಂದ ಆಡುತ್ತಿದ್ದು, ಅವರ ನಾಯಕತ್ವದಲ್ಲಿ ಆಡಲು ನನಗೆ ಅವಕಾಶ ಲಭಿಸಿದೆ. ಕೊಹ್ಲಿ, ಧೋನಿ ವ್ಯಕ್ತಿಗತವಾಗಿ ಭಿನ್ನವಾಗಿದ್ದರೂ, ತಂಡವನ್ನು ಮುನ್ನಡೆಸುವ ವಿಚಾರದಲ್ಲಿ ಒಂದೇ. ಆದರೆ ಆ ಪದ್ಧತಿಗಳು ಮಾತ್ರ ಬೇರೆ. ಅವರಿಂದ ಸಾಕಷ್ಟು ಕಲಿತಿದ್ದೇನೆ. ಇತ್ತ ಸಾಕಷ್ಟು ಅನುಭವವನ್ನು ಹೊಂದಿರುವ ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ತಂಡದ ಕೋಚ್ ಆಗಿ ತಮ್ಮ ಪಕ್ಕದಲ್ಲೇ ಇರುವುದು ಸಾಕಷ್ಟು ಸಂತಸ ತಂದಿದೆ ಎಂದಿದ್ದಾರೆ.

    ಕೊರೊನಾ ಕಾರಣದಿಂದ ಕ್ರಿಕೆಟ್‍ನಿಂದ ಸಾಕಷ್ಟು ಸಮಯ ದೂರ ಉಳಿದ ಕಾರಣ ಸ್ಪಲ್ಪ ಆತಂಕ ಎದುರಾಗಿತ್ತು. ಆದರೆ ಯಾವುದೇ ರೀತಿಯ ಭಯವಿಲ್ಲ. ಮೂರು ವಾರಗಳಲ್ಲಿ ಲಯಕ್ಕೆ ಮರಳಬೇಕಿದೆ. ಅಲ್ಲದೇ ಮನಸ್ಸು ಮತ್ತು ಶರೀರದ ಸಮನ್ವಯ ಸಾಧಿಸಬೇಕಿದೆ ಎಂದಿದ್ದಾರೆ. ಕೆಎಲ್ ರಾಹುಲ್ ಕಳೆದ ಎರಡು ಆವೃತ್ತಿಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿದ್ದು, ಈ ಬಾರಿಗೆ ಅವರಿಗೆ ತಂಡದ ನಾಯತ್ವದ ಜವಾಬ್ದಾರಿ ವಹಿಸಿಕೊಳ್ಳುವ ಅವಕಾಶ ಲಭಿಸಿದೆ. ಈಗಾಗಲೇ ಟೂರ್ನಿಗಾಗಿ ಯುಎಇಗೆ ತೆರಳಿರುವ ತಂಡದ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿ ತರಬೇತಿಯನ್ನು ಆರಂಭಿಸಿದೆ.

  • ಕುಂಬ್ಳೆ ಇರೋದ್ರಿಂದ ನಮ್ಮ ಕೆಲಸ ಸುಲಭವಾಗಿದೆ: ಕೆಎಲ್ ರಾಹುಲ್

    ಕುಂಬ್ಳೆ ಇರೋದ್ರಿಂದ ನಮ್ಮ ಕೆಲಸ ಸುಲಭವಾಗಿದೆ: ಕೆಎಲ್ ರಾಹುಲ್

    ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಆಗಿ ಅನಿಲ್ ಕುಂಬ್ಳೆ ಇರುವುದು ನಮ್ಮ ಅದೃಷ್ಟ ಎಂದು ನಾಯಕ ಕೆಎಲ್ ರಾಹುಲ್ ಹೇಳಿದ್ದಾರೆ.

    ಐಪಿಎಲ್ ಟೂರ್ನಿಗಾಗಿ ಯುಎಇಗೆ ತೆರಳಿರುವ ಆಟಗಾರರು ಕ್ವಾರಂಟೈನ್‍ನಲ್ಲಿದ್ದು, ಈ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಕೋಚ್ ಅನಿಲ್ ಕುಂಬ್ಳೆ ಅವರ ಬಗ್ಗೆ ಮಾತನಾಡಿದ್ದು, ಈ ಆವೃತ್ತಿಯಲ್ಲಿ ಅನಿಲ್ ಭಾಯ್ ನಮ್ಮೊಂದಿಗೆ ಇರುವುದು ಅದೃಷ್ಟ. ಒಂದೇ ನಗರದಿಂದ ಬಂದಿರುವುದರಿಂದ ಕ್ರೀಡಾಂಗಣದಲ್ಲಿ ಹಾಗೂ ಹೊರಗೂ ನನಗೆ ಉತ್ತಮ ಬಾಂಧವ್ಯವಿದೆ. ಅವರು ಕೋಚ್ ಆಗಿರುವುದರಿಂದ ನಾಯಕನಾಗಿ ನನ್ನ ಕೆಲಸ ಸುಲಭವಾಗಿದೆ. ತಂಡದ ಎಲ್ಲಾ ಯೋಜನೆಗಳನ್ನು ಅವರೇ ಮಾಡುತ್ತಾರೆ. ಅದನ್ನು ಜಾರಿ ಮಾಡುವುದಷ್ಟೇ ನನ್ನ ಕರ್ತವ್ಯ ಎಂದು ರಾಹುಲ್ ಹೇಳಿದ್ದಾರೆ.

    ಪಂಜಾಬ್ ತಂಡದಲ್ಲಿ ಗೇಲ್, ಮ್ಯಾಕ್ಸ್‌ವೆಲ್ ರೂಪದಲ್ಲಿ ಇಬ್ಬರು ಸ್ಫೋಟಕ ಆಟಗಾರರಿದ್ದು, ಇಬ್ಬರ ಕಾಂಬಿನೇಷನ್‍ನಲ್ಲಿ ಕಿಂಗ್ಸ್ ಇಲೆವೆನ್ ಉತ್ತಮ ಪ್ರದರ್ಶನ ನೀಡಲಿದೆ ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಂಜಾಬ್ ಪರ ಮ್ಯಾಕ್ಸ್‌ವೆಲ್ ಉತ್ತಮ ಪ್ರದರ್ಶನ ನೀಡಿದ್ದು, ಅವರು ತಂಡಕ್ಕೆ ಬೇಕು ಎಂದು ಹರಾಜಿನಲ್ಲಿ ಬೇಡಿಕೆ ಇಟ್ಟಿದೆ. ಕಳೆದ 2 ವರ್ಷಗಳಿಂದ ಅಂತಹ ಆಟಗಾರ ನಮ್ಮ ತಂಡದ ಮಧ್ಯಮ ಕ್ರಮಾಂಕದಲ್ಲಿ ಇಲ್ಲದ ಕೊರತೆ ಕಾಣಿಸಿತ್ತು. ಗೇಲ್ ಅವರೊಂದಿಗೂ ಹಲವು ವರ್ಷಗಳಿಂದ ಆಡುತ್ತಿದ್ದು, ಅವರ ಅನುಭವ ತಂಡಕ್ಕೆ ಸಹಕಾರಿಯಾಗಲಿದೆ. ಟೂರ್ನಿಯ ಆರಂಭಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ.

  • ಕೆಲ ಬದಲಾವಣೆಗಳೊಂದಿಗೆ ಅಂಗಳಕ್ಕೆ ಇಳಿಯಲಿದ್ದಾರೆ ಆಟಗಾರರು

    ಕೆಲ ಬದಲಾವಣೆಗಳೊಂದಿಗೆ ಅಂಗಳಕ್ಕೆ ಇಳಿಯಲಿದ್ದಾರೆ ಆಟಗಾರರು

    ನವದೆಹಲಿ: ಬರೋಬ್ಬರಿ ನಾಲ್ಕು ತಿಂಗಳ ಬಳಿಕ ಟಿವಿ ಪರದೆಯ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನೋಡುವ ಅವಕಾಶ ಲಭಿಸಿದೆ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಟೂರ್ನಿಯ ಮೊದಲ ಪಂದ್ಯ ಇಂದು ನಡೆಯಲಿದೆ. ಇದೇ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆಟದ ನಿಯಮಗಳಲ್ಲಿ ಕೆಲ ಮಧ್ಯಂತರ ಬದಲಾವಣೆಗಳನ್ನು ಮಾಡಿ ಮಾಹಿತಿ ನೀಡಿದೆ.

    ಪಂದ್ಯದ ವೇಳೆ ಚೆಂಡು ಹೊಳೆಯುವಂತೆ ಮಾಡಲು ಲಾಲಾರಸ(ಎಂಜಲು) ಹಾಕುವುದನ್ನು ನಿಷೇಧಿಸಿದೆ. ಅಲ್ಲದೇ ಅಂತಾರಾಷ್ಟ್ರೀಯ ಟೂರ್ನಿಗಳ ಪಂದ್ಯಗಳಲ್ಲಿ ಹೋಂ ಅಂಪೈರ್ ಗಳಿಗೆ ಅವಕಾಶ ಕಲ್ಪಿಸಿದೆ.

    ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಸಮಿತಿಯ ಶಿಫಾರಸುಗಳನ್ನು ಮಂಡಳಿ ಅಂಗೀಕರಿಸಿದೆ. ಕೋವಿಡ್-19 ನಿಂದ ಉಂಟಾಗುತ್ತಿರುವ ಅಪಾಯವನ್ನು ತಗ್ಗಿಸಲು ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಚುಟುವಟಿಕೆಗಳನ್ನು ಪುನರ್ ಆರಂಭಿಸಲು ಸೇರಿದಂತೆ ಆಟಗಾರರು ಮತ್ತು ಅಧಿಕಾರಿಗಳ ಸುರಕ್ಷತೆಯ ಉದ್ದೇಶದಿಂದ ಶಿಫಾರಸುಗಳನ್ನು ಜಾರಿಗೊಳಿಸಿದೆ.

    ಕೋವಿಡ್-19 ರಿಪ್ಲೇಸ್‍ಮೆಂಟ್: ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಕೋವಿಡ್-19 ಲಕ್ಷಣ ಹೊಂದಿರುವ ಆಟಗಾರರ ಬದಲಿಸಲು ತಂಡಗಳಿಗೆ ಅವಕಾಶ ನೀಡಲಾಗಿದೆ. ಪಂದ್ಯದ ರೆಫರಿ ಬದಲಿ ಆಟಗಾರರನ್ನು ತಂಡಗಳು ಪಡೆಯಲು ಅನುಮತಿ ನೀಡುತ್ತಾರೆ. ಆದರೆ ಈ ಕೋವಿಡ್-19 ಬದಲಿ ನಿಯಮ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಅನ್ವಯವಾಗುವುದಿಲ್ಲ.

    ಎಂಜಲು ಬಳಕೆ ನಿಷೇಧ: ಬೌಲರ್ ಗಳು ಚೆಂಡಿನ ಒಳಪು ಹೆಚ್ಚಿಸಲು ಲಾಲಾರಸ (ಎಂಜಲು) ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಆದರೂ ಆಟಗಾರ ಚೆಂಡಿನ ಹೊಳಪು ಹೆಚ್ಚಿಸಲು ಲಾಲಾರಸ ಬಳಸಿದರೆ ಅಂಪೈರ್ ಸಂದರ್ಭವನ್ನು ನಿಭಾಯಿಸುತ್ತಾರೆ. ಆದರೆ ಈ ವರ್ತನೆ ಪುನರವರ್ತನೆಯಾದರೆ ಅಂಪೈರ್ ತಂಡಕ್ಕೆ ಎಚ್ಚರಿಕೆ ನೀಡುತ್ತಾರೆ.

    ಪಂದ್ಯದ ಸಂದರ್ಭದಲ್ಲಿ ಅಂಪೈರ್ ಗಳು ಎರಡು ಬಾರಿ ಎಚ್ಚರಿಕೆ ನೀಡುತ್ತಾರೆ. ಆ ಬಳಿಕವೂ ನಿಯಮ ಉಲ್ಲಂಘಿಸಿದರೆ ತಂಡಕ್ಕೆ 5 ರನ್ ದಂಡ ವಿಧಿಸಬಹುದಾಗಿದೆ. ಪ್ರತಿ ಬಾರಿ ಆಟಗಾರ ಎಂಜಲು ಬಳಸಿದ ಸಂದರ್ಭದಲ್ಲಿ ಆಟ ಆರಂಭವಾಗುವ ಮುನ್ನ ಅಂಪೈರ್ ಚೆಂಡಿನ ಸ್ವಚ್ಛತೆಗೆ ಸೂಚಿಸಬೇಕಾಗುತ್ತದೆ.

    ತಟಸ್ಥರಲ್ಲದ ಅಂಪೈರ್: ಸದ್ಯದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಪ್ರಯಾಣದ ಸವಾಲು ಎದುರಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ ಪಂದ್ಯಗಳಿಂದ ಅಂತಾರಾಷ್ಟ್ರೀಯ ತಟಸ್ಥ ಅಂಪೈರ್ (ಅತಿಥೇಯ ದೇಶದ) ನೇಮಿಸುವ ನಿಯಮಗಳನ್ನು ತಾತ್ಕಾಲಿಕವಾಗಿ ತೆಗೆದು ಹಾಕಲಾಗಿದೆ. ಐಸಿಸಿ ಸ್ಥಳೀಯ ಪಂದ್ಯದ ಅಧಿಕಾರಿಗಳನ್ನು ನೇಮಿಸಲಿದೆ. ಎಮಿರೇಟ್ಸ್ ಐಸಿಸಿ ಎಲೈಟ್ ಮತ್ತು ಎಮಿರೇಟ್ಸ್ ಐಸಿಸಿ ಇಂಟರ್ ನ್ಯಾಷನಲ್ ಪ್ಯಾನಲ್ ಆಫ್ ಮ್ಯಾಚ್ ಆಫೀಸಿಯಲ್ಸ್ ಆಧಾರ ಮೇಲೆ ಅಂಪೈರ್‍ಗಳನ್ನು ನೇಮಕ ಮಾಡಲಾಗುತ್ತದೆ.

    ಹೆಚ್ಚುವರಿ ಡಿಆರ್‌ಎಸ್ ಮನವಿ: ಪಂದ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಪೈರ್ ಗಳ ಅನುಭವದ ಆಧಾರದ ಮೇಲೆ ತಂಡಗಳಿಗೆ ಹೆಚ್ಚಿನ ಡಿಆರ್‌ಎಸ್ (ಅಂಪೈರ್‌ ತೀರ್ಪು ಮರುಪರಿಶೀಲನಾ ವ್ಯವಸ್ಥೆ) ಮನವಿಗಳಿಗೆ ಅವಕಾಶ ನೀಡಲಾಗುತ್ತದೆ. ಟೆಸ್ಟ್ ಪಂದ್ಯಗಳಲ್ಲಿ ಪ್ರತಿ ತಂಡಕ್ಕೆ ಮೂರು ಮತ್ತು ಸೀಮಿತ ಓವರ್ ಗಳ ಮಾದರಿಯಲ್ಲಿ ಪ್ರತಿ ತಂಡಕ್ಕೆ ಹೆಚ್ಚುವರಿಯಾಗಿ 2 ಅವಕಾಶಗಳನ್ನು ನೀಡಬಹುದಾಗಿದೆ.

    ಹೆಚ್ಚುವರಿ ಲೋಗೋ: ಮುಂದಿನ 12 ತಿಂಗಳ ಕಾಲ ಹೆಚ್ಚುವರಿ ಲೋಗೋ ಬಳಕೆಗೂ ಅವಕಾಶ ನೀಡಲಾಗಿದೆ. ಲೋಗೋ 32 ಚದರ ಇಂಚುಗಳನ್ನು ಮೀರುವಂತಿಲ್ಲ ಎಂಬ ನಿಯಮವಿದ್ದು, ಲೋಗೋವನ್ನು ಟೆಸ್ಟ್ ಪಂದ್ಯದ ಶರ್ಟ್, ಸ್ವೆಟರ್ ನ ಎದೆಯ ಮೇಲೆ ಇತರ ಮೂರು ಲೋಗೋಗಳ ಜೊತೆಗೆ ಇರಿಸಲು ಅವಕಾಶ ನೀಡಲಾಗಿದೆ. ಸದ್ಯದವರೆಗೂ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಮಾತ್ರ ಬಳಸಲು ಅನುಮತಿ ನೀಡಲಾಗಿದೆ.

  • ಪ್ರತಿಭಾವಂತ ಯುವ ಕಲಾವಿದ ಬಹಳ ಬಹಳ ಬೇಗ ಅಗಲಿದ್ದಾನೆ – ಕುಂಬ್ಳೆ

    ಪ್ರತಿಭಾವಂತ ಯುವ ಕಲಾವಿದ ಬಹಳ ಬಹಳ ಬೇಗ ಅಗಲಿದ್ದಾನೆ – ಕುಂಬ್ಳೆ

    ಬೆಂಗಳೂರು: ಪ್ರತಿಭಾವಂತ ಯುವ ಕಲಾವಿದ ಬಹಳ ಬಹಳ ಬೇಗ ಅಗಲಿದ್ದಾನೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ, ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಕಂಬನಿ ಮಿಡಿದಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಚಿರಂಜೀವಿ ಸರ್ಜಾ ಮೃತಪಟ್ಟ ಸುದ್ದಿ ಕೇಳಿ ಶಾಕ್ ಆಯ್ತು ಮತ್ತು ಬೇಸರವಾಯ್ತು. ಬಹಳ ಬೇಗ ಪ್ರತಿಭಾವಂತ ಯುವ ಕಲಾವಿದ ಅಗಲಿದ್ದಾನೆ. ಅವರ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ದು:ಖ ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ.

    ಟೀಂ ಇಂಡಿಯಾ ಆಟಗಾರ್ತಿ ವೇದ ಕೃಷ್ಣಮೂರ್ತಿ ಟ್ವಿಟ್ಟರ್ ನಲ್ಲಿ ಕಂಬನಿ ಮಿಡಿದಿದ್ದಾರೆ. ಚಿರಂಜೀವ್ ಮೃತಪಟ್ಟಿರುವ ಸುದ್ದಿ ಕೇಳಿ ಶಾಕ್ ಆದೆ. ಬಹಳ ಉತ್ತಮ ವ್ಯಕ್ತಿಯಾಗಿದ್ದರು. ಕುಟುಂಬಸ್ಥರಿಗೆ ಮತ್ತು ಸ್ನೇಹಿತರಿಗೆ ದು:ಖ ಬರಿಸುವ ಶಕ್ತಿ ನೀಡಲಿ ಎಂದು ಬರೆದುಕೊಂಡಿದ್ದಾರೆ.

    ಇಂದು ಮಧ್ಯಾಹ್ನದ ವೇಳೆ ಚೆನ್ನಾಗಿದ್ದ ನಟ ಚಿರಂಜೀವಿ ಸರ್ಜಾ, ತಮ್ಮ ನಿವಾಸದ ರಸ್ತೆಯಲ್ಲಿರುವ ನಿವಾಸಿಗಳ ಜೊತೆ ಮಾತನಾಡಿದ್ದರು. ಇದಾದ ನಂತರ ಚಿರು ದೇಹ ದಿಢೀರ್ ಬೆವರಲು ಆರಂಭಿಸಿದೆ. ಈ ವೇಳೆ ಉಸಿರಾಡಲು ತೊಂದರೆ ಆಗುತ್ತಿದೆ ಎಂದು ಸರ್ಜಾ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಾರೆ. ನಂತರ ಅವರನ್ನು ಕುಟುಂಬದವರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಚಿರು ಕೊನೆಯುಸಿರೆಳೆದಿದ್ದಾರೆ.

    ಚಿರು ಅವರ ಸಾವಿನ ಸುದ್ದಿ ಕೇಳಿ ಇಡೀ ಚಿತ್ರರಂಗವೇ ಶಾಕ್ ಆಗಿದೆ. ಜೊತೆಗೆ ನಟರಾದ ದರ್ಶನ್, ಪುನೀತ್ ರಾಜ್‍ಕುಮಾರ್, ಗಣೇಶ್, ನಟಿ ಅಮೂಲ್ಯ ಮುಂತಾದ ಕಲಾವಿದರ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಇನ್ನೂ ನಟಿ ತರಾ, ಸೃಜನ್ ಲೋಕೇಶ್, ಕಿಚ್ಚ ಸುದೀಪ್ ಅವರು ಆಸ್ಪತ್ರೆಗೆ ಬಂದು ಚಿರುವಿನ ಅಂತಿಮ ದರ್ಶನ ಪಡೆದಿದ್ದಾರೆ. ಚಿರು ಅವರ ಹುಟ್ಟೂರು ಮಧುಗಿರಿಯ ಜಕ್ಕೇನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ.

  • ಚೆಂಡಿನ ಹೊಳಪಿಗಾಗಿ ಎಂಜಲು, ಬೆವರಿನ ಬಳಕೆ ನಿಷೇಧಿಸಿ- ಐಸಿಸಿಗೆ ಕುಂಬ್ಳೆ ಕಮಿಟಿ ಶಿಫಾರಸು

    ಚೆಂಡಿನ ಹೊಳಪಿಗಾಗಿ ಎಂಜಲು, ಬೆವರಿನ ಬಳಕೆ ನಿಷೇಧಿಸಿ- ಐಸಿಸಿಗೆ ಕುಂಬ್ಳೆ ಕಮಿಟಿ ಶಿಫಾರಸು

    ನವದೆಹಲಿ: ತೆಂಡಿನ ಹೊಳಪು ಉಳಿಸಿಕೊಳ್ಳಲು ಎಂಜಲು ಮತ್ತು ಬೆವರಿನ ಬಳಕೆಯನ್ನು ಮಾಡುವುದನ್ನು ನಿಷೇಧ ಮಾಡುವಂತೆ ಅನಿಲ್ ಕುಂಬ್ಳೆ ನೇತೃತ್ವದ ಸಮಿತಿ ಐಸಿಸಿಗೆ ಶಿಫಾರಸು ಮಾಡಿದೆ.

    ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ಕ್ರಿಕೆಟ್ ಆಟದಲ್ಲಿ ಎಂಜಲು ಹಾಗೂ ಬೆವರನ್ನು ಚೆಂಡಿಗೆ ಸವರಿ ಹೊಳಪು ಹೆಚ್ಚಿಸುವ ಕ್ರಮವನ್ನು ನಿಷೇಧಿಸಬೇಕೆಂಬ ಚರ್ಚೆ ಹೆಚ್ಚಾಗಿತ್ತು. ಈ ಕಾರಣದಿಂದ ಐಸಿಸಿ ಕ್ರಿಕೆಟ್ ಕಮಿಟಿ ಸೂಚನೆಗಳನ್ನು ನೀಡಿದೆ. ಶೀಘ್ರವೇ ಐಸಿಸಿ ಸಮಾವೇಶ ನಡೆಯಲಿದ್ದು, ಆ ವೇಳೆ ಸಮಿತಿಯ ಸೂಚನೆಗಳನ್ನು ಚರ್ಚೆ ಮಾಡುವ ಸಾಧ್ಯತೆ ಇದೆ. ಇತ್ತ ಸೋಮವಾರ ಕುಂಬ್ಳೆ ನೇತೃತ್ವದ ಐಸಿಸಿ ಕಮಿಟ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾವೇಶ ನಡೆಸಿ, ತಾವು ತೆಗೆದುಕೊಂಡ ನಿರ್ಧಾರಗಳ ಕುರಿತು ಪ್ರಸ್ತಾಪ ಮಾಡಿದ್ದಾಗಿ ಕುಂಬ್ಳೆ ಹೇಳಿದ್ದಾರೆ.

    ಸದ್ಯ ನಾವೆಲ್ಲರೂ ಅಸಾಧಾರಣ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಇದೇ ಕಾರಣದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಆ ಮೂಲಕ ಸುರಕ್ಷಿತ ವಾತಾವರಣದಲ್ಲಿ ಕ್ರಿಕೆಟ್ ಚಟುವಟಿಕೆಗಳು ನಡೆಯುತ್ತವೆ ಎಂದು ಕುಂಬ್ಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಈಗಾಗಲೇ ಸಾಕಷ್ಟು ಬಾರಿ ಆಟಗಾರರು ಸಲೈವಾ (ಎಂಜಲು) ಬಳಕೆ ಮಾಡುವುದನ್ನು ನಿಷೇಧ ಮಾಡುಬೇಕು ಎಂಬ ಚರ್ಚೆ ಸಾಕಷ್ಟು ಬಾರಿ ಚರ್ಚೆಯಾಗಿತ್ತು. ಆದರೆ ಈ ಬಾರಿ ಐಸಿಸಿ ಕಮಿಟಿ ನೀಡಿರುವ ಶಿಫಾರಸುಗಳಿಗೆ ಅಂಗೀಕಾರ ಸಿಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಟೆಸ್ಟ್ ಪಂದ್ಯಗಳಲ್ಲಿ ಚೆಂಡಿನ ಹೊಳಪು ಉಳಿಸಿಕೊಳ್ಳಲು ಆಟಗಾರರು ಸಲೈವಾ ಬಳಕೆ ಮಾಡುತ್ತಾರೆ. ಉಳಿದಂತೆ ಕೊರೊನಾ ವೈರಸ್ ಕಾರಣದಿಂದ ಸ್ಥಗಿತಗೊಂಡಿದ್ದ ಆಟಗಾರರ ತರಬೇತಿ ಶಿಬಿರಗಳು ಮತ್ತೆ ಆರಂಭವಾಗುತ್ತಿವೆ.

  • ಮೊದಲ ಇನ್ನಿಂಗ್ಸ್‌ನಲ್ಲಿ ಲೀಡ್ ಪಡೆದಿದ್ದು, ಟೆಸ್ಟ್ ಪಂದ್ಯವನ್ನು ಗೆಲ್ಲಬೇಕಿದೆ: ಕುಂಬ್ಳೆ

    ಮೊದಲ ಇನ್ನಿಂಗ್ಸ್‌ನಲ್ಲಿ ಲೀಡ್ ಪಡೆದಿದ್ದು, ಟೆಸ್ಟ್ ಪಂದ್ಯವನ್ನು ಗೆಲ್ಲಬೇಕಿದೆ: ಕುಂಬ್ಳೆ

    – ನಿಸ್ವಾರ್ಥ ಸೇವೆ ಮಾಡುತ್ತಿರುವ ಕೊರೊನಾ ವಾರಿಯರ್ಸ್‍ಗೆ ಸೆಲ್ಯೂಟ್
    – ನಾವೆಲ್ಲರೂ ನಿಮ್ಮ ಜೊತೆ ಇದ್ದೇವೆ, ಕೊರೊನಾ ವಿರುದ್ಧ ಗೆಲ್ಲೋಣ

    ಬೆಂಗಳೂರು: ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಕೊರೊನಾ ವಾರಿಯರ್ಸ್ ಅವರಿಗೆ ಮಾಜಿ ಕ್ರಿಕೆಟಿಗ ಕನ್ನಡಿಗ ಅನಿಲ್ ಕುಂಬ್ಳೆಯವರು ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ನಾವೆಲ್ಲ ನಿಮ್ಮ ಜೊತೆ ಇದ್ದೇವೆ ಎಂದು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

    ಕೊರೊನಾ ವಾರಿಯರ್ಸ್‍ಗೆ ಧನ್ಯವಾದ ತಿಳಿಸುವ ವಿಚಾರವಾಗಿ ಸಂಸದೆ ಸುಮಲತಾ ಅವರು ಅನಿಲ್ ಕುಂಬ್ಳೆ ಅವರನ್ನು ನಾಮೀನೇಟ್ ಮಾಡಿದ್ದು, ಈ ವಿಚಾರವಾಗಿ ಟ್ವಿಟ್ಟರ್ ನಲ್ಲಿ ವಿಡಿಯೋ ಶೇರ್ ಮಾಡಿರುವ ಕುಂಬ್ಳೆ ಅವರು, ಕೊರೊನಾ ವಿರುದ್ಧದ ಹೋರಾಟವನ್ನು ಟೆಸ್ಟ್ ಕ್ರಿಕೆಟ್‍ಗೆ ಹೋಲಿಸಿದ್ದಾರೆ. ಜೊತೆಗೆ ನಾವು ಮೊದಲ ಇನ್ನಿಂಗ್ಸ್ ನಲ್ಲಿ ಲೀಡ್ ಪಡೆದಿದ್ದೇವೆ ಎಂದು ಹೇಳಿದ್ದಾರೆ.

    ತಾವು ಮಾತನಾಡಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಅನಿಲ್ ಕುಂಬ್ಳೆ, ನನ್ನನ್ನು ಇದಕ್ಕೆ ನಾಮೀನೇಟ್ ಮಾಡಿದ ಸುಮಲತಾ ಮೇಡಂಗೆ ಧನ್ಯವಾದಗಳು, ಈ ಸಮಯದಲ್ಲಿ ನಾನು, ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ, ಆಸ್ಪತ್ರೆ ಸಿಬ್ಬಂದಿಗೆ, ಪೌರ ಕಾರ್ಮಿಕರಿಗೆ, ಸ್ವಯಂ ಸೇವಕರಿಗೆ, ಪೊಲೀಸರು ಸೇರಿದಂತೆ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನೀವು ಎಲ್ಲರೂ ಅದ್ಭುತವಾದ ಕೆಲಸ ಮಾಡುತ್ತಿದ್ದೀರಾ ಎಂದು ಹೇಳಿದ್ದಾರೆ.

    ನಾವೆಲ್ಲ ಒಟ್ಟಿಗೆ ಸೇರಿ ಒಗಟ್ಟಿನಿಂದ ಈ ಸೋಂಕಿನ ವಿರುದ್ಧ ಹೋರಾಡಬೇಕಿದೆ. ಈ ಹೋರಾಟ ಟೆಸ್ಟ್ ಪಂದ್ಯದ ರೀತಿ, ಕ್ರಿಕೆಟ್ ಟೆಸ್ಟ್ ಮ್ಯಾಚ್ ಕೇವಲ ಐದು ದಿನ ಇರುತ್ತದೆ. ಆದರೆ ಕೊರೊನಾ ಬಹಳ ದಿನ ಇರುವಂತದ್ದು, ಕ್ರಿಕೆಟ್‍ನಲ್ಲಿ ಎರಡು ಇನ್ನಿಂಗ್ಸ್ ಇದ್ದರೆ, ಇದರಲ್ಲಿ ಜಾಸ್ತಿ ಇರುತ್ತದೆ. ಆದರೆ ನಾವು ಮೊದಲ ಇನ್ನಿಂಗ್ಸ್ ನಲ್ಲಿ ಲೀಡ್ ಪಡೆದಿದ್ದೇವೆ. ಆದರೆ ಎರಡನೇ ಇನ್ನಿಂಗ್ಸ್ ಸ್ವಲ್ಪ ಕಠಿಣವಾಗಿ ಇರುತ್ತದೆ ಎಂದು ಅನಿಲ್ ಕುಂಬ್ಳೆ ತಿಳಿಸಿದ್ದಾರೆ.

    ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ನಾವು ಪಣತೊಡಬೇಕು. ಸರ್ಕಾರ ನಿಯಮಗಳನ್ನು ಪಾಲಿಸಬೇಕು. ಜೊತೆಗೆ ನಾವು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ನಾವು ಹೀಗಿದ್ದಾಗ ಕೊರೊನಾ ಸೋಂಕಿಗೆ ಭಯಪಡುವ ಅವಶ್ಯಕತೆ ಇರುವುದಿಲ್ಲ. ಕೊರೊನಾ ವಾರಿಯರ್ಸ್ ನಮಗಾಗಿ ಅವರ ಕುಟುಂಬವನ್ನು ತ್ಯಾಗ ಮಾಡಿ ಬಹಳ ರಿಸ್ಕ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಧನ್ಯವಾದ ನಾವು ನಿಮ್ಮ ಜೊತೆ ಇದ್ದೇವೆ. ನಾವೆಲ್ಲ ಸೇರಿ ಕೊರೊನಾ ವಿರುದ್ಧ ಹೋರಾಡೋಣ ಎಂದು ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

    ಟ್ವಿಟ್ಟರ್ ನಲ್ಲಿ ಕೊರೊನಾ ವಾರಿಯರ್ಸ್ ಧನ್ಯವಾದ ತಿಳಿಸಿದ್ದ ಸಮಲತಾ, ಈ ವಿಡಿಯೋದಲ್ಲಿ ಅನಿಲ್ ಕುಂಬ್ಳೆ, ದರ್ಶನ್, ಯಶ್ ಮತ್ತು ಅಥ್ಲೆಟ್ ಅಶ್ವಿನಿ ನಾಚಪ್ಪ ಅವರನ್ನು ನಾಮಿನೇಟ್ ಮಾಡಿದ್ದರು. ಈಗ ಇದಕ್ಕೆ ಅನಿಲ್ ಕುಂಬ್ಳೆ ಅವರು ಉತ್ತರ ನೀಡಿದ್ದಾರೆ. ಇದಕ್ಕೆ ರೀಪ್ಲೇ ಕೊಟ್ಟಿರುವ ಸುಮಲತಾ ಅವರು ಥ್ಯಾಂಕ್ಯೂ ಅನಿಲ್ ಕುಂಬ್ಳೆ, ನೀವು ನಮ್ಮ ಕರ್ನಾಟಕದ ಹೆಮ್ಮೆ ಎಂದು ತಿಳಿಸಿದ್ದಾರೆ.

  • ‘ಕುಂಬ್ಳೆಗಾಗಿ ನನ್ನ ಜೀವವನ್ನೇ ಕೊಡುತ್ತೇನೆ’: ಗೌತಮ್ ಗಂಭೀರ್

    ‘ಕುಂಬ್ಳೆಗಾಗಿ ನನ್ನ ಜೀವವನ್ನೇ ಕೊಡುತ್ತೇನೆ’: ಗೌತಮ್ ಗಂಭೀರ್

    ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಕುಂಬ್ಳೆ ಮೇಲೆ ತಾವು ಇಟ್ಟಿರುವ ಅಭಿಮಾನವನ್ನು ಮತ್ತೊಮ್ಮೆ ಗೌತಮ್ ಗಂಭೀರ್ ಹೇಳಿದ್ದಾರೆ. ಕುಂಬ್ಳೆಗಾಗಿ ತಮ್ಮ ಜೀವವನ್ನೇ ನೀಡೋದಾಗಿ ಗಂಭೀರ್ ತಿಳಿಸಿದ್ದಾರೆ.

    ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಆಡಿದ ಅನುಭವ ಕುರಿತು ಮಾತನಾಡಿರುವ ಗಂಭೀರ್, ಭಾರತ ಕ್ರಿಕೆಟ್‍ಗೆ ದೊರೆತ ಮಹತ್ವದ ಆಟಗಾರ ಅನಿಲ್ ಕುಂಬ್ಳೆ. ಅವರು ಆಡುತ್ತಿದ್ದ ಸಂದರ್ಭದಲ್ಲಿ ಡಿಆರ್‍ಎಸ್ ಮನವಿ ಇದ್ದಿದ್ದರೆ 900 ವಿಕೆಟ್ ದಾಖಲೆ ಬರೆಯುತ್ತಿದ್ದರು. ತಂಡದಲ್ಲಿ ನನ್ನ ಬಗ್ಗೆ ಭರವಸೆ ಇಟ್ಟಿದ್ದ ಆಟಗಾರ ಅನಿಲ್ ಬಾಯ್ ಮಾತ್ರ ಎಂದು ಗಂಭೀರ್ ತಮ್ಮ ಆಲ್‍ಟೈಮ್ ಇಲೆವೆನ್ ತಂಡದ ನಾಯಕರಾಗಿ ಅವರನ್ನು ಆಯ್ಕೆ ಮಾಡಿದ್ದಾರೆ. ಅಲ್ಲದೇ ಸುನಿಲ್ ಗವಾಸ್ಕರ್ ಅವರಿಗೆ ತಂಡದಲ್ಲಿ ಸ್ಥಾನ ನೀಡಿದ್ದಾರೆ.

    2008ರಲ್ಲಿ ಆಸೀಸ್ ಟೆಸ್ಟ್ ಟೂರ್ನಿಗೂ ಮುನ್ನ ನಡೆದ ಘಟನೆಗಳನ್ನು ಬಿಚ್ಚಿಟ್ಟಿರುವ ಗಂಭೀರ್, ನಾನು, ಸೆಹ್ವಾಗ್ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಕುಂಬ್ಳೆ ನಮ್ಮ ಬಳಿಗೆ ಬಂದಿದ್ದರು. ಏನು ನಡೆದರು ಈ ಟೂರ್ನಿಯಲ್ಲಿ ನೀವೇ ಆರಂಭಿಕ ಆಟಗಾರರು. ನೀವು 8 ಬಾರಿ ಶೂನ್ಯಕ್ಕೆ ಔಟಾದರೂ ನಿಮ್ಮನ್ನೇ ಆರಂಭಿಕರನ್ನಾಗಿ ಕಣಕ್ಕೆ ಇಳಿಸುತ್ತೇನೆ ಎಂದಿದ್ದರು. ನಾನು ಯಾರಿಗಾದರೂ ನನ್ನ ಜೀವ ನೀಡಬೇಕು ಎಂದರೇ ಕುಂಬ್ಳೆ ಅವರಿಗೆ ನೀಡುತ್ತೇನೆ. ಅವರು ಅಂದು ಹೇಳಿದ್ದ ಮಾತುಗಳು ಇಂದಿಗೂ ನನ್ನ ಮನಸ್ಸಿನಲ್ಲಿದೆ ಎಂದು ಗಂಭೀರ್ ವಿವರಿಸಿದ್ದಾರೆ.

    ಸೌರವ್ ಗಂಗೂಲಿ, ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ಅವರಂತೆ ಅನಿಲ್ ಕುಂಬ್ಳೆ ಕೂಡ ಟೀಂ ಇಂಡಿಯಾ ತಂಡಕ್ಕೆ ದೀರ್ಘಾವಧಿ ನಾಯಕರಾಗಬೇಕಿತ್ತು. ಮತ್ತಷ್ಟು ಸಮಯ ಅವರು ತಂಡದ ನಾಯಕರಾಗಿದ್ದರೆ ಹಲವು ದಾಖಲೆಗಳು ನಿರ್ಮಿಸುತ್ತಿದ್ದರು ಎಂದು ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ.

    ಗಂಭೀರ್ ಆಯ್ಕೆಯ ಆಲ್‍ಟೈಮ್ ಇಲೆವೆನ್ ಟೆಸ್ಟ್ ತಂಡ: ಅನಿಲ್ ಕುಂಬ್ಳೆ (ನಾಯಕ), ಸುನಿಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಕಪಿಲ್ ದೇವ್, ಎಂಎಸ್ ಧೋನಿ, ಹರ್ಭಜನ್ ಸಿಂಗ್, ಜಹೀರ್ ಖಾನ್, ಜಾವಗಲ್ ಶ್ರೀನಾಥ್.