Tag: ಅನಾನಸ್

  • ಆನೆ ಸತ್ತಿದ್ದು ಸ್ಫೋಟಕ ತುಂಬಿದ ಹಣ್ಣಿನಿಂದಲ್ಲ- ಬಂಧಿತ ಮೊದಲ ಆರೋಪಿ ಹೇಳಿದ್ದೇನು?

    ಆನೆ ಸತ್ತಿದ್ದು ಸ್ಫೋಟಕ ತುಂಬಿದ ಹಣ್ಣಿನಿಂದಲ್ಲ- ಬಂಧಿತ ಮೊದಲ ಆರೋಪಿ ಹೇಳಿದ್ದೇನು?

    ತಿರುವನಂತಪುರಂ: ಕೇರಳದಲ್ಲಿ ಗರ್ಭಿಣಿ ಆನೆ ಸಾವನ್ನಪ್ಪಿದ ಸುದ್ದಿ ದೇಶದ್ಯಾಂತ ಚರ್ಚೆಯಾಗಿತ್ತು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊದಲ ಆರೋಪಿಯನ್ನು ಅರೆಸ್ಟ್ ಮಾಡಿದ್ದು, ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

    ಬಂಧಿತ ಮೊದಲ ಆರೋಪಿಯನ್ನು 40 ವರ್ಷದ ವಿಲ್ಸನ್ ಎಂದು ಗುರುತಿಸಲಾಗಿದ್ದು, ಈತ ರಬ್ಬರ್ ವ್ಯಾಪಾರಿಯಾಗಿದ್ದ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಈತ ಸ್ಫೋಟಕವನ್ನು ಬೇರೆಯವರಿಗೆ ತಯಾರು ಮಾಡಿಕೊಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಇನ್ನಿಬ್ಬರು ತಪ್ಪಿಸಿಕೊಂಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಮನ್ನಾರ್ಕಡ್ ವಿಭಾಗೀಯ ಅರಣ್ಯ ಅಧಿಕಾರಿ ಸುನಿಲ್ ಕುಮಾರ್, ನಾವು ಈಗಾಗಲೇ ಆನೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೇ ಮೊದಲ ಆರೋಪಿಯನ್ನು ಪತ್ತೆ ಮಾಡಿದ್ದೇವೆ. ಇನ್ನಿಬ್ಬರನ್ನು ಪತ್ತೆ ಹಚ್ಚುವ ಸನಿಹದಲ್ಲಿ ಇದ್ದೇವೆ. ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಮೃತಪಟ್ಟ ಗರ್ಭಿಣಿ ಆನೆ ಸ್ಫೋಟಕ ತುಂಬಿದ ಅನಾನಸ್ ಹಣ್ಣು ತಿಂದು ಸಾವನ್ನಪ್ಪಿಲ್ಲ. ಆನೆ ಸ್ಫೋಟಕ ತುಂಬಿದ ತೆಂಗಿನಕಾಯಿಯನ್ನು ತಿಂದು ಸಾವನ್ನಪ್ಪಿದೆ ಎಂದು ತನಿಖೆ ವೇಳೆ ತಿಳಿದಿದೆ ಎಂದು ಹೇಳಿದ್ದಾರೆ.

    ಕೇರಳದಲ್ಲಿ ಬೆಳೆ ನಾಶ ಮಾಡಲು ಅಥವಾ ತಿನ್ನಲು ಬಂದ ಕಾಡುಹಂದಿಯಂತಹ ಪ್ರಾಣಿಗಳನ್ನು ಹೆದರಿಸಲು ಈ ರೀತಿಯ ಸ್ಫೋಟಕವನ್ನು ಸ್ಥಳೀಯವಾಗಿ ಬಳಸುತ್ತಾರೆ. ಸ್ಫೋಟಕವನ್ನು ಹಣ್ಣು ಮತ್ತು ಪ್ರಾಣಿಗಳ ಮಾಂಸದಲ್ಲಿ ಇಟ್ಟು ಅದನ್ನು ಸ್ಫೋಟಗೊಳಿಸಿ ಪ್ರಾಣಿಗಳನ್ನು ಓಡಿಸಲಾಗುತ್ತದೆ. ಆದರೆ ಇವರು ಆನೆಗೂ ಇದೇ ರೀತಿ ಮಾಡಿದ್ದಾರೆ. ಆದರೆ ಯಾರಿಗೂ ತೊಂದರೆ ಮಾಡದೇ ಆಹಾರವನ್ನು ಅರಸಿ ಬಂದ ಆನೆ ಇಲ್ಲಿ ದುರಂತವಾಗಿ ಸಾವನ್ನಪ್ಪಿದೆ.

    ಅಧಿಕಾರಿಗಳು ಹೇಳಿರುವ ಪ್ರಕಾರ, ಆನೆ ತೆಂಗಿನಕಾಯಿಯ ಒಂದು ಭಾಗವನ್ನು ಮುರಿದುಕೊಂಡು ಬಾಯಿಯೊಳಗೆ ಹಾಕಿಕೊಂಡಿದೆ. ಈ ವೇಳೆ ಅದು ಸ್ಫೋಟಗೊಂಡಿದ್ದು, ಆನೆಯ ಎಡಭಾಗದ ಬಾಯಿ ಸಂಪೂರ್ಣವಾಗಿ ಗಾಯಗೊಂಡಿದೆ. ಇದರಿಂದ ಆನೆಗೆ ಆಹಾರ ಮತ್ತು ನೀರನ್ನು ಸೇವಿಸಲು ಆಗಿಲ್ಲ. ಆನೆ ಬಾಯಿಯ ನೋವಿನ ಜೊತೆಗೆ ಒಂದು ದಿನವೆಲ್ಲ ನರಳಿದೆ. ನಂತರ ಅದು ಪಾಲಕ್ಕಾಡ್‍ನ ವೆಲ್ಲಿಯಾರ್ ನದಿಯಲ್ಲಿ ಬಂದು ನಿಂತುಕೊಂಡು ಪ್ರಾಣಬಿಟ್ಟಿದೆ ಎಂದು ಹೇಳಿದ್ದಾರೆ.

    ಗರ್ಭಿಣಿ ಆನೆ ಮಾನವನ ಸ್ವಾರ್ಥಕ್ಕಾಗಿ ಪ್ರಾಣ ಬಿಟ್ಟಿದೆ ಎಂದು ತಿಳಿದು ಇಡೀ ವಿಶ್ವವೇ ಮರುಗಿತ್ತು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಾಗಿತ್ತು. ಇಡೀ ದೇಶದಲ್ಲೇ ಸ್ಟಾರ್ ನಟ-ನಟಿಯರು ಕ್ರಿಕೆಟ್ ಆಟಗಾರರು ಕೂಡ ಆನೆ ಸಾವಿಗೆ ನ್ಯಾಯ ಕೊಡಿಸಿ ಎಂದು ಟ್ವೀಟ್ ಮಾಡಿದ್ದರು. ಈ ವಿಚಾರವಾಗಿ ಗುರುವಾರ ಟ್ವೀಟ್ ಮಾಡಿದ್ದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನೆಯ ಸಾವಿಗೆ ನ್ಯಾಯ ಸಿಗುತ್ತದೆ ಎಂದು ಹೇಳಿದ್ದರು.

  • ಲಾಕ್‍ಡೌನ್ ಎಫೆಕ್ಟ್ – 100 ಎಕ್ರೆಯಲ್ಲಿ ಕೊಳೆಯುತ್ತಿದೆ 300 ಟನ್ ಅನಾನಸ್

    ಲಾಕ್‍ಡೌನ್ ಎಫೆಕ್ಟ್ – 100 ಎಕ್ರೆಯಲ್ಲಿ ಕೊಳೆಯುತ್ತಿದೆ 300 ಟನ್ ಅನಾನಸ್

    ಮಂಗಳೂರು: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದ್ದು, ಎಲ್ಲ ವರ್ಗದ ಜನ ಆತಂಕದಲ್ಲಿದ್ದಾರೆ. ದೇಶದ ಬೆನ್ನೆಲುಬು ರೈತನು ಕೂಡ ತಾನು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೇ ಕಷ್ಟ ನಷ್ಟ ಅನುಭವಿಸುವಂತಾಗಿದೆ.

    ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಎಂಬಲ್ಲಿ ಕೇರಳದ ಎರ್ನಾಕುಲಂ ಮೂಲದ ಶೈಜು 100 ಎಕರೆ ಜಮೀನನ್ನು ಲೀಸ್‍ಗೆ ಪಡೆದು ಅನಾನಸ್ ಕೃಷಿ ಮಾಡಿದ್ದರು. ಶ್ರಮಕ್ಕೆ ತಕ್ಕ ಪ್ರತಿಫಲ ಭರ್ಜರಿ ಫಸಲು ಕೂಡ ಬಂದಿತ್ತು. ಆದರೆ ಬೆಳೆ ಕಟಾವಿಗೆ ಬರುವ ಹೊತ್ತಿನಲ್ಲಿ ಲಾಕ್‍ಡೌನ್ ಆದ ಕಾರಣ ಸುಮಾರು 300 ಟನ್ ಅನಾನಸ್ ಬೆಳೆ ಜಮೀನಿನಲ್ಲೇ ಉಳಿಯುವಂತಾಗಿದೆ.

    ಎರ್ನಾಕುಲಂ ಮೂಲದ ಕೃಷಿಕ ಶೈಜು, ಅನಾನಸ್ ಬೆಳೆಯುವ ಉದ್ದೇಶದಿಂದ ಬ್ಯಾಂಕ್ ಗಳಲ್ಲಿ ಕೋಟ್ಯಂತರ ರೂ. ಸಾಲ ಮಾಡಿ ಅನಾನಸ್ ಕೃಷಿ ಮಾಡಿದ್ದರು. ಲಾಕ್‍ಡೌನ್ ಇಲ್ಲದಿದ್ದರೆ ಕೃಷಿಕ ಬೆಳೆದ ಅನಾನಸ್ ಉತ್ತರ ಭಾರತದಲ್ಲಿ ಉತ್ತಮ ಬೆಲೆಗೆ ಮಾರಾಟ ಆಗುತ್ತಿತ್ತು. ಆದರೆ ಲಾಕ್‍ಡೌನ್‍ನಿಂದ ಅನಾನಸ್ ಬೆಳೆ ಹಾಳಾಗುತ್ತಿದೆ. ಹೀಗಾಗಿ ಸರ್ಕಾರ ನೆರವಿಗೆ ಬರುವಂತೆ ಕೃಷಿಕ ಶೈಜು ಮನವಿ ಮಾಡಿದ್ದಾರೆ.

  • ಅನಾನಸ್ ಬೆಳೆ ಬಗ್ಗೆ ಸಿಎಫ್‍ಟಿಆರ್‍ಐ ತಜ್ಞರೊಂದಿಗೆ ಜಿಲ್ಲಾಧಿಕಾರಿ ವಿಡಿಯೋ ಕಾನ್ಫರೆನ್ಸ್

    ಅನಾನಸ್ ಬೆಳೆ ಬಗ್ಗೆ ಸಿಎಫ್‍ಟಿಆರ್‍ಐ ತಜ್ಞರೊಂದಿಗೆ ಜಿಲ್ಲಾಧಿಕಾರಿ ವಿಡಿಯೋ ಕಾನ್ಫರೆನ್ಸ್

    – ರೈತರ ಹಿತಕ್ಕಾಗಿ ಜಿಲ್ಲಾಧಿಕಾರಿಗಳ ಸಂವಾದ
    – ಅನಾನಸ್ ಸಂಸ್ಕರಣೆ ಹೇಗೆ ಮಾಡೋದು?

    ಶಿವಮೊಗ್ಗ: ಲಾಕ್‍ಡೌನ್‍ನಿಂದಾಗಿ ಸಮಸ್ಯೆಗೆ ಸಿಲುಕಿರುವ ಜಿಲ್ಲೆಯ ಅನಾನಸ್ ಬೆಳೆಗಾರರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಇಂದು ಮೈಸೂರಿನ ಸಿಎಫ್‍ಟಿಆರ್‍ಐ (ಸೆಂಟ್ರಲ್ ಫುಡ್ ಟೆಕ್ನಾಲಜಿ ರಿಸರ್ಚ್ ಇನ್ಸ್ಟಿಟ್ಯೂಟ್) ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.

    ಜಿಲ್ಲೆಯಲ್ಲಿ ಅಂದಾಜು 65 ಸಾವಿರ ಟನ್ ಅನಾನಸು ಬೆಳೆದಿದ್ದು, ಕಳೆದ 20 ದಿನಗಳಲ್ಲಿ ವಿವಿಧ ಮೂಲಗಳನ್ನು ಬಳಸಿಕೊಂಡು ಅನಾನಸು ಮಾರುಕಟ್ಟೆಗೆ ವಿಲೇವಾರಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಬೆಳೆಯಲಾಗುವ ರಾಜಾ ತಳಿಯ ಅನಾನಸಿಗೆ ದೆಹಲಿಯ ಜ್ಯೂಸ್ ಕಂಪನಿಗಳು ಪ್ರಮುಖ ಮಾರುಕಟ್ಟೆಯಾಗಿದ್ದು, ಲಾಕ್‍ಡೌನ್‍ನಿಂದ ಸಾಗಾಟ ತೊಂದರೆಯಾಗಿದೆ. ಪ್ರಸ್ತುತ ದಿನನಿತ್ಯ 125 ರಿಂದ 150 ಟನ್ ಮಾತ್ರ ಮಾರುಕಟ್ಟೆಗೆ ಸರಬರಾಜು ಮಾಡಲು ಸಾಧ್ಯವಾಗುತ್ತಿದೆ. ಪ್ರತಿನಿತ್ಯ 250 ರಿಂದ 300 ಟನ್ ಇಳುವರಿ ಬರುತ್ತಿದೆ ಎಂದು ಅವರು ಹೇಳಿದರು.

    ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಸ್ವಸಹಾಯ ಸಂಘಗಳನ್ನು ಬಳಸಿಕೊಂಡು ಮಾರುಕಟ್ಟೆ ಕಲ್ಪಿಸಲು, ವಿವಿಧ ಆಹಾರ ಸಂಸ್ಕರಣಾ ತಂತ್ರಗಳನ್ನು ಬಳಸಿಕೊಂಡು ಅನಾನಸು ಉತ್ಪನ್ನಗಳನ್ನು ದಾಸ್ತಾನು ಇರಿಸುವುದು ಸೇರಿದಂತೆ ಬೆಳೆಗಾರರಿಗೆ ಹೊಸ ಮಾರುಕಟ್ಟೆ ಅವಕಾಶಗಳ ಬಗ್ಗೆ ಸಿಎಫ್‍ಟಿಆರ್‍ಐ ತಜ್ಞರಿಂದ ಮಾರ್ಗದರ್ಶನ ಬಯಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

    ಕೋಲ್ಡ್ ಸ್ಟೋರೇಜ್ ಬಳಸಿಕೊಂಡು ಅನಾನಸು ಗರಿಷ್ಠ ಒಂದು ವಾರಗಳ ಕಾಲ ಮಾತ್ರ ದಾಸ್ತಾನು ಇರಿಸಲು ಸಾಧ್ಯವಿದೆ. ಅದನ್ನು ಪಲ್ಪ್ ಆಗಿ ಪರಿವರ್ತಿಸಿದರೆ ಗರಿಷ್ಟ ಎರಡು ವರ್ಷಗಳ ಕಾಲ ಕಾಪಿಡಬಹುದಾಗಿದೆ. ಹುಬ್ಬಳ್ಳಿ ಮತ್ತು ಚಿತ್ತೂರುಗಳಲ್ಲಿ ಅಂತಹ ಸಂಸ್ಕರಣಾ ಉದ್ಯಮಗಳಿದ್ದು, ಅನಾನಸನ್ನು ಪಲ್ಪ್ ಆಗಿ ಪರಿವರ್ತಿಸಿದ ಬಳಿಕ ಹಾಪ್‍ಕಾಮ್ಸ್ ಮೂಲಕ ಮಾರುಕಟ್ಟೆ ವ್ಯವಸ್ಥೆ ಮಾಡಬಹುದಾಗಿದೆ ಎಂದು ಸಿಎಫ್‍ಟಿಆರ್‍ಐ ಅಧಿಕಾರಿಗಳು ಸಲಹೆ ನೀಡಿದರು.

    ಅತ್ಯಂತ ಕಡಿಮೆ ತಂತ್ರಜ್ಞಾನವನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಅನಾನಸು ಸಂಸ್ಕರಣೆಯನ್ನು ಸ್ಥಳೀಯವಾಗಿ ಮಾಡಲು ಸಾಧ್ಯವಿದೆ. ಸ್ವಸಹಾಯ ಗುಂಪುಗಳ ಸಹಯೋಗದಲ್ಲಿ ಅಂತಹ ಚಟುವಟಿಕೆ ನಡೆಸಲು, ರೈತರಿಗೆ, ಸ್ವಸಹಾಯ ಸಂಘಗಳ ಸದಸ್ಯರಿಗೆ ಸೂಕ್ತ ತರಬೇತಿಯನ್ನು ನೀಡಲು ಸಂಸ್ಥೆ ಸಿದ್ಧವಿದೆ. ಲಾಕ್‍ಡೌನ್ ಮುಗಿದ ಬಳಿಕ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬಹುದಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಸ್ಥಳೀಯವಾಗಿ ಮಾರುಕಟ್ಟೆಯನ್ನು ವಿಸ್ತರಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸಿಎಫ್‍ಟಿಆರ್‍ಐ ಎಲ್ಲಾ ತಾಂತ್ರಿಕ ನೆರವು ನೀಡಲು ಸಿದ್ಧವಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ರಾಘವರಾವ್ ಹೇಳಿದರು.

    ಈ ವೇಳೆ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಯೋಗೀಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದರು.