Tag: ಅನರ್ಹ ಶಾಸಕ

  • ನನ್ನ ಕೆಣಕಿದ್ರೆ ಹುತ್ತದಲ್ಲಿರೋ ನಾಗರಹಾವನ್ನು ಕೆಣಕಿದಂತೆ – ಎಂಟಿಬಿ ಗುಡುಗು

    ನನ್ನ ಕೆಣಕಿದ್ರೆ ಹುತ್ತದಲ್ಲಿರೋ ನಾಗರಹಾವನ್ನು ಕೆಣಕಿದಂತೆ – ಎಂಟಿಬಿ ಗುಡುಗು

    ಬೆಂಗಳೂರು: ನನ್ನ ಕೆಣಕಿದರೆ ಹುತ್ತದಲ್ಲಿರೋ ನಾಗರಹಾವನ್ನು ಕೆಣಕಿದಂತೆ. ಮಲಗಿರೋ ಹಾವನ್ನು ಕೆಣಕಿದರೆ ಕಚ್ಚೋದು ಗ್ಯಾರಂಟಿ ಎಂದು ಹೊಸಕೋಟೆಯಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಗುಡುಗಿದ್ದಾರೆ.

    ತನ್ನ ಜನ್ಮದಿನ ಪ್ರಯುಕ್ತ ಮಹಿಳೆಯರಿಗೆ ಸೀರೆ ಹಂಚುತ್ತಿರುವ ಎಂಟಿಬಿ ನಾಗರಾಜ್ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಯಾರಿಗೂ ಭಯ ಬೀಳಲ್ಲ, ದೇವರಿಗೆ ಮತ್ತು ಮತದಾರರಿಗೆ ಮಾತ್ರ ಭಯ ಬೀಳುತ್ತೇನೆ ಎಂದು ಹೇಳಿದರು.

    5 ರಿಂದ 10 ಬಾರಿ ಮಂತ್ರಿ ಆಗಿ ಲೂಟಿ ಹೊಡೆದಿರುವ ದಾಖಲೆ ನನ್ನ ಹತ್ತಿರ ಇದೆ. ಅಧಿಕಾರವಿದ್ದಾಗ ಎಷ್ಟು ಆಸ್ತಿ ಮಾಡಿದ್ದೀರಿ ಎಂಬ ದಾಖಲೆ ಕೂಡ ಇದೆ. ನನ್ನ ಬಗ್ಗೆ ದಾಖಲೆ ಇದ್ದರೆ ಮಾಧ್ಯಮಗಳ ಮುಂದೆ ತಗೊಂಡು ಬನ್ನಿ. ಐಟಿ ಅಧಿಕಾರಿಗಳಿಗೆ ಮತ್ತು ಮೀಡಿಯಾಗೆ ಭಯ ಬಿದ್ದು ಎಂಟಿಬಿ ರಾಜೀನಾಮೆ ಕೊಟ್ಟ ಎನ್ನುತ್ತಾರೆ. ಆದರೆ ನಾನು ಯಾರಿಗೂ ಭಯ ಬೀಳಲ್ಲ, ದೇವರು ಮತ್ತು ಮತದಾರರಿಗೆ ಮಾತ್ರ ಭಯ ಬೀಳುತ್ತೇನೆ ಎಂದು ತಿಳಿಸಿದರು.

    30 ಕೋಟಿ ತಗೊಂಡು ಬಿಜೆಪಿಗೆ ಹೋದ, ಮಗನ ಉದ್ಧಾರ ಮಾಡೋಕೆ ಹೋದ ಎಂದು ದೊಡ್ಡ ದೊಡ್ಡ ನಾಯಕರು ಹೇಳುತ್ತಾರೆ. ಆದರೆ ನಾನು ಆ ದೊಡ್ಡ ನಾಯಕರ ಕಥೆ ತೆಗೆದರೆ ಅವರ ಕಥೆ ಮುಗಿಯುತ್ತೆ. ನಾನು ಯಾವ ಪುರುಷಾರ್ಥಕ್ಕೆ ಸುಳ್ಳು ಹೇಳಬೇಕು. ನನಗೆ ರಾಜಕೀಯದಿಂದ ಬೇಸರ ಆಗಿದೆ. ಕಳಪೆ, ಕಲ್ಮಶ ಮತ್ತು ಸುಳ್ಳು ರಾಜಕೀಯದಿಂದ ಬೇಸತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

  • ಬಿಬಿಎಂಪಿಯಲ್ಲೂ ಆಪರೇಷನ್ ಕಮಲ!

    ಬಿಬಿಎಂಪಿಯಲ್ಲೂ ಆಪರೇಷನ್ ಕಮಲ!

    ಬೆಂಗಳೂರು: ಮೈತ್ರಿ ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೆ ಬಂದ ಬಿಜೆಪಿಯು ಈಗ ಬಿಬಿಎಂಪಿ ಮೇಯರ್ ಸ್ಥಾನಕ್ಕೂ ಆಪರೇಷನ್ ನಡೆಸುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.

    ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಅಧಿಕಾರ ನಡೆಸುತ್ತಿವೆ. ಕಾಂಗ್ರೆಸ್ ಪಕ್ಷವೂ ಮೇಯರ್ ಹಾಗೂ ಜೆಡಿಎಸ್ ಉಪ ಮೇಯರ್ ಸ್ಥಾನಗಳನ್ನು ಹಂಚಿಕೊಂಡಿವೆ. ಆದರೆ ಈಗ ಮೇಯರ್ ಸ್ಥಾನವನ್ನು ತಮ್ಮದಾಗಿಸಿಕೊಳ್ಳಲು ಬಿಜೆಪಿ ಮಾಸ್ಟರ್ ಪ್ಲಾನ್ ರೂಪಿಸಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಸಿಎಂ ಬಿ.ಎಸ್.ಯಡಿಯೂರಪ್ಪನವರ ಧವಳಗಿರಿ ನಿವಾಸದ ಬಳಿ ಮಾತನಾಡಿದ ಅನರ್ಹ ಶಾಸಕ ಮುನಿರತ್ನ ಅವರು, ನಾಲ್ಕು ವರ್ಷಗಳ ಹಿಂದೆಯೇ ಬಿಜೆಪಿಗೆ ಬಿಬಿಎಂಪಿ ಮೇಯರ್ ಸ್ಥಾನ ಸಿಗಬೇಕಿತ್ತು. ಅದಕ್ಕೆ ಕಾರಣಿಕರ್ತರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ಬಾರಿ ಯಾರಿಗೆ ಹೆಚ್ಚು ಮತಗಳು ಇರುತ್ತವೋ ಅವರು ಮೇಯರ್ ಆಗುತ್ತಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಆಪರೇಷನ್ ಕಮಲದ ಸುಳಿವನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ನನ್ನ ಪತ್ನಿಗೆ ಮೇಯರ್ ಸ್ಥಾನ ನೀಡಿ-ಬಿಜೆಪಿ ಮುಂದೆ ದುಬಾರಿ ಬೇಡಿಕೆ ಇಟ್ಟ ಅನರ್ಹ ಶಾಸಕ- ಯಾರಾಗ್ತಾರೆ ಹೊಸ ಮೇಯರ್?

    ಬಿಬಿಎಂಪಿ ಒಟ್ಟು 198 ಸಂಖ್ಯಾಬಲವನ್ನು ಹೊಂದಿದೆ. ಈ ಪೈಕಿ ಕಾಂಗ್ರೆಸ್ 76 ಹಾಗೂ ಜೆಡಿಎಸ್ 14 ಸ್ಥಾನ ಹೊಂದಿದ್ದು, ಆಡಳಿತ ನಡೆಸುತ್ತಿವೆ. 7 ಜನ ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಆದರೆ 101 ಸ್ಥಾನಗಳನ್ನು ಗಳಿಸಿರುವ ಬಿಜೆಪಿ ವಿರೋಧ ಪಕ್ಷದಲ್ಲಿ ಕುಳಿತಿದೆ.

  • ವಿಶ್ವದ ದುಬಾರಿ ಕಾರಿನ ಒಡೆಯನಾದ ಎಂಟಿಬಿ – ಬೆಲೆ ಎಷ್ಟು? ವಿಶೇಷತೆ ಏನು? ಮೈಲೇಜ್ ಎಷ್ಟು?

    ವಿಶ್ವದ ದುಬಾರಿ ಕಾರಿನ ಒಡೆಯನಾದ ಎಂಟಿಬಿ – ಬೆಲೆ ಎಷ್ಟು? ವಿಶೇಷತೆ ಏನು? ಮೈಲೇಜ್ ಎಷ್ಟು?

    ಬೆಂಗಳೂರು: ಇತ್ತೀಚೆಗಷ್ಟೇ ನೆರೆ ಸಂತ್ರಸ್ತರಿಗೆ ಧನ ಸಹಾಯ ಮಾಡಿದ್ದ ಹೊಸಕೋಟೆಯ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರು ವಿಶ್ವದ ದುಬಾರಿ ರೋಲ್ಸ್ ರಾಯ್ಸ್ ಸೆಡಾನ್ ಕಾರು ಖರೀದಿಸಿದ್ದಾರೆ.

     ಮೂಲಬೆಲೆ ಹಾಗೂ ತೆರಿಗೆ ಸೇರಿದಂತೆ ಒಟ್ಟು 12.75 ಕೋಟಿ ರೂ. ಮೌಲ್ಯದ ಈ ಐಷಾರಾಮಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರಿನಲ್ಲಿ ಎಂಟಿಬಿಯವರು ಗೃಹ ಕಚೇರಿ ಕೃಷ್ಣಾಗೆ ಬಂದಿದ್ದು, ಈ ಮೂಲಕ ಸುತ್ತಮುತ್ತ ಇದ್ದವರಲ್ಲಿ ಅಚ್ಚರಿ ಮೂಡಿಸಿದ್ದಾರೆ. ವಿಶ್ವದ ಅತ್ಯಂತ ದುಬಾರಿ ಹಾಗೂ ಐಷಾರಾಮಿ ಕಾರಾಗಿರುವ ರೋಲ್ಸ್ ರಾಯ್ಸ್ ಇಂಗ್ಲೆಂಡಿನಲ್ಲಿ ತಯಾರಾಗಿದ್ದು, ಎಂಟಿಬಿಯವರು ವಾರದ ಹಿಂದೆಯಷ್ಟೇ ಖರೀದಿ ಮಾಡಿದ್ದರು.

    ಎಂಟಿಬಿ ತಮ್ಮ ಐಷಾರಾಮಿ ಕಾರಿನಲ್ಲಿ ಸಿಎಂ ಕಚೇರಿಗೆ ಬರುತ್ತಿದ್ದಂತೆಯೇ ಎಲ್ಲರ ಚಿತ್ತ ಈ ಕಾರಿನತ್ತ ನೆಟ್ಟಿತ್ತು. ಅಲ್ಲದೆ ಕಾರಿನ ಮುಂದೆ ನಿಂತು ಹಲವರು ಸೆಲ್ಫಿ ತೆಗೆದುಕೊಂಡರೆ, ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ದುಬಾರಿ ಬೆಲೆಯ ಕಾರಿನ ವಿಡಿಯೋ ಮಾಡಿಕೊಂಡ ಪ್ರಸಂಗವೂ ನಡೆಯಿತು.

    ಈ ವೇಳೆ ಮಾತನಾಡಿದ ಎಂಟಿಬಿ, ನನಗೆ ರೋಲ್ಸ್ ರಾಯ್ಸ್ ಕಾರಿನಲ್ಲಿ ಓಡಾಡಬೇಕೆಂಬ ಬಯಕೆ ಹಿಂದಿನಿಂದಲೂ ಇತ್ತು. ಆ ಕನಸು ಈಗ ಈಡೇರಿದೆ. ತೆರಿಗೆ ಸೇರಿ 12.75 ಕೋಟಿ ಕೊಟ್ಟು ಕಾರು ಖರೀದಿಸಿದ್ದೇನೆ ಎಂದು ತಿಳಿಸಿದರು.

    ಮಳೆ, ನೆರೆಯಿಂದ ಸಂತ್ರಸ್ತರಾದವರಿಗೆ ನೆರವು ನೀಡುವ ಸಲುವಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಎಂ.ಟಿ.ಬಿ ಸಂಸ್ಥೆಯಿಂದ 1 ಕೋಟಿ ನೀಡುವುದಾಗಿ ಹೇಳಿದ್ದೆನು. ಇದೀಗ ಅದರ ಚೆಕ್ ಕೂಡ ಕೊಟ್ಟಿದ್ದೇನೆ’ ಎಂದರು.

    ದುಬಾರಿ ಬೆಲೆಯ ಕಾರಿನ ಜೊತೆ ಎಂಟಿಬಿ ಫ್ಯಾನ್ಸಿ ನಂಬರ್ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಬನಶಂಕರಿ ಆರ್ ಟಿಒ ಕೇಂದ್ರದಲ್ಲಿ ಕಾರು ನೊಂದಣಿಯಾಗಿದೆ. ಕೆಎ 59 ಎನ್ 888 ಸಂಖ್ಯೆಯನ್ನು ಎಂಟಿಬಿ ಪಡೆದುಕೊಂಡಿದ್ದಾರೆ.

    ಕಾರಿನ ವಿಶೇಷತೆ ಏನು?:
    ಈ ಕಾರು 5,762 ಮಿ.ಮೀ ಉದ್ದ, 2,018 ಮಿ.ಮಿ. ಅಗಲ ಹಾಗೂ 1,646 ಮಿ.ಮೀ ಎತ್ತರವಿದೆ. 2,560 ಕೆಜಿ ತೂಕದ ಈ ಕಾರಿನಲ್ಲಿ 5 ಮಂದಿ ಪ್ರಯಾಣಿಸಬಹುದು. ಅಲ್ಲದೆ 6749 ಸಿಸಿ ಎಂಜಿನ್, 8 ಗೇರ್, 12 ಸಿಲಿಂಡರ್, 453 ಬಿಎಚ್‍ಪಿ ಪವರ್, 750 ಎನ್‍ಎಂ ಟಾರ್ಕ್ ಹೊಂದಿದೆ. ಗರಿಷ್ಟ 240 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಕೂಡ ಈ ಕಾರು ಪಡೆದುಕೊಂಡಿದೆ. ಝೀರೋದಿಂದ 100 ಕಿ.ಮೀ ವೇಗವನ್ನು ಕೇವಲ 5.3 ಸೆಕೆಂಡಿನಲ್ಲಿ ತಲುಪಬಹುದಾಗಿದ್ದು, ಒಂದು ಲೀಟರ್ ಪೆಟ್ರೋಲಿಗೆ 6.7 ಕಿ.ಮೀ ಮೈಲೇಜ್ ನೀಡುತ್ತದೆ. ಭಾರತದಲ್ಲಿ ಆನ್ ರೋಡ್ ಬೆಲೆ 9.5 ಕೋಟಿ ರೂ. ನಿಂದ ಆರಂಭವಾಗುತ್ತದೆ.

  • ಸಂತ್ರಸ್ತರಿಗೆ ನೆರವು – ಎಂಟಿಬಿಯಿಂದ 1 ಕೋಟಿ ರೂ. ಸಹಾಯ ಧನ

    ಸಂತ್ರಸ್ತರಿಗೆ ನೆರವು – ಎಂಟಿಬಿಯಿಂದ 1 ಕೋಟಿ ರೂ. ಸಹಾಯ ಧನ

    ಬೆಂಗಳೂರು: ಉತ್ತರ ಕರ್ನಾಟಕಕ್ಕೆ ಸಂಭವಿಸಿರುವ ಭಾರೀ ಪ್ರವಾಹದ ಹಿನ್ನೆಲೆ ಸಾರ್ವಜನಿಕರು ಉತ್ತಮ ರೀತಿಯಲ್ಲಿ ಸಹಾಯ ಮಾಡಿ, ಸ್ಪಂದಿಸುತ್ತಿದ್ದಾರೆ. ಇದೀಗ ಜನಪ್ರತಿನಿಧಿಗಳೂ ಸಹ ಸಹಾಯ ಹಸ್ತ ಚಾಚುತ್ತಿದ್ದು, ಹೊಸಕೋಟೆಯ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರು 1 ಕೋಟಿ ರೂ. ಪರಿಹಾರ ಹಣವನ್ನು ನೀಡಿದ್ದಾರೆ.

    ಭಾರೀ ಮಳೆಯಿಂದಾಗಿ ಉತ್ತರ ಕರ್ನಾಟಕ ಸೇರಿದಂತೆ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಭಾರೀ ಅನಾಹುತ ಸಂಭವಿಸಿದ್ದು, ಸಾರ್ವಜನಿಕರು ಜೀವನ ಹೇಳತೀರದಾಗಿದೆ. ಪ್ರವಾಹದಿಂದ ಮನೆ ಮಠಗಳನ್ನು ಕೆಳದುಕೊಂಡು ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದು, ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಾರ್ವಜನಿಕರೂ ಸಹ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದು, ತಮ್ಮ ಶಕ್ತಿಯನ್ನು ಮೀರಿ ಸಹಾಯ ಮಾಡುತ್ತಿದ್ದಾರೆ.

    ಈ ಬೆನ್ನಲ್ಲೇ ಜನಪ್ರತಿನಿಧಿಗಳೂ ಸಹ ಸಹಾಯ ಹಸ್ತ ಚಾಚುತ್ತಿದ್ದು, ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಅನರ್ಹ ಕೈ ಶಾಸಕ ಎಂಟಿಬಿ ನಾಗರಾಜ್ ಅವರು 1 ಕೋಟಿ ರೂ. ಪರಿಹಾರ ಮೊತ್ತವನ್ನು ಚೆಕ್ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

    10 ದಿನಗಳ ಕಾಲ ಸುರಿದ ಭಾರೀ ಮಳೆ ಕರ್ನಾಟಕವನ್ನೇ ಮುಳುಗಿಸಿದ್ದ ಪ್ರವಾಹದಿಂದ ಉಂಟಾಗಿರುವ ನಷ್ಟ ಬರೋಬ್ಬರೀ 30 ರಿಂದ 40 ಸಾವಿರ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಉತ್ತರ ಕರ್ನಾಟಕ, ಹೈದಾರಾಬಾದ್ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಭಾಗದ 17 ಜಿಲ್ಲೆಗಳಲ್ಲಿ ಪ್ರಳಯಕ್ಕೆ ಇದುವರೆಗೂ ಆಹುತಿ ಆದವರ ಸಂಖ್ಯೆ 60ಕ್ಕೆ ತಲುಪಿದೆ. 136 ಪ್ರಮುಖ ಹೆದ್ದಾರಿಗಳು ಹಾಳಾಗಿವೆ.

    ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಯಡಿಯೂರಪ್ಪ ತುರ್ತಾಗಿ 10 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ. ಆಗಸ್ಟ್ 1ರಿಂದ ಸುರಿದಿದ್ದ ಕುಂಭದ್ರೋಣ ಮಳೆ ಉತ್ತರ ಕರ್ನಾಟಕ ಭಾಗದಲ್ಲಿ ತಗ್ಗಿದೆ. ಆದರೆ ಕರಾವಳಿ ಕರ್ನಾಟಕ ಮತ್ತು ಮಲೆನಾಡು ಭಾಗದಲ್ಲಿ ಇನ್ನೂ ಆರೆಂಜ್ ಅಲರ್ಟ್ ಜಾರಿಯಲ್ಲಿದೆ.

  • ಬಿಜೆಪಿ ಸೇರುವ ಬಗ್ಗೆ ಅನರ್ಹ ಶಾಸಕ ಬಿ.ಸಿ ಪಾಟೀಲ್ ಹೇಳಿದ್ದೇನು?

    ಬಿಜೆಪಿ ಸೇರುವ ಬಗ್ಗೆ ಅನರ್ಹ ಶಾಸಕ ಬಿ.ಸಿ ಪಾಟೀಲ್ ಹೇಳಿದ್ದೇನು?

    ಬೆಂಗಳೂರು: ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ನನ್ನ ಕ್ಷೇತ್ರಕ್ಕೆ ನಾಲ್ಕು ಬಾರಿ ಹೋಗಿ ಬಂದಿದ್ದೇನೆ. ಕ್ಷೇತ್ರದ ಜನರ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹಾವೇರಿ ಜಿಲ್ಲೆಯ ಹಿರೇಕೆರೂರು ಕ್ಷೇತ್ರದ ಅನರ್ಹ ಶಾಸಕ ಬಿ.ಸಿ ಪಾಟೀಲ್ ಹೇಳಿದ್ದಾರೆ.

    ಸಿಎಂ ಗೃಹ ಕಚೇರಿಯಲ್ಲಿ ಯಡಿಯೂರಪ್ಪ ಭೇಟಿ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮನ್ನು ಕಾಂಗ್ರೆಸ್ ನಿಂದ ಉಚ್ಛಾಟನೆ ಮಾಡಲಾಗಿದೆ. ಹಾಗಾಗಿ ನಾನು ಕಾಂಗ್ರೆಸ್‍ನಲ್ಲಿ ಇಲ್ಲ ಎಂದರು.

    ಸುಪ್ರೀಂಕೋರ್ಟಿನಲ್ಲಿ ಅನರ್ಹತೆ ತೀರ್ಪು ಪ್ರಶ್ನಿಸಿದ್ದೇವೆ. ಮುಂದಿನ ವಾರ ಅರ್ಜಿ ವಿಚಾರಣೆಗೆ ಬರಬಹುದು. ಸುಪ್ರೀಂಕೋರ್ಟ್ ಅಯೋಧ್ಯೆ ಕುರಿತ ಅರ್ಜಿಗಳ ವಿಚಾರಣೆ ಮಾಡುತ್ತಿದೆ. ಹಾಗಾಗಿ ನಮ್ಮ ಅರ್ಜಿ ವಿಚಾರಣೆ ವಿಳಂಬವಾಗಿದೆ ಎಂದು ತಿಳಿಸಿದರು.

    ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚೆ ಮಾಡಿಲ್ಲ. ಬಿಜೆಪಿ ಸೇರ್ಪಡೆ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ಕ್ಷೇತ್ರಕ್ಕೆ ನಾಲ್ಕು ಬಾರಿ ಹೋಗಿ ಬಂದಿದ್ದೇನೆ. ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವ ಸಂಬಂಧ ಸಿಎಂ ಭೇಟಿ ಮಾಡಿದ್ದೇನೆ. ಅನುದಾನ ನೀಡೋದಾಗಿ ಸಿಎಂ ಭರವಸೆ ನೀಡಿದ್ದಾರೆ. ಕುಟುಂಬದವರ ರಾಜಕೀಯ ಪ್ರವೇಶ ಬಗ್ಗೆ ಚಿಂತನೆ ಮಾಡಿಲ್ಲ ಎಂದು ಬಿ.ಸಿ ಪಾಟೀಲ್ ತಿಳಿಸಿದರು.

    ಇತ್ತೀಚೆಗೆ ತಮ್ಮ ಮಗಳೊಂದಿಗೆ ಹಾವೇರಿ ಜಿಲ್ಲೆಯ ಹಿರೇಕೆರೂರು ಕ್ಷೇತ್ರದ ಅನರ್ಹ ಶಾಸಕ ಬಿ.ಸಿ ಪಾಟೀಲ್ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಹೀಗಾಗಿ ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

  • ಅನರ್ಹ ಶಾಸಕ ಮಹೇಶ್ ಕುಮಟಳ್ಳಿಯನ್ನು ತರಾಟೆಗೆ ತೆಗೆದುಕೊಂಡ ಸಂತ್ರಸ್ತರು

    ಅನರ್ಹ ಶಾಸಕ ಮಹೇಶ್ ಕುಮಟಳ್ಳಿಯನ್ನು ತರಾಟೆಗೆ ತೆಗೆದುಕೊಂಡ ಸಂತ್ರಸ್ತರು

    ಬೆಳಗಾವಿ: ಅನರ್ಹ ಶಾಸಕ ಮಹೇಶ್ ಕುಮಟಳ್ಳಿಯನ್ನು ಪ್ರವಾಹ ಪೀಡಿತ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ಜನತೆ ತರಾಟೆಗೆ ತೆಗೆದುಕೊಂಡಿದ್ದಾರೆ.

    ತಮ್ಮ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನ ಹೋಟೆಲ್‍ನಲ್ಲಿ ತಿಂಗಳುಕಾಲ ತಂಗಿದ್ದ ಅನರ್ಹ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಪ್ರವಾಹ ಪೀಡಿತ ಗ್ರಾಮಸ್ಥರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

    ನಾವು ಮತ ಹಾಕಿದ್ದು ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿ ಎಂದು. ನೀವು ರಾಜೀನಾಮೆ ನೀಡಿ ಮುಂಬೈಗೆ ಹಾರಲು ಅಲ್ಲ. ಶಾಸಕರಾಗಿ ಹದಿನಾಲ್ಕು ತಿಂಗಳಾಯಿತು ಈಗ ನೆನಪಾಯಿತೇ ಎಂದು ಪ್ರಶ್ನಿಸಿ ಮಹೇಶ್ ಕುಮಠಳ್ಳಿ ಹಾಗೂ ದರೂರ ಜಿಲ್ಲಾ ಪಂಚಾಯತ್ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

  • ನಾನು ಕೇಳೋವಾಗ ಕೊಟ್ಟಿಲ್ಲ, ಆದ್ರೆ ಕನಕಪುರಕ್ಕೆ ಕೊಟ್ರು- ಹೆಚ್‍ಡಿಕೆ ವಿರುದ್ಧ ಸುಧಾಕರ್ ಕಿಡಿ

    ನಾನು ಕೇಳೋವಾಗ ಕೊಟ್ಟಿಲ್ಲ, ಆದ್ರೆ ಕನಕಪುರಕ್ಕೆ ಕೊಟ್ರು- ಹೆಚ್‍ಡಿಕೆ ವಿರುದ್ಧ ಸುಧಾಕರ್ ಕಿಡಿ

    ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಅನರ್ಹ ಶಾಸಕ ಕೆ ಸುಧಾಕರ್ ಕಿಡಿಕಾರಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ನೀಡದ್ದು, ಮಲತಾಯಿ ಧೋರಣೆ ತಾಳಿದ್ದೇ ನಾನು ರಾಜೀನಾಮೆ ನೀಡಲು ಪ್ರಮುಖ ಕಾರಣವಾಗಿದೆ ಎಂದು ಸ್ಪಷ್ಟಪಡಿಸಿದರು.

    14 ತಿಂಗಳು ಆಡಳಿತ ನಡೆಸಿದ ಸಮ್ಮಿಶ್ರ ಸರ್ಕಾರ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ನಾನು ಕುಮಾರಸ್ವಾಮಿ ಬಳಿ ಮೆಡಿಕಲ್ ಕಾಲೇಜಿಗೆ ಬಜೆಟ್ ನಲ್ಲಿ ಹಣ ಮೀಸಲಿಡುವಂತೆ ಕೇಳಲು ಹೋದಾಗ ಸುಮಾರು ಒಂದೂವರೆ ಗಂಟೆ ನನ್ನನ್ನ ಕಾಯಿಸಿದರು. ನಂತರ ಹೊರಗಡೆ ಬಂದು ಹಣ ಕೊಡಲು ಆಗುವುದಿಲ್ಲ ಎಂದು ನೇರವಾಗಿ ಹೇಳಿದರು. ಆದರೆ ಅದೇ ಬಜೆಟ್‍ನಲ್ಲಿ ಕನಕಪುರ ಮೆಡಿಕಲ್ ಕಾಲೇಜು ಘೋಷಣೆ ಮಾಡಿ 450 ಕೋಟಿ ಬಿಡುಗಡೆ ಮಾಡಿದರು. ಈ ರೀತಿ ಮಲತಾಯಿ ಧೋರಣೆ ಮಾಡಿದ್ರು ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

    ನನಗೆ ಆರು ತಿಂಗಳ ಕಾಲ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡದೆ ಸತಾಯಿಸಿದರು. ಆದರೆ ಕಳೆದ 2 ತಿಂಗಳ ಹಿಂದೆ ಕುಮಾರಸ್ವಾಮಿಗೆ ಸುಧಾಕರ್ ಏನು ಎಂದು ಅರ್ಥ ಆಗಿದೆ. ಸ್ಪೀಕರ್ ರಮೇಶ್ ಕುಮಾರ್ ಹಾಗೂ ಶಿವಶಂಕರ ರೆಡ್ಡಿ ನನಗೆ ಪಿಸಿಬಿ ಸ್ಥಾನ ಕೊಡದಂತೆ ಒತ್ತಡ ಹಾಕಿದ್ದರು. ಹಾಗಾಗಿ ನಾನು ಕೊಡಲು ಆಗಲಿಲ್ಲ ನಾನು ಸಹ ತಪ್ಪು ಮಾಡಿದೆ ಎಂದು ಸ್ವತಃ ಕುಮಾರಸ್ವಾಮಿ ಅವರೇ ಹೇಳಿ ಪಶ್ಚಾತ್ತಾಪ ಪಟ್ಟಿದ್ದರು ಎಂದರು.

    ಇತ್ತೀಚೆಗೆ ಕೂಡ ನಿನ್ನಂತಹ ಒಬ್ಬ ಶಾಸಕ ನನ್ನ ಜೊತೆ ಇದ್ದಿದ್ದರೆ ಸಾಕು 10 ಜನ ಶಾಸಕರು ಇರೋ ಬದಲು ನನ್ನ ಸರ್ಕಾರ ಉಳಿಯುತ್ತಿತ್ತು ಎಂದು ಕೂಡ ಹೇಳಿದ್ದರು. ಆದರೆ ಅಷ್ಟರಲ್ಲಿ ಎಲ್ಲವೂ ಕೈ ಮೀರಿ ಹೋಗಿತ್ತು. ಇದಿರಿಂದ ಕುಮಾರಸ್ವಾಮಿಗೆ ಸುಧಾಕರ್ ಏನು ಅಂತ ಅರ್ಥ ಆಗಿದೆ ಎಂದು ತಿಳಿಸಿದರು.

  • ಎಸ್‍ಐಟಿ ಮುಂದೆ ಹಾಜರಾಗದ್ದಕ್ಕೆ ರೋಷನ್ ಬೇಗ್ ಕುಂಟು ನೆಪ

    ಎಸ್‍ಐಟಿ ಮುಂದೆ ಹಾಜರಾಗದ್ದಕ್ಕೆ ರೋಷನ್ ಬೇಗ್ ಕುಂಟು ನೆಪ

    ಬೆಂಗಳೂರು: ಐಎಂಎ ಜ್ಯುವೆಲ್ಸ್ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸೋಮವಾರ ಎಸ್‍ಐಟಿ(ವಿಶೇಷ ತನಿಖಾ ದಳ) ಮುಂದೆ ಹಾಜರಾಗದ್ದಕ್ಕೆ ಅನರ್ಹ ಶಾಸಕ ರೋಷನ್ ಬೇಗ್ ಕುಂಟು ನೆಪ ಹೇಳಿದ್ದಾರೆ.

    ಅನಾರೋಗ್ಯ ಇತ್ತು ಹೀಗಾಗಿ ನಿನ್ನೆ ವಿಚಾರಣೆಗೆ ಬಂದಿರಲಿಲ್ಲ. ಆಗಸ್ಟ್ 15ರ ಬಳಿಕ ವಿಚಾರಣೆಗೆ ಬರುತ್ತೇನೆ ಎಂದು ಸಬೂಬು ಹೇಳಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧ ಎಸ್‍ಐಟಿ ಅವರು ರೋಷನ್ ಬೇಗ್ ಅವರನ್ನು ಒಮ್ಮೆ ಮಾತ್ರ ವಿಚಾರಣೆ ನಡೆಸಿದ್ದಾರೆ. ಹೀಗಾಗಿ ಮತ್ತೆ ವಿಚಾರಣೆಗೆ ಬರಬೇಕೆಂದು ಪದೇ ಪದೇ ನೋಟೀಸ್ ಕೊಟ್ಟರೂ ಅನರ್ಹ ಶಾಸಕ ಕ್ಯಾರೇ ಎಂದಿಲ್ಲ.

    ಈ ಹಿನ್ನೆಲೆಯಲ್ಲಿ ಇದೀಗ ಎಸ್‍ಐಟಿಯವರು ರೋಷನ್ ಬೇಗ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ತೀರ್ಮಾನ ಮಾಡಿದ್ದಾರೆ. ವಿಚಾರಣೆಗೆ ಸರಿಯಾಗಿ ಬರುತ್ತಿಲ್ಲ. ಕಾನೂನು ಕ್ರಮ ಮುಂದುವರಿಸಲು ಅವಕಾಶಕ್ಕೆ ಮನವಿ ಮಾಡಲು ನಿರ್ಧರಿಸಿದ್ದು, ಎಸ್‍ಐಟಿ ಇಂದು ಅಥವಾ ನಾಳೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ತೀರ್ಮಾನಿಸಿದೆ. ಪದೇ ಪದೇ ಇವರಿಗೆ ಅವಕಾಶ ನೀಡಿದರೆ ಬೇರೆ ಆರೋಪಿಗಳು ಕೂಡ ಇದೇ ಚಾಳಿ ಮುಂದುವರಿಸುತ್ತಾರೆ. ಅದಕ್ಕಾಗಿ ನ್ಯಾಯಾಲಯದ ಮೊರೆ ಹೋಗಲು ನಿರ್ಧಾರ ಮಾಡಿರುವುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

    ವಂಚನೆ ಆರೋಪದ ಮೇಲೆ ಬಂಧಿತನಾಗಿರುವ ಐಎಂಎ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್ ಖಾನ್ ನಿಂದ ಭಾರೀ ಹಣ ಪಡೆದ ಪಡೆದಿರುವ ಆರೋಪವನ್ನು ರೋಷನ್ ಬೇಗ್ ಎದುರಿಸುತ್ತಿದ್ದಾರೆ. ಮನ್ಸೂರ್ ಬಂಧನಕ್ಕೂ ಮುನ್ನ ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಶಿವಾಜಿನಗರ ಶಾಸಕರು ತನ್ನಿಂದ ಹಣ ಪಡೆದು ವಾಪಸ್ ಕೊಟ್ಟಿಲ್ಲ ಎಂದು ದೂರಿದ್ದರು. ಈ ಸಂಬಂಧ ಪುಣೆಗೆ ಹೊರಟಿದ್ದು ರೋಷನ್ ಬೇಗ್ ಅವರನ್ನು ಏರ್ ಪೋರ್ಟಿನಲ್ಲೇ ಎಸ್‍ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.

  • ಕೆ.ಆರ್.ಪುರ ಕ್ಷೇತ್ರದಿಂದ ನಾನೇ ಬಿಜೆಪಿ ಅಭ್ಯರ್ಥಿ: ನಂದೀಶ್ ರೆಡ್ಡಿ

    ಕೆ.ಆರ್.ಪುರ ಕ್ಷೇತ್ರದಿಂದ ನಾನೇ ಬಿಜೆಪಿ ಅಭ್ಯರ್ಥಿ: ನಂದೀಶ್ ರೆಡ್ಡಿ

    -ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ನೀಡಿದ್ರೆ ಸಹಿಸಲ್ಲ

    ಬೆಂಗಳೂರು: ಮುಂಬರುವ ಉಪ ಚುನಾವಣೆಯಲ್ಲಿ ಕೆ.ಆರ್.ಪುರ ಕ್ಷೇತ್ರದಿಂದ ನಾನೇ ಬಿಜೆಪಿ ಅಭ್ಯರ್ಥಿ ಎಂದು ತಿಳಿಸುವ ಮೂಲಕ ಮಾಜಿ ಶಾಸಕ ನಂದೀಶ್ ರೆಡ್ಡಿ ಅನರ್ಹ ಶಾಸಕ ಬೈರತಿ ಬಸವರಾಜ್ ಗೆ ಟಾಂಗ್ ನೀಡಿದ್ದಾರೆ.

    ಕೆ.ಆರ್.ಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ನಡೆಯುವ ಮರು ಚುನಾವಣೆ ಕುರಿತು ಪ್ರತಿಕ್ರಿಯಿಸಿದರು. ಕೆ.ಆರ್.ಪುರ ಕ್ಷೇತ್ರದಿಂದ ನಾನೇ ಬಿಜೆಪಿ ಅಭ್ಯರ್ಥಿ, ಪಕ್ಷಕ್ಕಾಗಿ ನಾನು ದುಡಿದಿದ್ದೇನೆ. ಒಂದು ವೇಳೆ ನನಗೆ ಟಿಕೆಟ್ ಕೊಡದೆ, ನಮ್ಮ ಪಕ್ಷದ ಬೇರೆಯವರಿಗೆ ಟಿಕೆಟ್ ಕೊಟ್ಟರೂ ನಾನು ಅವರಿಗಾಗಿ ಕಾರ್ಯಕರ್ತರ ಜೊತೆ ಸೇರಿ ಕೆಲಸ ಮಾಡುತ್ತೇನೆ. ಆದರೆ ನಮ್ಮ ಪಕ್ಷದವರನ್ನು ಬಿಟ್ಟು ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ಕೊಟ್ಟರೆ ಅವರ ಪರ ಕೆಲಸ ಮಾಡಲು ಕೊಂಚ ಯೋಚಿಸಬೇಕಾಗುತ್ತದೆ. ಕಾರ್ಯಕರ್ತರು ಅವರ ಪರ ಕೆಲಸ ಮಾಡಲು ಇಚ್ಛಿಸುವುದಿಲ್ಲ. ಬಿಜೆಪಿ ನಮ್ಮನ್ನ ಕೈ ಬಿಡಲ್ಲ ಎಂಬ ನಂಬಿಕೆ ಇದೆ. ಕಷ್ಟದ ಪರಿಸ್ಥಿತಿಯಲ್ಲೂ ನಾವು ಪಕ್ಷವನ್ನು ಸಂಘಟನೆ ಮಾಡಿದ್ದೇವೆ. ನನಗೆ ಟಿಕೆಟ್ ಸಿಗುತ್ತೆ ಎಂಬ ವಿಶ್ವಾಸ ಇದೆ. ನಮ್ಮ ನಾಯಕರು ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ಕೊಟ್ಟು ನಮಗೆ ಮೋಸ ಮಾಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸಿದ ಸಂಭ್ರಮಾಚರಣೆಯಲ್ಲಿ ನಂದೀಶ್ ಅವರು ಭಾಗವಹಿಸಿದ್ದರು. ಇಷ್ಟು ವರ್ಷಗಳಿಂದ ಇದ್ದ ಬೇಡಿಕೆಯನ್ನು ಕೇಂದ್ರ ಕೇವಲ 3 ನಿಮಿಷದಲ್ಲಿ ಬಗೆಹರಿಸಿದೆ. ಭಾರತೀಯರಿಗೆ ಇದು ಬಹಳ ಸಂತೋಷದ ವಿಚಾರ ಎಂದು ಖುಷಿಯನ್ನು ಹಂಚಿಕೊಂಡರು.

  • ಸಿದ್ದರಾಮಯ್ಯ ಯಾವಾಗ ರಾಜೀನಾಮೆ ಕೊಡ್ತಾರೆ- ಎಚ್ ವಿಶ್ವನಾಥ್ ಪ್ರಶ್ನೆ

    ಸಿದ್ದರಾಮಯ್ಯ ಯಾವಾಗ ರಾಜೀನಾಮೆ ಕೊಡ್ತಾರೆ- ಎಚ್ ವಿಶ್ವನಾಥ್ ಪ್ರಶ್ನೆ

    ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವಾಗ ರಾಜೀನಾಮೆ ಕೊಡುತ್ತಾರೆ ಎಂದು ಅನರ್ಹ ಶಾಸಕ ಎಚ್ ವಿಶ್ವನಾಥ್ ಪ್ರಶ್ನಿಸಿದ್ದಾರೆ.

    ನಗರದಲ್ಲಿಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲುಂಟಾಯಿತು. ಈ ಸೋಲಿನ ಹೊಣೆ ಹೊತ್ತು ರಾಹುಲ್ ಗಾಂಧಿಯವರು ತಮ್ಮ ಎಐಸಿಸಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇತ್ತ ನಾನೂ ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಹೀಗಾಗಿ ಸಿದ್ದರಾಮಯ್ಯ ಅವರು ಯಾವಾಗ ರಾಜೀನಾಮೆ ನೀಡುತ್ತಾರೆ ಎಂದು ಬಹಿರಂಗವಾಗಿ ಪ್ರಶ್ನೆ ಮಾಡಿದ್ದಾರೆ.

    ಜೆಡಿಎಸ್ ವರಿಷ್ಠ ದೇವೇಗೌಡರನ್ನು ತುಮಕೂರಿಗೆ ಕರೆದೊಯ್ದು ಖೆಡ್ಡಾ ತೋಡಿದ್ದೇ ಸಿದ್ದರಾಮಯ್ಯ ಅವರಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೂ ಒಂದು ಸೀಟು, ನಮ್ಮ ಪಕ್ಷಕ್ಕೂ ಒಂದು ಸೀಟು ಸಿಕ್ಕಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಅವರು ಯಾವಾಗ ರಾಜೀನಾಮೆ ನೀಡುತ್ತಾರೆ ಎಂದು ಕೇಳಿದ್ದಾರೆ. ಇದನ್ನೂ ಓದಿ; ನಾನು ದೇವೇಗೌಡ್ರ ಬಳಿ ಕ್ಷಮೆ ಕೇಳುತ್ತೇನೆ- ಎಚ್ ವಿಶ್ವನಾಥ್

    ಆದರೆ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷರಾಗಿರಲಿಲ್ಲ, ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಹಾಗಾಗಿ ವಿಶ್ವನಾಥ್ ಅವರು ಯಾವುದಕ್ಕೆ ರಾಜೀನಾಮೆ ಕೊಡಬೇಕು ಎಂದು ಹೇಳಿದ್ದಾರೆ ಎಂಬುದಾಗಿ ತಿಳಿದುಬಂದಿಲ್ಲ.

    ನನ್ನನ್ನು ಸಿದ್ದರಾಮಯ್ಯ ಅವರಿಂದ ದೂರ ಮಾಡಿದ್ದೇ ಜೆಡಿಎಸ್. ಸಿದ್ದರಾಮಯ್ಯ ಇದ್ದಾರೆ ಅಲ್ಲಿ ಬರಬೇಡಿ. ಸಿದ್ದರಾಮಯ್ಯ ಇದ್ದಾರೆ ಇಲ್ಲಿ ಬರಬೇಡಿ ಎಂದು ಹೇಳಿದ ಜೆಡಿಎಸ್ ನಾಯಕರಿಂದಲೇ ನಾನು ಸಿದ್ದರಾಮಯ್ಯ ಅವರಿಂದ ದೂರವಾದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಜೆಡಿಎಸ್ ಗೆ ವಿಷವುಣಿಸಿದ್ದೇ ಸಾರಾ ಮಹೇಶ್ ಎಂದು ಮಾಜಿ ಸಚಿವರ ವಿರುದ್ಧವೂ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.