Tag: ಅನರ್ಹ ಶಾಸಕ

  • ಸವದಿ ಬೇಜವಾಬ್ದಾರಿ ಹೇಳಿಕೆಯಿಂದ ಹಾಳಾದ್ರು, ಇನ್ನೂ ಹಾಳಾಗ್ತಾರೆ: ರಮೇಶ್ ಜಾರಕಿಹೊಳಿ

    ಸವದಿ ಬೇಜವಾಬ್ದಾರಿ ಹೇಳಿಕೆಯಿಂದ ಹಾಳಾದ್ರು, ಇನ್ನೂ ಹಾಳಾಗ್ತಾರೆ: ರಮೇಶ್ ಜಾರಕಿಹೊಳಿ

    – ಸತೀಶ್ ಜಾರಕಿಹೊಳಿ ವಿರುದ್ಧವೂ ಏಕವಚನದಲ್ಲಿ ವಾಗ್ದಾಳಿ

    ಬೆಳಗಾವಿ: ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆಗೆ ರಮೇಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.

    ನಗರದಲ್ಲಿ ಮಾತನಾಡಿದ ಅಹರ್ನ ಶಾಸಕರು, ಲಕ್ಷ್ಮಣ ಸವದಿ ಬೇಜವಾಬ್ದಾರಿಯಿಂದ ಹಾಳಾಗಿದ್ದಾರೆ, ಇನ್ನೂ ಹಾಳಾಗುತ್ತಾರೆ. ಅನರ್ಹ ಶಾಸಕರ ಬಗ್ಗೆ ಮಾತನಾಡುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು ಎಂದು ಟಾಂಗ್ ನೀಡಿದರು. ಬಿಜೆಪಿ ಮುಖಂಡ ಉಮೇಶ್ ಕತ್ತಿ, ಲಕ್ಷ್ಮಣ ಸವದಿ ಅವರಿಗೆ ಸರಿಯಾದ ಉತ್ತರ ಹೇಳಿದ್ದಾರೆ. ಅದಕ್ಕೆ ನನ್ನ ಸಹಮತವಿದೆ ಎಂದು ಹೇಳಿದರು.

    ಡಿಸಿಎಂ ಸ್ಥಾನದ ಮಹತ್ವ ಗೊತ್ತಿಲ್ಲ. ಸೋತರೂ ಡಿಸಿಎಂ ಸ್ಥಾನ ಸಿಕ್ಕಿದ್ದಕ್ಕೆ ಸೊಕ್ಕಿದೆ. ಆ ಸೊಕ್ಕನ್ನು ದೇವರು ಮುರಿಯುತ್ತಾನೆ. ಹತ್ತು ತಲೆ ರಾವಣ ಹಾಳಾಗಿದ್ದಾನೆ. ಈ ಮನುಷ್ಯ ಯಾವನು ಎಂದು ಏಕವಚನದಲ್ಲಿ ಲಕ್ಷ್ಮಣ ಸವದಿ ವಿರುದ್ಧ ಹರಿಹಾಯ್ದರು.

    ಸುಪ್ರೀಂ ಕೋರ್ಟ್ ಅನರ್ಹತೆ ಅರ್ಜಿ ವಿಚಾರಣೆ ಮುಗಿಸಿದ್ದು, ತೀರ್ಪು ಕಾಯ್ದಿರಿಸಿದೆ. ತೀರ್ಪು ಹೇಗಿದ್ದರೂ ಚುನಾವಣೆಗೆ ನಿಲ್ಲುವ ಅವಕಾಶವಿದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ. ವಾದ ಪ್ರತಿವಾದ ನೋಡಿದರೆ ಚುನಾವಣೆಗೆ ಅವಕಾಶ ನಿಲ್ಲುವ ಅವಕಾಶ ದೊರೆಯುವ ಭಾವನೆಯಿದೆ. ನಾನು ಚುನಾವಣೆ ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು.

    ಮಾಜಿ ಸಚಿವ, ಸಹೋದರ ಸತೀಶ್ ಜಾರಕಿಹೊಳಿ ವಿರುದ್ಧವೂ ವಾಗ್ದಾಳಿ ನಡೆಸಿದ ರಮೇಶ್ ಜಾರಕಿಗೊಳಿ, ಸತೀಶ್ ಮಾಡಿರುವ ದ್ರೋಹವನ್ನು ಕಥೆ ಮಾಡಿದರೆ ಅವನು ಮನೆಗೆ ಓಡಿಹೋಗುತ್ತಾನೆ. ಹುಚ್ಚನಂತೆ ಓಡಾಡುತ್ತಾ ಹೇಳಿಕೆ ನೀಡುತ್ತಿದ್ದಾನೆ. ಅವನನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕಿತ್ತು. ಅವನೊಬ್ಬ ನಾಯಕನಲ್ಲ, ಅವನೊಬ್ಬ ಷಂಡ ಎಂದು ಏಕವಚನದಲ್ಲೇ ಗುಡುಗಿದರು.

    ಜಾರಕಿಹೊಳಿ ಕುಟುಂಬಕ್ಕೆ ಅಪಮಾನ ಮಾಡಬಾರದು ಎಂಬ ಕಾರಣಕ್ಕೆ ಸುಮ್ಮನಿದ್ದೇವೆ. ನಾನು ಮತ್ತು ಬಾಲಚಂದ್ರ ಜಾರಕಿಹೊಳಿ ಒಂದೇ ವೇದಿಕೆಯಲ್ಲಿ ಬಂದಾಗ ಸತೀಶ್ ಜಾರಕಿಹೊಳಿ ಮಾತುಗಳಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದು ಕಿಡಿ ಕಾರಿದರು.

    ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜೊತೆಗೆ ಪ್ರಯಾಣ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ ಅವರು, ಎಚ್.ಡಿ.ದೇವೇಗೌಡ ಅವರ ಕುಟುಂಬದೊಂದಿಗೆ ನನ್ನ ಸಂಬಂಧ ಮೊದಲಿನಿಂದಲೂ ಚೆನ್ನಾಗಿದೆ. ಕುಮಾರಸ್ವಾಮಿ ಅವರೊಂದಿಗಿನ ನನ್ನ ಪ್ರಯಾಣ ದೊಡ್ಡ ವಿಷಯವಲ್ಲ, ಅದರಲ್ಲಿ ವಿಶೇಷತೆ ಏನೂ ಇಲ್ಲ. ಪ್ರಯಾಣದ ವೇಳೆ ರಾಜಕೀಯ ವಿಚಾರಗಳ ಚರ್ಚೆಯಾಗಿಲ್ಲ ಎಂದು ಹೇಳಿದರು.

  • ಉತ್ತರ ಕರ್ನಾಟಕದ ಏಳು ಅನರ್ಹರಿಗೆ ಬಿಜೆಪಿ ಟಿಕೆಟ್ ಬಹುತೇಕ ಫಿಕ್ಸ್

    ಉತ್ತರ ಕರ್ನಾಟಕದ ಏಳು ಅನರ್ಹರಿಗೆ ಬಿಜೆಪಿ ಟಿಕೆಟ್ ಬಹುತೇಕ ಫಿಕ್ಸ್

    ಹುಬ್ಬಳ್ಳಿ: ಉತ್ತರ ಕರ್ನಾಟಕದ ಏಳು ಜನ ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ.

    ನಗರದಲ್ಲಿ ಇಂದು ಬಿಜೆಪಿ ನಾಯಕರ ಸಭೆ ಹಾಗೂ ಕೋರಂ ಕಮೀಟಿ ಸಭೆ ಜರುಗಿತು. ಉತ್ತರ ಕರ್ನಾಟಕದ 7 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಾಗೂ 4 ಪರಿಷತ್ ಕ್ಷೇತ್ರಗಳ ಚುನಾವಣೆ ಬಗ್ಗೆ ಬಿಜೆಪಿ ನಾಯಕರು ಸಾಲು ಸಾಲಾಗಿ ಸಭೆ ನಡೆಸಿ ನಂತರ ಕೋರ ಕಮೀಟಿ ಸಭೆಯಲ್ಲಿ ತೀರ್ಮಾನ ಕೈಗೊಂಡರು.

    ಖಾಸಗಿ ಹೋಟೇಲ್‍ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಸಚಿವರು, ನಾಯಕರು ಸಮಾಲೋಚನಾ ಸಭೆ ನಡೆಸಿದರು. ಈ ಸಭೆಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿತ್ತು.

    ಈ ಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಏಳು ಅನರ್ಹ ಶಾಸಕರ ಕ್ಷೇತ್ರಗಳ ಉಪಚುನಾವಣೆ, 4 ಪರಿಷತ್ ಕ್ಷೇತ್ರಗಳ ಚುನಾವಣೆ ಬಗ್ಗೆ ಚರ್ಚೆ ನಡೆದಿದೆ. ಅನರ್ಹ ಶಾಸಕರ ಕ್ಷೇತ್ರಗಳ ಮುಖಂಡರು, ಟಿಕೆಟ್ ಆಕಾಂಕ್ಷಿಗಳ ಮಾತುಗಳನ್ನು ಸಿಎಂ ಆಲಿಸಿದ್ದಾರೆ. ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಕಳೆದ ಬಾರಿ ಸ್ಪರ್ಧಿಸಿದ್ದವರ ಮನವೊಲಿಕೆ ಯತ್ನ ನಡೆದಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

    ಪಕ್ಷದ ಪ್ರಮುಖ ನಾಯಕರಿಗೆ ಬಂಡಾಯ ಶಮನದ ಹೊಣೆಯನ್ನು ಸಭೆಯಲ್ಲಿ ನೀಡಲಾಗಿದೆ. ಅನರ್ಹ ಶಾಸಕರಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಅವರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡಲಾಗುವುದು. ಏಳಕ್ಕೆ ಏಳು ಕ್ಷೇತ್ರ ಗೆಲ್ಲಬೇಕು. ಎಲ್ಲರೂ ಒಗ್ಗಟ್ಟು ಪ್ರದರ್ಶಿಸುವಂತೆ ಸಿಎಂ ಯಡಿಯೂರಪ್ಪ ನೇತೃತ್ವ ಸಭೆಯಲ್ಲಿ ಸೂಚನೆ ನೀಡಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಈ ಸಭೆಯಲ್ಲಿ ಹೆಚ್ಚಾಗಿ ಚರ್ಚೆಯಾಗಿದ್ದು ಬಳ್ಳಾರಿಯ ಬಂಡಾಯ. ಅನರ್ಹ ಶಾಸಕ ಆನಂದ್ ಸಿಂಗ್ ಅವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆನಂದ್ ಸಿಂಗ್ ಧೈರ್ಯ ಮಾಡಿದ್ದಕ್ಕೆ ಉಳಿದ ಶಾಸಕರು ಮುಂದೆ ಬಂದು ರಾಜೀನಾಮೆ ನೀಡಿದರು ಎಂದು ಸಿಎಂ ಯಡಿಯೂರಪ್ಪ ಸ್ಮರಿಸಿದ್ದಾರೆ. ಈ ವಿಚಾರವಾಗಿ ಸಭೆಯಲ್ಲಿ ಬಳ್ಳಾರಿ ಬಂಡಾಯ ಹೊತ್ತಿ ಉರಿಯಿತು. ಇತ್ತ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ಸೋಮಶೇಖರರೆಡ್ಡಿ, ಗವಿಯಪ್ಪ ಸಭೆಯಿಂದ ದೂರ ಉಳಿದಿದ್ದರು ಎಂದು ಮೂಲಗಳಿಂದ ಕೇಳಿ ಬಂದಿದೆ.

  • ಸುಪ್ರೀಂನಲ್ಲಿ ಬಿಸಿಯೇರಿಸಿದ ಅನರ್ಹರ ಕೇಸ್

    ಸುಪ್ರೀಂನಲ್ಲಿ ಬಿಸಿಯೇರಿಸಿದ ಅನರ್ಹರ ಕೇಸ್

    ನವದೆಹಲಿ: ಸುಪ್ರೀಂಕೋರ್ಟ್ ನಲ್ಲಿ ಅನರ್ಹರ ಕೇಸ್ ವಿಚಾರಣೆ ದೀರ್ಘ ವಾದದ ಬಳಿಕ ನಾಳೆಗೆ ಮುಂದೂಡಿಕೆಯಾಗಿದೆ.

    ಮೊದಲಿಗೆ ಕರ್ನಾಟಕ ಹೈಕೋರ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಲ್ಲಿಸಿರುವ ಅರ್ಜಿಗೆ ತಡೆ ನೀಡಿದ ನ್ಯಾಯಪೀಠ, ಅನರ್ಹತೆಯು ಉಪಚುನಾವಣೆಗಾ? ಅಥವಾ ವಿಧಾನಸಭೆ ಅವಧಿ ಮುಗಿಯುವವರೆಗಾ? ಅನ್ನೋದು ಪರಿಶೀಲಿಸಬೇಕಿದೆ ಅಂದರು. ಅನರ್ಹ ಶಾಸಕರ ಪರ ಮುಕುಲ್ ರೋಹ್ಟಗಿ ಮತ್ತು ಕಾಂಗ್ರೆಸ್ ಪರ ಕಪಿಲ್ ಸಿಬಲ್, ರಾಜೀವ್ ಧವನ್ ಅವರ ವಾದ-ಪ್ರತಿವಾದವನ್ನು ಕೋರ್ಟ್ ಇವತ್ತು ಆಲಿಸಿದ್ದು, ನಾಳೆ ಅಂದ್ರೆ ಗುರುವಾರ ಕಾಂಗ್ರೆಸ್ ಮತ್ತು ಚುನಾವಣಾ ಆಯೋಗದ ವಾದ ಮಂಡನೆಗೆ ಅವಕಾಶ ನೀಡಿದೆ.

    ಅನರ್ಹರ ಪರ ರೋಹ್ಟಗಿ ವಾದ ಏನು:
    * ರಾಜೀನಾಮೆ ನೀಡಿದ್ದರೂ ಶಾಸಕರು ಹಾಜರಾಗುವ ದಿನಾಂಕವನ್ನು ಸ್ಪೀಕರ್ ಮುಂದೂಡುತ್ತಲೇ ಬಂದರು. ಇವರ ಉದ್ದೇಶ, ಹಿನ್ನೆಲೆ ಏನು?
    * ಗನ್ ಪಾಯಿಂಟ್‍ನಲ್ಲಿ ರಾಜೀನಾಮೆ ಕೊಡಿಸಿದ್ರೆ ಅಂಗೀಕಾರ ಬೇಡ. ಶಾಸಕರು ಸ್ವಯಂ ಪ್ರೇರಿತವಾಗಿ ಸಂವಿಧಾನದ ಬದ್ಧವಾಗಿ ನೀಡಿದ್ದಾರೆ. ಆದರೂ ಅನರ್ಹ ಮಾಡಿರೋದು ಕಾನೂನು ಬಾಹಿರ.
    * ರಾಜೀನಾಮೆ, ಅನರ್ಹತೆ ಕುರಿತು ಸ್ಪೀಕರ್ ತಮ್ಮ ವ್ಯಾಪ್ತಿಯನ್ನು ಮೀರಿದ್ದಾರೆ.
    * ಉದ್ದೇಶಪೂರ್ವಕವಾಗಿ ಮತ್ತೊಮ್ಮೆ ರಾಜೀನಾಮೆ ನೀಡುವಂತೆ ಸ್ಪೀಕರ್ ಒತ್ತಾಯಿಸಿದ್ದಾರೆ. ಸುಪ್ರೀಂ ಆದೇಶದಂತೆ ಶಾಸಕರು ಪ್ರತ್ಯೇಕವಾಗಿ ಹಾಜರಾಗಿ ರಾಜೀನಾಮೆ ನೀಡಿದ್ದಾರೆ.
    * ರಾಜೀನಾಮೆ ಸ್ವೀಕಾರ ಆಗಬೇಕಿತ್ತು. ಅನರ್ಹತೆ ಸರಿಯಲ್ಲ. ಅನರ್ಹಗೊಳಿಸಿದರೂ ಅದು ವಿಧಾನಸಭೆಯ ಅವಧಿ ಮುಗಿಯುವ ತನಕವಲ್ಲ.

    ಕಾಂಗ್ರೆಸ್ ವಾದ:
    * ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು
    * ಕಾಂಗ್ರೆಸ್ ಪರ ವಕೀಲರಾದ ಕಪಿಲ್ ಸಿಬಲ್, ರಾಜೀವ್ ಧವನ್ ವಾದ ಒಪ್ಪದ ನ್ಯಾಯಪೀಠ.
    * ಹೈಕೋರ್ಟ್‍ಗೆ ನೀವು ಹೋಗಿದ್ದೀರಾ..? ಅಂತ ಸಿಬಲ್‍ಗೆ ನ್ಯಾಯಪೀಠದ ಪ್ರಶ್ನೆ.
    * ಇಲ್ಲ, ನಾವು ಮಾಡೆಲ್ ಆಫ್ ಕಂಡಕ್ಟ್ ಜಾರಿಯಾಗದ್ದನ್ನು ಪ್ರಶ್ನಿಸಿದ್ದೇವೆ ಎಂದ ಕಪಿಲ್ ಸಿಬಲ್.
    * ಮೊದಲು ವಾದ ಮಂಡನೆಯಾಗಲಿ, ಆಮೇಲೆ ನೋಡೋಣ ಎಂದ ನ್ಯಾಯಪೀಠ.

  • ಗೌರಿಬಿದನೂರು ಕ್ಷೇತ್ರಕ್ಕೆ ಕೈ ಹಾಕಿದ್ರೆ ಕೈ ಕತ್ತರಿಸ್ತೇನೆ- ಶಿವಶಂಕರ ರೆಡ್ಡಿ

    ಗೌರಿಬಿದನೂರು ಕ್ಷೇತ್ರಕ್ಕೆ ಕೈ ಹಾಕಿದ್ರೆ ಕೈ ಕತ್ತರಿಸ್ತೇನೆ- ಶಿವಶಂಕರ ರೆಡ್ಡಿ

    ಚಿಕ್ಕಬಳ್ಳಾಪುರ: ಗೌರಿಬಿದನೂರು ವಿಧಾನಸಭಾ ಕ್ಷೇತ್ರಕ್ಕೆ ಕೈ ಹಾಕಿದರೆ ಕೈ ಕತ್ತರಿಸುತ್ತೇನೆ ಎಂದು ಅನರ್ಹ ಶಾಸಕ ಸುಧಾಕರ್ ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎಚ್ ಶಿವಶಂಕರ ರೆಡ್ಡಿ ವಾರ್ನಿಂಗ್ ನೀಡಿದ್ದಾರೆ.

    ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಗಂಗಸಂದ್ರ ಗ್ರಾಮದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಶಿವಶಂಕರ ರೆಡ್ಡಿ, ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ತಂಟೆಗೆ ಬಂದರೆ ಕೈ ಕತ್ತರಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಚಿಕ್ಕಬಳ್ಳಾಪುರದ ಸುಧಾಕರ್ ಅವರು ಮಂಚೇನಹಳ್ಳಿ ತಾಲೂಕು ಮಾಡುವುದಾಗಿ ಹೇಳಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ತೊಂಡೆಬಾವಿ ಹೋಬಳಿಯನ್ನ ಮಂಚೇನಹಳ್ಳಿಗೆ ಸೇರಿಸೋಕೆ ಪ್ರಯತ್ನ ಮಾಡಿದ್ದಾರೆ. ಅದಲ್ಲದೆ ಕೆಲ ಗ್ರಾಮಗಳನ್ನ ನಮ್ಮವರೇ ಕುಮ್ಮಕ್ಕು ನೀಡಿ ಮಂಚೇನಹಳ್ಳಿಗೆ ಸೇರಿಸೋಕೆ ಸುಧಾಕರ್ ಜೊತೆ ಕೈ ಜೋಡಿಸಿದ್ದಾರೆ. ಆದರೆ ಇದನ್ನು ನಾನು ಸಹಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.

  • ಬೈಎಲೆಕ್ಷನ್‍ಗೆ ಫ್ರೀಸೈಟ್ ಆಫರ್- ಸಿಎಂ ಸಮ್ಮುಖದಲ್ಲೇ ಕೊಡ್ತಾರಂತೆ ಸುಧಾಕರ್

    ಬೈಎಲೆಕ್ಷನ್‍ಗೆ ಫ್ರೀಸೈಟ್ ಆಫರ್- ಸಿಎಂ ಸಮ್ಮುಖದಲ್ಲೇ ಕೊಡ್ತಾರಂತೆ ಸುಧಾಕರ್

    – 5 ಸಾವಿರ ಮಂದಿಯ ಡೀಟೆಲ್ಸ್ ಕಲೆಕ್ಟ್

    ಚಿಕ್ಕಬಳ್ಳಾಪುರ: ದಸರಾ-ದೀಪಾವಳಿ ಹಬ್ಬ ಅಂದ್ರೆ ಸಾಕು ಎಲ್ಲಿಲ್ಲದ ಆಫರ್ ಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತವೆ. ಅಂತೆಯೇ ಈ ಬಾರಿಯ ದಸರಾ, ದೀಪಾವಳಿ ಹಬ್ಬದ ಸಮಯದ ಉಪಚುನಾವಣೆಯಲ್ಲೂ ಭರ್ಜರಿ ಆಫರ್ ಗಳ ಸುರಿಮಳೆಯನ್ನೇ ರಾಜಕಾರಣಿಗಳು ಸುರಿಸಿದ್ದಾರೆ.

    ಹೌದು. ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಣ ಹೆಂಡ, ಸೀರೆ ಹಂಚೋದು ಕಾಮನ್ ಆಗಿತ್ತು. ಆದರೆ ಇದೀಗ ಚಿಕ್ಕಬಳ್ಳಾಪುರ ಉಪಚುನಾವಣೆಗೆ ಸೈಟ್ ಆಮಿಷ ಒಡ್ಡಿದ್ದಾರೆ. 15 ದಿನದಲ್ಲೇ 5,000 ಮಂದಿಗೆ ಸರ್ಕಾರದಿಂದ ಉಚಿತ ನಿವೇಶನ ನೀಡೋದಾಗಿ ಅನರ್ಹ ಶಾಸಕ ಸುಧಾಕರ್ ಪ್ರಚಾರ ನಡೆಸಿದ್ದಾರೆ. ಈಗಾಗಲೇ ಚಿಕ್ಕಬಳ್ಳಾಪುರ ನಗರದ ವಸತಿರಹಿತ 5,000 ಮತದಾರರಿಂದ ದಾಖಲೆ ಸಂಗ್ರಹಿಸಿದ್ದಾರೆ. ಈ ತಿಂಗಳ ಅಂತ್ಯದೊಳಗೆ ಸಿಎಂ ಯಡಿಯೂರಪ್ಪ ಜಿಲ್ಲೆಗೆ ಆಗಮಿಸಲಿದ್ದು, ಅಂದೇ 5,000 ಮಂದಿಗೆ ಉಚಿತ ನಿವೇಶನಗಳ ಹಂಚಿಕೆ ಮಾಡೋದಾಗಿ ಭರವಸೆ ನೀಡಿದ್ದಾರೆ.

    ಸುಧಾಕರ್ ಅವರ ಈ ಆಫರ್ ಗೆ ಗೌರಿಬಿದನೂರು ಶಾಸಕ, ಮಾಜಿ ಸಚಿವ ಶಿವಶಂಕರರೆಡ್ಡಿ ಕಿಡಿಕಾರಿದ್ದಾರೆ. ಗಿಮಿಕ್ ಮಾಡಿ ಜನರಿಗೆ ಟೋಪಿ ಹಾಕೋ ಕೆಲಸ ಸುಧಾಕರ್ ಗೆ ಕರಗತವಾಗಿದೆ. ಸುಧಾಕರ್ ಮರುಳು ಮಾತುಗಳನ್ನ ಜನರು ನಂಬಬಾರದು ಅಂದಿದ್ದಾರೆ.

    ಒಟ್ಟಿನಲ್ಲಿ ಉಪಚುನಾವಣೆಯ ಹೊಸ್ತಿಲಲ್ಲಿ ಸುಧಾಕರ್ ಮತದಾರರಿಗೆ ಭರ್ಜರಿ ಆಫರ್ಸ್ ಕೊಟ್ಟಿದ್ದಾರೆ. ಆದರೆ ಇದು ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಆರೋಪ-ಪ್ರತ್ಯಾರೋಪಗಳು ಜೋರಾಗಿದೆ.

  • ಇವ್ರ ಕೆಟ್ಟ ರಾಜಕಾರಣಕ್ಕೆ ನಾನು ಭಾಗಿಯಾಗಲ್ಲ: ಎಚ್‍ಡಿಡಿ

    ಇವ್ರ ಕೆಟ್ಟ ರಾಜಕಾರಣಕ್ಕೆ ನಾನು ಭಾಗಿಯಾಗಲ್ಲ: ಎಚ್‍ಡಿಡಿ

    – ಜವರಾಯಿಗೌಡ ಕಾಂಗ್ರೆಸ್‍ಗೆ ಹೋಗಲ್ಲ

    ಬೆಂಗಳೂರು: ಮಾಜಿ ಸಚಿವ ಸಾರಾ ಮಹೇಶ್ ಹಾಗೂ ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರ ಕೆಟ್ಟ ರಾಜಕಾರಣಕ್ಕೆ ನಾನು ಭಾಗಿಯಾಗಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅಸಮಾಧಾನ ಹೊರ ಹಾಕಿದ್ದಾರೆ.

    ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಚ್.ವಿಶ್ವನಾಥ್ ಮತ್ತು ಸಾರಾ ಮಹೇಶ್ ಮಾತುಗಳನ್ನು ರಾಜ್ಯದ ಜನ ಕೇಳಿದ್ದಾರೆ. ಸಾರಾ ಮಹೇಶ್ ರಾಜೀನಾಮೆ ನೀಡಿದ್ದು ಸತ್ಯ. ಅವರು ಸ್ಪೀಕರ್ ಸೆಕ್ರೆಟರಿಗೆ ರಾಜೀನಾಮೆ ಪತ್ರ ಕೊಟ್ಟಿದ್ದಾರೆ. ಆದರೆ ಸ್ಪೀಕರ್ ಈ ಪಂಥಾಹ್ವಾನ ಯಾಕೆ ಅಂತ ಹೇಳಿದ್ದಾರೆ. ಹೀಗಾಗಿ ರಾಜೀನಾಮೆ ವಾಪಸ್ ಪಡೆಯುತ್ತೇನೆ ಅಂತ ಸಾರಾ ಮಹೇಶ್ ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ವಿಶ್ವನಾಥ್, ಮಹೇಶ್ ವಾರ್- ನಾಳೆ ಬೆಳಗ್ಗೆ 9ಕ್ಕೆ ಚಾಮುಂಡಿ ಬೆಟ್ಟದಲ್ಲಿ ಆಣೆ ಪ್ರಮಾಣ

    ಒಬ್ಬರು ಚಾಮುಂಡಿಬೆಟ್ಟಕ್ಕೆ ಬನ್ನಿ ಅಂತ ಹೇಳುತ್ತಾರೆ. ಇನ್ನೊಬ್ಬರು ಅದರ ಅವಶ್ಯಕತೆ ಇಲ್ಲ ಎನ್ನುತ್ತಾರೆ. ನಾನು ಎಚ್.ವಿಶ್ವನಾಥ್ ಬಗ್ಗೆ ಮಾತನಾಡುವುದಿಲ್ಲ. ಆಣೆ-ಸತ್ಯ-ಪ್ರಮಾಣ ಇವೆಲ್ಲ ಯಾಕೆ ಬೇಕು? ಆವೇಶದಿಂದ ಎಲ್ಲರೂ ಮಾತನಾಡುತ್ತಾರೆ. ಇದರಿಂದ ಏನು ಪ್ರಯೋಜನವಾಗುತ್ತದೆ? ಸಾರಾ ಮಹೇಶ್ ಜೊತೆ ಮಾತನಾಡಿದ್ದೇನೆ. ಬುಧವಾರ ಅವರು ರಾಜೀನಾಮೆ ವಾಪಸ್ ಪಡೆಯುತ್ತಾರೆ ಎಂದು ಸ್ಪಷ್ಟನೆ ನೀಡಿದರು.

    ವಿಧಾನ ಪರಿಷತ್‍ನ 4 ಪದವೀಧರ ಕ್ಷೇತ್ರಗಳ ಚುನಾವಣೆ ಜೂನ್‍ನಲ್ಲಿ ನಡೆಯುತ್ತದೆ. ನಮ್ಮ ಅಭ್ಯರ್ಥಿಗಳ ಸಭೆಯನ್ನು 18ರಂದು ಕರೆದಿದ್ದೇನೆ. ಅಭ್ಯರ್ಥಿಗಳು, ಮಾಜಿ, ಹಾಲಿ ಶಾಕರಿಗೆ ಪತ್ರ ಬರೆದು, ಸಭೆಗೆ ಆಹ್ವಾನ ನೀಡಿದ್ದೇನೆ. ಎಲ್ಲರ ಜೊತೆಗೆ ಸಮಾಲೋಚನೆ ನಡೆಸಿ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದರು.

    ಪಕ್ಷದ ಮುಖಂಡ ಜವರಾಯಿಗೌಡ ಕಾಂಗ್ರೆಸ್‍ಗೆ ಹೋಗುವುದಿಲ್ಲ. ಎಲ್ಲಾ ಕಡೆ ತಪ್ಪು ಸುದ್ದಿ ಹರಡಿಸಲಾಗುತ್ತದೆ. ಕ್ಷೇತ್ರದ ಪಟ್ಟಭದ್ರ ಹಿತಾಸಕ್ತಿಗಳು ಸುಮ್ಮನೆ ಈ ಸುದ್ದಿ ಹರಡಿಸುತ್ತಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಈ ಬಾರಿ ಕಾರ್ಯಕರ್ತರು ಅವರಿಗಾಗಿಯೇ ದುಡಿಯುತ್ತಾರೆ ಎಂದು ಸ್ಪಷ್ಟನೆ ನೀಡಿದರು.

    ಅನರ್ಹ ಶಾಸಕರ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ತೀರ್ಪು ಬಂದ ಮೇಲೆ 17 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿ ಹಾಕುತ್ತೇವೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪಕ್ಷದ ಮುಖಂಡರ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

    ಮೈಸೂರು ಭಾಗದಲ್ಲಿ ಮಾತ್ರ ಜೆಡಿಎಸ್ ಸ್ಪರ್ಧೆ ಮಾಡುತ್ತೆ ಅಂತ ಕೆಲವರು ಹೇಳುತ್ತಿದ್ದಾರೆ. ಆದರೆ ಎಲ್ಲಾ ಕ್ಷೇತ್ರದಲ್ಲಿ ನಾವು ಸ್ಪರ್ಧೆ ಮಾಡುತ್ತೇವೆ. ಯುವಕರು ನಾವು ಸ್ಪರ್ಧೆ ಮಾಡುತ್ತೇವೆ ಅಂತ ಮುಂದೆ ಬರುತ್ತಿದ್ದಾರೆ. ಹೀಗಾಗಿ 17 ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕುತ್ತೇವೆ ಎಂದು ಹೇಳಿದರು.

  • ಅನರ್ಹರ ಸ್ಪರ್ಧೆಗೆ ಅಡ್ಡಿಯಾದವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ

    ಅನರ್ಹರ ಸ್ಪರ್ಧೆಗೆ ಅಡ್ಡಿಯಾದವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ

    – ಅನರ್ಹರು ಸ್ಪರ್ಧಿಸುವುದು ಬಹುತೇಕ ಖಚಿತ
    – ಬಂಡಾಯ ಶಮನಗೊಳಿಸಿದ ಬಿಎಸ್‍ವೈ

    ಬೆಂಗಳೂರು: ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಅನರ್ಹರ ಸ್ಪರ್ಧೆಗೆ ಅಡ್ಡಿಯಾಗಿದ್ದ ನಾಯಕರಿಗೆ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನವನ್ನು ಯಡಿಯೂರಪ್ಪ ನೀಡಿದ್ದಾರೆ.

    ಹೌದು. ಅತೃಪ್ತರ ವಿರುದ್ಧ ಅಸಮಾಧಾನ ಹೊರ ಹಾಕಿ ಟಿಕೆಟ್ ಕೇಳಿದ್ದ 8 ಮಂದಿಗೆ ನಿಗಮ ಮಂಡಳಿಗಳಿಗೆ ಅಧ್ಯಕ್ಷ/ ಉಪಾಧ್ಯಕ್ಷ ಸ್ಥಾನವನ್ನು ಸ್ಥಾನವನ್ನು ನೀಡುವ ಮೂಲಕ ಯಡಿಯೂರಪ್ಪ ಬಂಡಾಯ ಶಮನ ಮಾಡಿದ್ದಾರೆ.

    ರಾಜ್ಯ ಸಚಿವ ದರ್ಜೆಯ ಸ್ಥಾನಮಾನದೊಂದಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವಿವಿಧ ನಿಗಮ/ ಮಂಡಳಿಗಳ ಅಧ್ಯಕ್ಷ/ ಉಪಾಧ್ಯಕ್ಷ ಸ್ಥಾನಕ್ಕೆ 8 ಮಂದಿಯನ್ನು ನೇಮಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಆದೇಶ ಪ್ರಕಟಿಸಿದ್ದಾರೆ. ಒಂದು ವೇಳೆ ಅನರ್ಹರ ವಿರುದ್ಧ ಸುಪ್ರೀಂ ತೀರ್ಪು ಪ್ರಕಟಿಸಿದರೆ ಅನರ್ಹರು ಸೂಚಿಸುವ ವ್ಯಕ್ತಿಗಳಿಗೆ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆಯಿದೆ.

    ಯಾರಿಗೆ ಎಲ್ಲಿ ಹುದ್ದೆ?
    ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ವಿರುದ್ಧ ರೆಬೆಲ್ ಆಗಿದ್ದ ಶರತ್ ಬಚ್ಚೇಗೌಡಗೆ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ಕೆ.ಆರ್.ಪುರಂದಲ್ಲಿ ಬೈರತಿ ಬಸವರಾಜ್ ಗೆ ಟಿಕೆಟ್ ವಿರೋಧಿಸಿದ್ದ ನಂದೀಶ್ ರೆಡ್ಡಿಗೆ ಬೆಂಗಳೂರು ಮಹಾನಗರ ಪಾಲಿಕೆ(ಬಿಎಂಟಿಸಿ) ಸಂಸ್ಥೆಯಲ್ಲಿ ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ.

    ವಿಜಯನಗರ ದಲ್ಲಿ ಆನಂದ ಸಿಂಗ್ ಬದಲು ತಮಗೆ ಟಿಕೆಟ್ ಬೇಕು ಎಂದಿದ್ದ ಹೆಚ್.ಆರ್.ಗವಿಯಪ್ಪ ಅವರನ್ನು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಮಾಡಲಾಗಿದೆ.

    ಗೋಕಾಕ್ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಬಯಸಿದ್ದ ಅಶೋಕ್ ನಿಂಗಯ್ಯಸ್ವಾಮಿ ಪೂಜಾರಿ ಅವರಿಗೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಸಿಕ್ಕಿದರೆ, ಕಾಗವಾಡದಲ್ಲಿ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಸ್ಪರ್ಧೆಗೆ ವಿರೋಧಿಸಿದ್ದ ಭರಮಗೌಡ(ರಾಜು) ಕಾಗೆಗೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮತ್ತು ಮಲಪ್ರಭಾ-ಘಟಪ್ರಭಾ ಯೋಜನೆ ಅಧ್ಯಕ್ಷ ಸ್ಥಾನ ನೀಡಲಾಗಿದೆ.

    ಬಿಸಿ ಪಾಟೀಲ್ ಪ್ರತಿನಿಧಿಸುವ ಹಿರೇಕೆರೂರು ಕ್ಷೇತ್ರದ ಟಿಕೆಟ್ ಕೇಳಿದ್ದ ಯು ಬಿ ಬಣಕಾರ್ ಅವರಿಗೆ ರಾಜ್ಯ ಕೃಷಿ ಉತ್ಪನ್ನ ಮತ್ತು ಸಂಸ್ಕರಣಾ ನಿಗಮದ ಅಧ್ಯಕ್ಷ ಸ್ಥಾನ ಸಿಕ್ಕಿದ್ದರೆ, ಯಲ್ಲಾಪುರ ಟಿಕೆಟ್ ಕೇಳಿದ್ದ ವಿಎಸ್ ಪಾಟೀಲ್ ಅವರನ್ನು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ.

  • ಕ್ಷೇತ್ರದ ಮತದಾರರಿಗೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ದಸರಾ ಗಿಫ್ಟ್

    ಕ್ಷೇತ್ರದ ಮತದಾರರಿಗೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ದಸರಾ ಗಿಫ್ಟ್

    ಬೆಂಗಳೂರು: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮತದಾರರಿಗೆ ದಸರಾ ಗಿಫ್ಟ್ ನೀಡಿದ್ದಾರೆ.

    ಇಂದು ತಮ್ಮ ಹುಟ್ಟುಹಬ್ಬ ಆಚರಣೆ ಹೆಸರಿನಲ್ಲಿ ಹೊಸಕೋಟೆ ತಾಲೂಕಿನ ತಾವರೆಕರೆ ಮತ್ತು ಶಿವನಾಪುರದಲ್ಲಿ ಗ್ರಾಮದಲ್ಲಿ ಸೀರೆ, ಕಂಬಳಿ ವಿತರಣೆ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಬಾಡೂಟದ ವ್ಯವಸ್ಥೆಯನ್ನು ಮಾಡಿದ್ದರು. ಇನ್ನು ಉಚಿತವಾಗಿ ಸಿಗುತ್ತಿದ್ದ ಕಂಬಳಿ ಮತ್ತು ಸೀರೆ ಪಡೆಯಲು ಜನರು ಮುಗಿಬಿದ್ದಿದ್ದರು. ಉಪ ಚುನಾವಣೆ ಸಮೀಪದ ಬೆನ್ನಲ್ಲೇ ಭರ್ಜರಿ ಉಡುಗೊರೆಗಳನ್ನು ನೀಡುವ ಮೂಲಕ ಮತದಾರರನ್ನು ಅನರ್ಹ ಶಾಸಕರು ಸೆಳೆಯುವ ಪ್ರಯತ್ನದಲ್ಲಿದ್ದಾರೆ.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಎಂಟಿಬಿ ನಾಗರಾಜ್, ನಾನು ಕ್ಷೇತ್ರದ ಮತದಾರರಿಗೆ ಯಾವುದೇ ಅಸೆ ಆಮಿಷಗಳನ್ನು ನೀಡಿಲ್ಲ. ಕ್ಷೇತ್ರದ ಜನರಿಗೆ ಎಂಟಿಬಿ ನಾಗರಾಜ್ ಅಂದ್ರೆ ಏನು ಅಂತಾ ಗೊತ್ತಿದೆ. ಇಂದು ಅವರೇ ಒಟ್ಟಾಗಿ ಸೇರಿ ಹುಟ್ಟುಹಬ್ಬ ಆಚರಿಸಿದರು. ನನ್ನ ಅಭಿವೃದ್ಧಿ ಕೆಲಸಗಳನ್ನು ಜನರು ನೋಡಿದ್ದಾರೆ ಎಂದು ತಿಳಿಸಿದರು.

    ಅನರ್ಹ ಶಾಸಕರು ಉಪ ಚುನಾವಣೆಗೆ ಸಿದ್ಧತೆ ನಡೆಸಿಕೊಂಡಿದ್ದು, ಕ್ಷೇತ್ರದಲ್ಲಿ ಸಾಲು ಸಾಲು ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈ ಹಿಂದೆ ಚಿಕ್ಕಬಳ್ಳಾಪುರರ ಅನರ್ಹ ಶಾಸಕ ಕೆ.ಸುಧಾಕರ್ ಸಹ ಇದೇ ರೀತಿ ಉಡುಗೊರೆಗಳನ್ನು ನೀಡಿದ್ದರು.

  • “ಊರು ಬಿಟ್ಟು ಹೋದವ್ರು ಈಗ್ಯಾಕ ಬಂದ್ರಿ, ಟಿಕೆಟ್ ಕೊಟ್ರು ನೀವ್ ಗೆಲ್ಲಲ್ಲ ಸುಮ್ನೆ ಹೋಗಿ”: ಶ್ರೀಮಂತ್ ಪಾಟೀಲ್‍ಗೆ ಕ್ಲಾಸ್

    “ಊರು ಬಿಟ್ಟು ಹೋದವ್ರು ಈಗ್ಯಾಕ ಬಂದ್ರಿ, ಟಿಕೆಟ್ ಕೊಟ್ರು ನೀವ್ ಗೆಲ್ಲಲ್ಲ ಸುಮ್ನೆ ಹೋಗಿ”: ಶ್ರೀಮಂತ್ ಪಾಟೀಲ್‍ಗೆ ಕ್ಲಾಸ್

    ಚಿಕ್ಕೋಡಿ (ಬೆಳಗಾವಿ): ಸಿಎಂ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅನರ್ಹ ಶಾಸಕ ಶ್ರೀಮಂತ್ ಪಾಟೀಲ್ ಅವರಿಗೆ ರೈತರು ಘೇರಾವ್ ಹಾಕಿದ ಪ್ರಸಂಗ ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿ ನಡೆದಿದೆ.

    ‘ಆಗ ಊರು ಬಿಟ್ಟು ಹೋಗಿ ಇಗ್ಯಾಕ ನೀವು ಬಂದಿದ್ದಿರಿ? ವಿಶ್ವಾವಿಟ್ಟು ನಿಮ್ಮನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಿದ್ವಿ ಸ್ವಾಮಿ. ಆದ್ರೆ ನೀವು ಮಾಡಿದ್ದು ಏನು? ನಮಗೆ ಮೋಸ ಮಾಡಿ ಹೋಗಿದ್ರಿ. ಮತ್ಯಾಕೆ ಇಲ್ಲಿಗೆ ಬಂದ್ರಿ, ಮೊದ್ಲು ಇಲ್ಲಿಂದ ಹೋಗ್ರಿ’ ಎಂದು ನೆರೆ ಸಂತ್ರಸ್ತರು ಹಾಗೂ ರೈತರು ಶ್ರೀಮಂತ ಪಾಟೀಲ್ ಅವರನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಈಗ ಮುಂಬೈ ಹಾರ್ಟ್ ಅಟ್ಯಾಕ್ ಕೇಸ್ – ಕೋರ್ಟಿನಲ್ಲಿ ಸಿಬಲ್ ವ್ಯಂಗ್ಯ

    ನಿಮ್ಮ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಸರಿಯಾಗಿ ಹಣ ಪಾವತಿಸಿಲ್ಲ. ಸಾಕಷ್ಟು ರೈತರ ಬಿಲ್ ಬಾಕಿ ಇದೆ. ಉಪ ಚುನಾವಣೆಯ ಟಿಕೆಟ್ ಕೊಟ್ಟರೂ ನೀವು ಆರಿಸಿ ಬರಲ್ಲ ಎಂದು ಅಸಮಾಧಾನ ಹೊರ ಹಾಕಿದರು.

    ದರೂರು ಗ್ರಾಮಕ್ಕೆ ಆಗಮಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ, ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸಿಎಂಗೆ ಸಾಥ್ ನೀಡಿದರು. ಬಳಿಕ ನಡೆದ ಪರಿಹಾರ ವಿತರಣೆ ಹಾಗೂ ಅಹವಾಲು ಸ್ವೀಕಾರ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆಗೆ ಶ್ರೀಮಂತ್ ಪಾಟೀಲ್ ವೇದಿಕೆ ಹಂಚಿಕೊಂಡರು.

  • ಕುರುಬ ಸಮುದಾಯಕ್ಕೆ ಸಿದ್ದು ಕೊಡುಗೆ ಶೂನ್ಯ- ರಾಮಲಿಂಗಾರೆಡ್ಡಿ ನಂಬಿಸಿ ಮೋಸ ಮಾಡಿದ್ರು: ಎಂಟಿಬಿ

    ಕುರುಬ ಸಮುದಾಯಕ್ಕೆ ಸಿದ್ದು ಕೊಡುಗೆ ಶೂನ್ಯ- ರಾಮಲಿಂಗಾರೆಡ್ಡಿ ನಂಬಿಸಿ ಮೋಸ ಮಾಡಿದ್ರು: ಎಂಟಿಬಿ

    ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಸರ್ಕಾರದ ಉರುಳಲು ಕಾರಣರಾಗಿದ್ದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ವಿರುದ್ಧ  ವಾಗ್ದಾಳಿ ಮಾಡಿದ್ದಾರೆ.

    ಕ್ಷೇತ್ರದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಎಂಟಿಬಿ ನಾಗರಾಜ್ ಅವರು, ರಾಮಲಿಂಗಾರೆಡ್ಡಿ ಅವರು ನಮ್ಮನ್ನು ನಂಬಿಸಿ ಮೋಸ ಮಾಡಿದರು ಎಂದು ಆರೋಪಿಸಿದರು. ನಾವು ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಲ್ಲ ಎಂದು ಹೇಳಿ ಮತ್ತೆ ಕಾಂಗ್ರೆಸ್ ಸೇರುವುದಿಲ್ಲ ಎಂಬುವುದನ್ನು ಸ್ಪಷ್ಟ ಪಡಿಸಿದರು.

    ನಮಗೆ ಬಿಜೆಪಿ ನಾಯಕರು ಮೊದಲೇ ರಾಮಲಿಂಗಾರೆಡ್ಡಿ ಅವರನ್ನು ನಂಬಬೇಡಿ, ಆತ ಅಲ್ಲೊಂದು, ಇಲ್ಲೊಂದು ಕಾಲಿಟ್ಟಿದ್ದಾರೆ ಎಂದು ಹೇಳಿದ್ದರು. ಆದರೆ ನಾವು ಅವರ ಮಾತನ್ನು ಕೇಳಿಸಿಕೊಳ್ಳದೆ ಇವರನ್ನು ನಂಬಿದ್ದೇವು. ಅಲ್ಲದೇ ಮುಂಬೈಗೆ ಬನ್ನಿ ಎಂದು ಕರೆದರೆ, ಇಲ್ಲ ನೀವು ಹೋಗಿ ನಾನು ಇಲ್ಲೇ ಇರುತ್ತೇನೆ. ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದಿದ್ದರು. ಆದರೆ ಕೊನೆಗೆ ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಮಣಿದು ರಾಜೀನಾಮೆ ಪಡೆದೆ ಎಂದು ಹೇಳಿದರು. ಆದರೆ ಅದಕ್ಕೂ ಮುನ್ನ ಸರ್ಕಾರ ತೆಗೆಯುವುದೇ ನನ್ನ ಉದ್ದೇಶ ಎಂದು ರಾಮಲಿಂಗಾರೆಡ್ಡಿ ಹೇಳಿದ್ದರು. ರಾಜೀನಾಮೆ ನೀಡುವ ಮುನ್ನ 3 ದಿನ ನಿರಂತರವಾಗಿ ನಾನು ಅವರೊಂದಿಗೆ ಮಾತನಾಡಿದ್ದೆ ಎಂದು ಅಂದಿನ ಬೆಳವಣಿಗೆಗಳನ್ನು ಎಂಟಿಬಿ ವಿವರಿಸಿದರು.

    ಇದೇ ವೇಳೆ ತಮ್ಮ ರಾಜಕೀಯ ಗುರು ಸಿದ್ದರಾಮಯ್ಯ ಅವರ ವಿರುದ್ಧವೂ ಗುಡುಗಿದ ಎಂಟಿಬಿ, ಸಿದ್ದರಾಮಯ್ಯ ಅವರ ಹಿಂದೆ ಇಡೀ ಕುರುಬ ಸಮಾಜ ನಿಂತಿತ್ತು. ಆದರೆ ಕುರುಬ ಸಮಾಜಕ್ಕೆ ಸಿದ್ದರಾಮಯ್ಯ ಅವರ ಕೊಡುಗೆ ಶೂನ್ಯ. ಮುಖ್ಯಮಂತ್ರಿಯಾಗಿದ್ದರು ಸಮಾಜಕ್ಕೆ ಒಂದು ಮೆಡಿಕಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಮಾಡಲಿಲ್ಲ. ನನಗೆ ಟಿಕೆಟ್ ಕೊಟ್ಟಿದ್ದು ಸಿದ್ದರಾಮಯ್ಯ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅಂದು ನನಗೆ ಟಿಕೆಟ್ ಕೊಟ್ಟಿದ್ದು ಎಸ್.ಎಂ ಕೃಷ್ಣ ಅವರು. ಕಾಂಗ್ರೆಸ್ ಪಕ್ಷದಲ್ಲಿ ನನಗೆ ಟಿಕೆಟ್ ಸಿಕ್ಕ ಸಂದರ್ಭದಲ್ಲಿ ಸಿದ್ದರಾಮಯ್ಯ ಜೆಡಿಎಸ್ ನಲ್ಲಿದ್ದರು. ಆ ಪಕ್ಷದಲ್ಲಿ ಇದ್ದುಕೊಂಡು ಕಾಂಗ್ರೆಸ್ ಪಕ್ಷದಿಂದ ನನಗೆ ಹೇಗೆ ಟಿಕೆಟ್ ಕೊಟ್ಟಿದ್ದೀರಿ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

    ಕಾಂಗ್ರೆಸ್ಸಿನಲ್ಲಿ ಒಳಜಗಳ ಹೆಚ್ಚಾಗಿದ್ದು, ಮೂಲ ಕಾಂಗ್ರೆಸಿಗರು ನಾವು, ವಲಸೆ ಬಂದವರು ಅವರು ಎಂದು ಜಗಳ ನಡೆಯುತ್ತಿದೆ. ಕೆಲವರು ಸಿದ್ದರಾಮಯ್ಯ ಇರಲಿ ಎಂದರೆ ಮತ್ತೆ ಕೆಲ ನಾಯಕರು ಅವರನ್ನು ತೆಗೆಯಬೇಕು ಎನ್ನುತ್ತಾರೆ. ಇವುಗಳನ್ನು ನೀವು ದಿನ ಮಾಧ್ಯಮಗಳಲ್ಲಿ ವೀಕ್ಷಿಸುತ್ತಿದ್ದೀರಿ. ದೇಶದ ರಾಜಕಾರಣದಲ್ಲೂ ಕಾಂಗ್ರೆಸ್‍ನಲ್ಲಿ ಇದೇ ಜಗಳ ನಡೆಯುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಇಲ್ಲ. ಇನ್ನೂ ಮುಂದೇ ಬರುವುದಿಲ್ಲ. ಮೋದಿ ಇರುವವರೆಗೂ ಅವರದ್ದೇ ಆಡಳಿತ ಮುಂದುವರಿಯುತ್ತದೆ. ನಾನು ರಾಜೀನಾಮೆ ನೀಡಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿಯ ಯೋಜನೆಗಳನ್ನು ನಡೆಸಲು ಸಾಧ್ಯವಾಗುತ್ತಿರಲಿಲ್ಲ ಎಂಬ ಕಾರಣಕ್ಕೆ ಅಷ್ಟೇ ಎಂದು ಕ್ಷೇತ್ರದ ಜನರಿಗೆ ಸ್ಪಷ್ಟನೆ ನೀಡಿದರು.