ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಧೀಶ ಎನ್.ವಿ.ರಮಣ ಪೀಠ ಪ್ರಕರಣದ ವಾದವನ್ನು ಆಲಿಸಿ ತೀರ್ಪನ್ನು ಕಾಯ್ದರಿಸಿತ್ತು. ಈ ನಡುವೆ ಕಾಂಗ್ರೆಸ್ ಸಿಎಂ ಬಿ.ಎಸ್.ಯಡಿಯೂರಪ್ಪನವರ ಹುಬ್ಬಳ್ಳಿಯ ಆಡಿಯೋವನ್ನು ಸಾಕ್ಷ್ಯವಾಗಿ ಪರಿಗಣಿಸಬೇಕೆಂದು ಮನವಿ ಮಾಡಿಕೊಂಡಿತ್ತು. ಕಾಂಗ್ರೆಸ್ ಪರ ವಕೀಲ ವಾದವನ್ನು ಆಲಿಸಿದ ಪೀಠ ತೀರ್ಪು ನೀಡುವ ಸಂದರ್ಭದಲ್ಲಿ ಆಡಿಯೋವನ್ನ ಸಾಕ್ಷ್ಯವನ್ನಾಗಿ ಪರಿಗಣಿಸಲಾಗುತ್ತದೆ ಎಂದು ಸೂಚಿಸಿತ್ತು.
ತೀರ್ಪು ವಿಳಂಬವಾದ ಹಿನ್ನೆಲೆಯಲ್ಲಿ ಅನರ್ಹ ಶಾಸಕರ ಪರ ವಕೀಲರಾದ ಮುಕುಲ್ ರೊಹ್ಟಗಿ, ಕರ್ನಾಟಕದಲ್ಲಿ ಘೋಷಣೆಯಾಗಿರುವ ಉಪಚುನಾವಣೆಯನ್ನು ಮುಂದೂಡುವಂತೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ರೊಹ್ಟಗಿಯವರ ವಾದ ಆಲಿಸಿದ್ದ ನ್ಯಾಯಾಲಯ, ಅನರ್ಹ ಶಾಸಕರಿಗಾಗಿ ಚುನಾವಣೆ ಮುಂದೂಡಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಕೊಪ್ಪಳ: ಬಿಜೆಪಿಯಲ್ಲಿ ಒಂದು ಸಿದ್ದಾಂತವಿದೆ, ಯಾರು ಅವರ ಪಕ್ಷಕ್ಕೆ ಸಹಾಯ ಮಾಡಿರುತ್ತಾರೋ ಅವರನ್ನು ಕೊಲ್ಲುವ ಕೆಲಸ ಬಿಜೆಪಿ ಮಾಡುತ್ತದೆ ಎಂದು ಕಮಲದ ವಿರುದ್ಧ ಮಾಜಿ ಸಚಿವ ಶಿವರಾಜ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.
ಮಹತ್ಮಾ ಗಾಂಧಿಜಿಯ 150ನೇ ಜಯಂತಿ ಆಚರಣೆ ಅಂಗವಾಗಿ ಸದ್ಭಾವನಾ ಯಾತ್ರೆ ವೇಳೆ ಬಿಜೆಪಿ ವಿರುದ್ಧ ಶಿವರಾಜ ತಂಗಡಗಿ ವಾಗ್ದಾಳಿ ನೆಡಸಿದರು. ಸಹಾಯ ಮಾಡಿರುವವರನ್ನು ಕೊಲ್ಲುವ ಕೆಲಸ ಬಿಜೆಪಿ ಮಾಡುತ್ತದೆ. ಇದು ಬಿಜೆಪಿ ಸಿದ್ಧಾಂತ. ಇದೀಗ ಅನರ್ಹರನ್ನು ಕೊಲ್ಲುವ ಕೆಲಸ ಬಿಜೆಪಿ ಮಾಡುತ್ತಿದೆ. ಈ ಹಿಂದೆ ನಾವು ಆರು ಜನ ಬಿಜೆಪಿಗೆ ಸಹಾಯ ಮಾಡಿದ್ದೆವು. ನಾವು ಸಹಾಯ ಮಾಡಿದಕ್ಕೆ ಯಡಿಯೂರಪ್ಪ ಮುಖ್ಯಮಂತ್ರಿಯಾದರು ಎಂದು ಹೇಳಿ ಕಿಡಿಕಾರಿದರು.
ಸಿಎಂ ಯಡಿಯೂರಪ್ಪಗೆ ತತ್ವನೂ ಇಲ್ಲಾ, ಸಿದ್ದಾಂತನೂ ಇಲ್ಲಾ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಆರ್‍ಎಸ್‍ಎಸ್ ಮತ್ತು ಬಿಜೆಪಿ ಸಿದ್ಧವಾಗಿದೆ. ಬಿಜೆಪಿ ಅನರ್ಹರನ್ನು ಬೀದಿಗೆ ತಂದು ನಿಲ್ಲಿಸಿದೆ. ಸುಪ್ರಿಂ ಕೋರ್ಟ್ ತೀರ್ಪಿನ ಮೇಲೆ ಅನರ್ಹರ ಭವಿಷ್ಯ ನಿಂತಿದೆ. ಒಂದು ವೇಳೆ ಅನರ್ಹರ ವಿರುದ್ಧ ತೀರ್ಪು ಬಂದಿದ್ದೆ ಆದಲ್ಲಿ ಅನರ್ಹರು ಬಿಜೆಪಿ ವಿರುದ್ಧ ಬೊಬ್ಬೆ ಹೊಡೆಯುವ ಪರಿಸ್ಥಿತಿ ಬರುತ್ತದೆ ಎಂದು ಹೇಳಿದರು. ಹಾಗೆಯೇ ಬಿಎಸ್‍ವೈ ಆಡಿಯೋ ಲೀಕ್ ಬಗ್ಗೆ ಪ್ರತಿಕ್ರಿಯಿಸಿ, ಆಡಿಯೋದಲ್ಲಿ ಹೇಳಿದ್ದು ಸತ್ಯವಾದ ಮಾತು, 16 ಜನ ಕಾಂಗ್ರೆಸ್-ಜೆಡಿಎಸ್ ಪಕ್ಷದಿಂದ ಹೊರ ಬರದಿದ್ದರೆ ಇಂದು ಬಿಜೆಪಿ ಸರ್ಕಾರ ಆಗುತ್ತಿರಲಿಲ್ಲ ಎಂದು ಸಿಎಂ ವಿರುದ್ಧ ಮಾತಿನ ಚಾಟಿ ಬೀಸಿದರು.
ಅಯೋಧ್ಯೆ ಪ್ರಕರಣದ ಬಗ್ಗೆ ಮಾತನಾಡಿ, ರಾಮ ಮಂದಿರ ಕಟ್ಟುವುದಕ್ಕೆ ಯಾರ ವಿರೋಧವಿಲ್ಲ. ಆದರೆ ದೇಶದ ಜನರನ್ನು ದಾರಿ ತಪ್ಪಿಸುವ ಸಲುವಾಗಿ ಬಿಜೆಪಿ ರಾಮ ಮಂದಿರ ವಿಚಾರವನ್ನು ದೊಡ್ಡದಾಗಿ ಮಾಡುತ್ತಿದೆ. ಸುಪ್ರೀಂ ಕೋರ್ಟ್ ಏನೇ ತೀರ್ಪು ಕೊಟ್ಟರೂ ನಾವು ಅದನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದರು.
ನವದೆಹಲಿ: ಅನರ್ಹ ಶಾಸಕರಿಗಾಗಿ ಉಪಚುನಾವಣೆಯನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ತೀರ್ಪು ವಿಳಂಬ ಹಿನ್ನೆಲೆಯಲ್ಲಿ ಅನರ್ಹ ಶಾಸಕರ ಪರವಾಗಿ ವಕೀಲ ಮುಕುಲ್ ರೊಹ್ಟಗಿ ಚುನಾವಣೆ ಮುಂದೂಡುವಂತೆ ಸುಪ್ರೀಂಕೋರ್ಟ್ ನ ನ್ಯಾ.ಎನ್.ವಿ.ರಮಣ ಪೀಠದ ಮುಂದೆ ಮನವಿ ಸಲ್ಲಿಸಿದರು. ಮನವಿ ಆಲಿಸಿದ ನ್ಯಾಯಾಧೀಶರು ಚುನಾವಣೆ ಮುಂದೂಡುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು. ಸೋಮವಾರದಿಂದ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ. ಅನರ್ಹ ಶಾಸಕರು ಪ್ರಕರಣದ ತೀರ್ಪು ಬರಬೇಕಿದೆ. ಹಾಗಾಗಿ ಚುನಾವಣೆ ಮುಂದೂಡುವಂತೆ ಮನವಿ ಮಾಡಿಕೊಂಡಿದ್ದರು.
ಅನರ್ಹ ಶಾಸಕರಿಗಾಗಿ ಚುನಾವಣೆ ಮುಂದೂಡಲು ಸಾಧ್ಯವಿಲ್ಲ. ನಿಮ್ಮ ಅರ್ಜಿಯನ್ನು ಸಲ್ಲಿಸಿ, ಬುಧವಾರ ಪರಿಶೀಲನೆ ಮಾಡುತ್ತೇವೆ ಎಂದು ಸೂಚಿಸಿದರು. ನ್ಯಾಯಾಧೀಶರ ಸೂಚನೆಯಂತೆ ಮುಕುಲ್ ರೊಹ್ಟಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಸೋಮವಾರ ಮತ್ತು ಮಂಗಳವಾರ ಸರ್ಕಾರಿ ರಜೆ ಹಿನ್ನೆಲೆ ಬುಧವಾರ ಅಥಾವ ಗುರುವಾರ ತೀರ್ಪು ಪ್ರಕಟ ಆಗುವ ಸಾಧ್ಯತೆ ಇದೆ. ಆದರೆ ಅಷ್ಟರೊಳಗೆ ಚುನಾವಣೆ ಪ್ರಕ್ರಿಯೆ ಆರಂಭವಾಗುವ ಹಿನ್ನೆಲೆ ಅನರ್ಹ ಶಾಸಕರು ಮತ್ತೆ ಚುನಾವಣೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನವದೆಹಲಿ: ಆಡಿಯೋ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿರುವ ಅನರ್ಹ ಶಾಸಕರು ಸುಪ್ರೀಂಕೋರ್ಟ್ ತೀರ್ಪಿನ ನಿರೀಕ್ಷೆಯಲ್ಲಿದ್ದಾರೆ. ಇತ್ತ ಸೋಮವಾರದಿಂದ ಚುನಾವಣೆ ಪ್ರಕ್ರಿಯೆಗಳು ಶುರುವಾಗುತ್ತಿದ್ದು, ಅನರ್ಹ ಶಾಸಕರಿಗೆ ಚುನಾವಣೆ ಟೆನ್ಶನ್ ಶುರುವಾಗಿದೆ. ಈ ಹಿನ್ನೆಲೆ ಇಂದು ಮತ್ತೆ ಸುಪ್ರೀಂಕೋರ್ಟ್ ಕದ ತಟ್ಟಲಿದ್ದಾರೆ.
ಅನರ್ಹ ಶಾಸಕರ ಪ್ರಕರಣದ ವಾದ ಪ್ರತಿವಾದ ಮುಗಿದಿದೆ. ಇನ್ನೇನು ತೀರ್ಪು ಹೊರಬರುವ ವೇಳೆ ಆಡಿಯೋ ಬಾಂಬ್ ಸಿಡಿದು ಬಂಡಾಯಗಾರರ ನೆಮ್ಮದಿ ಕಿತ್ತುಕೊಂಡಿತ್ತು. ಈ ಟೆನ್ಷನ್ ಜೊತೆಗೆ ಅನರ್ಹರಿಗೆ ತೀರ್ಪಿನ ಹೊಸ ಸಂಕಷ್ಟ ಎದುರಾಗಿದೆ.
ಕಾಂಗ್ರೆಸ್‍ನ ಆಡಿಯೋ ವಾದವನ್ನು ಕೇಳಿ ಆದೇಶ ಕಾಯ್ದಿರಿಸಿದ ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಬಹುದು ಅಂತಾ ನೀರಿಕ್ಷೆ ಮಾಡಲಾಗಿತ್ತು. ಸೋಮವಾರದಿಂದ ಚುನಾವಣೆ ಪ್ರಕ್ರಿಯೆಗಳು ಆರಂಭವಾಗುವ ಹಿನ್ನೆಲೆ ಬಹುತೇಕ ಇಂದು ತೀರ್ಪು ಪ್ರಕಟ ಆಗಲಿದ್ದು ಅನರ್ಹ ಶಾಸಕರ ಭವಿಷ್ಯ ನಿರ್ಧಾರ ಆಗಲಿದೆ ಎನ್ನಲಾಗಿತ್ತು. ಆದರೆ ಅನರ್ಹ ಶಾಸಕರ ಎಲ್ಲಾ ಪ್ಲಾನ್ ತಲೆಕೆಳಗಾಗಿದೆ. ಇಂದೂ ಕೂಡಾ ಸುಪ್ರೀಂಕೋರ್ಟ್ ಅನರ್ಹ ಶಾಸಕರ ಪ್ರಕರಣ ತೀರ್ಪು ಪ್ರಕಟಿಸುತ್ತಿಲ್ಲ. ಸೋಮವಾರ ಮತ್ತು ಮಂಗಳವಾರ ಸರ್ಕಾರಿ ರಜೆ ಹಿನ್ನೆಲೆ ಬುಧವಾರ ಅಥಾವ ಗುರುವಾರ ತೀರ್ಪು ಪ್ರಕಟ ಆಗುವ ಸಾಧ್ಯತೆ ಇದೆ. ಆದರೆ ಅಷ್ಟರೊಳಗೆ ಚುನಾವಣೆ ಪ್ರಕ್ರಿಯೆ ಆರಂಭವಾಗುವ ಹಿನ್ನೆಲೆ ಅನರ್ಹ ಶಾಸಕರು ಮತ್ತೆ ಚುನಾವಣೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ತೀರ್ಪು ತಡ ಆಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಅನರ್ಹ ಶಾಸಕರು ತಿರ್ಮಾನಿಸಿದ್ದಾರೆ. ಇಂದು ನ್ಯಾ.ಎನ್.ವಿ ರಮಣ ನೇತೃತ್ವದ ಪೀಠದ ಮುಂದೆ ಅನರ್ಹ ಶಾಸಕರ ಪರ ವಕೀಲ ಮುಕುಲ್ ರೊಹ್ಟಗಿ ಚುನಾವಣೆ ಮುಂದೂಡಿಕೆಗೆ ಮನವಿ ಮಾಡಲಿದ್ದಾರೆ. ಅನರ್ಹ ಶಾಸಕರ ತೀರ್ಪು ಇನ್ನೂ ಪ್ರಕಟವಾಗದ ಹಿನ್ನೆಲೆ ಚುನಾವಣೆ ಪ್ರಕಿಯೆಗಳಿಗೆ ತಡೆ ನೀಡಬೇಕು. ಇಲ್ಲದಿದ್ರೆ ಅನರ್ಹ ಶಾಸಕರಿಗೆ ತೊಂದರೆ ಆಗಲಿದೆ. ಹೀಗಾಗಿ ಚುನಾವಣೆ ಮುಂದೂಡುವಂತೆ ಆಯೋಗಕ್ಕೆ ಸೂಚಿಸಿ ಎಂದು ಮನವಿ ಮಾಡಲಿದ್ದಾರೆ.
ಈಗಾಗಲೇ ಒಮ್ಮೆ ಚುನಾವಣೆ ಮುಂದೂಡಿಕೆ ಮಾಡಿರುವ ಆಯೋಗ ಈಗ ಯಾವ ನಿರ್ಧಾರ ತೆಗೆದುಕೊಳ್ಳಲಿದೆ. ಅನರ್ಹ ಶಾಸಕರ ಮನವಿಗೆ ಸುಪ್ರೀಂಕೋರ್ಟ್ ಹೇಗೆ ಪ್ರತಿಕ್ರಿಯಿಸಲಿದೆ ಅನ್ನೋದು ಕುತೂಹಲ ಆಗಿದ್ದು ಇಂದು ಸುಪ್ರೀಂಕೋರ್ಟ್ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದು ಕಾದು ನೋಡಬೇಕಿದೆ.
ನವದೆಹಲಿ: ಅನರ್ಹ ಶಾಸಕರ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಆಡಿದ್ದ ಆಡಿಯೋವನ್ನೇ ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಕಾಂಗ್ರೆಸ್ ಹೋರಾಟ ಅರ್ಧ ಠುಸ್, ಅರ್ಧ ಸಕ್ಸಸ್ ಆಗಿದೆ.
ಬಿಎಸ್‌ವೈ ಆಡಿಯೋವನ್ನು ಸಾಕ್ಷ್ಯವನ್ನಾಗಿ ಪರಿಗಣಿಸಬೇಕೆಂದು ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾ.ಎನ್.ವಿ.ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ಪೀಠದಲ್ಲಿ ಇತ್ಯರ್ಥಗೊಂಡಿದ್ದು ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ.
ಈಗಾಗಲೇ ವಾದ-ಪ್ರತಿವಾದ ಮುಗಿದಿರುವ ಕಾರಣ ಬಿಎಸ್‌ವೈ ಆಡಿಯೋ ಬಗ್ಗೆ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಪ್ರತಿವಾದಿಯನ್ನಾಗಿಯೂ ಪರಿಗಣಿಸಲು ಆಗುವುದಿಲ್ಲ. ಆದರೆ ಆದೇಶ ನೀಡುವಾಗ ಆಡಿಯೋವನ್ನು ಸಾಕ್ಷ್ಯವನ್ನಾಗಿ ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಸುಪ್ರೀಂಕೋರ್ಟಿನ ಈ ಆದೇಶದಿಂದಾಗಿ ಅನರ್ಹರ ಕೇಸು ಒಂದೆರಡು ದಿನಗಳಲ್ಲಿ ಇತ್ಯರ್ಥವಾಗುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಪರ ವಾದ ಮಂಡಿಸಿದ ವಕೀಲ ಕಪಿಲ್ ಸಿಬಲ್, ಅನರ್ಹರು ಮುಂಬೈಗೆ ತೆರಳುವ ಹಿಂದೆ ಬಿಜೆಪಿ ವರಿಷ್ಠರ ಕೈವಾಡ ಇರುವುದನ್ನು ಹುಬ್ಬಳ್ಳಿ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಸತ್ಯ ಒಪ್ಪಿಕೊಂಡಿದ್ದಾರೆ. ಹೀಗಾಗಿ ಆಡಿಯೋವನ್ನು ಸಾಕ್ಷಿಯನ್ನಾಗಿ ಕೋರ್ಟ್ ಪರಿಗಣಿಸಬೇಕು ಎಂದು ಮನವಿ ಮಾಡಿದರು. ಕಪಿಲ್ ಸಿಬಲ್ ಅವರ ವಾದವನ್ನು ಜೆಡಿಎಸ್ ಪರ ವಕೀಲರಾದ ರಾಜೀವ್ ಧವನ್ ಬೆಂಬಲಿಸಿದರು.
ನ್ಯಾ. ರಮಣ ಹೇಳಿದ್ದೇನು?
ಈ ಆಡಿಯೋದಲ್ಲಿ ಹೊಸದಾಗಿ ಏನಿದೆ ಎಂದು ಪ್ರಶ್ನಿಸಿದ ನ್ಯಾಯಾಧೀಶರು ಸ್ಪೀಕರ್ ಪರ ವಾದದ ವೇಳೆ ಈ ಅಂಶಗಳು ಇತ್ತಲ್ಲವೇ? ನಾವು ಈಗಾಗಲೇ ಎಲ್ಲ ಅಂಶಗಳನ್ನು ಪರಿಗಣಿಸಿದ್ದೇವೆ. ಈಗಾಗಲೇ ವಾದ, ಪ್ರತಿವಾದ ಪೂರ್ಣಗೊಂಡಿದೆ. ಆಡಿಯೋ ಸಂಬಧ ನೋಟಿಸ್ ಸಾಧ್ಯವೇ ಇಲ್ಲ. ನೋಟಿಸ್ ಕೊಟ್ಟರೆ ಆದೇಶ ವಿಳಂಬವಾಗಲಿದೆ. ಆದೇಶದ ವೇಳೆ ಸಾಕ್ಷಿಯಾಗಿ ಆಡಿಯೋ ಪರಿಗಣಿಸುತ್ತೇವೆ ಎನ್ನುವ ವಿಚಾರವನ್ನು ಅರ್ಜಿದಾರರ ಗಮನಕ್ಕೆ ತಂದರು.
ಸುಪ್ರೀಂನಲ್ಲಿ ಮುಂದೆ ಏನಾಗಬಹುದು?
ಅನರ್ಹ ಶಾಸಕರ ಬಗ್ಗೆ ಸಿಎಂ ಮಾತನಾಡಿದ್ದ ಆಡಿಯೋವನ್ನು ಸುಪ್ರೀಂಕೋರ್ಟ್ ಸಾಕ್ಷಿಯನ್ನಾಗಿ ಪರಿಗಣಿಸಿದ ಪರಿಣಾಮ ಅನರ್ಹರಿಗೆ ಟೆನ್ಷನ್ ಶುರುವಾಗಿದೆ. ಸುಪ್ರೀಂಕೋರ್ಟ್ ಏನ್ ತೀರ್ಪು ನೀಡಬಹುದೋ ಏನೋ ಅಂತ ಆತಂಕಕ್ಕೆ ಒಳಗಾಗಿದ್ದಾರೆ.
ಸಾಧ್ಯತೆ 1 – ಒಂದೆರಡು ದಿನಗಳಲ್ಲಿ ತೀರ್ಪು ಬರಬಹುದು ಸಾಧ್ಯತೆ 2 – ಅನರ್ಹರಿಗೆ ಬೈಎಲೆಕ್ಷನ್ ಸ್ಪರ್ಧೆಗೆ ಅವಕಾಶ ಕೊಡಬಹುದು ಸಾಧ್ಯತೆ 3 – ಸ್ಪೀಕರ್ ಕಚೇರಿಗೆ ಅರ್ಜಿಗಳನ್ನು ವಾಪಸ್ ಕಳುಹಿಸಬಹುದು ಸಾಧ್ಯತೆ 4 – ಸ್ಪೀಕರ್ ಆದೇಶವನ್ನು ಎತ್ತಿ ಹಿಡಿಯಬಹುದು
ಕಾಂಗ್ರೆಸ್ಸಿಗೆ ಜಯವೋ? ಹಿನ್ನಡೆಯೋ?
– ಸಿಎಂ ಆಡಿಯೋ ಬಗ್ಗೆ ತನಿಖೆಗೆ ಆದೇಶಿಸಿಲ್ಲ – ಇದು ಹಿನ್ನಡೆ
– ಸಿಎಂ ಆಡಿಯೋ ಬಗ್ಗೆ ವಿಚಾರಣೆಯೂ ಇಲ್ಲ – ಇದು ಹಿನ್ನಡೆ
– ಅನರ್ಹರ ಆದೇಶ ಕೂಡ ವಿಳಂಬವಿಲ್ಲ – ಇದು ಹಿನ್ನಡೆ
– ಸಿಎಂ ಆಡಿಯೋ ಸಾಕ್ಷ್ಯವಾಗಿಯಷ್ಟೇ ಪರಿಗಣನೆ – ಸ್ವಲ್ಪ ಜಯ
ಸೋಮವಾರ ಸುಪ್ರೀಂಕೋರ್ಟ್ ಕದ ತಟ್ಟಿದ್ದ ಕಾಂಗ್ರೆಸ್, ಸಿಎಂ ಯಡಿಯೂರಪ್ಪರ ಆಡಿಯೋವನ್ನು ಪರಿಗಣಿಗಣಿಸಿ ಮತ್ತೆ ವಿಚಾರಣೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿತ್ತು. ಮನವಿ ಪುರಸ್ಕರಿಸಿದ್ದ ಸುಪ್ರೀಂಕೋರ್ಟ್ ಇಂದು ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಇಂದು ವಿಚಾರಣೆ ನಡೆಸಿದ ನ್ಯಾ.ಎನ್.ವಿ.ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ನ್ಯಾಯಪೀಠ ಆಡಿಯೋವನ್ನು ಸಾಕ್ಷ್ಯವಾಗಿ ಪರಿಗಣಿಸಿದೆ.
ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಅವರ ವಾದವನ್ನು ಜೆಡಿಎಸ್ ಪರ ವಕೀಲರಾದ ರಾಜೀವ್ ಧವನ್ ಬೆಂಬಲಿಸಿದರು. ಇದೇ ವೇಳೆ ಸಿಎಂ ಪರ ವಕೀಲರು ಆಡಿಯೋವನ್ನು ಉತ್ಪ್ರೇಕ್ಷೆ ಮಾಡಲಾಗುತ್ತಿದೆ. ಆಡಿಯೋ ಸತ್ಯ ತಿಳಿಯಬೇಕಿದೆ ಎಂದು ವಾದಿಸಿದರು. ಸಿಎಂ ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಬೇಕು. ನೋಟಿಸ್ ನೀಡಿದ್ರೆ ತೀರ್ಪು ವಿಳಂಬವಾಗುತ್ತದೆ. ಹಾಗಾಗಿ ಆಡಿಯೋವನ್ನು ಸಾಕ್ಷ್ಯವಾಗಿ ಪರಿಗಣಿಸಲಾಗುತ್ತಿದೆ ಎಂದು ನ್ಯಾಯಾಧೀಶರು ತಿಳಿಸಿದರು.
ನವದೆಹಲಿ: ಶುಭ ಸುದ್ದಿಯ ನಿರೀಕ್ಷೆಯಲ್ಲಿದ್ದ ಅನರ್ಹ ಶಾಸಕರು ಮತ್ತೆ ತೊಂದರೆಯಲ್ಲಿ ಸಿಲುಕಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಆಡಿಯೋ ಯಾವಾಗ ಸಂಕಷ್ಟ ತರತ್ತೊ ಎಂಬ ಆತಂಕದಲ್ಲಿದ್ದಾರೆ.
ಸೋಮವಾರ ಸುಪ್ರೀಂಕೋರ್ಟ್ ಕದ ತಟ್ಟಿರುವ ಕಾಂಗ್ರೆಸ್, ಸಿಎಂ ಯಡಿಯೂರಪ್ಪರ ಆಡಿಯೋವನ್ನು ಪರಿಗಣಿಗಣಿಸಿ ಮತ್ತೆ ವಿಚಾರಣೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿತ್ತು. ಮನವಿ ಪುರಸ್ಕರಿಸಿದ್ದ ಸುಪ್ರೀಂಕೋರ್ಟ್ ಇಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಈಗಾಗಲೇ ವಿಡಿಯೋ ತುಣುಕು ಮತ್ತು ಅದರಲ್ಲಿನ ಸಂಭಾಷಣೆಯನ್ನು ಭಾಷಾಂತರ ಮಾಡಿ ಸುಪ್ರೀಂಕೋರ್ಟ್ ಗೆ ಸಲ್ಲಿಸಲಾಗಿದೆ. ಈ ಅಂಶಗಳನ್ನು ನ್ಯಾ.ಎನ್.ವಿ.ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ಸಮ್ಮುಖದ ಪೀಠ ಪರಿಶೀಲನೆ ಮಾಡಲಿದೆ.
ಕಾಂಗ್ರೆಸ್ ತನ್ನ ವಾದ ಮಂಡಿಸಿದ ಬಳಿಕ ಮೂವರು ನ್ಯಾಯಾಧೀಶರು ತಮ್ಮೊಳಗೆ ಚರ್ಚೆ ಮಾಡಿ ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸಿದಲ್ಲಿ ಅನರ್ಹರ ತೀರ್ಪು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಒಂದು ವೇಳೆ ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸದಿದ್ದಲ್ಲಿ ಮುಂದಿನ ಒಂದೆರಡು ದಿನದಲ್ಲಿ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.
ಹೀಗಾಗಿ ಇಂದು ನಡೆಯಲಿರುವ ವಿಚಾರಣೆ ಇಡೀ ಪ್ರಕರಣದ ದಿಕ್ಕನ್ನು ಬದಲಿಸುವ ಶಕ್ತಿ ಹೊಂದಿದ್ದು ಅನರ್ಹ ಶಾಸಕರಿಗೆ ಟೆನ್ಷನ್ ಶುರುವಾಗಿದೆ. ಕೆಲವು ಶಾಸಕರು ದೆಹಲಿಗೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಮತ್ತೆ ಕೆಲವರು ತಮ್ಮ ವಕೀಲರನ್ನು ಸಂಪರ್ಕಿಸಿ ಮುಂದೇನು ಅನ್ನೊ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುತ್ತಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಆಡಿಯೋ ಅಸ್ತ್ರಕ್ಕೆ ಅನರ್ಹ ಶಾಸಕರು ಪ್ರತ್ಯಾಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಧರ್ಮಸ್ಥಳದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದ್ದ ವಿಡಿಯೋವನ್ನು ಸುಪ್ರೀಂಕೋರ್ಟಿಗೆ ಸಲ್ಲಿಸುವ ಸಾಧ್ಯತೆಗಳಿವೆ.
ಸಿಎಂ ಯಡಿಯೂರಪ್ಪನವರು ಮಾತನಾಡಿದ್ದ ಆಡಿಯೋಗೆ ಸಂಬಂಧಿಸಿದಂತೆ ಮಂಗಳವಾರ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ನಡೆಯಲಿದೆ. ಈ ಹಿಂದೆ ಧರ್ಮಸ್ಥಳದ ಶಾಂತಿವನದಲ್ಲಿ ಲೋಕಸಭಾ ಚುನಾವಣೆ ಬಳಿಕ ಮೈತ್ರಿ ಸರ್ಕಾರ ಇರಲ್ಲ ಎಂದು ಹೇಳಿದ್ದ ವಿಡಿಯೋ ಬಿಡುಗಡೆ ಆಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕರ ರಾಜೀನಾಮೆಗೆ ಸಿದ್ದರಾಮಯ್ಯನವರೇ ಕಾರಣ. ಈ ವಿಡಿಯೋವನ್ನು ಅಸ್ತçವಾಗಿ ಬಿಜೆಪಿ ಪರ ವಕೀಲರು ಬಳಸಿಕೊಳ್ಳುವ ಸಾಧ್ಯತೆಗಳಿವೆ.
ಯಡಿಯೂರಪ್ಪನವರ ಆಡಿಯೋಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಯೋಗ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ. ಮೈತ್ರಿ ಸರ್ಕಾರ ಪತನಕ್ಕೆ ಬಿಜೆಪಿ ನಾಯಕರು ಕಾರಣ ಎಂದು ಕಾಂಗ್ರೆಸ್ ಆರೋಪಿಸಿತ್ತು. ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಹುಬ್ಬಳ್ಳಿ ಸಭೆ ಆಡಿಯೋದಲ್ಲಿರುವ ಧ್ವನಿ ನನ್ನದೇ ಎಂದು ಒಪ್ಪಿಕೊಂಡಿದ್ದ ಸಿಎಂ, ಭಾನುವಾರ ಅನರ್ಹ ಶಾಸಕರಿಗೂ ಮತ್ತು ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಡ್ಯಾಮೇಜ್ ಕಂಟ್ರೋಲಿಗೆ ಮುಂದಾಗಿದ್ದರು.
ನವದೆಹಲಿ: ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆಡಿಯೋ ಸಾಕ್ಷ್ಯವನ್ನು ಸುಪ್ರೀಂಕೋರ್ಟ್ ಪರಿಗಣಿಸಿದೆ. ಈ ಕುರಿತು ನಾಳೆ(ಮಂಗಳವಾರ) ಆಡಿಯೋ ಕುರಿತು ವಿಚಾರಣೆ ನಡೆಸುವುದಾಗಿ ತಿಳಿಸಿದೆ
ಇಂದು ನ್ಯಾಯಾಧೀಶ ಎನ್.ವಿ.ರಮಣ ಅವರ ಮುಂದೆ ಆಡಿಯೋ ಬಗ್ಗೆ ಕಾಂಗ್ರೆಸ್ ಪರ ವಕೀಲರಾದ ಕಪಿಲ್ ಸಿಬಲ್ ಪ್ರಸ್ತಾಪ ಮಾಡಿದರು. ಈಗಾಗಲೇ ವಿಚಾರಣೆ ಮುಗಿದಿದ್ದು, ಈಗ ಏನು ಹೇಳಬೇಕು ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದರು. ವಿಚಾರಣೆ ಮುಗಿದ ಬಳಿಕ ಮಹತ್ವದ ಬೆಳವಣಿಗೆ ನಡೆದಿದ್ದು, ಆಡಿಯೋ ಕ್ಲಿಪ್ ಲೀಕ್ ಆಗಿದೆ. ಹಾಗಾಗಿ ನ್ಯಾಯಾಲಯದ ಗಮನಕ್ಕೆ ತರಬೇಕಿದೆ. ಲೀಕ್ ಆಗಿರುವ ಆಡಿಯೋವನ್ನು ಭಾಷಾಂತರ ಮಾಡಲಾಗಿದ್ದು, ನ್ಯಾಯಾಲಯ ಪರಿಗಣಿಸಬೇಕೆಂದು ಕಪಿಲ್ ಸಿಬಲ್ ಮನವಿ ಮಾಡಿಕೊಂಡರು.
ಮನವಿ ಆಲಿಸಿದ ನ್ಯಾಯಾಧೀಶರು, ನಿಮ್ಮದು ಸೇರಿ ಕೆಲವು ಪ್ರಕರಣ ಇತ್ಯರ್ಥ ಪಡಿಸಬೇಕು. ಹಾಗಾಗಿ ನಾಳೆ ಕೆಲ ಸಮಯ ಹಳೆಯ ಪೀಠವನ್ನು ಮುಂದುವರಿಸೋಣ. ನಿಮ್ಮ ಮನವಿ ಏನಿದೆ ಸಲ್ಲಿಸಿ, ನಾಳೆ ಪರಿಶೀಲಿಸೋಣ ಎಂದು ನ್ಯಾಯಾಧೀಶರು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದ್ದಾರೆ.
ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪವರ ಆಡಿಯೋ ಬಾಂಬ್ ಇಂದು ಸುಪ್ರೀಂಕೋರ್ಟ್ ಮೆಟ್ಟಿಲೇರಲಿದೆ. ಇನ್ನೇನು ಸಂಕಷ್ಟದಿಂದ ಮುಕ್ತವಾಗಲಿದ್ದೇವೆ ಅಂದುಕೊಂಡಿದ್ದ ಅನರ್ಹ ಶಾಸಕರಿಗೆ ಮತ್ತೊಂದು ಅಗ್ನಿ ಪರೀಕ್ಷೆ ಶುರುವಾಗಿದೆ. ಕಾಂಗ್ರೆಸ್ ಇಂದು ಯಡಿಯೂರಪ್ಪನವರ ಆಡಿಯೋ ಕ್ಲಿಪ್ ಸಮೇತ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದ್ದು, ವಿಚಾರಣೆ ಬಳಿಕವೂ ಇದನ್ನು ಸಾಕ್ಷಿ ಆಗಿ ಪರಿಗಣಿಸುತ್ತಾ ಎಂಬ ಕುತೂಹಲ ಮೂಡಿಸಿದೆ.
ದೋಸ್ತಿ ಸರ್ಕಾರ ಪತನಕ್ಕೆ ಕಾರಣವಾದ ಅನರ್ಹರ ಶಾಸಕರ ಭವಿಷ್ಯವನ್ನು ಇನ್ನೆರಡು ದಿನಗಳಲ್ಲಿ ಸುಪ್ರೀಂಕೋರ್ಟ್ ಬರೆಯಲಿದೆ. ಈ ಸಮಯದಲ್ಲಿ ಸಿಎಂ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಆಡಿಯೋ-ವಿಡಿಯೋ ಅನರ್ಹರ ಶಾಸಕರ ಎದೆಬಡಿತ ಹೆಚ್ಚಿಸಿದೆ. ಕಾರಣ ಸಿಎಂ ಯಡಿಯೂರಪ್ಪ ಆಡಿಯೋವನ್ನು ಸುಪ್ರೀಂಕೋರ್ಟಿನಲ್ಲಿ ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಬೇಕು ಅಂತಾ ಕಾಂಗ್ರೆಸ್ ವಕೀಲರು ಇಂದು ಮನವಿ ಮಾಡಲಿದ್ದಾರೆ.
ಆಪರೇಷನ್ ಕಮಲದ ಬಗೆಗಿನ ಆಡಿಯೋ-ವಿಡಿಯೋ ವೈರಲ್ ಅಸ್ತ್ರ ಕಾಂಗ್ರೆಸ್ ಬತ್ತಳಿಕೆ ಸೇರುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಒಂದೇ ದಿನಕ್ಕೆ ಉಲ್ಟಾ ಹೊಡೆದರು. ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದ ಬಿಎಸ್‌ವೈ, ಹುಬ್ಬಳ್ಳಿಯಲ್ಲಿ ಮಾತಾಡಿದ್ದು ನಿಜ ಅಂತ ಒಪ್ಪಿಕೊಂಡಿದ್ದರು. ಆದರೆ ಭಾನುವಾರ ಬೆಳಗ್ಗೆ ಉಲ್ಟಾ ಹೊಡೆದು ಅನರ್ಹರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಅನರ್ಹರು ಅವರ ನಿರ್ಧಾರ ಅವರು ಹೇಳುತ್ತಾರೆ ಅಂತ ಹೇಳುವ ಮೂಲಕ ವೈರಲ್‌ನಿಂದಾಗಿರುವ ಡ್ಯಾಮೇಜ್ ಕಂಟ್ರೋಲ್‌ಗೆ ಯತ್ನಿಸಿದರು.
ಇಂದು ಸುಪ್ರೀಂಕೋರ್ಟ್ ಕಲಾಪ ಆರಂಭವಾಗುತ್ತಿದ್ದಂತೆಯೇ ಬೆಳಗ್ಗೆ 10:30ಕ್ಕೆ ನ್ಯಾ. ಎನ್.ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಕಾಂಗ್ರೆಸ್‌ನವರು ಯಡಿಯೂರಪ್ಪ ಆಡಿಯೋ ಪ್ರಕರಣದ ಪ್ರಸ್ತಾಪ ಮಾಡಲಿದ್ದಾರೆ. ಅನರ್ಹ ಶಾಸಕರು ಬಿಜೆಪಿ ನಾಯಕರ ಆಮಿಷಕ್ಕೆ ಬಲಿಯಾಗಿರುವುದು ಸ್ಪಷ್ಟವಾಗಿದೆ. ಸಿಎಂ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಸತ್ಯ ಒಪ್ಪಿಕೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರೂ ಆಪರೇಷನ್‌ನಲ್ಲಿ ಭಾಗಿಯಾಗಿದ್ದಾರೆ. ವಿಚಾರಣೆ ವೇಳೆ ಇದೇ ಆರೋಪ ಮಾಡಲಾಗಿತ್ತು. ಈಗ ಸಿಎಂ ಯಡಿಯೂರಪ್ಪ ಅವರೇ ಶಾಸಕರ ರಾಜೀನಾಮೆ ಕೊಡಿಸುವುದರ ಹಿಂದೆ ಬಿಜೆಪಿ ಪಾತ್ರ ಇದೆ ಎಂದಿದ್ದಾರೆ. ಸ್ಪೀಕರ್ ತೀರ್ಪಿನಲ್ಲೂ ಬಿಜೆಪಿ ಪಾತ್ರದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಸ್ಪೀಕರ್ ತೀರ್ಪಿಗೆ ಪೂರಕವಾಗಿ ವಿಡಿಯೋ ಸಾಕ್ಷಿ ಪರಿಗಣಿಸಬೇಕು ಅಂತಾ ಮನವಿ ಮಾಡಲಿದ್ದಾರೆ.
ಯಡಿಯೂರಪ್ಪವರ ಆಡಿಯೋ ಎರಡೂ ಪಕ್ಷದ ಅನರ್ಹ ಶಾಸಕರಿಗೆ ಅನ್ವಯಿಸುತ್ತದೆ. ಯಾಕಂದ್ರೆ ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟ ದಿನವೇ ಜೆಡಿಎಸ್‌ನ ಮೂವರು ಶಾಸಕರು ಗುಂಪಾಗಿ ರಾಜೀನಾಮೆ ಕೊಟ್ಟು ಮುಂಬೈಗೆ ತೆರಳಿದ್ದರು. ಸುಪ್ರೀಂಕೋರ್ಟ್ ಕೂಡ ಒಟ್ಟಿಗೆ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದೆ.
ಸಾಕ್ಷಿಯಾಗಿ ಪರಿಗಣಿಸುತ್ತಾ ಸುಪ್ರೀಂ?
ತೀರ್ಪು ಹೊರ ಬರಬೇಕಿರುವ ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಮತ್ತೆ ವಿಚಾರಣೆಗೆ ಒಪ್ಪುತ್ತಾ ಅನ್ನೋದು ಸದ್ಯಕ್ಕಿರುವ ಪ್ರಶ್ನೆ. ಒಂದು ವೇಳೆ ಸುಪ್ರೀಂಕೋರ್ಟ್ ವಿಚಾರಣೆ ಒಪ್ಪಿಕೊಂಡರೇ ಮತ್ತೆ ಉಪ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಚಾರಣೆ ಅವಕಾಶ ನೀಡದೇ ಸುಪ್ರೀಂಕೋರ್ಟ್ ಲಿಖಿತ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿಬಹುದು. ಅಥವಾ ವಿಚಾರಣೆ ಅಂತ್ಯವಾಗಿರೊದ್ರಿಂದ ದಾಖಲೆಗಳನ್ನು ಪರಿಗಣಿಸದೆಯೂ ಇರಬಹುದು. ಹೀಗಾಗಿ ಸುಪ್ರೀಂಕೋರ್ಟ್ ಇಂದು ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೊ ಕುತೂಹಲ ಮೂಡಿದೆ.