Tag: ಅನರ್ಹ ಶಾಸಕ

  • ಜೆಡಿಎಸ್ ಅಭ್ಯರ್ಥಿ ದಸರಾದ ಅಂಬಾರಿ ಆನೆ ಇದ್ದಂತೆ: ಮುನಿರತ್ನ ವ್ಯಂಗ್ಯ

    ಜೆಡಿಎಸ್ ಅಭ್ಯರ್ಥಿ ದಸರಾದ ಅಂಬಾರಿ ಆನೆ ಇದ್ದಂತೆ: ಮುನಿರತ್ನ ವ್ಯಂಗ್ಯ

    ಬೆಂಗಳೂರು: ಜೆಡಿಎಸ್ ಅಭ್ಯರ್ಥಿ ಒಂದು ರೀತಿ ದಸರಾದ ಅಂಬಾರಿಯ ಆನೆ ಇದ್ದಂತೆ ಎಂದು ಅನರ್ಹ ಶಾಸಕ ಮುನಿರತ್ನ ವ್ಯಂಗ್ಯವಾಡಿದ್ದಾರೆ.

    ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಅವರ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ವರ್ಷಕ್ಕೊಮ್ಮೆ ದಸರಾ ಅಂಬಾರಿ ಹೊರುವುದಕ್ಕೆ ಆನೆಯನ್ನು ಕರೆದುಕೊಂಡು ಬರುತ್ತಾರೆ. ಬಳಿಕ ದಸರಾ ಮುಗಿದ ಮೇಲೆ ಕಾಡಿಗೆ ಕಳುಹಿಸುತ್ತಾರೆ. ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಅವರ ಪರಿಸ್ಥಿತಿ ಕೂಡ ಅದೇ ಆಗಿದೆ ಎಂದು ಲೇವಡಿ ಮಾಡಿದರು.

    ಚುನಾವಣೆ ಸಮಯದಲ್ಲಿ ಜೆಡಿಎಸ್ ನಾಯಕರು ಜವರಾಯಿಗೌಡ ಅವರನ್ನು ಕರೆದುಕೊಂಡು ಬರುತ್ತಾರೆ. ಅವರಿಗೆ ಪಕ್ಷದ ಚಿಹ್ನೆ ಕೊಟ್ಟು, ರೌಂಡ್ ಹೊಡೆಸಿ ಮತ್ತೆ ಅವರನ್ನು ಕೈಬಿಡುತ್ತಾರೆ. ಐದು ವರ್ಷಕೊಮ್ಮೆ ಮೆರವಣಿಗೆ ಮಾಡಿದವವರಿಗೆ ಜನ ಮತ ಹಾಕುವುದಿಲ್ಲ. ಯಶವಂತಪುರ ಕ್ಷೇತ್ರದಲ್ಲಿ ಎಸ್.ಟಿ.ಸೋಮಶೇಖರ್ ನಿತ್ಯವೂ ಅಂಬಾರಿ ಹೊರುತ್ತಾರೆ. ಅವರನ್ನು ಕ್ಷೇತ್ರದ ಜನರು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.

    ಉಪ ಚುನಾವಣೆಯಲ್ಲಿ ಎಸ್.ಟಿ.ಸೋಮಶೇಖರ್ ಗೆಲುವು ಸಾಧಿಸುತ್ತಾರೆ. ಮತ್ತೆ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಮುನಿರತ್ನ ಅವರು ವಿಶ್ವಾಸ ವ್ಯಕ್ತಪಡಿಸಿದರು.

    ಹಿಂದಿನ ಚುನಾವಣೆ:
    ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಅವರು 2013 ಹಾಗೂ 2018ರ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿ ಎಸ್.ಟಿಸೋಮಶೇಖರ್ ವಿರುದ್ಧ ಸೋತಿದ್ದರು. 2013ರಲ್ಲಿ ಎಸ್.ಸೋಮಶೇಖರ್ 1,20,380 ಮತ ಪಡೆದಿದ್ದರೆ ಜವರಾಯಿಗೌಡ 91,280 ಮತ ಗಳಿಸಿದ್ದರು. ಈ ಮೂಲಕ 29,100 ಮತಗಳ ಅಂತರದಿಂದ ಸೋತಿದ್ದ ಜವರಾಯಿಗೌಡ ಅವರು 2018 ಚುನಾವಣೆಯಲ್ಲಿ ಪ್ರಭಲ ಸ್ಪರ್ಧೆ ನೀಡಿ 10,711 ಮತಗಳಿಂದ ಪರಾಭವಗೊಂಡಿದ್ದರು. ಈ ವೇಳೆ ಎಸ್.ಟಿ.ಸೋಮಶೇಖರ್ 1,15,273 ಮತ ಪಡೆದಿದ್ದರೆ ಜವರಾಯಿ ಗೌಡ 1,04,562 ಮತವನ್ನು ಪಡೆದಿದ್ದರು.

    https://www.youtube.com/watch?v=5vkR11RaBS4

  • ಅಧಿಕಾರ, ದುಡ್ಡಿಗಾಗಿ ಬಿಜೆಪಿ ಸೇರಿಲ್ಲ: ಮಕ್ಕಳ ಮೇಲೆ ಶ್ರೀಮಂತ್ ಪಾಟೀಲ್ ಪ್ರಮಾಣ

    ಅಧಿಕಾರ, ದುಡ್ಡಿಗಾಗಿ ಬಿಜೆಪಿ ಸೇರಿಲ್ಲ: ಮಕ್ಕಳ ಮೇಲೆ ಶ್ರೀಮಂತ್ ಪಾಟೀಲ್ ಪ್ರಮಾಣ

    – ಮುಂಬೈನಲ್ಲಿ ಸ್ವಂತ ಹಣದಲ್ಲಿ ಊಟ ಮಾಡಿದ್ದೇನೆ

    ಬೆಳಗಾವಿ: ಯಾವುದೇ ಅಧಿಕಾರ ಹಾಗೂ ದುಡ್ಡಿಗಾಗಿ ಬಿಜೆಪಿ ಸೇರುವ ನಿರ್ಧಾರ ಮಾಡಿಲ್ಲ ಎಂದು ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಶ್ರೀಮಂತ್ ಪಾಟೀಲ್ ಮಕ್ಕಳ ಮೇಲೆ ಪ್ರಮಾಣ ಮಾಡಿದ್ದಾರೆ.

    ಕಾಗವಾಡ ಕ್ಷೇತ್ರದ ಉಗಾರ ಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಮಾಣ ಮಾಡುವ ಅವಶ್ಯಕೆತೆಯಿಲ್ಲ. ಆದರೆ ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ಈ ವ್ಯವಹಾರದಲ್ಲಿ ಒಂದು ರೂಪಾಯಿ ಪಡೆದಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷ ಸೇರಿದ್ದೇನೆ. ಮುಂಬೈನಲ್ಲಿ ಇದ್ದಾಗಲೂ ಸ್ವಂತ ಹಣದಲ್ಲಿಯೇ ಊಟ ಮಾಡಿದ್ದೇನೆ ಎಂದು ಹೇಳಿದರು.

    ನಾನು 2018ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕನಾದ ಮೇಲೆ ಕ್ಷೇತ್ರದಲ್ಲಿ ಒಂದು ಕೆಲಸವೂ ಆಗಲಿಲ್ಲ. ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿತ್ತು. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೆ. ಈ ವೇಳೆ ಕ್ಷೇತ್ರದ ಅಭಿವೃದ್ಧಿ ಬಿಟ್ಟು, ಅವರ ಬಳಿ ಏನನ್ನೂ ಕೇಳಲಿಲ್ಲ. ಸಿಎಂ ಯಡಿಯೂರಪ್ಪ ಅವರು ನಮ್ಮ ಬೇಡಿಕೆಗಳನ್ನು ಈಡೇರಿಸುವ ಸಂಪೂರ್ಣ ಭರವಸೆ ನೀಡಿದ ಮೇಲೆ ನಾನು ಬಿಜೆಪಿ ಪಕ್ಷಕ್ಕೆ ಸೇರಿದ್ದೇನೆ ಎಂದು ತಿಳಿಸಿದರು.

    ಬಿಜೆಪಿ ಮುಸ್ಲಿಂ ವಿರೋಧಿ ಪಕ್ಷ ಎನ್ನುತ್ತಾರೆ. ಆದರೆ ನಾನು ಸಿಎಂ ಯಡಿಯೂರಪ್ಪ ಅವರ ಬಳಿ ಮುಸ್ಲಿಂ ಸಮುದಾಯದ ಕೆಲಸ ತೆಗೆದುಕೊಂಡು ಹೋಗಿದ್ದೆ. ಅವರು ಯಾವುದೇ ಯೋಚನೆ ಮಾಡದೆ 2 ಕೋಟಿ ರೂ. ಅನುದಾನ ನೀಡಿದ್ದಾರೆ. ಬಿಜೆಪಿ ಎಲ್ಲ ಸಮಾಜದವರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.

  • ಬಿಜೆಪಿ ಟಿಕೆಟ್ ಇಲ್ಲ, ಸ್ಪರ್ಧೆಗೆ ಅವಕಾಶನೂ ಇಲ್ಲ- ರಾಜಕೀಯ ಭವಿಷ್ಯ ಹಾಳು ಮಾಡ್ಕೊಂಡ್ರಾ ಶಂಕರ್?

    ಬಿಜೆಪಿ ಟಿಕೆಟ್ ಇಲ್ಲ, ಸ್ಪರ್ಧೆಗೆ ಅವಕಾಶನೂ ಇಲ್ಲ- ರಾಜಕೀಯ ಭವಿಷ್ಯ ಹಾಳು ಮಾಡ್ಕೊಂಡ್ರಾ ಶಂಕರ್?

    ಹಾವೇರಿ: ರಾಣೇಬೆನ್ನೂರು ಅನರ್ಹ ಶಾಸಕ ಆರ್.ಶಂಕರ್ ಮೈತ್ರಿ ಸರ್ಕಾರ ರಚನೆ ಹಾಗೂ ಮೈತ್ರಿ ಸರ್ಕಾರ ಪತನಗೊಳ್ಳಲು ಮುಖ್ಯ ಪಾತ್ರವಹಿಸಿದ್ದರು. ಈಗ ಬಿಜೆಪಿ ಸರ್ಕಾರ ರಚನೆ ಆಗುವಲ್ಲಿ ಅತೃಪ್ತರ ಗುಂಪು ಸೇರಿ ಬಿಜೆಪಿ ಪಕ್ಷಕ್ಕೆ ಜೈ ಎಂದರು. ಸರ್ಕಾರ ರಚನೆಯಲ್ಲಿ ಮತ್ತು ಪತನಕ್ಕೆ ಕಾರಣವಾದ ಪಕ್ಷೇತರ ಶಾಸಕ ಆರ್.ಶಂಕರ್ ಅನರ್ಹ ಶಾಸಕನಾಗಿದ್ದು, ಇತ್ತ ಬಿಜೆಪಿ ಪಕ್ಷದ ಟಿಕೆಟ್ ಇಲ್ಲದೆ ಏಕಾಂಗಿಯಾಗಿದ್ದಾರೆ.

    ರಾಣೆಬೆನ್ನೂರು ಕ್ಷೇತ್ರದ ಶಾಸಕ ಆರ್.ಶಂಕರ್ ಅನರ್ಹಗೊಂಡು ಉಪಚುನಾವಣೆ ಘೋಷಣೆ ಆಗಿದೆ. ಆರ್.ಶಂಕರ್ ಬೆಂಗಳೂರಿನಿಂದ 2013ರಲ್ಲಿ ಕ್ಷೇತ್ರಕ್ಕೆ ಆಗಮಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ನಂತರ 2018ಕ್ಕೆ ಮತ್ತೆ ರಾಣೇಬೆನ್ನೂರು ಕ್ಷೇತ್ರದಿಂದ ಕೆ.ಪಿ.ಜೆ.ಪಿ ಪಕ್ಷದಿಂದ ಸ್ಪರ್ಧೆ ಮಾಡಿ ಸುಮಾರು 3 ಸಾವಿರ ಮತಗಳಿಂದ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು. ಗೆದ್ದ ಮೇಲೆ ಅವರಿಗೆ ಜಾಕ್‍ಪಾಟ್ ಹೊಡೆಯಿತು. ಮೈತ್ರಿ ಸರ್ಕಾರ ರಚನೆ ಮಾಡುವಲ್ಲಿ ಆರ್.ಶಂಕರ್ ಪ್ರಮುಖ ಪಾತ್ರವಹಿಸಿ ಅರಣ್ಯ ಸಚಿವರಾಗಿ ಕ್ಷೇತ್ರಕ್ಕೆ ಆಗಮಿಸಿದರು. ರಾಜಕೀಯ ಆಟದಲ್ಲಿ ಒಂದು ಕಡೆ ನಿಲ್ಲದ ಅವರು ಒಂದು ಬಾರಿ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದರೆ, ಮತ್ತೊಂದು ಕಡೆ ಕಾಂಗ್ರೆಸ್ ಹಾರಿದರು. ಇದು ಕ್ಷೇತ್ರದ ಜನರ ಸಿಟ್ಟಿಗೆ ಕಾರಣವಾಗಿದ್ದು, ಶಾಸಕರ ನಡೆಗೆ ಬೇಸತ್ತು ಹೋಗಿದ್ದಾರೆ.

    ಕಾಂಗ್ರೆಸ್ ಕೋಟಾದಲ್ಲಿ ಪೌರಾಡಳಿತ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಮತ್ತೆ ಆಪರೇಷನ್ ಕಮಲಕ್ಕೆ ಒಳಗಾಗಿ ಮುಂಬೈಗೆ ಹಾರಿ ಕಾಂಗ್ರೆಸ್ ಪಕ್ಷ ಅನರ್ಹಗೊಳಿಸಿತು. ಈಗ ಸುಪ್ರೀಂಕೋರ್ಟ್ ಚುನಾವಣೆ ಸ್ವರ್ಧೆ ಮಾಡಬಹುದು ಅಂತ ತೀರ್ಪು ನೀಡಿದೆ. ಆದರೆ ರಾಣೇಬೆನ್ನೂರಲ್ಲಿ ಶಂಕರ್ ಗೆಲ್ಲಲ್ಲ. ಅವರಿಗೆ ಟಿಕೆಟ್ ಬೇಡ ಅಂತ ಬೇರೊಬ್ಬರಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ. ಹೀಗಾಗಿ, ಶಂಕರ್ ತಮ್ಮ ರಾಜಕೀಯ ಭವಿಷ್ಯ ಸಮಾಧಿ ಮಾಡಿಕೊಂಡಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ.

    ಒಟ್ಟಿನಲ್ಲಿ ಕಳೆದ 10 ವರ್ಷಗಳ ಹಿಂದೆ ರಾಣೇಬೆನ್ನೂರು ಕ್ಷೇತ್ರಕ್ಕೆ ಆಗಮಿಸಿದ್ದ ಶಂಕರ್ ಪಕ್ಷೇತರನಾಗಿ ಗೆದ್ದಿದ್ದೇ ದಾಖಲೆಯಾಗಿದೆ. ಅಂಥದ್ದರಲ್ಲಿ ಜಂಪಿಂಗ್ ಸ್ಟಾರ್ ಆಗಿ ಈಗ ತ್ರಿಶಂಕು ಸ್ಥಿತಿಗೆ ತಲುಪಿರೋದು ವಿಪರ್ಯಾಸವಾಗಿದೆ.

  • ಹ್ಯಾಟ್ರಿಕ್ ಗೆಲುವಿಗಾಗಿ ದೇವಿ ಮುಂದೆ ಬಿ ಫಾರಂ ಇಟ್ಟು ಪೂಜೆ ಸಲ್ಲಿಸಿದ ನಾರಾಯಣಗೌಡ

    ಹ್ಯಾಟ್ರಿಕ್ ಗೆಲುವಿಗಾಗಿ ದೇವಿ ಮುಂದೆ ಬಿ ಫಾರಂ ಇಟ್ಟು ಪೂಜೆ ಸಲ್ಲಿಸಿದ ನಾರಾಯಣಗೌಡ

    – 2018ರಲ್ಲಿ ಕೇವಲ 9,819 ಮತ ಗಳಿಸಿದ್ದ ಬಿಜೆಪಿ ಅಭ್ಯರ್ಥಿ

    ಮಂಡ್ಯ: ಹ್ಯಾಟ್ರಿಕ್ ಗೆಲುವು ತಂದುಕೊಡುವಂತೆ ಅನರ್ಹ ಶಾಸಕ ನಾರಾಯಣಗೌಡ ದಢೀಘಟ್ಟದ ಚಿಕ್ಕಮ್ಮ ದೇವಿಗೆ ಪೂಜೆ ಸಲ್ಲಿಸಿದ್ದಾರೆ.

    ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸುತ್ತಿರುವ ನಾರಾಯಣಗೌಡ ಅವರು ಪತ್ನಿ ದೇವಿಕಾ ಜೊತೆ ದೇವಸ್ಥಾನಕ್ಕೆ ಆಗಮಿಸಿದರು. ಬಳಿಕ ಮನೆ ದೇವರ ಮುಂದೆ ಬಿ ಫಾರಂ ಇಟ್ಟು ಪೂಜೆ ಮಾಡಿಸಿದ್ದಾರೆ. ನಾರಾಯಣಗೌಡರು  ಪ್ರತಿ ಚುನಾವಣೆಗೂ ಮುನ್ನ ದಢೀಘಟ್ಟದ ಚಿಕ್ಕಮ್ಮ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ಈ ಬಾರಿಯೂ ದೇವಿಗೆ ಪೂಜೆ ಸಲ್ಲಿಸಿ, ಉಪ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ.

    ನಾರಾಯಣಗೌಡ ಅವರು 2008ರಲ್ಲಿ ಬಿಎಸ್‍ಪಿಯಿಂದ ಸ್ಪರ್ಧಿಸಿ ಕೇವಲ 10,218 ಮತಗಳನ್ನು ಪಡೆದು ಸೋತಿದ್ದರು. ಬಳಿಕ ಜೆಡಿಎಸ್ ಸೇರಿದ ನಾರಾಯಣಗೌಡ ಅವರು, 2014ರ ಚುನಾವಣೆಯಲ್ಲಿ 56,784 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು.

    2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಚುನಾವಣಾ ಕಣಕ್ಕೆ ಇಳಿದಿದ್ದ ನಾರಾಯಣಗೌಡ ಅವರು 88,016 ಮತಗಳನ್ನು ಕೆ.ಬಿ.ಚಂದ್ರಶೇಖರ್ ವಿರುದ್ಧ ಜಯ ಗಳಿಸಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಮಂಜು ಕೇವಲ 9,819 ಮತಗಳನ್ನು ಪಡೆಯಲು ಶಕ್ತರಾಗಿದ್ದರು. ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಜಯವನ್ನು ಸಾಧಿಸಲು ನಾರಾಯಣಗೌಡ ಭಾರೀ ಸಿದ್ಧತೆ ನಡೆಸಿದ್ದಾರೆ.

  • ಉಪಚುನಾವಣೆಗೆ ಬಿಜೆಪಿ ಉಸ್ತುವಾರಿ ನಾಯಕರ ಪಟ್ಟಿ

    ಉಪಚುನಾವಣೆಗೆ ಬಿಜೆಪಿ ಉಸ್ತುವಾರಿ ನಾಯಕರ ಪಟ್ಟಿ

    ಬೆಂಗಳೂರು: ಉಪಚುನಾವಣಾ ಅಖಾಡಕ್ಕೆ ಬಿಜೆಪಿ ಸಿದ್ಧಗೊಂಡಿದ್ದು, 15 ವಿಧಾನಸಭಾ ಕ್ಷೇತ್ರಗಳಿಗೆ ಉಸ್ತುವಾರಿ ನಾಯಕರ ಪಟ್ಟಿಯನ್ನು ಕಮಲ ಪಾಳಯ ಸಿದ್ಧ ಮಾಡಿಕೊಂಡಿದೆ.

    ಅನರ್ಹ ಶಾಸಕರಿಗೆ ಗಿಫ್ಟ್ ಮೇಲೆ ಗಿಫ್ಟ್ ಸಿಗುತ್ತಿದೆ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಎಲ್ಲ 15 ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಬಹುತೇಕ ಪಕ್ಕಾ ಆಗಿದೆ. ಶುಕ್ರವಾರವೇ ರೆಬಲ್ ಶಾಸಕರು ಬಿಜೆಪಿ ಸೇರಲಿದ್ದಾರೆ. ಎಲ್ಲೆಲ್ಲಿ ಆಕ್ಷೇಪ ಅಸಮಾಧಾನ ಕಾಣುತ್ತಿದೆಯೋ ಅಲ್ಲಿ ಮಾತುಕತೆ ನಡೆಸಿ ಶಮನಗೊಳಿಸುವಂತೆ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

    ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಉಸ್ತುವಾರಿ ನೇಮಿಸಲಾಗಿದ್ದು, ಡಿಸಿಎಂ ಲಕ್ಷ್ಮಣ ಸವದಿಗೆ ಅಥಣಿ ಕ್ಷೇತ್ರದ ಟಿಕೆಟ್ ಕೊಟ್ಟಿಲ್ಲ. ಬದಲಿಗೆ ಅಥಣಿ ಕ್ಷೇತ್ರದ ಉಸ್ತುವಾರಿ ವಹಿಸಲಾಗಿದೆ. ಲಕ್ಷ್ಮಣ ಸವದಿ ವಿಚಾರದಿಂದ ಬಂಡಾಯ ಎದ್ದಿದ್ದ ಉಮೇಶ್ ಕತ್ತಿ ಅವರಿಗೆ ಯಾವ ಉಸ್ತುವಾರಿಯನ್ನೂ ನೀಡಿಲ್ಲ.

    ಉಪಚುನಾವಣೆಗೆ ಬಿಜೆಪಿ ಉಸ್ತುವಾರಿ
    1. ಅಥಣಿ – ಸಚಿವ ಕೆ.ಎಸ್. ಈಶ್ವರಪ್ಪ, ಡಿಸಿಎಂ ಲಕ್ಷ್ಮಣ ಸವದಿ, ಸಂಸದ ಅಣ್ಣಾ ಸಾಹೇಬ್ ಜೊಲ್ಲೆ
    2. ಕಾಗವಾಡ – ಸಚಿವ ಸಿ.ಸಿ.ಪಾಟೀಲ್, ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಟ, ಶಾಸಕರಾದ ಪಿ. ರಾಜೀವ್, ಅರವಿಂದ ಬೆಲ್ಲದ್
    3. ಗೋಕಾಕ್ – ಕೇಂದ್ರ ಸಚಿವ ಸುರೇಶ್ ಅಂಗಡಿ, ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ಅಭಯ ಪಾಟೀಲ್, ಎ.ಎಸ್.ಪಾಟೀಲ್ ನಡಹಳ್ಳಿ
    4. ಯಲ್ಲಾಪುರ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಸಂಸದ ಅನಂತಕುಮಾರ್ ಹೆಗಡೆ, ಶಾಸಕರಾದ ಸುನೀಲ್ ಕುಮಾರ್, ಹರೀಶ್ ಪೂಂಜಾ
    5. ಹಿರೇಕೆರೂರು – ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ಯು.ಬಿ. ಬಣಕಾರ್
    6. ರಾಣೆಬೆನ್ನೂರು – ಸಚಿವ ಜಗದೀಶ್ ಶೆಟ್ಟರ್, ಸಚಿವ ಪ್ರಭು ಚೌಹಾಣ್, ಸಂಸದ ಜಿ.ಎಂ. ಸಿದ್ದೇಶ್ವರ, ಶಿವಮೊಗ್ಗ ಬಿಜೆಪಿ ಮುಖಂಡ ಗಿರೀಶ್ ಪಟೇಲ್
    7. ವಿಜಯನಗರ – ಡಿಸಿಎಂ ಗೋವಿಂದ ಕಾರಣಜೋಳ, ಎಂಎಲ್‍ಸಿ ರವಿಕುಮಾರ್, ಸಂಸದ ಸಂಗಣ್ಣ ಕರಡಿ, ಬಿಜೆಪಿ ಪರಾಜಿತ ಅಭ್ಯರ್ಥಿ ಗವಿಯಪ್ಪ

    8. ಚಿಕ್ಕಬಳ್ಳಾಪುರ – ಸಚಿವ ಸಿ.ಟಿ.ರವಿ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಸಂಸದ ಪಿ.ಸಿ. ಮೋಹನ್, ಸಂಸದ ಬಿ.ಎನ್.ಬಚ್ಚೇಗೌಡ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಮಂಜುನಾಥ್
    9. ಕೆ.ಆರ್.ಪುರಂ – ಸಚಿವ ಆರ್.ಅಶೋಕ್, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಶಾಸಕ ಸತೀಶ್ ರೆಡ್ಡಿ
    10. ಯಶವಂತಪುರ – ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಎಂ.ಕೃಷ್ಣಪ್ಪ, ಮಾಜಿ ಎಂಎಲ್‍ಸಿಗಳಾದ ಅಶ್ವಥ್ ನಾರಾಯಣ, ಜಗ್ಗೇಶ್
    11. ಮಹಾಲಕ್ಷ್ಮಿಲೇಔಟ್ – ಸಚಿವ ವಿ. ಸೋಮಣ್ಣ, ಸಚಿವ ಸುರೇಶ್ ಕುಮಾರ್, ಬಿಜೆಪಿ ರಾಜ್ಯ ಖಜಾಂಚಿ ಸುಬ್ಬನರಸಿಂಹ
    12. ಶಿವಾಜಿನಗರ – ಬೆಂಗಳೂರು ಮಹಾನಗರ ಅಧ್ಯಕ್ಷ ಪಿ.ಎನ್. ಸದಾಶಿವ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಎಸ್. ಮುನಿರಾಜು, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಶಾಸಕ ಎಸ್. ರಘು
    13. ಹೊಸಕೋಟೆ – ಡಿಸಿಎಂ ಡಾ.ಅಶ್ವಥ್ ನಾರಾಯಣ, ಸಿಎಂ ರಾಜಕೀಯ ಕಾರ್ಯದರ್ಶ ಎಸ್. ಅರ್. ವಿಶ್ವನಾಥ್, ಎಂಎಲ್ಸಿ ವೈ.ಎ. ನಾರಾಯಣಸ್ವಾಮಿ
    14. ಕೆ.ಆರ್. ಪೇಟೆ – ಸಚಿವ ಜೆ.ಸಿ. ಮಾಧುಸ್ವಾಮಿ, ಯುವ ಮೋರ್ಛಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ, ಶಾಸಕ ಪ್ರೀತಂಗೌಡ
    15. ಹುಣಸೂರು – ಸಚಿವ ಶ್ರೀರಾಮುಲು, ಮಾಜಿ ಸಚಿವ ವಿಜಯ್ ಶಂಕರ್, ಸಂಸದ ಪ್ರತಾಪ್ ಸಿಂಹ, ಶಾಸಕ ಅಪ್ಪಚ್ಚು ರಂಜನ್

  • ನಾನು ಎಕ್ಸ್ ಎಂಎಲ್‍ಎ ಅಲ್ಲ: ಕರ್ನಾಟಕ ಭವನದ ಸಿಬ್ಬಂದಿ ಮೇಲೆ ಹೆಬ್ಬಾರ್ ಗರಂ

    ನಾನು ಎಕ್ಸ್ ಎಂಎಲ್‍ಎ ಅಲ್ಲ: ಕರ್ನಾಟಕ ಭವನದ ಸಿಬ್ಬಂದಿ ಮೇಲೆ ಹೆಬ್ಬಾರ್ ಗರಂ

    ನವದೆಹಲಿ: ಯಾರು ಎಕ್ಸ್ ಎಂಎಲ್‍ಎ? ನಾನು ಮಾಜಿ ಶಾಸಕನಲ್ಲ ಎಂದು ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ದೆಹಲಿಯ ಕರ್ನಾಟಕ ಭವನದ ಸಿಬ್ಬಂದಿ ಮೇಲೆ ಗುಡುಗಿದ್ದಾರೆ.

    ಸುಪ್ರೀಂಕೋರ್ಟ್ ಬುಧವಾರ ಅನರ್ಹ ಶಾಸಕರ ಪ್ರಕರಣದ ತೀರ್ಪು ನೀಡಲಿದೆ. ಈ ಹಿನ್ನೆಲೆಯಲ್ಲಿ ಶಿವರಾಮ್ ಹೆಬ್ಬಾರ್ ಮಂಗಳವಾರ ರಾತ್ರಿ ಕರ್ನಾಟಕ ಭವನಕ್ಕೆ ಆಗಮಿಸಿದರು. ಈ ವೇಳೆ ರೂಮ್ ನೀಡುವಂತೆ ಕೆ.ಬಿ 1ನ ಸಿಬ್ಬಂದಿಗೆ ಕೇಳಿದರು. ಆದರೆ ರೂಮ್ ನೀಡಲು ನಿರಾಕರಿಸಿದ ಸಿಬ್ಬಂದಿ, ರೂಮ್ ಖಾಲಿ ಇಲ್ಲ. ಇಲ್ಲಿ ಕೇವಲ ಹಾಲಿ ಮತ್ತು ಮಾಜಿ ಸಚಿವರಿಗೆ ಮಾತ್ರ ರೂಮ್ ಕೊಡಲಾಗುತ್ತದೆ. ಶಾಸಕರು ಮತ್ತು ಮಾಜಿ ಶಾಸಕರಿಗೆ ಕೆಬಿ 2ನಲ್ಲಿ ರೂಂ ಸಿಗುತ್ತದೆ ಎಂದು ಹೇಳಿದ.

    ಕರ್ನಾಟಕ ಭವನ ಸಿಬ್ಬಂದಿಯ ಮಾತಿನಿಂದ ಫುಲ್ ಗರಂ ಆದ ಅನರ್ಹ ಶಾಸಕರು, ಯಾರಪ್ಪಾ ಎಕ್ಸ್ ಎಂಎಲ್‍ಎ? ಒಬ್ಬರಿಗೊಂದು ಇನ್ನೊಬ್ಬರಿಗೊಂದು ಯಾಕ್ ಮಾಡ್ತಿರಿ ಎಂದು ಗುಡುಗಿದರು. ಆಗ ಕರ್ನಾಟಕ ಭವನದ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಕರೆ ಮಾಡಿ, ವಿಚಾರಿಸಿದರು. ಈ ಮಧ್ಯೆ ಶಿವರಾಮ್ ಹೆಬ್ಬಾರ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಲು ಹಿಂದೇಟು ಹಾಕಿದರು.

    ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಧೀಶ ಎನ್.ವಿ.ರಮಣ ಪೀಠ ಪ್ರಕರಣದ ವಾದವನ್ನು ಆಲಿಸಿ ತೀರ್ಪನ್ನು ಬುಧವಾರಕ್ಕೆ ಕಾಯ್ದರಿಸಿತ್ತು. ಈ ನಡುವೆ ಕಾಂಗ್ರೆಸ್ ಸಿಎಂ ಬಿ.ಎಸ್.ಯಡಿಯೂರಪ್ಪನವರ ಹುಬ್ಬಳ್ಳಿಯ ಆಡಿಯೋವನ್ನು ಸಾಕ್ಷ್ಯವಾಗಿ ಪರಿಗಣಿಸಬೇಕೆಂದು ಮನವಿ ಮಾಡಿಕೊಂಡಿತ್ತು. ಕಾಂಗ್ರೆಸ್ ಪರ ವಕೀಲ ವಾದವನ್ನು ಆಲಿಸಿದ ಪೀಠ ತೀರ್ಪು ನೀಡುವ ಸಂದರ್ಭದಲ್ಲಿ ಆಡಿಯೋವನ್ನ ಸಾಕ್ಷ್ಯವನ್ನಾಗಿ ಪರಿಗಣಿಸಲಾಗುತ್ತದೆ ಎಂದು ಸೂಚಿಸಿತ್ತು.

    ತೀರ್ಪು ವಿಳಂಬವಾದ ಹಿನ್ನೆಲೆಯಲ್ಲಿ ಅನರ್ಹ ಶಾಸಕರ ಪರ ವಕೀಲರಾದ ಮುಕುಲ್ ರೊಹ್ಟಗಿ, ಕರ್ನಾಟಕದಲ್ಲಿ ಘೋಷಣೆಯಾಗಿರುವ ಉಪಚುನಾವಣೆಯನ್ನು ಮುಂದೂಡುವಂತೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ರೊಹ್ಟಗಿಯವರ ವಾದ ಆಲಿಸಿದ್ದ ನ್ಯಾಯಾಲಯ, ಅನರ್ಹ ಶಾಸಕರಿಗಾಗಿ ಚುನಾವಣೆ ಮುಂದೂಡಲು ಸಾಧ್ಯವಿಲ್ಲ ಎಂದು ಹೇಳಿತ್ತು.

  • ಅನರ್ಹ ಶಾಸಕ ನಾರಾಯಣಗೌಡರನ್ನ ಹಾಡಿ ಹೊಗಳಿದ ಬಿಎಸ್‍ವೈ

    ಅನರ್ಹ ಶಾಸಕ ನಾರಾಯಣಗೌಡರನ್ನ ಹಾಡಿ ಹೊಗಳಿದ ಬಿಎಸ್‍ವೈ

    – ನಾರಾಯಣಗೌಡ ಸಜ್ಜನ, ಪ್ರಾಮಾಣಿಕ ವ್ಯಕ್ತಿ

    ಮಂಡ್ಯ: ಕೆ.ಆರ್.ಪೇಟೆಯಲ್ಲಿ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಡಿ ಹೊಗಳಿದ್ದಾರೆ.

    ಕೆ.ಆರ್.ಪೇಟೆಯ ಕೆಪಿಎಸ್ ಶಾಲೆಯ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಬೃಹತ್ ಉಚಿತ ಆರೋಗ್ಯ ಮೇಳ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಡಿಸಿಎಂ ಅಶ್ವಥ್ ನಾರಾಯಣ, ಸಚಿವ ಆರ್.ಅಶೋಕ್, ಸಂಸದೆ ಸುಮಲತಾ, ಅನರ್ಹ ಶಾಸಕ ನಾರಾಯಣಗೌಡ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಸಿಎಂ ಯಡಿಯೂರಪ್ಪ ಅವರು ತಮ್ಮ ಭಾಷಣದಲ್ಲಿ ನಾರಾಯಣಗೌಡ ಅವರ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಇದನ್ನೂ ಓದಿ: ರಾಜೀನಾಮೆ ಕೊಡೋಕೆ ಹೇಳಿದ್ದೇ ಬಿಎಸ್‌ವೈ- ಸ್ಫೋಟಕ ರಹಸ್ಯ ಬಿಚ್ಚಿಟ್ಟ ನಾರಾಯಣಗೌಡ

    ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ನಾನು ಯಾವುದೇ ಕಾರಣಕ್ಕೂ ಈ ಕಾರ್ಯಕ್ರಮ ಬರುವ ಹಾಗೆ ಇರಲಿಲ್ಲ. ಆದರೆ ಕೆ.ಸಿ.ನಾರಾಯಣಗೌಡ ಅವರಿಗೆ ಭರವಸೆ ನೀಡಿದ್ದರಿಂದ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಅನೇಕ ಶಾಸಕರನ್ನು, ಮುಖಂಡರನ್ನು ನೋಡಿದ್ದೇನೆ. ಆದರೆ ನಾರಾಯಣಗೌಡ ಅವರಂತಹ ಸಜ್ಜನ, ಪ್ರಾಮಾಣಿಕ ವ್ಯಕ್ತಿ ರಾಜಕೀಯ ಕ್ಷೇತ್ರದಲ್ಲಿ ಸಿಗುವುದು ಅಪರೂಪ. ಇಂತಹ ವ್ಯಕ್ತಿಯನ್ನು ನಿಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ರಿ. ಆದರೆ ಬೇರೆ ಕಾರಣಗಳಿಗೆ ವ್ಯತ್ಯಾಸಗಳಾಗಿರಬಹುದು. ಮುಂಬರುವ ದಿನಗಳಲ್ಲೂ ಇವರಿಗೆ ನೀವು ಆಶೀರ್ವಾದ ಮಾಡಬೇಕು ಎಂದು ಮತದಾರರಿಗೆ ಮನವಿ ಮಾಡಿಕೊಂಡರು.

    ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ನಾರಾಯಣಗೌಡ ಕಂಕಣ ತೊಟ್ಟಿದ್ದಾರೆ. ಕೆಆರ್ ಪೇಟೆ ಅಭಿವೃದ್ಧಿಗೆ ಹಲವು ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ. ಈ ಬಗ್ಗೆ ಮಂತ್ರಿ ಮಂಡಲದಲ್ಲಿ ಚರ್ಚೆ ಮಾಡುತ್ತೇನೆ. ಏನು ಮಾಡಲು ಸಾಧ್ಯವೋ ಎಲ್ಲವನ್ನೂ ನಾನು ಮಾಡಲು ಸಿದ್ಧ ಎಂದು ಭರವಸೆ ನೀಡಿದರು.

    ಬಳಿಕ ಅನರ್ಹ ಶಾಸಕ ನಾರಾಯಣಗೌಡ ಮಾತನಾಡಿ, ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಆಯಿತು, ಈಗ ಕೆಆರ್ ಪೇಟೆಗೆ ಆಗಬೇಕು. ನಿಮ್ಮ ತಂದೆ ಹೆಸರಿನಲ್ಲಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿಕೊಡಬೇಕು ಎಂದು ಸಿಎಂಗೆ ಮನವಿ ಸಲ್ಲಿಸಿದರು. ಇದೇ ವೇಳೆ ಸಿಎಂ ಯಡಿಯೂರಪ್ಪ ಅವರಿಗೆ ಬೆಳ್ಳಿ ಖಡ್ಗ ನೀಡಿ ಅಭಿನಂದಿಸಿದರು.

  • ನಮ್ಮನ್ನು ಯಾರೂ ಫ್ಲೈಟ್ ಹತ್ತಿಸಿಲ್ಲ, ನಾವೇ ಹೋಗಿದ್ದು- ಎಂಟಿಬಿ

    ನಮ್ಮನ್ನು ಯಾರೂ ಫ್ಲೈಟ್ ಹತ್ತಿಸಿಲ್ಲ, ನಾವೇ ಹೋಗಿದ್ದು- ಎಂಟಿಬಿ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವೈರಲ್ ಆಡಿಯೋ ಇದೀಗ ದೇಶಾದ್ಯಂತ ಸಾಕಷ್ಟು ಸದ್ದು ಮಾಡಿದ್ದು, ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಪರಿಣಾಮ ಅನರ್ಹ ಶಾಸಕರಿಗೆ ಭಯ, ಆತಂಕ ಶುರುವಾಗಿದೆ.

    ಈ ಕುರಿತು ಹೊಸಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ, ನಮ್ಮನ್ನ ಯಾರೂ ಫ್ಲೈಟ್ ಹತ್ತಿಸಿಲ್ಲ. ನಾವೇ ಹೋಗಿದ್ದು. ಯಡಿಯೂರಪ್ಪ ಅವರ ಆಡಿಯೋ ಬಗ್ಗೆ ಅವರೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಈ ಬಗ್ಗೆ ನನಗೇನೂ ಗೊತ್ತಿಲ್ಲ. ಎಂಟಿಬಿ ಹಿಂದಿನ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯ ಆಗಲಿಲ್ಲ ಎಂದು ರಾಜೀನಾಮೆ ಕೊಟ್ಟಿರುವುದು. ಯಾರ ಮಾತು ಕೇಳಿ ನಾವ್ಯಾಕೆ ಫ್ಲೈಟ್ ಹತ್ತಿ ಹೋಗುತ್ತೇವೆ ಎಂದು ಪ್ರಶ್ನಿಸಿದರು.

    ಇಂದು ಹೊಸಕೋಟೆ ಏತ ನೀರಾವರಿ ಯೋಜನೆಗೆ ಸಿಎಂ ಶಂಕುಸ್ಥಾಪನೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಹೊಸಕೋಟೆಗೆ ಏತ ನೀರಾವರಿ ಯೋಜನೆ ತಂದಿದ್ದೇ ನಾನು. ನಾನು ಕಳೆದೆರಡು ಬಾರಿ ಶಾಸಕನಾಗಿದ್ದಾಗ ನೀರಾವರಿ ಯೋಜನೆಗಾಗಿ ಶ್ರಮಿಸಿದ್ದೇನೆ ಎಂದರು.

    ಏತ ನೀರಾವರಿ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಸಂಸದ ಬಚ್ಚೇಗೌಡ ಬರೋ ವಿಚಾರದ ಸಂಬಂಧ ಮಾತನಾಡಿ, ಪ್ರೊಟೋಕಾಲ್ ಪ್ರಕಾರ ಆಹ್ವಾನವಿರುತ್ತದೆ. ಈ ಭಾಗದ ಸಂಸದರಾಗಿ ಅವರು ಬರುತ್ತಾರೆ. ನಾನು ಯೋಜನೆಗಾಗಿ ದುಡಿದಿದ್ದೇನೆ. ಅದಕ್ಕಾಗಿ ಸಿಎಂಗೆ ಸಹಕಾರ ನೀಡಲು ಇಲ್ಲಿಗೆ ಬಂದಿದ್ದೇನೆ ಎಂದು ಎಂಟಿಬಿ ತಿಳಿಸಿದರು.

    ಆಡಿಯೋದಲ್ಲಿ ಬಿಎಸ್‌ವೈ ಹೇಳಿದ್ದೇನು?
    ಹುಬ್ಬಳ್ಳಿಯಲ್ಲಿ ಕಾರ್ಯಕರ್ತರೊಂದಿಗೆ ನಡೆಸಿದ್ದ ಸಭೆಯಲ್ಲಿ ಬಿಎಸ್‌ವೈ, ಯಾಕೋ ಇವತ್ತು ನೀವು ಮಾತಾಡಿದಂತ ಧಾಟಿ ಸರ್ಕಾರ ಉಳಿಸೋಕೆ ಇದೆ ಅಂತ ಅನ್ನಿಸುತ್ತಿಲ್ಲ. ರಾಷ್ಟ್ರೀಯ ಅಧ್ಯಕ್ಷರೇ ಮುಂದೆ ನಿಂತು 17 ಜನರು 2-3 ತಿಂಗಳು ಮುಂಬೈನಲ್ಲಿರಿಸಿದ್ದರು. ಅವರೆಲ್ಲರೂ ಕ್ಷೇತ್ರಕ್ಕೂ ಬರಲಿಲ್ಲ. ಹೆಂಡ್ತಿ ಮಕ್ಕಳ ಮುಖ ನೋಡಿರಲಿಲ್ಲ. 3-4 ವರ್ಷ ವಿಪಕ್ಷದಲ್ಲಿ ಇರಬೇಕಾದ ನಮ್ಮನ್ನ ಆಡಳಿತ ಪಕ್ಷಕ್ಕೆ ಬರುವಂತೆ ಮಾಡಿದರು.

    ನಿಮ್ಮ ಬಾಯಲ್ಲಿ ಅನರ್ಹ ಪರ ಗಟ್ಟಿಯಾಗಿ ನಿಂತುಕೊಳ್ಳುತ್ತೇವೆ ಅನ್ನೋ ಮಾತು ಬರಲಿಲ್ಲ. ಇದನ್ನ ನಾನು ಖಂಡಿತಾ ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ. ಐ ಆಮ್ ಸಾರಿ. ನನಗೇನೂ ಸಿಎಂ ಗಿರಿ ಬೇಕಾಗಿರಲಿಲ್ಲ. ಈಗಾಗಲೇ 3-4 ಬಾರಿ ಸಿಎಂ ಆಗಿದ್ದೇನೆ. ದೊಡ್ಡತನ ಧಾರಾಳತನ, ವಾಸ್ತವ ಸ್ಥಿತಿಯನ್ನ ತಿಳಿಯದೇ ನೀವು ಮಾತಾಡಿದ್ದೀರಾ ಗೋಕಾಕ್ ಬಗ್ಗೆ ನೀವೇಕೆ ಮಾತಾಡಿಲ್ಲ? ಅದರಲ್ಲಿ ಅಂತಹ ವಿಶೇಷ ಏನಿದೆ..? ಅವರನ್ನೆಲ್ಲ ನಂಬಿಸಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತು ನಾನು ಅಪರಾಧ ಮಾಡಿದ್ದೇನೆ ಅಂತ ಈಗ ಅನ್ನಿಸುತ್ತಿದೆ ಎಂದು ಹೇಳಿದ್ದರು. ಈ ಆಡಿಯೋ ಇದೀಗ ಕಾಂಗ್ರೆಸ್ಸಿಗೆ ಸಿಕ್ಕಿದ್ದು, ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ನಾಳೆ ಕೋರ್ಟಿನಲ್ಲಿ ವಿಚಾರಣೆ ಕೂಡ ನಡೆಯಲಿದೆ.

  • ಅಣ್ಣನ ನಾಲಿಗೆ ಉದ್ದ, ಆಗಾಗ ಹೊರಗೆ ಬರುತ್ತೆ: ಸತೀಶ್ ಜಾರಕಿಹೊಳಿ ವ್ಯಂಗ್ಯ

    ಅಣ್ಣನ ನಾಲಿಗೆ ಉದ್ದ, ಆಗಾಗ ಹೊರಗೆ ಬರುತ್ತೆ: ಸತೀಶ್ ಜಾರಕಿಹೊಳಿ ವ್ಯಂಗ್ಯ

    ಬೆಳಗಾವಿ: ಅಣ್ಣನ ನಾಲಿಗೆ ಉದ್ದ ಇದೆ. ಹೀಗಾಗಿ ಆಗಾಗ ಹೊರಗೆ ಬರುತ್ತದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಮಾತನಾಡಿದ ಮಾಜಿ ಸಚಿವರು, ಸತೀಶ್ ಬಂಡವಾಳ ಬಯಲು ಮಾಡುತ್ತೇನೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಕಿಡಿಕಾರಿದರು. ನನ್ನ ಬಂಡವಾಳ ಬಯಲು ಮಾಡುವ ಮೊದಲು ಪ್ರವಾಹದ ಸಂದರ್ಭದಲ್ಲಿ 1,200 ಟ್ರ್ಯಾಕ್ಟರ್ ಬಾಡಿಗೆಗೆ ಪಡೆದಿರುವ ಬಗ್ಗೆ ಹೇಳಲಿ. ಶಾಸಕರಾದವರು ಮೊದಲು ಅದಕ್ಕೆ ಉತ್ತರ ನೀಡಲಿ ಎಂದು ತಿರುಗೇಟು ನೀಡಿದರು.

    ಸತೀಶ್ ಷಂಡ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವರು, ರಮೇಶ್ ನಾಲಿಗೆ ಉದ್ದ ಇದೆ. ಅದು ಆಗಾಗ ಹೊರಗೆ ಬರುತ್ತದೆ. ಇಂತಹ ಹೇಳಿಕೆಗಳು ನಮಗೆ ಹೊಸದೇನಲ್ಲ. ಅಣ್ಣ ರಾಜ್ಯ ಹಾಗೂ ಮಾಧ್ಯಮಕ್ಕೆ ಹೀರೋ ಇರಬಹುದು, ನಮ್ಮ ಮುಂದೆ ಬಿಗ್ ಝೀರೋ. ನಮ್ಮ ಬಂಡವಾಳ ಏನೂ ಇಲ್ಲ. ಇದ್ದರೆ ಅದಕ್ಕೆ ನಾನು ಉತ್ತರ ಕೊಡುತ್ತೇನೆ ಎಂದು ಹೇಳಿದರು.

    ಗೋಕಾಕ್ ಉಪಚುನಾವಣೆ ಫೈಟ್ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯವೇ ಹೊರತು ಸಹೋದರರ ನಡುವೆ ಅಲ್ಲ. ಉಪ ಚುನಾವಣೆಯನ್ನು ವೈಯಕ್ತಿಕ ಚುನಾವಣೆ ಎನ್ನುವುದಕ್ಕೆ ಸಾಧ್ಯವಿಲ್ಲ. ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮಂತ್ರಿ ಮಂಡಲ ಗೋಕಾಕ್‍ನಲ್ಲಿ ಪ್ರಚಾರಕ್ಕೆ ಬರುತ್ತದೆ. ನಮ್ಮ ಕಡೆಯಿಂದಲೂ ಕಾಂಗ್ರೆಸ್ಸಿನ ನಾಯಕರು ಬರುತ್ತಾರೆ. ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಮ್ಮ ಸ್ಟಾರ್ ಪ್ರಚಾರಕರು ಎಂದರು.

    ರಮೇಶ್ ಜಾರಕಿಹೊಳಿ ಹೇಳಿಕೆಗೆ ಉತ್ತರ ಕೊಡುವುದಿಲ್ಲ. ಅವರು ಬದ್ಧತೆ ಇಲ್ಲದ ರಾಜಕಾರಣಿ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾಗಿತ್ತು. ಆದರೆ ಈಗ ಒಂದು ಹಂತದಲ್ಲಿ ಕ್ಷೇತ್ರದ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.

  • ಡಿಕೆಶಿಯನ್ನು ಭೇಟಿಯಾದ ಅನರ್ಹ ಶಾಸಕ ನಾರಾಯಣ ಗೌಡ

    ಡಿಕೆಶಿಯನ್ನು ಭೇಟಿಯಾದ ಅನರ್ಹ ಶಾಸಕ ನಾರಾಯಣ ಗೌಡ

    ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಜೆಡಿಎಸ್ ಅನರ್ಹ ಶಾಸಕ ನಾರಾಯಣ ಗೌಡ ಭೇಟಿಯಾದರು. ಅನಾರೋಗ್ಯದಿಂದ ಬಳಲುತ್ತಿರುವ ಡಿ.ಕೆ.ಶಿವಕುಮಾರ್ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ವಿಶ್ರಾಂತಿ ನಡುವೆ ರಾಜಕೀಯ ಮುಖಂಡರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಆಗುತ್ತಿದ್ದಾರೆ.

    ಡಿಕೆಶಿ ಭೇಟಿ ಬಳಿಕ ಮಾತನಾಡಿದ ನಾರಾಯಣ ಗೌಡರು, ದೀಪಾವಳಿ ಹಬ್ಬದ ಹಿನ್ನೆಲೆ ಶುಭಾಶಯ ತಿಳಿಸಲು ಡಿಕೆ ಶಿವಕುಮಾರ್ ನಿವಾಸಕ್ಕೆ ಬಂದಿದ್ದೇನೆ. ರಾಜಕೀಯ ಹೊರತಾಗಿ ಕಳೆದ 20 ವರ್ಷಗಳಿಂದ ನಾನು ಮತ್ತು ಡಿಕೆ ಶಿವಕುಮಾರ್ ಆಪ್ತ ಸ್ನೇಹಿತರು. ಕಾಂಗ್ರೆಸ್ ಸರ್ಕಾರವಿದ್ದಾಗ ನನ್ನ ಕ್ಷೇತ್ರದ ಅಭಿವೃದ್ಧಿಗೆ ಡಿಕೆ ಶಿವಕುಮಾರ್ ಸಹಾಯ ಮಾಡಿದ್ದರು. ಜೈಲಿಗೆ ಹೋದ ಬಳಿಕ ಅವರನ್ನ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಇಂದು ಆಗಮಿಸಿ ಹಬ್ಬದ ಶುಭಾಶಯ ತಿಳಿಸಿದ್ದೇನೆ ಎಂದರು.

    ಹೆಚ್‍ಡಿಕೆ ವಿರುದ್ಧ ಗರಂ: ಬಿಜೆಪಿ ಸರ್ಕಾರ ಬೀಳಿಸಲ್ಲ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ನಾರಾಯಣ ಗೌಡರು, ಅವರು ದೊಡ್ಡವರು ಏನು ಬೇಕಾದರು ಹೇಳಬಹುದು. ಕುಮಾರಸ್ವಾಮಿ ಅವರು ಇವತ್ತು ಒಂದು, ಬೆಳಗ್ಗೆಗೊಂದು ಹೇಳಿಕೆ ನೀಡುತ್ತಾರೆ. ಅವರ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ. ರಾಜಕಾರಣ ಅನ್ನೋದು ಹಣೆಬರಹ. ಏನು ಆಗತ್ತೋ ಎಂಬುವುದು ಗೊತ್ತಿಲ್ಲ. ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದ್ದು, ಶಾಸಕರಾಗಿ ಉಳಿದುಕೊಳ್ಳುತ್ತೇವೆ ಎಂದು ನಾರಾಯಣ ಗೌಡರು ವಿಶ್ವಾಸ ವ್ಯಕ್ತಪಡಿಸಿದರು.