Tag: ಅನಕ್ಷರತೆ

  • ಶಿಕ್ಷಣ ಪಡೆಯದ ಜನರು ದೇಶಕ್ಕೆ ಹೊರೆ, ಉತ್ತಮ ಪ್ರಜೆಗಳಾಗಲು ಸಾಧ್ಯವಿಲ್ಲ: ಅಮಿತ್‌ ಶಾ

    ಶಿಕ್ಷಣ ಪಡೆಯದ ಜನರು ದೇಶಕ್ಕೆ ಹೊರೆ, ಉತ್ತಮ ಪ್ರಜೆಗಳಾಗಲು ಸಾಧ್ಯವಿಲ್ಲ: ಅಮಿತ್‌ ಶಾ

    ನವದೆಹಲಿ: ಶಿಕ್ಷಣ ಪಡೆಯದ ಜನರು ದೇಶದ ಹೊರೆಯಾಗುತ್ತಾರೆ. ಅನಕ್ಷರಸ್ಥರು ಭಾರತದ ಉತ್ತಮ ಪ್ರಜೆಗಳಾಗಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

    ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿ 20 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂಸದ್‌ ಟಿವಿಗೆ ಅಮಿತ್‌ ಶಾ ಸಂದರ್ಶನ ನೀಡಿದರು. ಈ ವೇಳೆ ಮೊದಲು ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ನಂತರ ಭಾರತದ ಪ್ರಧಾನಿಯಾಗಿ ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸಲು ಪ್ರಸ್ತುತ ಸರ್ಕಾರವು ಯಾವ ರೀತಿ ಕ್ರಮ ಕೈಗೊಂಡಿದೆ ಎಂಬುದರ ಕುರಿತು ಶಾ ಮಾತನಾಡಿದರು.

    ನೀವು ಸಾಕ್ಷರತೆಯನ್ನು ಮೌಲ್ಯಮಾಪನ ಮಾಡಿದಾಗ ಒಂದು ರಾಷ್ಟ್ರದ ಪ್ರಗತಿಗೆ ಅದರ ಕೊಡುಗೆ ಏನೆಂದು ನಿಮಗೆ ತಿಳಿಯುತ್ತದೆ. ಅನಕ್ಷರಸ್ಥ ವ್ಯಕ್ತಿ ದೇಶಕ್ಕೆ ಹೊರೆ. ಆತನಿಗೆ ಸಂವಿಧಾನ ನೀಡಿದ ಹಕ್ಕುಗಳು ತಿಳಿಯುವುದಿಲ್ಲ. ಅಥವಾ ಆತನಿಗೆ ಮಾಡಬೇಕಾದ ಕರ್ತವ್ಯಗಳು ಗೊತ್ತಿರುವುದಿಲ್ಲ. ಅಂತಹ ವ್ಯಕ್ತಿಯು ಉತ್ತಮ ಪ್ರಜೆ ಹೇಗೆ ಆಗುತ್ತಾನೆ ಎಂದು ಪ್ರಶ್ನಿಸಿದರು.

    ನರೇಂದ್ರ ಮೋದಿ ಮುಖ್ಯಮಂತ್ರಿ ಅವಧಿಯ ಬಗ್ಗೆ ಪ್ರಸ್ತಾಪ ಮಾಡಿದ ಅವರು, ಆ ಸಮಯದಲ್ಲಿ ಗುಜರಾತ್‌ ಶಾಲೆಗಳಲ್ಲಿ ಡ್ರಾಪ್‌ಔಟ್‌ ಅತಿ ದೊಡ್ಡ ಸಮಸ್ಯೆಯಾಗಿತ್ತು. ಮೋದಿಯವರು ಒಂದು ಹಬ್ಬದಂತೆಯೇ ದಾಖಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದರು ಮತ್ತು ಅದನ್ನು ಶೇ.100ಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಪೋಷಕರ ಸಮಿತಿಯನ್ನು ರಚಿಸಿದರು. ಒಂದು ವೇಳೆ ವಿದ್ಯಾರ್ಥಿ ಶಾಲೆಗೆ ಬರದಿದ್ದರೆ ಆ ವಿದ್ಯಾರ್ಥಿಯ ಬಗ್ಗೆ ಯೋಚಿಸಲಾಯಿತು. ಶಿಕ್ಷಕರಿಗೂ ಜವಾಬ್ದಾರಿಯನ್ನು ನೀಡಲಾಯಿತು. ಈ ಎಲ್ಲ ಕ್ರಮಗಳಿಂದ ಡ್ರಾಪ್ಔಟ್ ದರವು ಶೇ.37% ರಿಂದ ಈಗ ಶೇ.1ಕ್ಕಿಂತಲೂ ಕಡಿಮೆಯಾಗಿದೆ ಎಂದರು.

    ಮೋದಿ ಒಬ್ಬ ನಿರಂಕುಶ ನಾಯಕ ಎಂಬ ಆರೋಪಗಳನ್ನು ತಿರಸ್ಕರಿಸಿದ ಅಮಿತ್‌ ಶಾ, ಪ್ರಧಾನಮಂತ್ರಿಯವರು ತಮ್ಮ ಹುದ್ದೆ ಅಥವಾ ಶ್ರೇಣಿಯನ್ನು ಲೆಕ್ಕಿಸದೇ ಯಾರೇ ನೀಡಿದ ಎಲ್ಲ ಯೋಗ್ಯ ಸಲಹೆಗಳನ್ನು ಸ್ವೀಕರಿಸುತ್ತಾರೆ. ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ನಿರ್ಧಾರಗಳಿಗಾಗಿ ರಾಜಕೀಯ ಅಪಾಯಗಳನ್ನು ತೆಗೆದುಕೊಳ್ಳಲು ಮೋದಿ ಎಂದಿಗೂ ಹಿಂಜರಿಯಲಿಲ್ಲ ಎಂದು ಅವರು ಹೇಳಿದರು.

    ನಾನು ಮೋದಿ ಮತ್ತು ಅವರ ಕೆಲಸದ ಶೈಲಿಯನ್ನು ಹತ್ತಿರದಿಂದ ಗಮನಿಸಿದ್ದೇನೆ. ಅವರಂತಹ ತಾಳ್ಮೆಯ ಕೇಳುಗನನ್ನು ನಾನು ನೋಡಿಲ್ಲ. ಸಮಸ್ಯೆ ಏನೇ ಇರಲಿ ಅವರು ಎಲ್ಲರ ಮಾತನ್ನು ಆಲಿಸುತ್ತಾರೆ ಮತ್ತು ಕನಿಷ್ಠ ಮಾತನಾಡುತ್ತಾರೆ. ನಂತರ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ – ಸಾಕ್ಷ್ಯ ನೀಡಿ ಸ್ಪಷ್ಟನೆ ನೀಡಿದ ಸುಧಾಕರ್

    ಪಕ್ಷದ ಬೆಂಬಲಿಗರಿಗೆ ವಿರುದ್ಧವಾಗಬಹುದು ಎಂದು ಗೊತ್ತಿದ್ದರೂ ರಾಷ್ಟ್ರ ಮತ್ತು ಜನರ ಹಿತಾಸಕ್ತಿಗಾಗಿ ಕಠಿಣ ಮತ್ತು ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಮೋದಿ ಹಿಂಜರಿಯುವುದಿಲ್ಲ. ಕಪ್ಪುಹಣ ನಿಯಂತ್ರಣ, ತೆರಿಗೆ ವಂಚನೆಯ ಎಲ್ಲ ಲೋಪದೋಷಗಳ ತಡೆದು ಆರ್ಥಿಕ ಸುಧಾರಣೆ ಮಾಡುವ ವೇಳೆ ಕೆಲವು ವರ್ಷಗಳಿಂದ ನಮಗೆ ಮತ ಹಾಕಿದವರು ಸೇರಿದಂತೆ ಕೆಲವರು ತೊಂದರೆ ಅನುಭವಿಸುತ್ತಾರೆ. ಹಾಗಿದ್ದರೂ ಮೋದಿ ಇದರಿಂದ ಏನೂ ಪ್ರಯೋಜನ ಪಡೆಯುವುದಿಲ್ಲ. ಈ ಕಠಿಣ ಕ್ರಮದಿಂದ ಅಂತಿಮವಾಗಿ ದೇಶಕ್ಕೆ ಪ್ರಯೋಜನವಾಗಲಿದೆ ಎನ್ನುವುದನ್ನು ಜನರು ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದರು.

    ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಶಾ, ನಮ್ಮ ವೈಫಲ್ಯಗಳನ್ನು ಜನರಿಗೆ ಬಹಿರಂಗಪಡಿಸಿ ಆದರೆ ರಾಜಕೀಯ ಗುಣಮಟ್ಟವನ್ನು ಕಡಿಮೆ ಮಾಡಿ ವೈಯಕ್ತಿಕ ದಾಳಿಯನ್ನು ನಡೆಸುವುದು ಸರಿಯಲ್ಲ ಎಂದರು.

  • 98 ಅಂಕ ಪಡೆದ 96ರ ವಯೋವೃದ್ಧೆ

    98 ಅಂಕ ಪಡೆದ 96ರ ವಯೋವೃದ್ಧೆ

    ತಿರುವನಂತಪುರಂ: ಕೇರಳದ ಸಾಕ್ಷರತಾ ಕಾರ್ಯಕ್ರಮದ ಅಡಿಯಲ್ಲಿ ನಡೆದ ಪರೀಕ್ಷೆಯಲ್ಲಿ 96 ವಯಸ್ಸಿನ ವಯೋವೃದ್ಧೆಯೊಬ್ಬರು 98 ಅಂಕಗಳನ್ನು ಗಳಿಸಿದ್ದಾರೆ.

    ಅಲಪುಝಾ ಜಿಲ್ಲೆಯ ಕಾರ್ತಿಯಾಣಿ ಅಮ್ಮ, ಕೇರಳ ರಾಜ್ಯ ಸಾಕ್ಷರತಾ ಮಿಷನ್ ನ ‘ಅಕ್ಷರಲಕ್ಷಂ’ ಸಾಕ್ಷರತಾ ಪರೀಕ್ಷೆಯಲ್ಲಿ 100 ಅಂಕಗಳಲ್ಲಿ 98 ಅಂಕಗಳನ್ನು ಗಳಿಸಿದ್ದಾರೆ. ಪರೀಕ್ಷೆಯಲ್ಲಿ ಅವರ ಓದುವಿಕೆ, ಬರಹ ಮತ್ತು ಗಣಿತ ಕೌಶಲಗಳನ್ನು ಪರೀಕ್ಷಿಸಲಾಗಿದೆ.

    ಈ ವರ್ಷ ಸುಮಾರು 42,933 ಜನರು ಪರೀಕ್ಷೆಯನ್ನು ಉತ್ತೀರ್ಣರಾಗಿದ್ದಾರೆ. ಈ ಕಾರ್ಯಕ್ರಮ ಮೂಲಕ ರಾಜ್ಯವನ್ನು 100% ರಷ್ಟು ಸಾಕ್ಷರತೆ ಸಾಧಿಸುವ ಹಾದಿಯಲ್ಲಿದೆ. 1991 ರ ಎಪ್ರಿಲ್ 18 ರಂದು, ರಾಜ್ಯವನ್ನು ಸಂಪೂರ್ಣ ಸಾಕ್ಷರತಾ ರಾಜ್ಯ ಎಂದು ಘೋಷಿಸಲಾಗಿದೆ. ಆದರೆ ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ, ಸುಮಾರು 18 ಲಕ್ಷ ಜನರು ಅನಕ್ಷರಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ. ಆದ್ದರಿಂದ ಈ ವರ್ಷ ಜನವರಿ 26 ರಂದು ರಾಜ್ಯ ಸರ್ಕಾರವು `ಅಕ್ಷರಲಕ್ಷಂ’ ಹೆಸರಿನಲ್ಲಿ ಸಾಕ್ಷರತಾ ಕಾರ್ಯಕ್ರಮವನ್ನು ಪ್ರಾರಂಭಿಸಿತ್ತು.

    ಬುಡಕಟ್ಟು ಜನಾಂಗ, ಮೀನುಗಾರರು ಮತ್ತು ಸ್ಲಂ-ನಿವಾಸಿಗಳಂತಹ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಅನಕ್ಷರತೆಯನ್ನು ನಿರ್ಮೂಲನೆ ಮಾಡುವ ಗುರಿಯನ್ನು  ಈ ಕಾರ್ಯಕ್ರಮದ ಅಡಿ ಹಾಕಲಾಗಿದೆ.

    ನಮ್ಮ ಈ ಕಾರ್ಯಕ್ರಮದ ಗುರಿ ಅನಕ್ಷರತೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಮತ್ತು ರಾಜ್ಯದಲ್ಲಿ 100% ರಷ್ಟು ಸಾಕ್ಷರತೆಯನ್ನು ಸಾಧಿಸುವುದಾಗಿದೆ ಎಂದು ಸಾಕ್ಷರತಾ ಮಿಷನ್ ನಿರ್ದೇಶಕ ಪಿ.ಎಸ್. ಶ್ರೀಕಲಾ ಅವರು ಹೇಳಿದ್ದಾರೆ.

    ಈಗ 2011ರ ಜನಗಣತಿಯ ಪ್ರಕಾರ, ರಾಜ್ಯದ ಸಾಕ್ಷರತೆ ಪ್ರಮಾಣವು 2001ರಲ್ಲಿ 90.86% ರಷ್ಟು ಇದ್ದರೆ ಈಗ 94% ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv