Tag: ಅನಂತಕುಮಾರ್

  • 5 ವರ್ಷಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳ ಕ್ಷೇತ್ರದಲ್ಲಿ ಭಾರತ ನಂ.1: ಗಡ್ಕರಿ

    5 ವರ್ಷಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳ ಕ್ಷೇತ್ರದಲ್ಲಿ ಭಾರತ ನಂ.1: ಗಡ್ಕರಿ

    – ದೇಶದ ಗ್ರೀನರ್‌ ಎಕಾನಮಿಯ ಸಂಶೋಧನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ
    – ಪ್ರಸಕ್ತ ರಾಜಕಾರಣದಲ್ಲಿ ಅನಂತಕುಮಾರ್‌ ಅವರ ಕೊರತೆ ಎದ್ದು ಕಾಣುತ್ತಿದೆ

    ಬೆಂಗಳೂರು: ಎಲೆಕ್ಟ್ರಿಕ್‌ ವಾಹನಗಳ ಕ್ಷೇತ್ರದಲ್ಲಿ ಆಗುತ್ತಿರುವ ಸಂಶೋಧನೆಗಳನ್ನು ನೋಡಿದಲ್ಲಿ ಮುಂದಿನ 5 ವರ್ಷಗಳಲ್ಲಿ ಭಾರತ ದೇಶ ವಿಶ್ವದಲ್ಲೇ ಮೊದಲ ಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ. ಈ ಕ್ಷೇತ್ರದಲ್ಲೂ ಬೆಂಗಳೂರು ನಗರ ಪ್ರಮುಖ ಪಾತ್ರವಹಿಸಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

    ಇವಿ ಹಾಗೂ ಗ್ರೀನ್‌ ಹೈಡ್ರೋಜನ್‌ ನಂತಹ ಹಲವಾರು ಕ್ರಾಂತಿಕಾರಿ ಆವಿಷ್ಕಾರಗಳಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯ ಅದರಲ್ಲೂ ಬೆಂಗಳೂರು ನಗರ ದೇಶದ ಗ್ರೀನ್‌ ಎಕಾನಮಿಗೆ ಅಪಾರ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.

    ನಗರದ ಆರ್‌ ವಿ ಶಿಕ್ಷಕರ ಕಾಲೇಜಿನ ಸಭಾಂಗಣದಲ್ಲಿ ದಿವಂಗತ ಅನಂತಕುಮಾರ್‌ ಅವರ 3ನೇ ಪುಣ್ಯತಿಥಿಯ ಸ್ಮರಣಾರ್ಥ ಆಯೋಜಿಸಲಾಗಿದ್ದ ಅನಂತಕುಮಾರ್‌ ಸ್ಮಾರಕ ಉಪನ್ಯಾಸದಲ್ಲಿ ವರ್ಚುಯಲ್‌ ಆಗಿ ಭಾಗವಹಿಸಿ ಅವರು ಮಾತನಾಡಿದರು.

    ಅನಂತಕುಮಾರ್‌ ಅವರೊಂದಿಗೆ ತಮಗಿದ್ದ ಆತ್ಮೀಯ ಕ್ಷಣಗಳನ್ನು ಹಂಚಿಕೊಂಡ ಅವರು, ದೇಶದ ಪ್ರಸಕ್ತ ರಾಜಕಾರಣದಲ್ಲಿ ಅನಂತಕುಮಾರ್‌ ಅವರ ಕೊರತೆ ಎದ್ದು ಕಾಣುತ್ತಿದೆ. ದೇಶ ಅದರಲ್ಲೂ ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಕ್ಷದ ಬೆಳವಣಿಗೆಯಲ್ಲಿ ಅನಂತಕುಮಾರ್‌ ಅವರ ಕೊಡುಗೆ ಅಪಾರ. ಅವರು ಕರ್ನಾಟಕ ರಾಜ್ಯದ ಬಿಜೆಪಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಾವು ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದೆವು. ಈ ಮೂಲಕ ಭಾರತೀಯ ಜನತಾ ಪಕ್ಷ ದಕ್ಷೀಣ ಭಾರತದಲ್ಲಿ ತನ್ನ ಖಾತೆಯನ್ನು ತೆರೆಯಲು ಸಾಧ್ಯವಾಯಿತು ಎಂದು ಹೇಳಿದರು.

    ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷವಾಗಿ ಬೆಳೆಯುವಲ್ಲಿ ಅನಂತಕುಮಾರ್‌ ಅವರಂತಹ ಸದಸ್ಯರ ಕೊಡುಗೆ ಬಹಳ ಅಪಾರವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಅನಂತಕುಮಾರ್‌, ಅರುಣ್‌ ಜೇಟ್ಲಿ ಹಾಗೂ ಸುಷ್ಮಾ ಸ್ವರಾಜ್‌ ನಂತಹ ಪ್ರಮುಖರನ್ನು ಕಳೆದುಕೊಂಡು ಪಕ್ಷ ಬಡವಾಗಿದೆ. ಅನಂತಕುಮಾರ್‌ ಅವರಿಗೆ ಇನ್ನು ರಾಜಕಾರಣದಲ್ಲಿ ಬಹಳಷ್ಟು ಅವಕಾಶವಿತ್ತು. ಅವರ ಅನಾರೋಗ್ಯದ ಬಗ್ಗೆ ತಿಳಿದುಕೊಳ್ಳುವಲ್ಲಿ ಆದ ತಡದಿಂದಾಗಿ ಅವರನ್ನು ಅಕಾಲಿಕವಾಗಿ ಕಳೆದುಕೊಳ್ಳಬೇಕಾಯಿತು ಎಂದು ದು:ಖ ವ್ಯಕ್ತಪಡಿಸಿದರು.

    ಸಾಮಾಜಿಕ ಕಳಕಳಿ ಅಪಾರ: ಸಾಮಾನ್ಯ ಕಾರ್ಯಕರ್ತರೇ ಪಕ್ಷದ ಶಕ್ತಿ ಎಂದು ನಂಬಿದ್ದ ಅನಂತಕುಮಾರ್‌ ಅವರು ಅಪಾರ ಸಾಮಾಜಿಕ ಕಾಳಜಿಯನ್ನು ಹೊಂದಿದ್ದರು. ಅವರು ತಮ್ಮ ಪತ್ನಿ ಡಾ ತೇಜಸ್ವಿನಿ ಅನಂತಕುಮಾರ್‌ ಅವರೊಂದಿಗೆ ಸೇರಿ ಪ್ರಾರಂಭಿಸಿದ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ದೇಶದ ಲಕ್ಷಾಂತರ ಮಕ್ಕಳ ಹಸಿವನ್ನು ಇಂದಿಗೂ ನೀಗಿಸುತ್ತಿದೆ ಎಂದರು. ಇದನ್ನೂ ಓದಿ: ಮೃತ ಪೋಷಕರ ವಿವಾಹಿತ ಹೆಣ್ಣು ಮಕ್ಕಳು ಸರ್ಕಾರಿ ನೌಕರಿ ಪಡೆಯಲು ಅರ್ಹರು: ಯುಪಿ ಸರ್ಕಾರ

    ಬೆಂಗಳೂರು ನಗರದ ಕೊಡುಗೆ ಅಪಾರ: ದೇಶದಲ್ಲಿ ಗ್ರೀನ್‌ ಎಕಾನಮಿ ಬಹಳ ವೇಗವಾಗಿ ಅಭಿವೃದ್ದಿಗೊಳ್ಳುತ್ತಿದೆ. ಇವಿ ಹಾಗೂ ಗ್ರೀನ್‌ ಹೈಡ್ರೋಜನ್‌ ನಂತಹ ಕ್ಷೇತ್ರಗಳಲ್ಲಿ ಬೆಂಗಳೂರು ನಗರದ ಸ್ಟಾರ್ಟ್‌ ಅಪ್‌ ಗಳು ಪ್ರಮುಖ ಸಂಶೋಧನೆಯನ್ನು ಕೈಗೊಂಡಿವೆ. ಕರ್ನಾಟಕ ರಾಜ್ಯದಲ್ಲಿ ಇಥೆನಾಲ್‌ ಉತ್ಪಾದನೆ ಹೆಚ್ಚಾಗಿದೆ. ಫ್ಲೇಕ್ಸ್‌ ಇಂಜಿನ್‌ ಹಾಗೂ ಎಲೆಕ್ಟ್ರಿಕ್‌ ವಾಹನಗಳ ಅಭಿವೃದ್ದಿಯಲ್ಲಿ ಹಲವಾರು ಸಂಶೋಧನೆಗಳು ನಡೆಯುತ್ತಿವೆ. ಈ ಸಂಶೋಧನೆಗಳಲ್ಲಿ ಬೆಂಗಳೂರು ನಗರದ ಕೊಡುಗೆ ಬಹಳಷ್ಟಿದೆ. ಮುಂಬರುವ ದಿನಗಳಲ್ಲಿ ದೇಶದಲ್ಲಿ ಹಸಿರು ಆರ್ಥಿಕತೆ ಅಭಿವೃದ್ದಿಯಾಗಲಿದ್ದು, ಅದರಲ್ಲಿ ಬೆಂಗಳೂರು ನಗರದ ಸ್ಟಾರ್ಟ್‌ ಅಪ್‌ಗಳು ನೇತೃತ್ವ ವಹಿಸಲಿದೆ ಎಂದರು.

    ಒಳನಾಡು ಜಲಸಾರಿಗೆಗೆ ಹೆಚ್ಚಿನ ಮಹತ್ವ: ದೇಶದಲ್ಲಿ ಸಾಗಾಣಿಕೆ ವೆಚ್ಚ ಹೆಚ್ಚಿದೆ. ಇದನ್ನು ಮಾಡುವ ನಿಟ್ಟಿನಲ್ಲಿ ಈಗಾಗಲೇ ಅಂತರಾಷ್ಟ್ರೀಯ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಅದೇ ರೀತಿಯಲ್ಲಿ ಒಳನಾಡು ಜಲಸಾರಿಗೆಗೆ ಮಾರ್ಗಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಮುಂದಿನ 2 ವರ್ಷದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬೆಲೆ ಪೆಟ್ರೋಲ್‌ ವಾಹನದಷ್ಟೇ ಆಗಲಿದೆ: ಗಡ್ಕರಿ

    ಬೆಂಗಳೂರು ರಿಂಗ್‌ ರಸ್ತೆ: ಅನಂತಕುಮಾರ್‌ ಅವರ ಬಹುದಿನಗಳ ಕನಸಾಗಿದ್ದ ಬೆಂಗಳೂರು ರಿಂಗ್‌ ರಸ್ತೆಯ ನಿರ್ಮಾಣದ ಬಗ್ಗೆ ಈಗಾಗಲೇ ಚರ್ಚೆಯನ್ನು ನಡೆಸಲಾಗಿದೆ. ಚುನಾವಣೆಯ ನೀತಿ ಸಂಹಿತೆಯ ನಂತರ ಕರ್ನಾಟಕ ರಾಜ್ಯಕ್ಕೆ ಆಗಮಿಸಲಿದ್ದು ರಿಂಗ್‌ ರಸ್ತೆಯ ಕಾಮಗಾರಿ ಪ್ರಾರಂಭದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದರು.

    ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್‌, ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷ ಪಿ ವಿ ಕೃಷ್ಣ ಭಟ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ ಗಂಗಾಧರ, ಪ್ರೊ ಹೆಚ್ ಎಸ್ ನಾಗರಾಜ್, ಪುತ್ರಿಯರಾದ ಐಶ್ವರ್ಯ ಮತ್ತು ವಿಜೇತ ಅನಂತಕುಮಾರ್, ಅದಮ್ಯ ಚೇತನ ಸಂಸ್ಥೆಯ ಟ್ರಸ್ಟಿಗಳಾದ ಹೆಚ್‌ ಎನ್ ನಂದಕುಮಾರ್‌ ಮತ್ತು ಪ್ರದೀಪ್‌ ಓಕ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

  • ಜಯನಗರ ಲೈಬ್ರರಿ ಆವರಣದಲ್ಲಿ ಎಂಪಿ ಆಫೀಸ್ – ಇದು ಸರಿಯೇ ತೇಜಸ್ವಿ ಸೂರ್ಯ?

    ಜಯನಗರ ಲೈಬ್ರರಿ ಆವರಣದಲ್ಲಿ ಎಂಪಿ ಆಫೀಸ್ – ಇದು ಸರಿಯೇ ತೇಜಸ್ವಿ ಸೂರ್ಯ?

    ಬೆಂಗಳೂರು: ಯುವ ಸಂಸದ ತೇಜಸ್ವಿ ಸೂರ್ಯ ತನ್ನ ರಾಜಕೀಯ ಗುರುವಿಗೆ ತಿರುಮಂತ್ರ ಹೊಡೆದ್ರಾ ಎನ್ನುವ ಪ್ರಶ್ನೆ ಈಗ ಚರ್ಚೆಯಾಗುತ್ತಿದೆ.

    ಹೌದು. ಸಂಸದ ಅನಂತ ಕುಮಾರ್ ಉದ್ಘಾಟಿಸಿದ, ಶಾಸಕ ವಿಜಯ ಕುಮಾರ್ ಪಾಠ ಹೇಳಿದ್ದ ಲೈಬ್ರರಿ ಜಾಗಕ್ಕೆ ತೇಜಸ್ವಿ ಕಾಲಿಟ್ಟಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

    ಸಂಸದರಾಗಿ ಆಯ್ಕೆಯಾದ ಬಳಿ ಸಂಸದರ ಕಚೇರಿ ಕೊಡಿ ಎಂದು ತೇಜಸ್ವಿ ಸೂರ್ಯ ಬಿಬಿಎಂಪಿಗೆ ಮನವಿ ಮಾಡಿದ್ದರು. ಈ ವೇಳೆ ಅನಂತಕುಮಾರ್ ಅವರ ಕಚೇರಿಯನ್ನು ಬಳಕೆ ಮಾಡಲು ನಿರಾಕರಿಸಿದ ಪರಿಣಾಮ ಅವರಿಗೆ ಜಯನಗರದ ಸಾರ್ವಜನಿಕ ಲೈಬ್ರರಿ ಆವರಣದಲ್ಲಿ ಕಚೇರಿ ತೆರೆಯಲು ಅನುಮತಿ ನೀಡಲಾಗಿದೆ.

    ಇದು ಸರಿಯೇ?
    ಸಿಎ, ಐಎಎಸ್, ಐಪಿಎಸ್ ಅಧಿಕಾರಿಗಳಾಗಲು ಈ ಲೈಬ್ರರಿಯಲ್ಲಿ ವಿದ್ಯಾರ್ಥಿಗಳು ನಿತ್ಯ ಓದುತ್ತಾರೆ. ಸದ್ಯ ಸಂಸದರ ಕಚೇರಿ ಇಲ್ಲಿ ತೆರೆದರೆ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಸಂಸದರನ್ನು ನೋಡಲು ನಿತ್ಯ ಬರುತ್ತಾರೆ. ಈ ವೇಳೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತದೆ. ಅಲ್ಲದೇ ಜೊತೆಗೆ ಮುಖ್ಯ ರಸ್ತೆ ಆಗಿರುವುದರಿಂದ ಪಾರ್ಕಿಂಗ್ ಸಮಸ್ಯೆಯೂ ಹೆಚ್ಚಾಗಲಿದೆ. ಇದರಿಂದ ಲೈಬ್ರರಿಗೆ ಬರುವ ವಿದ್ಯಾರ್ಥಿಗಳಿಗೆ ಓದಲು ಸಮಸ್ಯೆಯಾಗುತ್ತದೆ. ಈ ವಿಚಾರ ತಿಳಿದಿದ್ದರೂ ತೇಜಸ್ವಿ ಸೂರ್ಯ ಅವರು ಇಲ್ಲೇ ಕಚೇರಿ ಮಾಡುತ್ತಿರುವುದು ಎಷ್ಟು ಸರಿ ಎಂದು ವಿದ್ಯಾರ್ಥಿಗಳು ಪ್ರಶ್ನೆ ಮಾಡುತ್ತಿದ್ದಾರೆ.

    ಈ ಸ್ಥಳವನ್ನು ಕೆಲ ಸಂಘ ಸಂಸ್ಥೆಗಳು ಬಡ ಮಕ್ಕಳಿಗೆ ಟ್ಯೂಷನ್ ನೀಡಲು ಬಳಸುತ್ತಿದ್ದವು. ಈ ಎಲ್ಲಾ ಮಾಹಿತಿ ಸಂಸದರಿಗೆ ಗೊತ್ತಾಗಲಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರದಲ್ಲಿ ಮೂಡಿದೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಸಂಸದ ತೇಜಸ್ವಿ ಸೂರ್ಯ ಅವರು, ಸಂಸದರ ಕಚೇರಿ ನಿರ್ಮಾಣವಾಗುತ್ತಿರುವುದು ಜಯನಗರದ ಸಾರ್ವಜನಿಕ ಲೈಬ್ರರಿ ಇರುವ ಕಟ್ಟದ ಗ್ರೌಂಡ್ ಫ್ಲೋರಿನಲ್ಲಿ. ಈ ಕಟ್ಟಡ ಮೊದಲ ಫ್ಲೋರಿನಲ್ಲಿ ಲೈಬ್ರರಿ ಇದೆ. ಅದರ ಕೆಳಗೆ ಇರುವ ಟ್ರಸ್ಟ್ ಕಚೇರಿಯನ್ನು ಸಂಸದರ ಕಚೇರಿಯಾಗಿ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ವಿದ್ಯಾರ್ಥಿಗಳು ನನ್ನ ಪರವಿದ್ದಾರೆ. ಕೆಲವರು ಇದನ್ನೇ ದುರುಪಯೋಗ ಪಡಿಸಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ ಅಷ್ಟೇ. ಕೆಲವರು ಮೊದಲು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಟ್ರಸ್ಟನ್ನು ಅಲ್ಲಿಂದ ಖಾಲಿ ಮಾಡಿಸಿ ಬೇರೆಯವರಿಗೆ ನೀಡಲು ತೀರ್ಮಾನ ಮಾಡಿದ್ದರು. ಸದ್ಯ ಬಿಬಿಎಂಪಿ ಸಂಸದರ ಕಚೇರಿಗೆ ನೀಡಿದೆ ಎಂದರು.

  • ಅನಂತಕುಮಾರ್ ಅಕ್ಕರೆಯ ಅಕ್ಕ ಇನ್ನಿಲ್ಲ: ತೇಜಸ್ವಿನಿ

    ಅನಂತಕುಮಾರ್ ಅಕ್ಕರೆಯ ಅಕ್ಕ ಇನ್ನಿಲ್ಲ: ತೇಜಸ್ವಿನಿ

    ಬೆಂಗಳೂರು: ಅನಂತಕುಮಾರ್ ಅಕ್ಕರೆಯ ಅಕ್ಕ ಇನ್ನಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.

    ತೇಜಸ್ವಿನಿ ತಮ್ಮ ಟ್ವಿಟ್ಟರಿನಲ್ಲಿ ಅನಂತಕುಮಾರ್ ಅವರು ಸುಷ್ಮಾ ಅವರ ಕಾಲಿಗೆ ಬೀಳುವ ಫೋಟೋ ಹಾಕಿ ಅದಕ್ಕೆ, “ಭಾರತದ ಅತ್ಯಂತ ಪ್ರೀತಿಯ ಹಾಗೂ ಎತ್ತರದ ನಾಯಕರಲ್ಲಿ ಒಬ್ಬರಾದ ಸುಷ್ಮಾ ಸ್ವರಾಜ್ ಅವರ ಆಕಾಲಿಕ ನಿಧನಕ್ಕೆ ತೀವ್ರ ದುಃಖವನ್ನುಂಟು ಮಾಡಿದೆ. ನಾನು ಅವರಿಗೆ ಸಂತಾಪವನ್ನು ಸೂಚಿಸುತ್ತೇನೆ. ಅವರ ದೊಡ್ಡ ಪರಂಪರೆ ನಮಗೆ ಸ್ಫೂರ್ತಿ ನೀಡುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.

    ಅಲ್ಲದೆ ಮತ್ತೊಂದು ಟ್ವೀಟ್‍ನಲ್ಲಿ, “ಅನಂತಕುಮಾರ್ ಅವರಿಗೂ ಹಾಗೂ ಸುಷ್ಮಾ ಸ್ವರಾಜ್ ಅವರಿಗೂ ಅಭಾವಿಪ(ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್) ದ ದಿನದಿಂದಲೇ ಪರಿಚಯ. ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸುವಂತೆ ಮನವಿ ಮಾಡಿದ್ದರಲ್ಲಿ ಅನಂತಕುಮಾರ್ ಅವರದು ಬಹು ದೊಡ್ಡ ಪಾತ್ರ. ಅವರಿಗೆ ಕನ್ನಡದಲ್ಲಿ ಭಾಷಣ ಬರೆದು ಕೊಡುತ್ತಿದ್ದರು. ಪ್ರತಿ ವರಮಹಾಲಕ್ಷ್ಮಿಗೆ ನಮ್ಮ ಮನೆಗೆ ಬಂದು ನಂತರ ಬಳ್ಳಾರಿಗೆ ಹೋಗುತ್ತಿದ್ದರು” ಎಂದು ಟ್ವೀಟ್ ಮಾಡುವ ಮೂಲಕ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.

    ಸುಷ್ಮಾ ಸ್ವರಾಜ್ ಅವರ ಆರೋಗ್ಯದಲ್ಲಿ ಮಂಗಳವಾರ ರಾತ್ರಿ ಏರುಪೇರು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ತಕ್ಷಣವೇ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

  • ಕಾವೇರಿ ನದಿಯಲ್ಲಿ ಅನಂತಕುಮಾರ್ ಅಸ್ಥಿ ವಿಸರ್ಜನೆ

    ಕಾವೇರಿ ನದಿಯಲ್ಲಿ ಅನಂತಕುಮಾರ್ ಅಸ್ಥಿ ವಿಸರ್ಜನೆ

    ಮಂಡ್ಯ: ಸೋಮವಾರ ನಿಧನರಾಗಿದ್ದ ಕೇಂದ್ರ ಸಚಿವ ಅನಂತಕುಮಾರ್ ಅವರ ಅಸ್ಥಿಯನ್ನು ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.

    ದಿವಂಗತ ಅನಂತಕುಮಾರ್ ಅವರ ಸಹೋದರ ನಂದ ಕುಮಾರ್ ಅವರು ಇಂದು ಅಸ್ಥಿ ವಿಸರ್ಜನೆಯನ್ನು, ವೇದಬ್ರಹ್ಮ ಡಾಕ್ಟರ್ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಬ್ರಾಹ್ಮಣ ಸಂಪ್ರದಾಯದಂತೆ ಅಸ್ಥಿಗೆ ಪಂಚಾಮೃತ, ಪಂಚಗವ್ಯ ಅಭಿಷೇಕವನ್ನು ಮಾಡಿ, ನಂತರ ದೂಪ ದೀಪ ನೈವೇದ್ಯದಿಂದ ಕಾವೇರಿ ಮಾತೆಗೆ ಫಲಗಳ ಅರ್ಪಣೆ ಮಾಡಿ ಪಶ್ಚಿಮ ವಾಹಿನಿಯಲ್ಲಿ ಅವರ ಅಸ್ಥಿಯನ್ನು ವಿಸರ್ಜನೆ ಮಾಡಲಾಯಿತು.

    ತುಲಾಮಾಸದಲ್ಲಿ ಗಂಗೆಯೇ ಕಾವೇರಿಯಲ್ಲಿ ವಾಸ ಮಾಡುತ್ತಾಳೆ ಎಂಬ ನಂಬಿಕೆ ಇದೆ. ಈ ಸಮಯದಲ್ಲಿ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿದ್ದು, ಧಾರ್ಮಿಕವಾಗಿಯೂ ಮಹತ್ವ ಪಡೆದುಕೊಂಡಿತ್ತು. ಅಸ್ಥಿ ವಿಸರ್ಜನೆ ವೇಳೆ ಅನಂತಕುಮಾರ್ ಕುಟುಂಬಸ್ಥರು, ಬಿಜೆಪಿ ಮುಖಂಡರಾದ ಪ್ರಹ್ಲಾದ್ ಜೋಷಿ, ರಾಮದಾಸ್, ಪ್ರತಾಪ್ ಸಿಂಹ, ಶ್ರೀರಂಗಪಟ್ಟಣದ ತಾಲೂಕು ಬಿಜೆಪಿ ಅಧ್ಯಕ್ಷ ಶ್ರೀಧರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

    ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ ಕುಮಾರ್ ಅವರು ಸೋಮವಾರ ನಸುಕಿನ ಜಾವ ಶಂಕರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ನಂತರ ಅವರ ಮೃತದೇಹವನ್ನು ಬೆಂಗಳೂರಿನ ಬಸವನಗುಡಿಯಲ್ಲಿರೋ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ರಾಜಕೀಯ ಮುಖಂಡರು ಹಾಗೂ ಗಣ್ಯರು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಸೋಮವಾರ ಅಂತಿಮ ದರ್ಶನ ಪಡೆದಿದ್ದರು.

    ಅದಮ್ಯ ಚೇತನ, ದೆಹಲಿಯ ಕನ್ನಡದ ಧ್ವನಿ, ಬಡವರ ಬಂಧು, ಧೀಮಂತ ನಾಯಕ, ಸ್ನೇಹ ಜೀವಿ, ಕರ್ನಾಟಕ ಬಿಜೆಪಿಯ ಆಧಾರಸ್ತಂಭ ಅನಂತಕುಮಾರ್‍ರ ಪಾರ್ಥಿವ ಶರೀರವನ್ನು ಮಂಗಳವಾರ ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರವನ್ನು ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಗಿತ್ತು. ಪುರೋಹಿತ ಶ್ರೀನಾಥ್ ಅವರ ನೇತೃತ್ವದಲ್ಲಿ ಸಹೋದರ ನಂದಕುಮಾರ್ ಅವರು ಅಂತಿಮ ವಿಧಿ ವಿಧಾನ ನೆರವೇರಿಸಿ, ಅಗ್ನಿ ಸ್ಪರ್ಶ ಮಾಡಿದ್ದರು. ಈ ವೇಳೆ ಅನಂತ ಕುಮಾರ್ ಅವರ ಕುಟುಂಬಸ್ಥರು, ಸಂಬಂಧಿಕರು, ಆಪ್ತರು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸಂಘಟನಾ ಚತುರನಿಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ

    ಸಂಘಟನಾ ಚತುರನಿಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ

    ಬೆಂಗಳೂರು: ಉತ್ತಮ ಸಂಸದೀಯ ಪಟು, ಸಜ್ಜನ, ಮುತ್ಸದಿ, ಬಿಜೆಪಿಯ ಮಾಸ್ಟರ್ ಮೈಂಡ್, ಸಂಘಟನಾ ಚತುರ, ಕೇಂದ್ರ ಸಚಿವ ಅನಂತಕುಮಾರ್ ಇಂದು ಬೆಳಗಿನ ಜಾವ ವಿಧಿವಶರಾಗಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ನಾಯಕನ ಅಂತಿಮ ದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಪಡೆದುಕೊಂಡರು.

    ವಾರಣಾಸಿಯಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ಅಗಲಿದ ನಾಯಕನಿಗೆ ಹೂಗುಚ್ಛ ಅರ್ಪಿಸಿ ಕೊನೆಯ ನಮನ ಸಲ್ಲಿಸಿ, ಅನಂತಕುಮಾರ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಈ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜ್ಯಪಾಲ ವಜೂಬಾಯಿ ವಾಲಾ ಉಪಸ್ಥಿತರಿದ್ದರು.

    ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಅನಂತಕುಮಾರ್ ಅವರಿಗೆ ವಿದೇಶಗಳಲ್ಲೂ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿತ್ತು. ಕಳೆದ ಎರಡು ದಿನಗಳಿಂದ ವೆಂಟಿಲೇಟರ್‍ನಲ್ಲಿ ಇರಿಸಲಾಗಿತ್ತು. ಆದರೆ ಇವತ್ತು ಬೆಳಗಿನ ಜಾವ ಅಪಾರ ಅಭಿಮಾನಿಗಳನ್ನ ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಜುಲೈ 22, 1959ರಲ್ಲಿ ಜನಿಸಿದ್ದ ಅವರಿಗೆ 59 ವರ್ಷ ವಯಸ್ಸಾಗಿತ್ತು.

    ಅನಂತಕುಮಾರ್ ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅನಂತಕುಮಾರ್ ಅವರ ಅಕಾಲಿಕ ನಿಧನಕ್ಕೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಪ್ರಧಾನಿ ಮೋದಿ, ಕೇಂದ್ರ ಸಚಿವ ಸಂಪುಟ, ರಾಜಕೀಯ ಗುರು ಅಡ್ವಾಣಿ, ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಬಿಜೆಪಿ ಅಧ್ಯಕ್ಷ-ಮಿತ್ರ ಯಡಿಯೂರಪ್ಪ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಎಲ್ಲಾ ನಾಯಕರು, ಬಿಜೆಪಿ ಮುಖಂಡರು ಕಂಬನಿ ಮಿಡಿದಿದ್ದಾರೆ.

    ಅನಂತ ಕುಮಾರ್ ಅವರು ಅಜಾತಶತ್ರು ಎಂದೇ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದರು. ಅವರ ಅಗಲಿಕೆಗೆ ಪಕ್ಷಾತೀತವಾಗಿ ಎಲ್ಲರು ಕಂಬನಿ ಮಿಡಿದಿದ್ದಾರೆ. ಸಿಎಂ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್ ಜೊತೆ ಅಶೋಕ್ ಅವರು ಕೆಲಕಾಲ ಅನಂತಕುಮಾರ್ ವ್ಯಕ್ತಿತ್ವದ ಬಗ್ಗೆ ಮುಕ್ತವಾಗಿ ಮಾತನಾಡಿದ್ರು. ಇನ್ನು, ದುಬೈನಿಂದಲೇ ದೇವೇಗೌಡ್ರು ಮಾತನಾಡಿ, ಅನಂತಕುಮಾರ್ ವ್ಯಕ್ತಿತ್ವ ಗುಣಗಾನ ಮಾಡಿದ್ದಾರೆ.

    ಮಂಗಳವಾರ ಬೆಳಗ್ಗೆ 8 ಗಂಟೆಗೆ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಹಾಗೂ 10 ಗಂಟೆಗೆ ಬಸವನಗುಡಿಯ ನ್ಯಾಷನಲ್ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಮಧ್ಯಾಹ್ನ 1 ಗಂಟೆ ಸುಮಾರಿಗೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ನಾಳೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಪಕ್ಷದ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಬಿಜೆಪಿ ಅಗ್ರ ನಾಯಕರು ಅಶ್ರುತರ್ಪಣ ಸಲ್ಲಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನನ್ನ ಉಪವಾಸವನ್ನು ನಿಲ್ಲಿಸಿದ್ದ ಅನಂತಕುಮಾರ್ ಸಾವನ್ನು ನಿರೀಕ್ಷಿಸಿರಲಿಲ್ಲ: ಎಚ್‍ಡಿಡಿ

    ನನ್ನ ಉಪವಾಸವನ್ನು ನಿಲ್ಲಿಸಿದ್ದ ಅನಂತಕುಮಾರ್ ಸಾವನ್ನು ನಿರೀಕ್ಷಿಸಿರಲಿಲ್ಲ: ಎಚ್‍ಡಿಡಿ

    ಬೆಂಗಳೂರು: ಕೇಂದ್ರ ಸಚಿವರ ಹಾಗೂ ಬಿಜೆಪಿ ಮುಖಂಡ ಅನಂತಕುಮಾರ್ ರವರ ಅಕಾಲಿಕ ನಿಧನದ ಸುದ್ದಿ ಆಘಾತವನ್ನುಂಟುಮಾಡಿದೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಂಬನಿ ಮಿಡಿದಿದ್ದಾರೆ.

    ಅನಂತಕುಮಾರ್ ರವರ ಅಕಾಲಿಕ ಸಾವಿನ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನಾನು ಪ್ರಧಾನಿಮಂತ್ರಿಯಾಗಿದ್ದಾಗ ಅವರು ಮೊದಲನೇ ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಯಾವಾಗಲೂ ಚತುರತೆಯಿಂದ ಕೆಲಸ ಮಾಡುತ್ತಿದ್ದರು. ಅವರು ಎಂದಿಗೂ ಹೆಚ್ಚಿಗೆ ಮಾತನಾಡುತ್ತಿರಲಿಲ್ಲ. ಅವರು ಇಷ್ಟು ಚಿಕ್ಕ ವಯಸ್ಸಿನಲ್ಲೇ ಹೋಗುತ್ತಾರೆಂದು ನಿರೀಕ್ಷಿಸಿರಲಿಲ್ಲ. ಅವರ ಸಾವಿನಿಂದಾಗಿ ಆಘಾತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಅವರು ವಿದೇಶದಿಂದ ಬಂದ ನಂತರ, ಮಗ ರೇವಣ್ಣ ಶಂಕರ ಆಸ್ಪತ್ರೆಗೆ ಹೋಗಿ ನೋಡಿಕೊಂಡು ಬಂದಿದ್ದರು. ನಾನು ಅವರನ್ನು ನೋಡಬೇಕೆಂದು ಅಂದುಕೊಂಡಿದ್ದೆ, ಆದರೆ ಆಸ್ಪತ್ರೆಯ ಸಿಬ್ಬಂದಿ ಯಾರನ್ನು ನೋಡಲು ಬಿಡುತ್ತಿಲ್ಲವೆಂದು ರೇವಣ್ಣ ಹೇಳಿದ್ದರು. ಅಲ್ಲದೇ ಅವರಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಮಾತ್ರ ನನಗೆ ಗೊತ್ತಿತ್ತು.

    ಕಾವೇರಿ ವಿವಾದ ಏರ್ಪಟ್ಟು ಅಟಾರ್ನಿ ಜನರಲ್ 4 ತಿಂಗಳಲ್ಲಿ ಕಾವೇರಿ ನಿಗಮ ಮಂಡಳಿಯನ್ನು ಪ್ರಾರಂಭಿಸುತ್ತೇವೆಂದು ಹೇಳಿದಾಗ, ನಾನು ಸಂಸತ್ತಿನ ಮುಂದಿರುವ ಗಾಂಧಿ ಪ್ರತಿಮೆಯ ಬಳಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದೆ. ಆಗ ಸಂಸದೀಯ ಸಚಿವರಾಗಿದ್ದ ಅವರು ಮೋದಿಯವರ ಮೇಲೆ ಪ್ರಭಾವ ಬೀರಿ, ಅದೇ ಅಟಾರ್ನಿ ಜನರಲ್ ಮೂಲಕ ಆದೇಶ ಹಿಂಪಡೆಯುವಂತೆ ಮಾಡಿದ್ದರು. ಅಲ್ಲದೇ ನಾನು ಉಪವಾಸ ನಡೆಸುತ್ತಿದ್ದ ಸ್ಥಳಕ್ಕೆ ಬಂದು, ನಿಮ್ಮ ಆರೋಗ್ಯ ಹಾಳಾಗುತ್ತದೆ. ದಯಮಾಡಿ ಉಪವಾಸ ನಿಲ್ಲಿಸಿ ಎಂದು ಹೇಳಿ ಉಪವಾಸ ಹೋರಾಟವನ್ನು ನಿಲ್ಲಿಸಿದ್ದರು. ಅವರ ಬಗ್ಗೆ ಹೇಳಬೇಕೆಂದರೆ ಬಹಳ ವಿಷಯಗಳು ಇವೆ ಎಂದರು.

    ಹತ್ತು ಹಲವಾರು ಇಲಾಖೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾಗಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಇದೂವರೆಗೂ ಯಾವೊಬ್ಬ ಇತರೆ ಪಕ್ಷದ ಮುಖಂಡರೊಂದಿಗೆ ಅವರು ವೈರತ್ವ ಬೆಳೆಸಿಕೊಂಡಿದ್ದವರಲ್ಲ. ಎಲ್ಲರೂ ಅವರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು.

    ಅವರ ಸಾವಿನಿಂದಾಗಿ ಲಕ್ಷಾಂತರ ಅಭಿಮಾನಿಗಳು ಹಾಗೂ ಅವರ ಕುಟುಂಬದವರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ದೇವರ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಕೊಡಲಿ. ಕಾರಣಾಂತರಗಳಿಂದ ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಆತ್ಮೀಯ ಸ್ನೇಹಿತ, ಅಜಾತಶತ್ರುವನ್ನು ಕಳೆದುಕೊಂಡಿದ್ದೇನೆ: ಸಿಎಂ ಕುಮಾರಸ್ವಾಮಿ

    ಆತ್ಮೀಯ ಸ್ನೇಹಿತ, ಅಜಾತಶತ್ರುವನ್ನು ಕಳೆದುಕೊಂಡಿದ್ದೇನೆ: ಸಿಎಂ ಕುಮಾರಸ್ವಾಮಿ

    ಬೆಂಗಳೂರು: ಆತ್ಮೀಯ ಸ್ನೇಹಿತ ಹಾಗೂ ಅಜಾತಶತ್ರುವಾಗಿದ್ದ ಕೇಂದ್ರ ಸಚಿವ ಹಾಗೂ ರಾಜ್ಯ ಬಿಜೆಪಿ ಮುಖಂಡ ಅನಂತಕುಮಾರ್ ಸಾವಿನ ಸುದ್ದಿ ಸಿಡಿಲುಬಡಿದಂತಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.

    ವಿಶ್ರಾಂತಿ ನಿಮಿತ್ತ ಮೈಸೂರಿಗೆ ತೆರಳಿದ್ದ ಸಿಎಂ ಕುಮಾರಸ್ವಾಮಿಯವರು ಅನಂತಕುಮಾರ್ ಅವರ ಸಾವಿನ ಸುದ್ದಿ ಕೇಳುತ್ತಲೇ ಬೆಂಗಳೂರಿಗೆ ವಾಪಾಸ್ಸಾಗಿದ್ದರು. ನಂತರ ಬಸವನಗುಡಿಯಲ್ಲಿರುವ ಸುಮೇರು ನಿವಾಸಕ್ಕೆ ಭೇಟಿ ನೀಡಿ, ಅನಂತಕುಮಾರ್ ಅವರ ಅಂತಿಮ ದರ್ಶನ ಪಡೆದುಕೊಂಡರು.

    ದರ್ಶನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವರು ಹಾಗೂ ನನ್ನ ಆತ್ಮೀಯ ಸ್ನೇಹಿತರಾಗಿದ್ದ ಅನಂತಕುಮಾರ್ ಅವರ ನಿಧನ ಸುದ್ದಿ ನನಗೂ ಸೇರಿದಂತೆ ಲಕ್ಷಾಂತರ ಅಭಿಮಾನಿಗಳಿಗೆ ಆಘಾತ ತಂದಿದೆ. ಈ ದುಃಖವನ್ನು ಭರಿಸುವ ಶಕ್ತಿ, ದೇವರು ಅವರ ಕುಟುಂಬಕ್ಕೆ ನೀಡಲಿ. ಈ ರೀತಿ ಅವರು ನಮ್ಮನ್ನೆಲ್ಲಾ ಅಗಲಿ ಹೋಗುತ್ತಾರೆಂದು ನಿರೀಕ್ಷಿಸಿರಲಿಲ್ಲ. ನಾಡಿನ ಲಕ್ಷಾಂತರ ಅಭಿಮಾನಿಗಳನ್ನು ಅನಾಥರನ್ನಾಗಿ ಬಿಟ್ಟು ಹೋಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆಂದು ಹೇಳಿದರು.

    ಸಾಮಾನ್ಯ ಕುಟುಂಬದಲ್ಲಿ ಜನಿಸಿ, ರಾಷ್ಟ್ರಮಟ್ಟದಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಣೆ ಮಾಡಿದ್ದರು. ಕೇಂದ್ರದ ಸಚಿವರಾಗಿ ನಾಡಿಗೆ ಸಲ್ಲಿಸಿರುವ ಸೇವೆ ಅಪಾರ. ಒಂದು ಪಕ್ಷದ ನಾಯಕರಾಗಿ, ಯಾವೊಂದು ಪಕ್ಷದ ಮುಖಂಡರ ಜೊತೆ ಸಂಘರ್ಷಕ್ಕೆ ಅವಕಾಶ ಮಾಡಿಕೊಡದೇ, ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುವ ಮೂಲಕ ಅಜಾತಶತ್ರು ಎಂದೆನಿಸಿಕೊಂಡಿದ್ದರು. ಕಾಕತಾಳಿಯವಂತೆ ಇಬ್ಬರೂ 1996 ರಲ್ಲಿ ಲೋಕಸಭೆ ಸಂಸದರಾಗಿ ಆಯ್ಕೆಯಾಗಿದ್ದೆವು ಎಂದು ತಮ್ಮ ನೆನಪನ್ನು ಹಂಚಿಕೊಂಡರು.

    ತಮ್ಮ ಕಿರಿಯ ವಯಸ್ಸಿನಲ್ಲೇ ನಾಡಿಗೆ ಅಪಾರವಾದ ಸೇವೆ ಸಲ್ಲಿಸಿದ್ದರು. ಆದರೆ ಅವಶ್ಯಕತೆಯಿರುವಾಗ ಅವರ ಸಾವು ವೈಯಕ್ತಿಕವಾಗಿ ನನಗೆ ತುಂಬಲಾರದ ನಷ್ಟತಂದಿದೆ. ನಾನು 2ನೇ ಬಾರಿ ಮುಖ್ಯಮಂತ್ರಿಯಾಗಿ ಜೂನ್ ತಿಂಗಳಲ್ಲಿ ದೆಹಲಿಗೆ ಹೋಗಿದ್ದೆ, ಆಗ ಅವರನ್ನು ಭೇಟಿ ಮಾಡಿದ್ದೆ. ಅಂದು ಅವರು ಆರೋಗ್ಯವಾಗಿಯೇ ಇದ್ದರು. ಅಚಾನಕ್ ಆಗಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿಕೊಂಡು, ನಾವು ಊಹೆ ಮಾಡದ ರೀತಿ ಬಾರದ ಲೋಕಕ್ಕೆ ಹೋಗಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

    ಜವರಾಯ ಕರೆದಾಗ ಎಲ್ಲರೂ ಹೋಗಲೇಬೇಕು. ಅವನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜವರಾಯನ ಕರೆಗೆ ಎಲ್ಲರೂ ತಲೆಬಾಗಲೇ ಬೇಕು. ಆದರೆ ಈ ರೀತಿ ಆಗುತ್ತದೆಂದು ನಿರೀಕ್ಷಿಸಿರಲಿಲ್ಲ. ನಾನು ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆಂದು ಭಾವುಕರಾದರು. ಇದನ್ನೂ ಓದಿ: ರಾಜಕಾರಣಕ್ಕೂ ಮೀರಿದ ಸ್ನೇಹ ನಮ್ಮ ಕುಟುಂಬಗಳ ಮಧ್ಯೆ ಇತ್ತು- ಸಿಎಂ ಸಂತಾಪ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಅಪ್ಪಿಕೊಂಡು ಗಳಗಳನೇ ಅತ್ತ ನಟಿ ತಾರಾ

    ಅಪ್ಪಿಕೊಂಡು ಗಳಗಳನೇ ಅತ್ತ ನಟಿ ತಾರಾ

    ಬೆಂಗಳೂರು: ದಿವಂಗತ ಕೇಂದ್ರ ಸಚಿವ ಅನಂತ ಕುಮಾರ್ ಅಂತಿಮ ದರ್ಶನ ಪಡೆದ ಬಳಿಕ ಮಾಜಿ ವಿಧಾನ ಪರಿಷತ್ ಸದಸ್ಯೆ, ನಟಿ ತಾರಾ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

    ಅನಂತ ಕುಮಾರ್ ಅವರ ಅಂತಿಮ ದರ್ಶನ ಪಡೆಯಲು ನಟಿ ತಾರಾ ಅವರು ಬಂದಿದ್ದಾರೆ. ಈ ವೇಳೆ ಅನಂತ ಕುಮಾರ್ ಅವರ ಅಂತಿಮ ದರ್ಶನ ಪಡೆದು ಬಳಿಕ ಅವರ ಪತ್ನಿ ತೇಜಸ್ವಿನಿ ಬಳಿ ಹೋಗಿ ಸಾಂತ್ವಾನ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅಲ್ಲೇ ತೇಜಸ್ವಿನಿ ಅವರ ಪಕ್ಕದಲ್ಲಿದ್ದ ಸಂಬಂಧಿಕರನ್ನು ನೋಡಿ ಅಪ್ಪಿಕೊಂಡು ನಟಿ ತಾರಾ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

    ಈಗಾಗಲೇ ನಟ ಪುನೀತ್, ಜಗ್ಗೇಶ್ ಬಂದು ಅನಂತಕುಮಾರ್ ಅವರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿ ಹೋಗಿದ್ದಾರೆ. ನಟ ಗಣೇಶ್ ಮತ್ತು ಪತ್ನಿ ಶಿಲ್ಪಾ ಗಣೇಶ್ ಕೂಡ ಟ್ವೀಟ್ ಮಾಡುವ ಮೂಲಕ ಅನಂತಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

    ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ನಸುಕಿನ ಜಾವ ಅನಂತ ಕುಮಾರ್ ಅವರು ನಿಧನರಾಗಿದ್ದಾರೆ. ಇಂದು ನಗರದಲ್ಲಿ ಅವರ ಮನೆಯಲ್ಲಿಯೇ ಸ್ನೇಹಿತರಿಗೆ, ಗಣ್ಯರಿಗೆ ಮತ್ತು ಸಂಬಂಧಿಕರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಗಣೇಶ್ ದಂಪತಿಯಿಂದ ಸಂತಾಪ

    ಗಣೇಶ್ ದಂಪತಿಯಿಂದ ಸಂತಾಪ

    ಬೆಂಗಳೂರು: ಕೇಂದ್ರ ಸಚಿವ ಅನಂತ ಕುಮಾರ್ ಸಾವಿಗೆ ನಟ ಗಣೇಶ್ ಮತ್ತು ಅವರ ಪತ್ನಿ ಶಿಲ್ಪಾ ಗಣೇಶ್ ಇಬ್ಬರು ಸಂತಾಪ ಸೂಚಿಸಿದ್ದಾರೆ.

    ಶಿಲ್ಪಾ ಗಣೇಶ್ ರಾಜ್ಯ ಬಿಜೆಪಿ ಮಹಿಳಾ ಮೋರ್ಚ ಉಪಾಧ್ಯಕ್ಷೆಯಾಗಿದ್ದು, ಟ್ವೀಟ್ ಮಾಡುವ ಮೂಲಕ ಅನಂತಕುಮಾರ್ ಅವರ ನಿಧನಕ್ಕೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಗಣೇಶ್ ಕೂಡ ಟ್ವೀಟ್ ಮಾಡಿದ್ದಾರೆ.

    “ಅನಂತಕುಮಾರ್ ಅವರು, ಬಿಜಿಪಿ ಪಕ್ಷವನ್ನು ಬಲಪಡಿಸಲು ಹಾಗೂ ದೇಶ ಸೇವೆ ಮಾಡಲು ತಮ್ಮ ಜೀವನವನ್ನೇ ಅವರು ಮುಡಿಪಾಗಿಟ್ಟಿದ್ದರು. ಅವರ ನಿಧನದಿಂದ ತುಂಬಾ ದುಃಖವಾಗಿದೆ. ಅವರ ಕುಟುಂದವರಿಗೆ ಸಂತಾಪ ಸೂಚಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

    ನಟ ಗಣೇಶ್ ಕೂಡ ಅನಂತ್ ಕುಮಾರ್ ಅವರ ಬಗ್ಗೆ ಟ್ವೀಟ್ ಮಾಡಿದ್ದು, “ಅನಂತ್ ಕುಮಾರ್ ಒಬ್ಬ ವಿಭಿನ್ನ ವ್ಯಕ್ತಿತ್ವ ಹೊಂದಿರುವ ನಾಯಕರಾಗಿದ್ದರು. ಅವರ ಇಡೀ ಕುಟುಂಬ ಸದಸ್ಯರಿಗೆ ಸಂತಾಪ ಸೂಚಿಸುತ್ತೇನೆ.” ಎಂದು ಬರೆದು ಅನಂತಕುಮಾರ್ ಫೋಟೋ ಹಾಕಿ ಬೇಸರ ವ್ಯಕ್ತಪಡಿಸಿದ್ದಾರೆ.

    ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ನಸುಕಿನ ಜಾವ ಕೇಂದ್ರ ಸಚಿವ ಅನಂತಕುಮಾರ್ ಕೊನೆಯುಸಿರೆಳೆದಿದ್ದಾರೆ. ರಾಜಕೀಯ ನಾಯಕರು, ಮುಖಂಡರು ಅವರ ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ನಾಳೆ ಚಾಮರಾಜಪೇಟೆಯಲ್ಲಿರುವ ರುದ್ರಭೂಮಿಯಲ್ಲಿ ಅನಂತಕುಮಾರ್ ಅಂತ್ಯಕ್ರಿಯೆ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಭಾರತೀಯ ಜನತಾ ಪಕ್ಷದ ಬ್ರೈನ್: ನಟ ಜಗ್ಗೇಶ್

    ಭಾರತೀಯ ಜನತಾ ಪಕ್ಷದ ಬ್ರೈನ್: ನಟ ಜಗ್ಗೇಶ್

    ಬೆಂಗಳೂರು: ನಟ ಜಗ್ಗಶ್ ಕೇಂದ್ರ ಸಚಿವ ಅನಂತಕುಮಾರ್ ಅಂತಿಮ ದರ್ಶನ ಪಡೆದು ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

    ಅನಂತಕುಮಾರ್ ಅವರ ಅಂತಿಮ ದರ್ಶನ್ ಪಡೆದ ಮಾಧ್ಯಮಗಳ ಜೊತೆ ಮಾತನಾಡಿದ ನಟ ಜಗ್ಗೇಶ್, ಅನಂತಕುಮಾರ್ ಅವರು ನಾನು ಕಂಡಂತಹ ಅದ್ಭುತ, ಸಜ್ಜನ ಮತ್ತು ಸರಳ ರಾಜಕಾರಣಿಗಳು. ಭಾರತೀಯ ಜನತಾ ಪಕ್ಷದ ಬ್ರೈನ್ ಎಂದರೆ ತಪ್ಪಾಗಲಾದರು. ನಾವು ಐದು ತಿಂಗಳ ಹಿಂದೆ ವೇದಿಕೆಯ ಮೇಲೆ ಅವರು ಪ್ರಧಾನಿ ಮೋದಿ ಅವರ ಭಾಷಣವನ್ನು ತರ್ಜುಮೆ ಮಾಡಿ ಮಾತನಾಡುತ್ತಿದ್ದನ್ನು ನೆನಪು ಮಾಡಿಕೊಂಡರೆ ಬಹಳ ಮನಸ್ಸಿಗೆ ಬೇಸರವಾಗುತ್ತದೆ.

    ಐದು ತಿಂಗಳಲ್ಲಿ ನಾವು ಅವರನ್ನು ಕಳೆದುಕೊಳ್ಳುತ್ತೇವೆ ಎಂಬ ಸೂಚನೆ ಕೂಡ ಇರಲಿಲ್ಲ. ಮನಸ್ಸಿಗೆ ಬಹಳ ಬೇಸರವಾಗುತ್ತದೆ. ರಾಜ್ಯದ ಲಕ್ಷಾಂತರ ಕಾರ್ಯಕರ್ತರಿಗೆ ಇವತ್ತು ಬೇಸರದ ದಿನವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಬಲ್ಲೆ ಎಂದು ಜಗ್ಗೇಶ್ ಹೇಳಿದ್ದಾರೆ.

    “ಅಂದು ನನ್ನ ಜೊತೆ ವೇದಿಕೆಯಲ್ಲಿ ಅನಂತ ಜೀ..ಮೋದಿರವರಿಗೆ ನನ್ನ ಪರಿಚಯಿಸಿದ ಕ್ಷಣವಾಗಿದೆ. ಸಿಕ್ಕಾಗೆಲ್ಲ “ಬೇವುಬೆಲ್ಲ” ಚಿತ್ರದ “ಜನುಮಾ ನೀಡುತ್ತಾಳೆ” ಹಾಡುತ್ತಿದ್ದರು ಅಪಾರ ಕನ್ನಡ ಪ್ರೇಮಿಯಾಗಿದ್ದರು. 5 ತಿಂಗಳ ಹಿಂದೆ ಇಷ್ಟು ಆರೋಗ್ಯದ ಮನುಷ್ಯ ಕಾಲವಾದರು ಎಂದರೆ ಬದುಕಿನ ಮೇಲೆ ನಂಬಿಕೆಯೇ ಹೋಗಿದೆ” ಎಂದು ಪ್ರಧಾನಿ ಮೋದಿ, ಅನಂತಕುಮಾರ್ ಜೊತೆ ಇದ್ದ ತಮ್ಮ ಫೋಟೋವನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

    ಪ್ರಧಾನಿ ಮೋದಿ ಅವರು ಕೇಂದ್ರ ಸಚಿವ ಅನಂತಕುಮಾರ್ ಅವರ ಸಾವಿನ ಬಗ್ಗೆ ದುಃಖಿತರಾಗಿ ಟ್ವೀಟ್ ಮಾಡಿದ್ದರು. ಪ್ರಧಾನಿ ಮೋದಿ ಮಾಡಿದ ಟ್ವೀಟ್‍ಗೆ “ನಾನು ಕಂಡ ಅದ್ಭುತ ವ್ಯೆಕ್ತಿತ್ವ ವಾಗ್ಮಿ ಸರಳ ಸಜ್ಜನ ನಾಯಕ ಶ್ರೀ ಅನಂತಕುಮಾರ್ ರವರು ಕಾಲನತೆಕ್ಕೆಗೆ ಇಷ್ಟು ಬೇಗ ಆಲಂಗಿಸಿದರು ಎಂದರೆ ನಂಬಲಾಗಲಿಲ್ಲಾ. ಅವರ ಆತ್ಮಕ್ಕೆ ಶಾಂತಿ ಕೋರುವೆ” ಎಂದು ರೀಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

    https://www.youtube.com/watch?v=3EDQHOGaME4