Tag: ಅಧ್ಯಕ್ಷ ಸ್ಥಾನ

  • ಮಂಡ್ಯದಲ್ಲಿ ಜೆಡಿಎಸ್‍ಗೆ ಲಾಟರಿ – ಬಿಜೆಪಿಗೆ ಭಾರೀ ಮುಖಭಂಗ

    ಮಂಡ್ಯದಲ್ಲಿ ಜೆಡಿಎಸ್‍ಗೆ ಲಾಟರಿ – ಬಿಜೆಪಿಗೆ ಭಾರೀ ಮುಖಭಂಗ

    ಮಂಡ್ಯ: ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಸಂಘದ (ಮನ್ಮುಲ್) ಚುನಾವಣೆಯಲ್ಲಿ ಜೆಡಿಎಸ್‍ಗೆ ಲಾಟರಿ ಮೂಲಕ ಅಧಿಕಾರ ಸಿಕ್ಕಿದ್ದು, ಬಿಜೆಪಿಗೆ ಭಾರಿ ಮುಖಭಂಗವಾಗಿದೆ.

    ಜಿಲ್ಲೆಯಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಮನ್ಮುಲ್ ಅಧ್ಯಕ್ಷ ಸ್ಥಾನದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಲಾಟರಿ ಮೂಲಕ ಜೆಡಿಎಸ್‍ನ ರಾಮಚಂದ್ರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಈ ಬಾರಿ ಮನ್ಮುಲ್ ಗದ್ದುಗೆ ಹಿಡಿಯಬೇಕು ಎಂದುಕೊಂಡಿದ್ದ ಬಿಜೆಪಿ ಕನಸು ನುಚ್ಚುನೂರು ಆಗಿದೆ.

    ಈ ಚುನಾವಣೆಯಲ್ಲಿ ಚಲಾವಣೆಯಾಗಿದ್ದ 16 ಮತಗಳಗಳಲ್ಲಿ 8 ಮತ ಜೆಡಿಎಸ್‍ಗೆ ಉಳಿದ 8 ಬಿಜೆಪಿ ಅಭ್ಯರ್ಥಿ ಎಸ್‍ಪಿ ಸ್ವಾಮಿಗೆ ಬಿದ್ದಿತ್ತು. ಹೀಗಾಗಿ ಎರಡು ಪಕ್ಷಗಳ ಒಪ್ಪಿಗೆ ಮೇರೆಗೆ ಅಭ್ಯರ್ಥಿಗಳ ಹೆಸರಿನ ಮೇಲೆ ಲಾಟರಿ ಹಾಕಲಾಗಿದ್ದು, ಇದರಲ್ಲಿ ಜೆಡಿಎಸ್‍ನ ಅಭ್ಯರ್ಥಿಯಾಗಿದ್ದ ರಾಮಚಂದ್ರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

    ಜೆಡಿಎಸ್‍ನಿಂದ 8 ನಿರ್ದೇಶಕರು, ಕಾಂಗ್ರೆಸ್‍ನಿಂದ 3 ನಿರ್ದೇಶಕರು ಮತ್ತು ಬಿಜೆಪಿಯಿಂದ 1 ನಿರ್ದೇಶಕರ ಜೊತೆಗೆ ಇಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಉಪ ನಿಬಂಧಕರು, ಕೆಎಂಎಫ್ ನಿರ್ದೇಶಕರು ಹಾಗೂ ಸರ್ಕಾರದಿಂದ ಆಯ್ಕೆಯಾದ ನಾಮ ನಿರ್ದೇಶಕರು ಸಹ ಮತ ಹಾಕಿದ್ದಾರೆ.

    ಮನ್ಮಲ್ ಅಧ್ಯಕ್ಷ ಗಾದಿ ಹಿಡಿಯಲು 9 ಸದಸ್ಯರ ಬಲ ಬೇಕಿತ್ತು. ಅದ್ದರಿಂದ ಬಿಜೆಪಿ ಸರ್ಕಾರಿ ಅಧಿಕಾರಿಗಳನ್ನು ತಮ್ಮ ಕಡೆ ಸೆಳೆದುಕೊಂಡು ಕಾಂಗ್ರೆಸ್ ನಿಂದ ಮೂವರು ಮತ್ತು ಜೆಡಿಎಸ್‍ನಿಂದ ಒಬ್ಬ ನಿರ್ದೇಶಕರನ್ನು ಹೈಜಾಕ್ ಮಾಡಿತ್ತು. ಆದರೆ ಇಂದು ನಡೆದ ಚುನಾವಣೆಯ ಸಮಯದಲ್ಲಿ ಬಿಜೆಪಿಯವರ ಕಡೆ ಒಬ್ಬ ಅಧಿಕಾರಿಂದ ಜೆಡಿಎಸ್ ಕ್ರಾಸ್ ವೋಟಿಂಗ್ ಹಾಕಿದ್ದಾರೆ ಎನ್ನಲಾಗುತ್ತಿದೆ.

  • ಡಿಸಿಎಂ, ಮಿನಿಸ್ಟರ್ ಬೇಡ ಕೆಎಂಎಫ್ ಅಧ್ಯಕ್ಷ ಸ್ಥಾನ ಸಾಕು: ಬಾಲಚಂದ್ರ ಜಾರಕಿಹೊಳಿ

    ಡಿಸಿಎಂ, ಮಿನಿಸ್ಟರ್ ಬೇಡ ಕೆಎಂಎಫ್ ಅಧ್ಯಕ್ಷ ಸ್ಥಾನ ಸಾಕು: ಬಾಲಚಂದ್ರ ಜಾರಕಿಹೊಳಿ

    ಬೆಂಗಳೂರು: ಕೆಎಂಎಫ್ ಅಧ್ಯಕ್ಷ ಸ್ಥಾನ ನನಗೆ ಸಚಿವ ಸ್ಥಾನಕ್ಕಿಂತಲೂ ಹೆಚ್ಚು. ಡಿಸಿಎಂ, ಮಿನಿಸ್ಟರ್ ಹುದ್ದೆ ಬೇಡ, ಕೆಎಂಎಫ್ ಅಧ್ಯಕ್ಷ ಸ್ಥಾನ ಒಂದೇ ಸಾಕು ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

    ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿ ಆಗಿರಲಿಲ್ಲ. ಸಚಿವ ಸ್ಥಾನ ಸಿಗದಿರುವ ಕುರಿತು ಯಾವುದೇ ಅಸಮಾಧಾನ ಇರಲಿಲ್ಲ. ನನ್ನ ಆಲೋಚನೆಗಳೇ ಬೇರೆ ಇದ್ದವು, ಹೀಗಾಗಿ ನನಗೆ ಯಾವುದೇ ಸ್ಥಾನ ಬೇಡ ಎಂದು ಹೇಳಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಕೆಎಂಎಫ್ ಅಧ್ಯಕ್ಷನಾಗುವುದು ನನ್ನ ಆಸೆಯಾಗಿತ್ತು, ರಾಜಕೀಯದ ಭವಿಷ್ಯದ ದೃಷ್ಟಿಯಿಂದ ಕೆಎಂಎಫ್ ಅಧ್ಯಕ್ಷನಾಗಲು ನಿರ್ಧರಿಸಿದೆ. ಇದಕ್ಕಾಗಿ ಸಾಕಷ್ಟು ಪ್ರಯತ್ನವೂ ನಡೆದಿದ್ದು, ಇದರ ಭಾಗವಾಗಿ ನನ್ನ ಪರವಾಗಿ ಕೆಎಂಎಫ್‍ನ 6 ನಿರ್ದೇಶಕರು ನನ್ನ ಭೇಟಿ ಮಾಡಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಎಂದು ಮನವಿ ಮಾಡಿದರು. ಹೀಗಾಗಿ ನಾನು ಯೋಜನೆ ರೂಪಿಸಿಕೊಂಡು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದೆ ಎಂದು ತಿಳಿಸಿದರು.

    ನಾನು ಸಹಕಾರ ವಲಯದಿಂದ ಬಂದಿರುವವನು. ರೈತರ ಸೇವೆ ಮಾಡಲು ಒಳ್ಳೆಯ ಅವಕಾಶ ಎಂದು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಒಲವು ತೋರಿದೆ. ಕೆಎಂಎಫ್ ದೊಡ್ಡ ಸಂಸ್ಥೆ, ಬೆಳಗಾವಿ ಡೈರಿಯಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಹೀಗಾಗಿ ಕೆಎಂಎಫ್ ಅಧ್ಯಕ್ಷನಾಗಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

    ಕೆಎಂಎಫ್‍ನ ಒಟ್ಟು 12 ನಿರ್ದೇಶಕರ ಪೈಕಿ 6 ಜನ ನನಗೆ ಸಹಕಾರ ನೀಡುತ್ತಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿದೆ, ಅವರೂ ಸಹ ಒಪ್ಪಿಗೆ ಸೂಚಿಸಿದರು. ಕಾಂಗ್ರೆಸ್‍ನ ಭೀಮಾನಾಯ್ಕ್ ಸಹ ಆಕಾಂಕ್ಷಿಯಾಗಿದ್ದಾರೆ. ಅವರೂ ಪ್ರಯತ್ನ ಪಡುತ್ತಿದ್ದಾರೆ. ಜೆಡಿಎಸ್‍ನಿಂದ ಎಚ್.ಡಿ.ರೇವಣ್ಣ ಅವರೂ ಸಹ ಪ್ರಯತ್ನ ಪಡುತ್ತಿದ್ದಾರೆ. ನಾನು ಅವಿರೋಧವಾಗಿ ಆಯ್ಕೆಯಾಗಲು ತೀರ್ಮಾನಿಸಿದ್ದೇನೆ. ಈ ಸಂಬಂಧ ಎಚ್.ಡಿ.ರೇವಣ್ಣ, ಭೀಮಾನಾಯ್ಕ್ ಜೊತೆಗೂ ಚರ್ಚೆ ನಡೆಸುತ್ತೇನೆ. ಕೆಎಂಎಫ್ ನಿರ್ದೇಶಕರ ಜೊತೆಗೂ ಚರ್ಚೆ ಮಾಡ್ತೇನೆ ಎಂದು ತಿಳಿಸಿದರು.

    ಎಲ್ಲರೂ ಒಪ್ಪಿದಲ್ಲಿ ಅವಿರೋಧವಾಗಿ ಆಯ್ಕೆಯಾಗುತ್ತೇನೆ. ಯಾರೂ ಒಪ್ಪದಿದ್ದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಹಿಂದೆ ನಾಲ್ವರು ನಿರ್ದೇಶಕರನ್ನು ಎಚ್.ಡಿ.ರೇವಣ್ಣ ಹೈಜಾಕ್ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಉತ್ತರಿಸಿದ ಬಾಲಚಂದ್ರ ಜಾರಕಿಹೊಳಿ, ರೇವಣ್ಣ ಅವರು ಯಾರನ್ನೂ ಹೈಜಾಕ್ ಮಾಡಿರಲಿಲ್ಲ. ನಿರ್ದೇಶಕರೇ ಒಪ್ಪಿ ರೇವಣ್ಣ ಪರ ಇದ್ದರು ಎಂದು ರೇವಣ್ಣ ಪರ ಬಾಲಚಂದ್ರ ಬ್ಯಾಟಿಂಗ್ ಮಾಡಿದ್ದಾರೆ.

    ಎಲ್ಲರನ್ನೂ ಒಪ್ಪಿಸಲು ಪ್ರಯತ್ನಿಸುತ್ತೇನೆ. ಒಂದು ವೇಳೆ ಒಪ್ಪದಿದ್ದಲ್ಲಿ ಚುನಾವಣೆ ನಡೆಯಲಿ, ನನಗೆ ಗೆಲ್ಲುವ ಭರವಸೆ ಇದೆ. ಚುನಾವಣೆಯಲ್ಲಿ ನಾನು ಖಂಡಿತಾ ಗೆಲ್ಲುತ್ತೇನೆ. ಎಷ್ಟು ಜನ ನಿರ್ದೇಶಕರು ನನ್ನ ಪರ ಇದ್ದಾರೆ ಎಂಬುದು 31 ರಂದು ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.

  • ಡಿಕೆಶಿ ಮುಂದಿನ ಕೆಪಿಸಿಸಿ ಅಧ್ಯಕ್ಷ?

    ಡಿಕೆಶಿ ಮುಂದಿನ ಕೆಪಿಸಿಸಿ ಅಧ್ಯಕ್ಷ?

    ಬೆಂಗಳೂರು: ಫೆಬ್ರವರಿಯಲ್ಲಿ ಉಪಚುನಾವಣೆ ನಡೆಯುವ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸಿ, ರಾಜ್ಯದಲ್ಲಿನ ಪ್ರಮುಖ ನಾಯಕರನ್ನು ಆಯ್ಕೆ ಮಾಡಬೇಕೆಂದು ಕಾಂಗ್ರೆಸ್ ಹೈ ಕಮಾಂಡ್ ತೀರ್ಮಾನಿಸಿದೆ. ಅಧ್ಯಕ್ಷರ ಪಟ್ಟಿಯಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಹೆಸರು ಪ್ರಮುಖವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಈ ಕುರಿತು ಸ್ವತಃ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ನಿನ್ನೆ ಡಿ.ಕೆ.ಶಿವಕುಮಾರ್ ಅವರಿಗೆ ಕರೆ ಮಾಡಿ ತಿಳಿಸಿದ್ದು, ಡಿಕೆಶಿ ಹಾಗೂ ಸೋನಿಯಾ ಗಾಂಧಿ ಅವರ ಮಧ್ಯೆ ವಿಸ್ತೃತ ಸಂಭಾಷಣೆ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಡಿಕೆಶಿಗೆ ಸೋನಿಯಾ ಗಾಂಧಿ ತಿಳಿಸಿದ್ದು, ಇದಕ್ಕೆ ಡಿಕೆಶಿ ಸಹ ಕೆಲ ಷರತ್ತುಗಳನ್ನು ವಿಧಿಸಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

    ಮುಂದಿನ ವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಕಾಂಗ್ರೆಸ್ ನಾಯಕರು ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ. ಸಭೆಯಲ್ಲಿ ಬಹುತೇಕ ಡಿ.ಕೆ.ಶಿವಕುಮಾರ್ ಅವರ ಹೆಸರನ್ನೇ ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಶುಕ್ರವಾರ ನಡೆದ ಫೋನ್ ಸಂಭಾಷಣೆಯಲ್ಲಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಾಗಬೇಕಾದಲ್ಲಿ ನನ್ನ ಕೆಲವು ಷರತ್ತುಗಳನ್ನು ಒಪ್ಪಿಕೊಳ್ಳಬೇಕು ಎಂದು ಸೋನಿಯಾ ಗಾಂಧಿ ಅವರಿಗೆ ವಿವರವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

    ಐದು ಷರತ್ತುಗಳು:
    ಡಿಕೆ ಶಿವಕುಮಾರ್ ಒಟ್ಟು 5 ಷರತ್ತುಗಳನ್ನು ವಿಧಿಸಿದ್ದು, ಅಧ್ಯಕ್ಷನಾಗಿ ನನಗೆ ಸರ್ವ ಸ್ವಾತಂತ್ರ್ಯ ಬೇಕು. ಯಾವುದೇ ಅಡೆತಡೆಗಳು ಇರಬಾರದು. ನನ್ನ ನಿರ್ಧಾರದ ಪ್ರಕಾರವೇ ಎಲ್ಲ ನಡೆಯಬೇಕು ಎಂಬುದು ಮೊದಲ ಷರತ್ತಾಗಿದೆ. ಕೆಪಿಸಿಸಿ ಹುದ್ದೆಗಳಿಗೆ ಸದ್ಯರನ್ನು ನೇಮಿಸಲು ನನಗೆ ಸ್ವಾತಂತ್ರ್ಯ ಇರಬೇಕು, ಯಾರೂ ಕೂಡ ಹಸ್ತಕ್ಷೇಪ ಮಾಡಬಾರದು. ಟಿಕೆಟ್ ಹಂಚಿಕೆಯಲ್ಲಿ ಹಸ್ತಕ್ಷೇಪ ಮಾಡಬಾರದು. ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ನಾನೇ ಸಿಎಂ ಆಗಬೇಕು ಎಂದು ಐದು ಷರತ್ತು ವಿಧಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಈ ಕುರಿತು ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಪ್ರತಿಕ್ರಿಯಿಸಿ, ನಾನು ಯಾವುದೇ ಸ್ಥಾನಕ್ಕೂ ಅರ್ಜಿ ಹಾಕಿಕೊಂಡು ಓಡಾಡುವುದಿಲ್ಲ. ಸುಮ್ಮನೆ ಟಿವಿಯಲ್ಲಿ ನನ್ನ ಹೆಸರು ಹಾಕುತ್ತೀರಿ. ಹೀಗೆ ಹಾಕಿ ನನಗೆ ಯಾವ ಹುದ್ದೆಯೂ ಸಿಗದಂತೆ ಮಾಡುತ್ತೀರಿ ಎಂದು ಹೇಳಿ ನಕ್ಕಿದ್ದರು.

    ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕರ ಭೇಟಿ ಮಾಡುತ್ತಿದ್ದು, ಎರಡು ದಿನದಿಂದ ರಾಷ್ಟ್ರ ರಾಜಧಾನಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ಮಧ್ಯಾಹ್ನ 12ಕ್ಕೆ ಸೋನಿಯಾ ಗಾಂಧಿ ಭೇಟಿ ಮಾಡಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಸಂಬಂಧ ಚರ್ಚೆ ನಡೆಸಿದ್ದಾರೆ. ಅಲ್ಲದೆ, ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಪರಿಗಣಿಸುವಂತೆ ಸೋನಿಯಾ ಗಾಂಧಿಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಿದ್ದು, ಎಚ್‍ಡಿಡಿ ದೊಡ್ಡವರು:
    ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕರು, ದೇವೇಗೌಡರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಅವರಿಬ್ಬರು ದೊಡ್ಡವರು. ಅವರ ವಿಚಾರಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಕಾಂಗ್ರೆಸ್ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಹೀಗಾಗಿ ಈ ಕುರಿತು ನಾವಿನ್ನು ತೀರ್ಮಾನ ಮಾಡುವ ಹಂತಕ್ಕೆ ಬಂದಿಲ್ಲ. ವಿಶ್ವಾಸ, ಗೌರವ ಬಿಟ್ಟು ಬದಲಾವಣೆ ಮಾಡಿಕೊಳ್ಳಲು ತಯಾರಿಲ್ಲ. ಒಟ್ಟಿಗೆ ಒಂದೇ ಸರ್ಕಾರದಲ್ಲಿ ಕೆಲಸ ಮಾಡಿದ್ದೇವೆ. ಫಲ ಸಿಗಲಿ, ಬಿಡಲಿ ಸರ್ಕಾರದಲ್ಲಿ ಒಗ್ಗಟ್ಟಾಗಿ ಇದ್ದೆವು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

  • ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಲಿ: ಅಮರಿಂದರ್ ಸಿಂಗ್

    ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಲಿ: ಅಮರಿಂದರ್ ಸಿಂಗ್

    ಚಂಡಿಘರ್: ಪಕ್ಷವನ್ನು ಮುನ್ನಡೆಸುವ ಹಾಗೂ ರಾಹುಲ್ ಗಾಂಧಿ ಅವರ ಸ್ಥಾನವನ್ನು ತುಂಬುವ ಶಕ್ತಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಮಾತ್ರ ಇದೆ. ಹೀಗಾಗಿ ಅವರೇ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

    ಚಂಡೀಗಢದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರೇ ಸೂಕ್ತ ಆಯ್ಕೆ. ಆದರೆ ಆಯ್ಕೆಯ ಕುರಿತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮಾತ್ರ ತೀರ್ಮಾನ ಕೈಗೊಳ್ಳಲು ಸಾಧ್ಯ. ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿರುವ ರಾಹುಲ್ ಗಾಂಧಿ ಅವರ ನಿರ್ಧಾರದ ಕುರಿತು ಸಿಂಗ್ ಬೇಸರ ವ್ಯಕ್ತಪಡಿಸಿದ್ದು, ಭಾರತ ಯುವ ರಾಷ್ಟ್ರ, ಯುವ ನಾಯಕರಿಗೆ ಸ್ಪಂದಿಸುತ್ತದೆ. ಹೀಗಾಗಿ ಯುವಕರೇ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಬೇಕು ಎಂದು ಸಿಂಗ್ ಹೇಳಿದ್ದಾರೆ.

    ಈ ಹಿಂದೆ ಶಶಿ ತರೂರ್ ಸಹ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರೇ ಉತ್ತಮ ಆಯ್ಕೆ ಎಂದು ಅಭಿಪ್ರಾಯಪಟ್ಟಿದ್ದರು. ಇದೀಗ ಅಮರೀಂದರ್ ಸಿಂಗ್ ಸಹ ಅದೇ ರೀತಿ ಹೇಳಿದ್ದಾರೆ.

    ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಆಗಿರುವ ಹಾನಿ ಸರಿಪಡಿಸಲು ಕ್ರಿಯಾತ್ಮಕ ನಾಯಕರ ಅಗತ್ಯವಿದ್ದು, ಈ ಮೂಲಕ ಪಕ್ಷವನ್ನು ಮತ್ತೆ ಬಲಪಡಿಸಬಹುದಾಗಿದೆ. ಇಂತಹ ಕಾರ್ಯಕ್ಷಮತೆಯನ್ನು ಪ್ರಿಯಾಂಕಾ ಅವರು ಹೊಂದಿದ್ದು, ರಾಷ್ಟ್ರದ ಅಗತ್ಯತೆ ಅರಿತು, ಅದಕ್ಕೆ ಪರಿಹಾರ ಹುಡುಕುವ ಬುದ್ಧಿವಂತಿಕೆ ಮತ್ತು ಪ್ರವೃತ್ತಿ ಪ್ರಿಯಾಂಕಾ ಗಾಂಧಿ ಅವರಲ್ಲಿದೆ. ಅಲ್ಲದೆ, ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವ ಧೈರ್ಯವೂ ಸಹ ಅವರಿಗಿದೆ. ಹೀಗಾಗಿ ಯಾವುದೇ ರೀತಿಯ ಸವಾಲು ಸ್ವೀಕರಿಸಿ ಅದನ್ನು ವಿಜಯದತ್ತ ಕೊಂಡೊಯ್ಯುತ್ತಾರೆ ಎಂದು ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.

    ರಾಹುಲ್ ಗಾಂಧಿ ಅವರು ರಾಜೀನಾಮೆಯನ್ನು ಹಿಂಪಡೆಯಲು ಒಪ್ಪದ ಕಾರಣ ಪ್ರಿಯಾಂಕಾ ಗಾಂಧಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಹೊಸ ನಾಯಕರನ್ನು ನೇಮಿಸಬಹುದಾಗಿದೆ. ಅಲ್ಲದೆ ಪ್ರಿಯಾಂಕಾ ಅವರು ವಿವಿಧ ರಾಜ್ಯಗಳಲ್ಲಿನ ನಾಯಕರೊಂದಿಗೆ ಹಾಗೂ ಜನರೊಂದಿಗೆ ಬೇಗ ಬೆರೆಯುತ್ತಾರೆ. ಸುಲಭವಾಗಿ ಬೆಂಬಲ ಗಳಿಸುತ್ತಾರೆ ಎಂದು ಅಮರಿಂದರ್ ಸಿಂಗ್ ಹೇಳಿದರು.

    ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನಿಡಿದ ನಂತರ ಸ್ವತಃ ರಾಹುಲ್ ಗಾಂಧಿ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದು, ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ. ಅಲ್ಲದೆ, ಗಾಂಧಿ ಕುಟುಂಬದ ಯಾರೂ ಅಧ್ಯಕ್ಷರಾಗುವುದು ನನಗೆ ಇಷ್ಟವಿಲ್ಲ ಎಂದು ಪಟ್ಟು ಹಿಡಿದ್ದಾರೆ. ಇತ್ತ ರಾಹುಲ್ ಇಲ್ಲವೆ, ಪ್ರಿಯಾಂಕಾ ಅವರೇ ಅಧ್ಯಕ್ಷರಾಗಬೇಕು ಎಂದು ಶಶಿ ತರೂರ್ ಸೇರಿದಂತೆ ಇತರೆ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ತಿಂಗಳುಗಳೇ ಕಳೆದರೂ ಅಧ್ಯಕ್ಷರ ಆಯ್ಕೆ ಕಾಂಗ್ರೆಸ್‍ಗೆ ಸವಾಲಾಗಿ ಪರಿಣಮಿಸಿದೆ.

  • ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕಾಗಿ ‘ಕೈ’ ನಿರ್ದೇಶಕರನ್ನೇ ಹೈಜಾಕ್ ಮಾಡಿದ ರೇವಣ್ಣ!

    ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕಾಗಿ ‘ಕೈ’ ನಿರ್ದೇಶಕರನ್ನೇ ಹೈಜಾಕ್ ಮಾಡಿದ ರೇವಣ್ಣ!

    – ಎಚ್‍ಡಿಕೆಯ ಇಂದಿನ ಸ್ಥಿತಿಗೆ ರೇವಣ್ಣನೇ ಕಾರಣ
    – ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಕಿಡಿ
    – ರೇವಣ್ಣ ಅಂದ್ರೆ ಮೋಸ

    ಬಳ್ಳಾರಿ: ಕೆಎಂಎಫ್ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಒಪ್ಪದ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಕಾಂಗ್ರೆಸ್ ಪಕ್ಷದ ನಾಲ್ವರು ನಿರ್ದೇಶಕರನ್ನೇ ಹೈಜಾಕ್ ಮಾಡಿದ್ದಾರೆ.

    ಸರ್ಕಾರ ಇರೋವರೆಗೂ ಮೈತ್ರಿ -ದೋಸ್ತಿ ಎನ್ನುತ್ತಿದ್ದ ಜೆಡಿಎಸ್‍ನವರು ಸರ್ಕಾರ ಬೀಳುತ್ತಿದ್ದಂತೆ ಕಾಂಗ್ರೆಸ್‍ಗೆ ಕೈ ಕೊಡಲು ಮುಂದಾಗಿದ್ದಾರೆ. ಮೈತ್ರಿ ಧರ್ಮದ ಪ್ರಕಾರ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‍ಗೆ ಬಿಟ್ಟು ಕೊಡುವುದಾಗಿ ಜೆಡಿಎಸ್ ನಾಯಕರು ಭರವಸೆ ನೀಡಿದ್ದರು. ಆದರೆ ಈಗ ಸರ್ಕಾರ ಬೀಳುತ್ತಿದ್ದಂತೆ ಮೈತ್ರಿ ಧರ್ಮಕ್ಕೆ ಬ್ರೇಕ್ ಹಾಕಿ ಕೆಎಂಎಫ್ ಅಧ್ಯಕ್ಷ ಸ್ಥಾನ ತಮಗೆ ಬೇಕೆಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಪಟ್ಟು ಹಿಡಿದು ಕುಳಿತಿದ್ದಾರೆ.

    ಕೆಎಂಎಫ್ ಅಧ್ಯಕ್ಷ ಸ್ಥಾನದ ವಿಚಾರವಾಗಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಹಾಗೂ ಎಚ್.ಡಿ.ರೇವಣ್ಣ ಅವರ ಮಧ್ಯೆ ತ್ರೀವ ಗುದ್ದಾಟ ಶುರುವಾಗಿದೆ. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನವನ್ನು ರೇವಣ್ಣ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಒಪ್ಪಂದದ ಪ್ರಕಾರ ಅಧ್ಯಕ್ಷ ಸ್ಥಾನವನ್ನು ಭೀಮಾನಾಯ್ಕ್ ಅವರಿಗೆ ಬಿಟ್ಟುಕೊಡಬೇಕಿತ್ತು. ಆದರೆ ಇದಕ್ಕೆ ಒಪ್ಪದ ಎಚ್.ಡಿ.ರೇವಣ್ಣ ಅವರು ಧಾರವಾಡದ ಹನಮಂತಗೌಡ ಹಿರೇಗೌಡ್ರ, ವಿಜಯಪುರದ ಶ್ರೀಶೈಲ್‍ಗೌಡ ಪಾಟೀಲ್, ಮಂಗಳೂರಿನ ಕಾಪು ದಿವಾಕರ್ ಶೆಟ್ಟಿ ಹಾಗೂ ಶಿವಮೊಗ್ಗದ ವೀರಭದ್ರಯ್ಯ ಬಾಬು ಚಲ್ಲೂರಯ್ಯ ಅವರನ್ನು ಹೈದರಾಬಾದ್ ರೆಸಾರ್ಟಿಗೆ ಕಳುಹಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ರೇವಣ್ಣ ಅವರ ನಡೆಯಿಂದಾಗಿ ಕಾಂಗ್ರೆಸ್ ನಾಯಕರು ಆಘಾತಕ್ಕೆ ಒಳಗಾಗಿದ್ದಾರೆ. ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭಾನುವಾರ ದೋಸ್ತಿ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ. ಈ ಮೂಲಕ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಭೀಮಾನಾಯ್ಕ್ ಅವರಿಗೆ ಬಿಟ್ಟುಕೊಡುವಂತೆ ಕೇಳಿಕೊಳ್ಳಲಿದ್ದಾರೆ ಎಂದು ಮೂಲಗಳಿಂದ ಕೇಳಿಬಂದಿದೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಶಾಸಕ ಭೀಮಾನಾಯ್ಕ್ ಅವರು, ಎಚ್.ಡಿ.ಕುಮಾರಸ್ವಾಮಿ ಅವರ ಇಂದಿನ ಸ್ಥಿತಿಗೆ ರೇವಣ್ಣ ಕಾರಣ. ಸರ್ಕಾರ ಇದ್ದಾಗಲೇ ಎಚ್.ಡಿ.ರೇವಣ್ಣ ಅವರು ಮೈತ್ರಿ ಧರ್ಮ ಪಾಲನೆ ಮಾಡಲಿಲ್ಲ. ರೇವಣ್ಣ ಅಂದರೆ ಮೋಸ. ಮೋಸ ಮಾಡುವುದೇ ಎಚ್.ಡಿ.ರೇವಣ್ಣ ಕಾಯಕ ಎಂದು ಕಿಡಿಕಾರಿದರು.

    ಕೆಎಂಎಫ್ ಅಧ್ಯಕ್ಷ ಸ್ಥಾನ ಕೈ ತಪ್ಪುತ್ತೆ ಎನ್ನುವ ಸುಳಿವು ಸಿಗುತ್ತಿದ್ದಂತೆಯೇ ನಮ್ಮ ಪಕ್ಷದ ನಿರ್ದೇಶಕರನ್ನು ಹೈಜಾಕ್ ಮಾಡಿದ್ದಾರೆ. ಇಂತವರು ಶಾಸಕರ ವ್ಯಾಪಾರದ ಬಗ್ಗೆ ಮಾತನಾಡುತ್ತಾರೆ. ಎಚ್.ಡಿ.ರೇವಣ್ಣ ಅವರ ನಡೆಯಿಂದಲೇ ಎಂಟಿಬಿ ನಾಗರಾಜ್, ಸೋಮಶೇಖರ್, ಎಚ್.ವಿಶ್ವನಾಥ್ ಅಂತಹ ನಾಯಕರು ಸರ್ಕಾರ ವಿರುದ್ಧ ನಿಲ್ಲಬೇಕಾಯಿತು ಎಂದು ಹೇಳಿದರು.

  • ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ರೇವಣ್ಣ ಕಣ್ಣು – ಭೀಮಾನಾಯ್ಕ್ `ಕೈ’ಕೊಡುವ ಭೀತಿ

    ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ರೇವಣ್ಣ ಕಣ್ಣು – ಭೀಮಾನಾಯ್ಕ್ `ಕೈ’ಕೊಡುವ ಭೀತಿ

    ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅವರು ಮಂತ್ರಿ ಸ್ಥಾನದ ಜೊತೆಗೆ ಮತ್ತೊಂದು ಪ್ರಭಾವಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

    ಕೆಎಂಎಫ್ ಅಧ್ಯಕ್ಷ ಸ್ಥಾನ ಬೇಕು ಎಂದು ರೇವಣ್ಣ ಪಟ್ಟು ಹಿಡಿದಿದ್ದು, ಈ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಬಳಿ ಈಗಾಗಲೇ ಬೇಡಿಕೆ ಇಟ್ಟಿದ್ದಾರೆ. ಎಚ್‍ಡಿಡಿ ಅವರೂ ಸಮ್ಮತಿ ಸೂಚಿಸಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಇತ್ತ ಕಾಂಗ್ರೆಸ್ ಕೂಡ ತಮ್ಮ ಅತೃಪ್ತ ಶಾಸಕ ಭೀಮಾನಾಯ್ಕ್ ಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ಕೊಡುತ್ತೀವಿ ಎಂದು ಭರವಸೆ ಕೊಟ್ಟಿದೆ. ಒಂದು ವೇಳೆ ಕೆಎಂಎಫ್ ಅಧ್ಯಕ್ಷ ಸ್ಥಾನ ಸಿಗದಿದ್ದರೆ ಭೀಮಾನಾಯ್ಕ್ ರಾಜೀನಾಮೆಗೂ ಸಿದ್ಧರಿದ್ದಾರೆ ಎನ್ನಲಾಗಿದೆ.

    ಇಬ್ಬರನ್ನು ಸಮಾಧಾನ ಮಾಡಲಾಗದೇ ತಲೆಕೆಡಿಸಿಕೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಸದ್ಯಕ್ಕೆ ಅಮೆರಿಕದಿಂದ ಸಿಎಂ ಬರುವಿಕೆಗಾಗಿ ಕಾಯುತ್ತಿದ್ದಾರೆ ಎಂದು ಹೇಳಲಾಗಿದೆ.

  • ಪರಿಸರ ರಕ್ಷಣೆ ಮಾಡೋದು ಬಹು ದೊಡ್ಡ ಸವಾಲು- ಡಾ.ಕೆ. ಸುಧಾಕರ್

    ಪರಿಸರ ರಕ್ಷಣೆ ಮಾಡೋದು ಬಹು ದೊಡ್ಡ ಸವಾಲು- ಡಾ.ಕೆ. ಸುಧಾಕರ್

    – ಬೆಳ್ಳಂದೂರು ಮಾಲಿನ್ಯ ನಿಯಂತ್ರಣಕ್ಕೆ ಮೊದಲ ಆದ್ಯತೆ

    ಚಿಕ್ಕಬಳ್ಳಾಪುರ: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹುದ್ದೆ ಕೇವಲ ಹುದ್ದೆಯಲ್ಲ ಇದೊಂದು ಜವಾಬ್ದಾರಿ. 21 ನೇ ಶತಮಾನದಲ್ಲಿ ಪರಿಸರ ರಕ್ಷಣೆ ಮಾಡುವುದು ದೊಡ್ಡ ಸವಾಲು ಎಂದು ನೂತನ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಮತ್ತು ಚಿಕ್ಕಬಳ್ಳಾಪುರ ಶಾಸಕ ಡಾ. ಕೆ. ಸುಧಾಕರ್ ಹೇಳಿದ್ದಾರೆ.

    ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಶಾಸಕ ಸುಧಾಕರ್, ನೇರವಾಗಿ ತಾಲೂಕಿನ ನಂದಿ ಗ್ರಾಮದ ಪ್ರಸಿದ್ಧ ಶ್ರೀಭೋಗನಂದೀಶ್ವರನ ದೇಗುಲಕ್ಕೆ ಭೇಟಿ ನೀಡಿ ದೇವರ ಆರ್ಶೀವಾದ ಪಡೆದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ನನ್ನ ಮೊದಲ ಆದ್ಯತೆ ಎಂದರು.

    ಬೆಂಗಳೂರಿನ ಬೆಳ್ಳಂದೂರು ಕೆರೆ ಮಾಲಿನ್ಯ ತಡೆಗಟ್ಟೋದು ನನ್ನ ಮೊದಲ ಆದ್ಯತೆಗಳಲ್ಲೊಂದಾಗಿದೆ. ಈಗಾಗಲೇ ಮಾನ್ಯ ಉಚ್ಛ ನ್ಯಾಯಾಲಯ ಬೆಳ್ಳಂದೂರು ಕೆರೆಯ ಸಂರಕ್ಷಣೆ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದೆ. ಈ ಸಂಬಂಧ ಜುಲೈ 1 ರಂದು ತಜ್ಞರ ಜೊತೆ ಸಭೆ ನಡೆಸಲಿದ್ದೇನೆ ಎಂದು ಹೇಳಿದರು.

    ಮತ್ತೊಂದೆಡೆ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್.ವಿ ಮಂಜುನಾಥ್ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಕ್ಷ ಈ ಹಿಂದೆ ತೆಗೆದುಕೊಂಡ ತೀರ್ಮಾನದಂತೆ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ಈ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಅಧ್ಯಕ್ಷ ಸ್ಥಾನ ಕೊಡುವುದಾಗಿ ಮೊದಲೇ ಮಾತುಕತೆ ಆಗಿತ್ತು. ಅದರಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗೂಂಡೂರಾವ್ ಸೂಚಿಸಿದ್ದಾರೆ ಎಂದು ಹೇಳಿದರು.

    ಮೈತ್ರಿ ಸರ್ಕಾರದ ದೋಸ್ತಿ ಪಕ್ಷ ಜೆಡಿಎಸ್ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿರೊದು ಸರಿಯಲ್ಲ. ಉನ್ನತ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಯಬೇಕಿದೆ. ಆದರೂ ಜೆಡಿಎಸ್‍ನವರಿಗೆ ಅಧ್ಯಕ್ಷ ಸ್ಥಾನ ಕೊಡೋದಿಲ್ಲ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.

  • ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಪಟ್ಟಕ್ಕಾಗಿ ಕಾಂಗ್ರೆಸ್‍ನಲ್ಲೇ ಕಾಲೆಳೆದಾಟ

    ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಪಟ್ಟಕ್ಕಾಗಿ ಕಾಂಗ್ರೆಸ್‍ನಲ್ಲೇ ಕಾಲೆಳೆದಾಟ

    ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ನಾಯಕರಲ್ಲೇ ಪರಸ್ಪರ ಕಾಲೆಳೆದಾಟ ನಡೆದಿದ್ದು, ಹಾಲಿ ಜಿಲ್ಲಾ ಪಂಚಾಯತಿ ಸದಸ್ಯ ಎಚ್.ವಿ ಮಂಜುನಾಥ್ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯಲ್ಲಿ ಕಾಂಗ್ರೆಸ್‍ಗೆ ಬಹುಮತವಿದ್ದು ಮೊದಲ ಅವಧಿಗೆ ಶಾಸಕ ಸುಧಾಕರ್ ತಂದೆ ಪಿ.ಎನ್ ಕೇಶವರೆಡ್ಡಿ ಅಧ್ಯಕ್ಷರಾಗಿದ್ದರು. ತದನಂತರ ಗೌರಿಬಿದನೂರು ಶಾಸಕ ಶಿವಶಂಕರ ರೆಡ್ಡಿ ಬೆಂಬಲಿತ ಹೊಸೂರು ಜಿಲ್ಲಾ ಪಂಚಾಯತಿ ಸದಸ್ಯ ಎಚ್.ವಿ ಮಂಜುನಾಥ್ ಆಯ್ಕೆಯಾಗಿದ್ದರು.

    ಆದರೆ ಈಗ ಅಧ್ಯಕ್ಷಗಾದಿ ಮೇಲೆ ಮತ್ತೆ ಕಣ್ಣು ಹಾಕಿರುವ ಶಾಸಕ ಸುಧಾಕರ್ ತಮ್ಮ ಬೆಂಬಲಿತರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ರಾಜ್ಯದ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು. ಈ ಸಂಬಂಧ ನಿನ್ನೆ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆ ನಡೆಸಿ ಹಾಲಿ ಅಧ್ಯಕ್ಷ ಮಂಜುನಾಥ್ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ.

    ಇಂದು ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ ನಡೆಸಿ ಮಾತನಾಡಿದ ಎಚ್.ವಿ ಮಂಜುನಾಥ್ ರಾಜಕೀಯ ಕಾರಣಕ್ಕೋಸ್ಕರ ಹೈಕಮಾಂಡ್ ಆದೇಶದಂತೆ ತಾನು ನಾಳೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದರು. ಇದಕ್ಕೆ ಮಂಜುನಾಥ್ ಬೆಂಬಲಿಗರು ವಿರೋಧ ಮಾಡಿದ್ದರು. ಅದರೆ ಅಂತಿಮವಾಗಿ ರಾಜೀನಾಮೆ ನೀಡಲು ಹೈಕಮಾಂಡ್ ಸೂಚಿಸಿದ್ದು ಪಕ್ಷದ ಶಿಸ್ತಿನ ಸಿಪಾಯಿಯಾದ ನಾನು ಪಕ್ಷದ ಆದೇಶಕ್ಕೆ ತಲೆಬಾಗಿ ರಾಜೀನಾಮೆ ಕೊಡುತ್ತೇನೆ ಎಂದು ಮಂಜುನಾಥ್ ಹೇಳಿದ್ದಾರೆ.

    ಇನ್ನೂ ಮುಂದೆ ಸಾಮಾನ್ಯ ಸದಸ್ಯನಾಗಿ ಕೆಳಗೆ ಕುಳಿತು ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ಅದರೆ ಈ ಹಿಂದಿನ ಅಧ್ಯಕ್ಷರ ಹಾಗೆ ಅಧ್ಯಕ್ಷ ಸ್ಥಾನದಿಂದ ಹೋದ ಬಳಿಕ ಸಭೆಗಳಿಗೆ ಬಾರದೆ ಇರಲ್ಲ ಎಂದು ಮಾಜಿ ಅಧ್ಯಕ್ಷ ಶಾಸಕ ಸುಧಾಕರ್ ತಂದೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

  • ಜಿಲ್ಲಾ ಪಂಚಾಯಿತಿ ಅಧ್ಯಕ್ಷಗಿರಿಗೆ ಇಬ್ಬರು ಪ್ರತಿಷ್ಠಿತರ ನಡುವೆ ಶುರುವಾಗಿದೆ ಜಿದ್ದಾಜಿದ್ದಿ!

    ಜಿಲ್ಲಾ ಪಂಚಾಯಿತಿ ಅಧ್ಯಕ್ಷಗಿರಿಗೆ ಇಬ್ಬರು ಪ್ರತಿಷ್ಠಿತರ ನಡುವೆ ಶುರುವಾಗಿದೆ ಜಿದ್ದಾಜಿದ್ದಿ!

    -ವಿಜಯಾನಂದ ಕಾಶಪ್ಪನವರ್ ಪತ್ನಿ ವರ್ಸಸ್ ಹುಲ್ಲಪ್ಪ ಮೇಟಿ ಪುತ್ರಿ

    ಬಾಗಲಕೋಟೆ: ಲೋಕಸಭೆ ಚುನಾವಣೆಗೂ ಮುನ್ನವೇ ರಾಜ್ಯ ಕಾಂಗ್ರೆಸ್‍ನ ನಾಯಕರಲ್ಲಿ ಭಿನ್ನಮತ ಸೃಷ್ಟಿಯಾಗಿದ್ದು, ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‍ನಲ್ಲೂ ಭಿನ್ನಮತ ಸ್ಫೋಟಗೊಂಡಿದೆ. ಜಿಲ್ಲಾಪಂಚಾಯಿತಿ ಅಧ್ಯಕ್ಷಗಿರಿಗಾಗಿ ಇಬ್ಬರು ಪ್ರತಿಷ್ಠಿತರ ನಡುವೆ ಕಾಳಗ ಶುರುವಾಗಿದ್ದು, ಕಾಂಗ್ರೆಸ್ಸಿಗರ ನಡೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ಇರಿಸು-ಮುರಿಸು ಅನುಭವಿಸುವಂತಾಗಿದೆ.

    ಹಾಲಿ ಜಿಲ್ಲಾಪಂಚಾಯಿತಿ ಅಧ್ಯಕ್ಷೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ್ ಅವರನ್ನ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ಸಿಗರಿಂದಲೇ ಸ್ಕೆಚ್ ರೆಡಿಯಾಗಿದೆ. ಶತಾಯ ಗತಾಯ ಅಧಿಕಾರದ ಗದ್ದುಗೆ ಹೀಡಿಯಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಮಾಜಿ ಸಚಿವ ಎಚ್.ವೈ.ಮೇಟಿ ಪುತ್ರಿ ಬಾಯಕ್ಕಾ ಮೇಟಿ ಬಂಡಾಯದ ಬಾವುಟ ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ವೀಣಾ ಕಾಶಪ್ಪನವರ್ ಅವರನ್ನ ಕೆಳಗಿಳಿಸಬೇಕು, ಇಲ್ಲವಾದಲ್ಲಿ ಬಿಜೆಪಿ ಸದಸ್ಯರ ಜೊತೆ ಕೈ ಜೋಡಿಸಿ ಅಧ್ಯಕ್ಷಗಿರಿ ಪಟ್ಟ ಪಡೆಯುವುದಾಗಿ ಬಾಯಕ್ಕಾ ಮೇಟಿ ಪಟ್ಟು ಹಿಡಿದಿದ್ದಾರೆ. ಅಲ್ಲದೆ ಬಾಯಕ್ಕಾ ಮೇಟಿ ಬಿಜೆಪಿಗರನ್ನ ತಮ್ಮ 9 ಜನ ಜಿಲ್ಲಾಪಂಚಾಯಿತಿ ಸದಸ್ಯರ ಜೊತೆ ಸಂಪರ್ಕಿಸಿದ್ದಾರೆ. ಮೇಟಿಯವರ ಪುತ್ರಿಯ ನಡೆ ಈಗ ಬಾದಾಮಿ ಶಾಸಕರು ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಇರುಸು-ಮುರುಸು ಉಂಟು ಮಾಡಿದೆ. ಕಳೆದ ಬಾರಿ ಜಿಲ್ಲಾ ಪಂಚಾಯಿತಿ ಚುನಾವಣೆ ಬಳಿಕ ಒಟ್ಟು ಜಿಲ್ಲೆಯ 36 ಸ್ಥಾನಗಳಲ್ಲಿ ಕೇವಲ 17 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಬಿಜೆಪಿ 18ರಲ್ಲಿ ಜಯಭೇರಿ ಬಾರಿಸಿತ್ತು. ಆದ್ರೆ ಕಾಂಗ್ರೆಸ್‍ನ ಒಬ್ಬರು ಪಕ್ಷೇತರರ ಬೆಂಬಲ ಪಡೆದು ಹಾಗೂ ಇನ್ನೊಬ್ಬ ಬಿಜೆಪಿ ಸದಸ್ಯರ ಗೈರು ಉಳಿಸುವುದರ ಮೂಲಕ ಅಧ್ಯಕ್ಷಗಿರಿ ಪಟ್ಟ ಗಿಟ್ಟಿಸಿಕೊಂಡಿದ್ದರು.

    ಜಿಲ್ಲಾ ಕಾಂಗ್ರೆಸ್‍ನಲ್ಲಿ ಈ ಬೆಳವಣಿಗೆ ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿದ್ದು, ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಗಳಲ್ಲಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ವಿರುದ್ಧ ಕೆಲವು ಸದಸ್ಯರು ಹರಿಹಾಯುತ್ತ ಬಂದಿದ್ದಾರೆ. ಸಾಮಾನ್ಯ ಸಭೆಗಳು ಸರಿಯಾಗಿ ನಡೆದ ಉದಾಹರಣೆಗಳಿಲ್ಲ. ಅಧ್ಯಕ್ಷ ಪಟ್ಟಕ್ಕೆ ಕುಳಿತು ಎರಡೂವರೆ ವರ್ಷಗಳಾಗಿದ್ದು, ಹೀಗಾಗಿ ಮತ್ತೊಬ್ಬರಿಗೆ ಅವಕಾಶ ಕೊಡಿ ಎಂದು ಬಾಯಕ್ಕಾ ಮೇಟಿ ಪಟ್ಟು ಹಿಡಿದಿದ್ದಾರಂತೆ. ಅಲ್ಲದೇ ಹಾಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಬಾಗಲಕೋಟೆ ಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದು, ಲೋಕಸಭೆ ಟಿಕೆಟ್ ನೀಡಿ, ಅಧ್ಯಕ್ಷೆ ಸ್ಥಾನವನ್ನು ತ್ಯಜಿಸುತ್ತೇನೆ ಎಂಬ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    ಪಕ್ಷದ ವರಿಷ್ಠರು ಏನೇ ತೀರ್ಮಾಣ ತೆಗೆದುಕೊಂಡರೂ ಬದ್ಧ ಎಂದು ಇಬ್ಬರು ನಾಯಕಿಯರು ಮೇಲ್ನೋಟಕ್ಕೆ ಹೇಳುತ್ತಿದ್ದರೂ, ಆಂತರಿಕ ಕಲಹ ಮಾತ್ರ ಶಮನಗೊಂಡಿಲ್ಲ. ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಪಕ್ಷ ವಿರೋಧಿ ಚಟುವಟಿಕೆ ಮಾಡುವವರಿಗೆ ಶಿಸ್ತು ಕ್ರಮ ಕಟ್ಟಿಟ್ಟ ಬುತ್ತಿ ಎಂದು ಬಾಯಕ್ಕಾ ಮೇಟಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಅದೇನೆಯಾಗಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷಗಿರಿ ಪಟ್ಟ ಕಾಂಗ್ರೆಸ್ ಪಾಳಯದಲ್ಲಿ ಬಹುದೊಡ್ಡ ಬಿರುಗಾಳಿ ಎಬ್ಬಿಸಿದೆ. ಲೋಕಸಭೆ ಚುನಾವಣೆ ಸಮೀಪವಿರುವಾಗ್ಲೇ ಈ ಬೆಳವಣಿಗೆ ವರಿಷ್ಠರ ತಲೆ ನೋವಿಗೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಖ್ಯಾ ಬಲವಿದ್ದರೂ ಬಿಜೆಪಿ ಕೈ ತಪ್ಪಿದ ಅಧ್ಯಕ್ಷ ಸ್ಥಾನ – ಗದ್ದುಗೆ ಪಡೆದ ಕಾಂಗ್ರೆಸ್

    ಸಂಖ್ಯಾ ಬಲವಿದ್ದರೂ ಬಿಜೆಪಿ ಕೈ ತಪ್ಪಿದ ಅಧ್ಯಕ್ಷ ಸ್ಥಾನ – ಗದ್ದುಗೆ ಪಡೆದ ಕಾಂಗ್ರೆಸ್

    ವಿಜಯಪುರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿಯಿಂದ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯ ಶಿವಯೋಗಿ ನೇದಲಗಿ ಅಧ್ಯಕ್ಷ ಸ್ಥಾನ ಪಡೆದಿದ್ದಾರೆ. ಇತ್ತ ಸಂಖ್ಯಾಬಲವಿದ್ದರು ಬಿಜೆಪಿ ಪಕ್ಷಕ್ಕೆ ಸ್ಥಾನ ಕೈ ತಪ್ಪಿದೆ.

    ಈ ಹಿಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ಕಾಂಗ್ರೆಸ್ ಪಕ್ಷದ ಸದಸ್ಯೆ ನಿಲ್ಲಮ್ಮ ಮೇಟಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಐದು ವರ್ಷಗಳ ಅವಧಿಯ ಆಡಳಿತದಲ್ಲಿ ಈ ಮೊದಲು ಮೂವತ್ತು, ಮೂವತ್ತು ತಿಂಗಳಂತೆ ಅಧಿಕಾರ ಒಬ್ಬರಿಗೆ ಕಾಂಗ್ರೆಸ್ ಪಕ್ಷದ ಅಂದಿನ ಸಚಿವರು, ಶಾಸಕರು ಒಪ್ಪಂದ ಮಾಡಿದ್ದರು. ಒಪ್ಪದಂತೆ ಮೂವತ್ತು ತಿಂಗಳ ಆದ ಬಳಿಕ ಹಾಲಿ ಅಧ್ಯಕ್ಷೆ ನಿಲ್ಲಮ್ಮ ಮೇಟಿ ರಾಜೀನಾಮೆ ನೀಡಿದ್ದರು. ಇನ್ನೂ 2ನೇ ಅವಧಿಗೆ ಇಂಡಿ ತಾಲೂಕಿನ ಸಾಲೋಟಗಿ ಮತಕ್ಷೇತ್ರದ ಸದಸ್ಯ ಶಿವಯೋಗಪ್ಪ ನೆದಲಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದರು.

    ಯಾವುದೇ ಪಕ್ಷಕ್ಕೆ ಬಹುಮತ ಇಲ್ಲದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿತ್ತು. ವಿಜಯಪುರ ಜಿಲ್ಲಾ ಪಂಚಾಯಿತಿಯಲ್ಲಿ ಒಟ್ಟು 42 ಸ್ಥಾನಗಳಿದ್ದು, ಬಿಜೆಪಿ 20, ಕಾಂಗ್ರೆಸ್ 18, ಜೆಡಿಎಸ್ 3, ಪಕ್ಷೇತರ 1 ಸ್ಥಾನಗಳನ್ನು ಹೊಂದಿದೆ. ಅಧಿಕ ಸ್ಥಾನಗಳನ್ನು ಹೊಂದಿರುವ ಬಿಜೆಪಿ ಚುನಾವಣೆಯಲ್ಲಿ 17 ಮತಗಳನ್ನು ಪಡೆದರೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ 21 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಬಿಜೆಪಿ ಮತ್ತೆ ಮುಖಭಂಗ ಅನುಭವಿಸಿದೆ. ಚುನಾವಣೆಗೆ ಬಿಜೆಪಿಯ 4 ಸದಸ್ಯರು ಗೈರಾಗುವ ಮೂಲಕ ಸ್ವ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದಾರೆ. ಈ ಮೂಲಕ ಬಿಜೆಪಿ ಪಕ್ಷ ಭಿನ್ನಮತ ಹೊರ ಬಿದ್ದಿದೆ.

    ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಸದಸ್ಯರ ಗೈರು ಹಾಜರಿ ಹಾಗೂ ರಾಜ್ಯ ಮಟ್ಟಲ್ಲಿ ದೋಸ್ತಿ ಪಕ್ಷದೊಂದಿಗೆ ಕೈ ಜೋಡಿಸಿ ರಣತಂತ್ರ ರೂಪಿಸಿದ್ದ ಕಾಂಗ್ರೆಸ್ ಮುಖಂಡರು ಮತ್ತೆ ಅಧ್ಯಕ್ಷ ಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಗೃಹ ಸಚಿವ ಎಂ.ಬಿ ಪಾಟೀಲ್, ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹಾಗೂ ಜೆಡಿಎಸ್ ಪಕ್ಷದ ಎಂ.ಸಿ ಮನಗೂಳಿ ಜಿಲ್ಲೆಯವರಾಗಿದ್ದು. ಮತ್ತೆ ಕಾಂಗ್ರೆಸ್‍ದ ಪಕ್ಷಯನ್ನು ಅಭ್ಯರ್ಥಿ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv