Tag: ಅಧ್ಯಕ್ಷ ಇನ್ ಅಮೆರಿಕ

  • ಚೀನಾ, ಮೆಕ್ಸಿಕೊ, ಕೆನಡಾಗೆ ಸುಂಕದ ಬರೆ – ಅಮೆರಿಕಕ್ಕೆ ಬೀಳುತ್ತಾ ರಿವರ್ಸ್‌ ಟ್ಯಾಕ್ಸ್‌ ಎಫೆಕ್ಟ್‌?

    ಚೀನಾ, ಮೆಕ್ಸಿಕೊ, ಕೆನಡಾಗೆ ಸುಂಕದ ಬರೆ – ಅಮೆರಿಕಕ್ಕೆ ಬೀಳುತ್ತಾ ರಿವರ್ಸ್‌ ಟ್ಯಾಕ್ಸ್‌ ಎಫೆಕ್ಟ್‌?

    ನೀರಿಕ್ಷೆಯಂತೆ ಕೆನಡಾ, ಮೆಕ್ಸಿಕೊ ಹಾಗೂ ಚೀನಾ ದೇಶಗಳ ಮೇಲೆ ತೆರಿಗೆ ವಿಧಿಸುವ ಆದೇಶಕ್ಕೆ ಟ್ರಂಪ್‌ ಸಹಿ ಹಾಕಿದ್ದಾರೆ. ಕೆನಡಾ ಹಾಗೂ ಮೇಕ್ಸಿಕೊ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ತಲಾ ಶೇ.25ರಷ್ಟು ಮತ್ತು ಚೀನಾದ ವಸ್ತುಗಳ ಮೇಲೆ ಶೇ.10ರಷ್ಟು ಸುಂಕವನ್ನು ಹೆಚ್ಚಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಶನಿವಾರ ಆದೇಶ ಹೊರಡಿಸಿದ್ದರು. ಇಂದಿನಿಂದ (ಫೆ.4) ಈ ಪರಿಷ್ಕೃತ ಸುಂಕವು ಆಯಾ ದೇಶಗಳ ಮೇಲೆ ಜಾರಿಯಾಗಬೇಕಿತ್ತು. ಆದರೆ ದಿಢೀರ್‌ ಈ ನಿರ್ಧಾರದಲ್ಲಿ ಟ್ರಂಪ್‌ ಬದಲಾವಣೆ ಮಾಡಿ ತಾತ್ಕಾಲಿಕವಾಗಿ ತಡೆ ಹಿಡಿದಿದ್ದಾರೆ.

    ಅಮೆರಿಕ ಸ್ವಹಿತಾಸಕ್ತಿಯ ಜೊತೆಗೆ ಸಹಕಾರ, ನೆರವಿನ ತತ್ವಗಳನ್ನು ಈವರೆಗೆ ಪಾಲಿಸಿಕೊಂಡು ಬಂದಿತ್ತು. ಆದ್ದರಿಂದಲೇ ವಿಶ್ವದ ಹಿರಿಯಣ್ಣ ಎಂಬ ಗೌರವ ಬಂದಿತ್ತು. ಇದೀಗ ʻಅಮೆರಿಕ ಫಸ್ಟ್‌ʼ ಹೆಸರಿನಲ್ಲಿ ಅವೆಲ್ಲಾ ವಿಚಾರಗಳನ್ನು ಗಾಳಿಗೆ ತೂರಿದೆ. ಇದರ ಪ್ರಭಾವ ದೇಶ-ವಿದೇಶಗಳ ಮೇಲೆ ಉಂಟಾಗಲಿದೆ. ಏಕೆಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ನೆರವು ನೀಡುವ ಅಮೆರಿಕದ ಏಜೆನ್ಸಿ USAID ಇನ್ಮುಂದೆ ಈಜಿಪ್ಟ್‌ ಹಾಗೂ ಇಸ್ರೇಲ್‌ ಹೊರತುಪಡಿಸಿ ಉಳಿದ ಯಾವುದೇ ದೇಶಗಳಿಗೂ ಸಹಾಯ ನೀಡುವುದಿಲ್ಲ ಎಂದು ಹೇಳಿದೆ. ಈ ಬೆನ್ನಲ್ಲೇ ಟ್ರಂಪ್‌ ಅವರ ತೆರಿಗೆ ನೀತಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಲಾಹಲ ಎಬ್ಬಿಸಿದೆ.

    ʻಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆʼಯ ಅನ್ವಯ ಟ್ರಂಪ್ ಅವರು ಈ ಆದೇಶ ಹೊರಡಿಸಿದ್ದಾರೆ. ರಾಷ್ಟ್ರದ ಹಿತ ಕಾಪಾಡಲು ಸುಂಕವು ಅತ್ಯಂತ ಶಕ್ತಿಯುತ ಮಾಧ್ಯಮವಾಗಿದೆ. ಅಕ್ರಮ ವಲಸಿಗರು ಮತ್ತು ಮಾದಕವಸ್ತುಗಳು ಅದರಲ್ಲೂ ಪ್ರಮುಖವಾಗಿ ಅಮೆರಿಕವನ್ನು ಪ್ರವೇಶಿಸದಂತೆ ತಡೆಯಲು ಈ ಆದೇಶ ಹೊರಡಿಸಲಾಗಿದೆ ಎಂದು ಶ್ವೇತ ಭವನ ಹೇಳಿದೆ.

    ವ್ಯಾಪಾರ ಪ್ರಮಾಣವು ಚೀನಾದಿಂದ 32.2%, ಕೆನಡಾದಿಂದ 14%, ಮೆಕ್ಸಿಕೊದಿಂದ 9% ಇದ್ದರೆ ಭಾರತದಿಂದ 3.2% ಇದೆ. ಹೀಗಾಗಿ ಅಮೆರಿಕದ ಈ ಕ್ರಮವನ್ನು ಮೂರೂ ದೇಶಗಳೂ ಖಂಡಿಸಿವೆ. ಇದಕ್ಕೆ ಪ್ರತೀಕಾರವಾಗಿ ಕ್ರಮ ಕೈಗೊಳ್ಳುವುದಾಗಿ ಈ ದೇಶಗಳು ಹೇಳಿವೆ. ಅದರಂತೆ, 106.6 ಬಿಲಿಯನ್ ಡಾಲರ್‌ನಷ್ಟು (ಸುಮಾರು 9.24 ಲಕ್ಷ ಕೋಟಿ ರೂ.) ಮೊತ್ತದ ಅಮೆರಿಕದ ವಸ್ತುಗಳ ಮೇಲೆ ಕೆನಡಾವು ಶೇ.25ರಷ್ಟು ಆಮದು ಸುಂಕ (ರಿವರ್ಸ್‌ ಟ್ಯಾಕ್ಸ್‌) ವಿಧಿಸಲು ನಿರ್ಧರಿಸಿದೆ. ಮೆಕ್ಸಿಕೊ ಕೂಡ ಪ್ರತಿಕ್ರಿಯಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರೆ, ಚೀನಾ ವಿಶ್ವ ವ್ಯಾಪಾರ ಸಂಸ್ಥೆಗೆ ದೂರು ನೀಡುವುದಾಗಿ ಹೇಳಿದೆ. ಅಲ್ಲದೇ ತನ್ನ ಹಕ್ಕು ಮತ್ತು ಹಿತಾಸಕ್ತಿಯನ್ನು ದೃಢವಾಗಿ ಕಾಪಾಡಿಕೊಳ್ಳಲು ಪ್ರತಿಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದಿದೆ.

    ಈ ಮೂರು ದೇಶಗಳಿಂದ ಅಮೆರಿಕಕ್ಕೆ ಆಮದಾಗುತ್ತಿದ್ದ ಕಡಿಮೆ ಬೆಲೆಯ ವಸ್ತುಗಳ ಮೇಲಿನ ಸುಂಕ ವಿನಾಯಿತಿಯನ್ನೂ ಟ್ರಂಪ್ ಅವರು ರದ್ದು ಮಾಡಿದ್ದಾರೆ. ಆದರೆ, ಅಮೆರಿಕಕ್ಕೆ ಕೆನಡಾದಿಂದ ಬರುತ್ತಿರುವ ವಿದ್ಯುತ್‌ ಸಂಪನ್ಮೂಲ ಮತ್ತು ತೈಲಗಳ ಮೇಲಿನ ಸುಂಕದಲ್ಲಿ ಮಾತ್ರ ಯಾವುದೇ ಏರಿಕೆಯನ್ನು ಅಲ್ಲಿನ ಸರ್ಕಾರ ಘೋಷಿಸಿಲ್ಲ. ಆದ್ರೆ ಈ ವಾರದಲ್ಲಿ ಯುರೋಪಿಯನ್ ಯೂನಿಯನ್‌ನ ದೇಶಗಳ ಮೇಲೆಯೂ ಸುಂಕ ವಿಧಿಸುತ್ತೇನೆ ಎಂದು ಟ್ರಂಪ್‌ ಅವರು ಹೇಳಿದ್ದಾರೆ. ವಿವಿಧ ದೇಶಗಳ ಆಮದು ಸರಕುಗಳ ಮೇಲೆ ಸುಂಕ ಹೆಚ್ಚಿಸುವ ನಿರ್ಧಾರದ ಕುರಿತು ಜಪಾನ್‌ನ ಹಣಕಾಸು ಸಚಿವ ಕಾಟುನೊಬೊ ಕಾಟು, ʻಅಮೆರಿಕದ ಇಂಥ ಕ್ರಮಗಳಿಂದ ವಿಶ್ವದ ಆರ್ಥಿಕತೆಯ ಮೇಲೆ ಎಂಥ ಪರಿಣಾಮ ಬೀರಬಹುದು ಎಂಬುದರ ಕುರಿತು ನಮಗೆ ತೀವ್ರ ಕಳವಳವಿದೆ’ ಎಂದಿದ್ದಾರೆ.

    ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷ ಇಡೀ ವಿಶ್ವಕ್ಕೆ ಚೀನಾದ ರಫ್ತಿನ ಪ್ರಮಾಣ 12% ಇತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಚೀನಾದ ಕರೆನ್ಸಿ ಮೌಲ್ಯವೂ ಕುಸಿಯುತ್ತಿದೆ. ಅಮೆರಿಕದ ಒಂದು ಡಾಲರ್‌ ಬೆಲೆ 7.20 ಯುವಾನ್‌ ಇದೆ. ಜೊತೆಗೆ ಅನೇಕ ಸರಕುಗಳ ಬೆಲೆ ಇಳಿಕೆಯಾಗಿದೆ. ಇದು ಅಮೆರಿಕ ತೆರಿಗೆ ಹೆಚ್ಚಳ ಮಾಡಲು ಒಂದು ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.

    ಅಮೆರಿಕದ ಮೇಲೆ ಏನು ಪರಿಣಾಮ?

    ಅಮೆರಿಕದಲ್ಲಿ ಉದ್ಯೋಗ ನಷ್ಟ
    ಸುಂಕ ವಿಧಿಸಲು ನಮಗೆ ಇಷ್ಟವಿಲ್ಲ. ಆದರೆ ಹೀಗೆ ಮಾಡದೆ ಬೇರೆ ವಿಧಿಯಿಲ್ಲ. ಈ ನಿರ್ಧಾರವು ಕೆನಡಾ ಜನರ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ನಿಜ. ಇದಕ್ಕೂ ಮಿಗಿಲಾಗಿ ಇದರಿಂದ ಅಮೆರಿಕ ಜನರ ಮೇಲೆಯೇ ಹೆಚ್ಚು ಪರಿಣಾಮ ಉಂಟಾಗಲಿದೆ. ಅಮೆರಿಕದ ವಾಹನ ಜೋಡಣಾ ಘಟಕಗಳು ಹಾಗೂ ತಯಾರಿಕಾ ಘಟಕಗಳು ಮುಚ್ಚುವ ಸಾಧ್ಯತೆಗಳಿದ್ದು, ಇದರಿಂದ ಉದ್ಯೋಗ ನಷ್ಟ ಸಂಭವಿಸಲಿದೆ ಎಂದು ಕೆನಡಾ ಪ್ರಧಾನಿ ಜಸ್ಟೀನ್‌ ಟ್ರಡೊ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟ್ರಂಪ್‌, ಈಗ ಮೆಕ್ಸಿಕೊ ಮತ್ತು ಅಮೆರಿಕದ ಮಧ್ಯೆಯೇ ಮಧ್ಯೆಯೇ ವ್ಯಾಪಾರ ಯುದ್ಧ ಆರಂಭಿಸಿದ್ದೇವೆ. ಇದರಿಂದ ಉತ್ತರ ಅಮೆರಿಕ ಭಾಗಕ್ಕೆ ವಸ್ತುಗಳ ಪೂರೈಕೆ ಕಡಿತವಾಗಬಹುದು ಎಂದು ಹೇಳಿದ್ದಾರೆ.

    ಅಮೆರಿಕಕ್ಕೆ ಕಾದಿದೆ ಸಂಕಷ್ಟ’
    ಕೆನಡಾ, ಮೆಕ್ಸಿಕೊ ಮತ್ತು ಚೀನಾ ದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ಅಮೆರಿಕವು ಆಮದು ಮಾಡಿಕೊಳ್ಳುತ್ತದೆ. ಈಗ ಈ ದೇಶಗಳ ಮೇಲೆ ಅಮೆರಿಕ ಹೆಚ್ಚಿನ ಆಮದು ಸುಂಕ ವಿಧಿಸಿದೆ. ಇದಕ್ಕೆ ಪ್ರತಿಯಾಗಿ ಕೆನಡಾ ಈಗಾಗಲೇ ಅಮೆರಿಕ ಮೇಲೆ ಆಮದು ಸುಂಕ ವಿಧಿಸಲು ಮುಂದಾಗಿದೆ. ಇದರಿಂದ ಅಮೆರಿಕಕ್ಕೆ ಹೆಚ್ಚಿನ ನಷ್ಟವಾಗಲಿದೆ. ಒಂದು ವೇಳೆ ಚೀನಾ ಹಾಗೂ ಮೆಕ್ಸಿಕೊ ದೇಶಗಳೂ ಕೆನಡಾ ದಾರಿಯನ್ನೇ ಹಿಡಿದರೆ ಅಮೆರಿಕಕ್ಕೆ ಸಂಕಷ್ಟ ಎನ್ನುತ್ತಾರೆ ಅರ್ಥಶಾಸ್ತ್ರಜ್ಞರು.

    ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಮೆರಿಕವು ಶೇ 0.7ರಷ್ಟು ಹಣದುಬ್ಬರ ಎದುರಿಸಲಿದೆ. ಜನರು ಖರ್ಚು ಕಡಿಮೆ ಮಾಡಲಿದ್ದಾರೆ ಮತ್ತು ಹೂಡಿಕೆ ಪ್ರಮಾಣ ಕುಸಿಯಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ವ್ಯಾಪಾರ ನೀತಿಗಳಲ್ಲಿನ ಇಂಥ ಅನಿಶ್ಚಿತತೆಯು ಮಾರುಕಟ್ಟೆಯಲ್ಲಿ ನಿರಂತರ ಬದಲಾವಣೆಗಳನ್ನು ತಂದೊಡ್ಡಲಿದೆ. ಇಂಥ ಪರಿಸ್ಥಿತಿಯು ಖಾಸಗಿ ವಲಯಕ್ಕೆ ತೀವ್ರ ಪೆಟ್ಟು ನೀಡಲಿದೆ. ಟ್ರಂಪ್ ಅವರು ತಮ್ಮ ಪ್ರಚಾರದುದ್ದಕ್ಕೂ ವ್ಯಾಪರ ಸ್ನೇಹಿ ಆಡಳಿತ ನೀಡುತ್ತೇವೆ ಎಂದು ಹೇಳಿಕೊಂಡಿದ್ದರು. ಆದರೆ ಟ್ರಂಪ್‌ ಅವರ ಈ ಕ್ರಮಗಳು ವ್ಯಾಪಾರ ಸ್ನೇಹಿಯಾಗಿಲ್ಲ ಎಂದಿದ್ದಾರೆ.

  • ಅಮೆರಿಕ ಪಾಲಾದ ಅಧ್ಯಕ್ಷನ ಸಖಿ ರಾಗಿಣಿ!

    ಅಮೆರಿಕ ಪಾಲಾದ ಅಧ್ಯಕ್ಷನ ಸಖಿ ರಾಗಿಣಿ!

    ಬೆಂಗಳೂರು: ವೀರಮದಕರಿ ಚಿತ್ರದಲ್ಲಿ ಕಿಚ್ಚ ಸುದೀಪ್ ಜೋಡಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು ರಾಗಿಣಿ ದ್ವಿವೇದಿ. ಚಿಗರೆಯಂತೆ ಕನ್ನಡಕ್ಕಾಗಮಿಸಿ ಇಲ್ಲಿಯೇ ನೆಲೆ ಕಂಡುಕೊಂಡಿರೋ ರಾಗಿಣಿ ಆ ನಂತರದಲ್ಲಿಯೂ ಸಾಕಷ್ಟು ಅವಕಾಶಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಥರ ಥರದ ಪಾತ್ರಗಳಲ್ಲಿ ಮಿಂಚಿದ್ದಾರೆ. ಈ ಮೂಲಕವೇ ಕನ್ನಡ ಪ್ರೇಕ್ಷಕರ ಮನ ಗೆದ್ದಿರೋ ರಾಗಿಣಿಯೀಗ ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಮೂಲಕ ಶರಣ್‍ಗೆ ಜೋಡಿಯಾಗಿ ವಿಭಿನ್ನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.

    ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರಿನಡಿಯಲ್ಲಿ ಟಿ ಜಿ ವಿಶ್ವಪ್ರಸಾದ್ ನಿರ್ಮಾಣ ಮಾಡಿರೋ ಈ ಚಿತ್ರವನ್ನು ಯೋಗಾನಂದ್ ನಿರ್ದೇಶನ ಮಾಡಿದ್ದಾರೆ. ಇದರಲ್ಲಿನ ನಾಯಕಿ ಪಾತ್ರವನ್ನು ರಾಗಿಣಿ ಬಿಟ್ಟರೆ ಬೇರೆ ಯಾರೂ ನಿರ್ವಹಿಸೋದು ಕಷ್ಟ ಎಂಬ ಬಗ್ಗೆ ನಿರ್ದೇಶಕರು ಮತ್ತು ಚಿತ್ರತಂಡ ಆರಂಭದಲ್ಲಿಯೇ ಫಿಕ್ಸಾಗಿತ್ತಂತೆ. ಯಾಕೆಂದರೆ ಅದರ ಚಹರೆ ರಾಗಿಣಿ ಪಾಲಿಗೆ ಪಕ್ಕಾ ಸೂಟ್ ಆಗುವಂತಿತ್ತು. ಆದರೆ ರಾಗಿಣಿ ಪಾಲಿಗದು ನಿಜಕ್ಕೂ ಸವಾಲಿನ ಪಾತ್ರವಾಗಿತ್ತು!

    ಯಾಕೆಂದರೆ ಈ ಪಾತ್ರಕ್ಕೂ ಕಾಮಿಡಿ ಶೇಡುಗಳಿವೆ. ಕಮರ್ಶಿಯಲ್ ಸಿನಿಮಾಗಳಲ್ಲಿ ಗ್ಲಾಮರ್ ಗೊಂಬೆಯಂತೆ ಮಿಂಚಿದ ಯಾರಿಗೇ ಆದರೂ ಏಕಾಏಕಿ ಕಾಮಿಡಿ ಟಚ್ ಇರೋ ಪಾತ್ರಗಳನ್ನು ಮಾಡಬೇಕಾಗಿ ಬಂದಾಗ ಕಸಿವಿಸಿ ಕಾಡುತ್ತೆ. ಯಾಕೆಂದರೆ ಕಾಮಿಡಿ ಟೈಮಿಂಗ್ ಅನ್ನು ಹಠಾತ್ತನೆ ಫಾಲೋ ಮಾಡೋದು ಬಲು ಕಷ್ಟದ ಕೆಲಸ. ಆದರೂ ರಾಗಿಣಿ ಅದನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡು ಗೆದ್ದಿದ್ದಾರೆ. ಒಂದಷ್ಟು ತಯಾರಿಯೊಂದಿಗೆ ಅವರು ಹಾಸ್ಯರಸ ಹೊಂದಿರೋ ಪಾತ್ರದ ಮೂಲಕ ಶರಣ್‍ಗೆ ಸರಿಯಾಗಿಯೇ ಸಾಥ್ ಕೊಟ್ಟಿದ್ದಾರಂತೆ. ರಾಗಿಣಿ ಯಾವ ಥರದ ಪಾತ್ರದಲ್ಲಿ ನಟಿಸಿದ್ದಾರೆಂಬ ವಿಚಾರ ಈ ವಾರವೇ ಜಾಹೀರಾಗಲಿದೆ.

  • ಕಮಾಲ್ ಮಾಡಲು ರೆಡಿಯಾಗಿದೆ ಶರಣ್-ರಾಗಿಣಿ ಜೋಡಿ!

    ಕಮಾಲ್ ಮಾಡಲು ರೆಡಿಯಾಗಿದೆ ಶರಣ್-ರಾಗಿಣಿ ಜೋಡಿ!

    ಬೆಂಗಳೂರು: ಯೋಗಾನಂದ ಮುದ್ದಾನ್ ನಿರ್ದೇಶನದ ಚೊಚ್ಚಲ ಚಿತ್ರ ಅಧ್ಯಕ್ಷ ಇನ್ ಅಮೆರಿಕ. ಈ ಹಿಂದೆ ಅಧ್ಯಕ್ಷ ಎಂಬ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿಯೇ ಗೆಲುವು ಕಂಡಿದ್ದವರು ಶರಣ್. ಅಧ್ಯಕ್ಷನಾಗಿ ಅವತಾರವೆತ್ತಿದ್ದ ಅವರನ್ನು ಕನ್ನಡದ ಪ್ರೇಕ್ಷಕರು ಮನಸಾರೆ ಮೆಚ್ಚಿಕೊಂಡು ಗೆಲ್ಲಿಸಿದ್ದರು. ಇದೀಗ ಅವರು ಅಧ್ಯಕ್ಷ ಇನ್ ಅಮೆರಿಕಾ ಚಿತ್ರದ ಮೂಲಕ ಈ ಹಿಂದಿನ ಅಧ್ಯಕ್ಷನ ಪಾತ್ರವನ್ನು ಮೀರಿಸುವಂಥಾ ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿಶೇಷವೆಂದರೆ ಈ ಸಿನಿಮಾದ ಮೂಲಕ ಶರಣ್‍ಗೆ ರಾಗಿಣಿ ದ್ವಿವೇದಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

    ರಾಗಿಣಿ ಈ ಹಿಂದೆ ಶರಣ್ ಅವರ ಜೊತೆ ಹಾಡಿನಲ್ಲಿಯಷ್ಟೇ ಕಾಣಿಸಿಕೊಂಡಿದ್ದರು. ಹೀಗೆ ಹಾಡಿನ ಮೂಲಕವೇ ಈ ಜೋಡಿ ಪ್ರೇಕ್ಷಕರಿಗೆ ಹುಚ್ಚು ಹಿಡಿಸಿದ್ದು ಸುಳ್ಳಲ್ಲ. ಒಂದಷ್ಟು ಮಂದಿ ಇಡೀ ಚಿತ್ರದಲ್ಲಿ ರಾಗಿಣಿ ಮತ್ತು ಶರಣ್ ಅವರನ್ನು ಒಟ್ಟಿಗೆ ನೋಡುವಂಥಾ ಅಭಿಲಾಶೆ ಹೊಂದಿದ್ದರು. ಆದರೆ ಬಹುಕಾಲದವರೆಗೂ ಕೂಡಾ ಇದು ಸಾಧ್ಯವಾಗಿರಲಿಲ್ಲ. ಅಧ್ಯಕ್ಷ ಇನ್ ಅಮೆರಿಕಾ ಚಿತ್ರದ ನಾಯಕಿಯ ಪಾತ್ರಕ್ಕೆ ರಾಗಿಣಿ ಬಿಟ್ಟರೆ ಬೇರ್ಯಾರಿಗೂ ಸೂಟ್ ಆಗೋದಿಲ್ಲ ಎಂಬ ಕಾರಣದಿಂದಲೇ ಅವರನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.

    ರಾಗಿಣಿ ಕೂಡಾ ಈ ಕಥೆ ಮತ್ತು ಪಾತ್ರವನ್ನು ಮೆಚ್ಚಿಕೊಂಡೇ ಶರಣ್‍ಗೆ ಜೋಡಿಯಾಗಿ ನಟಿಸಲು ಒಪ್ಪಿಕೊಂಡಿದ್ದರಂತೆ. ನಿರ್ದೇಶಕ ಯೋಗಾನಂದ್ ಸೇರಿದಂತೆ ಇಡೀ ಚಿತ್ರತಂಡ ನಿರೀಕ್ಷೆ ಮಾಡಿದ್ದ ಮಟ್ಟ ಮೀರಿ ರಾಗಿಣಿ ಈ ಪಾತ್ರದಲ್ಲಿ ಮಿಂಚಿದ್ದಾರಂತೆ. ಶರಣ್ ಮತ್ತು ರಾಗಿಣಿ ಜೋಡಿಯ ಕಮಾಲ್ ಏನನ್ನೋದು ಈ ವಾರವೇ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರಿನಡಿಯಲ್ಲಿ ಟಿ ಜಿ ವಿಶ್ವಪ್ರಸಾದ್ ನಿರ್ಮಾಣ ಮಾಡಿರೋ ಈ ಚಿತ್ರ ಈ ವಾರ ಅದ್ದೂರಿಯಾಗಿ ತೆರೆಗಾಣಲಿದೆ. ಈ ಮೂಲಕ ಹಿಂದೆ ಅಧ್ಯಕ್ಷ ಚಿತ್ರದ ಮೂಲಕ ಶರಣ್ ಅವರಿಗೆ ಸಿಕ್ಕಿದ್ದ ದೊಡ್ಡ ಗೆಲುವಿನ ಇತಿಹಾಸ ಮರುಕಳಿಸೋ ಲಕ್ಷಣಗಳೂ ಕಾಣಿಸುತ್ತಿವೆ.