Tag: ಅಧೀರ್ ರಂಜನ್ ಚೌಧರಿ

  • ಕೈ ಸಂಸದ ಅಧೀರ್ ರಂಜನ್ ವಿರುದ್ಧ ಸೋನಿಯಾ ಅಸಮಾಧಾನ

    ಕೈ ಸಂಸದ ಅಧೀರ್ ರಂಜನ್ ವಿರುದ್ಧ ಸೋನಿಯಾ ಅಸಮಾಧಾನ

    ನವದೆಹಲಿ: ಕಾಶ್ಮೀರ ಆಂತರಿಕ ವಿಚಾರ ಹೇಗಾಗುತ್ತೆ ಎಂದು ಪ್ರಶ್ನಿಸಿದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ವಿರುದ್ಧ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

    ಲೋಕಸಭೆಯಲ್ಲಿ ಮಂಗಳವಾರ ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ನೀಡುವ ರದ್ದು ವಿಚಾರಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಅಧೀರ್ ರಂಜನ್ ಚೌಧರಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಕಾಶ್ಮೀರ ಸಮಸ್ಯೆಯು ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಚಾರ ಅಂತ ಕೇಂದ್ರ ಸರ್ಕಾರವೇ ಸಾಕಷ್ಟು ಬಾರಿ ಹೇಳಿದೆ. ಪಾಕ್ ಹಾಗೂ ಭಾರತ ಮಧ್ಯೆ ಉಂಟಾಗಿರುವ ಭೂ ವಿವಾದವನ್ನು 1948ರಿಂದಲೂ ವಿಶ್ವಸಂಸ್ಥೆ ಮೇಲ್ವಿಚಾರಣೆ ಮಾಡುತ್ತಲೇ ಬಂದಿದೆ. ನಾವು ಶಿಮ್ಲಾ ಒಪ್ಪಂದ ಮತ್ತು ಲಾಹೋರ್ ಘೋಷಣೆಗೆ ಸಹಿ ಹಾಕಿದ್ದೇವೆ. ಹಾಗಿದ್ದ ಮೇಲೆ ಇದು ಆಂತರಿಕ ವಿಚಾರವೋ ದ್ವಿಪಕ್ಷೀಯ ವಿಚಾರವೋ ನೀವೇ ಹೇಳಿ. ಕಾಂಗ್ರೆಸ್ ಪಕ್ಷಕ್ಕೆ ನೀವು ಜ್ಞಾನೋದಯ ಮಾಡಿಸಿ ಎಂದು ವ್ಯಂಗ್ಯವಾಡಿದರು.

    ಅಧೀರ್ ರಂಜನ್ ಚೌಧರಿ ಅವರ ಮಾತು ಕೇಳುತ್ತಿದ್ದಂತೆ ಪಕ್ಕದಲ್ಲಿಯೇ ಕುಳಿತಿದ್ದ ಸೋನಿಯಾ ಗಾಂಧಿ ಅವರು ಅಸಮಾಧಾನ ಹೊರ ಹಾಕಿದರು. ಅಷ್ಟೇ ಅಲ್ಲೇ ಉಳಿದ ಕೈ ನಾಯಕರ ಮುಖ ನೋಡಿದರು. ಅಧೀರ್ ರಂಜನ್ ಅವರ ಹೇಳಿಕೆಗೆ ಉಳಿದ ಕಾಂಗ್ರೆಸ್ ಸಂಸದರು ಕೂಡ ಆಕ್ಷೇಪ ವ್ಯಕ್ತಪಡಿಸಿದರು. ತಕ್ಷಣವೇ ಎಚ್ಚೆತ್ತುಕೊಂಡ ಅಧೀರ್ ರಂಜನ್ ಅವರು ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿರುವಿರಿ ಎಂದು ಸದನಕ್ಕೆ ಹೇಳುವ ಮೂಲಕ ಸರಿ ಪಡಿಸಲು ಮುಂದಾದರು.

    ಅಧೀರ್ ರಂಜನ್ ಅವರ ಹೇಳಿಕೆಯಿಂದ ಕೋಪಗೊಂಡ ಗೃಹ ಸಚಿವ ಅಮಿತ್ ಶಾ ಅವರು, ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಯಾವುದೇ ಕಾನೂನನ್ನು ರೂಪಿಸಲು ಈ ದೇಶದ ಸಂಸತ್ತು ಯಾವತ್ತೂ ತಡೆಯೊಡ್ಡುವುದಿಲ್ಲ. ಕಾಂಗ್ರೆಸ್ ಹೇಳುವಂತೆ ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆ ಬಗೆಹರಿಸುತ್ತದೇಯಾ ಎಂದು ಪ್ರಶ್ನಿಸಿದರು.

    ಜಮ್ಮು ಕಾಶ್ಮೀರವನ್ನು ರಾತ್ರಿ ಬೆಳಗಾಗುವುದರ ಒಳಗಡೆ ಎರಡು ಕೇಂದ್ರಾಡಳಿತ ರಾಜ್ಯವನ್ನಾಗಿ ಮಾಡಿದ್ದೀರಿ. ಇದರಿಂದ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಹೇಗಾಗುತ್ತದೆ. ನೀವು ಪಾಕ್ ಆಕ್ರಮಿತ ಕಾಶ್ಮೀರ ಬಗ್ಗೆ ಯಾವುದೇ ಆಲೋಚನೆ ಮಾಡಿಲ್ಲ. ನಿಯಮಗಳನ್ನು ಉಲ್ಲಂಘಿಸಿ ರಾಜ್ಯವನ್ನು ವಿಭಜನೆ ಮಾಡುತ್ತಿದ್ದೀರಿ ಎಂದು ಅಧೀರ್ ರಂಜನ್ ಚೌಧರಿ ಆರೋಪಿಸಿದರು.

    ಇದಕ್ಕೆ ಕೂಡಲೇ ಉತ್ತರ ನೀಡಿದ ಶಾ, ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಭಾರತ ಮತ್ತು ಜಮ್ಮು ಕಾಶ್ಮೀರ ಸಂವಿಧಾನದಲ್ಲಿ ಇದರ ಬಗ್ಗೆ ಆಧಾರವಿದೆ. ಪಿಓಕೆಯನ್ನು ನಾವು ಪರಿಗಣಿಸಿಲ್ಲ ಎಂದು ನೀವು ಹೇಳುತ್ತಿದ್ದೀರಿ. ಆದರೆ ನಾನು ಹೇಳುತ್ತೇನೆ. ಪಾಕ್ ಆಕ್ರಮಿತ ಕಾಶ್ಮೀರ ಸೇರಿದಾಗ ಮಾತ್ರ ಅದು ಜಮ್ಮು ಕಾಶ್ಮೀರ ಆಗುತ್ತದೆ. ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಅಕ್ಷಯ್ ಚಿನ್ ಸೇರಿಸಿ ಜಮ್ಮು ಕಾಶ್ಮೀರದ ಗಡಿಯನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಪಿಓಕೆ ಮತ್ತು ಅಕ್ಷಯ್ ಚಿನ್ ಎರಡೂ ಭಾರತದ ಅವಿಭಾಜ್ಯ ಅಂಗಗಳು. ಜಮ್ಮು ಮತ್ತು ಕಾಶ್ಮೀರಕ್ಕಾಗಿ ನಾನು ಪ್ರಾಣತ್ಯಾಗಕ್ಕೂ ಸಿದ್ಧ ಎಂದು ಗುಡುಗಿದರು.

  • ಕಾಂಗ್ರೆಸ್ ಲೋಕಸಭಾ ನಾಯಕರಾಗಿ ಅಧೀರ್ ರಂಜನ್ ಚೌಧರಿ ಆಯ್ಕೆ

    ಕಾಂಗ್ರೆಸ್ ಲೋಕಸಭಾ ನಾಯಕರಾಗಿ ಅಧೀರ್ ರಂಜನ್ ಚೌಧರಿ ಆಯ್ಕೆ

    ನವದೆಹಲಿ: ಕಾಂಗ್ರೆಸ್‍ನ ಲೋಕಸಭಾ ನಾಯಕರಾಗಿ ಪಶ್ಚಿಮ ಬಂಗಾಳದ ಹಿರಿಯ ಮುಖಂಡ ಅಧೀರ್ ರಂಜನ್ ಚೌಧರಿ ಅವರನ್ನು ಆಯ್ಕೆ ಮಾಡಲಾಗಿದೆ.

    ಇಂದು ಬೆಳಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಯುಪಿಎ ಅಧ್ಯೆಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚೌಧರಿ ಅವರನ್ನು ಆಯ್ಕೆ ಮಾಡಲಾಗಿದೆ.

    ಸಭೆಯಲ್ಲಿ ನಿರ್ಧಾರವಾಗುತ್ತಿದ್ದಂತೆ ಲೋಕಸಭೆಗೆ ಈ ಕುರಿತು ಪತ್ರ ಬರೆಯಲಾಗಿದ್ದು, ಹೆಚ್ಚು ಸ್ಥಾನ ಗಳಿಸಿರುವ ಅತಿ ದೊಡ್ಡ ಪಕ್ಷದ ವಿರೋಧ ಪಕ್ಷದ ನಾಯಕರಾಗಿ ಹಾಗೂ ಪ್ರಮುಖ ಆಯ್ಕೆ ಸಮಿತಿಗಳ ಪ್ರತಿನಿಧಿಯಾಗಿ ಚೌಧರಿ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.

    ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಆಹ್ವಾನಿಸಿರುವ ‘ಒಂದೇ ದೇಶ ಒಂದೇ ಚುನಾವಣೆ’ ಎಂಬ ವಿಷಯದ ಕುರಿತು ಚರ್ಚಿಸಲು ಕರೆದಿರುವ ಸಭೆಯ ಬಗ್ಗೆಯು ಕಾಂಗ್ರೆಸ್ ಗಮನಹರಿಸಿದ್ದು, ಕಾಂಗ್ರೆಸ್ ಈ ನಿರ್ಧಾರವನ್ನು ಪ್ರಾಯೋಗಿಕವಾಗಿ, ವ್ಯವಸ್ಥೆಯ ದೃಷ್ಟಿಯಿಂದ ಹಾಗೂ ಕಾನೂನಾತ್ಮಕವಾಗಿ ವಿರೋಧಿಸಿದೆ.

    ಈವರೆಗೆ ಕಾಂಗ್ರೆಸ್‍ನ ಲೋಕಸಭಾ ನಾಯಕರಾಗಿ ಕಾರ್ಯನಿರ್ವಹಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದರಿಂದ ಲೋಕಸಭಾ ನಾಯಕರ ಆಯ್ಕೆ ಪ್ರಶ್ನೆ ಉದ್ಭವಿಸಿತ್ತು. ಆದರೆ, ಈ ಸ್ಥಾನಕ್ಕೆ ರಾಹುಲ್ ಗಾಂಧಿ ಅವರನ್ನೇ ಆಯ್ಕೆ ಮಾಡಬೇಕೆಂದುಕೊಂಡಿದ್ದರಿಂದ ಇದೂವರೆಗೆ ಮೃದು ಧೋರಣೆ ತಳೆಯಲಾಗಿತ್ತು.

    ಆದರೆ, ರಾಹುಲ್ ಗಾಂಧಿ ಅವರು ಲೋಕಸಭಾ ನಾಯಕನ ಸ್ಥಾನ ವಹಿಸಿಕೊಳ್ಳುವುದಿರಲಿ, ಚುನಾವಣೆಯಲ್ಲಿ ಪಕ್ಷ ಕಳಪೆ ಸಾಧನೆ ಮಾಡಿದ್ದರಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಪಕ್ಷದ ಹಿರಿಯ ನಾಯಕರು ರಾಹುಲ್ ಗಾಂಧಿ ಅವರ ರಾಜೀನಾಮೆಯನ್ನು ಅಂಗೀಕರಿಸಲಿಲ್ಲ. ಲೋಕಸಭಾ ಅಧಿವೇಶನ ಪ್ರಾರಂಭವಾದ ಹಿನ್ನೆಲೆ ಅನಿವಾರ್ಯವಾಗಿ ಆಯ್ಕೆ ಮಾಡಲೇಬೇಕಾದ ಸಂದರ್ಭ ಎದುರಾಗಿದ್ದರಿಂದ ಚೌಧರಿ ಅವರನ್ನು ನೇಮಿಸಲಾಗಿದೆ.

    ಅಧಿರ್ ಚೌಧರಿ ಅವರೊಂದಿಗೆ ಕೇರಳ ಮುಖಂಡ ಕೆ.ಸುರೇಶ್, ಪಕ್ಷದ ವಕ್ತಾರ ಮನೀಶ್ ತಿವಾರಿ ಮತ್ತು ತಿರುವನಂತಪುರದ ಶಾಸಕ ಶಶಿ ತರೂರ್ ಲೋಕಸಭಾ ನಾಯಕನ ಸ್ಥಾನದ ರೇಸ್‍ನಲ್ಲಿದ್ದರು. ಚೌಧರಿ ಅವರು 5 ಬಾರಿ ಸಂಸದರಾಗಿ ಆಯ್ಕೆಯಾಗಿದ್ದು, ಅನುಭವದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ.

    ಇಂದಿನ ಕಾಂಗ್ರೆಸ್ ಸಭೆಯಲ್ಲಿ ಲೋಕಸಭಾ ಸ್ಪೀಕರ್ ಆಗಿ ರಾಜಸ್ಥಾನ ಶಾಸಕ ಓಂ ಬಿರ್ಲಾ ಅವರನ್ನು ಆಯ್ಕೆ ಮಾಡಿರುವ ಕುರಿತು ಸಹ ಚರ್ಚೆ ನಡೆದಿದ್ದು, ಎನ್‍ಡಿಎ ಆಯ್ಕೆಯನ್ನು ವಿರೋಧಿಸುವುದು ಬೇಡ ಎಂದು ನಿರ್ಧರಿಸಲಾಗಿತ್ತು.