Tag: ಅಧೀರ್ ರಂಜನ್ ಚೌಧರಿ

  • ಚುನಾವಣಾ ಆಯೋಗದ ಆಯುಕ್ತರಾಗಿ ಇಬ್ಬರ ನೇಮಕ

    ಚುನಾವಣಾ ಆಯೋಗದ ಆಯುಕ್ತರಾಗಿ ಇಬ್ಬರ ನೇಮಕ

    – ಮೋದಿ ನೇತೃತ್ವದ ಸಭೆಯಲ್ಲಿ ನಿರ್ಧಾರ

    ನವದೆಹಲಿ: ಚುನಾವಣಾ ಆಯೋಗದಲ್ಲಿ (Election Commissioners) ಖಾಲಿ ಇರುವ ಎರಡು ಆಯುಕ್ತರ (Commissioners) ಹುದ್ದೆಗೆ ನಿವೃತ್ತ ಇಬ್ಬರು ಐಎಎಸ್‌ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

    ಸುಖಬೀರ್ ಸಿಂಗ್ ಸಂಧು (Sukhbir Sing Sandhu) ಮತ್ತು ಜ್ಞಾನೇಶ್ ಕುಮಾರ್ (Gyanesh Kumar) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ (Adhir Ranjan Chowdhury) ಇಂದು ಮಧ್ಯಾಹ್ನ ಮಾಧ್ಯಮಗಳಿಗೆ ತಿಳಿಸಿದರು.

    ಮುಂಬರುವ ಲೋಕಸಭೆ ಚುನಾವಣೆಗೆ (Lok Sabha Election) ಚುನಾವಣಾ ಆಯೋಗವು ತಯಾರಿ ನಡೆಸುತ್ತಿದ್ದು, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ನೆರವಾಗಲು ಇಬ್ಬರು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧೀರ್‌ ರಂಜನ್‌ ಚೌಧರಿ ಭಾಗಿಯಾಗಿದ್ದರು.

    ಸಭೆ ಮುಗಿದ ಕೂಡಲೇ ತಮ್ಮ ನಿವಾಸದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅಧೀರ್ ರಂಜನ್ ಚೌಧರಿ, ಇಬ್ಬರು ಚುನಾವಣಾ ಆಯೋಗಗಳ ಆಯ್ಕೆಗೆ ಆರು ಹೆಸರುಗಳು ಸಮಿತಿಯ ಮುಂದೆ ಬಂದಿದ್ದವು. ಹೆಚ್ಚಿನ ಸದಸ್ಯರು ಸಂಧು ಮತ್ತು ಕುಮಾರ್ ಅವರ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ಹೇಳಿದರು.  ಇದನ್ನೂ ಓದಿ: ಬಾಕಿ ಉಳಿದ ಬಿಜೆಪಿಯ 5 ಕ್ಷೇತ್ರಗಳಲ್ಲೂ ಹಾಲಿ ಸಂಸದರಿಗೆ ಟಿಕೆಟ್ ಮಿಸ್? – ಕಾರಣ ಏನು? 

    ಸಂಧು ಮತ್ತು ಜ್ಞಾನೇಶ್ ಕುಮಾರ್ 1988 ಬ್ಯಾಚ್‌ನ ನಿವೃತ್ತ ಐಎಎಸ್ ಅಧಿಕಾರಿಗಳಾಗಿದ್ದಾರೆ. ಸಂಧು ಉತ್ತರಾಖಂಡ್ ಕೇಡರ್‌ನಿಂದ ಬಂದಿದ್ದರೆ, ಕುಮಾರ್ ಕೇರಳ ಕೇಡರ್‌ನಿಂದ ಆಯ್ಕೆ ಆಗಿದ್ದರು.

    ಸಂಧು ಅವರು ಈ ಹಿಂದೆ ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷ ಸೇರಿದಂತೆ ಪ್ರಮುಖ ಸರ್ಕಾರಿ ಹುದ್ದೆಗಳನ್ನು ನಿಭಾಯಿಸಿದ್ದಾರೆ.

    ಜ್ಞಾನೇಶ್ ಕುಮಾರ್ ಅವರು ಸಂಸದೀಯ ವ್ಯವಹಾರಗಳ ಸಚಿವಾಲಯ ಮತ್ತು ಅಮಿತ್ ಶಾ ನೇತೃತ್ವದ ಸಹಕಾರ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ಗೃಹ ಸಚಿವಾಲಯದ ಕಾಶ್ಮೀರ ವಿಭಾಗದ ಮುಖ್ಯಸ್ಥರಾಗಿ ಆರ್ಟಿಕಲ್ 370 ರದ್ದತಿಯನ್ನು ಮೇಲ್ವಿಚಾರಣೆ ಮಾಡಿದ್ದರು.

     

    ನೇಮಕಾತಿ ಹೇಗೆ ನಡೆಯುತ್ತೆ?
    ಕಳೆದ ಡಿಸೆಂಬರ್‌ನಲ್ಲಿ ಚುನಾವಣಾ ಆಯೋಗದ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ಕಾನೂನನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಇದರ ಅನ್ವಯ ಎರಡು ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ.

    ಮೊದಲು ಶೋಧ ಸಮಿತಿಯನ್ನು ರಚಿಸಲಾಗುತ್ತದೆ. ಕೇಂದ್ರ ಕಾನೂನು ಸಚಿವ, ಕೇಂದ್ರ ಸರ್ಕಾರದ ಕಾರ್ಯದರ್ಶಿ ರ‍್ಯಾಂಕ್‌ನ ಇಬ್ಬರು ಅಧಿಕಾರಿಗಳು ಈ ಸಮಿತಿಯ ಸದ್ಯಸರಾಗಿರುತ್ತಾರೆ. ಇವರು ಐವರು ಹೆಸರುಗಳನ್ನು ಸೂಚಿಸಬೇಕು. ನಂತರ ಈ ಪಟ್ಟಿಯ ಆಯ್ಕೆ ಸಮಿತಿ ಮುಂದೆ ಹೋಗುತ್ತದೆ. ಈ ಸಮಿತಿಯಲ್ಲಿ ಪ್ರಧಾನಿ, ವಿರೋಧ ಪಕ್ಷದ ನಾಯಕ (ಅಧಿಕೃತ ವಿರೋಧ ಪಕ್ಷ ಇಲ್ಲದೇ ಇದ್ದರೆ, ಲೋಕಸಭೆಯ ಅತ್ಯಂತ ದೊಡ್ಡ ಪ್ರತಿ ಪಕ್ಷದ ನಾಯಕ) ಹಾಗೂ ಪ್ರಧಾನಿ ನೇಮಿಸಿದ ಸಂಪುಟ ದರ್ಜೆಯ ಸಚಿವ ಸದಸ್ಯರಾಗಿರುತ್ತಾರೆ.

    ಈ ಐವರ ಬಗ್ಗೆ ಆಯ್ಕೆ ಸಮಿತಿ ಚರ್ಚಿಸಿ ನೇಮಕ ಮಾಡಬೇಕು. ಶೋಧ ಸಮಿತಿ ಸೂಚಿಸಿದ ಹೆಸರುಗಳನ್ನೇ ಆಯ್ಕೆ ಸಮಿತಿಯು ಗಣನೆಗೆ ತೆಗೆದುಕೊಳ್ಳಬೇಕಿಲ್ಲ. ಆ ಪಟ್ಟಿಯಲ್ಲಿ ಇಲ್ಲದೇ ಇದ್ದವರನ್ನೂ ನೇಮಕ ಮಾಡಬಹುದು.

     

  • ಹಿಂದೂ ಹೆಸರನ್ನು ನೀಡಿದವರೇ ವಿದೇಶಿಯರು: ಅಧೀರ್‌ ರಂಜನ್‌ ಚೌಧರಿ

    ಹಿಂದೂ ಹೆಸರನ್ನು ನೀಡಿದವರೇ ವಿದೇಶಿಯರು: ಅಧೀರ್‌ ರಂಜನ್‌ ಚೌಧರಿ

    ನವದೆಹಲಿ: ಹಿಂದೂ (Hindu) ಹೆಸರನ್ನು ನೀಡಿದವರು ವಿದೇಶಿಯರು ಎಂದು ಕಾಂಗ್ರೆಸ್‌ (Congress) ಸಂಸದ ಅಧೀರ್‌ ರಂಜನ್‌ ಚೌಧರಿ (Adhir Ranjan Chowdhury) ಹೇಳಿದ್ದಾರೆ.

    ಇಂಡಿಯಾ ಎಂಬ ಹೆಸರು ಪ್ರಧಾನಿ ಮೋದಿಗೆ ಭಯ ತಂದಿದೆ. ಇಂಡಿಯಾ (INDIA) ಎಂಬ ಮೈತ್ರಿಕೂಟ ರಚನೆಯಾದ ದಿನದಿಂದ ಪ್ರಧಾನಿ ಮೋದಿಯವರಿಗೆ (PM Narendra Modi) ಇಂಡಿಯಾ ಎಂಬ ಹೆಸರಿನ ಮೇಲೆ ದ್ವೇಷ ಹೆಚ್ಚಾಗಿದೆ ಎಂದು ಕಿಡಿಕಾರಿದ್ದಾರೆ.   ಇದನ್ನೂ ಓದಿ: ಟೀಂ ಭಾರತ್ ಅಂತಾ ಜೆರ್ಸಿ ಬದಲಿಸಿ – ಬಿಸಿಸಿಐಗೆ ಸೆಹ್ವಾಗ್ ಆಗ್ರಹ

    ಸದ್ಯ ರಾಷ್ಟ್ರಪತಿಗಳ ನಿವಾಸವಾಗಿರುವ ರಾಷ್ಟ್ರಪತಿ ಭವನ (Rashtrapati Bhavan) ಈ ಹಿಂದೆ ಬ್ರಿಟಿಷ್‌ ವೈಸ್‌ರಾಯ್‌ ಮನೆಯಾಗಿತ್ತು. ಮೋದಿಯವರು ಬ್ರಿಟಿಷರ ವಿರೋಧಿಯಾಗಿದ್ದರೆ ರಾಷ್ಟ್ರಪತಿ ಭವನವನ್ನು ಏನು ಮಾಡುತ್ತಾರೆ ಎಂದು ಅಧೀರ್‌ ರಂಜನ್‌ ಪ್ರಶ್ನೆ ಮಾಡಿದ್ದಾರೆ.  ಇದನ್ನೂ ಓದಿ: ಬದಲಾಗುತ್ತಾ ದೇಶದ ಹೆಸರು – ‘ಇಂಡಿಯಾ’ ಬದಲಿಗೆ ‘ರಿಪಬ್ಲಿಕ್‌ ಆಫ್‌ ಭಾರತ್‌’ ಅಂತ ಮರುನಾಮಕರಣ?

    ಬಿಜೆಪಿ (BJP) ಕೇಂದ್ರ ಸರ್ಕಾರವು ದೇಶದ ಹೆಸರನ್ನು`ಇಂಡಿಯಾ’ ಬದಲಿಗೆ `ರಿಪಬ್ಲಿಕ್‌ ಆಫ್‌ ಭಾರತ್‌’ (Republic Of Bharat) ಎಂದು ಮರುನಾಮಕರಣ ಮಾಡುವ ಹೊಸ ನಿರ್ಣಯವನ್ನು ಸಂಸತ್ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ವಿಪಕ್ಷಗಳು ಬಿಜೆಪಿ ವಿರುದ್ಧ ಮುಗಿಬಿದ್ದರೆ ಬಿಜೆಪಿ ನಾಯಕರು ವಿಪಕ್ಷಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೋದಿಯನ್ನು ಜನ ಹುಚ್ಚು ಮೋದಿ ಅಂತಿದ್ದಾರೆ- ಮತ್ತೆ ನಾಲಗೆ ಹರಿಬಿಟ್ಟ ಕೈ ನಾಯಕ ಅಧೀರ್

    ಮೋದಿಯನ್ನು ಜನ ಹುಚ್ಚು ಮೋದಿ ಅಂತಿದ್ದಾರೆ- ಮತ್ತೆ ನಾಲಗೆ ಹರಿಬಿಟ್ಟ ಕೈ ನಾಯಕ ಅಧೀರ್

    ಕೋಲ್ಕತ್ತಾ: ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಂಸದ ಅಧೀರ್ ರಂಜನ್ ಚೌಧರಿ (Adhir Ranjan Chowdhury) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ನಾಲಗೆ ಹರಿಬಿಟ್ಟಿದ್ದಾರೆ. ಪ್ರಧಾನಿಯನ್ನು ಟೀಕಿಸುವ ಭರದಲ್ಲಿ ಪಗ್ಲಾ ಮೋದಿ (ಹುಚ್ಚ ಮೋದಿ) ಎಂದು ನಿಂದಿಸುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

    ತಮ್ಮ ಹೇಳಿಕೆ ವಿವಾದವಾಗುತ್ತಿದ್ದಂತೆಯೇ ಅಧೀರ್ ಸ್ಪಷ್ಟನೆ ನೀಡಿದ್ದು, ನಾನು ಸಾರ್ವಜನಿಕರಲ್ಲಿ 2 ಸಾವಿರ ರೂ. ನೋಟು ಹಿಂತೆಗೆದುಕೊಳ್ಳುವ ನಿರ್ಧಾರಕ್ಕೆ ಯಾವ ಭಾವನೆ ಇದೆ ಎನ್ನುವುದನ್ನು ತಿಳಿಸಲು ಪ್ರಯತ್ನಿಸಿದೆ ಅಷ್ಟೇ. ಬೇರೆ ಯಾವುದೇ ಉದ್ದೇಶವಿರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲೂ ಜನ ಮೋದಿಯನ್ನು ಇಷ್ಟಪಡುತ್ತಾರೆ: ಅನೂಪ್ ಜಲೋಟಾ

    ಅಧೀರ್ ಹೇಳಿದ್ದೇನು..?: 2,000 ಮುಖಬೆಲೆಯ ನೋಟುಗಳು ಹಿಂಪಡೆದ ವಿಷಯವಾಗಿ ಮಾತನಾಡುತ್ತಿದ್ದ ವೇಳೆ ಕೈ ನಾಯಕ ಈ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರ ಬಗ್ಗೆ ದೇಶದ ನಾಗರಿಕರಲ್ಲಿ ಹತಾಶೆ ಹೆಚ್ಚುತ್ತಿದೆ. ಜನರು ಮೋದಿ ಅವರನ್ನು ಹುಚ್ಚು (ಪಗ್ಲಾ) ಮೋದಿ ಎಂದು ಕರೆಯುತ್ತಿದ್ದಾರೆ. ಸಾರ್ವಜನಿಕರ ಭಾವನೆಗಳು ಮೋದಿ ವಿರುದ್ಧ ಇವೆ ಎಂದು ಹೇಳಿದ್ದರು.

    ಅಧೀರ್ ಅವರ ಹೇಳಿಕೆಗೆ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಮಾಮ್ ಕಿಡಿಕಾರಿದ್ದು, ಅಧೀರ್ ಅವರು ಪದೇ ಪದೇ ಪ್ರಧಾನಿ ಮೋದಿ ಅವರ ವಿರುದ್ಧ ನಿಂದನೀಯ ಭಾಷೆಯನ್ನು ಬಳಸುತ್ತಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಕೂಡಲೇ ಅವರು ಈ ಹೇಳಿಕೆ ಬಗ್ಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

  • ರಾಷ್ಟ್ರಪತ್ನಿ ಹೇಳಿಕೆ ವಿವಾದ – ದ್ರೌಪದಿ ಮುರ್ಮುಗೆ ಪತ್ರ ಬರೆದು ಕ್ಷಮೆಯಾಚಿಸಿದ ಅಧೀರ್

    ರಾಷ್ಟ್ರಪತ್ನಿ ಹೇಳಿಕೆ ವಿವಾದ – ದ್ರೌಪದಿ ಮುರ್ಮುಗೆ ಪತ್ರ ಬರೆದು ಕ್ಷಮೆಯಾಚಿಸಿದ ಅಧೀರ್

    ನವದೆಹಲಿ: ಸಂದರ್ಶನವೊಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ʼರಾಷ್ಟ್ರಪತ್ನಿʼ ಎಂದು ಹೇಳುವ ಮೂಲಕ ಭಾರೀ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್‌ ಸಂಸದ ಅಧೀರ್‌ ರಂಜನ್‌ ಚೌಧರಿ ಅವರು ಕ್ಷಮೆಯಾಚಿಸಿದ್ದಾರೆ. ಈ ಸಂಬಂಧ ರಾಷ್ಟ್ರಪತಿ ಮುರ್ಮು ಅವರಿಗೆ ಪತ್ರ ಬರೆದು ಚೌಧರಿ ಕ್ಷಮೆ ಕೋರಿದ್ದಾರೆ.

    ನೀವು ಹೊಂದಿರುವ ಸ್ಥಾನದ ಬಗ್ಗೆ ತಪ್ಪಾಗಿ ಪದ ಬಳಸಿ ಮಾತನಾಡಿದ್ದಕ್ಕೆ ವಿಷಾದಿಸುತ್ತೇನೆ. ಬಾಯಿತಪ್ಪಿ ಈ ಹೇಳಿಕೆ ಬಂದಿದೆಯಷ್ಟೆ. ನನ್ನ ಹೇಳಿಕೆಗೆ ಕ್ಷಮೆಯಾಚಿಸುತ್ತೇನೆ. ನೀವು ಕ್ಷಮೆಯನ್ನು ಸ್ವೀಕರಿಸುವಂತೆ ವಿನಂತಿಸುತ್ತೇನೆ ಎಂದು ಚೌಧರಿ ಅವರು ಬುಡಕಟ್ಟು ಸಮುದಾಯದಿಂದ ದೇಶದ ಮೊದಲ ರಾಷ್ಟ್ರಪತಿಯಾಗಿರುವ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಸಿಂಗಾಪುರ ಭೇಟಿ ರದ್ದು – ನಾನು ಯಾರನ್ನೂ ದೂಷಿಸಲ್ಲ: ಕೇಜ್ರಿವಾಲ್

    ತಮ್ಮ ಪಕ್ಷದ ನಾಯಕಿ ಬಗ್ಗೆ ಚೌಧರಿ ನೀಡಿದ್ದ ಹೇಳಿಕೆಗೆ ಬಿಜೆಪಿ ಭಾರೀ ಟೀಕೆ ವ್ಯಕ್ತಪಡಿಸಿತ್ತು. ಅಲ್ಲದೇ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ಸಹ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿತ್ತು.

    ಇದು ಬಾಯಿ ತಪ್ಪಿ ಹೇಳಿದ ಮಾತಲ್ಲ. ಸಂದರ್ಶನದ ದೃಶ್ಯಾವಳಿಗಳನ್ನು ನೋಡಿದರೆ, ಅಧೀರ್ ರಂಜನ್ ಚೌಧರಿ ಅವರು ರಾಷ್ಟ್ರಪತಿಯನ್ನು ಎರಡು ಬಾರಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ನಂತರ ಅವರನ್ನು ರಾಷ್ಟ್ರಪತ್ನಿ ಎಂದು ಕರೆದಿದ್ದಾರೆ. ಇಂತಹ ವಿಷಯಗಳನ್ನು ಲಘುವಾಗಿ ಸ್ವೀಕರಿಸಬಾರದು ಎಂದು ಕಾನೂನು ಸಚಿವ ಕಿರಣ್ ರಿಜಿಜು ಹೇಳಿಕೆ ನೀಡಿದ್ದರು. ಅಲ್ಲದೇ ಚೌಧರಿ ವಿರುದ್ಧ ಸಂಸತ್‌ನಲ್ಲಿ ಗುರುವಾರ ಬಿಜೆಪಿ ನಾಯಕರು ಗದ್ದಲ ಎಬ್ಬಿಸಿದ್ದರು.‌ ಇದನ್ನೂ ಓದಿ: ಭಾರೀ ಬೆಂಕಿಗೆ ಹೊತ್ತಿ ಉರಿದ ಮುಂಬೈ ಶಾಪ್ – ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

    Live Tv
    [brid partner=56869869 player=32851 video=960834 autoplay=true]

  • ದ್ರೌಪದಿ ಮುರ್ಮುಗೆ ರಾಷ್ಟ್ರಪತ್ನಿ ಎಂದಿದ್ದಕ್ಕೆ ಕ್ಷಮೆ ಕೋರಿದ ಅಧೀರ್ ರಂಜನ್ ಚೌಧರಿ

    ದ್ರೌಪದಿ ಮುರ್ಮುಗೆ ರಾಷ್ಟ್ರಪತ್ನಿ ಎಂದಿದ್ದಕ್ಕೆ ಕ್ಷಮೆ ಕೋರಿದ ಅಧೀರ್ ರಂಜನ್ ಚೌಧರಿ

    ನವದೆಹಲಿ: ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಕರೆದಿದ್ದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಕ್ಷಮೆ ಕೋರಿದ್ದಾರೆ.

    ಅಧೀರ್ ರಂಜನ್ ಚೌಧರಿ ಅವರು, ತಮ್ಮ ಪಕ್ಷದಿಂದ ನಡೆಸುತ್ತಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಎನ್ನುವ ಬದಲು ರಾಷ್ಟ್ರಪತ್ನಿ ಎಂದಿದ್ದರು. ಈ ಬಗ್ಗೆ ಆಡಳಿತ ಪಕ್ಷದವರು ಸೋನಿಯಾ ಗಾಂಧಿ ಹಾಗೂ ಅಧೀರ್ ರಂಜನ್ ಚೌಧರಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಾತನಾಡಿದ ಅಧೀರ್ ರಂಜನ್ ಚೌಧರಿ, ದ್ರೌಪದಿ ಮುರ್ಮು ಅವರನ್ನು ಖುದ್ದಾಗಿ ಭೇಟಿಯಾಗುವುದಾಗಿ ಹಾಗೂ ಅವರಿಗೆ ನೋವಾಗಿದ್ದರೆ ಕ್ಷಮೆ ಕೇಳುವುದಾಗಿ ತಿಳಿಸಿದ್ದಾರೆ.

    ರಾಷ್ಟ್ರಪತಿ ಅವರನ್ನು ಅವಮಾನಿಸುವ ಯೋಚನೆಯೂ ಇರಲಿಲ್ಲ. ಅಧ್ಯಕ್ಷರಿಗೆ ನೋವಾಗಿದ್ದರೆ ನಾನೇ ಖುದ್ದು ಭೇಟಿಯಾಗಿ ಕ್ಷಮೆ ಕೇಳುತ್ತೇನೆ. ಅವರು ಬೇಕಾದರೆ ನನ್ನನ್ನು ಗಲ್ಲಿಗೇರಿಸಬಹುದು. ಶಿಕ್ಷೆಗೆ ನಾನು ಸಿದ್ಧನಿದ್ದೇನೆ. ಆದರೆ ಸೋನಿಯಾ ಗಾಂಧಿ ಅವರನ್ನು ವಿನಃ ಕರೆತರಲಾಗುತ್ತಿದೆ ಎಂದರು.

    ಎನ್‍ಡಿಎ ಸರ್ಕಾರ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರನ್ನು ಹೆಸರಿಸಿದಾಗಿನಿಂದಲೂ ಕಾಂಗ್ರೆಸ್, ಮುರ್ಮು ಅವರನ್ನು ದುರುದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದೆ. ಮತ್ತು ಕಾಂಗ್ರೆಸ್‍ನ ನಾಯಕರು ಅವರನ್ನು ಕೈಗೊಂಬೆ ಮತ್ತು ರಬ್ಬರ್ ಸ್ಟಾಂಪ್ ಎಂದು ಕರೆದಿದ್ದರು ಎಂದು ಬಿಜೆಪಿ ಆರೋಪಿಸಿತ್ತು.

    bjP

    ಈ ಬಗ್ಗೆ ಸಚಿವೆ ಸ್ಮೃತಿ ಇರಾನಿ ಕಿಡಿಕಾರಿದ್ದು, ದ್ರೌಪದಿ ಮುರ್ಮು ಅವರು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಆಯ್ಕೆಯಾದ ನಂತರವೂ ಈ ವಾಗ್ದಾಳಿಗಳು ನಿಲ್ಲುವಂತೆ ಕಾಣುತ್ತಿಲ್ಲ. ಚೌಧರಿಯವರ ಈ ಹೇಳಿಕೆಯು ಮುರ್ಮು ಅವರು ಪ್ರತಿನಿಧಿಸುವ ಶ್ರೀಮಂತ ಬುಡಕಟ್ಟು ಪರಂಪರೆಗೆ ಮತ್ತು ಕಠಿಣ ಪರಿಶ್ರಮದ ಮೂಲಕ ಮೇಲೆ ಬರುವ ಬಡವರಿಗೆ ಮಾಡುವ ಅವಮಾನವಾಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಪಾಪಿಗೂ ಭವಿಷ್ಯವಿದೆ – ಅತ್ಯಾಚಾರಿಗೆ ಗಲ್ಲು ಶಿಕ್ಷೆ ವಿಧಿಸಲು ನಿರಾಕರಿಸಿದ ಸುಪ್ರೀಂ

    ಭಾರತದ ಮೊದಲ ಬುಡಕಟ್ಟು ಜನಾಂಗದಿಂದ ರಾಷ್ಟ್ರಪತಿಯಾಗಿರುವ ದ್ರೌಪದಿ ಮುರ್ಮು ಅವರು ಹೋರಾಟಗಳನ್ನು ನಡೆಸಿಕೊಂಡು ಬಂದಂತವರು. ಮತ್ತು ಪಂಚಾಯಿತಿಯಿಂದ ಸಂಸತ್ತಿನವರೆಗೆ ದೇಶದ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತಾರೆ. ಅಧ್ಯಕ್ಷೆ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪದೇ ಪದೆ ಮಹಿಳೆಯರನ್ನು ಗುರಿಯಾಗಿಸಿಕೊಂಡಿದೆ ಎಂದು ಸ್ಮೃತಿ ಇರಾನಿ ಆರೋಪಿಸಿದ್ದರು.

    ಇದಲ್ಲದೆ ಸದನದ ಒಳಗೂ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡ ಸ್ಮೃತಿ ಇರಾನಿ, ಸೋನಿಯಾ ಗಾಂಧಿ ಅವರೇ, ನೀವು ದ್ರೌಪದಿ ಮುರ್ಮು ಅವರ ಅವಮಾನವನ್ನು ಅನುಮೋದಿಸಿರುವಿರಿ. ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿ ಮಹಿಳೆಯನ್ನು ಅವಮಾನಿಸಲು ಸೋನಿಯಾ ಗಾಂಧಿ ಅವರು ಅನುಮತಿ ನೀಡಿದ್ದಾರೆ ಎಂದು ಹೇಳಿದ್ದರು. ಇದನ್ನೂ ಓದಿ: ಬಿಬಿಎಂಪಿ ಚುನಾವಣೆ ನಡೆಸಲು ನಾವು ಸಿದ್ಧ: ಆರ್. ಅಶೋಕ್

    Live Tv
    [brid partner=56869869 player=32851 video=960834 autoplay=true]

  • ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಿ: ಕಾಂಗ್ರೆಸ್ ಆಗ್ರಹ

    ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಿ: ಕಾಂಗ್ರೆಸ್ ಆಗ್ರಹ

    ನವದೆಹಲಿ: ಬಿರ್‌ಭುಮ್‌ ಘಟನೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಆಡಳಿತವಿರು ಪಶ್ಚಿಮ ಬಂಗಾಳದಲ್ಲಿ 355ನೇ ವಿಧಿಯನ್ನು ಹೇರಬೇಕೆಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್‍ಗೆ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಒತ್ತಾಯಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಐಟಿಯಿಂದ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ರಾಷ್ಟ್ರಪತಿ ಕೋವಿಂದ್‌ ಅವರನ್ನು ಭೇಟಿ ಮಾಡಿ 355ನೇ ವಿಧಿಯನ್ನು ಹೇರಲು ಒತ್ತಾಯಿಸುತ್ತೇನೆ ಎಂದ ಅವರು, ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಇದರಿಂದಾಗಿ ಬಂಗಾಳದಲ್ಲಿ ಜನರು ಅಸುರಕ್ಷಿತರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

    ಪರಿಚ್ಛೇದ 355ರ ಪ್ರಕಾರ, ಬಾಹ್ಯ ಆಕ್ರಮಣ ಮತ್ತು ಆಂತರಿಕ ಅಡಚಣೆಯಿಂದ ಪ್ರತಿ ರಾಜ್ಯವನ್ನು ರಕ್ಷಿಸುವುದು ಮತ್ತು ಈ ಸಂವಿಧಾನದ ನಿಬಂಧನೆಗಳಿಗೆ ಅನುಗುಣವಾಗಿ ಪ್ರತಿ ರಾಜ್ಯದ ಸರ್ಕಾರ ನಿರ್ವಹಿಸುತ್ತಿರುವ ಕಾರ್ಯವನ್ನು ಖಚಿತಪಡಿಸಿಕೊಳ್ಳುವುದು ಒಕ್ಕೂಟದ ಕರ್ತವ್ಯವಾಗಿದೆ.

    ಮಮತಾ ರಾಜೀನಾಮೆಗೆ ಬಿಜೆಪಿ ಒತ್ತಾಯ: ಬಿರ್‌ಭುಮ್‌ ಘಟನೆಗೆ ಸಂಬಂಧಿಸಿದಂತೆ ಬಿಜೆಪಿಯೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜೀನಾಮೆ ನೀಡಬೇಕು. ಜೊತೆಗೆ ಘಟನೆಗೆ ಸಂಬಂಧಿಸಿ ಕೇಂದ್ರ ಏಜೆನ್ಸಿಗಳು ತನಿಖೆಯನ್ನು ನಡೆಸಬೇಕು ಎಂದು ಒತ್ತಾಯಿಸಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಈವರೆಗೆ 11 ಮಂದಿಯನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ಪೊಲೀಸ್ ಮಹಾ ನಿರ್ದೇಶಕ ಮನೋಜ್ ಮಾಳವಿಕಾ ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮ್‌ ವ್ಯಾಪಾರಿಗಳಿಗೆ ನಿಷೇಧ: ನಿಯಮ ಏನಿದೆ?

    ಏನಿದು ಘಟನೆ?: ಬುಧವಾರ ಟಿಎಂಸಿ ಮುಖಂಡನ ಹತ್ಯೆ ಬೆನ್ನಲ್ಲೇ ಪಶ್ಚಿಮ ಬಂಗಾಳದ ಬಿರ್‌ಭುಮ್‌ನಲ್ಲಿ ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, 11 ಮಂದಿ ಸಜೀವ ದಹನವಾಗಿದ್ದಾರೆ. ಇದನ್ನೂ ಓದಿ: ಕಾಟನ್ ಜಿನ್ನಿಂಗ್ ಮಿಲ್‍ನಲ್ಲಿ ಬೆಂಕಿ ಅವಘಡ- ಕೋಟ್ಯಂತರ ಮೌಲ್ಯದ ಹತ್ತಿ ಭಸ್ಮ

    ಸೋಮವಾರ ರಾಮಪುರಹಾಟ್‍ನ ಬಗುಟಿ ಗ್ರಾಮ ಪಂಚಾಯಿತಿ ಮುಖಂಡ ಭಾದು ಶೇಖ್ ಅವರ ಮೇಲೆ ಸೋಮವಾರ ರಾತ್ರಿ ದಾಳಿ ನಡೆದಿತ್ತು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅವರು ಮೃತಪಟ್ಟಿದ್ದರು. ಮುಖಂಡನ ಸಾವಿನ ಸುದ್ದಿ ತಿಳಿದು ರೊಚ್ಚಿಗೆದ್ದ ಗುಂಪೊಂದು ಅವರ ಗ್ರಾಮದಲ್ಲಿನ ವಿರೋಧಿ ಗುಂಪಿನ ಕೆಲವು ಮನೆಗಳ ಮೇಲೆ ದಾಳಿ ನಡೆಸಲು ಮುಂದಾಗಿದೆ.

    ದಾಳಿ ಹಿನ್ನೆಲೆಯಲ್ಲಿ 10 ರಿಂದ 12 ಮಂದಿಗೆ ಬೆಂಕಿ ಬಿದ್ದಿದ್ದು, 11 ಮಂದಿ ಸಜೀವ ದಹನವಾಗಿದ್ದಾರೆ. ಸುಟ್ಟು ಕರಕಲಾದ 11 ಮೃತದೇಹವನ್ನು ಹೊರತೆಗೆಲಾಗಿದ್ದು, ಒಂದೇ ಮನೆಯಿಂದ 7 ಮೃತದೇಹಗಳನ್ನು ಹೊರತೆಗೆದಿರುವುದು ಇದೇ ವೇಳೆ ಬೆಳಕಿಗೆ ಬಂದಿದೆ.

  • ಈ ಬಾರಿಯ ಚಳಿಗಾಲದ ಅಧಿವೇಶನ ನಡೆಯಲ್ಲ: ಪ್ರಹ್ಲಾದ್ ಜೋಶಿ

    ಈ ಬಾರಿಯ ಚಳಿಗಾಲದ ಅಧಿವೇಶನ ನಡೆಯಲ್ಲ: ಪ್ರಹ್ಲಾದ್ ಜೋಶಿ

    ನವದೆಹಲಿ: ಕೊರೊನಾ ಎರಡನೇ ಅಲೆ ಹಿನ್ನೆಲೆ ಈ ಬಾರಿಯ ಚಳಿಗಾಲದ ಅಧಿವೇಶನವನ್ನು ನಡೆಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ಇದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

    ಈ ಕುರಿತು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಸೋಮವಾರ ಪತ್ರದ ಮೂಲಕ ಸ್ಪಷ್ಟಪಡಿಸಿದ್ದು, ಕೊರೊನಾ ಹರಡುವ ಭೀತಿಯಿಂದ ಚಳಿಗಾಲದ ಅಧಿವೇಶನವನ್ನು ನಡೆಸಲಾಗುತ್ತಿಲ್ಲ. ಅಲ್ಲದೆ ಒಮ್ಮೆಲೆ ಜನವರಿಯಲ್ಲಿ ಬಜೆಟ್ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಕಾಂಗ್ರೆಸ್ ಲೋಕಸಭಾ ನಾಯಕ ಅಧೀರ್ ರಂಜನ್ ಚೌಧರಿ ಅವರು ಚಳಿಗಾಲದ ಅಧಿವೇಶನ ನಡೆಸಬೇಕು. ಅಲ್ಲದೆ ರೈತರ ಕಾನೂನುಗಳ ಬಗ್ಗೆ ಚರ್ಚೆ ನಡೆಸಬೇಕು. ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಪತ್ರದ ಮೂಲಕ ಪ್ರತಿಕ್ರಿಯಿಸಿದ್ದಾರೆ. ಕೊರೊನಾ ಹಿನ್ನೆಲೆ ಚಳಿಗಾಲದ ಅಧಿವೇಶನ ನಡೆಸುತ್ತಿಲ್ಲ ಎಂದು ತಿಳಿಸಿದ್ದಾರೆ.

    ಈ ಕುರಿತು ಎಲ್ಲ ಪಕ್ಷಗಳ ಮುಖಂಡರೊಂದಿಗೆ ಚರ್ಚೆ ನಡೆಸಲಾಗಿದೆ. ಕೊರೊನಾ ಹಿನ್ನೆಲೆ ಅಧೀವೇಶನ ನಡೆಸದಿರಲು ಒಮ್ಮತವಿದೆ. ಸೆಪ್ಟೆಂಬರ್ ನಲ್ಲಿ ನಡೆದ ಮಾನ್ಸೂನ್ ಅಧಿವೇಶದ ಸಂದರ್ಭದಲ್ಲಿ ಹಲವರಿಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು ಎಂದು ಜೋಷಿ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ. 10 ನಿರಂತರ ಸಭೆಯಲ್ಲಿ 27 ಮಸೂದೆಗಳನ್ನು ಸರ್ಕಾರ ಪಾಸ್ ಮಾಡಿದೆ. ಇವುಗಳ ಪೈಕಿ ಮೂರು ರೈತರ ಬಗೆಗಿನ ಕಾನೂನುಗಳು ಆಕ್ರೋಶಕ್ಕೆ ಕಾರಣವಾಗಿದ್ದು, ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

    ಕೊರೊನಾ ವೈರಸ್ ನಿಯಂತ್ರಣಕ್ಕೆ ಚಳಿಗಾಲದ ತಿಂಗಳುಗಳು ನಿರ್ಣಾಯಕವಾಗಿದ್ದು, ಈ ಅವಧಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ವಿಶೇಷವಾಗಿ ದೆಹಲಿಯಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಜೋಷಿ ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.

  • ಕೆಲವು ಟ್ಯೂಬ್‍ಲೈಟ್‍ಗಳು ಹೀಗೆ ಇರುತ್ತವೆ: ಕೈ ಯುವ ನಾಯಕನಿಗೆ ಮೋದಿ ಟಾಂಗ್

    ಕೆಲವು ಟ್ಯೂಬ್‍ಲೈಟ್‍ಗಳು ಹೀಗೆ ಇರುತ್ತವೆ: ಕೈ ಯುವ ನಾಯಕನಿಗೆ ಮೋದಿ ಟಾಂಗ್

    – ಜಮ್ಮು-ಕಾಶ್ಮೀರದ ಹೆಣ್ಣುಮಕ್ಕಳಿಗೆ ಏಕೆ ಅಧಿಕಾರ ನೀಡಲಿಲ್ಲ?
    – ಕಾಶ್ಮೀರದ ಅಳಿಯ ಶಶಿ ತರೂರ್‍ಗೆ ಮೋದಿ ಪ್ರಶ್ನೆ
    – ಭಾಷಣದ ಮಧ್ಯೆ ಅಧೀರ್ ರಂಜನ್ ಚೌಧರಿ ಕಾಲೆಳೆದ ಪ್ರಧಾನಿ

    ನವದೆಹಲಿ: ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಪ್ರತಿಕ್ರಿಯಿಸಿದರು. ಒಂದು ಗಂಟೆ 40 ನಿಮಿಷಗಳ ಭಾಷಣದಲ್ಲಿ ಮೋದಿ ವಿರೋಧ ಪಕ್ಷಗಳ ವಿರುದ್ಧ ತೀವ್ರ ಆಕ್ರಮಣಕಾರಿ ವಾಗ್ದಾಳಿ ನಡೆಸಿದರು. ಅಷ್ಟೇ ಅಲ್ಲದೆ ಟ್ಯೂಬ್‍ಲೈಟ್‍ಗಳು ಹೀಗೆ ಇರುತ್ತವೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಸಂಸದರ ವಿರುದ್ಧ ಹರಿಹಾಯ್ದರು. ಇದು ಕಲಾಪವನ್ನು ಕೆಲ ಹೊತ್ತು ಗದ್ದಲಕ್ಕೆ ಕಾರಣವಾಯಿತು.

    70 ವರ್ಷಗಳಲ್ಲಿ ಕಾಂಗ್ರೆಸ್ ಎಂದಿಗೂ ತೃಪ್ತಿ ಹೊಂದಿಲ್ಲ ಎಂದು ನಾನು ಒಪ್ಪುತ್ತೇನೆ. ನಿನ್ನೆ ಕಾಂಗ್ರೆಸ್ಸಿನ ಯುವ ನಾಯಕರೊಬ್ಬರು ನನ್ನನ್ನು ಕೋಲಿನಿಂದ ಹೊಡೆಯುತ್ತೇವೆ ಎಂದು ದೆಹಲಿ ಚುನಾವಣಾ ಪ್ರಚಾರದ ವೇಳೆ ಹೇಳಿದ್ದಾರೆ. ಹೀಗಾಗಿ ಅದನ್ನು ಸಹಿಸಿಕೊಳ್ಳಲು, ಮುಂದಿನ ಆರು ತಿಂಗಳಲ್ಲಿ ಪ್ರತಿ ಪೆಟ್ಟುಗಳನ್ನು ಎದುರಿಸಲು ಇನ್ನುಮುಂದೆ ಹೆಚ್ಚು ಹೆಚ್ಚು ಸೂರ್ಯ ನಮಸ್ಕಾರ ಮಾಡುತ್ತೇನೆ. 30-40 ನಿಮಿಷಗಳ ಕಾಲ ನಾನು ಮಾತನಾಡಿದ ನಂತರವೂ ಕಾಂಗ್ರೆಸ್ ನಾಯಕರು ಇನ್ನೂ ಟ್ಯೂಬ್‍ಲೈಟ್‍ನಂತೆ ಕುಳಿತಿರುವುದು ಸಂತೋಷ ತಂದಿದೆ ಎಂದು ವ್ಯಂಗ್ಯವಾಡಿದರು.

    ಈ ವೇಳೆ ಬಿಜೆಪಿ ಸಚಿವರು ಹಾಗೂ ಸಂಸದರು ನಗೆ ಬೀರಿದರು. ಇದರಿಂದ ಕೋಪಗೊಂಡ ಕಾಂಗ್ರೆಸ್ ನಾಯಕರು ಗರಂ ಆಗಿ ಕಲಾಪದಲ್ಲಿ ಗಲಾಟೆ ಆರಂಭಿಸಿದರು. ಹೀಗಾಗಿ ಸ್ವಲ್ಪ ಗದ್ದಲ ಉಂಟಾಯಿತು.

    ಬಳಿಕ ಭಾಷಣ ಮುಂದುವರಿಸಿದ ಪ್ರಧಾನಿ ಮೋದಿ, ಅಧೀರ್ ರಂಜನ್ ಚೌಧರಿ ಜೀ ಪಶ್ಚಿಮ ಬಂಗಾಳದಲ್ಲಿ ಏನು ನಡೆಯುತ್ತಿದೆ ಎಂಬುದರ ಪತ್ರವನ್ನು ತೆರೆದರೆ, ನಿಮಗೆ ತುಂಬಾ ತೊಂದರೆಯಾಗುತ್ತದೆ. ಜನರನ್ನು ಅಲ್ಲಿ ಕೊಲ್ಲಲಾಗುತ್ತದೆ. ಕಾಂಗ್ರೆಸ್ ಅವಧಿಯಲ್ಲಿ ಸಂವಿಧಾನದ ಸ್ಥಿತಿ ಏನು? ನೀವು ನಮ್ಮಂತೆ ಯೋಚಿಸಿದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಸಂವಿಧಾನವನ್ನು ಜಾರಿಗೆ ತರುವುದನ್ನು ಏಕೆ ನಿಲ್ಲಿಸಿದ್ದೀರಿ? ಶಶಿ ತರೂರ್ ಜೀ, ನೀವು ಜಮ್ಮು ಮತ್ತು ಕಾಶ್ಮೀರದ ಅಳಿಯ. ಅಲ್ಲಿ ಹೆಣ್ಣುಮಕ್ಕಳಿಗೆ ಏಕೆ ಅಧಿಕಾರ ನೀಡಲಿಲ್ಲ? 1990ರ ಜನವರಿ 19ರಂದು ಕೆಲವರು ಕಾಶ್ಮೀರದ ಗುರುತನ್ನು ಸಮಾಧಿ ಮಾಡಿದರು. ಸೂಫಿ ಸಂಪ್ರದಾಯ ಮತ್ತು ಎಲ್ಲಾ ಸಂಪ್ರದಾಯಗಳನ್ನು ಗೌರವಿಸುವುದು ಕಾಶ್ಮೀರದ ಗುರುತು ಎಂದು ಹೇಳಿ ವಾಗ್ದಾಳಿ ನಡೆಸಿದರು.

    ನೀವು ಸಂವಿಧಾನವನ್ನು ಉಳಿಸಿ ಎಂದು ದಿನಕ್ಕೆ 100 ಬಾರಿ ಹೇಳಬೇಕು. ತುರ್ತು ಸಂದರ್ಭದಲ್ಲಿ ನಿಮಗೆ ಸಂವಿಧಾನ ನೆನಪಿಗೆ ಬರಲಿಲ್ಲ. ಆದರೆ ಈಗ ಸಂವಿಧಾನದ ಬಗ್ಗೆ ಕಾಳಜಿ ತೋರುತ್ತಿರುವಿರಿ ಎಂದು ಕಾಂಗ್ರೆಸ್ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರಿಸಿದರು.

    ಯಾರಾದರೂ ಪ್ರಧಾನಿಯಾಗಬೇಕೆಂಬ ಆಕಾಂಕ್ಷೆ ಹೊಂದಬಹುದು. ಅದರಲ್ಲಿ ಯಾವುದೇ ತಪ್ಪಿಲ್ಲ. ಭಾರತವನ್ನು ಇಬ್ಭಾಗ ಮಾಡಿ ನಕ್ಷೆಯಲ್ಲಿ ಒಂದು ಗೆರೆ ಎಳೆಯಲಾಯಿತು. ಆಗ ಲಕ್ಷಾಂತರ ಹಿಂದೂಗಳು ಮತ್ತು ಸಿಖ್ಖರನ್ನು ಹಿಂಸಿಸಲಾಯಿತು. ಭೂಪೇಂದ್ರ ಕುಮಾರ್ ದತ್ ಒಂದು ಕಾಲದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿದ್ದರು. ಅವರು ಜೈಲಿನಲ್ಲಿ 78 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅವರನ್ನು ಪಾಕಿಸ್ತಾನದಲ್ಲಿ ಬಿಡಲಾಗಿತ್ತು. ವಿಭಜನೆಯ ನಂತರ ಸಂವಿಧಾನ ಸಭೆಯಲ್ಲಿ ಅವರು ಅಲ್ಪಸಂಖ್ಯಾತರ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇದರ ನಂತರ ವಿಷಯಗಳು ಇನ್ನಷ್ಟು ಹದಗೆಟ್ಟವು ಮತ್ತು ಭೂಪೇಂದ್ರ ದತ್ ಭಾರತದಲ್ಲಿ ಆಶ್ರಯ ಪಡೆಯಬೇಕಾಯಿತು. ಇದು ನಿಮ್ಮ ಆಲೋಚನೆ ಎಂದು ಕಾಂಗ್ರೆಸ್ ವಿರುದ್ಧ ದೂರಿದರು.

    ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರ ಜೋಗಿರಾಜ್ ಮಂಡಲ್ ಕೂಡ ಪಾಕಿಸ್ತಾನದಲ್ಲಿಯೇ ಇದ್ದರು. ಅವರನ್ನು ಕಾನೂನು ಮಂತ್ರಿಯನ್ನಾಗಿ ಮಾಡಲಾಯಿತು. ಅವರು ಆಗಸ್ಟ್ 9, 1950ರಂದು ರಾಜೀನಾಮೆ ನೀಡಿದ್ದರು. ಮುಸ್ಲಿಂ ಲೀಗ್‍ನ ಎಲ್ಲ ಅಭಿಪ್ರಾಯಗಳನ್ನು ಪಾಕಿಸ್ತಾನ ಒಪ್ಪಿಕೊಂಡಿಲ್ಲ ಎಂದು ಅದು ಬರೆದಿದೆ. ಅವರೂ ಭಾರತಕ್ಕೆ ಬರಬೇಕಿತ್ತು. ಇಷ್ಟು ದಶಕಗಳ ನಂತರವೂ ಪಾಕಿಸ್ತಾನದ ಚಿಂತನೆ ಬದಲಾಗಲಿಲ್ಲ ಎಂದು ಹೇಳಿ ಸಿಎಎ ಜಾರಿಗೆ ತಂದ ನಿರ್ಧಾರವನ್ನು ಸಮರ್ಥಿಸಿಕೊಂಡರು.

  • ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಪಾಸ್ – ಪರ 311, ವಿರುದ್ಧ 80 ಮತ

    ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಪಾಸ್ – ಪರ 311, ವಿರುದ್ಧ 80 ಮತ

    ನವದೆಹಲಿ: ಭಾರೀ ಚರ್ಚೆಗೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಮಸೂದೆಯು 311 ಮತಗಳಿಂದ ಲೋಕಸಭೆಯಲ್ಲಿ ಪಾಸ್ ಆಗಿದೆ.

    ಲೋಕಸಭೆಯಲ್ಲಿ ಸೋಮವಾರ ನಡೆದ ಪೌರತ್ವ ತಿದ್ದುಪಡಿ ಮಸೂದೆ ಚರ್ಚೆಯು ಕೋಲಾಹಲ ಉಂಟು ಮಾಡಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಸೂದೆಯನ್ನು ಸದನದಲ್ಲಿ ಮಂಡಿಸಿ ಮತಕ್ಕೆ ಹಾಕಿದರು. ಆದರೆ ಇದಕ್ಕೆ ವಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿ, ಇದು ಅಲ್ಪಸಂಖ್ಯಾತ ವಿರೋಧಿ ಎಂದು ಕರೆದರು. ಆರೋಪವನ್ನು ತಳ್ಳಿ ಹಾಕಿದ ಅಮಿತ್ ಶಾ, ಪೌರತ್ವ ತಿದ್ದುಪಡಿ ಮಸೂದೆಯು ಶೇ.0.001 ರಷ್ಟು ಕೂಡ ದೇಶದ ಅಲ್ಪಸಂಖ್ಯಾತ ಸಮೂದಾಯದ ವಿರುದ್ಧವಿಲ್ಲ ಎಂದು ಸ್ಪಷ್ಟಪಡಿಸಿದರು.

    ಮಸೂದೆ ಮಂಡನೆಗೂ ಮುನ್ನ ಮಾತನಾಡಿದ ಅಮಿತ್ ಶಾ, ನಿಮ್ಮ ಪ್ರತಿ ಪ್ರಶ್ನೆಗೂ ನಾವು ಉತ್ತರಿಸುತ್ತೇವೆ. ಆದರೆ ಸದನವನ್ನು ಬಹಿಷ್ಕರಿಸಿ ಹೊರನಡೆಯಬೇಡಿ. ಈ ಮಸೂದೆಯಲ್ಲಿ ಒಮ್ಮೆಯೂ ಮುಸ್ಲಿಂ ಸಮುದಾಯವನ್ನು ಉಲ್ಲೇಖಿಸಲಾಗಿಲ್ಲ ಎಂದು ಮನವಿ ಮಾಡಿಕೊಂಡರು. ಇದನ್ನು ಲೆಕ್ಕಿಸಿದ ವಿಪಕ್ಷಗಳ ಸಂಸದರು, ಮಸೂದೆ ಮಂಡಿಸುವುದನ್ನು ವಿರೋಧಿಸುತ್ತಲೇ ಇದ್ದರು. ಇದರಿಂದಾಗಿ ಸುಮಾರು ಒಂದು ಗಂಟೆ ಸುದೀರ್ಘ ಚರ್ಚೆಯಾಯಿತು.

    ಕಾಂಗ್ರೆಸ್‍ನ ಸಂಸದ, ಮುಖಂಡ ಅಧೀರ್ ರಂಜನ್ ಚೌಧರಿ, ಎಐಎಂಐಎಂನ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೇರಿದಂತೆ ಅನೇಕ ಸಂಸದರು ಸದನದಲ್ಲಿ ಅಸಮಾಧಾನ ಹೊರಹಾಕಿದರು. ಈ ಎಲ್ಲ ಬೆಳವಣಿಗೆಯಿಂದಾಗಿ ಸ್ಪೀಕರ್ ಓಂ ಬಿರ್ಲಾ ಮಸೂದೆಯನ್ನು ಮಂಡಿಸಿ, ಮತದಾನಕ್ಕೆ ಹಾಕುವಂತೆ ನಿರ್ದೇಶನ ನೀಡಿದರು. ಮಸೂದೆಯನ್ನು ಮತಕ್ಕೆ ಹಾಕಿದ್ದಾಗ 391 ಸಂಸದರು ಮತದಾನದಲ್ಲಿ ಭಾಗವಹಿಸಿದ್ದರು. ಈ ಪೈಕಿ 311 ಸಂಸದರು ಮಸೂದೆ ಪರವಾಗಿ ಮತ ಹಾಕಿದರೆ, ಪ್ರತಿಪಕ್ಷದ 80 ಸಂಸದರು ವಿರೋಧವಾಗಿ ಮತ ಹಾಕಿದರು. ಪೌರತ್ವ ತಿದ್ದುಪಡಿ ಮಸೂದೆಯೂ ಬಹುಮತ ಪಡೆದು ಲೋಕಸಭೆಯಲ್ಲಿ ಪಾಸ್ ಆಗಿದೆ.

    ಧಾರ್ಮಿಕ ಆಧಾರದ ಮೇಲೆ ತಾರತಮ್ಯ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷಗಳು ಸದನದಲ್ಲಿ ಗದ್ದಲ ಶುರು ಮಾಡಿದರುವು. ಮಸೂದೆಯನ್ನು ಮಂಡಿಸಿದರೆ ಅಮಿತ್ ಶಾ ಅವರ ಹೆಸರನ್ನು ಹಿಟ್ಲರ್ ಹಾಗೂ ಇಸ್ರೇಲ್‍ನ ಮೊದಲ ಪ್ರಧಾನಿ ಡೇವಿಡ್ ಬೆನ್ ಗುರಿಯನ್ ಅವರೊಂದಿಗೆ ಸೇರಿಸಲಾಗುವುದು ಎಂದು ಅಸಾದುದ್ದೀನ್ ಓವೈಸಿ ಗುಡುಗಿದರು. ಅವರ ಈ ಹೇಳಿಕೆಗೆ ಬಿಜೆಪಿ ಸಂಸದರು ಆಕ್ಷೇಪ ವ್ಯಕ್ತಪಡಿಸಿದರು.

    ಈ ವೇಳೆ ಮಧ್ಯೆ ಪ್ರವೇಶಿಸಿದ ಸ್ಪೀಕರ್ ಓಂ ಬಿರ್ಲಾ ಅವರು, ಸದನದಲ್ಲಿ ಅಸಂಸದೀಯ ಪದಗಳನ್ನು ಬಳಸಬೇಡಿ. ನಿಮ್ಮ ಹೇಳಿಕೆಯನ್ನು ದಾಖಲೆಯಿಂದ ತೆಗೆದು ಹಾಕಲಾಗುತ್ತದೆ ಎಂದು ಸೂಚಿಸಿದರು.

    ವಿಪಕ್ಷಗಳಿಗೆ ಶಾ ಸುದೀರ್ಘ ಉತ್ತರ:
    ವಿಪಕ್ಷಗಳ ಆರೋಪಗಳಿಗೆ ಅಮಿತ್ ಶಾ ಉತ್ತರಿಸಲು ಆರಂಭಿಸಿ, ಈ ಮಸೂದೆ ಯಾವುದೇ ರೀತಿಯಲ್ಲಿ ಅಲ್ಪಸಂಖ್ಯಾತರ ವಿರುದ್ಧವಲ್ಲ. ಕಾಂಗ್ರೆಸ್ ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸದಿದ್ದರೆ, ಪೌರತ್ವ ಮಸೂದೆಯನ್ನು ತರುವ ಅಗತ್ಯವೇ ಇರಲಿಲ್ಲ. ಸಮಾನತೆಯ ಕಾನೂನು ಇದ್ದರೆ ಅಲ್ಪಸಂಖ್ಯಾತರಿಗೆ ಹೇಗೆ ಸವಲತ್ತುಗಳು ಸಿಗುತ್ತವೆ? ಸಂವಿಧಾನದ 14ನೇ ವಿಧಿ ಶಿಕ್ಷಣ ಮತ್ತು ಇತರ ವಿಷಯಗಳಲ್ಲಿ ಉಲ್ಲಂಘನೆಯಾಗಿಲ್ಲವೇ? ಎಲ್ಲ ಉಲ್ಲಂಘನೆಗಳನ್ನು ಗಣನೆಗೆ ತೆಗೆದುಕೊಂಡ ನಂತರವೇ ಮಸೂದೆಯನ್ನು ರಚಿಸಲಾಗಿದೆ ಎಂದು ತಿಳಿಸಿದರು.

    ಅಫ್ಘಾನಿಸ್ತಾನದ ಸಂವಿಧಾನದ 2ನೇ ವಿಧಿ ಪ್ರಕಾರ, ಆ ದೇಶ ಇಸ್ಲಾಮಿಕ್ ಆಗಿದೆ. ಪಾಕಿಸ್ತಾನ ಕೂಡ ಇಸ್ಲಾಮಿಕ್ ಆಗಿದೆ. ಬಾಂಗ್ಲಾದೇಶದ ಸಂವಿಧಾನದಲ್ಲಿ ಇಸ್ಲಾಂ ಧರ್ಮ ಎಂದು ತಿಳಿಸಲಾಗಿದೆ. ನಾನು ಇದನ್ನು ಉಲ್ಲೇಖಿಸುತ್ತಿದ್ದೇನೆ. ಏಕೆಂದರೆ ಈ ಮೂರು ದೇಶಗಳ ಸಂವಿಧಾನವು ಧರ್ಮವನ್ನು ಉಲ್ಲೇಖಿಸುತ್ತದೆ. ಆದರೂ ಈ ಮೂರು ದೇಶಗಳಿಂದ ನಿರಾಶ್ರಿತರು ಇಲ್ಲಿಗೆ ಬರುತ್ತಿದ್ದಾರೆ ಎಂದು ಹೇಳಿದರು.

    ತುಳಿತಕ್ಕೊಳಗಾದ ಮುಸ್ಲಿಮರಿಗೆ ಆಶ್ರಯ ನೀಡುವ ಕುರಿತು ಪ್ರತಿಕ್ರಿಯಿಸಿದ ಅಮಿತ್ ಶಾ, ಮೂರು ನೆರೆಹೊರೆಯ ದೇಶಗಳ ಯಾವುದೇ ಮುಸ್ಲಿಂ ಧಾರ್ಮಿಕ ಕಿರುಕುಳದ ಆಧಾರದ ಮೇಲೆ ಪೌರತ್ವವನ್ನು ಕೋರಿದರೆ, ನಾವು ಮುಕ್ತ ಮನಸ್ಸಿನಿಂದ ಪರಿಗಣಿಸುತ್ತೇವೆ. ಪ್ರಧಾನಿ ಮೋದಿ ಸರ್ಕಾರದ ಹಿಂದಿನ ಅವಧಿಯಲ್ಲಿ ಪೌರತ್ವ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದ್ದರೂ ರಾಜ್ಯಸಭೆಯಲ್ಲಿ ಸಿಲುಕಿಕೊಂಡಿತ್ತು. ಈ ಮಸೂದೆಯನ್ನು ಕೇಂದ್ರ ಸಚಿವ ಸಂಪುಟ ಡಿಸೆಂಬರ್ 4ರಂದು ಅಂಗೀಕರಿಸಿತ್ತು. ಈ ಮಸೂದೆಯು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಮುಸ್ಲಿಮೇತರರಿಗೆ (ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು) ಭಾರತೀಯ ಪೌರತ್ವ ನೀಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.

  • ನಿರ್ಮಲಾ ಸೀತಾರಾಮನ್, ನಿರ್ಬಲ ಆಗಿದ್ದಾರೆ- ಕಾಂಗ್ರೆಸ್ ವಾಗ್ದಾಳಿ

    ನಿರ್ಮಲಾ ಸೀತಾರಾಮನ್, ನಿರ್ಬಲ ಆಗಿದ್ದಾರೆ- ಕಾಂಗ್ರೆಸ್ ವಾಗ್ದಾಳಿ

    ನವದೆಹಲಿ: ಜಿಡಿಪಿ ಕಡಿಮೆಯಾದ ಹಿನ್ನೆಲೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನಿರ್ಮಲಾ ಸೀತಾರಾಮನ್ ವಿರುದ್ಧ ಹರಿಹಾಯ್ದಿದ್ದು, ನಿರ್ಬಲ(ಬಲಹೀನ) ಸೀತಾರಾಮನ್ ಎಂದು ಕರೆಯುವ ಮೂಲಕ ಲೇವಡಿ ಮಾಡಿದ್ದಾರೆ.

    ಸೋಮವಾರ ಮಧ್ಯಾಹ್ನ ಲೋಕಸಭೆಯಲ್ಲಿ 2019ರ ತೆರಿಗೆ ಕಾನೂನು(ತಿದ್ದುಪಡಿ) ಮಸೂದೆಯ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಅಧಿರ್ ರಂಜನ್ ಈ ಹೇಳಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ಹಲವು ದೂರದರ್ಶಿ ಯೋಜನೆಗಳು ಆರ್ಥಿಕತೆಯ ನಿಧಾನಗತಿಗೆ ಕಾರಣವಾಗಿವೆ. ಹೀಗಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ನಿರ್ಬಲ ಸೀತಾರಾಮನ್ ಎಂದು ಕರೆಯದೇ ಬೇರೆ ದಾರಿಯಿಲ್ಲ ಎಂದು ಹರಿಹಾಯ್ದಿದ್ದಾರೆ.

    ಭಾರತದ ಆರ್ಥಿಕತೆ ವಿಚಾರದಲ್ಲಿ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸ್ವಂತ ನಿರ್ಧಾರ ಕೈಗೊಳ್ಳಲು ಬಿಜೆಪಿಯವರು ಬಿಡುತ್ತಿಲ್ಲ. ನಾವು ನಿಮಗೆ ಅತೀವ ಗೌರವವನ್ನು ನೀಡುತ್ತೇವೆ. ಆಶ್ಚರ್ಯವೆಂಬಂತೆ ಕೆಲವು ಬಾರಿ ನಿಮ್ಮನ್ನು ನಿರ್ಬಲ ಸೀತಾರಾಮನ್ ಎಂದು ಕರೆಯಬೇಕಾಗುತ್ತದೆ ಎಂದರು.

    ನೀವು ಹಣಕಾಸು ಸಚಿವಾಲಯದ ಮುಖ್ಯಸ್ಥರಾಗಿದ್ದೀರಿ. ಆದರೆ ಯಾವಾಗ ನಿಮ್ಮ ಸ್ವಂತ ವಿಚಾರಗಳನ್ನಿಟ್ಟುಕೊಂಡು ನೀವು ದೇಶದ ಆರ್ಥಿಕತೆ ಬಗ್ಗೆ ಮಾತನಾಡುತ್ತೀರೋ ತಿಳಿಯುತ್ತಿಲ್ಲ ಎಂದು ಅಧಿರ್ ರಂಜನ್ ಹರಿಹಾಯ್ದಿದ್ದಾರೆ.

    ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ (ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಟ್)ಜಿಡಿಪಿಯ ಅಂಕಿ ಸಂಖ್ಯೆಯ ಅಧಿಕೃತ ವರದಿ ಕಳೆದ ತಿಂಗಳು ಬಿಡುಗಡೆಯಾಗಿದೆ. ಇದರಲ್ಲಿ ಜಿಡಿಪಿ ಶೇ.4.5ರಷ್ಟು ಕುಸಿತ ಕಂಡಿದೆ. ಕಳೆದ ಆರು ವರ್ಷಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಜಿಡಿಪಿಯಾಗಿದೆ. ಅಲ್ಲದೆ ಆರ್ಥಿಕ ಬೆಳವಣಿಗೆಯಲ್ಲಿಯೂ ಸಹ ದೇಶ ನಿಧಾನಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಅಧಿರ್ ರಂಜನ್ ಅವರು ವಾಗ್ದಾಳಿ ನಡೆಸಿ ನಿರ್ಬಲ ಸೀತಾರಾಮನ್ ಎಂದು ಕರೆದಿದ್ದಾರೆ.