Tag: ಅಧಿಪತ್ರ ಸಿನಿಮಾ

  • ರಘು ಪಾಂಡೇಶ್ವರ ಈಗ ಅಧಿಪತ್ರದ ಪಟ್ಟಾಭಿರಾಮ!

    ರಘು ಪಾಂಡೇಶ್ವರ ಈಗ ಅಧಿಪತ್ರದ ಪಟ್ಟಾಭಿರಾಮ!

    ಯನ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಅಧಿಪತ್ರ’ (Adhipatra) ಈ ವಾರ ಅಂದರೆ, ಫೆಬ್ರವರಿ 7ರಂದು ತೆರೆಗಾಣಲಿದೆ. ರೂಪೇಶ್ ಶೆಟ್ಟಿ (Roopesh Shetty) ನಾಯಕನಾಗಿ ನಟಿಸಿರುವ ಈ ಸಿನಿಮಾ ಈಗಾಗಲೇ ಟ್ರೈಲರ್ ಸೇರಿದಂತೆ ನಾನಾ ರೀತಿಯಲ್ಲಿ ಈಗಾಗಲೇ ಪ್ರೇಕ್ಷಕರನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆರಂಭಿಕ ಗೆಲುವಿನ ಎಲ್ಲ ಲಕ್ಷಣಗಳೂ ಇದೀಗ ಅಧಿಪತ್ರದ ಮುಂದಿದೆ. ಇಂಥಾದ್ದೊಂದು ಸಕಾರಾತ್ಮಕ ವಾತಾವರಣ ಒಂದಿಡೀ ಚಿತ್ರತಂಡವನ್ನು ಖುಷಿಗೊಳಿಸಿದೆ. ಈ ಚಿತ್ರದಲ್ಲಿ ಅನುಭವೀ ನಟರದ್ದೊಂದು ದಂಡೇ ಇದೆ. ಕಡಲ ತಡಿಯಿಂದ ಬಂದು ಕನ್ನಡ ಚಿತ್ರರಂಗದಲ್ಲಿ ಭದ್ರವಾಗಿ ನೆಲೆ ಕಂಡುಕೊಂಡಿರುವ ರಘು ಪಾಂಡೇಶ್ವರ ‘ಅಧಿಪತ್ರ’ದ ಪ್ರಮುಖವಾದ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.

    ಸಾಮಾನ್ಯವಾಗಿ ಕಡಲ ತಡಿಯ ಕಥೆಯೆಂದರೆ, ಅಲ್ಲಿ ಆ ಭಾಗದ ನಂಬಿಕೆಗಳ ಇರುವಿಕೆ ಖಾಯಂ. ಅಧಿಪತ್ರದಲ್ಲೂ ಕೂಡಾ ಅಂಥಾ ಅಪರೂಪದ ಆಚರಣೆಗಳ ಹಾಜರಿ ಇದೆ. ಆ ವಿಚಾರ ಟ್ರೈಲರ್ ಮೂಲಕವೇ ಸಾಬೀತಾಗಿದೆ. ನಿರ್ದೇಶಕ ಚಯನ್ ಶೆಟ್ಟಿ ಇದರ ಪ್ರತೀ ಪಾತ್ರಗಳನ್ನೂ ವಿಶಿಷ್ಟವಾಗಿ ರೂಪಿಸಿದ್ದಾರಂತೆ. ಟ್ರೈಲರ್ ನೋಡಿದವರಿಗೆಲ್ಲ ಅಧಿಪತ್ರದಲ್ಲಿ ಟ್ವಿಸ್ಟುಗಳ ಹಂಗಾಮವೇ ಇದೆ ಎಂಬ ವಿಚಾರ ಖಾತರಿಯಾಗಿದೆ. ಅಂಥಾ ಮಹತ್ವದ ತಿರುವಿನೊಂದಿಗೆ, ಪ್ರೇಕ್ಷಕರ ಅಂದಾಜನ್ನೇ ಅದುರಿಸುವಂಥಾ ಪಾತ್ರವಿಲ್ಲಿ ರಘು ಪಾಂಡೇಶ್ವರರಿಗೆ ಸಿಕ್ಕಿದೆ. ಇದನ್ನೂ ಓದಿ:ಡಿಸಿಎಂ ಡಿಕೆಶಿ ಮನೆಗೆ ಕಿಚ್ಚ ಸುದೀಪ್‌ ಭೇಟಿ- ಕಾರಣವೇನು?

    ಅಂದಹಾಗೆ, ಅವರಿಲ್ಲಿ ಪಟ್ಟಾಭಿರಾಮ ಎಂಬ ಪಾತ್ರವನ್ನು ಆವಾಹಿಸಿಕೊಂಡಿದ್ದಾರೆ. ಈ ಪಾತ್ರ ಆರಂಭದಲ್ಲಿ ಸೀದಾ ಸಾದ ಶೈಲಿಯಲ್ಲಿ ಸಾಗುತ್ತೆ. ಅದರ ಮೂಲಕವೇ ನಿರ್ದೇಶಕರು ಒಂದಷ್ಟು ಬೆರಗುಗಳನ್ನಿಟ್ಟಿದ್ದಾರಂತೆ. ಅದೇನೆಂಬುದು ಈ ವಾರವೇ ಎಲ್ಲರೆದುರು ಜಾಹೀರಾಗಲಿದೆ. ಇಂಥಾದ್ದೊಂದು ಪಾತ್ರ ತಮಗೊಲಿದು ಬಂದ ಬಗ್ಗೆ ರಘು ಅವರಲ್ಲೊಂದು ಧನ್ಯತೆಯ ಭಾವವಿದೆ. ಹೊಸಬರೆಂಬ ಸುಳಿವನ್ನೇ ಕೊಡದಂತೆ ಕೆಲಸ ಮಾಡಿರುವ ಚಯನ್ ಶೆಟ್ಟಿಯಂಥಾ ನಿರ್ದೇಶಕರು ಮತ್ತು ಪ್ರತಿಭಾನ್ವಿತರ ತಂಡದೊಂದಿಗೆ ಕೆಲಸ ಮಾಡಿದ ತುಂಬು ಖುಷಿಯೂ ಅವರಲ್ಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಜಾನರಿನಲ್ಲಿಯೇ ಭಿನ್ನವಾಗಿ ನಿಲ್ಲಬಲ್ಲ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತದೆಂಬ ಭರವಸೆ ರಘು ಪಾಂಡೇಶ್ವರರದ್ದು.


    ಪ್ರತೀ ಸೀನುಗಳೂ ಚೆಂದಗೆ ಮೂಡಿ ಬರಬೇಕೆಂಬ ನಿರ್ದೇಶಕರ ಹಂಬಲ, ಅದಕ್ಕೆ ನಿರ್ಮಾಪಕರ ಕಡೆಯಿಂದ ಸಿಗುತ್ತಿದ್ದ ಸಹಕಾರ ಮತ್ತು ಚಿತ್ರತಂಡದ ಉತ್ಸಾಹಗಳೆಲ್ಲ ಅಧಿಪತ್ರದ ಅನುಭವವನ್ನು ರಘು ಅವರೊಳಗೆ ಅಚ್ಚಾಗಿಸಿದೆ. ಬಹುಶಃ ಈ ಚಿತ್ರ ರಘು ಪಾಂಡೇಶ್ವರರ ಸಿನಿಮಾ ಯಾನದಲ್ಲಿ ಮೈಲಿಗಲ್ಲು ಸೃಷ್ಟಿಸುವ ಸಾಧ್ಯತೆಗಳಿವೆ. ಇಷ್ಟೆಲ್ಲ ವಿಶೇಷತೆಗಳನ್ನು ಒಡಲಲ್ಲಿಟ್ಟುಕೊಂಡಿರುವ ಅಧಿಪತ್ರ ಫೆಬ್ರವರಿ ೭ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಕೆಆರ್ ಸಿನಿ ಕಂಬೈನ್ಸ್ ಬ್ಯಾನರಿನಡಿಯಲ್ಲಿ ಅಧಿಪತ್ರ ನಿರ್ಮಾಣಗೊಂಡಿದೆ. ರೂಪೇಶ್ ಶೆಟ್ಟಿ, ಜಾನ್ವಿ, ಎಂ.ಕೆ ಮಠ, ಪ್ರಕಾಶ್ ತುಮಿನಾಡು, ದೀಪಕ್ ರೈ, ಪ್ರಶಾಂತ್ ನಟನಾ, ರಘು ಪಾಂಡೇಶ್ವರ ಮುಂತಾದವರ ತಾರಾಗಣವಿದೆ. ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿರುವ ಶ್ರೀಕಾಂತ್ ಅವರೇ ಸಂಕಲನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ.

  • ಪೊಲೀಸ್ ಅಧಿಕಾರಿಯಾಗಿ ಅಚ್ಚರಿ ಮೂಡಿಸಲಿದ್ದಾರೆ ಬಿಗ್ ಬಾಸ್ ರೂಪೇಶ್ ಶೆಟ್ಟಿ!

    ಪೊಲೀಸ್ ಅಧಿಕಾರಿಯಾಗಿ ಅಚ್ಚರಿ ಮೂಡಿಸಲಿದ್ದಾರೆ ಬಿಗ್ ಬಾಸ್ ರೂಪೇಶ್ ಶೆಟ್ಟಿ!

    ತುಳು ಚಿತ್ರರಂಗದಲ್ಲಿ ನಿರ್ದೇಶಕರಾಗಿ, ನಟನಾಗಿ, ನಿರ್ಮಾಪಕರಾಗಿ ತಮ್ಮದೇ ಆದ ಛಾಪು ಮೂಡಿಸಿರುವವರು ರೂಪೇಶ್ ಶೆಟ್ಟಿ. ಕನ್ನಡ ಚಿತ್ರರಂಗದಲ್ಲಿಯೂ ಹೆಸರು ಮಾಡಿರುವ ಅವರೀಗ ಅಧಿಪತ್ರದ ನಾಯಕನಾಗಿ, ಖಡಕ್ ಪೊಲೀಸ್ ಅಧಿಕಾರಿಯಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗಲು ರೆಡಿಯಾಗಿದ್ದಾರೆ. ‘ಬಿಗ್‌ ಬಾಸ್‌ ಕನ್ನಡ 9’ರ (BBK 9) ವಿನ್ನರ್ ಆಗಿದ್ದವರು ರೂಪೇಶ್ ಶೆಟ್ಟಿ. ಆ ಶೋನ ನಂತರದಲ್ಲಿ ಅವರು ನಾಯಕನಾಗಿ ನಟಿಸಿರುವ ಮೊದಲ ಚಿತ್ರವಾಗಿಯೂ ಅಧಿಪತ್ರ ಗಮನ ಸೆಳೆದಿದೆ. ಈಗಾಗಲೇ ಬಿಡುಗಡೆಗೊಂಡಿರುವ ಟ್ರೈಲರ್ ಮೂಲಕ ಅವರ ಪಾತ್ರದ ಸ್ಪಷ್ಟವಾದ ಸುಳಿವುಗಳು ಪ್ರೇಕ್ಷಕರನ್ನು ತಲುಪಿಕೊಂಡಿವೆ. ಈ ಮೂಲಕ ಮೂಡಿಕೊಂಡಿರೋ ಅಗಾಧ ನಿರೀಕ್ಷೆಗಳ ಒಡ್ಡೋಲಗದಲ್ಲಿ ಈ ವಾರ ಅಂದರೆ, ಫೆಬ್ರವರಿ 7ರಂದು ‘ಅಧಿಪತ್ರ’ (Adhipatra) ಅದ್ದೂರಿಯಾಗಿ ತೆರೆಗಾಣಲಿದೆ.

    ರೂಪೇಶ್ ಶೆಟ್ಟಿ (Roopesh Shetty)  ಬಿಗ್ ಬಾಸ್ ಶೋ ಮುಗಿಸಿಕೊಂಡು ಬಂದ ನಂತರ ಅವರ ಮುಂಬರುವ ಸಿನಿಮಾ ಯಾವುದು ಅಂತೊಂದು ಕೌತುಕ ಕನ್ನಡ ಸಿನಿಮಾಸಕ್ತರಲ್ಲಿತ್ತು. ಆದರೆ, ಆ ಶೋ ಮುಗಿದು ಆರೇಳು ತಿಂಗಳು ಕಳೆದರೂ ಸಹ ಆ ಬಗ್ಗೆ ಯಾವುದೇ ಸೂಚನೆಗಳು ಸಿಕ್ಕಿರಲಿಲ್ಲ. ಯಾಕೆಂದರೆ, ಬಿಗ್ ಬಾಸ್ ಶೋ ಮುಗಿಸಿಕೊಂಡು ಹೊರಬಂದ ನಂತರದಲ್ಲಿ ರೂಪೇಶ್ ‘ಸರ್ಕಸ್’ ಎಂಬ ತುಳು ಸಿನಿಮಾದ ನಿರ್ದೇಶನ, ನಿರ್ಮಾಣದಲ್ಲಿ ಬ್ಯುಸಿಯಾಗಿದ್ದರು. ಆ ಚಿತ್ರ ಬಿಡುಗಡೆಗೊಂಡು ಸೂಪರ್ ಹಿಟ್ ಆಗಿದೆ. ಹಾಗೆ ಹಿಡಿದ ಕೆಲಸವನ್ನು ಯಶಸ್ವಿಯಾಗಿ ಮುಗಿಸಿಕೊಂಡು, ದೊಡ್ಡ ಮಟ್ಟದಲ್ಲಿ ಗೆಲುವು ದಕ್ಕಿಸಿಕೊಂಡ ಬೆನ್ನಲ್ಲಿಯೇ ರೂಪೇಶ್ ಶೆಟ್ಟಿ ಒಪ್ಪಿಕೊಂಡಿದ್ದ ಚಿತ್ರ ಅಧಿಪತ್ರ.

    ಅಷ್ಟಕ್ಕೂ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ವಿನ್ನರ್ ಆಗಿ ಹೊರ ಹೊಮ್ಮುತ್ತಲೇ ಕನ್ನಡ ಚಿತ್ರರಂಗದ ಚಿತ್ತ ಅವರತ್ತ ಹೊರಳಿಕೊಂಡಿತ್ತು. ಅನೇಕರು ಅವರಿಗೆಂದೇ ಕಥೆ ಸಿದ್ಧಪಡಿಸಿಕೊಂಡು ಸಂಪರ್ಕಿಸಲಾರಂಭಿಸಿದ್ದರು. ಸಿನಿಮಾವೊಂದನ್ನು ಎಲ್ಲ ಆಯಾಮಗಳಲ್ಲಿಯೂ ಪರಾಮರ್ಶಿಸುವ ಕಲೆ ಸಿದ್ಧಿಸಿಕೊಂಡಿರೋ ರೂಪೇಶ್ ಅವರಿಗೆ, ತಮ್ಮ ಮುಂಬರುವ ಪ್ರಾಜೆಕ್ಟಿನ ಬಗ್ಗೆ ಸ್ಪಷ್ಟವಾದ ಕಲ್ಪನೆಯಿತ್ತು. ಅದರ ಸುತ್ತ ಹರಳುಗಟ್ಟಿಕೊಂಡಿದ್ದ ನಿರ್ಧಾರವೂ ಬಲವಾಗಿತ್ತು. ಒಂದಷ್ಟು ಆಫರ್‌ಗಳು ಆ ಮಟ್ಟಕ್ಕೆ ತೃಪ್ತಿ ಕೊಡದ ಕಾರಣದಿಂದ ಒಂದೊಳ್ಳೆ ಕಥೆಗಾಗಿ ಅರಸುತ್ತಿದ್ದ ರೂಪೇಶ್‌ ಮುಂದೆ ಬಂದವರು ನವ ನಿರ್ದೇಶಕರ ಚಯನ್ ಶೆಟ್ಟಿ.

    ಹೊಸಬರು ಇದ್ದಾರೆ ಎಂದರೆ ಅಲ್ಲಿ ಹೊಸತನ ಇದ್ದೇ ಇರುತ್ತದೆಂಬ ನಂಬಿಕೆ ಕನ್ನಡ ಚಿತ್ರರಂಗ, ಪ್ರೇಕ್ಷಕ ವಲಯದಲ್ಲಿದೆ. ಚಯನ್ ರೂಪೇಶ್ ಅವರಿಗೆ ಹೇಳಿದ ಕಥೆ ಕೂಡಾ ಆ ಮಾತನ್ನು ಮತ್ತೆ ಸಾಬೀತುಗೊಳಿಸುವಂತಿತ್ತು. ಆ ಕ್ಷಣವೇ ಒಪ್ಪಿಗೆ ಸೂಚಿಸಿದ್ದ ರೂಪೇಶ್ ಶೆಟ್ಟಿ ಅದಕ್ಕಾಗಿ ತಯಾರಿ ಆರಂಭಿಸಿದ್ದರು. ಅದು ಹೇಳಿಕೇಳಿ ಪೊಲೀಸ್ ಪಾತ್ರ. ಅದರ ಸಂಪೂರ್ಣ ಗುಣಲಕ್ಷಣಗಳನ್ನು ಮನನ ಮಾಡಿಕೊಂಡು ತಯಾರಾಗೋದರ ಜೊತೆಗೆ, ಫಿಟ್ನೆಸ್ ಅನ್ನು ಸಂಭಾಳಿಸಿಕೊಳ್ಳುವ ಸವಾಲೂ ಅವರ ಮುಂದಿತ್ತು. ಅದೆಲ್ಲವನ್ನೂ ಮುಗಿಸಿಕೊಂಡು ಚಿತ್ರೀಕರಣ ಪೂರೈಸಿಕೊಂಡಿರುವ ರೂಪೇಶ್ ಶೆಟ್ಟಿ ಒಟ್ಟಾರೆ ಸಿನಿಮಾ ಮೂಡಿ ಬಂದಿರುವ ರೀತಿಯನ್ನು ಕಂಡು ಖುಷಿಗೊಂಡಿದ್ದಾರೆ. ‘ಅಧಿಪತ್ರ’ ಪ್ರೇಕ್ಷಕರಿಗೆಲ್ಲ ಖಂಡಿತವಾಗಿಯೂ ಹಿಡಿಸುತ್ತದೆಂಬ ಗಾಢ ನಂಬಿಕೆಯೂ ಅವರಲ್ಲಿದೆ.

     

    View this post on Instagram

     

    A post shared by PUBLiC TV (@publictv)


    ‘ಬಿಗ್ ಬಾಸ್’ ನಂತರದಲ್ಲಿ ಅಧಿಪತ್ರದ (Adhipatra Film) ಮೂಲಕ ಕನ್ನಡ ಚಿತ್ರರಂಗದಲ್ಲಿ ರೂಪೇಶ್ ಶೆಟ್ಟಿಯವರ ಮತ್ತೊಂದು ಅಧ್ಯಾಯ ಪುಟ ತೆರೆದುಕೊಳ್ಳಲಿದೆ. ಈಗಾಗಲೇ ಎಲ್ಲೆಡೆಯಲ್ಲಿಯೂ ಈ ಸಿನಿಮಾ ಬಗ್ಗೆ ಪಾಸಿಟಿವ್ ಟಾಕ್ ಹಬ್ಬಿಕೊಂಡಿದೆ. ಒಂದೊಳ್ಳೆ ಕಥೆ, ಪ್ರತಿಭಾನ್ವಿತರ ಸಾಥ್, ಅನುಭವೀ ಕಲಾವಿದರು, ತಂತ್ರಜ್ಞರು ಮತ್ತು ನಿರ್ದೇಶಕ ಚಯನ್ ಶೆಟ್ಟಿಯ ಪ್ರತಿಭೆಯ ಕಾರಣದಿಂದ ಅಧಿಪತ್ರ ಕಳೆಗಟ್ಟಿಕೊಂಡಿದೆ. ಕೆಆರ್ ಸಿನಿ ಕಂಬೈನ್ಸ್ ಬ್ಯಾನರಿನಡಿಯಲ್ಲಿ ಅಧಿಪತ್ರ ನಿರ್ಮಾಣಗೊಂಡಿದೆ. ರೂಪೇಶ್ ಶೆಟ್ಟಿ, ಜಾನ್ವಿ, ಎಂ.ಕೆ ಮಠ, ಪ್ರಕಾಶ್ ತುಮಿನಾಡು, ದೀಪಕ್ ರೈ, ಪ್ರಶಾಂತ್ ನಟನಾ, ರಘು ಪಾಂಡೇಶ್ವರ ಮುಂತಾದವರ ತಾರಾಗಣವಿದೆ. ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿರುವ ಶ್ರೀಕಾಂತ್ ಅವರೇ ಸಂಕಲನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ‘ಅಧಿಪತ್ರ’ ಫೆಬ್ರವರಿ 7ರಂದು ಬಿಡುಗಡೆಗೊಳ್ಳಲಿದೆ.

  • ಆ್ಯಂಕರ್ ಜಾನ್ವಿಯೀಗ ಅಧಿಪತ್ರದ ಅಧಿನಾಯಕಿ!

    ಆ್ಯಂಕರ್ ಜಾನ್ವಿಯೀಗ ಅಧಿಪತ್ರದ ಅಧಿನಾಯಕಿ!

    ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ (Roopesh Shetty) ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಅಧಿಪತ್ರ’. ಈ ವಾರ ಅಂದರೆ, ಫೆಬ್ರವರಿ 7ರಂದು ಬಿಡುಗಡೆಗೊಳ್ಳಲಿರುವ ಈ ಚಿತ್ರದ ಮೂಲಕ ಖ್ಯಾತ ಸುದ್ದಿವಾಚಕಿ, ನಿರೂಪಕಿ ಜಾನ್ವಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಖಾಸಗಿ ವಾಹಿನಿಯಲ್ಲಿ ಸುದ್ದಿ ವಾಚಕಿಯಾಗಿದ್ದ ಅವರು ಆ ಹಂತದಲ್ಲಿಯೇ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದವರು. ನಾಯಕಿಯಾಗೋ ಗುಣ ಲಕ್ಷಣಗಳನ್ನು ಹೊಂದಿದ್ದ ಜಾನ್ವಿ (Jhanvi) ಹೀರೋಯಿನ್ ಆಗುತ್ತಾರೆ ಎಂಬಂಥಾ ಸುದ್ದಿಗಳು ಆಗಾಗ ಹಬ್ಬಿಕೊಳ್ಳುತ್ತಿದ್ದವು. ಕಡೆಗೂ ಅಧಿಪತ್ರದ ಮೂಲಕ ಅದು ನಿಜವಾಗಿದೆ. ಖುದ್ದು ಜಾನ್ವಿ ಬಹುವಾಗಿ ಮೆಚ್ಚಿಕೊಂಡು ಈ ಸಿನಿಮಾದ ಪಾತ್ರವನ್ನು ಒಪ್ಪಿಕೊಂಡು ನಟಿಸಿದ್ದಾರೆ. ಸದರಿ ಪಾತ್ರ ನಟಿಯಾಗಿ ಹೊಸಾ ದಿಕ್ಕು ತೋರುತ್ತದೆಂಬ ಗಾಢ ನಂಬಿಕೆ ಜಾನ್ವಿಯದ್ದಾಗಿದೆ.

    ‘ಅಧಿಪತ್ರ’ ಚಯನ್ ಶೆಟ್ಟಿ ನಿರ್ದೇಶನದ ಚೊಚ್ಚಲ ಚಿತ್ರ. ಸಿದ್ಧಸೂತ್ರ ಮೀರಿದ ಕಥೆಯೊಂದನ್ನು ಸಿದ್ಧಪಡಿಸಿಕೊಂಡಿದ್ದ ಚಯನ್, ಆಯಾ ಪಾತ್ರಗಳಿಗೆ ಸೂಟ್ ಆಗುವಂಥಾ ಕಲಾವಿದರನ್ನು ಆರಂಭದ ಹಂತದಲ್ಲಿಯೇ ನಿಕ್ಕಿಯಾಗಿಸಿಕೊಂಡಿದ್ದರು. ಹಾಗೆ ಈ ಚಿತ್ರದ ನಾಯಕಿ ಪಾತ್ರಕ್ಕೆ ಒಪ್ಪುವಂತೆ ಕಂಡಿದ್ದು ಆ್ಯಂಕರ್ ಜಾನ್ವಿ. ಹೀಗೆ ನಿರ್ದೇಶಕರ ಇಂಗಿತ ಜಾನ್ವಿಗೆ ತಲುಪಿಕೊಂಡಿದ್ದದ್ದು ಖಾಸಗಿ ವಾಹಿನಿಯ ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದವರ ಮೂಲಕ. ಅದಕ್ಕೆ ಒಪ್ಪಿಗೆ ಸೂಚಿಸಿದ ಜಾನ್ವಿಯವರನ್ನು ನಿರ್ದೇಶಕ ಚಯನ್ ಶೆಟ್ಟಿ ಸ್ಕ್ರಿಫ್ಟ್ ಸಮೇತ ಭೇಟಿಯಾಗಿದ್ದರು.

    ಕೆಲ ಮಂದಿ ಆಯಾ ಕಲಾವಿದರನ್ನು ಅಪ್ರೋಚ್ ಮಾಡುವಾಗ ಅವರ ಪಾತ್ರವನ್ನ ಮಾತ್ರವೇ ವಿವರಿಸೋದಿದೆ. ಆದರೆ, ಚಯನ್ ಜಾನ್ವಿ ಮುಂದೆ ಒಂದಿಡೀ ಸ್ಕ್ರಿಫ್ಟ್ ಅನ್ನು ಇಂಚಿಂಚಾಗಿ ಹರವಿದ್ದರು. ಹಾಗೆ ಕಥೆ ಕೇಳಿದ ಜಾನ್ವಿಗೆ ತನ್ನ ಪಾತ್ರ ಸೇರಿದಂತೆ ಒಂದಿಡೀ ಕಥೆಯೇ ಇಷ್ಟವಾಗಿ ಒಪ್ಪಿಗೆ ಸೂಚಿಸಿದ್ದರಂತೆ. ಈ ಮೂಲಕ ಅವರು ನಾಯಕಿಯಾಗಲು ಮುಹೂರ್ತ ಕೂಡಿ ಬಂದಿತ್ತು. ವಿಶೇಷವೆಂದರೆ, ಜಾನ್ವಿ ಪಾಲಿಗೆ ಇಲ್ಲಿ ಪತ್ರಕರ್ತೆಯ ಪಾತ್ರವೇ ಒಲಿದು ಬಂದಿದೆ. ಈ ಸಮಾಜಕ್ಕಾಗಿ ಏನಾದರೂ ಮಾಡಬೇಕೆಂಬ ತುಡಿತದೊಂದಿಗೆ ಅಖಾಡಕ್ಕಿಳಿಯೋ ಆ ಪಾತ್ರ ಎಂಬತ್ತರ ದಶಕದ ನೆರಳಿನಲ್ಲಿ ಚಲಿಸುತ್ತದೆಯಂತೆ. ಅಂದಹಾಗೆ, ಅವರಿಲ್ಲಿ ಬೃಹತಿ ಎಂಬ ಚೆಂದದ ಪಾತ್ರಕ್ಕೆ ಜೀವ ತುಂಬಿದ್ದಾರೆ.


    ಆ ನಂತರ ಕುಂದಾಪುರ, ಹೆಬ್ರಿ ಮುಂತಾದೆಡೆಗಳಲ್ಲಿ ಬಲು ಖುಷಿಯಿಂದಲೇ ಜಾನ್ವಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ಹಂತದಲ್ಲಿ ಒಂದು ಅಪ್ಪಟ ಸಿನಿಮಾ ವ್ಯಾಮೋಹಿಗಳ ತಂಡದ ಭಾಗವಾದ, ನಟಿಯಾಗಿ ತಮ್ಮನ್ನು ತಾವೇ ಹೊಳಪುಗಟ್ಟಿಸಿಕೊಂಡ ಬಗ್ಗೆ ಜಾನ್ವಿಗೊಂದು ತೃಪ್ತ ಭಾವವಿದೆ. ಒಂದು ಪ್ರತಿಭಾನ್ವಿತರ ತಂಡದ ಭಾಗವಾಗುವ ಅವಕಾಶ ಸಿಕ್ಕುವುದೇ ಅಪರೂಪ. ಅದು ಮೊದಲ ಹೆಜ್ಜೆಯಲ್ಲಿಯೇ ಸಾಧ್ಯವಾದ ಖುಷಿ ಜಾನ್ವಿಗಿದೆ. ಅಧಿಪತ್ರ ಎಂಬ ಟೈಟಲ್ಲಿನಲ್ಲಿಯೇ ಒಂದಿಡೀ ಕಥೆಯ ಸಾರವಿದೆ. ಅದರ ಒಂದೊಂದು ಅಕ್ಷರಕ್ಕೂ ಒಂದೊಂದು ಅರ್ಥವಿದೆ. ಅದು ಪ್ರೇಕ್ಷಕರನ್ನೆಲ್ಲ ಬೆರಗುಗೊಳಿಸೋದು ಪಕ್ಕಾ. ಒಂದು ಟೈಟಲ್ ಮೇಲೆ ಚಿತ್ರತಂಡ ವರ್ಕ್ ಮಾಡಿದ ರೀತಿಯೇ ಜಾನ್ವಿ ಅವರೊಳಗೊಂದು ಬೆರಗು ಮೂಡಿಸಿದೆಯಂತೆ.

    ಸಾಮಾನ್ಯವಾಗಿ ನಾಯಕಿ ಪಾತ್ರವೆಂದಾಕ್ಷಣ ಅದೇ ತಥಾಕಥಿತ ಲವ್ವು, ಮರ ಸುತ್ತೋದು, ಡ್ಯುಯೆಟ್‌ ಅಂತೆಲ್ಲ ಒಂದಷ್ಟು ಕಲ್ಪನೆಯಿದೆ. ಅಧಿಪತ್ರದಲ್ಲಿ ಜಾನ್ವಿಯ ಪಾತ್ರವನ್ನು ನಿರ್ದೇಶಕ ಚಯನ್ ಶೆಟ್ಟಿ ಸಿದ್ಧಸೂತ್ರದಾಚೆ ರೂಪಿಸಿದ್ದಾರಂತೆ. ಅದರ ಅಸಲಿ ಚಹರೆ ಪ್ರೇಕ್ಷಕರೆದುರು ಅನಾವರಣಗೊಳ್ಳಲು ಇದೀಗ ದಿನಗಣನೆ ಶುರುವಾಗಿದೆ. ಅಷ್ಟಕ್ಕೂ ಜಾನ್ವಿ ಸುದ್ದಿ ವಾಚಕಿಯಾಗಿದ್ದ ಕಾಲದಲ್ಲಿಯೇ ನಾಯಕಿಯಾಗೋದಕ್ಕೆ ಹಲವಾರು ಅವಕಾಶಗಳು ಬಂದಿದ್ದವಂತೆ. ಆದರೆ, ಆ ದಿನಗಳಲ್ಲಿನ ಖಾಸಗೀ ಬದುಕಿನ ಹಳವಂಡಗಳಿಂದ ಅದರತ್ತ ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಖುದ್ದು ಜಾನ್ವಿ ಅವರಿಗೇ ನಟಿಯಾಗಬೇಕೆಂಬ ಆಕಾಂಕ್ಷೆ ಇದ್ದದ್ದು ನಿಜ. ಆ ನಂತರ ಅದಕ್ಕಾಗಿ ತಯಾರಾದಾಗಲೂ ಕಥೆ ಮತ್ತು ಪಾತ್ರದ ಆಯ್ಕೆಯ ಬಗ್ಗೆ ಅವರೊಳಗೊಂದು ನಿಖರವಾದ ಪರಿಕಲ್ಪನೆ ಇತ್ತು. ಹಾಗೆ ಒಪ್ಪಿಗೆಯಾಗೋ ಪಾತ್ರ ಬಂದರೆ ಮಾತ್ರ ಒಪ್ಪಿಕೊಳ್ಳುವ ಗಟ್ಟಿ ನಿರ್ಧಾರ ಅವರದ್ದಾಗಿತ್ತು.

     

    View this post on Instagram

     

    A post shared by PUBLiC TV (@publictv)

    ಅಂತೂ ‘ಅಧಿಪತ್ರ’ ಚಿತ್ರದ ಮೂಲಕ ಅದು ಕೈಗೂಡಿದೆ. ಸಿನಿಮಾವನ್ನು ಧ್ಯಾನದಂತೆ ಹಚ್ಚಿಕೊಂಡಿರೋ ರೂಪೇಶ್ ಶೆಟ್ಟಿ ಜೊತೆ ನಟಿಸೋ ಅವಕಾಶ ಸಿಕ್ಕಿರೋದರ ಬಗ್ಗೆಯೂ ಜಾನ್ವಿಗೆ ಖುಷಿಯಿದೆ. ಹಿರಿಯ ಕಲಾವಿದರೊಂದಿಗೆ ನಟಿಸೋ ಅವಕಾಶ ಸಿಕ್ಕಿ, ಅದನ್ನೆ ಚೆಂದಗೆ ಬಳಸಿಕೊಂಡ ಆತ್ಮತೃಪ್ತಿಯೂ ಅವರಲ್ಲಿದೆ. ಒಟ್ಟಾರೆಯಾಗಿ ಇದುವರೆಗೂ ಸುದ್ದಿ ವಾಚಕಿಯಾಗಿ, ನಿರೂಪಕಿಯಾಗಿ, ಗಿಚ್ಚಿಗಿಲಿಗಿಲಿ ಶೋ ಮೂಲಕ ನಟಿಯಾಗಿಯೂ ಗಮನ ಸೆಳೆದಿದ್ದ ಜಾನ್ವಿ ಇದೀಗ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಮುಂದಿನ ಹೆಜ್ಜೆಗಳ ಬಗ್ಗೆ ನಿಖರ ನಿರ್ಧಾರ ಹೊಂದಿರುವ ಅವರ ಪಾಲಿಗೆ ಒಳ್ಳೊಳ್ಳೆಯ ಪಾತ್ರಗಳ ಮೂಲಕ ಗುರುತಿಸಿಕೊಳ್ಳುವ ಬಯಕೆ ಇದೆ. ಅಧಿಪತ್ರದ ಪಾತ್ರ ಅದೆಲ್ಲವನ್ನು ಸಾಧ್ಯವಾಗಿಸುವಷ್ಟು ಶಕ್ತವಾಗಿದೆ ಎಂಬ ನಂಬಿಕೆಯೂ ಅವರಲ್ಲಿದೆ. ಕೆಆರ್ ಸಿನಿ ಕಂಬೈನ್ಸ್ ಬ್ಯಾನರಿನಡಿಯಲ್ಲಿ ‘ಅಧಿಪತ್ರ’ ನಿರ್ಮಾಣಗೊಂಡಿದೆ. ರೂಪೇಶ್ ಶೆಟ್ಟಿ, ಜಾನ್ವಿ, ಎಂ.ಕೆ ಮಠ, ಪ್ರಕಾಶ್ ತುಮಿನಾಡು, ದೀಪಕ್ ರೈ, ಪ್ರಶಾಂತ್ ನಟನಾ, ರಘು ಪಾಂಡೇಶ್ವರ ಮುಂತಾದವರ ತಾರಾಗಣವಿದೆ. ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿರುವ ಶ್ರೀಕಾಂತ್ ಅವರೇ ಸಂಕಲನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ.