Tag: ಅಧಿಕಾರಿ ಅಮಾನತು

  • ಮಗಳ ಸಾವಿಗೂ ರಜೆ ಕೊಡದ ಅಧಿಕಾರಿ ಅಮಾನತು

    ಮಗಳ ಸಾವಿಗೂ ರಜೆ ಕೊಡದ ಅಧಿಕಾರಿ ಅಮಾನತು

    ಕೊಪ್ಪಳ: ಜಿಲ್ಲೆಯ ಗಂಗಾವತಿ ಬಸ್ ಡಿಪೋದಲ್ಲಿ ನಡೆದ ಅಮಾನವೀಯ ಘಟನೆಗೆ ಕಾರಣರಾದ ಅಸಿಸ್ಟೆಂಟ್ ಟ್ರಾಫಿಕ್ ಇನ್‍ಸ್ಪೆಕ್ಟರ್ ಹೇಮಾವತಿಯನ್ನು ಅಮಾನತುಗೊಳಿಸಿ ಎಂದು ಆದೇಶ ಹೊರಡಿಸಲಾಗಿದೆ.

    ಕೆ.ಎಸ್.ಆರ್.ಟಿ.ಸಿಯ ಡಿಸಿ ಮೊಹ್ಮದ್ ಫಯಾಜ್, ಎಟಿಐ ಹೇಮಾವತಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಬುಧವಾರದಂದು ಗಂಗಾವತಿ ಬಸ್ ಡೀಪೊದಲ್ಲಿ ಮಗಳ ಸಾವಿಗೂ ರಜೆ ಕೊಡದೆ ಬಸ್ ನಿರ್ವಾಹಕನನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿತ್ತು.

    ಗಂಗಾವತಿ ಟು ಕೊಲ್ಲಾಪುರ ಬಸ್ ನಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್ ಅವರ ಮಗಳು ಕವಿತಾ ಸಾವಿನ ಸುದ್ದಿ ಮುಚ್ಚಿಟ್ಟು ಅಧಿಕಾರಿ ಹೇಮಾವತಿ ಅಮಾನವೀಯವಾಗಿ ನೆಡೆದುಕೊಂಡಿದ್ದರು. ಡ್ಯೂಟಿಯಿಂದ ಇಳಿದ ನಂತರ ತಡವಾಗಿ ಮಂಜುನಾಥ್‍ಗೆ ಮಗಳ ಸಾವಿನ ಸುದ್ದಿ ತಿಳಿದಿದೆ.

    ಈ ಸಮಯದಲ್ಲಿ ಮನೆಗೆ ತೆರಳಲು ರೆಜೆ ಕೋರಿ ಮನವಿ ಮಾಡಿದರು. ರಜೆಯನ್ನು ನೀಡದೆ ಕೆಲಸಕ್ಕೆ ಹೋಗಲು ಹೇಮಾವತಿ ಒತ್ತಡ ಹೇರಿದ್ದರು ಎಂದು ಹೇಳಲಾಗಿದೆ. ಈ ಕುರಿತು ಪಬ್ಲಿಕ್ ಟಿವಿ ಸುದ್ದಿ ಬಿತ್ತರಿಸಿತ್ತು. ಈ ಸಂಬಂಧ ಪಬ್ಲಿಕ್ ಟಿವಿ ಸುದ್ದಿಗೆ ಪ್ರತಿಕ್ರಿಯಿಸಿದ್ದ ಕೆ.ಎಸ್.ಆರ್.ಟಿ.ಸಿ ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿತ್ತು.

    ಒಟ್ಟು ನಾಲ್ಕು ಟ್ವೀಟ್ ಮಾಡಿದ್ದ ಕೆಎಸ್‍ಆರ್‍ಟಿಸಿ, ಈ ವಿಷಯವು, ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ, ಕೊಪ್ಪಳ ವಿಭಾಗಕ್ಕೆ ಸಂಬಂಧಿಸಿರುತ್ತದೆ. ಚಾಲಕನ ಮಗಳ ವಿಷಯ ತಿಳಿದ ಮೇಲೆಯೂ ಕರ್ತವ್ಯಕ್ಕೆ ಕಳುಹಿಸಲಾಗಿದೆ ಎಂಬುದು ಸತ್ಯವಲ್ಲ. ಸದರಿ ಚಾಲಕರು ಗಂಗಾವತಿಯಿಂದ ಕೊಲ್ಲಾಪುರ ಮಾರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬಸ್ಸು ಗಂಗಾವತಿಯನ್ನು ಬಿಟ್ಟು ಎರಡು ಗಂಟೆಗಳಾದ ನಂತರ ಬಸ್ಸಿನ ಚಾಲಕರ ಸಂಬಂಧಿಕರೊಬ್ಬರಿಂದ ಗಂಗಾವತಿ ಘಟಕಕ್ಕೆ ದೂರವಾಣಿ ಕರೆ ಬಂದಿರುತ್ತದೆ. ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರಿ ಸಿಬ್ಬಂದಿಯು ಕರೆಯನ್ನು ಸ್ವೀಕರಿಸಿರುತ್ತಾರೆ. ಡಿಪೋದಲ್ಲಿ ಕರೆ ಸ್ವೀಕರಿಸಿದ ಟ್ರಾಫಿಕ್ ಅಸಿಸ್ಟೆಂಟ್ ಚಾಲಕನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ.

    ಆದರೆ, ದುರಂತದ ಬಗ್ಗೆ ಸದರಿ ಸಿಬ್ಬಂದಿಯು ಡಿಪೋದಲ್ಲಿ ಯಾರಿಗೂ ತಿಳಿಸಿಲ್ಲ. ಅವರು ಡಿಪೋ ಮ್ಯಾನೇಜರ್‍ ಗೆ ಹೇಳಿದ್ದರೆ, ಅವರನ್ನು ಸಂಪರ್ಕಿಸಲು ಶತಪ್ರಯತ್ನ ಮಾಡಿ, ಚಾಲಕರಿಗೆ ವಿಷಯ ಮುಟ್ಟಿಸಿ ಅವರನ್ನು ಕರೆಸಬಹುದಾಗಿತ್ತು. ನಾವು ಈ ಬಗ್ಗೆ ತನಿಖೆ ನಡೆಸಿ ಸದರಿ ಸಂಚಾರ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತಿದ್ದೇವೆ. ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಈ ಬಗ್ಗೆ ಅತೀವ ದುಃಖ ವ್ಯಕ್ತಪಡಿಸುತ್ತದೆ. ಅಗಲಿದ ಆತ್ಮಕ್ಕೆ ಶಾಂತಿ ಕೋರುತ್ತಾ, ಚಾಲಕ ಮತ್ತು ಅವರ ಪರಿವಾರದವರಿಗೆ ಈ ತುಂಬಲಾರದ ನಷ್ಟವನ್ನು ಭರಿಸುವ ಶಕ್ತಿ ನೀಡುವಂತೆ ದೇವರನ್ನು ಪ್ರಾರ್ಥಿಸುತ್ತೇವೆ ಎಂದು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿ ಟ್ವೀಟ್ ಮಾಡಿದ್ದರು.