Tag: ಅತೃಪ್ತ

  • ಸ್ಪೀಕರ್ ವರ್ಸಸ್ ಅತೃಪ್ತ ಶಾಸಕರ ಕದನ- ಸುಪ್ರೀಂನಲ್ಲಿಂದು ಅರ್ಜಿ ವಿಚಾರಣೆ

    ಸ್ಪೀಕರ್ ವರ್ಸಸ್ ಅತೃಪ್ತ ಶಾಸಕರ ಕದನ- ಸುಪ್ರೀಂನಲ್ಲಿಂದು ಅರ್ಜಿ ವಿಚಾರಣೆ

    ನವದೆಹಲಿ: ಸುಪ್ರೀಂಕೋರ್ಟ್ ನಲ್ಲಿ ಇಂದು ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿ ಸಂಬಂಧ ತೀರ್ಪು ಹೊರ ಬೀಳಲಿದೆ.

    ಸುಪ್ರೀಂಕೋರ್ಟ್ ಸ್ಪೀಕರ್ ಕಾರ್ಯವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆ ಅತೃಪ್ತರಿಗೆ ರಿಲೀಫ್ ಸಿಗಲಿದ್ದು, ರಾಜೀನಾಮೆ ಪ್ರಕ್ರಿಯೆಯ ಇತ್ಯರ್ಥಕ್ಕೆ ಚಾಲನೆ ಸಿಗಲಿದೆ.

    ಸುಪ್ರೀಂನಲ್ಲಿಂದು ಏನಾಗಬಹುದು?
    ಶಾಸಕಾಂಗದಲ್ಲಿ ನ್ಯಾಯಾಂಗ ಮಧ್ಯಪ್ರವೇಶ ಮಾಡಬಹುದಾ ಅನ್ನೋ ಪ್ರಶ್ನೆಗೆ ಉತ್ತರ ಸಿಗಲಿದೆ. ಸಂವಿಧಾನದ ಬಿಕ್ಕಟ್ಟು ಅರ್ಜಿಯನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಬಹುದು. ವರ್ಗಾವಣೆ ಆದಲ್ಲಿ ಅರ್ಜಿ ಇತ್ಯರ್ಥಕ್ಕೆ ಇನ್ನಷ್ಟು ಕಾಲಾವಕಾಶ ತೆಗೆದುಕೊಳ್ಳಬಹುದು.

    ಮಧ್ಯಪ್ರವೇಶ ಮಾಡಬಹುದು ಎಂದಾದರೆ ರಾಜೀನಾಮೆ ಇತ್ಯರ್ಥಕ್ಕೆ ಸಮಯ ನಿಗದಿ ಮಾಡಬಹುದು. ಮಧ್ಯಪ್ರವೇಶ ಸಾಧ್ಯವಾಗದಿದ್ದರೆ ಸ್ಪೀಕರ್ ಗೆ ಅಂತಿಮ ನಿರ್ಧಾರ ಬಿಡಬಹುದು. ಸ್ಪೀಕರ್ ಆದೇಶದ ಮೇಲೆ ಕೋರ್ಟ್ ಗೆ ಬರಬಹುದು ಎಂದು ಅರ್ಜಿದಾರರಿಗೆ ಸೂಚಿಸಬಹುದು.

    ವಿಪ್ ಮೇಲೆ ಸ್ಪಷ್ಟ ಆದೇಶಕ್ಕೆ ಅರ್ಜಿದಾರರ ಪರ ವಕೀಲರು ಮನವಿ ಮಾಡಬಹುದು. ಹಳೆಯ ವಿಪ್ ಈ ಅಧಿವೇಶನಕ್ಕೆ ಅನ್ವಯ ಆಗುತ್ತಾ ಅನ್ನೋದರ ಬಗ್ಗೆ ಆದೇಶಿಸುವ ಸಾಧ್ಯತೆಗಳಿವೆ.

    ಸ್ಪೀಕರ್ ವಾದ ಏನಿರಬಹುದು..?
    ಸ್ಪೀಕರ್ ಕಾನೂನು ಬಾಹಿರ ನಿರ್ಧಾರಗಳನ್ನು ಸುಪ್ರೀಂಕೋರ್ಟ್ ಪ್ರಶ್ನಿಸಬಹುದು. ಯಥಾಸ್ಥಿತಿ ಕಾಯ್ದುಕೊಳ್ಳಿ ಎಂಬ ತೀರ್ಪಿನಿಂದ ನಿರ್ಧಾರ ಮತ್ತಷ್ಟು ತಡವಾಗಿದೆ. ಶಾಸಕರು ವಿಚಾರಣೆಗೆ ಬಾರದೆ ಮುಂಬೈನಲ್ಲಿ ಕುಳಿತಿದ್ದಾರೆ. ಜುಲೈ 12 ಮತ್ತು 15ರಂದು ಕೆಲ ಶಾಸಕರನ್ನು ವಿಚಾರಣೆ ಕರೆಯಲಾಗಿತ್ತು, ಆದರೆ ಅವರು ಬಂದಿಲ್ಲ. ಯಥಾಸ್ಥಿತಿ ಆದೇಶ ಹಿಂಪಡೆದರೆ ನಾನು ಕೂಡಲೇ ವಿಚಾರಣೆ ಆರಂಭಿಸುತ್ತೇನೆ. ಅನರ್ಹತೆ ದೂರು ದಾಖಲಾಗಿದ್ದು ವಿಚಾರಣೆ ನಡೆಸದೇ ಶಾಸಕರ ರಾಜೀನಾಮೆ ಅಂಗೀಕರಿಸಲ್ಲ. ಅಲ್ಲದೆ ಸಂವಿಧಾನ ಬದ್ಧವಾಗಿ ತಮ್ಮ ಕಕ್ಷಿದಾರ ಕ್ರಮ ಕೈಗೊಳ್ಳಲಿದ್ದು, ಅತೃಪ್ತರ ಅರ್ಜಿಗಳನ್ನು ವಜಾಮಾಡಿ ಎಂದು ವಾದ ಮಾಡಬಹುದು.

    ಅತೃಪ್ತರ ಪರ ಮುಕುಲ್ ರೊಹ್ಟಗಿ ವಾದ ಏನಿರಬಹುದು?:
    ಹತ್ತು ಶಾಸಕರಲ್ಲ ಹೆಚ್ಚುವರಿಯಾಗಿ ಐವರು ಶಾಸಕರು ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರದ ಪರವಾಗಿ ಸ್ಪೀಕರ್ ನಿಲುವುಗಳಿರುವುದು ಸ್ಪಷ್ಟವಾಗಿದೆ. ಆರ್ಟಿಕಲ್ 190 ಅಡಿ ಪರಿಶೀಲಿಸಿ, ಶೀಘ್ರ ರಾಜೀನಾಮೆ ಅಂಗಿಕಾರಕ್ಕೆ ಸೂಚಿಸಿ. ಮತ್ತೆ ಯಥಾಸ್ಥಿತಿ ಆದೇಶ ಮುಂದುವರಿಸುವುದು ಸರಿಯಲ್ಲ. ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಗುರುವಾರ ವಿಶ್ವಾಸ ಮತಯಾಚನೆಗೆ ಸಮಯ ನಿಗದಿಯಾಗಿದೆ. ರಾಜೀನಾಮೆ ಅಂಗೀಕಾರ ಆಗದಿದ್ದಲ್ಲಿ ವಿಪ್ ಅನ್ವಯ ಆಗಲಿದೆ. ತಡ ಮಾಡದೆ ನಮ್ಮ ರಾಜೀನಾಮೆ ಅಂಗೀಕಾರ ಆಗಬೇಕು. ಸ್ಪೀಕರ್ ಸುಪ್ರೀಂಕೋರ್ಟ್ ವ್ಯಾಪ್ತಿಯಲ್ಲಿದ್ದು ನಿರ್ದೇಶನ ನೀಡಬಹುದು ಎಂದು ವಾದ ಮಾಡಬಹುದು.

  • ರಾಜೀನಾಮೆ ನೀಡಲು ಸಿಎಂ ನಿರ್ಧಾರ?

    ರಾಜೀನಾಮೆ ನೀಡಲು ಸಿಎಂ ನಿರ್ಧಾರ?

    ಬೆಂಗಳೂರು: ಅಮೆರಿಕದಿಂದ ಆಗಮಿಸುತ್ತಿರುವ ಸಿಎಂ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

    ಸೋಮವಾರ ಜೆಡಿಎಸ್ ಶಾಸಕರ ಸಭೆಯನ್ನು ಕರೆಯಲಾಗಿತ್ತು. ಆದರೆ ಈಗ ಬದಲಾವಣೆ ಮಾಡಿ ಇಂದು ಸಂಜೆಯೇ ಶಾಸಕಾಂಗ ಸಭೆಯನ್ನು ಕರೆಯಲಾಗಿದೆ.

    ಸಿಎಂ ಅಮೆರಿಕದಿಂದ ನೇರವಾಗಿ ದೆಹಲಿಗೆ ಇಂದು ಸಂಜೆ 3.15ಕ್ಕೆ ಆಗಮಿಸಲಿದ್ದು, ಬಳಿಕ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಎಚ್‍ಎಎಲ್ ಮೂಲಕ ಬೆಂಗಳೂರಿಗೆ ಆಗಮಿಸಲಿದ್ದು, ಬಂದ ತಕ್ಷಣ ಜೆಡಿಎಸ್ ಶಾಸಕರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ರಾಜೀನಾಮೆ ನೀಡುವ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಈಗಾಗಲೇ ಕಾಂಗ್ರೆಸ್ ಹೈ ಕಮಾಂಡ್ ಜೊತೆ ಮಾಜಿ ಪ್ರಧಾನಿ ದೇವೇಗೌಡ ಮಾತುಕತೆ ನಡೆಸಿದ್ದು, ಸಿಎಂ ಆಗಮಿಸಿದ ತಕ್ಷಣ ದೇವೇಗೌಡರು, ಕುಮಾರಸ್ವಾಮಿ, ವೇಣುಗೋಪಾಲ್, ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ಡಿ.ಕೆ ಶಿವಕುಮಾರ್ ಸಭೆ ನಡೆಸಲಿದ್ದಾರೆ.

    ಸಿಎಂ ರಾಜೀನಾಮೆ ಬಗ್ಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಈಗಾಗಲೇ ಒಮ್ಮತ ಸೂಚಿಸಿದ್ದಾರೆ ಎನ್ನಲಾಗಿದೆ. ಶಾಸಕರು ಮರಳಿ ಬರುವುದಿಲ್ಲ, ಎಳೆದಾಡಿ ಬಹುಮತ ಸಾಬೀತಿಗೆ ಮುಂದಾಗಿ ಮುಖಭಂಗ ಅನುಭವಿಸುವುದಕ್ಕಿಂತ ರಾಜೀನಾಮೆ ನೀಡುವುದು ಉತ್ತಮ ಎಂಬ ತೀರ್ಮಾನಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಬಂದಿದ್ದಾರೆ ಎನ್ನಲಾಗಿದೆ.

    ಬಿಜೆಪಿ ದ್ರೋಹ ಮಾಡಿ ನಮ್ಮ ಶಾಸಕರನ್ನು ಸೆಳೆದುಕೊಂಡಿದೆ ಎಂದು ಜನರ ಬಳಿ ಹೇಳಿ ಪಕ್ಷ ಸಂಘಟನೆ ಮಾಡಲು ಜೆಡಿಎಸ್ ಮುಂದಾಗಿದೆ ಎನ್ನುವ ಮಾತು ಕೇಳಿ ಬರುತ್ತಿವೆ.