Tag: ಅತಿವೃಷ್ಠಿ

  • ಜಲಪ್ರಳಯಕ್ಕೆ ತತ್ತರಿಸಿದ ಕೊಡಗು- 6 ಮಂದಿ ಸಾವು, ನೂರಕ್ಕೂ ಹೆಚ್ಚು ಮಂದಿ ಕಣ್ಮರೆ

    ಜಲಪ್ರಳಯಕ್ಕೆ ತತ್ತರಿಸಿದ ಕೊಡಗು- 6 ಮಂದಿ ಸಾವು, ನೂರಕ್ಕೂ ಹೆಚ್ಚು ಮಂದಿ ಕಣ್ಮರೆ

    ಮಡಿಕೇರಿ: ಕೊಡಗಿನಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದ್ದು, ಮರಣ ಮಳೆಯಾಗಿ ಬದಲಾಗುತ್ತಿದೆ. ಇದೂವರೆಗೆ 6ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ನೂರಕ್ಕೂ ಹೆಚ್ಚು ಮಂದಿ ಪ್ರವಾಹದಲ್ಲಿ ಸಿಲುಕಿ ನಾಪತ್ತೆಯಾಗಿದ್ದಾರೆ. ಕೊಡಗಿನ ಹೆಮ್ಮತ್ತಾಳು, ಮೇಘತ್ತಾಳು, ಮುಕ್ಕೋಡ್ಲು, ಕಾಲೂರು ಗ್ರಾಮದಲ್ಲಿ 500ಕ್ಕೂ ಅಧಿಕ ಮಂದಿ ಗುಡ್ಡ ಕುಸಿತಕ್ಕೆ ಸಿಲುಕಿದ್ದಾರೆ. ಮೂವತೊಕ್ಲು ಗ್ರಾಮದಲ್ಲಿ ಮನೆ ಕುಸಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮಡಿಕೇರಿ-ಮಂಗಳೂರು ಹೆದ್ದಾರಿಯ ಜೋಡುಪಾಲ, ಮದೆನಾಡು ಬಳಿ ಭಾರಿ ಪ್ರಮಾಣದಲ್ಲಿ ಬೆಟ್ಟ ಕುಸಿದಿದ್ದು 200ಕ್ಕೂ ಹೆಚ್ಚು ಮಂದಿ ಸಂಕಷ್ಟದಲ್ಲಿದ್ದಾರೆ. ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಗೆ ಗಾಳಿ ಮಳೆ ಅಡ್ಡಿಯಾಗಿದೆ.

    ಮಕ್ಕಂದೂರಿನಲ್ಲಿ ಗುಡ್ಡ ಕುಸಿದಿದ್ದರಿಂದ ಸೇನಾ ಹೆಲಿಕ್ಯಾಪ್ಟರ್ ನಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಮತ್ತೊಂದೆಡೆ ತೂಗುಸೇತುವೆಯೇ ಮುಳುಗಡೆಯಾಗಿದೆ. ಸೋಮವಾರಪೇಟೆ-ಮಡಿಕೇರಿ ನಡುವಿನ ರಸ್ತೆ ಮೂರು ಕಿಲೋ ಮೀಟರ್ ವರೆಗೂ ಕುಸಿತಗೊಂಡಿದೆ. ಕೊಡಗಿನ ಕೂಡಿಗೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೀರು ನುಗ್ಗಿದ್ದು, ಅಲ್ಲಿದ್ದ ವಸ್ತುಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಮಡಿಕೇರಿ ಬಳಿಯ ಮೊಣ್ಣಂಗೇರಿಯಲ್ಲಿ 50ಕ್ಕೂ ಹೆಚ್ಚು ಸಂತ್ರಸ್ತರನ್ನು ರಕ್ಷಿಸಲಾಗಿದೆ. ಶುಕ್ರವಾರ ಮಧ್ಯಾಹ್ನದಿಂದ ಮಳೆಯಲ್ಲಿ ನೆನೆಯುತ್ತಲೇ ಬೆಟ್ಟ ಹತ್ತಿ ಬಂದ ಸಂತ್ರಸ್ತರನ್ನು ರಾತ್ರಿ ವೇಳೆಗೆ ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಗುಡ್ಡ ಕುಸಿತದಿಂದ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿದೆ.

    ಗೋಣಿಕೋಪ್ಪ, ಶ್ರಿಮಂಗಲ ಕ್ಯಾಲಿಕಟ್ ಸಂಪರ್ಕ ಕಲ್ಪಿಸುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ಪೊಕಳತೊಡು ಎಂಬಲ್ಲಿ ರಸ್ತೆಗೆ ಕಟ್ಟಿದ ತಡೆಗೋಡೆ ಸಮೇತ ರಸ್ತೆ ಕುಸಿತವಾಗಿದೆ. ರಾಮ, ಲಕ್ಷ್ಮಣ ತೀರ್ಥ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಭಾರೀ ಮಳೆ ಹಿನ್ನೆಲೆ ಇಂದೂ ಕೂಡ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

    ಮಹಾಮಳೆಯಲ್ಲಿ ಸಿಲುಕಿದ್ದ 3 ಸಾವಿರ ಜನರನ್ನು ರಕ್ಷಿಸಲಾಗಿದೆ. ಇನ್ನೂ 600 ಮಂದಿಯ ರಕ್ಷಣೆಯಾಗಬೇಕಿದೆ, ಜಿಲ್ಲೆಯಲ್ಲಿ 31 ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ರಕ್ಷಣಾ ತಂಡಗಳಿಂದ ಭರದ ಕಾರ್ಯಾಚರಣೆ ನಡೀತಿದೆ ಅಂತ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.

    ಇಂದು ಸಿಎಂ ಕುಮಾರಸ್ವಾಮಿ ಕೊಡಗು ಜಿಲ್ಲೆಗೆ ಭೇಟಿ ನೀಡಿ ಪರಿಹಾರ ಕಾರ್ಯಾಚರಣೆ ಪರಿಶೀಲನೆ ನಡೆಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಕೊಡಗು ಜಿಲ್ಲೆಗೆ ತೆರಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಡಿಕೇರಿಯಲ್ಲಿ ಮಳೆಗೆ ಮೂರು ಸಾವು- ಇತ್ತ ಜಾರು ಬಂಡಿಯಂತೆ ಜಾರಿ ಹೋಯ್ತು ಕಟ್ಟಡ: ವಿಡಿಯೋ ನೋಡಿ

    ಮಡಿಕೇರಿಯಲ್ಲಿ ಮಳೆಗೆ ಮೂರು ಸಾವು- ಇತ್ತ ಜಾರು ಬಂಡಿಯಂತೆ ಜಾರಿ ಹೋಯ್ತು ಕಟ್ಟಡ: ವಿಡಿಯೋ ನೋಡಿ

    – ಹೆಲಿಕಾಪ್ಟರ್ ಮೂಲಕ ಸಂತ್ರಸ್ತರ ರಕ್ಷಣೆಗೆ ಯತ್ನ

    ಮಡಿಕೇರಿ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಡಿಕೇರಿಯ ಕಾಟಕೇರಿಯಲ್ಲಿ ಮನೆಮೇಲೆ ಗುಡ್ಡ ಕುಸಿದು ಮಣ್ಣಿನಲ್ಲಿ ಸಿಲುಕಿ ಮೂರು ಮಂದಿ ಸಾವನ್ನಪ್ಪಿದ್ದಾರೆ.

    ಕೆ.ಎಸ್.ಆರ್.ಪಿ ಪೊಲೀಸ್ ಸಿಬ್ಬಂದಿ ಯಶವಂತ್, ವೆಂಕಟರಮಣ ಮತ್ತು ಪವನ್ ಮೃತದುರ್ದೈವಿಗಳು. ಯಶವಂತ್ 3 ತಿಂಗಳಿನಿಂದ ಕೊಡಗು ಭಾಗಮಂಡಲ ಎ.ಎನ್.ಎಫ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮನೆಯ ಮೇಲೆ ಮಣ್ಣು ಕುಸಿದ ಹಿನ್ನೆಲೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

    ಗುಡ್ಡ ಕುಸಿತದಿಂದ ಮಳೆಗೆ ಮಡಿಕೇರಿಯ ಮಲ್ಲಿಕಾರ್ಜುನ ನಗರದಲ್ಲಿ ಹನೀಫ್ ಎಂಬವರ ಮನೆಯೊಂದು ಜಾರುಬಂಡಿಯಂತೆ ಜಾರಿ ಹೋಗಿದೆ. ಹಾರಂಗಿ ಜಲಾಶಯದಿಂದ 90 ಸಾವಿರ ಕ್ಯೂಸೆಕ್ ನೀರು ಹೊರಬಿಟ್ಟಿದ್ದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಬದಿಗೆರೆ ಎಂಬಲ್ಲಿ 300ಕ್ಕೂ ಹೆಚ್ಚು ಜನ ಮನೆಬಿಟ್ಟು ಗುಡ್ಡ ಹತ್ತಿದ್ದಾರೆ. ನಿರಂತರ ಮಳೆಯಿಂದಾಗಿ ಹಲವೆಡೆ ಭೂ ಕುಸಿತ ಉಂಟಾಗಿದ್ದು, ವಾಹನ ಸಂಚಾರ ಕಡಿತಗೊಂಡಿದೆ.

    ಮಳೆಯ ಅಬ್ಬರಕ್ಕೆ ಕೊಡಗು ಅಕ್ಷರಶಃ ತತ್ತರಿಸಿದೆ. ಪಟ್ಟಣಕ್ಕೆ ಪಟ್ಟಣಗಳೇ ಜಲಾವೃತವಾಗ್ತಿದ್ದು, ಮನೆಗಳಿಗೆ ನೀರು ನುಗ್ಗಿ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಮಳೆಯ ಅಬ್ಬರಕ್ಕೆ ಗುಡ್ಡ ಕುಸಿತ, ಸೇತುವೆ ಮೇಲೆ ನೀರು, ರಸ್ತೆ ಕುಸಿದಂತಹ ದುರ್ಘಟನೆಗಳು ಹೆಚ್ಚಾಗ್ತಿದ್ದು, ಕೊಡಗು ಜಿಲ್ಲೆ ಹೊರಜಗತ್ತಿನ ಸಂಪರ್ಕ ಕಳೆದುಕೊಳ್ಳುತ್ತಿದೆ.

    ರಾಮ, ಲಕ್ಷ್ಮಣ ತೀರ್ಥ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಭಗಂಡೇಶ್ವರ ಕ್ಷೇತ್ರ ಮತ್ತೊಮ್ಮೆ ಜಲಾವೃತಗೊಂಡಿದೆ. ಸಂತ್ರಸ್ತರನ್ನು ಸೇನಾ ಹೆಲಿಕಾಪ್ಟರ್‍ನಲ್ಲಿ ರಕ್ಷಣೆ ಮಾಡಲಾಗುತ್ತಿದೆ. ಕರ್ನಾಟಕದಲ್ಲೂ ಮಳೆಯಬ್ಬರ ಸದ್ಯಕ್ಕೆ ನಿಲ್ಲೋ ರೀತಿ ಕಾಣಿಸುತ್ತಿಲ್ಲ. ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಇವತ್ತು ಮತ್ತು ಶುಕ್ರವಾರ ರೈನ್ ರೆಡ್ ಅಲರ್ಟ್ ಘೋಷಿಸಲಾಗಿದೆ.