Tag: ಅಣ್ಣಾ ಡಿಎಂಕೆ

  • ಜಯಲಲಿತಾ ಸಮಾಧಿಗೆ ತೆರಳಿದ ಚಿನ್ನಮ್ಮ- ಮತ್ತೆ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ?

    ಜಯಲಲಿತಾ ಸಮಾಧಿಗೆ ತೆರಳಿದ ಚಿನ್ನಮ್ಮ- ಮತ್ತೆ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ?

    ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಸಮಾಧಿ ಸ್ಥಳಕ್ಕೆ ಅವರ ಆಪ್ತೆ ವಿ.ಕೆ ಶಶಿಕಲಾ ಇಂದು ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದ್ದಾರೆ. ಈ ನಡೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಇದೀಗ ಮತ್ತೆ ಅವರು ಸಕ್ರಿಯ ರಾಜಕಾರಣಕ್ಕೆ ಬರಲು ಸಿದ್ಧರಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

    ತಮಿಳುನಾಡಿನ ಅಮ್ಮ ಎಂದೇ ಖ್ಯಾತರಾಗಿದ್ದ ಜಯಲಲಿತಾ ಅವರ ನಿಧನದ ಬಳಿಕ ಶಶಿಕಲಾ ಅಕ್ರಮ ಆಸ್ತಿ ಸಂಬಂಧಿಸಿದ ಕೇಸ್‍ನಲ್ಲಿ 4 ವರ್ಷ ಜೈಲು ವಾಸ ಅನುಭವಿಸಿ ಹೊರ ಬಂದಿದ್ದರು. ಬಳಿಕ ರಾಜಕೀಯದಿಂದ ದೂರ ಉಳಿದಿದ್ದ ಚಿನ್ನಮ್ಮ ಇದೀಗ ಮತ್ತೆ ರಾಜಕೀಯದತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಜಯಲಲಿತಾ ಅವರ ಸಮಾಧಿ ಸ್ಥಳಕ್ಕೆ ತೆರಳಿದ ಚಿನ್ನಮ್ಮ ಪೂಜೆ ಸಲ್ಲಿಸಿ ತಮ್ಮ ರಾಜಕೀಯ ಮರು ಪ್ರವೇಶದ ಬಗ್ಗೆ ಒಂದು ಸ್ಪಷ್ಟ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮಾತು ಆಪ್ತ ವಲಯದಿಂದ ಕೇಳಿ ಬಂದಿದೆ. ಇದನ್ನೂ ಓದಿ: ನಾಲ್ಕು ವರ್ಷ ಜೈಲು ಶಿಕ್ಷೆ ಪೂರ್ಣ – ಜೈಲಿನಿಂದ ಶಶಿಕಲಾ ಬಿಡುಗಡೆ

    ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಅಣ್ಣಾ ಡಿಎಂಕೆ ಪಕ್ಷ ಸ್ಥಾಪನೆಗೊಂಡು ಅಕ್ಟೋಬರ್ 17ಕ್ಕೆ 50 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ರಾಜ್ಯಾದ್ಯಂತ ಸಂಸ್ಥಾಪನಾ ದಿನ ಆಚರಣೆ ಮಾಡಲು ತಯಾರಿ ನಡೆಸಿದ್ದು, ಇದೇ ದಿನ ಚಿನ್ನಮ್ಮ ಶುಭ ಸುದ್ದಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಅದಲ್ಲದೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಣ್ಣಾ ಡಿಎಂಕೆ ಪಕ್ಷ ಕಂಡ ಸೋಲಿನ ಬಳಿಕ ಮತ್ತೆ ಪಕ್ಷವನ್ನು ಬಲಗೊಳಿಸಲು ಚಿನ್ನಮ್ಮ ಮುಂದಾಗಿದ್ದಾರೆ. ಈ ನಡುವೆ ಇಂದು ಚಿನ್ನಮ್ಮ ತಮ್ಮ ಬೆಂಬಲಿಗರೊಂದಿಗೆ ಸೇರಿ ಮರೀನಾ ಬೀಚ್ ನಲ್ಲಿರುವ ಜಯಲಲಿತಾ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಜಯಲಲಿತಾರನ್ನು ನೆನೆದು ಶಶಿಕಲಾ ಭಾವುಕರಾದರು. ಇದನ್ನೂ ಓದಿ: ತವರಿನತ್ತ ಹೊರಟ ಮನ್ನಾರ್ ಗುಡಿ ಚಿನ್ನಮ್ಮ ಶಶಿಕಲಾ ನಟರಾಜನ್

  • ವಿಧಾನಸಭೆಯಲ್ಲಿ ಇಂದೇ ವಿಶ್ವಾಸಮತ ಯಾಚನೆ – ರೆಸಾರ್ಟ್‍ನಲ್ಲೇ ಬೀಡುಬಿಟ್ಟ ಸಿಎಂ ಪಳನಿಸ್ವಾಮಿ

    ವಿಧಾನಸಭೆಯಲ್ಲಿ ಇಂದೇ ವಿಶ್ವಾಸಮತ ಯಾಚನೆ – ರೆಸಾರ್ಟ್‍ನಲ್ಲೇ ಬೀಡುಬಿಟ್ಟ ಸಿಎಂ ಪಳನಿಸ್ವಾಮಿ

    ಚೆನ್ನೈ: ತಮಿಳುನಾಡು ರಾಜಕೀಯ ಬೆಳವಣಿಗೆಯಲ್ಲಿ ಗುರುವಾರ ಸಿಎಂ ಪಟ್ಟಕ್ಕೇರಿರೋ ಪಳನಿಸ್ವಾಮಿಗೆ ಇಂದು ಅಗ್ನಿಪರೀಕ್ಷೆ ಎದುರಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಪಳನಿಸ್ವಾಮಿ ಬಹುಮತ ಸಾಬೀತು ಪಡಿಸಬೇಕಿದೆ. ಹೀಗಾಗಿ ಪಳನಿಸ್ವಾಮಿ ಬಣದ ಶಾಸಕರು ರೆಸಾರ್ಟ್‍ನಲ್ಲಿ ಬೀಡುಬಿಟ್ಟಿದ್ದಾರೆ.

    ಸಂಖ್ಯಾ ಬಲ ಈಗ ಅತಿಮುಖ್ಯವಾಗಿರುವ ಕಾರಣ ಕುದುರೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಪಳನಿಸ್ವಾಮಿ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಪಳನಿಸ್ವಾಮಿ ಬಳಿ 123 ಶಾಸಕರ ಬೆಂಬಲ ಇದೆ ಅಂತ ಹೇಳಲಾಗ್ತಿದೆ. ನಿನ್ನೆಯಷ್ಟೇ ಶಾಸಕ ಮೈಲಾಪುರ ಶಾಸಕ ನಟರಾಜನ್, ಸಿಎಂ ಪಳನಿಸ್ವಾಮಿ ಕ್ಯಾಂಪ್ ತೊರೆದು ಸೆಲ್ವಂ ಬಣ ಸೇರಿದ್ದಾರೆ. ಇನ್ನೂ 30 ಮಂದಿ ಸೆಲ್ವಂಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.

    ಇದೇ ಏನಾದ್ರೂ ನಿಜವಾದಲ್ಲಿ ವಿಶ್ವಾಸ ಮತಯಾಚನೆಯಲ್ಲಿ ಪಳನಿಸ್ವಾಮಿಗೆ ಸೋಲುಂಟಾಗೋದು ಖಚಿತ. ಈ ನಡುವೆ, ವಿಶ್ವಾಸಯಾಚನೆ ವಿರುದ್ಧ ಮತ ಚಲಾಯಿಸಿ ಅಮ್ಮನಿಗೆ ನಿಷ್ಠೆ ತೋರಿಸಬೇಕೆಂದು ಪನ್ನೀರ್ ಸೆಲ್ವಂ ಶಾಸಕರಿಗೆ ಕರೆ ನೀಡಿದ್ದಾರೆ. ಕುಟುಂಬ ರಾಜಕಾರಣಕ್ಕೆ ಜಯಾ ವಿರೋಧಿ.. ಈಗ ನೀವೂ ವಿರೋಧಿಸಿ ಎನ್ನುತ್ತಿದ್ದಾರೆ. ಈ ನಡುವೆ, ಪಳನಿಸ್ವಾಮಿಗೆ ವಿರುದ್ಧ ಮತ ಹಾಕಲು ಡಿಎಂಕೆ ನಿರ್ಧರಿಸಿದೆ. ಆದ್ರೆ, ಕಾಂಗ್ರೆಸ್ ಮಾತ್ರ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಹೈಕಮಾಂಡ್ ಆದೇಶಕ್ಕೆ ಬದ್ಧ ಎಂದಿದೆ.

    ಇಂದು ಬಹುಮತ ಸಾಬೀತು ಮಾಡಬೇಕಿರುವ ಬೆನ್ನಲ್ಲೇ ಅಣ್ಣಾ ಡಿಎಂಕೆಯಿಂದ ಸಿಎಂ ಪಳನಿಸ್ವಾಮಿ, ಶಶಿಕಲಾ ಸಂಬಂಧಿಗಳಾದ ದಿನಕರನ್, ವೆಂಕಟೇಶನ್ ಸೇರಿದಂತೆ 16 ಮಂದಿಯನ್ನು ಪನ್ನೀರ್ ಸೆಲ್ವಂ ಬಣ ಪಕ್ಷದಿಂದ ಉಚ್ಛಾಟಿಸಿದೆ. ಅಲ್ಲದೆ, ಸೆಲ್ವಂ ಬಣದ ಕೆಲ ಶಾಸಕರು ಸ್ಪೀಕರ್ ಭೇಟಿಯಾಗಿ ಮಾತುಕತೆ ನಡೆಸಿ ರಹಸ್ಯ ಮತದಾನಕ್ಕೆ ಒತ್ತಾಯಿಸಿದ್ದಾರೆ. ಇನ್ನು ನಿನ್ನೆ ತಮಿಳುನಾಡು ಸಿಎಂ ಪಳನಿಸ್ವಾಮಿ ಮತ್ತು ಸಚಿವರ ತಂಡ ಇವತ್ತು ಪರಪ್ಪನ ಅಗ್ರಹಾರಕ್ಕೆ ಭೇಟಿಕೊಟ್ಟು ಶಶಿಕಲಾರನ್ನ ಭೇಟಿಯಾಗ್ಬೇಕಿತ್ತು. ಆದ್ರೆ ಯಾವ ಸಚಿವರು ಜೈಲಿಗೆ ಭೇಟಿ ಕೊಡ್ಲಿಲ್ಲ. ಇಂದು ಸದನದಲ್ಲಿ ಬಹುಮತ ಸಾಬೀತುಪಡಿಸಿ, ಸಿಹಿಸುದ್ದಿ ಜೊತೆ ಬರೋದಕ್ಕೆ ಪಳಿನಿಸ್ವಾಮಿ ಕಾಯ್ತಿದ್ದಾರೆ. ಈ ಮಧ್ಯೆ ಜೈಲಲ್ಲಿರೋ ಶಶಿಕಲಾ ಪಳಿನಿಸ್ವಾಮಿಯವ್ರು ಬಂದಾಗ ಚರ್ಚೆ ಮಾಡೋದಕ್ಕೆ ವಿಶೇಷವಾದ ಕೊಠಡಿ ನೀಡಿ ಅಂತ ಮನವಿ ಮಾಡಿದ್ದಾರೆ. ಆದ್ರೆ ಪೊಲೀಸರು ಇನ್ನು ನಿರ್ಧಾರ ಮಾಡಿಲ್ಲ.