Tag: ಅಣೆಕಟ್ಟು

  • ಕೀನ್ಯಾದಲ್ಲಿ ಭಾರತೀಯ ನಿರ್ಮಿಸಿದ್ದ ಡ್ಯಾಮ್ ಒಡೆದು 47 ಜನ ಸಾವು

    ಕೀನ್ಯಾದಲ್ಲಿ ಭಾರತೀಯ ನಿರ್ಮಿಸಿದ್ದ ಡ್ಯಾಮ್ ಒಡೆದು 47 ಜನ ಸಾವು

    ನೈರೋಬಿ: ಕೀನ್ಯಾದ ರಿಫ್ಟ್ ವ್ಯಾಲಿಯ ಸೊಲೈ ಪಟ್ಟಣದ ಬಳಿ ಭಾರತೀಯ ಮೂಲದ ಮನ್ಸೂಕಲ್ ಪಟೇಲ್ ನಿರ್ಮಿಸಿದ್ದ ಅಣೆಕಟ್ಟು ಒಡೆದು 47 ಮಂದಿ ಮೃತಪಟ್ಟಿದ್ದಾರೆ.

    ಮನ್ಸೂಕಲ್ ಪಟೇಲ್ ಅವರ ಒಡೆತನದ ಮೂರು ಜಲಾಶಯಗಳಲ್ಲಿ ಇದು ಒಂದಾಗಿದೆ. ಈ ಜಲಾಶಯದ ನೀರನ್ನು ಮೀನುಗಾರಿಕೆ ಹಾಗೂ ಕೃಷಿಗಾಗಿ ಬಳಸಲಾಗುತ್ತಿತ್ತು. ಕೀನ್ಯಾದಿಂದ ಯುರೋಪ್‍ಗೆ ಹೆಚ್ಚಿನ ಪ್ರಮಾಣದಲ್ಲಿ ಹೂವುಗಳು ರಫ್ತಾಗುತ್ತಿತ್ತು. ಅಲ್ಲದೇ ಪಟೇಲ್ ಅವರು ಜರ್ಮನಿ ಹಾಗೂ ನೆದರ್ಲೆಂಡ್‍ಗೆ ಹೂವುಗಳನ್ನು ರಫ್ತು ಮಾಡುತ್ತಿದ್ದರು ಎನ್ನಲಾಗುತ್ತಿದೆ.

    ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಡ್ಯಾಮ್ ಒಡೆದಿದ್ದು, ನೀರು ಹಾಗೂ ಕೆಸರು ಸಮೀಪದ ಎರಡು ಹಳ್ಳಿಗಳಿಗೆ ನುಗ್ಗಿದೆ. ಹೀಗಾಗಿ ಅಲ್ಲಿನ ನೂರಾರು ಮನೆಗಳು ಹಾನಿಯಾಗಿವೆ. ಅಲ್ಲದೇ ವಿದ್ಯುತ್ ವ್ಯತ್ಯಯವಾಗಿದ್ದು, ನೀರಿನಲ್ಲಿ ಕಾಣೆಯಾದ ವ್ಯಕ್ತಿಗಳಿಗಾಗಿ ಹುಡುಕಾಟ ನಡೆದಿದೆ. 47 ಜನರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದ್ದು, ಇನ್ನೂ ಅನೇಕ ಜನರು ಕಾಣೆಯಾಗಿದ್ದಾರೆ.

    ಕೀನ್ಯಾ ರೆಡ್ ಕ್ರಾಸ್ ಮತ್ತು ನಾಯಕರು, ದೇಶದ ವಿಪತ್ತು ನಿರ್ವಹಣಾ ತಂಡ ಗುರುವಾರ ಬೆಳಿಗ್ಗೆಯಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ರೋಂಗೈ ಪೊಲೀಸ್ ಮುಖ್ಯಸ್ಥ ಜೋಸೆಫ್ ಕಿಯಾಕೊ ತಿಳಿಸಿದ್ದಾರೆ.

    36ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು ಎರಡು ಕಿ.ಮೀ. ವಿಸ್ತೀರ್ಣದವೆರೆಗೆ ನೀರು ಆವರಿಸಿದ್ದು, ಅಲ್ಲಿನ ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಾರ್ಚ್‍ನಿಂದ ಇಲ್ಲಿಯವರೆಗೂ ಕೀನ್ಯಾದಲ್ಲಿ ನಡೆದ ಪ್ರವಾಹ ಮತ್ತು ಜಲ ಸಂಬಂಧಿ ದುರಂತದಲ್ಲಿ 170 ಮಂದಿ ಮೃತಪಟ್ಟಿದ್ದಾರೆ. ಪ್ರವಾಹದ ಹಿನ್ನೆಲೆಯಲ್ಲಿ 2,25,436 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಸೇನಾ ಹೆಲಿಕಾಪ್ಟರ್‍ಗಳು ಮತ್ತು ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಕೀನ್ಯಾ ಸರಕಾರ ತಿಳಿಸಿದೆ.

    ಸಂತ್ರಸ್ತರಿಗೆ 4 ಮಿಲಿಯನ್ ಯುರೋಗಳನ್ನು ಪರಿಹಾರವಾಗಿ ನೀಡಬೇಕು ಎಂದು ರೆಡ್ ಕ್ರಾಸ್ ಸಂಸ್ಥೆ ಮನವಿ ಮಾಡಿದೆ.

  • ಕೆಆರ್‍ಎಸ್‍ನಲ್ಲಿ 2 ವರ್ಷದ ನಂತರ ಗರಿಷ್ಟ ಮಟ್ಟ ತಲುಪಿದ ನೀರಿನ ಮಟ್ಟ

    ಕೆಆರ್‍ಎಸ್‍ನಲ್ಲಿ 2 ವರ್ಷದ ನಂತರ ಗರಿಷ್ಟ ಮಟ್ಟ ತಲುಪಿದ ನೀರಿನ ಮಟ್ಟ

    ಮಂಡ್ಯ: ಸತತವಾಗಿ ಸುರಿಯುತ್ತಿರುವ ಮಳೆಯಿಂದ ಎರಡು ವರ್ಷದ ನಂತರ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‍ಎಸ್ ಜಲಾಶಯದಲ್ಲಿ ನೀರಿನಮಟ್ಟ 113 ಅಡಿಗೆ ಏರಿಕೆಯಾಗಿದೆ.

    124 ಅಡಿ ಗರಿಷ್ಟ ನೀರು ಸಂಗ್ರಹ ಸಾಮರ್ಥ್ಯ ಇರುವ ಡ್ಯಾಂನಲ್ಲಿ ಪ್ರಸ್ತುತ ಸೋಮವಾರ 113.32 ಅಡಿ ನೀರು ಸಂಗ್ರಹವಾಗಿದೆ. ಕೆಆರ್‍ಎಸ್ ಡ್ಯಾಂನ ಇಂದಿನ ಒಳಹರಿವಿನ ಪ್ರಮಾಣ 5183 ಕ್ಯೂಸೆಕ್ ಇದ್ದು, 574 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ.

    2013 ಮತ್ತು 2014ರ ಆಗಸ್ಟ್ ನಲ್ಲಿ ಡ್ಯಾಂನಲ್ಲಿ ಗರಿಷ್ಠ ಅಂದರೆ 124.80 ಅಡಿ ನೀರಿನ ಸಂಗ್ರಹವಾಗುವ ಮೂಲಕ ಡ್ಯಾಂ ಭರ್ತಿಯಾಗಿತ್ತು. 2015ರ ನವೆಂಬರ್ ನಲ್ಲಿ 110.87 ಅಡಿ ಸಂಗ್ರಹವಾಗಿದ್ದೇ ಗರಿಷ್ಠ ಪ್ರಮಾಣವಾಗಿತ್ತು. 2016ರ ಜುಲೈನಲ್ಲಿ 99.65 ಅಡಿ ನೀರಿನ ಸಂಗ್ರಹವೇ ಗರಿಷ್ಠ ಮಟ್ಟದಾಗಿತ್ತು.

    ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

     

     

  • ರಾಜ್ಯದಲ್ಲಿ ಮುಂದುವರಿದ ಮಳೆಯ ಅಬ್ಬರ- ವಿರಾಜಪೇಟೆಯಲ್ಲಿ ಕರ್ನಾಟಕ-ಕೇರಳ ಸಂಪರ್ಕ ರಸ್ತೆ ಕಟ್

    ರಾಜ್ಯದಲ್ಲಿ ಮುಂದುವರಿದ ಮಳೆಯ ಅಬ್ಬರ- ವಿರಾಜಪೇಟೆಯಲ್ಲಿ ಕರ್ನಾಟಕ-ಕೇರಳ ಸಂಪರ್ಕ ರಸ್ತೆ ಕಟ್

    ಬೆಂಗಳೂರು: ರಾಜ್ಯದ ಹಲವೆಡೆ ಮಳೆಯ ಅಬ್ಬರ ಮುಂದುವರೆದಿದೆ. ಮಡಿಕೇರಿಯ ಕಾವೇರಿ ನದಿಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಹಳ್ಳ-ಕೊಳ್ಳ ನದಿ ತೊರೆಗಳು ಹರಿಯುವ ತಟಗಳಲ್ಲಿರುವ ಗದ್ದೆ-ತೋಟಗಳಿಗೆ ನೀರು ನುಗ್ಗಿದೆ. ಕರ್ನಾಟಕ-ಕೇರಳ ಸಂಪರ್ಕ ಕಲ್ಪಿಸುವ ವಿರಾಜಪೇಟೆ ತಾಲೂಕಿನ ಪೆರುಂಬಾಡಿ ಬಳಿ ರಸ್ತೆಯೇ ಕುಸಿದು ಸಂಪರ್ಕ ಕಡಿತಗೊಂಡಿದೆ. ತಾತ್ಕಾಲಿಕವಾಗಿ ರಸ್ತೆ ರಿಪೇರಿ ಕೆಲಸ ನಡೆಯುತ್ತಿದೆ.

    ಮಹಾರಾಷ್ಟ್ರದಲ್ಲಿ ಭೀಕರ ಮಳೆಯಾಗುತ್ತಿದ್ದು ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ದಿನಗಳಿಂದ ರಾಯಭಾಗ ಹಾಗೂ ಅಥಣಿ ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ. 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಬಿಡಲಾಗ್ತಿದೆ. ದೂದಗಂಗಾ, ವೇದಗಂಗಾ ಕೃಷ್ಣಾ ನದಿ ಮೇಲಿರುವ ಕೆಳ ಹಂತದ 6 ಸೇತುವೆಗಳು ಜಲಾವೃತಗೊಂಡಿವೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನದಿ ಪಾತ್ರದಲ್ಲಿ ಜನರ ಸಂಚಾರ ಅಸ್ತವ್ಯಸ್ಥವಾಗಿದೆ. ಪ್ರವಾಹದ ಆತಂಕವಿಲ್ಲ, 2 ಲಕ್ಷ ಕ್ಯೂಸೆಕ್ ಮೇಲೆ ನೀರು ಬಂದರೆ ಮಾತ್ರ ಸಮಸ್ಯೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

    ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಮಳೆ ಸ್ವಲ್ಪಮಟ್ಟಿಗೆ ತಗ್ಗಿದೆ. ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಕಳಸ, ಕುದುರೆಮುಖದಲ್ಲಿ ಮಳೆಯಾಗ್ತಿದ್ದು, ತುಂಬಾ, ಭದ್ರಾ ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ.

     

  • ಕೆಆರ್‍ಎಸ್ ಅಣೆಕಟ್ಟೆಯ ಪುನಶ್ಚೇತನ ಕಾಮಗಾರಿಗಾಗಿ ಉತ್ಕೃಷ್ಟ ಪ್ರಶಸ್ತಿ

    ಕೆಆರ್‍ಎಸ್ ಅಣೆಕಟ್ಟೆಯ ಪುನಶ್ಚೇತನ ಕಾಮಗಾರಿಗಾಗಿ ಉತ್ಕೃಷ್ಟ ಪ್ರಶಸ್ತಿ

    ಮಂಡ್ಯ: ವಿಶ್ವಪ್ರಸಿದ್ಧ ಕೆಆರ್‍ಎಸ್ ಅಣೆಕಟ್ಟೆಯಲ್ಲಿ ನಡೆದಿದ್ದ ಪುನಶ್ಚೇತನ ಕಾಮಗಾರಿಗೆ ಇದೀಗ ಉತ್ಕೃಷ್ಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

    84 ವರ್ಷ ಹಳೆಯ 2.6 ಕಿ.ಮೀ ಉದ್ದದ ಕಟ್ಟೆಯಲ್ಲಿ ನೀರಿನ ಸೆಳೆತದಿಂದಾಗಿ ಗಾರೆಗೆ ಬಳಸಿದ್ದ ಮಣ್ಣು ಕಸಿದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಭದ್ರತೆ ದೃಷ್ಟಿಯಿಂದ ತಜ್ಞರ ಸಲಹೆ ಮೇರೆಗೆ ಪುನಶ್ಚೇತನ ಕಾಮಗಾರಿ ಮಾಡಲಾಯಿತು.

    ವಿಶ್ವಬ್ಯಾಂಕ್ ನಿಂದ 36.6 ಕೋಟಿ ರೂಪಾಯಿ ಸಾಲ ಪಡೆದು 2016ರ ಜುಲೈನಲ್ಲಿ ಪುನಶ್ಚೇತನ ಕಾಮಗಾರಿ ಕೈಗೊಳ್ಳಲಾಯಿತು. 2017ರ ಮಾರ್ಚ್ ನಲ್ಲಿ ಕಾಮಗಾರಿ ಪೂರ್ಣಗೊಳಿಸಲಾಯಿತು. ಮಧ್ಯಪ್ರದೇಶ ಮೂಲದ ಕಂಪನಿಯೊಂದು ಈ ಕಾಮಗಾರಿಗೆ ಪುನಶ್ಚೇತನದ ಗುತ್ತಿಗೆ ಪಡೆದಿತ್ತು. ಕಾಮಗಾರಿ ನಡೆಯುವ ವೇಳೆ ಮತ್ತು ನಂತರ ವಿಶ್ವಬ್ಯಾಂಕ್, ಡಿಆರ್‍ಐಪಿ ಅಧಿಕಾರಿಗಳು ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸಿದ್ರು. ಕಾಮಗಾರಿಯ ಗುಣಮಟ್ಟ ಉತ್ತಮವಾಗಿ ನಡೆದಿರೋ ಹಿನ್ನೆಲೆಯಲ್ಲಿ “ಉತ್ಕೃಷ್ಟ ಪುನಶ್ಚೇತನ” ಪ್ರಶಸ್ತಿ ನೀಡಲಾಗಿದೆ.

    ಮೇ 30ರಂದು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್ ಪ್ರಭಾಕರ್, ರಾಜ್ಯ ಅಣೆಕಟ್ಟೆ ಪುನಶ್ಚೇತನ ಕಾಮಗಾರಿ ನಿದೇರ್ಶಕ ಮಾಧವ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ.

  • ಶುರುವಾಗಲಿದೆ ಕುಡಿಯೋ ನೀರಿಗೂ ಹಾಹಾಕಾರ: ಕೆಆರ್‍ಎಸ್‍ನಲ್ಲಿ ನೀರಿನ ಪ್ರಮಾಣ ಎಷ್ಟಿದೆ ಗೊತ್ತೆ?

    ಶುರುವಾಗಲಿದೆ ಕುಡಿಯೋ ನೀರಿಗೂ ಹಾಹಾಕಾರ: ಕೆಆರ್‍ಎಸ್‍ನಲ್ಲಿ ನೀರಿನ ಪ್ರಮಾಣ ಎಷ್ಟಿದೆ ಗೊತ್ತೆ?

    ಮಂಡ್ಯ: ಕೆಆರ್‍ಎಸ್ ಅಣೆಕಟ್ಟೆಯಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕುಸಿಯುತ್ತಿದ್ದು ಕುಡಿಯೋ ನೀರಿಗೂ ಆತಂಕ ಶುರುವಾಗಿದೆ. 124.80 ಅಡಿ ಗರಿಷ್ಟ ಸಾಮರ್ಥ್ಯದ ಅಣೆಕಟ್ಟಿನಲ್ಲಿ ಈಗ ಕೇವಲ 78.30 ಅಡಿ ನೀರಿದೆ. ಅಂದ್ರೆ ಅಣೆಕಟ್ಟಿನಲ್ಲಿ ಕೇವಲ 10.5 ಟಿಎಂಸಿಯಷ್ಟು ಮಾತ್ರ ನೀರಿನ ಸಂಗ್ರಹವಿದೆ.

    ಅದರಲ್ಲಿ 4.45 ಟಿಎಂಸಿ ಡೆಡ್ ಸ್ಟೋರೆಜ್ ಆಗಿದ್ದು ಸುಮಾರು 5.5 ಟಿಎಂಸಿ ನೀರನ್ನಷ್ಟೇ ಬಳಸಬಹುದಾಗಿದೆ. ಈಗಿರುವ ನೀರನ್ನ ಕೇವಲ ಕುಡಿಯೋ ನೀರಿಗಷ್ಟೇ ಬಳಕೆ ಮಾಡಲಾಗುತ್ತಿದ್ದು, ವ್ಯವಸಾಯಕ್ಕೆ ನೀರು ನೀಡುತ್ತಿಲ್ಲ. ಇದ್ರಿಂದ ರೈತರೂ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಬೆಂಗಳೂರು, ಮಂಡ್ಯ, ಮೈಸೂರು ಭಾಗದ ಜನರಿಗೆ ಏಪ್ರಿಲ್ ವರೆಗೆ ಹರಸಾಹಸ ಮಾಡಿ ಕುಡಿಯೋ ನೀರಿನ ಪೂರೈಕೆ ಮಾಡಬಹುದು. ಆ ನಂತ್ರವೂ ಮಳೆಯಾಗದಿದ್ರೆ ಕುಡಿಯೋ ನೀರಿಗೆ ಹಾಹಾಕಾರ ಶುರುವಾಗಲಿದೆ. ಒಂದು ವೇಳೆ ಅಣೆಕಟ್ಟೆಯಿಂದ ಡೆಡ್ ಸ್ಟೋರೇಜ್ ನೀರನ್ನು ತೆಗೆದಿದ್ದೆ ಆದ್ರೆ ಜಲಚರ ಜೀವಿಗಳಿಗೆ ತೊಂದರೆ ಎದುರಾಗಲಿದೆ. ಮಂಡ್ಯದ ಹಲವು ಹಳ್ಳಿಗಳಲ್ಲೂ ಈಗಾಗಲೇ ನೀರಿನ ಸಮಸ್ಯೆ ಶುರುವಾಗಿದ್ದು ಜನ, ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿವೆ.

    ಕೆಆರ್‍ಎಸ್ ನೀರಿನ ಮಟ್ಟದ ವಿವರ ಇಂತಿದೆ:
    ಗರಿಷ್ಟ 124.80 ಅಡಿ
    ಇಂದಿನ ಮಟ್ಟ 78.30 ಅಡಿ
    ಒಳ ಹರಿವು 105 ಕ್ಯೂಸೆಕ್
    ಹೊರ ಹರಿವು 242 ಕ್ಯೂಸೆಕ್

     

  • ಕೆಆರ್‍ಎಸ್‍ಗೆ ಎದುರಾಗಿದೆ ಕಂಟಕ – ಡ್ಯಾಮ್ ಬುಡದಲ್ಲೇ ಸಿಡಿಯಲಿದೆ ಡೈನಾಮೈಟ್

    – ಸರ್ಕಾರಿ ಯೋಜನೆಗೆ ಮಂಡ್ಯ ಜನರ ಕಿಡಿ

    ಮಂಡ್ಯ: ವಿಶ್ವಪ್ರಸಿದ್ಧ ಕೆಆರ್‍ಎಸ್ ಅಣೆಕಟ್ಟೆಗೆ ಗಂಡಾಂತರ ಎದುರಾಗಿದೆ. ಡ್ಯಾಮ್ ಸಮೀಪವೇ ರಾಜ್ಯ ಸರ್ಕಾರ ಹೊಸ ಯೋಜನೆ ಕೈಗೆತ್ತಿಕೊಂಡಿರೋದೇ ಇದಕ್ಕೆ ಕಾರಣ. ಸರ್ಕಾರದ ಈ ನಿರ್ಧಾರದಿಂದ ರೈತರು ಮತ್ತು ಪ್ರಾಣಿ, ಪಕ್ಷಿ ಸಂಕುಲಕ್ಕೂ ಕಂಟಕ ಎದುರಾಗಿದೆ.

    ಕೃಷ್ಣರಾಜಸಾಗರ ಅಣೆಕಟ್ಟೆ ಸಮೀಪದ ಎಡಮುರಿಯಲ್ಲಿ 0.5 ಮೆಗಾವ್ಯಾಟ್ ಕಿರು ವಿದ್ಯುತ್ ಉತ್ಪಾದನಾ ಯೋಜನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದಕ್ಕಾಗಿ ಬೆಂಗಳೂರಿನ ವಿ ಫ್ರಾಮ್ ಅನ್ನೋ ಖಾಸಗಿ ಕಂಪನಿ ಗುತ್ತಿಗೆ ಪಡೆದಿದೆ. ಹೀಗಾಗಿ ಗುತ್ತಿಗೆ ಪಡೆದ ಖಾಸಗಿ ಕಂಪನಿ ಬಂಡೆಗಳನ್ನ ಸ್ಫೋಟಿಸಲು ಡೈನಾಮೈಟ್ ಬಳಸ್ತಿದೆ. ಡೈನಾಮೈಟ್ ಬ್ಲಾಸ್ಟ್ ಆಗೋ ಜಾಗದಿಂದ ಕೆಲವೇ ದೂರಗಳಲ್ಲಿ ಕೆಆರ್‍ಎಸ್ ಡ್ಯಾಮ್ ಇದೆ. ಜೊತೆಗೆ ಪಕ್ಕದಲ್ಲೇ ಇರೋ ಸಿಡಿಎಸ್, ವಿರಿಜಾ, ದೇವರಾಯ ನಾಲೆಗಳಿಗೂ ಅಪಾಯ ಎದುರಾಗಿದೆ.

    ಗುತ್ತಿಗೆ ಅವಧಿ 2015ಕ್ಕೆ ಮುಗಿದಿದ್ರೂ ಈಗ ಯೋಜನೆ ಪ್ರಾರಂಭಿಸಿದೆ. ಇನ್ನು ಡ್ಯಾಂನಿಂದ ನಾಲೆಗಳಿಗೆ ಹರಿಯುವ ನೀರಿನ ದಿಕ್ಕನ್ನೇ ಬದಲಾಯಿಸಿದೆ. ನೀರಿನ ಮಧ್ಯದಲ್ಲೇ ಬಂಡೆ ಹಾಕಿರೋ ಕಾರಣ ನಾಲೆಗೆ ನೀರು ಹರಿಯುತ್ತಿಲ್ಲ. ಅವೈಜ್ಞಾನಿಕ ಯೋಜನೆಯಿಂದಾಗಿ ಜಾನುವಾರುಗಳಿಗೆ ಕುಡಿಯಲು ನೀರು ಸಿಗದಂತಾಗಿದೆ. ಜೊತೆಗೆ ರೈತರು ತಮ್ಮ ಜಮೀನು, ತೋಟಗಳಿಗೆ ಹೋಗಲು ಕಷ್ಟಪಡ್ತಿದ್ದಾರೆ.

    ಒಟ್ಟಾರೆ, ವಿದ್ಯುತ್ ಉತ್ಪಾದನೆಗೆಂದು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಯೋಜನೆಯಿಂದ ಜನರಿಗೆ ಅನುಕೂಲವಾಗೋ ಬದಲು ಅನಾನುಕೂಲವಾಗ್ತಿದೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.