Tag: ಅಣೆಕಟ್ಟು

  • ಡೆಡ್ ಸ್ಟೋರೇಜ್ ತಲುಪಿದ ತುಂಗಭದ್ರಾ ಜಲಾಶಯ!

    ಡೆಡ್ ಸ್ಟೋರೇಜ್ ತಲುಪಿದ ತುಂಗಭದ್ರಾ ಜಲಾಶಯ!

    ಕೊಪ್ಪಳ: ತಾಲೂಕಿನ ಮುನಿರಾಬಾದ್ ಬಳಿ ತುಂಗಭದ್ರಾ ನದಿಗೆ (TungaBhadra River) ಅಡ್ಡಲಾಗಿ ತುಂಗಭದ್ರಾ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ಇದೀಗ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಡೆಡ್ ಸ್ಟೋರೇಜ್ ತಲುಪಿದೆ.

    ತುಂಗಭದ್ರಾ ಜಲಾಶಯದ ನೀರಿನ ಮೇಲೆಯೇ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಹಕ್ಕಿದ್ದು, ಈ ಡ್ಯಾಂನಲ್ಲಿರುವ ನೀರು, ರಾಜ್ಯದ ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳು ಮತ್ತು ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಅನೇಕ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ಕೃಷಿಗೆ ಪ್ರಮುಖ ನೀರಿನ ಮೂಲವಾಗಿದೆ. ಆದರೆ 105.79 ಟಿಎಂಸಿ ನೀರು ಸಾಮಾರ್ಥ್ಯದ ಈ ಡ್ಯಾಂ ನಲ್ಲಿ ಸದ್ಯ ಇರೋ ನೀರಿನ ಪ್ರಮಾಣ ಕೇವಲ 3.40 TMC ಮಾತ್ರ. ಅಂದ್ರೆ ಡ್ಯಾಂನ ಒಟ್ಟು ನೀರು ಸಂಗ್ರಹ ಸಾಮಾರ್ಥ್ಯದ 3% ರಷ್ಟು ಮಾತ್ರ ನೀರು ಸದ್ಯ ಡ್ಯಾಂನಲ್ಲಿದೆ.

    ಒಂದು ಡ್ಯಾಂನಲ್ಲಿ ಕನಿಷ್ಟ 4 ಟಿಎಂಸಿ ನೀರು ಸಂಗ್ರಹವಿರಬೇಕು ಅನ್ನೋ ನಿಯಮವಿದೆ. ಯಾಕಂದ್ರೆ ಡ್ಯಾಂ ನಲ್ಲಿರುವ ಜಲಚರಗಳು ಮತ್ತು ನದಿಯಲ್ಲಿರುವ ಜಲಚರಗಳು ಬದುಕಬೇಕಾದ್ರೆ ಇಷ್ಟೊಂದು ಪ್ರಮಾಣದ ನೀರನ್ನು ಇಟ್ಟುಕೊಳ್ಳಲೇಬೇಕು. ಆದರೆ ತುಂಗಭದ್ರಾ ಜಲಾಶಯದಲ್ಲಿ ಸದ್ಯ ಇರೋದು ಕೇವಲ 3.40 ಟಿಎಂಸಿ ನೀರು ಮಾತ್ರ.

    ಕಳೆದ ವರ್ಷ ಇದೇ ಸಮಯದಲ್ಲಿ ಡ್ಯಾಂನಲ್ಲಿ 3.72 ಟಿಎಂಸಿ ನೀರು ಇತ್ತು. ಅಲ್ಲದೇ ಇದೇ ಸಮಯದಲ್ಲಿ ಡ್ಯಾಂ ಗೆ ನೀರಿನ ಒಳಹರಿವು ಆರಂಭವಾಗಿತ್ತು. ಹೀಗಾಗಿ ಡ್ಯಾಂ ನಲ್ಲಿ ನೀರಿನ ಸಂಗ್ರಹ ಆರಂಭವಾಗಿತ್ತು. ಈ ವರ್ಷ ಡ್ಯಾಂಗೆ ಕಳೆದ ಏಳು ತಿಂಗಳಿಂದ ಒಳ ಹರಿವು ಬಂದಾಗಿದೆ. ಡ್ಯಾಂ ನಲ್ಲಿರುವ ನೀರನ್ನು ಈಗಾಗಲೇ ಕೃಷಿ ಸೇರಿದಂತೆ ಕುಡಿಯುವ ನೀರಿಗೆ ಬಿಟ್ಟಿದ್ದರಿಂದ ಸದ್ಯ ಡ್ಯಾಂನಲ್ಲಿ ಕೇವಲ 3.40 ಟಿಎಂಸಿ ನೀರು ಮಾತ್ರ ಇದೆ. ಅದರಲ್ಲಿ ಡೆಡ್ ಸ್ಟೋರೆಜ್ ಇರೋದು ಎರಡು ಟಿಎಂಸಿ ನೀರು. ಬಳಕೆಗೆ ಬರೋದು ಕೇವಲ 1.40 ಟಿಎಂಸಿ ನೀರು ಮಾತ್ರವಾಗಿದೆ.

  • 1 ಲಕ್ಷದ ಮೊಬೈಲ್‍ಗಾಗಿ ಡ್ಯಾಂನ 21 ಲಕ್ಷ  ಲೀ. ನೀರನ್ನೇ ಖಾಲಿ ಮಾಡಿಸಿದ ಅಧಿಕಾರಿ!

    1 ಲಕ್ಷದ ಮೊಬೈಲ್‍ಗಾಗಿ ಡ್ಯಾಂನ 21 ಲಕ್ಷ ಲೀ. ನೀರನ್ನೇ ಖಾಲಿ ಮಾಡಿಸಿದ ಅಧಿಕಾರಿ!

    ರಾಯ್ಪುರ: ಸರ್ಕಾರಿ ಅಧಿಕಾರಿಯೊಬ್ಬನ ಮೊಬೈಲ್ ನೀರಿಗೆ ಬಿದ್ದಿದ್ದಕ್ಕೆ ಡ್ಯಾಮ್‍ನ ಪೂರ್ತಿ ನೀರನ್ನು ಖಾಲಿ ಮಾಡಿದ ಪ್ರಸಂಗವೊಂದು ಛತ್ತೀಸ್‍ಗಢ (Chhattisgarh) ದ ಕಂಕೇರ್ ಜಿಲ್ಲೆಯ ಕೊಯಿಲಿಬೀಡಾ ಬ್ಲಾಕ್‍ನ ಖೇರ್ಕಟ್ಟಾ ಅಣೆಕಟ್ಟಿನಲ್ಲಿ (Kherkatta Paralkot reservoir) ನಡೆದಿದೆ.

    ಖೇರ್ಕಟ್ಟಾ ಅಣೆಕಟ್ಟಿನ ಸುತ್ತ ಭಾನುವಾರ ಸಂಜೆ ಆಹಾರ ಇಲಾಖೆಯ ಆಧಿಕಾರಿ ರಾಜೇಶ್ ವಿಶ್ವಾಸ್ ವಾಯುವಿಹಾರಕ್ಕೆ ತೆರಳಿದ್ದರು. ಹೀಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ತಮ್ಮ ಕೈ ಜಾರಿ ಮೊಬೈಲ್ ಡ್ಯಾಂನೊಳಗೆ ಬಿದ್ದಿದೆ. ಮೊಬೈಲ್ (Mobile) 1 ಲಕ್ಷ ರೂ. ದ್ದಾಗಿದೆ.

    ಇದರಿಂದ ಗಲಿಬಿಲಿಗೊಂಡ ಅಧಿಕಾರಿ ನೀರಿಗೆ ಬಿದ್ದ ಮೊಬೈಲ್‍ಗಾಗಿ ಇಡೀ ಅಣೆಕಟ್ಟಿನ ನೀರನ್ನೇ ಖಾಲಿ ಮಾಡುವಂತೆ ಆದೇಶಿಸಿದ್ದಾರೆ. ಅದರಂತೆ ಇತರ ಅಧಿಕಾರಿಗಳು ಸುಮಾರು 21 ಲಕ್ಷ ಲೀಟರ್ ನೀರನ್ನು ಹೊರತೆಗೆದು ಮೊಬೈಲ್ ಹುಡುಕಿ ಕೊಟ್ಟಿದ್ದಾರೆ. ಇದನ್ನೂ ಓದಿ: 72 ವರ್ಷದ ವೃದ್ಧನನ್ನು ಕೊಂದು ತಿಂದ 40 ಮೊಸಳೆಗಳು!

    ಪಂಪ್ ಮಾಡಿದ ನೀರು ಉಪಯೋಗಕ್ಕೆ ಯೋಗ್ಯವಲ್ಲ. ಮೊಬೈಲ್ ಫೋನ್ ತನ್ನ ವೈಯಕ್ತಿಕವಾಗಿದ್ದರಿಂದ ದರಲ್ಲಿ ಅನೇಕ ಪ್ರಮುಖರ ಸಂಪರ್ಕಗಳಿವೆ. ಹೀಗಾಗಿ ನೀರು ಖಾಲಿ ಮಾಡಿ ಅದನ್ನು ಹುಡುಕಬೇಕಾಯಿತು. ಅಲ್ಲದೆ ಅಣೆಕಟ್ಟಿನ ನೀರು ಹೊರತೆಗೆಯಲು ಸುಮಾರು 7 ಆವಿರದಿಂದ 8 ಸಾವಿರ ರೂ. ಮೌಲ್ಯದ ಡೀಸೆಲ್ ಬಳಸಲಾಗಿದೆ. ಈ ಬಗ್ಗೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಂದ ಮೌಖಿಕವಾಗಿ ಆದೇಶ ಹೊರಡಿಸಲಾಗಿತ್ತು. ನನ್ನ ಕ್ರಮದಿಂದ ಯಾರಿಗೂ ಹಾನಿಯಾಗಿಲ್ಲ ಎಂದು ಅಧಿಕಾರಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

     

    ಅಧಿಕಾರಿಯ ಬೇಜವಾಬ್ದಾರಿತನದಿಂದ ಸೋಮವಾರದಿಂದ ಗುರುವಾರದವರೆಗೆ ಸುಮಾರು 21 ಲಕ್ಷ ನೀರು ಪೋಲಾಗಿದೆ. ಈ ನೀರನ್ನು ರೈತರು 1.500 ಸಾವಿರ ಕೃಷಿ ಭೂಮಿಗೆ ಬಳಸಿಕೊಳ್ಳಲಾಗುತ್ತಿತ್ತು ಎನ್ನಲಾಗಿತ್ತು. ಅಧಿಕಾರಿಯ ನಡೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾದ ಬಳಿಕ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಿ ಕಂಕೇರ್ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

  • ನೀರಾವರಿ ಯೋಜನೆಗಳಿಗೆ ತಕರಾರು ತಮಿಳುನಾಡಿನ ರಾಜಕೀಯ ಸಾಹಸದ ಪ್ರದರ್ಶನ: ಬೊಮ್ಮಾಯಿ

    ನೀರಾವರಿ ಯೋಜನೆಗಳಿಗೆ ತಕರಾರು ತಮಿಳುನಾಡಿನ ರಾಜಕೀಯ ಸಾಹಸದ ಪ್ರದರ್ಶನ: ಬೊಮ್ಮಾಯಿ

    ಬೆಂಗಳೂರು: ತಮಿಳುನಾಡು ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರ ಸಣ್ಣ ವಿಷಯಗಳನ್ನು ದೊಡ್ಡದಾಗಿ ಬಿಂಬಿಸುವ ಮೂಲಕ ರಾಜಕೀಯ ಸಾಹಸ ಪ್ರದರ್ಶನ ಮಾಡುತ್ತಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ನೀರಿನ ವಿಷಯವಾಗಿ ಯಾವಾಗಲೂ ಕರ್ನಾಟಕದೊಂದಿಗೆ ತಕರಾರು ಮಾಡುತ್ತಲೇ ಬಂದಿದೆ ಎಂದು ದೂರಿದರು.

    ಅದು ಕಾವೇರಿ ನದಿನೀರು ಹಂಚಿಕೆ ಇರಬಹುದು, ಕಾವೇರಿ ಕಣಿವೆಯಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆಗಳೇ ಆಗಿರಬಹುದು. ಅವುಗಳ ಬಗ್ಗೆ ತಮಿಳುನಾಡು ತಕರಾರು ಮಾಡುತ್ತಲೇ ಬಂದಿದೆ. ಕಾವೇರಿ ನ್ಯಾಯ ಮಂಡಳಿ ರಚನೆಯಾದ ಮೇಲೆ ಅವರಿಗೆ ಕಷ್ಟವಾಗುತ್ತಿದೆ ಎಂದು ಅವರು ಹೇಳಿದರು. ಇದನ್ನೂ ಓದಿ : ಮಗನನ್ನ ಅಪ್ಪನಂತೆ ಸೈನಿಕನನ್ನಾಗಿ ಮಾಡ್ತೀನಿ – ಸ್ವಗ್ರಾಮದಲ್ಲಿ ವೀರಯೋಧನಿಗೆ ಅಂತಿಮ ನಮನ

    ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕೂ ಅನುಕೂಲವಾಗುತ್ತದೆ. ತಮಿಳುನಾಡು ರಾಜ್ಯಕ್ಕೂ ಅನುಕೂಲ ಆಗುತ್ತದೆ. ಅವರ ಪಾಲಿನ ನೀರು ಹರಿಸಲಾಗುವುದು. ಅದಕ್ಕೆಎಲ್ಲಿಯೂ ತಡೆ ಉಂಟಾಗುವುದಿಲ್ಲ. ಹೆಚ್ಚುವರಿ ನೀರನ್ನು ಮಾತ್ರ ಕರ್ನಾಟಕ ಬಳಕೆ ಮಾಡುತ್ತದೆ. ಉಭಯ ರಾಜ್ಯಗಳಿಗೆ ಯೋಜನೆಯಿಂದ ಲಾಭವಾಗುತ್ತದೆ. ಆದರೂ ಕೂಡ ಈ ಯೋಜನೆಯನ್ನು ತಮಿಳುನಾಡು ಸರ್ಕಾರ ವಿರೋಧಿಸುತ್ತಿದೆ. ಅದೇ ರೀತಿ ಮಾಕರ್ಂಡೇಯ ಯೋಜನೆಗೆ ತಮಿಳುನಾಡಿನ ತಕರಾರು ಮೊದಲಿನಿಂದಲೂ ಇದೆ. ಅಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದೊಂದು ರಾಜಕೀಯ ಸಾಹಸ. ಸಣ್ಣ ವಿಷಯಗಳನ್ನು ದೊಡ್ಡದು ಮಾಡಿ ರಾಜಕೀಯ ಸಾಹಸ ಪ್ರದರ್ಶನ ಮಾಡಲಾಗುತ್ತಿದೆ. ರಾಜಕೀಯಕ್ಕೆ ಏನು ಬೇಕು ಅದನ್ನು ತಮಿಳುನಾಡು ಮಾಡುತ್ತಿದೆ. ಆದರೆ ನಾವು ಕಾನೂನಾತ್ಮಕವಾಗಿ ಸರಿಯಾಗಿ ಇದ್ದೇವೆ. ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ ಎಂದರು.

    ತಮಿಳುನಾಡು ರಾಜ್ಯಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬರೆದಿರುವ ಪತ್ರಕ್ಕೆ ತಮಿಳುನಾಡು ಸ್ಪಂದಿಸಲೇ ಬೇಕಾಗುತ್ತದೆ. ಏಕೆಂದರೆ ಇದು ಕುಡಿಯುವ ನೀರಿನ ಯೋಜನೆ. ಕೆಆರ್‍ಎಸ್ ಬಿಟ್ಟರೆ ಕಾವೇರಿ ನದಿ ನೀರನ್ನು ಶೇಖರಿಸಿಡಲು ಬೇರೆ ಸ್ಥಳ ಇಲ್ಲ. ಮೇಕೆದಾಟು ಯೋಜನೆಯಿಂದ ಸಂಕಷ್ಟ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಾಗುತ್ತದೆ. ಅವರಿಗೂ ಅನುಕೂಲ ನಮಗೂ ಅನುಕೂಲ ಎಂದು ಬಸವರಾಜ ಬೊಮ್ಮಾಯಿ ಯೋಜನೆ ಬಗ್ಗೆ ವಿವರಿಸಿದರು.

    ಇಂಧನದ ಮೇಲೆ ವಿಧಿಸಲಾಗುತ್ತಿರುವ ಸೆಸ್ ದೇಶಕ್ಕೆ ಸಂಬಂಧ ಪಟ್ಟ ವಿಚಾರ. ಸೆಸ್ ನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಿಳಿಸುತ್ತಿವೆ. ಇಂಧನ ನಿರ್ವಹಣೆ ವೆಚ್ಚ, ಇಂಧನ ಮೂಲಬೆಲೆ ಮತ್ತು ಪರಿವರ್ತನ ವೆಚ್ಚ ಎಷ್ಟಿದೆ ಎಂಬುದನ್ನು ಎಲ್ಲ ರಾಜ್ಯಗಳು ಕುಳಿತು ಚರ್ಚೆ ಮಾಡಬೇಕಾಗುತ್ತದೆ. ಜನರ ಮೇಲಿನ ಈ ಭಾರವನ್ನು ಕಡಿಮೆ ಮಾಡುವುದಕ್ಕೆ ಎಲ್ಲರೂ ಒಪ್ಪಿಗೆ ನೀಡಬೇಕಾಗುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ಸಮಸ್ಯೆಗಳು ಎದುರಾದಾಗ ಚರ್ಚೆ ಮಾಡಿ ನಿರ್ಧಾರ ಮಾಡಿರುವ ಉದಾಹರಣೆಗಳಿವೆ. ಆ ರೀತಿ ಎಲ್ಲ ರಾಜ್ಯಗಳು ಪಕ್ಷಭೇದ ಮರೆತು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟರು.

  • ಕೆಆರ್‌ಎಸ್ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳ

    ಕೆಆರ್‌ಎಸ್ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳ

    ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಿರುವ ಕಾರಣ ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಾಗಿದೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಇಂದು 6,379 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನಿನ್ನೆ ಡ್ಯಾಂಗೆ 1,228 ಕ್ಯೂಸೆಕ್ ಒಳಹರಿವು ಬಂದಿತ್ತು. ಒಂದು ದಿನ ಅಂತರದಲ್ಲಿ 5,151 ಕ್ಯೂಸೆಕ್ ಒಳಹರಿವು ಹೆಚ್ಚಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಕಾರಣದಿಂದ ಡ್ಯಾಂಗೆ ಈ ಪ್ರಮಾದ ಒಳಹರಿವು ಹರಿದು ಬರುತ್ತಿದೆ. ಇದನ್ನೂ ಓದಿ: ಭಾರೀ ಮಳೆ- ಕಬಿನಿ ಒಳ ಹರಿವು ಹೆಚ್ಚಳ

    ಸದ್ಯ  ಅಣೆಕಟ್ಟೆಯ ನೀರಿನ ಇಂದಿನ ಮಟ್ಟ 82.50 ಅಡಿ ಇದ್ದು, ಡ್ಯಾಂ ನ ಗರಿಷ್ಠ ಮಟ್ಟ 124.80 ಅಡಿ ಇದೆ. ಒಳಹರಿವು 6,379 ಕ್ಯೂಸೆಕ್ ಇದ್ದು ಹೊರಹರಿವು 361 ಕ್ಯೂಸೆಕ್ ಇದೆ. ಇನ್ನೂ ಸದ್ಯ ಡ್ಯಾಂನ ನೀರಿನ ಸಂಗ್ರಹ 12.146 ಟಿಎಂಸಿ ಇದ್ರೆ, ಗರಿಷ್ಟ ಸಂಗ್ರಹ 49.452 ಟಿಎಂಸಿಯಷ್ಟು ಇದೆ.

  • ಹೇಮಾವತಿ ಅಣೆಕಟ್ಟೆಯಿಂದ ನಾಲೆಗೆ ನೀರು ಹರಿಸಿ: ಸಚಿವ ಗೋಪಾಲಯ್ಯ ಸೂಚನೆ

    ಹೇಮಾವತಿ ಅಣೆಕಟ್ಟೆಯಿಂದ ನಾಲೆಗೆ ನೀರು ಹರಿಸಿ: ಸಚಿವ ಗೋಪಾಲಯ್ಯ ಸೂಚನೆ

    ಹಾಸನ: ಈ ಕೂಡಲೇ ಹೇಮಾವತಿ ಅಣೆಕಟ್ಟೆಯಿಂದ ನಾಲೆಗೆ ನೀರು ಹರಿಸುವಂತೆ ಹಾಸನದಲ್ಲಿ ಉಸ್ತುವಾರಿ ಸಚಿವ ಗೋಪಾಲಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ನದಿಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಲವಾರು ಜಿಲ್ಲೆಯ ರೈತರು ನೀರು ಬಿಡಿ ಎನ್ನುತ್ತಿದ್ದಾರೆ. ಹೀಗಾಗಿ ನೀರು ಬಿಡಲು ಆದೇಶ ನೀಡುತ್ತಿರುವುದಾಗಿ ಸಚಿವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಗುಡ್ಡಕುಸಿಯುವುದು, ನೀರು ಹೆಚ್ಚು ಬರುವ ಸ್ಥಳಗಳಿದ್ದರೆ ಕೂಡಲೇ ಜನರನ್ನು ಸ್ಥಳಾಂತರಿಸಲು ಸೂಚಿಸಿದ್ದೇನೆ. ಬೆಳೆ ನಷ್ಟ, ಜೀವಹಾನಿ, ಮನೆ ಬಿದ್ದು ಹೋಗಿರುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಮನೆ ಕಳೆದುಕೊಂಡವರಿಗೆ ತಕ್ಷಣ ಹತ್ತು ಸಾವಿರ ಹಣ ನೀಡಿ, ವರದಿ ಬಂದ ನಂತರ ಮತ್ತಷ್ಟು ಪರಿಹಾರ ನೀಡಲಾಗುವುದು. ಇಂದು ನಾಳೆ ಹಾಸನದಲ್ಲೇ ಇದ್ದು ಕೆಲವು ಸ್ಥಳಗಳಿಗೆ ನಾನೇ ಖುದ್ದು ಭೇಟಿ ನೀಡುತ್ತೇನೆ. ಜಿಲ್ಲೆಯಲ್ಲಿ ಇದುವರೆಗೂ 190ಕ್ಕೂ ಹೆಚ್ಚು ಮನೆ ಬಿದ್ದಿದೆ. ಓರ್ವ ಮಳೆಯಿಂದ ಸಾವನ್ನಪ್ಪಿದ್ದಾರೆ. 2,100 ಹೆಕ್ಟೇರ್ ಗೂ ಹೆಚ್ಚು ಪ್ರದೇಶದಲ್ಲಿ ಜೋಳದ ಬೆಳೆ ನಷ್ಟವಾಗಿದೆ. 779 ಹೆಕ್ಟೇರ್ ಭತ್ತ ನಾಶವಾಗಿದೆ. ಈ ಎಲ್ಲದರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇನೆ. ಸರ್ಕಾರ ಜಿಲ್ಲೆಯ ಜನರ ಕಷ್ಟಕ್ಕೆ ಸ್ಪಂದಿಸಲಿದೆ ಎಂದು ಸಚಿವ ಗೋಪಾಲಯ್ಯ ತಿಳಿಸಿದ್ದಾರೆ.

  • ಸೆಲ್ಫಿ ಗೀಳಿಗೆ ಒಂದೇ ಕುಟುಂಬದ ನಾಲ್ವರು ಬಲಿ

    ಸೆಲ್ಫಿ ಗೀಳಿಗೆ ಒಂದೇ ಕುಟುಂಬದ ನಾಲ್ವರು ಬಲಿ

    ಬೆಂಗಳೂರು: ಸೆಲ್ಫಿ ಗೀಳಿಗೆ ಒಂದೇ ಕುಟುಂಬದ ನಾಲ್ವರು ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ಕರ್ನಾಟಕ ತಮಿಳುನಾಡು ಗಡಿಯ ಪಂಬರ್ ಅಣೆಕಟ್ಟೆಯಲ್ಲಿ ನಡೆದಿದೆ.

    ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಉತ್ತನಾಗಿರಿ ನಿವಾಸಿಗಳಾದ ಸಂತೋಷ್ (14) ಸ್ನೇಹಾ (19) ಕನೋಧಾ (18) ಹಾಗೂ ನೀವಿತಾ (20) ಮೃತ ದುರ್ದೈವಿಗಳು. ಕುಟುಂಬದ ಜೊತೆಗೆ ಪ್ರವಾಸಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಮೃತರ ಕುಟುಂಬದ ರೋಧನ ಮುಗಿಲು ಮುಟ್ಟಿದೆ.

    ನೀವಿತಾ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ದಸರಾ ಹಬ್ಬದ ರಜೆಯ ಹಿನ್ನೆಲೆಯಲ್ಲಿ ಉತ್ತನಾಗಿರಿಗೆ ತೆರಳಿದ್ದರು. ಈ ವೇಳೆ ಮನೆಯವರೆಲ್ಲ ಒಂದು ದಿನದ ಪ್ರವಾಸಕ್ಕೆಂದು ಪಂಬರ್ ಅಣೆಕಟ್ಟೆಗೆ ಹೋಗಿದ್ದರು. ನೀವಿತಾ ಸೇರಿದಂತೆ ನಾಲ್ವರು ಅಣೆಕಟ್ಟೆಯ ಹಿನ್ನೀರಿನಲ್ಲಿ ತಡದ ಸೆಲ್ಫಿ ತೆಗೆದುಕೊಳ್ಳತ್ತಿದ್ದಾಗ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ.

    ಕರ್ನಾಟಕದ ದಕ್ಷಿಣ ಪಿನಾಕಿನಿ ನದಿಗೆ ತಮಿಳುನಾಡಿನಲ್ಲಿ ಅಣೆಕಟ್ಟು ಕಟ್ಟಲಾಗಿದೆ. ಈ ನೀರನ್ನು ಕೃಷಿ ಉಪಯೋಗಕ್ಕೆ ಬಳಸುತ್ತಾರೆ. ಬೆಂಗಳೂರು ಸೇರಿದಂತೆ ಪಾಂಬರ್ ಅಣೆಕಟ್ಟೆ ಪಾತ್ರದಲ್ಲಿ ಕಳೆದ 15 ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಅಣೆಕಟ್ಟೆಯ ನೀರಿನ ಮಟ್ಟ ಏರಿಕೆಯಾಗಿದೆ. ಈ ವಿಚಾರ ತಿಳಿಯದೆ ನೀರಿಗಿಳಿದ ಪರಿಣಾಮ ನಾಲ್ವರು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ.

    ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಅಗ್ನಿಶಾಮಕ ಸಿಬ್ಬಂದಿಯ ಸಹಾಯದಿಂದ ಮೃತ ದೇಹಗಳನ್ನು ಹೊರ ತೆಗೆದರು. ಆಗ ಮೃತ ದೇಹಗಳನ್ನು ತಬ್ಬಿಕೊಂಡು ಕುಟಂಬಸ್ಥರು ಕಣ್ಣೀರಿಟ್ಟಿದ್ದಾರೆ.

  • ಕೇರಳ, ಕೊಡಗು ಭಾಗದಲ್ಲಿ ಮಳೆ- ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ ಜೀವಕಳೆ

    ಕೇರಳ, ಕೊಡಗು ಭಾಗದಲ್ಲಿ ಮಳೆ- ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ ಜೀವಕಳೆ

    ಕೊಡಗು/ಬೆಂಗಳೂರು: ಕೇರಳ, ಕೊಡಗಿನ ಭಾಗದಲ್ಲಿ ಭಾರೀ ಮಳೆಯಾಗ್ತಿರೋ ಕಾರಣ ಕಾವೇರಿ ಕೊಳ್ಳದ ಡ್ಯಾಮ್‍ಗಳಲ್ಲಿ ಜೀವಕಳೆ ತುಂಬಿದ್ದು, ಪಾತಾಳ ಸೇರಿದ್ದ ನೀರಿನ ಮಟ್ಟ ನಿಧಾನವಾಗಿ ಮೇಲೇರುತ್ತಿದೆ.

    ಕೆಆರ್‍ಎಸ್‍ನಲ್ಲಿ ನೀರಿನ ಮಟ್ಟ 90 ಅಡಿ ದಾಟಿದ್ದು, ಈ ಹಿನ್ನೆಲೆಯಲ್ಲಿ, ತಮಿಳುನಾಡಿಗೆ ನೀರು ಹರಿಸಲಾಗಿದೆ. ಅಣೆಕಟ್ಟೆಯಿಂದ 7 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದ್ದು, 5 ಸಾವಿರ ಕ್ಯೂಸೆಕ್ ಮೆಟ್ಟೂರು ಡ್ಯಾಮ್‍ಗೂ, 2 ಸಾವಿರ ಕ್ಯೂಸೆಕ್ ನೀರು ರೈತರ ನಾಲೆಗಳಿಗೂ ಹರಿಸಲಾಗುತ್ತಿದೆ.

    ಒಂದೆಡೆ ಹರಿವು ಹೆಚ್ಚಾಗಿದೆ ಎಂದು ರೈತರು ಸಂತಸ ಪಡುತ್ತಿದ್ದರೆ, ಕಾವೇರಿ ನೀರು ನಿರ್ವಹಣಾ ಮಂಡಳಿ ಸೂಚನೆಯಂತೆ ತಮಿಳುನಾಡಿಗೆ ನೀರು ಬಿಡಲಾಗಿದೆ. ತಮಿಳುನಾಡಿಗೆ ನೀರು ಹರಿಸಿರುವುದನ್ನು ಖಂಡಿಸಿ ಇಂಡುವಾಳು ಗ್ರಾಮಸ್ಥರು ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ರೆಸಾರ್ಟ್‍ನಲ್ಲಿರುವ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.

    ಕಾವೇರಿ ನೀರಿನಲ್ಲಿ ವ್ಯತ್ಯಯ:
    ಕಾವೇರಿಕೊಳ್ಳಕ್ಕೆ ಹೆಚ್ಚು ನೀರು ಹರಿಯುತ್ತಿದ್ದರೂ ಸಹ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವೆಡೆ 2 ದಿನ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ.

  • ಮಹಾರಾಷ್ಟ್ರದಲ್ಲಿ ಭಾರೀ ಮಳೆಗೆ ಒಡೆಯಿತು ಅಣೆಕಟ್ಟು – 9 ಮಂದಿ ಸಾವು

    ಮಹಾರಾಷ್ಟ್ರದಲ್ಲಿ ಭಾರೀ ಮಳೆಗೆ ಒಡೆಯಿತು ಅಣೆಕಟ್ಟು – 9 ಮಂದಿ ಸಾವು

    ಮುಂಬೈ: ಮಹಾರಾಷ್ಟ್ರದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಮಳೆರಾಯನ ಆರ್ಭಟಕ್ಕೆ ರತ್ನಗಿರಿ ಜಿಲ್ಲೆಯ ಚಿಲುನ್ ತಹಸಿಲ್‍ನಲ್ಲಿರುವ ಟಿವ್ರೆ ಕಿಂಡಿ ಅಣೆಕಟ್ಟು ಒಡೆದಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ.

    ಅಣೆಕಟ್ಟು ಒಡೆದ ಪರಿಣಾಮ ತಗ್ಗು ಪ್ರದೇಶದಲ್ಲಿದ್ದ ಏಳು ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ಈ ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದು, ಸುಮಾರು 18-20 ಜನರು ಕಣ್ಮರೆಯಾಗಿರುವ ಬಗ್ಗೆ ವರದಿಯಾಗಿದೆ. ರತ್ನಗಿರಿ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಈ ದುರಂತ ನಡೆದಿದೆ ಎಂದು ಊಹಿಸಲಾಗಿದೆ.

    ಅಣೆಕಟ್ಟಿನ ಬಳಿಯ ಸಣ್ಣ ಹಳ್ಳಿಯ ಸುಮಾರು 19 ಜನರು ಕಣ್ಮರೆಯಾಗಿದ್ದಾರೆ. ಅವರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಈವರೆಗೆ ಮೂರು ಮಹಿಳೆಯರು ಸೇರಿದಂತೆ ಒಟ್ಟು 9 ಜನರ ಶವಗಳನ್ನು ರಕ್ಷಣಾ ತಂಡ ಪತ್ತೆಹಚ್ಚಿದೆ.

    ಇದಲ್ಲದೆ ಸ್ಥಳೀಯ ಆಡಳಿತವು ಪೊಲೀಸರ ಸಹಯೋಗದೊಂದಿಗೆ ರಾಷ್ಟೀಯ ವಿಪತ್ತು ಪಡೆ(ಎನ್‍ಡಿಆರ್‍ಎಫ್) ರಕ್ಷಣಾ ಕಾರ್ಯನಿರ್ವಹಿಸುತ್ತಿದೆ. ಹಳ್ಳಿಗಳಲ್ಲಿ ಉಂಟಾದ ಪ್ರವಾಹದ ಅಬ್ಬರಕ್ಕೆ ಸುಮಾರು 12 ಮನೆಗಳು ಕೊಚ್ಚಿಹೋಗಿವೆ. ಹಾಗೆಯೇ ಗ್ರಾಮಸ್ಥರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಹಿಂದೆಯೇ ಅಣೆಕಟ್ಟೆ ಬಿರುಕು ಬಿಟ್ಟಿತ್ತು. ಈ ಬಗ್ಗೆ ನಾವು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದೆವು. ಈ ಸ್ಥಿತಿ ಬರುವ ಮುಂಚೆಯೇ ಅಣೆಕಟ್ಟಿನ ದುರಸ್ಥಿ ಕಾರ್ಯ ಮಾಡಿದ್ದರೆ ಹಲವು ಜೀವಗಳು ಉಳಿಯುತ್ತಿದ್ದವು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಮಹಾರಾಷ್ಟ್ರ ಸಿಎಂ ತನಿಖೆ ನಡೆಸಲು ಆದೇಶಿಸಿದ್ದು, ಅಣೆಕಟ್ಟಿನ ಬಗ್ಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾವುದು. ಜಿಲ್ಲಾಡಳಿತವನ್ನು ಸಂಪರ್ಕಿಸಿ ರಕ್ಷಣಾ ಕಾರ್ಯಾಚರಣೆ ಬಗ್ಗೆ ಹಾಗೂ ಜನರ ಸುರಕ್ಷತೆ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದಿದ್ದಾರೆ.

  • ಒಡೆದ ಲಾವೋಸ್ ಡ್ಯಾಂ-ಪ್ರಾಣ ಉಳಿಸಿಕೊಳ್ಳಲು ಮೇಲ್ಛಾವಣಿ ಹತ್ತಿ ಕುಳಿತ ಜನರು

    ಒಡೆದ ಲಾವೋಸ್ ಡ್ಯಾಂ-ಪ್ರಾಣ ಉಳಿಸಿಕೊಳ್ಳಲು ಮೇಲ್ಛಾವಣಿ ಹತ್ತಿ ಕುಳಿತ ಜನರು

    ವಿಯೆಂಟಿಯಾನ್: ಲಾವೋಸ್ ನಲ್ಲಿ ನಿರ್ಮಾಣ ಹಂತದಲ್ಲಿದ್ದ ಹೈಡ್ರೋ ಪವರ್ ಡ್ಯಾಂ ಒಡೆದ ಪರಿಣಾಮ 20 ಜನ ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ. ಜನರು ಪ್ರಾಣ ಉಳಿಸಿಕೊಳ್ಳಲು ಮೇಲ್ಛಾವಣಿ ಹತ್ತಿ ಕುಳಿತಿದ್ದಾರೆ.

    ಅಟ್ಟಪೇಯಿ ಪ್ರಾಂತ್ಯದಲ್ಲಿ ಕ್ಷಿ ಪೇನ್ ನದಿಗೆ ಕಟ್ಟಲಾಗಿದ್ದ ಡ್ಯಾಂ ಒಡೆದಿದ್ದು, ಸುಮಾರು 7 ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿವೆ. ಅಂದಾಜು 6,600 ಜನರು ವಸತಿ ಹೀನರಾಗಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಬಿತ್ತರಿಸಿವೆ. ಸೋಮವಾರ ಡ್ಯಾಂ ಕುಸಿತವಾಗಿದ್ದು, ಸ್ಥಳೀಯ ಸರ್ಕಾರ ರಕ್ಷಣಾ ಕಾರ್ಯಚರಣೆ ನಡೆಸುತ್ತಿದ್ದು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಮೇಲ್ಛಾವಣಿ ಮೇಲೆ ನಿಂತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ದಕ್ಷಿಣ ಕೊರಿಯಾದ ಕಂಪೆನಿಯೊಂದು ಅಣೆಕಟ್ಟು ನಿರ್ಮಾದ ಹೊಣೆ ಹೊತ್ತಿದ್ದು, ಈ ಡ್ಯಾಂನಲ್ಲಿ ಉತ್ಪಾದನೆಯಾದ ಜಲ ವಿದ್ಯುತ್ ಅನ್ನು ಥಾಯ್ಲೆಂಡ್ ಮತ್ತು ದಕ್ಷಿಣ ಕೊರಿಯಾಗಳಲ್ಲಿರುವ ಉದ್ಯಮಗಳಿಗೆ ನೀಡಲಾಗುತಿತ್ತು. ಕ್ಷಿ ಪೇನ್ ನದಿಗೆ ಒಟ್ಟು ಮೂರು ಆಣೆಕಟ್ಟುಗಳನ್ನು ಕಟ್ಟಲಾಗಿದೆ.

    ಅಣೆಕಟ್ಟು ಒಡೆದಿದ್ದು ಹೇಗೆ?
    ಭಾನುವಾರ ರಾತ್ರಿ ಸುಮಾರು 9 ಗಂಟೆಗೆ ಅಣೆಕಟ್ಟಿನ ಗೋಡೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದವು. ಬಿರುಕು ಸರಿಮಾಡಲು ಆಡಳಿತ ಮಂಡಳಿ ರಿಪೇರಿ ಕೆಲಸ ಆರಂಭಿಸಿತ್ತು. ಆದ್ರೆ ಲಾವೋಸ್‍ನಲ್ಲಿ ಸತತವಾಗಿ ಮಳೆ ಸುರಿಯುತ್ತಿರೋದ್ರಿಂದ ಕೆಲಸ ವಿಳಂಬವಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ನದಿ ತೀರದ ಪ್ರದೇಶದ ಜನರಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಿದ್ದರು.

    ಸೋಮವಾರ ಮಧ್ಯಾಹ್ನ ಜಲಾಶಯದಿಂದ ಒಂದು ಗೇಟ್ ಮೂಲಕ ನೀರನ್ನು ಹೊರ ಬಿಡಲಾಯಿತು. ಇದೇ ವೇಳೆ ಸ್ಥಳೀಯ ಸರ್ಕಾರ ಎಚ್ಚರಿಕೆಯಾಗಿ ಜನರನ್ನು ಸ್ಥಳಾಂತರಿಸುವಂತೆ ಆದೇಶವನ್ನು ನೀಡಿತ್ತು. ಸೋಮವಾರ ಸಂಜೆ 6 ಗಂಟೆಗೆ ಡ್ಯಾಂ ಸಂಪೂರ್ಣವಾಗಿ ಶಿಥಿಲಗೊಂಡಿದೆ ಎಂಬುದು ಅಧಿಕಾರಿಗಳಿಗೆ ಖಾತ್ರಿಯಾಗಿತ್ತು. ಮಂಗಳವಾರ ಬೆಳಗಿನ ಜಾವ 1.30ಕ್ಕೆ ಡ್ಯಾಂ ಒಡೆದು ಅಚ್ಚುಕಟ್ಟು ಪ್ರದೇಶಗಳಿಗೆ ನೀರು ನುಗ್ಗಿದೆ.

     

    ಸತತವಾಗಿ ಮಳೆಯಾಗುತ್ತಿರುವ ಪರಿಣಾಮ ಅಣೆಕಟ್ಟು ಒಡೆದು ಹೋಗಿದೆ. ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಶೇಖರಣೆಯಾಗಿದ್ದರಿಂದ, ಡ್ಯಾಂ ತಡೆಗೋಡೆ ಮೇಲೆ ನಿರಂತರ ಒತ್ತಡ ಉಂಟಾಗಿತ್ತು ಎಂದು ಅಣೆಕಟ್ಟು ನಿರ್ಮಾಣ ವಹಿಸಿದ್ದ ಕಂಪೆನಿ ಹೇಳಿದೆ.

    ಲಾವೋಸ್ ಪ್ರಧಾನಿ ಥೊಂಗ್ಲೋನ್ ಸಿಸೌಲಿತ್ ತಮ್ಮ ಎಲ್ಲ ಪ್ರವಾಸ ಹಾಗು ಸಭೆಗಳನ್ನು ರದ್ದುಗೊಳಿಸಿ ಪ್ರವಾಹ ಪೀಡಿತ ಪ್ರದೇಶಗಳ ಮಾಹಿತಿಯನ್ನು ಪಡೆಯುತ್ತಿದ್ದಾರೆ. ರಕ್ಷಣಾ ಕಾರ್ಯ ನಡೆಸುವಂತೆ ಎಲ್ಲ ಅಧಿಕಾರಿಳಿಗೂ ಆದೇಶಿಸಿದ್ದಾರೆ.

  • ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ಉಡುಪಿಯಲ್ಲಿ ತುಂಬಿತು ಅಣೆಕಟ್ಟು!

    ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ಉಡುಪಿಯಲ್ಲಿ ತುಂಬಿತು ಅಣೆಕಟ್ಟು!

    ಉಡುಪಿ: ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ಜಿಲ್ಲೆಯ ನಗರದ ಕುಡಿಯುವ ನೀರಿನ ಮೂಲ ತುಂಬಿದೆ.

    ಹಿರಿಯಡ್ಕದಲ್ಲಿರುವ ಬಜೆ ಅಣೆಕಟ್ಟು ತುಂಬಿ ತುಳುಕುತ್ತಿದೆ. ಮೆಕುನು ಚಂಡಮಾರುತ ಮತ್ತು ಅರಬ್ಬೀ ಸಮುದ್ರದ ವಾಯುಭಾರ ಕುಸಿತದಿಂದ ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿತ್ತು. ಎರಡು ದಿನಗಳ ಕಾಲ ಸುರಿದ ಬಿರುಸಿನ ಮಳೆಗೆ ಜಿಲ್ಲೆಯ ಎಲ್ಲಾ ನದಿಗಳು ತುಂಬಿ ತುಳುಕುತ್ತಿದೆ.

    ಕಾರ್ಕಳ ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು, ಸ್ವರ್ಣಾ ನದಿ ತುಂಬಿ ಹರಿಯುತ್ತಿದೆ. ಹೀಗಾಗಿ ಬಜೆ ಅಣೆಕಟ್ಟು ಭರ್ತಿಯಾಗಿದೆ. ಮೇ ತಿಂಗಳ 15ರ ನಂತರ ಉಡುಪಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಪ್ರತೀ ವರ್ಷ ಎದುರಾಗುತಿತ್ತು. ಆದರೆ ಈ ಬಾರಿ ಸೂಕ್ತ ಸಮಯದಲ್ಲಿ ಮಳೆ ಬಂದಿರುವುದರಿಂದ ನೀರಿನ ಸಮಸ್ಯೆಯಾಗಿಲ್ಲ. ಅಣೆಕಟ್ಟಿನ ಎಲ್ಲಾ ಗೇಟುಗಳನ್ನು ತೆರೆಯಲಾಗಿದೆ.

    ಮಳೆ ನೀರು ನೆರೆಯ ರೂಪದಲ್ಲಿ ಹರಿದು ಬರುತ್ತಿರುವುದರಿಂದ ನೀರನ್ನು ಸಮುದ್ರದ ಕಡೆ ಬಿಡಲಾಗುತ್ತಿದೆ. ಅಣೆಕಟ್ಟುವಿನಲ್ಲಿ ಭಾರೀ ಹೂಳು ತುಂಬಿಕೊಂಡಿದ್ದು, ಈ ಬಾರಿಯ ಬೇಸಿಗೆಯಲ್ಲಿ ಕೂಡಾ ಅದನ್ನು ತೆಗೆಯುವ ಕೆಲಸ ಉಡುಪಿ ನಗರಸಭೆ ಮಾಡಿಲ್ಲ. ಅಣೆಕಟ್ಟುವಿನಲ್ಲಿ ಬೇಸಿಗೆ ಅಂತ್ಯದವರೆಗೆ ನಗರಕ್ಕೆ ಬೇಕಾದಷ್ಟು ನೀರು ಹಿಡಿದಿರುವ ಸಾಮರ್ಥ್ಯವಿದೆ. ಆದರೆ ನಗರಸಭೆ ಹೂಳೆತ್ತದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.