Tag: ಅಡ್ವಾನ್ಸ್ ವಿಶ್

  • ಗೋಲ್ಡನ್ ಸ್ಟಾರ್ ಹುಟ್ಟುಹಬ್ಬಕ್ಕೆ 2 ದಿನ ಮುಂಚೆಯೇ ಕಿಚ್ಚ ವಿಶ್

    ಗೋಲ್ಡನ್ ಸ್ಟಾರ್ ಹುಟ್ಟುಹಬ್ಬಕ್ಕೆ 2 ದಿನ ಮುಂಚೆಯೇ ಕಿಚ್ಚ ವಿಶ್

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ಕಿಚ್ಚ ಸುದೀಪ್ ಅವರು ಎರಡು ದಿನ ಮುಂಚಿತವಾಗಿಯೇ ವಿಶ್ ಮಾಡಿದ್ದಾರೆ.

    ಗಣೇಶ್ ಅವರ ಹುಟ್ಟುಹಬ್ಬ ಜುಲೈ 2ಕ್ಕೆ ಇದೆ. ಈ ದಿನಾಂಕವನ್ನು ಗೊಂದಲ ಮಾಡಿಕೊಂಡ ಕಿಚ್ಚ ಎರಡು ದಿನ ಮುಂಚಿತವಾಗಿಯೇ ತಮ್ಮ ಟ್ವಿಟ್ಟರ್ ನಲ್ಲಿ ವಿಶ್ ಮಾಡಿದ್ದಾರೆ. ನಂತರ ಗಣಿ ಹುಟ್ಟುಹಬ್ಬ ಜುಲೈ 2ಕ್ಕೆ ಎಂದು ತಿಳಿದು, ಈ ವಿಶ್ ಅನ್ನು ಅಡ್ವಾನ್ಸ್ ಆಗಿ ಪರಿಗಣಿಸಿ ಎಂದು ಮತ್ತೆ ರಿಟ್ವೀಟ್ ಮಾಡಿದ್ದಾರೆ.

    ದಿನಾಂಕವನ್ನು ತಪ್ಪಾಗಿ ಗ್ರಹಿಸಿ ವಿಶ್ ಮಾಡಿರುವ ಸುದೀಪ್, ಹುಟ್ಟುಹಬ್ಬದ ಶುಭಾಶಯಗಳು ಗೆಳೆಯ, ದೇವರು ನಿನಗೆ ಆರೋಗ್ಯ ಮತ್ತು ಐಶ್ವರ್ಯ ಕೊಟ್ಟು ಕಾಪಾಡಲಿ. ಕ್ವಾರಂಟೈನ್ ಸಮಯದಲ್ಲಿ ಗಡ್ಡ ಹೊಸ ಸಿಕ್ಸ್ ಪ್ಯಾಕ್ ಆಗಲಿ. ನಿನಗೆ ದೇವರು ಹೆಚ್ಚಿನ ಶಕ್ತಿ ಮತ್ತು ಯಶಸ್ಸನ್ನು ಕೊಟ್ಟು ಆಶೀರ್ವದಿಸಲಿ. ಮಚ್ ಲವ್ ಯೂ ಚೀಯರ್ಸ್ ಎಂದು ಬರೆದು ಎರಡು ದಿನ ಮುಂಚಿತವಾಗಿಯೇ ವಿಶ್ ಮಾಡಿದ್ದರು.

    ಸುದೀಪ್ ವಿಶ್ ಮಾಡುತ್ತಿದ್ದಂತೆ ಅವರ ಅಭಿಮಾನಿಗಳು ಗಣೇಶ್ ಅವರ ಹುಟ್ಟುಹಬ್ಬ ಜುಲೈ 2ಕ್ಕೆ ಇರುವುದು ಎಂದು ಕಮೆಂಟ್ ಮಾಡಲು ಆರಂಭಿಸಿದ್ದಾರೆ. ಇದರಿಂದ ತಕ್ಷಣ ಎಚ್ಚೆತ್ತ ಕಿಚ್ಚ, ಈ ಟ್ವೀಟ್ ಮಾಡಿದ ಒಂದು ಗಂಟೆಯ ನಂತರ ಇನ್ನೊಂದು ಟ್ವೀಟ್ ಮಾಡಿದ್ದು, ನಾನು ತಪ್ಪು ದಿನಾಂಕವನ್ನು ಪಡೆದು ವಿಶ್ ಮಾಡಿದೆ. ಇದನ್ನು ಅಡ್ವಾನ್ಸ್ ವಿಶ್ ಎಂದು ಪರಿಗಣಿಸಿ. ಸರಳವಾಗಿ ಹುಟ್ಟುಹಬ್ಬ ಆಚರಿಸಲು ತೀರ್ಮಾನ ಮಾಡಿರುವುದು ಒಳ್ಳೆಯ ನಿರ್ಧಾರ ಎಂದು ರಿಟ್ವೀಟ್ ಮಾಡಿದ್ದಾರೆ.

    ನೆಚ್ಚಿನ ಗೆಳೆಯ ಎರಡು ದಿನ ಮುಂಚಿತವಾಗಿಯೇ ವಿಶ್ ಮಾಡಿದ್ದಕ್ಕೆ ಖುಷಿಯಾಗಿ ರಿಟ್ವೀಟ್ ಮಾಡಿರುವ ಗಣೇಶ್, ನೀವೇ ನನಗೆ ಮೊದಲು ವಿಶ್ ಮಾಡಿದ್ದು, ನಿಮಗೆ ಧನ್ಯವಾದಗಳು ಸರ್ ಎಂದು ಬರೆದುಕೊಂಡಿದ್ದಾರೆ. ಗಣೇಶ್ ಅವರ ಹುಟ್ಟುಹಬ್ಬ ಜುಲೈ 2ರಂದು ಇದ್ದು, ಕೊರೊನಾ ವೈರಸ್ ಕಾರಣದಿಂದ ಈ ವರ್ಷದ ಹುಟ್ಟುಹಬ್ಬವನ್ನು ಗಣೇಶ್ ಅವರು ಸರಳವಾಗಿ ಆಚರಿಸಲು ತೀರ್ಮಾನ ಮಾಡಿದ್ದಾರೆ.

    ಈ ವಿಚಾರವಾಗಿ ಇತ್ತೀಚೆಗಷ್ಟೇ ಟ್ವೀಟ್ ಮಾಡಿದ್ದ ಗಣೇಶ್, ನನ್ನ ರಾಜ್ಯದ ಜನತೆ ಕೊರೊನಾ ವೈರಸ್ ಭೀತಿಯಲ್ಲಿ ಕಷ್ಟಪಡುತ್ತಿರುವ ಸಮಯದಲ್ಲಿ ನಾನು ಅದ್ಧೂರಿಯಿಂದ ಹುಟ್ಟುಹಬ್ಬ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ. ಹೀಗಾಗಿ ಈ ಬಾರಿ ನನ್ನ ಅಭಿಮಾನಿಗಳು ನನ್ನ ಮನೆಯ ಬಳಿ ಬರಬೇಡಿ. ನೀವು ಎಲ್ಲಿ ಇರುತ್ತೀರಾ ಅಲ್ಲೇ ನನಗೆ ಶುಭಾ ಕೋರಿ ನನಗೆ ಆಶೀರ್ವಾದ ಮಾಡಿ ಎಂದು ಕೇಳಿಕೊಂಡಿದ್ದರು.